ಕಾವ್ಯ ಸಂಗಾತಿ
ಮಧುಮಾಲತಿರುದ್ರೇಶ್
“ಜಾಣಕಿವುಡು”

ಹೌದು ಈಗೀಗ ನಾವೇಕೆ ಮಾತನಾಡುತಿಲ್ಲ
ಸುಖಾ ಸುಮ್ಮನೆ ಮೌನವನೆ ಹೊತ್ತಿಹೆವಲ್ಲ
ವಿದ್ಯಾವಂತರಾದಂತೆ ಅವಿವೇಕಿಗಳಾಗುತಿಹೆವು
ವಿನಯ ಶೀಲತೆಯ ಮರೆತು ಬಾಳುತಿಹೆವು
ಹೌದು ನಾವೇಕೆ ಮಾತನಾಡುತಿಲ್ಲ
ಪರರೇಳ್ಗೆಯ ಕಂಡು ಏಕೋ ಅಭಿನಂದಿಸಲಾಗುತ್ತಿಲ್ಲ
ಸುಮ್ಮನೆ ಮನದಲ್ಲೇ ಮಂಡಿಗೆ ಮೆಲ್ಲುತಿಹೆವಲ್ಲ
ಲಂಚ ಭ್ರಷ್ಟಾಚಾರಗಳೇ ಮೇಲುಗೈ ಸಾಧಿಸಿರುವಾಗ
ಮೌನದಿ ಒಪ್ಪಿ ಅಪ್ಪಿ ಕೊಂಡಿರುವೆವು ನಾವೀಗ
ಏಕೊ ಮಾತೇ ಮರೆತಿರುವೆವಲ್ಲ
ಅರಳಿ ಬಾಳಬೇಕಾದ ಮೊಗ್ಗುಗಳು ನಲುಗುತಿವೆ
ಕಾಮಾಂಧರ ಬಲೆಗೆ ಸಿಲುಕಿ ಹೊಸಕಿ ಹೋಗುತಿವೆ
ಏಕೋ ಕಂಡರೂ ಕಾಣದಂತೆ ದೃಷ್ಟಿ ಹೀನರಾಗಿಹೆವು
ಕೇಳಿಯೂ ಕೇಳದಂಥ ಜಾಣ ಕಿವುಡರಾಗಿಹೆವು
*ಹೀಗೇಕೆ ಮೂಕವಾಗಿಹೆವು ನಾವೆಲ್ಲ
ಸ್ವಾರ್ಥ ದುರಾಸೆಯ ಕೂಪದಿ ಮುಳುಗೇಳುತಿಹೆವು
ಸ್ವಹಿತಾಸಕ್ತಿಯಲೇ ಕಾಲ ದೂಡುತಿಹೆವು
ಕೇಳುತಿಲ್ಲ ಯಾರಿಗೂ ಅಶಕ್ತರ ಅರ್ತನಾದ
ಎಲ್ಲವೂ ನಮಗೆ ಸಿಗಬೇಕೆಂಬ ಮೌನ ವಾದ
ಹೌದು ನಾವೇಕೆ ಮಾತನಾಡುತ್ತಿಲ್ಲ
———-
ಮಧುಮಾಲತಿರುದ್ರೇಶ್





ತಮ್ಮ ಪ್ರೋತ್ಸಾಹಕ್ಕೆ ತುಂಬು ಧನ್ಯವಾದಗಳು
Amazing