ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಪರಿಚಿತ ಮಗುವಿನ ತುಂಟಾಟ ನೋಡಿ ಮುಖದಲ್ಲಿ ಮೃದು ಹಾಸ ಮೂಡುತ್ತದೆ. ಇನ್ನಾರೋ ಪರಿಚಿತರು ರಸ್ತೆಯಲ್ಲಿ ಭೇಟಿಯಾದರೆ ಪರಸ್ಪರ ಮುಗುಳ್ನಗು ವಿನಿಮಯವಾಗುತ್ತದೆ. ನಮಗಿಂತ ಚಿಕ್ಕವರನ್ನು ಕಂಡಾಗ ಅಕ್ಕರೆಯ ಕಿರುನಗೆ ನಕ್ಕರೆ ನಮಗಿಂತ ದೊಡ್ಡವರನ್ನು ಕಂಡಾಗ ಗೌರವದ ಸವಿ ಭಾವದ ನಗು ಹೊಮ್ಮುತ್ತದೆ.

ನಗುವೊಂದು ಸಾಂಕ್ರಾಮಿಕ…. ನಿಜ. ಇಬ್ಬರು ಸ್ನೇಹಿತರು ತರಗತಿಯ ಕೋಣೆಯಲ್ಲಿ ಗುಸು-ಗುಸು ಮಾತಾಡಿಕೊಂಡು ನಕ್ಕರೆ ಅದನ್ನು ನೋಡಿ ಇನ್ನುಳಿದವರು ಕೂಡ ನಗುತ್ತಾರೆ. ನಗೆಯ ಭಾಷೆಯೇ ಅಂತಹದ್ದು. ಅದೆಷ್ಟೇ ಕೋಪಗೊಂಡ ಮನುಷ್ಯನ ಮುಖದಲ್ಲಿ ನಗೆ ಮೂಡಿಸುವುದು ಪುಟ್ಟ ಮಗುವಿನ ನಗು. ಬಿಗುವಿನ ವಾತಾವರಣದಲ್ಲಿ ಮಾತಿನ ಒಂದು ಚಟಾಕಿ ಮೂಡಿಸುವುದು ನಗೆಯ ಹಬ್ಬವನ್ನು.

ಆಂಗ್ಲ ಭಾಷೆಯಲ್ಲಿ ಒಂದು  ಮಾತಿದೆ “ಸ್ಮೈಲ್ ಇಸ್ ದ ಓನ್ಲಿ ಆರ್ನಮೆಂಟ್ ದಟ್ ಕಾಸ್ಟ್ ನಥಿಂಗ್ ಬಟ್ ವೀನ್ಸ್ ಎವರಿಥಿಂಗ್”
ಇದರರ್ಥ ನಗು ಎಂಬುದು ಏನನ್ನು ಕಳೆದುಕೊಳ್ಳದ ಆದರೆ ಎಲ್ಲವನ್ನು ಗೆಲ್ಲುವ ಏಕೈಕ ಒಡವೆ. ನಗು ಮನಸ್ಸಿನ ನೋವನ್ನು ತೊಡೆದು ಹಾಕುವ ಏಕೈಕ ಔಷಧಿ.

ಹೆಣ್ಣು ಏನೆಲ್ಲಾ ಒಡವೆ ವಸ್ತುಗಳಿಂದ ಸಿಂಗರಿಸಿಕೊಳ್ಳಬಹುದು, ಆದರೆ ಆಕೆಯ ಅಸಲೀ ಸೌಂದರ್ಯಕೆ ಮೆರುಗು ಬರುವುದು ಆಕೆಯ ಮುಖದ ಮೇಲಿನ ಮೃದು ಮಂದಹಾಸದಿಂದ ಎಂದು ಕವಿಗಳು ಬರೆದಿರುವುದು ಇದಕ್ಕೆ ಇರಬಹುದು.

ವೈಜ್ಞಾನಿಕವಾಗಿಯೂ ಕೂಡ ನಗೆಯು ಒಳ್ಳೆಯದು ಎಂದು ಸಾಬೀತುಪಡಿಸಲ್ಪಟ್ಟಿದೆ. ಮನುಷ್ಯ ಕೋಪಗೊಂಡಾಗ ಆತನ ಮುಖವು ರುದ್ರಭಯಂಕರವಾಗಿ ಕಾಣುತ್ತದೆ. ಮೂಗಿನ ಹೊರಳೆಗಳು ಅಗಲವಾಗುತ್ತವೆ ಕಿವಿ ಮತ್ತು ಕೆನ್ನೆಯ ಭಾಗ ಕೆಂಪಾಗುತ್ತದೆ. ದೇಹ ನಖ ಶಿಖಾಂತ ನಡುಗಿ ಬೆವರುತ್ತದೆ. ಮನಸ್ಸು ವಿಕಾರವಾಗುತ್ತದೆ.ಆದರೆ ನಕ್ಕಾಗ ಮನುಷ್ಯನ ಮುಖದ ಸ್ನಾಯುಗಳು ಸಡಿಲಗೊಂಡು ಮನಸ್ಸು ಪ್ರಫುಲ್ಲಿತವಾಗುತ್ತದೆ, ದೇಹ ಹಗುರವಾಗುತ್ತದೆ, ಮುಖ ಕೆಂದಾವರೆಯಂತೆ ಅರಳುತ್ತದೆ.

ನಗೆಯ ವಿಧಾನಗಳು
ಮತ್ತೊಬ್ಬರನ್ನು ನೋಡಿ ನಕ್ಕರೆ ಅದನ್ನು ‘ಅಪಹಾಸ್ಯ’  ಗೇಲಿ ಎಂದು ಕರೆಯುತ್ತೇವೆ.

ಚಂದದ ನಗುವಿಗೆ ಮಂದಹಾಸ, ಮುಗುಳ್ನಗೆ, ಸುಹಾಸ ಎಂದು ಕರೆವರು
ಜೋರಾಗಿ ಗಹಗಹಸಿ ನಗುವುದನ್ನು ಅಟ್ಟಹಾಸದ ನಗು ಎಂದು ಹೇಳುತ್ತಾರೆ.
ಪ್ರೀತಿ ಮತ್ತು ಅಕ್ಕರೆಯಿಂದ ಕೂಡಿದ ನಗುವನ್ನು ಸಕ್ಕರೆ ನಗು, ಅಕ್ಕರೆಯ ನಗು ಎಂದು ಹೇಳಿದರೆ
ತುಟಿಯೇ ಬಿರಿಯದಂತೆ ನಕ್ಕರೆ ಕಿರು ನಗು ಎಂದೂ, ಮುಗುಳ್ನಗೆ ಎಂದೂ ಕರೆಯುತ್ತಾರೆ.

ಹಾಸ್ಯದ ಚಟಾಕಿಗಳನ್ನು ಕೇಳಿದಾಗ, ಹಾಸ್ಯ ಪ್ರಸಂಗಗಳನ್ನು ಅನುಭವಿಸಿದಾಗ ಬರುವ ನಗು…. ಬಿದ್ದು ಬಿದ್ದು ನಗುವುದು ಎಂದೆನಿಸಿಕೊಂಡರೆ,  ಮನಸ್ಸಿಲ್ಲದೆ ಇದ್ದಾಗಲೂ ನಗುವನ್ನು ಮುಖದಲ್ಲಿ ಹೊತ್ತು ತಿರುಗುವುದನ್ನು’ಹುಸಿ ನಗೆ’ ಎಂದು ಹೇಳುತ್ತಾರೆ.
ಸುಂದರವಾದ ತರುಲತೆ ಬಳ್ಳಿಗಳನ್ನು ಹೂಗಳನ್ನು ದೃಶ್ಯವನ್ನು ನೋಡಿದಾಗ ಮುಖದಲ್ಲಿ ಮೂಡುವುದು ಆಹ್ಲಾದಕರ ನಗೆ.

 ಏನನ್ನಾದರೂ ಅನವಶ್ಯಕವಾಗಿ ಹೇಳಿದಾಗ ಅಸಡ್ಡೆಯ ನಗು ಮೂಡಿದರೆ, ಮಕ್ಕಳ ಮೇಲೆ ಮೂಡುವುದು ಅಕ್ಕರೆಯ ನಗು.

ಇತ್ತೀಚಿನ ದಿನಗಳಲ್ಲಿ ನಗೆಯ ಮಹತ್ವವನ್ನು ಅರಿತಿರುವ ಜನರು ನಗಲಿಕ್ಕೆಂದೆ ವಿವಿಧ ತರಗತಿಗಳಿಗೆ ಹೋಗುತ್ತಾರೆ. ಲಾಫ್ಟರ್ ಕ್ಲಬ್ ಲಾಫ್ಟರ್ ಕ್ಲಾಸ್, ಲಾಫ್ಟರ್ ಥೆರಪಿಗಳು ಪ್ರಸಿದ್ಧವಾಗಿವೆ. ಅತಿ ಕ್ಲಿಷ್ಟಕರವಾದ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ಹಲವಾರು ಜನರು ತಮ್ಮ ಆಸ್ಪತ್ರೆಯ ಹಾಸಿಗೆಯಲ್ಲಿಯೇ ಅನೇಕ ನಗೆ ಚಟಾಕಿಗಳನ್ನು ಹಾರಿಸುವ ಪ್ರದರ್ಶನಗಳನ್ನು ನೋಡಿ ತಮ್ಮ ನೋವನ್ನು ಮರೆಯುತ್ತಾ ಬೇಗ ಗುಣಮುಖರಾದ ನಿದರ್ಶನಗಳು ಇವೆ. ನಗೆಯು ದೇಹದಲ್ಲಿ ಡೋಪಮೈನ ನ್ನು ಬಿಡುಗಡೆ ಮಾಡುವುದರಿಂದ ದೇಹ ಮತ್ತು ಮನಸ್ಸು ಒಂದೇ ಕಾಲದಲ್ಲಿ ಉತ್ತಮವಾಗಿ ಸ್ಪಂದಿಸುತ್ತ ರೋಗಿಗಳ ದೇಹದಲ್ಲಿ ಡೋಪಮೈನ ಎಂಬ ಹಾರ್ಮೋನನ್ನು ಸ್ರವಿಸುತ್ತಾ ಬೇಗ ಗುಣಮುಖವಾಗುವಂತೆ ಮಾಡುತ್ತದೆ

ನಕ್ಕು ನಕ್ಕು ಸಾಯಿರಿ….. ಎಂದು  ನಮ್ಮ ಬೇಂದ್ರೆ ಅಜ್ಜನವರು ಹೇಳಿದ್ದಾರೆ.
‘.
‘ಕಿರಿ ಆಳದ ನಗೆ ನೀರಿನ ಮೇಲೆ ಹಾಸ್ಯದ ಹರಿಗೋಲು’ಎಂದು ಟಿ.ಪಿ. ಕೈಲಾಸಂ ಅವರು ನಗೆಯ ಕುರಿತು ಬರೆದಿದ್ದಾರೆ.

12ನೇ ಶತಮಾನದಲ್ಲಿಯೂ ಕೂಡ ನಗಿಸುವುದನ್ನೇ ಕಾಯಕವನ್ನಾಗಿ ಮಾಡಿಕೊಂಡ ನಗೆ ಮಾರಿ ತಂದೆ ಎಂಬ ಶರಣರ ಕುರಿತ ಕಥೆಗಳಿವೆ
 ನಾಟಕಗಳಲ್ಲಿಯೂ ಕೂಡ ನಗೆಯ ಚಟಾಕಿಗಳನ್ನು ಹಾರಿಸುತ್ತಾ ವೇದಿಕೆಯನ್ನು ಜೀವಂತಿಕೆಯಿಂದ ಇಡುವ ಪ್ರಯತ್ನವನ್ನು ಮಾಡುತ್ತಿದ್ದರು. ಮಾಸ್ಟರ್ ಹಿರಣ್ಣಯ್ಯ ನವರಂತೂ ಹಾಸ್ಯರತ್ನಾಕರ , ನಟರತ್ನಾಕರ ಎಂದೇ ಹೆಸರಾಗಿದ್ದರು.
ಚಲನಚಿತ್ರಗಳಲ್ಲಿಯೂ ಹಾಸ್ಯ ಕಲಾವಿದರು ಇಲ್ಲದೆ ಚಿತ್ರಗಳು ಅಪೂರ್ಣವೆನಿಸುತ್ತವೆ.
ಡಾಕ್ಟರ್ ರಾಜ್ ಕುಮಾರ್ ಅವರ ಕಾಲದಲ್ಲಂತೂ ಹಾಸ್ಯ ಚಕ್ರವರ್ತಿ ಎಂದೇ ಹೆಸರಾದ ನರಸಿಂಹರಾಜು ಅವರಿಗೆ ಅಣ್ಣಾವ್ರ ಸರಿಸಮನಾಗಿ ಪಾತ್ರವಿರುತ್ತಿತ್ತು. ದಿನೇಶ್, ನರಸಿಂಹ ರಾಜು, ಮುಸುರಿ ಕೃಷ್ಣಮೂರ್ತಿ, ಎನ್.ಎಸ.ರಾವ್, ಉಮಾಶ್ರೀ, ರೇಖಾದಾಸ್ ಟೆನ್ನಿಸ್ ಕೃಷ್ಣ, ಉಮೇಶ್ ಮುಂತಾದವರು ಕನ್ನಡ ಚಿತ್ರರಂಗದ ಅತ್ಯಂತ ಪ್ರತಿಭಾನ್ವಿತ ಹಾಸ್ಯ ನಟರಾಗಿ ಮೆರೆದರು.

̲——————————————————————————————

About The Author

Leave a Reply

You cannot copy content of this page

Scroll to Top