ಕಾವ್ಯ ಸಂಗಾತಿ
ಸತ್ಯಮಂಗಲ ಮಹಾದೇವ
‘ಬಡವರ ಸಂಗಾತಿ ಬರಗೂರು’

ಊಟ ಆಯ್ತಾ ಎನ್ನಲು
ಮಾತು ಸಾಕು
ಹಸಿದವನನ್ನು ಮಾತನಾಡಿಸಲು
ಹಸಿದ ಕಣ್ಣುಗಳೇ ಬೇಕು
ಬಡವನ ಎದೆಯ ನೋವು
ಹಸಿದವನ ಸಂಕಟ
ಎರಡನ್ನೂ ಹೊಸೆದು ಮಾಲೆ ಮಾಡಿ
ಬದುಕಿಗೆ ಮುಡಿಸಿ
ನಿಂತವರನ್ನು ನಡೆಸುವ ಶಕ್ತಿ ಬೇಕು
ಇದೆಲ್ಲಾ ಸಂಭವಿಸಲು
ಬಡವರ ಸಂಗಾತಿ ಬರಗೂರರೇ ಬರಬೇಕು

ಬೆವರಿನ ಸಂಸ್ಕೃತಿಯ ಬೇರುಗಳಲ್ಲಿ
ಜಾಲಿಮರದ ನೀರವತೆಯ ಏಕಾಂತದಲ್ಲಿ
ಕಾಗೆಗಳ ಜೀವ ಬಂದುತ್ವದಲ್ಲಿ
ಗಾಳಿಯ ತಬ್ಬಲಿತನದ ಜೀವ ಸೆಳೆತದಲ್ಲಿ
ಹುದುಗಿ ಹೋದವರ ನೋವನ್ನು ಅಳಿಸಲು
ಬಂಡಾಯದ ಬಹುತ್ವದ ಉಸಿರು ಕೊಡಲು
ಕಾರ್ಗತ್ತಲ ಅಂಧಕಾರದ ನಡುವೆ
ಭರವಸೆಯ ಬೆಳಕಾಗಿ ಬಂದವರು
ಬಡವರ ಸಂಗಾತಿ ಬರಗೂರರು
ವಿವೇಕದ ಅಮೃತದಲ್ಲಿ ಬೆರೆತ
ನೀರನ್ನು ಶೋಧಿಸಲು
ಶಬರಿಯ ನಿಜ ಭಕ್ತಿಯ ಒಲವು
ಸವಿದ ಫಲದ ರುಚಿಯ ಹಂಚಲು
ಕಾಂಟೆಸಾದಲ್ಲಿಯೂ ಕನ್ನಡದ ರುಚಿ
ಹಂಚಿ ಮನವ ತಣಿಸಲು
ಜನ ಕನ್ನಡದ ಮಾನಸಕ್ಕೆ ಪಂಪ ಕುವೆಂಪು
ಯುಕ್ತಿ ಉಣಿಸಲು
ಬೆವರು ಬಸಿದವರ ಕಣ್ಣುಗಳ
ಭರವಸೆಯನ್ನು ಉಳಿಸಲು
ಯಾರು ಇಲ್ಲದವರಿಗೆ ಎಲ್ಲವೂ ಆಗುವ
ಪ್ರಕೃತಿಯಂತೆ ಆವರಿಸಿದವರು
ದುಡಿದು ಫಲ ಬಯಸದ
ಬಡವರ ಸಂಗಾತಿ ಬರಗೂರರು
ಉರಿವ ಸೂರ್ಯನ ಎದುರು
ಅಮೃತವ ಬಸಿದು ಬೆಂಡಾದ ಮೋಡಗಳ
ವಿಶಾಲ ಸಾಗರದ ನಡುವೆ
ಈಜುವ ಪುಟ್ಟ ಹಡಗುಗಳ
ತರಗೆಲೆ ಕಸಕಡ್ಡಿಗಳ ಬಳಸಿ
ಬದುಕೆಂಬ ಗುಡಿಸಲು ಕಟ್ಟಿದವರ
ಸೋತು ಸೊರಗಿದವರ
ಬೆಂದು ಬಸವಳಿದವರ
ಕಣ್ಣ ನೀರ ಒರೆಸಲು
ಬಾಡಿಹೋದ ಬದುಕಿನಲ್ಲಿ ಮುಗುಳುನಗೆ ತರಲು
ಬಡವರ ಸಂಗಾತಿ ಬರಗೂರರೇ ಬರಬೇಕು
———————–
ಸತ್ಯಮಂಗಲ ಮಹಾದೇವ





ಕಾವ್ಯಧಾರೆಯು ಇನ್ನೊಂದು ಅಭಿಮಾನದ ಹೂರಣವೂ ಹೌದು.
ಬಹಳ ಸಮರ್ಥವಾಗಿ ಬರಗೂರರ ಗುಣವನ್ನು ವ್ಯಕ್ತಪಡಿಸುವ ಕವಿತೆ, ತಮಗೆ ಅಭಿನಂದನೆಗಳು
ಅನ್ಯಾಯದ ಬೆನ್ನುಹತ್ತಿದ ಸತ್ಯವನ್ನೇ ಹುಡುಕುತ್ತ ಹಚ್ಚಿದ ಹೋರಾಟದ ಬತ್ತಿಯೇ ಬಂಡಾಯ.
ಆ ಬತ್ತಿ ಉರಿದು ಹೊಳೆಯುವುದು ನ್ಯಾಯದ ಧ್ವನಿಯಿಂದ ಮಾತ್ರ.
ನೀತಿಯೆಂಬ ಮೌಲ್ಯವನ್ನು ಮರೆತವರ ವಿರುದ್ಧ ಶಕ್ತಿಯಾಗಿ ನಿಂತು ಬಂಡಾಯ ಮಾಡಲು ಎಲ್ಲರಿಗೂ ಮತ್ತು ಸಾಮಾನ್ಯರಿಗೂ ಸಾಧ್ಯವಿಲ್ಲ.
ಅಂತಹ ಶಕ್ತಿ ಹಾಗೂ ಸ್ಪಷ್ಟತೆಯು ಪ್ರಭಾವಶಾಲಿ ಮತ್ತು ವಿಶೇಷ ವ್ಯಕ್ತಿತ್ವವುಳ್ಳ ಧೀಮಂತ ವ್ಯಕ್ತಿಯಿಂದಲೇ ಸಾಧ್ಯ.
ಅಂತಹ ವಿಶಿಷ್ಟ ವ್ಯಕ್ತಿಯೊಬ್ಬರಾದ ಬರಗೂರರ ಕುರಿತು ಸತ್ಯಮಂಗಲ ಮಹಾದೇವ ಸರ್ ಬರೆದ ಈ ಬರಹ, ಮತ್ತು ಅವರು ಬಳಸಿರುವ ಶಬ್ದಗಳ ಸುಂದರ ಜಾಡು, ನೇರಾ ನೇರ ಹೃದಯ ಸ್ಪರ್ಶಿಸಿ, ಹೊಸ ಆಲೋಚನೆಗೆ ಹೊಸ ದಿಕ್ಕು ತೋರುವಂತಿದೆ.