ಕಾವ್ಯ ಸಂಗಾತಿ
ಎಮ್ಮಾರ್ಕೆ
ಕೆಂಪಿ (ಗಂಡು ದಿಕ್ಕಿಲ್ಲದ ತುಂಡು ಜೀವ)

ಎಲ್ಲರಂತೆ ಸಹಜವಾಗೇ
ಹುಟ್ಟಿದವಳು ಕೆಂಪಿ,
ಹುಟ್ಟಲ್ಲೂ ಗುಟ್ಟಿನ ಗಂಟು
ಕಟ್ಟಿಕೊಂಡವಳು ಕೆಂಪಿ,
ತಂದೆ ಯಾರೆಂದರಿಯದೇ
ಭುವಿಗೆ ಬಂದವಳಂತೆ,
ಅಂದವಳ ಬೆನ್ನೇರಿದವು
ಇಂದಿಗೂ ಇಳಿದಿಲ್ಲವಂತೆ,
ಜಗದ ಸಂತೆಯ ತುಂಬ
ಇವಳದ್ದೇ ಅಂತೆ ಕಂತೆ

ಹೆಣ್ಣೆಂಬುವ ಹಣ್ಣೊಂದನು
ಸುಲಿದು ಸವಿಯುದಕ್ಕಿಂತ,
ಕುಕ್ಕಿ ಕುಕ್ಕಿ ತಿನ್ನಲು ಕಿಕ್ಕಿರಿದು
ತುಂಬಿಕೊಂಡವರೇ ಹೆಚ್ಚು,
ಕೆಂಪಿಯೂ ಹೊರತಾಗಿಲ್ಲ
ಹೆಚ್ಚಿರುವ ಹಾಳು ಹುಚ್ಚಿಗೆ
ಬೆಚ್ಚಗಿದ್ದವಳಗೀಗ ಬೆಂಕಿ
ಸೋಕುವ ವಿಷಗಳಿಗೆಯು,
ಪಾರು ಮಾಡುವವರಿಗಿಂತ
ದೂರುವವರೇ ಎಲ್ಲರೂ,
ಹೆಣ್ಣೆಂದರೇ ಹಾಗೇ ಎನ್ನುವ
ಪೂರ್ವಾಗ್ರಹಿಗಳು ನಾವೇ!
ಗಂಡು ದಿಕ್ಕಿಲ್ಲದ ಆ ಮನೆಗೆ
ವಿಧಿಯೊಡ್ಡಿದ ಸಾಲು ಸಾಲು
ಸವಾಲುಗಳಿಗಿಲ್ಲಿ ಜವಾಬಿಲ್ಲ
ಜವಾಬ್ದಾರರು ಇಲ್ಲವೇ ಇಲ್ಲ,
ಮನೆಯಲ್ಲಿದ್ದ ಕೆಂಪಿ ಯಾರ
ಮನವ ಸೇರಲಿಲ್ಲ,ಕಣ್ಣಂತೂ
ತುಂಬಿಸಿಕೊಂಡಿದ್ದರು ಬಿಡಿ
ಆ ಕಣ್ಣೇ ಹೇಳುತ್ತಿವೆಯಲ್ಲ,
ಕಣ್ಣು ಇರಿದ ಬಾಣಗಳಿಂದಲೇ
ಕೆಂಪಿ ಈಗ ಅರ್ಧ ಸತ್ತಾಗಿದೆ,
ಹನಿ ನೀರಿನ ಹಂಬಲವನ್ನಷ್ಟೇ
ಕೆಂಪಿ ಜೀವಕದು ಗೊತ್ತಾಗಿದೆ
ಎಮ್ಮಾರ್ಕೆ




