ಪರಿಸರ ಸಂಗಾತಿ
ಅಕ್ಷತಾ ಜಗದೀಶ.
ʼಕಾಂಡ್ಲಾ ವನʼ





ಕರಾವಳಿಯ ಹಿನ್ನೀರಿನ ಪ್ರದೇಶದ ಉಪ್ಪು ನೀರಿನ ವ್ಯಾಪ್ತಿಯಲ್ಲಿ ಬೆಳೆಯುವ, ಹಸಿರಿನಿಂದ ಕಂಗೊಳಿಸುವ ಪ್ರದೇಶವೇ “ಕಾಂಡ್ಲಾ ವನ”. ಕಾಂಡ್ಲಾದ ಮೂಲ ಹೆಸರು ಮ್ಯಾಂಗ್ರೋವ್. ಉಪ್ಪು ಮಿಶ್ರಿತ ಜೌಗು ಪ್ರದೇಶ, ಸಮುದ್ರ ತೀರದ ಹಿನ್ನೀರಿನಲ್ಲಿ ವಿಶ್ವದ ಉಷ್ಣ ಮತ್ತು ಸಮಶೀತೋಷ್ಣ ವಲಯದಲ್ಲಿ ಮಾತ್ರ ಬೆಳೆಯುವ ವಿಶಿಷ್ಟ ವಾದ ಸಸ್ಯಸಂಕುಲವಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಗಂಗಾವಳಿ, ಕಾಳಿ, ಅಘನಾಶಿನಿ,ಶರಾವತಿ ನದಿಗಳ ಪಾತ್ರದಲ್ಲಿ ಈ ಕಾಂಡ್ಲಾ ಸಸ್ಯ ಕಾಣಬಹುದಾಗಿದೆ. ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ಹಬ್ಬಿರುವ ಕಾಂಡ್ಲಾ ವನ ವಿಸ್ತೀರ್ಣದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ 10.47 ಚ. ಕಿ. ಮೀ. ಇದ್ದು ಪ್ರಥಮ ಸ್ಥಾನ ಪಡೆದಿದೆ. 1.69 ಚ. ಕಿ. ಮೀ. ಕಾಂಡ್ಲಾ ಕಾಡು ಹೊಂದಿರುವ ಉಡುಪಿ ಜಿಲ್ಲೆ ಎರಡನೇ ಸ್ಥಾನ ಹಾಗೂ 0.49 ಚ. ಕಿ. ಮೀ. ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆ ಮೂರನೇ ಸ್ಥಾನದಲ್ಲಿದೆ.
ಈ ಕಾಂಡ್ಲಾ ವನಗಳು ಕೇವಲ ನೋಡುವುದಕ್ಕೆ ಮಾತ್ರ ಸುಂದರವಾಗಿಲ್ಲ ,ಮಳೆಗಾಲದ ಸಮಯದಲ್ಲಿ ತುಂಬಿ ಹರಿಯುವ ನದಿ ,ಕಡಲ ಕೊರೆತಗಳಿಂದ ಮಣ್ಣಿನ ಸವಕಳಿ ತಪ್ಪಿಸುವುದಕ್ಕೂ ಸಹಕರಿಸುತ್ತದೆ. ಕಳೆದ ಎರಡು ವರ್ಷದ ಅವಧಿಯಲ್ಲಿ ಕಾಂಡ್ಲಾ ಪ್ರದೇಶ ವಿಸ್ತರಣೆ ಹೆಚ್ಚಾಗಿರುವುದು ಕಂಡುಬಂದಿದೆ. ಮಣ್ಣಿನಿಂದ ಹೀರಿಕೊಂಡ ಅಪಾಯಕಾರಿ ಉಪ್ಪಿನಂಶವನ್ನು ವಿವಿಧ ರೀತಿಯಲ್ಲಿ ಹೊರಹಾಕುವ ಎಲೆ ಮತ್ತು ಕಾಂಡ ಸಸ್ಯಲೋಕದ ವಿಸ್ಮಯವೆಂದೇ ಹೇಳಬೇಕು.
ಕಾಂಡ್ಲಾ ಸಸ್ಯಗಳಲ್ಲಿ ಎರಡು ವಿಧಗಳನ್ನು ಕಾಣಬಹುದು:-
_**ಕಾಂಡ್ಲಾ ಸಹಚರ ಸಸ್ಯ*_ :- ಇವು ಸಾಮಾನ್ಯ ಪರಿಸರಗಳಲ್ಲೂ ಬೆಳೆಯುವಂಥದ್ದು. ಉದಾಹರಣೆಗೆ ಡೇರಿಸ್, ಸರ್ಬೇರ, ಸಿಸಲ್ ಪಿನಿಯಾ, ಫಂಡನಸ್ ಇತ್ಯಾದಿ.
_**ನೈಜ ಕಾಂಡ್ಲಾ ಸಸ್ಯ:-*_
ಇವು ಕಾಂಡ್ಲಾ ಪ್ರದೇಶಗಳಲ್ಲಿಸೀಮಿತವಾಗಿ ಬೆಳೆಯುವ ಸಸ್ಯವಾಗಿದೆ. ಉದಾಹ ರಣೆಗೆ ಕಾಂಡೆಲಿಯ, ಬ್ರುಗೇರಿಯ, ಸೋನರೇಶಿಯ, ರೈಸೋಪೋರಾ, ಎಕ್ಸೋಕಾರಿಯ ಇತ್ಯಾದಿ.
ಈ ಕಾಂಡ್ಲಾ ಕಾಡನ್ನು ಮೀನುಗಳ ಬಾಲವಾಡಿ ಎಂದು ಕರೆಯುವರು. ಕಾರಣ ಸಮುದ್ರದ ಕೆಲವು ಮೀನುಗಳು ಈ ಪ್ರದೇಶದಲ್ಲಿ ಮೊಟ್ಟೆಗಳನ್ನು ಇಡುತ್ತವೆ. ಬೆಳವಣಿಗೆ ನಂತರ ಮರಿಗಳು ಮರಳಿ ಸಮುದ್ರಕ್ಕೆ ಹೋಗುತ್ತದೆ. ಸಾಕಷ್ಟು ಆಹಾರ, ರಕ್ಷಣೆ ಇರುವುದರಿಂದ ಸ್ಥಾನಿಕ ಹಾಗೂ ವಲಸೆ ಹಕ್ಕಿಗಳು ಸಹ ತಮ್ಮ ಸಂತಾನೋತ್ಪತ್ತಿಗಾಗಿ ಈ ಪ್ರದೇಶಕ್ಕೆ ಬರುತ್ತದೆ .
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಿಂದ 4 ಕಿ. ಮೀ. ಹೋಗಿ ಕಾಸರಕೋಡ್ ಕಡಲ ತೀರದಿಂದ 1ಕಿಮೀ ದೂರದಲ್ಲಿರುವ ಈ ಕಾಂಡ್ಲಾ ವನದಲ್ಲಿ ಮರದ ಹಲಗೆಯಿಂದ ಕಾಲುದಾರಿಯನ್ನು ನಿರ್ಮಿಸಲಾಗಿದೆ. ಕಾಂಡ್ಲಾ ವಾಕ್ ಮಾಡುವ ಮೂಲಕ ಕಾಂಡ್ಲಾ ವನವನ್ನು ಹತ್ತಿರದಿಂದ ನೋಡಿ ಕಣ್ತುಂಬಿಕೊಳ್ಳಬಹುದಾಗಿದೆ……..

ಅಕ್ಷತಾ ಜಗದೀಶ.
—-



