ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹಸಿ ಹಸಿ ಆಸೆಗಳು
ಕಸಿವಿಸಿಯಲಿ ಬೆಂದು ಹೋಗಿದ್ದರೂ
ಹುಸಿ ಮಾತುಗಳ ಏಟು
ಎದೆಯ ತಮಟೆಯ ಒಡೆದಿದ್ದರೂ
ನಾನಿನ್ನೂ ಜೀವಂತವಾಗಿರುವೆ//

ಕಟ್ಟಿದಾ ಕನಸುಗಳ
ಗೋಪುರ ಉರುಳಿ ಹೋಗಿದ್ದರೂ
ಹೆಣೆದ ಚಿತ್ತಾರಗಳು
ಸುಟ್ಟು ಬಸ್ಮವಾಗಿ ಹೋಗಿದ್ದರೂ
ನಾನಿನ್ನೂ ಜೀವಂತವಾಗಿರುವೆ//

ಅರಳಿದ ಪ್ರೀತಿ ಕುಸುಮಗಳು
ಒಣಗಿ ಹೋಗಿದ್ದರೂ
ಪ್ರೇಮದೂವಿನ ದಳಗಳ
ಹಿಸುಕಿ ಹಿಂಡಿದ್ದರೂ
ನಾನಿನ್ನೂ ಜೀವಂತವಾಗಿರುವೆ//

ಬಂಧ ಸಂಭಂಧಗಳು
ನೊಂದು ನಲುಗಿ ಹೋಗಿದ್ದರೂ
ಮಿಂದ ಸಲುಗೆಗಳು
ಕಾಣದಂತೆ ಮಾಯವಾಗಿದ್ದರೂ
ನಾನಿನ್ನೂ ಜೀವಂತವಾಗಿರುವೆ//

ಕಟ್ಟಿದ ಕನಸುಗಳು
ಇಟ್ಟ ಭರವಸೆಗಳು
ಕಮರಿ ಹೋಗಿದ್ದರೂ
ಛಲ ಬಿಟ್ಟಿಲ್ಲ
ನಾನಿನ್ನೂ ಜೀವಂತವಾಗಿರುವೆ//

ಜತನವಾದ ಸಂಬಂಧಗಳು
ಕತ್ತಿ ಮಸೆದು
ಎಲ್ಲ ನುಚ್ಚು ನೂರಾಗಿ
ಕೊಚ್ಚಿ ಹೋಗಿದ್ದರೂ
ಛಲ ಬಿಟ್ಟಿಲ್ಲ ನಾನು
ನಾನಿನ್ನೂ ಜೀವಂತವಾಗಿರುವೆ //

ಹೆಜ್ಜೆ ಹೆಜ್ಜೆಗೆ ಮುಳ್ಳುಹಾಸು
ರಕ್ತ ಅಂಟಿದ ಕಾಲುಗಳು
ಕೀಳಲಾಗದ ಮೊಳೆ
ಕಳವಳ ತಂದರೂ
ನಾನಿನ್ನೂ ಜೀವಂತವಾಗಿರುವೆ //

ಪೆಟ್ಟಿನ ಮೇಲೆ ಪೆಟ್ಟು
ನೋವಿನೆದೆಗೆ ಚೂರಿ ಇರಿತ
ಗಾಯದ ಮೇಲೆ ಮತ್ತೆ ಮತ್ತೆ
ಬರೆ ಬೀಳುತ್ತಿದ್ದರೂ
ನಾನಿನ್ನೂ ಜೀವಂತವಾಗಿರುವೆ//

ಮಾನವೀಯ ಗುಣಗಳು
ಮಸಣ ಸೇರಿದ್ದರೂ
ಸತ್ಯ ನಿಷ್ಠೆ ಸೊರಗಿ
ಸುಣ್ಣವಾಗಿದ್ದರೂ
ಅಮಾನವೀಯತೆ ತಾಂಡವ ಆಡುತ್ತಿದ್ದರೂ
ನಾನಿನ್ನೂ ಜೀವಂತವಾಗಿರುವೆ


About The Author

Leave a Reply

You cannot copy content of this page

Scroll to Top