ಕಾವ್ಯ ಸಂಗಾತಿ
ಎ.ಎನ್.ರಮೇಶ್. ಗುಬ್ಬಿ
ʼಸಮ್ಮೋಹನ..!ʼ


ಮಳೆಯ ಹನಿ-ಹನಿಗೂ
ಪುಳಕಗೊಳ್ಳುವ ಇಳೆಯಂತೆ.!
ಮುಗಿಲ ಮೃದುಸ್ಪರ್ಷಕೆ
ರೋಮಾಂಚಗೊಳ್ಳುವ ಗಿರಿಯಂತೆ.!
ಕಡಲಲೆಗಳ ಲಾಸ್ಯಕೆ
ನಲಿವ ಕಿನಾರೆಯಂತೆ.!
ಮಂದಮಾರುತ ಮೋಡಿಗೆ
ವಿಕಸಿತಗೊಳುವ ಪಾರಿಜಾತದಂತೆ.!
ಉಷೆಕಿರಣ ಚುಂಬನಕೆ
ಕರಗುವ ಇಬ್ಬನಿಯಂತೆ.!
ದುಂಬಿಗಾನ ಮಾಧುರ್ಯಕೆ
ನಾಚಿ ನವಿರೇಳುವ ಸುಮದಂತೆ.!
ಹಕ್ಕಿಯಿಂಚರದ ಹಾಡಿಗೆ
ಹರ್ಷಿಸುವ ತರುಲತೆಯಂತೆ.!
ನವಿಲ ಅಪೂರ್ವನಾಟ್ಯಕೆ
ಸಂಭ್ರಮಿಪ ಕಾನನರಾಶಿಯಂತೆ.!
ಇಂದ್ರಚಾಪದ ಸಪ್ತರಂಗಿಗೆ
ಮಂತ್ರಮುಗ್ಧವಾಗುವ ಜಗದಂತೆ.!
ಮಾಧವನ ಮುರಳಿರಾಗಕೆ
ಲೋಕವನೆ ಮರೆತ ರಾಧೆಯಂತೆ.!
ಸಮ್ಮೋಹನದಿ ಹೊಳೆಯುವ
ಕಂಗಳ ಕೋಲ್ಮಿಂಚ ಮಿನುಗಿಗೆ.
ಅಧರದಂಚಲಿ ಮೆಲ್ಲ ಸೆಳೆವ
ಮೋಹಕ ಮುದ್ದು ಮುಗುಳ್ನಗೆಗೆ..
ಮೃದುಲ ನುಡಿ, ಚುಂಬಕ ನಡೆಗೆ,
ಒಳಗಣ ಚೆಲುವಿಗೆ, ಒಲವಿಗೆ,
ಅಕ್ಕರೆ ಅನುರಾಗ ಸುರದೀಪ್ತಿಗೆ
ನಾನೆಂದೋ ಸಂಪೂರ್ಣ ಶರಣು.!
ಗೆಳತಿ ನನ್ನೆದೆಯೊಳಗೀಗ ನಿನ್ನದೇ
ಮಧುರ ನೆನಪುಗಳ ಸಂಚಲನ.!
ಅನುದಿನವೂ.. ಅನುಕ್ಷಣವೂ..
ನಿನ್ನ ಮಧುಸ್ವರಗಳದೇ ಅನುರಣನ.!!
ಎ.ಎನ್.ರಮೇಶ್. ಗುಬ್ಬಿ.



