ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಂದು , ಹೃದಯ ಹೇಳಿದ ಮಾತನ್ನು ಮನುಷ್ಯ ಕೇಳುತ್ತಿದ್ದ , ಹೃದಯ ಮತ್ತು ಮನುಷ್ಯ ಇಬ್ಬರೂ ಆರಾಮವಾಗಿ ನೂರಾರು ವರ್ಷ ಬದುಕಿದ್ದರು . ಆದರೆ ಇಂದು ,  ಹೃದಯ ಒಪ್ಪದ , ಅದಕ್ಕೆ ಬೇಡವಾದ , ಅದಕ್ಕೆ ವಿರುದ್ಧವಾದ ಯೋಚನೆಗಳು , ಒತ್ತಡಗಳನ್ನು ಅದರ ಮೇಲೆ ಹೇರಿ ಅದಕ್ಕೆ ಚಿತ್ರಹಿಂಸೆ ಕೊಡುತ್ತಾ ದಿನೇ ದಿನೇ ಅದರ ಅಸ್ಥಿತ್ವವವನ್ನೇ ಕಸಿಯುವ ಕೆಲಸ ಮನುಷ್ಯರಿಂದ ಆಗುತ್ತಿದೆ . ಆದರೆ ,  ಬಡಪಾಯಿ ಮನುಷ್ಯನಿಗೆ ಗೊತ್ತಿಲ್ಲಾ ,  ಮಾತನಾಡಲು , ನಿರಾಕರಿಸಲು , ಧಿಕ್ಕರಿಸಲು ಹೃದಯಕ್ಕೆ ಬಾಯಿ ಇಲ್ಲ , ಅದು ಮಾತನಾಡುವುದಿಲ್ಲ , ಬದಲಿಗೆ ಮೌನವಾಗಿ ರೋಧಿಸುತ್ತದೆ ,  ಕೊನೆಗೆ ಒಂದು ದಿನ  ಉಸಿರು ಚೆಲ್ಲುತ್ತದೆ .

                    ಹಿಂದೆ ಒಂದು ಕಾಲದಲ್ಲಿ ಹೃದಯ ಸಾಕ್ಷಿ ಒಪ್ಪದಿದ್ದರೆ ಆ ಕೆಲಸವನ್ನು ಜನ ಮಾಡುತ್ತಿರಲಿಲ್ಲ , ಆದರೆ ಇಂದು ಅದನ್ನೆಲ್ಲ ಯಾರು ಕೇಳಲ್ಲ , ಇವತ್ತು ಬುದ್ಧಿಯ ಮುಂದೆ ಹೃದಯ ಮಂಡಿ ಊರಿದೆ. ನಾವೆಲ್ಲರೂ ಶುದ್ಧ ವ್ಯವಹಾರಿಗಳಾಗಿಬಿಟ್ಟಿದ್ದೇವೆ . ಪ್ರತಿಯೊಂದಕ್ಕೂ ಪ್ರಯೋಜನ ಹುಡುಕುತ್ತೇವೆ , ಲಾಭದ ಬಗ್ಗೆ ಯೋಚಿಸುತ್ತೇವೆ , ಆದರೆ ಹೃದಯ ಕೇಳುವುದು ಸಮಧಾನ, ಸಹನೆ, ಪ್ರೀತಿ , ಸಂತೋಷ, ಕರುಣೆ , ಮಮತೆ ಇವೆಲ್ಲವೂ ಹೃದಯದ ಆರೋಗ್ಯವನ್ನು ಕಾಪಿಡುತ್ತವೆ, ಆದರೆ ವಿಪರ್ಯಾಸ ಅಂದ್ರೆ , ಇವತ್ತು ಇವೆಲ್ಲವೂ ವ್ಯಾವಹಾರಿಕವಾಗಿವೆ , ದುಬಾರಿಯಾಗಿವೆ . ಹೃದಯಕ್ಕೆ ಬೇಕಿರುವುದು ನಮ್ಮಿಂದ ಸಿಗದಿದ್ದರೆ ಅನಿವಾರ್ಯ ವಾಗಿ ಅದು ನಮ್ಮನ್ನು ಬಿಟ್ಟು ಹೋಗುತ್ತದೆ .

                      ತಿನ್ನುವ ಅನ್ನಕ್ಕೆ ವಿಷ ಬೆರೆಸುವ ಹೀನ ಕೃತ್ಯ ನಡೀತಾ ಇದೆ ಮಾನವೀಯತೆ ಮರೆತ ಮಾನವ ಸ್ವಾರ್ಥಿಯಾದ , ಕೊಂಡೊಯ್ಯಲಾರದ ಸಂಪತ್ತು ಗಳಿಸಿ ಅದನ್ನು ಅನುಭವಿಸುವ ಮುನ್ನವೇ ಭೂ ಲೋಕ ತೈಜಿಸುವನು , ಸತ್ಯ ಹೀಗಿರುವಾಗ , ನಾವೇಕೆ ಅವಿವೇಕಿಗಳಗುತ್ತಿರುವುದು ? ವಯಸ್ಸಿಗೆ ಮೀರಿದ ಬುದ್ಧಿವಂತಿಕೆಯನ್ನು ಮಕ್ಕಳಿಗೆ ತುಂಬಲು ಹೋಗಿ , ನಮ್ಮ ಮಕ್ಕಳೇ ವಿಶೇಷವಾಗಬೇಕು ಎಂದೆಲ್ಲ ಯೋಚಿಸಿ ಮಕ್ಕಳ ಪುಟ್ಟ ಹೃದಯಕ್ಕೂ ಘಾಸಿ ಮಾಡಿ ಚಿಗುರಲ್ಲ ಕಮರುವಂತೆ ಮಾಡುತ್ತೇವೆ. ಪ್ರತಿಯೊಂದಕ್ಕೂ ಅವಸರಿಸುವ ಮನುಜನ ಹೃದಯವೂ ಸಹ ಅಷ್ಟೇ ಬೇಗ ತನ್ನ ಕೆಲಸವನ್ನು ನಿಲ್ಲಿಸುತ್ತದೆ .

                   ಹೃದಯ ಪವಿತ್ರವಾದ ಅಂಗ ,  ಏಕೆಂದರೆ ,  ಅದು ಯಾವತ್ತೂ ಕೆಟ್ಟದ್ದನ್ನು ಒಪ್ಪಿಕೊಳ್ಳುವುದಿಲ್ಲ , ಆದರೆ ನಾವು ಅದನ್ನೇ ಒಪ್ಪುವುದಿಲ್ಲ , ಹೀಗಾಗಿ ತನ್ನ ಪಾವಿತ್ರ್ಯಕ್ಕೇ ಬೆಲೆ ಇಲ್ಲದ ಕಡೆ ಅದು ಇರಲು ಸಾದ್ಯವಿಲ್ಲ ಅಲ್ಲವೇ , ಅದಕೆ ಅದು ತನ್ನ ಮಿಡಿತ ನಿಲ್ಲಿಸುತ್ತದೆ. ಇದೆ ಇಂದಿನ ಕಠೋರ ಸತ್ಯ….


About The Author

Leave a Reply

You cannot copy content of this page

Scroll to Top