ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಆಕೆ ಬೆಂಗಳೂರು ಎಂಬ ಮಹಾನಗರದಲ್ಲಿ ಗಾರ್ಮೆಂಟ್ಸ್ ಉದ್ಯೋಗಿಯಾಗಿ ದುಡಿಯುತ್ತಿದ್ದಾಳೆ. ಸಂಗಾತಿ ಇಲ್ಲದ ಆಕೆಯ ಜೀವನದಲ್ಲಿ ಮಗಳು ಒಬ್ಬಳೆ ಸಾಥಿ. ಗಾರ್ಮೆಂಟ್ಸ್ ಉದ್ಯೋಗವೇ ಆಕೆಯ ಜೀವನಾಧಾರ. ಬೆಳ್ಳಂಬೆಳಗ್ಗೆ ಭಾರತದ ಭೂ ಭಾಗ ಸೂರ್ಯನ ಕಡೆಗೆ ತಿರುಗುವ ಮುನ್ನವೇ ಆಕೆ ಎದ್ದು ತನಗೂ ತನ್ನ ಮಗಳಿಗೂ ಅಡುಗೆ ತಯಾರು ಮಾಡುತ್ತಾಳೆ. ನಂತರ ಮಗಳನ್ನು ಶಾಲೆಗೆ ತಯಾರು ಮಾಡಿ ಊಟ ಮಾಡಿಸಿ ಇಬ್ಬರಿಗೂ ಡಬ್ಬಿ ಕಟ್ಟುತ್ತಾಳೆ. ತಾನೂ ತಯಾರಾಗಿ ಮಗಳನ್ನು ಶಾಲೆಗೆ ಬಿಟ್ಟು ತಾನು ಫ್ಯಾಕ್ಟರಿಗೆ ಓಡುತ್ತಾಳೆ. ಇದು ಆಕೆಯ ಮುಂಜಾನೆಯ ದಿನಚರಿ. ಎದ್ದಾಗಿನಿಂದಲೂ ಫ್ಯಾಕ್ಟ್ರಿಗೆ ಹೋಗುವವರೆಗೂ ಆಕೆಯ ಕಣ್ಣಲ್ಲಿ ಗಾಬರಿ ಮತ್ತು ಕಾಲಲ್ಲಿ ಅವಸರ ತುಂಬಿರುತ್ತದೆ. ಈ ಸನ್ನಿವೇಶದಿಂದ ಕೇಸ್ ಮತ್ತು ಬಾಬಿನ್ ಕಿರುಚಿತ್ರ  ಆರಂಭವಾಗುತ್ತದೆ.

ಈ ಸಿನಿಮಾ ಸಂಪೂರ್ಣವಾಗಿ ಮಹಿಳಾ ಗಾರ್ಮೆಂಟ್ಸ್ ಉದ್ಯೋಗಿಗಳ ಕುರಿತಾಗಿ ಚಿತ್ರಿಸಲಾಗಿದೆ. ಗಡಿಬಿಡಿಯಲ್ಲಿ ಫ್ಯಾಕ್ಟರಿಗೆ ಹೋದ ಅವಳು ತನ್ನ ಎಲ್ಲಾ ವಸ್ತುಗಳನ್ನು ಒಂದಡೆ ಇರಿಸಿ ಸೀದ ಹೋಗಿ ಹೊಲಿಗೆ ಯಂತ್ರದ ಕುರ್ಚಿಯ ಮೇಲೆ ಕೂತು ಸಣ್ಣ ನಗುವಿನೊಂದಿಗೆ ತನ್ನ ಕೆಲಸ ಆರಂಭಿಸುತ್ತಾಳೆ. ಅಂದಿನ ಅವಳ ಟಾರ್ಗೆಟ್ ಮುಗಿಸಲು ಮೊದಲ ಹೆಜ್ಜೆ ಇಡುತ್ತಾಳೆ. ಕೆಲಸಕ್ಕೆ ತಡವಾಗುತ್ತದೆ ಎನ್ನುವ ಕಾರಣಕ್ಕೆ ಬೆಳಗ್ಗೆ ಅರೆ ಹೊಟ್ಟೆಯಲ್ಲಿ ಬಂದಿದ್ದ ಆಕೆ ಟಾರ್ಗೆಟ್ ಜಾಸ್ತಿ ಇದೆ ಎನ್ನುವ ಕಾರಣಕ್ಕೆ ಮಧ್ಯಾಹ್ನದ ಊಟದ ಅವಧಿಯಲ್ಲಿಯೂ ಒಂದಷ್ಟು ಸಮಯ ಉಳಿಸಲು ಹೋಗಿ ಮತ್ತೆ ಅರೆ ಹೊಟ್ಟೆಯಾಗುತ್ತಾಳೆ. ಸಂಜೆ ಕೆಲಸ ಮುಗಿಸಿ ಬಂದ ಅವಳನ್ನು ಸ್ವಾಗತಿಸಿದ್ದು ಸಿಂಕ್ ನಲ್ಲಿದ್ದ ಪಾತ್ರೆಗಳು ಮತ್ತು ಬಕೆಟ್ ನಲ್ಲಿದ್ದ ಬಟ್ಟೆಗಳು. ಎಲ್ಲಾ ಕೆಲಸ ಮುಗಿಸಿ ಅಡುಗೆ ಮಾಡಿ ಮಗಳಿಗೆ ಊಟ ಮಾಡಿಸಿ ತಾನು ಊಟ ಮಾಡಿ ಮಲಗಲು ಸಜ್ಜಾದ ಅವಳಿಗೆ ಅಂದಿನ ದಿನ ಮುಗಿದಿತ್ತು. ಈ ಯಾಂತ್ರಿಕ ಬದುಕು ಅವಳ ಜೀವನವೇ ಆಗಿಬಿಟ್ಟಿತ್ತು. ಆದರೆ ಆಕೆಗೆ ಈ ಕ್ಲಿಷ್ಟಕರ ಪಯಣದಲ್ಲಿ ಇದ್ದ ಒಂದೇ ಒಂದು ಖುಷಿ ಹಾಗು ಸ್ಪೂರ್ತಿ ಎಂದರೆ ಆಕೆಯ ಮಗಳು ಹಾಗೂ ಅವಳ ಓದು ಮಾತ್ರ.

 ಕೇವಲ 6 ನಿಮಿಷ 30 ಸೆಕೆಂಡ್ ಇರುವ ಈ ಕಿರು ಚಿತ್ರವು ಪ್ರತಿಯೊಬ್ಬರ ಮನಸ್ಸು ತಟ್ಟುತ್ತದೆ. ಅದರಲ್ಲಿಯೂ ಏಕ ಪೋಷಕರಾಗಿ ಮಕ್ಕಳ ಭವಿಷ್ಯ ರೂಪಿಸಲು ಹೋರಾಡುತ್ತಿರುವ ಗಾರ್ಮೆಂಟ್ಸ್ ಉದ್ಯೋಗದ ಎಲ್ಲಾ ತಾಯಂದಿರಿಗೂ ಇದು ಅರ್ಪಣೆಯಾಗಿದೆ. ಬೆಂಗಳೂರಿನ ನೀಲವರ್ಣ ಮೀಡಿಯಾ ಪ್ರಸ್ತುತಪಡಿಸಿರುವ, ಭರತ್ ರಾಜ್ ರಚಿಸಿ ನಿರ್ದೇಶಿಸಿರುವ ಈ ಕೇಸ್ ಮತ್ತು ಬಾಬಿನ್ ಚಿತ್ರದಲ್ಲಿ ಕರ್ನಾಟಕದ ಗಾರ್ಮೆಂಟ್ಸ್ ಮತ್ತು ಟೆಕ್ಸ್ಟೈಲ್ ವರ್ಕರ್ಸ್ ಯೂನಿಯನ್ (GATWU) ನ ಅಧ್ಯಕ್ಷರಾದ ಪ್ರತಿಭಾ ರವರು ಹಾಗೂ ಇಬ್ಬರು ಗಾರ್ಮೆಂಟ್ಸ್ ಉದ್ಯೋಗಿ ಮಹಿಳೆಯರು ಗಾರ್ಮೆಂಟ್ಸ್ ಉದ್ಯೋಗದಲ್ಲಿ ಮಹಿಳೆಯರ ಸ್ಥಿತಿಗತಿಯ ಕುರಿತು ಮಾತನಾಡಿರುವುದು ವಿಶೇಷ. ಇವರೇ ಹೇಳುವ ಹಾಗೆ ಕೃಷಿ ಹೊರೆತುಪಡಿಸಿದರೆ ದೇಶಕ್ಕೆ ಅತಿ ಹೆಚ್ಚು ಆದಾಯ ತಂದು ಕೊಡುವ ಉದ್ಯಮ ಗಾರ್ಮೆಂಟ್ಸ್ ಉದ್ಯಮವಾಗಿದೆ.

2022 – 23ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ವರದಿ ಅನುಸಾರ ದೇಶದ ಒಟ್ಟು ಮೌಲ್ಯವರ್ಧಿತ ಆದಾಯ 18.3% ಇದ್ದು, ಈ ಕೊಡುಗೆ ನೀಡುವ ಮೂಲಕ ಕೃಷಿ ಭಾರತದ ಆರ್ಥಿಕತೆಯ ಮೂಲಾಧಾರವಾಗಿ ಉಳಿದಿದೆ. ಅದೇ ರೀತಿ ಜವಳಿ (ಗಾರ್ಮೆಂಟ್ಸ್) ಉದ್ಯಮವು ಭಾರತದ ಒಟ್ಟು ದೇಶಿಯ ಉತ್ಪನ್ನಕ್ಕೆ 2.3% ಕೊಡುಗೆ ನೀಡುತ್ತಿದೆ. ಈ ಉದ್ಯಮವು ಕೈಗಾರಿಕಾ ಉತ್ಪಾದನೆಯ 13% ರಷ್ಟು, ರಫ್ಟಿನ 12% ರಷ್ಟು ಮತ್ತು 4.5 ಕೋಟಿ ಕಾರ್ಮಿಕರಿಗೆ ಉದ್ಯೋಗ ನೀಡಿದೆ.

 ಭಾರತದ ಎರಡನೇ ಅತಿ ದೊಡ್ಡ ಜವಳಿ (ಗಾರ್ಮೆಂಟ್ಸ್) ಉದ್ಯೋಗದಾತ ರಾಜ್ಯ ನಮ್ಮ ಕರ್ನಾಟಕವಾಗಿದ್ದು, ಬೆಂಗಳೂರನ್ನು ಭಾರತದ ” ಉಡುಪುಗಳ ರಾಜಧಾನಿ ” ಎಂದು ಕರೆಯಲಾಗುತ್ತದೆ. ರಾಜ್ಯದ ಕೈಮಗ್ಗ ಮತ್ತು ಜವಳಿ ಇಲಾಖೆಯ ವರದಿಯ ಅನುಸಾರ ರಾಷ್ಟ್ರೀಯ ಉತ್ಪಾದನೆಯ ಶೇಕಡ 20% ರಷ್ಟು ಉತ್ಪಾದನೆ ಬೆಂಗಳೂರಿನಲ್ಲಿ ನಡೆಯುತ್ತದೆ. ಇದು ಸುಮಾರು 75 ಕೋಟಿ ರೂಪಾಯಿಯ ಮೌಲ್ಯದ ಮತ್ತು ರಾಷ್ಟ್ರೀಯ ರಫ್ಟಿನ ಶೇಕಡ 11% ರಷ್ಟು ಸಮನಾಗಿದೆ. ಈ ವಲಯವು ರಾಜ್ಯದಲ್ಲಿ ಸುಮಾರು 6 ಲಕ್ಷ ಜನರಿಗೆ ಉದ್ಯೋಗ ನೀಡಿದೆ. ಬೆಂಗಳೂರು ಒಂದರಲ್ಲಿಯೇ ಸುಮಾರು 401 ಗಾರ್ಮೆಂಟ್ಸ್ ಘಟಕಗಳಿವೆ. ಇದರಲ್ಲಿ ಶೇಕಡ 80% ರಿಂದ 90% ಮಹಿಳಾ ಕಾರ್ಮಿಕರೇ ಇದ್ದಾರೆ ಎನ್ನುವುದನ್ನು ಗಮನಿಸಬೇಕಿದೆ.

 ದೇಶಕ್ಕೆ ಇಷ್ಟೆಲ್ಲಾ ಆದಾಯ ತಂದು ಕೊಡುತ್ತಿರುವ ಈ ಉದ್ಯಮದಲ್ಲಿ ನಮ್ಮ ಮಹಿಳೆಯರ ಜೀವನ ಕ್ರಮ ಮಾತ್ರ ನಿಂತ ನೀರಾಗಿದೆ. ಎಷ್ಟೋ ಮಹಿಳೆಯರು 20 ರಿಂದ 30 ವರ್ಷ ಒಂದೇ ಕೆಲಸದಲ್ಲಿ ಅದೇ ದಿನಚರಿಯನ್ನು ಸಾಗಿಸುತ್ತಾ ಬದುಕುತ್ತಿದ್ದಾರೆ. ಈ ಹೆಣ್ಣು ಮಕ್ಕಳು ಹೊಲೆದ ಉಡುಪುಗಳು ವಿದೇಶಕ್ಕೆ ರಫ್ತಾಗುತ್ತವೆ. ಜಗತ್ತಿನ ದೊಡ್ಡ ದೊಡ್ಡ ಬ್ರಾಂಡ್ ಗೆಳ ಫ್ಯಾಷನ್ ಡಿಸೈನರ್ ನಮ್ಮ ರಾಜ್ಯದ ಗಾರ್ಮೆಂಟ್ಸ್ ಮಹಿಳಾ ಉದ್ಯೋಗಿಗಳಾಗಿದ್ದಾರೆ. ಈ ಉದ್ಯೋಗದಲ್ಲಿ ತಿಂಗಳ ಸಂಬಳ ಬಿಟ್ಟರೆ ಬೇರೆ ಯಾವ ರೀತಿಯಾದ ಅಭಿವೃದ್ಧಿಯನ್ನು ಸಹ ಹೆಣ್ಣು ಮಕ್ಕಳು ಕಾಣಲು ಸಾಧ್ಯವಿಲ್ಲ. ಹೆಚ್ಚಿನ ಪ್ರೊಡಕ್ಷನ್ ನ ಒತ್ತಡದ ಕಾರಣದಿಂದ ಹೊಲಿಗೆಯ ಮೇಲಷ್ಟೇ ಅವರ ಗಮನವಿರುತ್ತದೆ. ಫ್ಯಾಕ್ಟರಿ ಬಿಟ್ಟರೆ ಮನೆ ಮನೆ ಬಿಟ್ಟರೆ ಫ್ಯಾಕ್ಟರಿ ಇದಷ್ಟೇ ಅವರ ಜೀವನವಾಗಿದೆ.

ಈ ಮಹಿಳೆಯರು ಹಲವು ರೀತಿಯ ಅನಾರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಪ್ರಮುಖವಾಗಿ ಇಲ್ಲಿನ ಎಲ್ಲಾ ಮಹಿಳೆಯರಿಗೂ ರಕ್ತ ಹೀನತೆಯ ಸಮಸ್ಯೆ ಇದ್ದೇ ಇರುತ್ತದೆ. ಇದರ ಜೊತೆಗೆ ಶ್ವಾಸಕೋಶ ಸಮಸ್ಯೆಗಳು, ಬೆನ್ನು ನೋವು, ಮಂಡಿ ನೋವು, ತಲೆನೋವು, ದೋಷಗಳಂತಹ ಅನಾರೋಗ್ಯಗಳು ಉದ್ಭವಿಸುತ್ತವೆ. ಬಟ್ಟೆಗಳಿಂದ ಬರುವ ಸಣ್ಣ ಸಣ್ಣ ದಾರದ ಅಂಶಗಳು ಉಸಿರಾಡುವಾಗ ಉಸಿರಿನ ಮೂಲಕ ಶ್ವಾಸಕೋಶ ಸೇರಿ ಅಸ್ತಮಾ ಹಾಗೂ ಶ್ವಾಸಕೋಶದ ಕ್ಯಾನ್ಸರ್ ನಂತಹ ಮಾರಣಾಂತಿಕ ಕಾಯಿಲೆಗಳು ಸಹ ಕಂಡುಬರುತ್ತವೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಸಹ ಮಹಿಳೆಯರು ದುಡಿಮೆಯ ಕಾರಣಕ್ಕೆ ಈ ಉದ್ಯೋಗವನ್ನು ಆಯ್ಕೆ ಮಾಡಿಕೊಂಡಿರುತ್ತಾರೆ.

 ಇಂತಹ ಮಹಿಳೆಯರ ಬದುಕಿನ ಬವಣೆ ಹಾಗೂ ಅನಿವಾರ್ಯತೆಗಳ ಮೇಲೆ ಬೆಳಕು ಚೆಲ್ಲಿರುವ ನೀಲವರ್ಣ ಮೀಡಿಯ ಹಾಗೂ ಭರತ್ ರಾಜ್ ರವರಿಗೆ ಧನ್ಯವಾದಗಳು ತಿಳಿಸಬೇಕಿದೆ. ಹಾಗೆ ಈ ಮಹಿಳೆಯರಿಗೆ ಪೂರಕವಾದ ಕಾನೂನುಗಳನ್ನು ತರುವ ಹೊಣೆಗಾರಿಕೆ ಸರ್ಕಾರಗಳದ್ದಾಗಿದೆ. ಇಂತಹ ಸಮಾಜಮುಖಿ ಚಿತ್ರಗಳನ್ನು ಪ್ರೋತ್ಸಾಹಿಸುವ ಮತ್ತು ಈ ಮಹಿಳೆಯರ ಪರವಾಗಿ ದನಿಯಾಗುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ.


About The Author

Leave a Reply

You cannot copy content of this page

Scroll to Top