ಕಾವ್ಯ ಸಂಗಾತಿ
ಮನ್ಸೂರ್ ಮೂಲ್ಕಿ ಅವರ ಕವಿತೆ,
ಮಧುರ

ನೋಡು ಬಾರೋ ನನ್ನ ಹಳ್ಳಿ
ಪಚ್ಚ ಪೈರು ಹಚ್ಚ ಹಸುರು
ಏನು ಚೆಂದವೋ
ಏನು ಅಂದವೋ
ತೆಂಗು ಕಂಗು ವಿವಿಧ ಹಣ್ಣು
ನಾವು ನಡೆವ ಹೊನ್ನ ಮಣ್ಣು
ನೋಡು ಬಾರೋ ನನ್ನ ಹಳ್ಳಿ
ಏನು ಚಂದವೋ ಅದೇನು ಚಂದವೋ
ಹಕ್ಕಿಹಾಡು ಮನದಿ ನೆಲಸಿ
ಬೀಸೋ ಗಾಳಿ ತಂಪು ತರಲು
ನುಡಿಗಳೆಲ್ಲ ಬಾವವಾಗಿದೆ
ನವಿಲು ಕುಣಿತ ಮನವ ತಣಿಸಿ
ನೀರ ಜರಿಗೆ ಮೌನವಾಗಿ
ನಗುವ ತರಿಸಿದೆ
ನೋಡು ಬಾರೋ ನನ್ನ ಹಳ್ಳಿ
ಏನು ಚೆಂದವೋ
ಪಚ್ಚ ಪೈರು ಹಚ್ಚ ಹಸುರು
ಏನು ಅಂದವೋ
ಚಿನ್ನೀ ದಾಂಡು ಆಟ ಆಡಿ
ಕೊಳದಲ್ಲಿ ಈಜಾಡಿ
ನಡೆದುಕೊಂಡ ಕಾಲು ದಾರಿ
ತಿಂದುಕೊಂಡ ಕಾಡ ಹಣ್ಣು
ಅದೇನು ಮಧುರವೊ
ನೋಡು ಬಾರೋ ನನ್ನ ಹಳ್ಳಿ
ಏನು ಚೆಂದವೋ
ಪಚ್ಚ ಪೈರು ಹಚ್ಚ ಹಸುರು
ಏನು ಅಂದವೋ
ಹಳ್ಳಿ ಊಟ ಸವಿದು ನೋಡು
ಏನು ಮಧುರವೋ
ಹಳ್ಳಿ ಮನೆಯ ಕಂಡು ನೋಡು
ಏನು ಶುದ್ಧವೋ
ಕಾಡ ಹೂವ ಮುಡಿದು ನೋಡು
ಅದೇನು ಸುಗಂಧವೋ
ನೋಡು ಬಾರೋ ನನ್ನ ಹಳ್ಳಿ
ಏನು ಚಂದವೋ
ಪಚ್ಚ ಪೈರು ಹಚ್ಚ ಹಸುರು
ಏನು ಅಂದವೋ
ಮನ್ಸೂರ್ ಮೂಲ್ಕಿ




