ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಜೀವನ ಶೈಲಿ ಬಹಳಷ್ಟು ರೂಪಾಂತರಗೊಂಡಿದೆ.,ಸ್ವತಂತ್ರ ದತ್ತ ದಾಪುಗಾಲು ಹಾಕುತ್ತಿದೆ.ಜ್ಞಾನವೇನೋ ಮುಮ್ಮಡಿಯಾಗುತ್ತಿದೆ.ಆದರೆ ‘ಅರಿವಿನ’ ಸಾಗರ ಬತ್ತುತ್ತಿದೆ.ವಿಚಿತ್ರ ಅನ್ನಿಸಿದರೂ ಸತ್ಯ. ಭೂಮಿಗೆ ಬಂದಾಗ ಈ ಪ್ರಪಂಚದ ಆಶಯ ಜಗತ್ತಿಗೆ ಉತ್ತಮ ಹಾಗೂ ಪ್ರಯೋಜಕ ವ್ಯಕ್ತಿಯಾಗಿ ಬಾಳಬೇಕೆಂಬ ಪ್ರಕೃತಿಯ ಸಂದೇಶ,ಅದು  ಬೆಳೆಯುತ್ತ ಬೆಳೆಯುತ್ತ ಅದನ್ನು ಹುಸಿಗೊಳಿಸುತ್ತಿದ್ದೆವೆ ಎಂದರೆ “ಅದೇನು ಮಹಾ”? ನಾನೊಬ್ಬನೇ ಈ ಜಗತ್ತಿಗೆ ಬಂದಿಲ್ಲ; ನನಗಿಂತ ಮೊದಲಾದವರು ಸಾಕಷ್ಟಿದ್ದಾರೆ…ಅವರ ಕೊಡುಗೆ ಮೊದಲು!. ನಂತರ ನನ್ನ ಪಾಳಿ ಎಂದು ಮೂಗುಮುರಿಯವರು ನಮ್ಮೆದುರು.ನನ್ನಿಂದ ಶುರುವಾಗಲಿ ಎಂಬ ಮಾತು ಎಲ್ಲರಿಗೂ ಇಷ್ಟವಾಗಲ್ಲ.ಹೇಳುವವರ ಮೇಲೆ ಹರಿಹಾಯ್ವವರಿಗೇನು ಕೊರತೆಯಿಲ್ಲ.ಕಷ್ಟ ಯಾರಿಗೆ ತಾನೆ ಬೇಕು? ನಷ್ಟ ಸ್ವೀಕರಿಸುವವರು ಯಾರಿದ್ದಾರೆ? ಸೋತವನ ಸಂಗಡಿಗರು ಬೆರಳೆಣಿಕೆಯಷ್ಟು!. ಇದು ಜಗದ ನಿಯಮ ಕೂಡ!.ಎಲ್ಲವೂ ಪ್ರಾಯೋಗಿಕ ಪರೀಕ್ಷೆಗಳು… ಬಟ್ಟೆಯಂಗಡಿಯಲ್ಲಿ “ಟ್ರಯಲ್” ರೂಮ್ ಇದ್ದಂತಾಗಿದೆ.

ಒಂದು ಇರುವೆಯ ಸಾಹಸ,ಶಿಸ್ತು, ಪತ್ತೆದಾರಿಕೆಯನ್ನು ನಾವುಗಳು ಏಕತಾನತೆಯಿಂದ ನಮ್ಮೊಳಗೆ ಯಥಾವತ್ತಾಗಿ ಅಳವಡಿಸಿಕೊಳ್ಳುವ ಸಾಹಸ ನಮಗಿದೆಯಾ? ಜೇನು ಹುಳುವಿನ ಪರಿಶ್ರಮ,ಅಲೆದಾಟ,ಜೇನು ಸಂಸ್ಕರಿಸುವ ಪರಿ;ಮಕರಂದ ಅರಿಸಿ ಅಲೆವ ಅವುಗಳ ತ್ಯಾಗದ ಮುಂದೆ ನಮ್ಮ ಬದುಕಿದೆಯಾ? ಹಸುವಿನಂತೆ ಹುಲ್ಲು ತಿಂದು ಹಾಲು ಕೊಡುವ ಪರಿಶುದ್ಧ ಪ್ರೇಮ ನಮ್ಮಾವರಿಸಿದೆಯಾ? ಯಾವುದು ನಮ್ಮ ಆದರ್ಶ? ಒಂದು ಕ್ಷಣ ಸುಮ್ಮನೇ ಕುಳಿತು ನಮ್ಮ ಅಸ್ತಿತ್ವಕ್ಕೆ ನಾವು ಯಾವ ಬೆಲೆ ಕೊಡುತ್ತಿದ್ದೆವೆ? ನಮ್ಮಿಂದ ಏನು ಸೃಷ್ಟಿಸಲು ಸಾಧ್ಯ? ಜಗತ್ತು ನಳನಳಿಸಲು ಸಹಜತೆಯಿಂದ ಕೂಡಿರಲು ಹೇಗಿರಬೇಕು ಮಾನವ ಜೀವಿಯ ಜೀವನ?. ಹೊಸದನ್ನು ಸೃಜಿಸಲು ಏನು ಮಾಡಬೇಕು? ಎಂಬೆಲ್ಲ ಚಿಂತನೆಗಳು ಹಾದುಹೋಗಲಿಕ್ಕೆ ಸಾಕು!. ಒಂದು ಹೂವಿನ ಆಯಸ್ಸು ಕೇವಲ ಒಂದು ದಿನ,ಅಷ್ಟರೊಳಗೆ ಅದರ ಬದುಕಿನ ಎಲ್ಲ ಅಂಶಗಳು ಜರುಗಬೇಕು.ಪರಾಗಸ್ಪರ್ಶವಾಗಿ ಸಾರ್ಥಕ ಜೀವನ ನಡೆಸಿ ನಗುನಗುತ್ತ ಹೂವು ಗಿಡದಿಂದ ಬೇರೆಯಾಗಿ ಭೂಮಿಯ ಸ್ಪರ್ಶ ಮಾಡುತ್ತದೆ.ಬೆಳಿಗ್ಗೆ ಅರಳಿ ಸಂಜೆ ಮುದುಡುವ ಹೂವಿಗಿದೆ ಸಮರ್ಪಣೆಯ ಮಧುರ ಕ್ಷಣಗಳು; ಅಂದರೆ ನಾವುಗಳು ೬೦-೮೦ ವರ್ಷ ಬದುಕುವ ನಮಗೆ ಎಷ್ಟು ಗುರಿಗಳು ಇರಬೇಕು? ಸಾಫಲ್ಯದ ಜೀವನ ಚರಿತ್ರೆಯನ್ನು ಸೃಷ್ಟಿಸಬಹುದು!. ಹಾಗೆ ಸಾಧಿಸಿದವರು ಕೆಲವೇ ಕೆಲವರು ಮಾತ್ರ!. ಉಳಿದವರ ಬದುಕು ಹಾಗೆ ಬಂದು ಹೀಗೆ ಹೋಗುವುದಾದರೆ ಎಷ್ಟು ಚೆಂದ?.ಓದಿ ತಿಳಿದ ಜ್ಞಾನ, ಅನುಭವಕ್ಕೆ ಬರದೆ ಹೋದರೇನು ಬೆಲೆ?

ಜನಸಂಖ್ಯೆಗೆ ತಕ್ಕಂತೆ ಉದ್ಯೋಗ, ವಸತಿ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ದಿನದಿಂದ ದಿನಕ್ಕೆ ವಾಸಿಸುವ ಭೂಮಿ ಚಿಕ್ಕದಾಗುತ್ತಿದೆ.ಕಾರಣ ಭೂಮಿ ಎಂದಿಗೂ ಬೆಳೆಯದು.ನದಿ,ಕೆರೆ,ಹಳ್ಳ-ಕೊಳ್ಳಗಳು ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತಿವೆ.ಮುಂದೊಂದು ದಿನ ಸಮುದ್ರದ ಮೇಲೆ ಬೃಹತ್ ಪ್ರಮಾಣದ ಕಟ್ಟಡಗಳು ನಿರ್ಮಾಣ ಆದರೆ ವಿಶೇಷವಿಲ್ಲ.ಅಲ್ಲಿಯವರೆಗೆ ನಾವುಗಳು ಇರಲಾರೆವು ಅನ್ನೋದು ದಿಟ!.ಮುಂದಿನ ಪೀಳಿಗೆಯ ಲೆಕ್ಕಾಚಾರ ಹೀಗಿರಲುಬಹುದು.ಬೆಂಗಳೂರಿನ ನಿರ್ಮಾಪಕ, ಕೆಂಪೇಗೌಡರು. ನಗರದ ಜನರ ನೀರಿನ ಸೌಕರ್ಯಕ್ಕಾಗಿ, ಬೆಂಗಳೂರಿನ ಸುತ್ತಮುತ್ತ ಅನೇಕ ಕೆರೆ-ಕಟ್ಟೆಗಳನ್ನು ಕಟ್ಟಿಸಿದರು.ಬೆಂಗಳೂರಿನಲ್ಲಿ ೯೦ ಸಾವಿರ ಕೆರೆಗಳು ಇದ್ದವು ಎಂಬ ಮಾತಿದೆ‌‌.ಇಂದು ಆ ಎಲ್ಲ ಕೆರೆಗಳು ತುಂಬಿದ್ದರೆ ಬೆಂಗಳೂರಿನ ಚಿತ್ರಣವೇ ಭಿನ್ನವಾಗಿರುತ್ತಿತ್ತು‌.ಆದರೆ ಇಂದು ಬೆಂಗಳೂರಿನ ಸ್ಥಿತಿ… ಒಂದು ಮಳೆ ಬಂದರೆ ತಲ್ಲಣಿಸಿ ಹೋಗುತ್ತದೆ‌.ನೀರು ಕಂಡರೆ ಇಡೀ ದೇಹ ಕಂಪಿಸುತ್ತದೆ. ಚರಂಡಿಯ ಕಲುಷಿತ ನೀರು ರೋಡಿನ ತುಂಬ ನಿಂತು,ತಗ್ಗಿನ ಪ್ರದೇಶಗಳಿಗೆ ನುಗ್ಗಿ ಮಾಡುವ ಅವಾಂತರವನ್ನು  ಕಣ್ಣಾರೆ ಕಂಡವರ ದುಃಖ ಯಾರಿಗೆ ಹೇಳೋದು..!. “ಎಲೆಕ್ಟ್ರಾನಿಕ್ ಸಿಟಿ ” ಎಂಬ ಹೆಸರು ಬೆಂಗಳೂರಿಗಿದೆ. ಅದೇ  ನೀರಿಗೆ ಕರೆಂಟ್ ಪಾಸಾದರೆ ಉಳಿಗಾಲವಿದೆಯಾ?.

ದೊಡ್ಡ ದೊಡ್ಡ ಸಿಟಿಗಳತ್ತ ಉದ್ಯೋಗದ ನೂರು ಕನಸು ಹೊತ್ತು ಬರುವ ವಿದ್ಯಾವಂತ ಯುವಕ/ತಿಯರ ದಂಡಿಗೆ ಇದೊಂದು “ಮಾಯಾನಗರಿ” ಗೆದ್ದವರೆಷ್ಟೋ,ಸೋತವರೆಷ್ಟೋ ಊರಿಗೆ ವಾಪಸ್ ಆದವರೆಷ್ಟೋ ಇಲ್ಲೆ ಇದ್ದು ಸಮಾಜ ಘಾತುಕರಾದವರೆಷ್ಟೋ ಎಷ್ಟೋ ಜನ ಹೇಳ ಹೆಸರಿಲ್ಲದಂತೆ ಕಣ್ಮರೆಯಾದವರೆಷ್ಟೋ…ಪೋಷಾಕುಗಳ ಹಿಂದೆ ಅಸಲಿ,ನಕಲಿ ಮುಖವಾಡಗಳನ್ನು ಗುರುತಿಸದೇ ಮೋಸದಾಟಕೆ ಬಲಿಯಾದ ಮುಗ್ದರೆಷ್ಟೋ ಹೆತ್ತವರ ಪಾಲಿಗೆ ಕಣ್ಣೀರೊಂದೆ ಕೊಟ್ಟು ಮೌನವಾದವರೆಷ್ಟೋ..ಹಸಿವು ಬಲ್ಲವನಿಗೆ ಇವೆಲ್ಲವನ್ನೂ ಸಹಿಸುವ ತಾಳ್ಮೆಯಿದೆ.ಹೊಟ್ಟೆ ತುಂಬಿಸಿಕೊಳ್ಳಲು ಎಷ್ಟೆಲ್ಲ ಸರ್ಕಸ್ ಮಾಡಬೇಕು ಎನ್ನುವುದನ್ನು ನಿಯತ್ತಾಗಿ ದುಡಿದು ತಿನ್ನೊರಿಗೆ ಮಾತ್ರ ಗೊತ್ತು.ಯಾವ ರಸ್ತೆಯಂಚಿಗೆ ಮಲಗಿ,ನೆರಳು,ಬಿಸಿಲಿಗೆ ಮೈಯೊಡ್ಡಿ ಮತ್ತೆ  ಕತ್ತಲಿಗೆ ಶರಣಾಗುವ ಎಷ್ಟೋ ಬಡಕುಟುಂಬಗಳು ಬದುಕುತ್ತಿರುವ ಸತ್ಯ ನಮಗೆಲ್ಲರಿಗೂ ಗೊತ್ತಿರುವಂತಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಬದುಕು ಯಾರೊಂದಿಗೂ ಶಾಶ್ವತವಾಗಿ ನಿಲ್ಲೊದಿಲ್ಲ…ಬಡವ,ಶ್ರೀಮಂತ, ದುರ್ಬಲ ಹೀಗೆ ಹಲವಾರು ವಿಧದಲ್ಲಿ ಜನರ ಮನಸ್ಥಿತಿಯನ್ನು ಖಾಯಂ ಆಗಿ ಒಂದೇ ತರನಾಗಿ ಅರ್ಥೈಸಲು ಸಾಧ್ಯವಿಲ್ಲ.ಅವರವರ ಮೂಗಿನ ನೇರಕ್ಕೆ ಎಲ್ಲವೂ ಸಮ.ಸರಳತೆಯ ವ್ಯಾಮೋಹವು ಬಲಿಷ್ಠವಾಗಿ ಅಷ್ಟು ಸುಲಭವಾಗಿ ಬೇರೂರುವುದಿಲ್ಲ.ತನ್ನ ಸ್ವಾರ್ಥ ಸಾಧನೆಗೆ ಸುಳ್ಳಿನ ದಾರಿ ಹಿಡಿದರೆ ಆಶ್ಚರ್ಯ ಪಡಬೇಕಿಲ್ಲ.ಒಟ್ನಲ್ಲಿ‌ ಅವರಿಷ್ಟ ನೆರವೇರಿದರೆ ಸಾಕು.
ಹಿಟ್ಟಂ ತಿಂದಂ ಬೆಟ್ಟಂ ಎತ್ತಿದಂ…ಆಧುನಿಕ ಜೀವನಕ್ಕೆ ಮಾರುಹೋದ ಯುಗವಿದು….ಶೋಕಿಯಲ್ಲೆ ಜೀವನ ಸಾಗಿಸುವ ಧಾವಂತ!. ಮುಖವಾಡದ ಬದುಕಿಗೆ ಪ್ರಕೃತಿಯ ಸರ್ವನಾಶ!.ಆದಿ ಅಂತ್ಯ ಎಲ್ಲವೂ ಭಗವಂತನ ಲೀಲೆ…ಮಾನವೀಯತೆ ನಮ್ಮದಾಗಬೇಕು.ಎಲ್ಲ ಜೀವಿಗೂ ಬದುಕುವ ಹಕ್ಕಿದೆ!,ಸ್ವಾತಂತ್ರ್ಯವಿದೆ. ಹಸಿವಿನ ಅರಿವು ಸದಾ ನಮ್ಮ ಜೊತೆ. ತಟ್ಟೆಯಲ್ಲಿ ಅಕ್ಕಿಯನ್ನು ಹೊರತು ಪಡಿಸಿ ನೋಟು, ನಾಣ್ಯಗಳನ್ನು ಹಾಕಿದರೆ ಅನ್ನತಿಂದಂತೆ ಆದಿತೆ? ಅರಿವಿಗೆ ಬರದ ಪ್ರಜ್ಞೆ ಜೀವನ ಸುಗಮಗೊಳಿಸಿತು ಹೇಗೆ,? ಅರಿವಿನ ವಿಶಾಲತೆಯು ನಮ್ಮೊಳಗಿರಬೇಕು…ಇಲ್ಲವಾದರೆ ಅರಿವೆಂಬ ಸಾಗರ ಬತ್ತಿದಂತೆ!..


About The Author

5 thoughts on “”

  1. ತುಂಬಾ ಚೆನ್ನಾಗಿ ವಾಸ್ತವವನ್ನು ವರ್ಣಿಸಿದ್ದೀರಿ

  2. ತುಂಬಾ ಚೆನ್ನಾಗಿ ವಾಸ್ತವ ವಸ್ತು ಸ್ಥಿತಿಯ ಚಿತ್ರಣವನ್ನು ನೀಡಿದ್ದೀರಿ. ಅಭಿನಂದನೆಗಳು

  3. ಪ್ರಸ್ತುತ ಸಮಾಜದ ಸ್ಥಿತಿಗತಿಯ ಚಿತ್ರಣದ ವಣ೯ನೆ ಚೆನ್ನಾಗಿದೆ ಮೇಡಂ ಅರಿವು ಬಂದರೆ ಚೆನ್ನ.ಅಭಿನಂದನೆಗಳು ಮೇಡಂ

  4. ಆಹಾ ಅದೆಷ್ಟು ಸೊಗಸು ತಮ್ಮ ಬರೆವಣಿಗೆ….
    ಸತ್ಯದ ಅನಾವರಣ ಲೇಖನದಲ್ಲಿ ಮನಮುಟ್ಟುವಂತೆ ಪಡಿಮೂಡಿದೆ…
    ಅಭಿನಂದನೆಗಳು ಮೇಡಂ

Leave a Reply

You cannot copy content of this page

Scroll to Top