ಮಕ್ಕಳ ಸಂಗಾತಿ
ಡಾ.ಸಿದ್ಧರಾಮ ಹೊನ್ಕಲ್ ಅವರು ಬರೆದ
ಮಕ್ಕಳು ಓದಲೇಬೇಕಾದ ಕವಿತೆ
“ಗೆಳೆಯ ಮತ್ತವನಮ್ಮ”

ವರ್ಷಗಳೇ ಗತಿಸಿದವು
ಅಸ್ಪತ್ರೆಯಿಂದ ಆಸ್ಪತ್ರೆಗೆ
ಓಡುತ್ತಲೇ ಇರುತ್ತಾನೆ ಗೆಳೆಯ….
ಹೊಸ ಆಸ್ಪತ್ರೆ ಹೊಸ ಹೊಸ
ವೈದ್ಯರನ್ನು ಕಂಡು ಅವರು ಹೇಳಿದ
ಎಲ್ಲ ಪರೀಕ್ಷೆಗಳ ಮುಗಿಸಿ
ಹೈರಾಣಾಗಿ ಹೊರಬಂದಾಗಲೆಲ್ಲ
ಅವನಮ್ಮ ಕೇಳುತ್ತಾಳೆ
ಏನೆಂದರು ವೈದ್ಯರು..
ಏನೆಂದು ಹೇಳಬೇಕು
ನಗುತ್ತಾ ಹೇಳುತ್ತಾನೆ
ಅಳುವ ಒಳಗೊಳಗೆ ನುಂಗಿ;
ನಿನಗೆ ಯಾವ ತೊಂದರೆಯೂ ಇಲ್ಲ!
ಎಂದರು ಎಂದು ಪ್ರತಿಬಾರಿಯು…

ಮತ್ತೇಕೆ ಈ ಟ್ಯಾಕ್ಸಿ,ಅಲೆದಾಟ
ಎಷ್ಟೊಂದು ಪರೀಕ್ಷೆಗಳು
ನನಗೆ ಏನಾಗಿದೆ ಹೇಳೋ ಅನ್ನುತ್ತಾಳೆ;
ನಿಮ್ಮಪ್ಪನದು ಪುಣ್ಯದ ಸಾವು
ಒಮ್ಮಿಂದೊಮ್ಮೆಲೆ ಹೃದಯ
ಹಿಡಿದುಕೊಂಡು ಹೋಗಿಯೇ ಬಿಟ್ಟ!
ನಾನೇನು ಪಾಪ ?ಮಾಡಿನೋ
ಈ ಮುದುಕಿಗಾಗಿ
ಇಷ್ಟ್ಯಾಕ ತೊಂದ್ರಿ ತಗೋತಿ
ಬಿಟ್ಟು ಬಿಡು ಇನ್ನೂ ಸಾಕು
ಬಿದ್ದೋಗೋ ಜೀವವಿದು
ಎದ್ದೋಗಲಿಯಪ್ಪ
ಅನ್ನುತ್ತಾಳೆ…
ಇದೇ ಕೊನೇ ಸಲ
ಇದು ದೇಶದಲ್ಲೆ ದೊಡ್ಡ ಆಸ್ಪತ್ರೆ
ಇಲ್ಲಿ ಒಮ್ಮೆ ಹೋಗಿ ಬರೋಣ ಅಂತ
ಫೋರವಿಲರ್ ಗಳಿಗೆ ಡಿಸೈಲ್ ಹಾಕಿಸುತ್ತಾನೆ
ತಂಗಿಯರಲ್ಲಿ ಒಬ್ಬರು ಜೊತೆಯಾಗುತ್ತಾರೆ.
ಆಗಾಗ ಆತನ ತಂಗಿ
ಕೇಳುತ್ತಾಳೆ;
ನಾವೇನೋ ಸ್ವಲ್ಪ ಅನುಕೂಲಸ್ಥರು
ಬಡವರಿಗೆ,ದೀನ ದಲಿತರಿಗೆ
ಇಂತಹ ತೊಂದ್ರೆ ಬಂದರೆ
ಏನೂ ಮಾಡುತ್ತಾರೆ…? ಅಣ್ಣಾ ಅಂತ
ಸುಮ್ಮನೆ ಸತ್ತು ಹೋಗುತ್ತಾರಮ್ಮ!
ಅಂತ ಹೇಳಿ ಆಕಾಶ ನೋಡುತ್ತಾನೆ…
ಮೇಲಿನವನನ್ನು ಒಳಗೊಳಗೆ
ಬಯ್ದುಕೊಂಡು
ಮತ್ತೆ ಹೊಸ ಆಸ್ಪತ್ರೆ
ಹಳೆಯ ಪರೀಕ್ಷೆಗಳೇ
ಮತ್ತೆ ಹೊಸದಾಗಿ…
ಜೇಬು ಕತ್ತರಿಸಲು
ಅನ್ನಲಾಗದ ಅಸಹಾಯಕತೆ,
ಆದರೂ
ಇಲ್ಲಿಯಾದರು ಗುಣವಾದೀತು
ಎಂಬ ಹೊಸ ನಂಬಿಕೆಯ ಮೇಲೆ….
ಪ್ರತಿ ಆಸ್ಪತ್ರೆ,
ಅಲ್ಲಿಯ ಗದ್ದಲ
ರೋಗಿಗಳ,ಜೊತೆಯವರ
ಬಾಡಿದ ಮುಖಗಳು
ಕಂಡಾಗಲೆಲ್ಲ
ಇಷ್ಟೊಂದು ನೋವು,ರೋಗ
ದು:ಖ ತುಂಬಿದೆ ಈ ಜಗದಲ್ಲಿ
ಎಂದು ನೋವಾದರು ಸಹ
ಇಷ್ಟೊಂದು ಜನರ ಮಧ್ಯೆ
ನಮ್ಮದೇನು ಮಹಾ! ಎಂದು
ವೇದಾಂತಿಯಾಗುತ್ತಾನೆ.

ಪ್ರತಿಸಲ ಪರೀಕ್ಷಿಸಲು
ತಮ್ಮ ನಂಬರಗಾಗಿ
ಕಾದು ದಿನಗಟ್ಟಲೇ ಕುಂತು,
ನಿಂತು ಓಡಾಡುವಾಗ
ತಾನೇ ಡಾಕ್ಟರ್ ಆಗಬೇಕಿತ್ತೆಂದು
ಹಳಹಳಿಸುತ್ತಾನೆ;
ಈ ರೋಗಗಳು ತುಂಬಿದ
ಪ್ರಪಂಚದಲ್ಲಿ!
ಮನೆಗೊಬ್ಬ ವೈದ್ಯ ಬೇಕೆನಿಸುತ್ತದೆ;
ಆದು ಆಗದ ಮಾತೆಂದು
ನಿರಾಶೆಯಿಂದ ಬಳಲುತ್ತಾನೆ
ಅಷ್ಟರಲ್ಲಿ
ಪೆಶೆಂಟ್ ಹೆಸರು
ಕೂಗಿ ಕರೆದಾಗೊಮ್ಮೆ
ಫ್ರೀ ಮೆಡಿಕಲ್ ಶೀಟ್ ಸಿಕ್ಕ
ಪಾಲಕರ ಖುಷಿಯಲ್ಲಿ
ತಾಯಿಯ ಕೈ ಹಿಡಿದು
ಕರೆದುಕೊಂಡು
ಒಳಗೋಗುತ್ತಾನೆ…
ಮತ್ತೆ…ಹೀಗೆ.
ಇನ್ನೂ ಸಾಕು
ಸತ್ತರೆ ಹಿಂಗೆ ಸಾಯುತ್ತೇನೆ
ನಾನು ಮತ್ತೆ ಬರಲಾರೆ ಅನ್ನುತ್ತಾಳೆ..
ಆಯಿತು ಇದು ಕೊನೆಯ ಸಾರಿ
ಅಂತ ಪ್ರತಿಸಾರಿಯು ಹೇಳುತ್ತಾನೆ…
ಹೀಗೆ ನಡೆದಿದೆ ಇದು ಬದುಕಾಗಿ
ಬದುಕಿಗಾಗಿ….
ಅವಳ ಕಷ್ಟ ಉಹಿಸಿಕೊಂಡು
ಅಸಹಾಯಕನಾಗಿ
ಆಗಾಗ
ಮೊರೆ ಇಡುತ್ತಾನೆ;
ಓ…ದೇವರೆ,
ನೀನೇ ಈ ಸುಂದರ ಪ್ರಪಂಚ
ನಿರ್ಮಾಣ ಮಾಡಿದ್ದೆ ನಿಜವಾದರೆ
ನೀನೇ ಈ ಅನೇಕ ರೋಗಗಳನ್ನು
ಯಾಕಾಗಿ ಸೃಷ್ಠಿಸಿದೆ!
ಈ ಎಲ್ಲ ರೋಗಗಳಿಗೆ
ಮುಕ್ತಿಯ ಕೊಡು ಎಂದು…
ಡಾ.ಸಿದ್ಧರಾಮ ಹೊನ್ಕಲ್,
ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರು,ಕಾವ್ಯಾಲಯ,ಲಕ್ಷ್ಮಿನಗರ
ಅಂಚೆ:ಶಹಾಪುರ,(ಯಾದಗೀರ ಜಿಲ್ಲೆ)





ಶರಣರ ವಚನ
____________
ಆವ ಕಾಯಕವಾದಡೂ
ಸ್ವಕಾಯಕವ ಮಾಡಿ
ಗುರು ಲಿಂಗ ಜಂಗಮದ ಮುಂದಿಟ್ಟು
ಒಕ್ಕುದ ಹಾರೈಸಿ
ಮಿಕ್ಕುದ ಕೈಕೊಂಡು
ವ್ಯಾಧಿ ಬಂದಡೆ ನರಳು
ಬೇನೆ ಬಂದಡೆ ಒರಲು
ಜೀವ ಹೋದಡೆ ಸಾಯಿ
ಇದಕ್ಕಾ ದೇವರ ಹಂಗೇಕೆ
ಭಾಪು ಲದ್ದೆಯ ಸೋಮ.
ಮಮ್ಮಲ ಮರಗುವಂತೆ ಮಾಡುತ್ತದೆ
ಈಗಿನ ವಾಸ್ತವ ಪ್ರಸ್ಥಿತಿ