ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

 

        ಡಾ. ಪ್ರಭಾಕರ ಶಿಶಿಲ ಅವರು  ರಚಿಸಿರುವ ಹಲವಾರು ಕಥಾ ಸಂಕಲನದಿಂದ  ಆಯ್ದ ಹತ್ತು ಕಥೆಗಳನ್ನು ‘ಪ್ರಭಾಕರ ಶಿಶಿಲರ ವಿಶಿಷ್ಟ ಕಥೆಗಳು’  ಎಂಬ ಕಥಾ ಸಂಕಲನದಲ್ಲಿ ಸಂಕಲಿಸಿ. ಓದುಗರ ಗಮನ ಸೆಳೆದಿದ್ದಾರೆ.
ಈ ಸಂಕಲನದಲ್ಲಿರುವ ಹತ್ತು ಕಥೆಗಳು ವಿಭಿನ್ನವಾದ ಆಲೋಚನೆಯನ್ನು ಹೊಂದಿದೆ ಅವರ ಹುಟ್ಟೂರಾದ ಕಪಿಲಳ್ಳಿಯ ಕೃಷಿ ಬದುಕನ್ನು ಎಳವೆಯಲ್ಲಿಯೇ ಬಹಳ ಹತ್ತಿರದಿಂದ ನೋಡಿದ ಅನುಭವವಿರುವ ಶಿಶಿಲರವರು  ಹಳ್ಳಿಯ ಬದುಕಿನ ನೈಜ ಚಿತ್ರಣ,ಆಚಾರ ವಿಚಾರ, ಕೃಷಿ ಬದುಕಿನೊಂದಿಗೆ ಮಾನವೀಯ ಸಂಬಂಧ, ಪ್ರಾಣಿ ಪಕ್ಷಿಯೊಂದಿಗಿನ ಒಡನಾಟ, ಗ್ರಾಮೀಣ ಭಾಷೆಯ ಸೊಗಡು, ಧರ್ಮ ,ಸಂಸ್ಕೃತಿಯಲ್ಲಿರುವ ನಿಷ್ಠೆ. ವೈಚಾರಿಕತೆ ಸೈದ್ಧಾಂತಿಕತೆ ಎಲ್ಲವನ್ನು ಕಥೆಗಳಲ್ಲಿ ಮನ ಮುಟ್ಟುವಂತೆ ಕಟ್ಟಿದ್ದಾರೆ.
ಈ ಕಥಾ ಸಂಕಲನದ ಕಥೆ ʻರಾವುಕೊರಂಗುʼವಿನಲ್ಲಿ ಹಳ್ಳಿಯ ಕೃಷಿ ಬದುಕಿನಲ್ಲಿ ಆಗುವ ನಷ್ಟ  ಇದರ ಪರಿಹಾರಕ್ಕೆ ಪಟ್ಟಣ ಸೇರಬೇಕೆಂಬ ತುಮುಲ ಪೋಷಕರದಾದ್ದರೆ, ಪ್ರಕೃತಿಯ ಮಡಿಲಲ್ಲಿ ಬೆಳೆದ ಬಾಲಕನ ಭಾವಗಳು ವ್ಯತಿರಿಕ್ತವಾಗಿದೆ.   ಮುಗ್ಧ ಮಕ್ಕಳ ಮನಸು ಬಡತನದ ಬವಣೆಯನ್ನು ಲೆಕ್ಕಿಸುವುದಿಲ್ಲ ಎನ್ನುವುದನ್ನು ಮನವರಿಸಿದ್ದಾರೆ.  ಹುಟ್ಟಿ ಬೆಳೆದ ಪರಿಸರದಲ್ಲಿ ಇರುವ ನದಿ, ಹಕ್ಕಿ ,ಮೀನು, ಕಪ್ಪೆ,  ಪ್ರಾಣಿ -ಪಕ್ಷಿ ಇವುಗಳಲ್ಲಿ ಅವಿರ್ಭಾವ ಸಂಬಂಧ  ಇರಿಸಿಕೊಂಡಿರುವ ಬಾಲಕನ ಮನ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿ ಚಡಪಡಿಸುವ ಪರಿ ವಿಭಿನ್ನವಾಗಿದೆ.  ಉಣ್ಣುವ ತುತ್ತಿಗೂ ಕುತ್ತಾದಾಗ ಕೃಷಿಯಿಂದ ಜೀವನ ನಿರ್ವಹಿಸುವುದು ಕಷ್ಟವೆಂದು ಹಿರಿಯರು ಊರು  ಬಿಟ್ಟು ಹೋಗುವ  ಪರಿಸ್ಥಿತಿ ಎದುರಾದಾಗ ಆ ಮುಗ್ಧ ಬಾಲಕ ಖಿನ್ನನಾಗುವ ಸ್ಥಿತಿ. ಪ್ರಕೃತಿ  ಬಾಲಕನ ಬದುಕಿನಲ್ಲಿ  ಆಳವಾದ ಪ್ರಭಾವ ಬೀರಿರುವುದು ತಿಳಿಯುತ್ತದೆ. ಹಾಗು ಮನೋವೈಜ್ಞಾನಿಕ ಚಿಂತನೆಯನ್ನು   ಈ ಕಥೆಯು ಅಭಿವ್ಯಕ್ತಿಸುತ್ತದೆ.
ʻಆಲಿಮಾಳ ಆಡುʼ ಇದು ಭಾವನಾತ್ಮಕ ಕಥೆ ಆಲಿಮ ಮತ್ತು ಆಡಿನ ಸಂಬಂಧವನ್ನು ಬಹಳ ನವಿರಾಗಿ ನಿರೂಪಿಸಿದ್ದಾರೆ. ಅಪ್ಪ ಅಮ್ಮ ಅಣ್ಣನನ್ನು ಕಳೆದುಕೊಂಡ ಆ ಪುಟ್ಟ ಹುಡುಗಿಗೆ ಅನಾಥ ಪ್ರಜ್ಞೆ ಕಾಡುವ ವೇದನೆಯ ಸ್ಥಿತಿ ಆ ಜಾಗವನ್ನು  ಮೂಕ ಪ್ರಾಣಿ ಆಡುವಿನ ಮುಖಾಂತರ ತುಂಬಿಕೊಳ್ಳುವುದು ಇವರಿಬ್ಬರ ಸಂಬಂಧ ತಾಯಿಮಗುವಿನ ಬಾಂಧವ್ಯದಂತೆ ತೋರುತ್ತದೆ. ಮಕ್ಕಳು ತಾನು ಒಂಟಿ ಎನಿಸುವಾಗ ಇಂಥಹ ಪ್ರಾಣಿಗಳ ಒಡನಾಟದಿಂದ   ತನಗಾಗುವ ತೊಳಲಾಟವನ್ನು ವಿಮುಕ್ತಗೊಳಿಸಿ ಬಹಳ ಲವಲವಿಕೆಯಿಂದ ಇರಲು ಅನುವು ಮಾಡಿಕೊಡುತ್ತದೆ. ಹಾಗಾಗಿ ಮನಸ್ಸು  ಪ್ರಫುಲ್ಲವಾಗಿರಲು ರಕ್ತ ಸಂಬಂಧಿಯೇ ಆಗಬೇಕೆಂದಿಲ್ಲ ಎನ್ನುವುದನ್ನು  ಸಾರುತ್ತದೆ.
ಕಥೆಯೊಳಗೊಂದು ಕಥೆ ಸೇರಿ ಹೊಸ ತಿರುವು ಪಡೆಯುವ  ʻಕರಾಚಿ ಕಾರಣೋರುʼ ಧರ್ಮ ಸೂಕ್ಷ್ಮವೊಂದರ ನೆಲೆಯೊಂದನ್ನು ಶೋದಿಸುತ್ತದೆ. ‘ದೋಂಟಿ ತ್ಯಾoಪಣ್ಣನ ಯಾತ್ರಾಪುರಾಣ’  ಕಥೆಯನ್ನು ಎಳೆದಂತೆ ತೋರಿದರು, ತಮಾಷೆಯೊಂದಿಗೆ  ಅವ್ಯಕ್ತ ವಿಶೇಷತೆಯನ್ನು ಕಾಯ್ದಿರಿಸಿಕೊಂಡಿದೆ. ಅಲ್ಲಿಯ ಜನರ ವಿವರಗಳು ಹಾಗೂ ವಿಶೇಷ ಕೆಲಸವನ್ನು ಗಮನಿಸಿ ಇಡುವ ಅಡ್ಡ ಹೆಸರು ತಮ್ಮ ಹೆಸರ ಮುಂದೆ ಬಂದಾಗ ಆಗುವ ಹಪಹಪಿಕೆ ಇದರಲ್ಲಿ ಮನದಟ್ಟಾಗುತ್ತದೆ. ಎರಡು ಮೂರು ತಲೆಮಾರುಗಳಿಂದ ಪುನರಾವರ್ತನೆಗೊಂಡು  ಧೋಂಟಿ ತ್ಯಾಪಣ್ಣನಿಗೆ  ಧೋಂಟಿ ತಂದ ಕಸಿವಿಸಿ ಅವನ ಮನದ ವಿಷಾದತೆಗೆ ಪರಿಹಾರವಾಗಿ ಊರ ಮದ್ಲೆಗಾರ  ಸೂಚಿಸಿದಂತೆ ಯಾತ್ರೆಯತ್ತ ಚಿತ್ತ ಹರಿಸಿ ಬಹಳ ಕಠಿಣ ಶ್ರಮವನ್ನು ಎದುರಿಸಿ, ಕೊನೆಗೂ ಅವನು ಮಾಡಿದ ಕಾರ್ಯಕ್ಷಮತೆಗೆ ಫಲ ದಕ್ಕುತ್ತದೆ.ಹೆಸರಲ್ಲಿ ಏನು ಅಡಗಿದೆ ಎನ್ನುವುದಕ್ಕಿಂತ ಅಡ್ಡ ಹೆಸರ ಕಿರಿ ಕಿರಿ ಇಲ್ಲಿ ಮುಖ್ಯ ಪಾತ್ರ ವಹಿಸುತ್ತವೆ.
ʻಕಾಪೀರ್ ಕಾಸೀಮನ ಕಥಾ ಪ್ರಸಂಗʼವೂ ಇಸ್ಲಾಂ ಧರ್ಮ ದ  ಕಟ್ಟಳೆಗಳ ಬಿಕ್ಕಟ್ಟುಗಳನ್ನು ಕುರಿತು ಚಿಂತನೆ ಮಾಡುತ್ತದೆ. ಧರ್ಮಾಧಿಕಾರಿ ಮತ್ತು  ಅವರ ಧರ್ಮದವರು ನಿಂದನೆಗಳನ್ನು ಪಕ್ಕಕ್ಕಿಟ್ಟು. ಊರಿನ ರಾಜಕಾರಣಿಯ ಮಾತುಗಳಿಂದ ಪ್ರೇರಿತನಾಗಿ ಬಹಳ ಧೈರ್ಯದಿಂದ ಕಾಸೀಮ ತನ್ನ ಮಗಳ ಭರತನಾಟ್ಯ ಕಲಿಕೆಯನ್ನು ಈಡೇರಿಸುವುದರೊಂದಿಗೆ ತನ್ನ ಪತ್ನಿಯ ಜೀವಕ್ಕೆ ಅಪಾಯವಿದೆಯೆಂದು ತನ್ನ ಧರ್ಮವನ್ನು ಮೀರಿ ಮಾನವೀಯತೆಯನ್ನು ಮೆರೆದಿದ್ದಾನೆ. ನಾವೆಲ್ಲಿ ವಾಸಿಸುತ್ತೇವೆಯೋ ಅಲ್ಲಿಯ ಸಂಸ್ಕೃತಿಯ ಬಗ್ಗೆ ಗೌರವ ಆಧಾರಗಳು ಇರಬೇಕೆಂದು  ಧರ್ಮದ   ಮೌಢ್ಯವನ್ನು ಪ್ರತಿರೋಧಿಸುವುದನ್ನು   ಇಲ್ಲಿ ಗಮನಿಸಬಹುದು
ʻಬೆಟ್ಟದಮೇಲೊಂದುʼ ಕಥೆಯು ದೇವರ ಹೆಸರಲ್ಲಿ ನಡೆಯುವ ವಂಚನೆಯನ್ನು ಬಯಲುಗೊಳಿಸುತ್ತದೆ. ತಮ್ಮ ಸ್ವಾರ್ಥಕ್ಕಾಗಿ  ದೇವರಲ್ಲಿಯ ನಂಬಿಕೆಯು  ಭಕ್ತರಲ್ಲಿ  ಗಟ್ಟಿಯಾಗಲು ಭಕ್ತರನ್ನು ವಂಚಿಸುವ ರೀತಿಯನ್ನು ಎಳೆಎಳೆಯಾಗಿ  ಬಯಲು ಗೊಳಿಸಿದ್ದಾರೆ.ಕ್ಷೇತ್ರದ ಕಾರ್ಣಿಕೆಯನ್ನು  ಉಳಿಸಿ ಕೊಳ್ಳುವುದಕ್ಕಾಗಿ ಮಾಡಿದ ತಂತ್ರ ಹಾಗು ಸಮಾಜಕ್ಕೆ ತಿಳಿಯದೆ  ಸಂತಾನ ಪ್ರಾಪ್ತಿಗಾಗಿ ಅನ್ಯ ಗಂಡಸಿನೊಂದಿಗೆ ಸಂಬಂಧ ಇಟ್ಟು ಕೊಳ್ಳುವುದನ್ನು ಗಮನಿಸಿದರೆ ಈ ಕಥೆಯು ಶಾಸ್ತ್ರ  ಸಂಪ್ರದಾಯಗಳ ಚೌಕಟ್ಟನ್ನು ಮೀರಿದೆ.
ʻಬ್ರಿಟನ್ನಿನ ಬಂಡುಕೋರʼ  ಕಥೆಯು  ಭಾರತದ ಆಡಳಿತ ವ್ಯವಸ್ಥೆಯ ವಾಸ್ತವವನ್ನು ಕಟ್ಟಿಕೊಡುತ್ತದೆ.  ಬ್ರಿಟನ್ನಿನ  ಆಡಳಿತ ಅಹವಾಲುಗಳಿಗೆ ಬಹಳ ಬೇಗ  ಸ್ಪಂದಿಸಿ  ಪ್ರತಿಕ್ರಿಯಿಸುತ್ತದೆ ಆದರೆ ಭಾರತದ ಆಡಳಿತ ವ್ಯವಸ್ಥೆಯು ಇದಕ್ಕೆ   ವ್ಯತಿರಿಕ್ತವಾಗಿದೆ. ವಿಷಾದವನ್ನು ವ್ಯಕ್ತ ಪಡಿಸುವ ಈ ಕಥೆಯ ನಾಯಕ ಸೋನಿಪತ್ ನ ಪರಿಸ್ಥಿತಿ  ತ್ರಿಶಂಕು  ಸ್ಥಿತಿಯಂತೆ.   ಇಳಿವಯಸ್ಸಿನಲ್ಲಿಯು  ಇರುವ   ಧೈರ್ಯ ಹಪಹಪಿಕೆ  ಕಾರ್ಯಸಿದ್ಧಿಯಾಗಬಹುದೆಂಬ ನಂಬಿಕೆ, ಆ ನಂಬಿಕೆ ಯನ್ನು ಕೊನೆಯ  ಕ್ಷಣದ ತನಕ ಹಸುರಾಗಿಯೇ ಉಳಿಸಿದ  ಮಾಸ್ತರು. ಒಟ್ಟಿನಲ್ಲಿ   ಜೀವನ ನಿರ್ವಹಿಸಲು  ಕಷ್ಟ ಆದಾಗ ಹಣ ಸಿಗುವ ಮಾರ್ಗಗಳತ್ತ ಕಥೆಯು ಹೆಣೆದಿದೆ.
ಕಥೆಗಳನ್ನೆಲ್ಲ ಓದಿದ ನಂತರ ಮನಸ್ಸಿನಲ್ಲಿ ಒಂದಷ್ಟು ವೈರುಧ್ಯ ಭಾವ ಉದ್ಭವಿಸಿದಂತು ದಿಟ. ಸಾಂಗವಾಗಿ ಸಾಗುವ ಈ ಕಥೆಗಳಲ್ಲಿ ಇನ್ನಷ್ಟು ಕುತೂಹಲ ಕೆರಳಿಸುವ ತಿರುವುಗಳು ಇದ್ದಿದ್ದರೆ   ಕಥೆಗಳೆಲ್ಲವೂ ಅತ್ಯುತ್ತಮವಾಗಿರುತ್ತಿದ್ದವು. ಕ್ರಿಯೇಟಿವ್ ಪುಸ್ತಕ ಮನೆಯಿಂದ  ಪ್ರಕಟಗೊಂಡ ಈ ಕಥಾ ಸಂಕಲನ ಸಾರಸ್ವತ ಲೋಕದಲ್ಲಿ  ಭದ್ರವಾಗಿ ನೆಲೆಯಾಗತ್ತದೆ  ಎಂಬ ಆಶಯದೊಂದಿಗೆ ಶಿಶಿಲ ಸರ್ ರವರಿಗೆ ಹೃನ್ಮನದ ಶುಭಾಶಯಗಳು


About The Author

1 thought on “ಡಾ. ಪ್ರಭಾಕರ ಶಿಶಿಲ ಅವರ ಕಥಾ ಸಂಕಲನ “ಪ್ರಭಾಕರ ಶಿಶಿಲರ ವಿಶಿಷ್ಟ ಕಥೆಗಳು”ಒಂದು ಅವಲೋಕನ ವಿಮಲಾರುಣ ಪಡ್ಡoಬೈಲು”

Leave a Reply

You cannot copy content of this page

Scroll to Top