ಕಾವ್ಯ ಸಂಗಾತಿ
ಇಂದು ಶ್ರೀನಿವಾಸ್
ವಿಮರ್ಶೆ..

ಚರಂಡಿ ಜಿಗಿದವನನ್ನು ಸಮುದ್ರ ದಾಟಿದನೆಂದು ಬಿಂಬಿಸುವುದೇ?
ಅಂಬೆಗಾಲಿಡುವವನ್ನು ನಟರಾಜನೆನ್ನುವುದೇ?
ಕಾಡಿನ ತೊರೆಯ ಬದಿಯಲ್ಲಿ ಪುಕ್ಕ ತರಿದು ಕೊಂಡ
ಕೆಂಬೂತವನ್ನು ನವಿಲೆಂದು ವರ್ಣಿಸುವುದೇ?.
ಮಣ್ಣು ತಿನ್ನುವ ಮುಕ್ಕಾವನ್ನು
ಕಾಳಿಂಗಕ್ಕೆ ಹೋಲಿಸುವುದೇ?
ತರವಲ್ಲ.! ತರವಲ್ಲ.!
ಬೇವು, ಬೇಲ ಎರಡೂ ಬೆಳೆದಿವೆ
ಈ ಕಾಡಿನಲ್ಲಿ.!
ಹಾಲುಗುಂಬಳ, ಹಾಗಲ
ಎರಡೂ ಒಂದೇ ಮರಕೆ ಹಬ್ಬಿದ
ಬೇರೆ ಬೇರೆ ಬಳ್ಳಿ.!
ಆಳುದ್ದ ಹೊಂಡಕ್ಕೂ,
ಆಳ ತಿಳಿಯದ ಸಮುದ್ರಕ್ಕೂ ವಿವರಣೆ ಬೇಕೆ?
ಮರುಭೂಮಿಯ ಕುರುಚಲಿಗೂ
ಸಹ್ಯಾದ್ರಿ ಕಾಡಿಗೂ ಹೋಲಿಕೆ ಏಕೆ?
ಆಗದು ನನ್ನಿಂದಾಗದು.
ಬೇರೆ ಯಾರನ್ನಾದರೂ ಹುಡುಕಿಕೋ.!
ಬಣ್ಣದ ಕಲ್ಲನ್ನು ವಜ್ರವೆನ್ನಲು.!
ಹುಲ್ಲಿನ ಬೆಂಕಿಯನ್ನು ಕಲ್ಲಿದ್ದಲ ಕಾವೆನ್ನಲು.!
ಬಾ, ಇಲ್ಲಿ ಬಯಲ ಗಾಳಿಗೆ ತೆರೆದು ಕೊಳ್ಳೋಣ.
ಗಟ್ಟಿ ಯಾವುದೋ, ಜೊಳ್ಳು ಯಾವುದೋ ತೂರಿಕೊಳ್ಳೋಣ.!!
ಇಂದು ಶ್ರೀನಿವಾಸ್.





ನಿಮ್ಮ ಕವಿತೆಯು ತುಂಬಾ ಅರ್ಥಗರ್ಭಿತವಾಗಿದೆ…
ಧನ್ಯವಾದಗಳು ಸರ್