ಕಾವ್ಯ ಸಂಗಾತಿ
ಜಯಂತಿ ಕೆ ವೈ
ʼಸಮರ್ಪಣೆʼ

ಎಲ್ಲವೂ ನಿನ್ನಿಚ್ಛೆಯಂತೆಯೇ ನಡೆಯುವಾಗ
ನನಗೇಕೆ ಈ ಕಷ್ಟ ಎಂದು ಕೇಳುವುದಾದರೂ ಹೇಗೆ?
ನಿನ್ನಲ್ಲಿ ಶರಣಾದ ಮೇಲೆ ನೀನಲ್ಲವೆ ಸೂತ್ರಧಾರ
ನನ್ನದೇನಿದೆ?
ನಾನು ನಾನೆಂಬ ಮಮಕಾರವ ತೊರೆವುದ ಹೇಗೆಂದು ಹೇಳು
ಎಲ್ಲಿರುವೆ ನೀನು
ನಿನ್ನಾಣತಿಯಂತೆಯೇ
ನಡೆವ ನನ್ನ ಈ ಬದುಕಿನ ಗತಿಗೆ ಅದೇಕೆ ಅಷ್ಟೊಂದು ತಿರುವು?
ಬದುಕಿನೆಲ್ಲ ಗತಿಗೆ ಕಾಲನ ಕೊನೆಯೊಂದಿದೆ
ಕಾಯಬೇಕಿಲ್ಲ
ಬರುವುದು,
ಬಂದ ಮೇಲೆ
ನಿಲ್ಲ ಬೇಕಿಲ್ಲ
ಕಾಲನಂಕೆಗೆ ಸಿಲುಕಿದವರು ನಕ್ಷತ್ರಗಳಾಗುವರಂತೆ ಆಗಸದ ತುಂಬ ಹರಡಿದ ತಾರೆಗಳ ನಡುವೆ
ನನಗೆಲ್ಲಿ ತಾಣ
ಅದೋ ಹೊಳೆವ ಚುಕ್ಕಿಗಳ ಹೊಳಪಿನ ನಗೆ
ಬುವಿಯ ಬವಣೆ ಮರೆತವರ
ಮಹೋನ್ನತ ಮೆರವಣಿಗೆ
ಆಗುವುದೆಲ್ಲವೂ ಒಳಿತಿಗೆ ತಿಳಿದ ಮೇಲೆಯೂ ಆತಂಕವದಾವುದು
ಅರಿವುಗೇಡಿಯ ಮನಕೆ
ವಿಸ್ಮೃತಿಗೆ ಬಲಿಯಾದವಗೆ
ವಿಭ್ರಮೆಯಿದು
ಮರೆತು
ಮಮಕಾರದಲಿ ನರಳುವ
ವಾಂಛೆ
ಮೋಹದ ತೆಕ್ಕೆ ಸೇರಿ
ನಿಂತ ನೆಲ ಮರೆತವರ
ಸಾಲಿನಲಿ ಒಂದಾಗದಂತೆ
ಅರಿವ ದಯಪಾಲಿಸು
ಕರುಣಾಕರ
ಜಯಂತಿ ಕೆ ವೈ





ಸೊಗಸಾದ ಕವಿತೆ…ಅಭಿನಂದನೆಗಳು
ಅದೆಷ್ಟು ಅರ್ಥಪೂರ್ಣ ಭಾವಯಾನ
ಜಯಂತಿ ಮೇಡಂ ಕವಿತೆ ಸೂಪರ್
ಧನ್ಯವಾದಗಳು
ಥ್ಯಾಂಕ್ಯು
ಕವಿತೆ ತುಂಬಾ ಚೆನ್ನಾಗಿದೆ ಜಯಂತಿ
ಶುಭಾಶಯಗಳು