ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸಿಟ್ಟಿನಿಂದ ಮನೆಯ ಬಾಗಿಲನ್ನು ಜೋರಾಗಿ ಹಾಕಿಕೊಂಡು ಹೊರ ಬಿದ್ದ ಆಕಾಶ್ ಲಿಫ್ಟ್ ಇರುವುದನ್ನು ಕೂಡ ಮರೆತವರಂತೆ ದಬದಬನೇ ಮೆಟ್ಟಿಲು ಇಳಿದು ಅಪಾರ್ಟ್ಮೆಂಟಿನ ಸಮುಚ್ಚಯದಿಂದ ಹೊರನಡೆದ.

ಎಲ್ಲಿ ಹೋಗಬೇಕು ಎಂದು ಗೊತ್ತಿಲ್ಲದೆ ಒಂದೇ ಸಮನೆ ನಡೆದ ಆತನ ಕಾಲುಗಳು ಇನ್ನು ಮುಂದೆ ಹೋಗುವುದಿಲ್ಲ ಎಂದು ಮುಷ್ಕರ ಹೂಡಿದಾಗ ಆತನ ಎದುರಿಗೆ ಮಧ್ಯಮ ವರ್ಗದ ಜನರು ಹೆಚ್ಚಾಗಿ
ಬಂದು ಕುಳಿತುಕೊಳ್ಳುವ ಬಾರ್ ಕಣ್ಣಿಗೆ ಬಿತ್ತು.

 ಎಂದೂ ಬಾಯಿಗೆ ಒಂದು ಹನಿ ಅಲ್ಕೊ ಹಾಲ್ ಸೋಕಿಸದ ಆತ ತನಗರಿವಿಲ್ಲದೆ ಹೋಗಿ ಆ ಬಾರಿನ ಒಳ ಹೊಕ್ಕು ಮೂಲೆಯೊಂದರ ಟೇಬಲ್ ನ್ನು ಆರಿಸಿ ಕುಳಿತುಕೊಂಡ. ಕೆಲವೇ ಕ್ಷಣಗಳಲ್ಲಿ ಆತನ ಮುಂದೆ ಹಾಜರಾದ ವೇಟರ್ನನ್ನು ನೋಡಿ ಕಕ್ಕಾಬಿಕ್ಕಿಯಾದ.

 ಆದರೂ ಆಫೀಸಿನ ಪಾರ್ಟಿಗಳಲ್ಲಿ, ಸ್ನೇಹಿತರೊಂದಿಗೆ ಊಟಕ್ಕೆ ಹೊರಗೆ ಹೋದಾಗ ಅವರು ಆರ್ಡರ್ ಮಾಡುತ್ತಿದ್ದುದನ್ನು ನೋಡಿದ್ದ ಆತ ಅವರಂತೆಯೇ ತನಗೆ ಬೇಕಾದ? ತಿನಿಸು ಮತ್ತು ಡ್ರಿಂಕ್ ಅನ್ನು ಆರ್ಡರ್ ಮಾಡಿದ.

 ಆತ ಆರ್ಡರ್ ಮಾಡಿದ್ದೆಲ್ಲವೂ ಕೆಲವೇ ನಿಮಿಷಗಳಲ್ಲಿ ಆತನ ಟೇಬಲ್ ಮೇಲೆ ಬಂದು ಕುಳಿತಿತ್ತು. ಅದುವರೆಗೂ ತಲೆತಗ್ಗಿಸಿ ಮನದ ವ್ಯಾಕುಲವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದ ಆಕಾಶ್ ಗ್ಲಾಸನ್ನು ತೆಗೆದು ತುಟಿಗೆ ಇಟ್ಟವನೇ ಒಂದು ಗುಟುಕು ಪಾನೀಯವನ್ನು ಹೀರಿದ. ಪಾನೀಯದ ಕಡು ಘಾಟು ಮೂಗಿಗೆ ಮತ್ತು ಗಂಟಲಿಗೆ ಏರಿದಂತಾಗಿ ಕೆಮ್ಮಲಾರಂಭಿಸಿದ.ಆತನ ಬಳಿ ಸಾರಿದ ಓರ್ವ ಗಡ್ಡಧಾರಿ ವ್ಯಕ್ತಿ ಆತನ ಮುಂದೆ ನೀರಿನ ಗ್ಲಾಸನ್ನು ಹಿಡಿದ. ಗಟಗಟನೆ ನೀರನ್ನು ಕುಡಿದ ಆತ ನೋಡಿದಾಗ ಆ ವ್ಯಕ್ತಿ ಆತನ ಟೇಬಲ್ನ ಮುಂದಿನ ಕುರ್ಚಿಯಲ್ಲಿ ಕುಳಿತಿದ್ದ.

 ತನಗೆ ನೀರು ಕೊಟ್ಟು ಉಪಕರಿಸಿದ ಆ ಗಡ್ಡದಾರಿ ವ್ಯಕ್ತಿಯನ್ನು ನೋಡಿ ಅದುವರೆಗೂ ಬಿಗಿದ ಆಕಾಶನ ತುಟಿಗಳು ಕೊಂಚ ಅರಳಿದವು. ಇದನ್ನು ನೋಡಿದ ಆ ಅಪರಿಚಿತ ವ್ಯಕ್ತಿ ನಾನು ಸಂಜಯ್ ಅಂತ. ಇಲ್ಲಿಯ ಖಾಯಂ ಗಿರಾಕಿ. ಆದರೆ ಒಮ್ಮೆಯೂ ನಿಮ್ಮನ್ನು ಇಲ್ಲಿ ನೋಡಿಲ್ಲವಲ್ಲ ನೀವು ಈ ಊರಿಗೆ ಹೊಸಬರೇ ಎಂದು ಕೇಳಿದ.

 ಮಾತನಾಡಲೇಬೇಕೆಂಬ ಸೌಜನ್ಯ ಅನಿವಾರ್ಯವಾಗಿ ಆಕಾಶನ ಬಾಯಿ ತೆರೆಸಿತು. ಇಲ್ಲ! ಇಲ್ಲಿಯೇ ಹತ್ತಿರದ
ಬಡಾವಣೆಯ ನಿವಾಸಿ ನಾನು. ಕಳೆದ ಹಲವಾರು ವರ್ಷಗಳಿಂದ ಅಲ್ಲಿಯೇ ವಾಸವಾಗಿದ್ದೇನೆ ಎಂದು ತನ್ನ
ಅಪಾರ್ಟ್ಮೆಂಟ್ನ ಹೆಸರನ್ನು ಹೇಳಿದ. ಆ ದೂರವನ್ನು ಅರಿತಿದ್ದ ಅಪರಿಚಿತ ಅಲ್ಲಲ್ಲ ಸಂಜಯ್ ಏಕೆ ನಿಮ್ಮ ಮನೆಯ ಹತ್ತಿರದಲ್ಲೆಲ್ಲೂ ಬಾರ್ ಗಳಿಲ್ಲವೇ ಅಥವಾ ಬೇರೆಯವರಿಗೆ ಗೊತ್ತಾಗಬಾರದು ಎಂದು ಇಷ್ಟು ದೂರ ಬಂದಿರುವುದೇ? ಎಂದು ಕೇಳಿದ.

 ತುಸು ತಲೆ ತಗ್ಗಿಸಿ ಮನೆಯಲ್ಲಿ ಪತ್ನಿಯ ಮೇಲೆ ಮುನಿಸಿಕೊಂಡು ಮನೆಯಿಂದ ಹೊರ ಬಿದ್ದು ನಡೆಯುತ್ತಾ ಇಲ್ಲಿಯವರೆಗೆ ಬಂದುಬಿಟ್ಟೆ ಎಂದು ಪ್ರಾಮಾಣಿಕವಾಗಿ ನುಡಿದ ಆತನ ಮಾತಿನಲ್ಲಿ ಇದುವರೆಗೂ ಇದ್ದ ರೋಷದ ಕಾವು ಕೊಂಚ ತಗ್ಗಿತ್ತು.

 ನೋಡಪ್ಪ ವಯಸ್ಸಿನಲ್ಲಿ ನಿನಗಿಂತ ತುಂಬಾ ಹಿರಿಯ ನಾನು…. ಗಂಡ ಹೆಂಡತಿ ಜಗಳ ಮಾಡಿದಾಗ ಮನೆಯಿಂದ ಹೊರಗೆ ಬರುವುದರ ಬದಲು ಮೌನವಾಗಿದ್ದು ನಿಧಾನವಾಗಿ ನಿಮ್ಮ ಸಮಸ್ಯೆಯ ಪರಿಹಾರಕ್ಕೆ ಪ್ರಯತ್ನಿಸಬಾರದೇಕೆ? ನಿನ್ನ ಪತ್ನಿ ಅಷ್ಟೊಂದು ಗಯ್ಯಾಳಿಯೇ? ಎಂದು ಪ್ರಶ್ನಿಸಿದನು.

 ಕೂಡಲೇ ಹೆಂಡತಿಯ ಸ್ಮಿತವದನ ನೆನಪಿಗೆ ಬಂದು ತುಟಿಯನ್ನು ಅರಳಿಸಿದ ಆತ ಛೆ ಛೆ! ಆಕೆಯ ದನಿ ನಾಲ್ಕು ಗೋಡೆಗಳ ಹೊರಗೆ ಬರುವುದೇ ಇಲ್ಲ. ಸದಾ ಹಸನ್ಮುಖಿಯಾಗಿರುವ ಆಕೆ ತುಂಬಾ ನಿಧಾನಸ್ತೆ.

 ನಿನಗೆ ಅಥವಾ ಆಕೆಗೆ ಈ ವಿವಾಹ ಇಷ್ಟ ಇರಲಿಲ್ಲವೇ? ಎಂಬ ಸಂಜಯ ಪ್ರಶ್ನೆಗೆ ನಮ್ಮದು ಹಿರಿಯರು ಏರ್ಪಡಿಸಿದ ಅರೆಂಜ್ ಮ್ಯಾರೇಜ್ ಆದರೂ ಪರಸ್ಪರ ಒಪ್ಪಿಗೆಯ ನಂತರವೇ ಮದುವೆ ನಡೆದದ್ದು. ಆಕೆ ಗೃಹವಿಜ್ಞಾನ ಪದವೀಧರೆ.
 ಮತ್ತೆ ಉಳಿದವರೊಂದಿಗೆ ಹೇಗೆ? ಎಂದು ಸಂಜಯ್ ಕೇಳಿದಾಗ ಮನೆಯಲ್ಲಿ ಇರೋದು ನಾನು ನನ್ನ ಹೆಂಡತಿ ಇಬ್ಬರು ಮಕ್ಕಳು. ಆಗಾಗ ಊರಿಂದ ಅಪ್ಪ ಅಮ್ಮ ಬಂದು ತಿಂಗಳುಗಟ್ಟಲೆ ಇದ್ದು ಹೋಗುತ್ತಾರೆ. ಅವರಿಗೆ ಆಕೆ ಎಂದರೆ ಅಚ್ಚುಮೆಚ್ಚು. ಆಕೆಯ ತಂದೆ ತಾಯಿ ಕೂಡ ಯಾವಾಗಲೋ ಬಂದು ಒಂದೆರಡು ದಿನ ಇರುತ್ತಾರೆ. ಪ್ರತಿ ಬೇಸಿಗೆ ರಜಕ್ಕೆ ನನ್ನ ತಮ್ಮ ತಂಗಿ ತಮ್ಮ ಪರಿವಾರದೊಂದಿಗೆ ಬಂದು ಉಳಿದುಕೊಳ್ಳುತ್ತಾರೆ. ಎಲ್ಲರೊಂದಿಗೆ ಆಕೆ ಪ್ರೀತಿಯಿಂದ ನಡೆದುಕೊಳ್ಳುತ್ತಾಳೆ.
ನನಗಿಂತ ಹೆಚ್ಚಾಗಿ ನನ್ನ ತಮ್ಮ, ತಂಗಿ ಒಡನಾಡುವುದು ನನ್ನ ಪತ್ನಿ ಸ್ಮಿತಾಳೊಂದಿಗೆ ಎಂದು ಹೇಳಿದಾಗ ಆತನ ಮುಖದಲ್ಲಿ ತುಸು ತಪ್ಪಿತಸ್ಥ ಭಾವ ಗೋಚರಿಸಿತು.

 ಮನೆಯಲ್ಲಿ ಅಡುಗೆ ತಿಂಡಿ ಎಲ್ಲ ಮಾಡುತ್ತಾಳೆಯೋ ಹೇಗೆ? ಎಂದು ಸಂಜಯ್ ಅವರು ಕೇಳಿದಾಗ ಅಯ್ಯೋ! ಆ ವಿಷಯದಲ್ಲಿ ಆಕೆ ಸಾಕ್ಷಾತ್ ಅನ್ನಪೂರ್ಣೇ.
 ಬೆಳಿಗ್ಗೆ ನನಗೆ ಮತ್ತು ಮಕ್ಕಳಿಗೆ ಇಷ್ಟದ ತಿಂಡಿಯನ್ನು ಮಾಡಿ ಬಡಿಸುತ್ತಾಳೆ. ಮಧ್ಯಾಹ್ನದ ಊಟಕ್ಕೆ ಚಪಾತಿ ಪಲ್ಯ ಮಾಡಿ ಹಾಟ್ ಬಾಕ್ಸಿನಲ್ಲಿಟ್ಟುಕೊಡುತ್ತಾಳೆ.
 ಸಂಜೆ ಮನೆಗೆ ಬರುವ ನನಗೆ ಮತ್ತು ಮಕ್ಕಳಿಗೆ ಬಿಸಿಬಿಸಿಯಾದ ಆರೋಗ್ಯಕರ ತಿಂಡಿಗಳನ್ನು ತಯಾರು ಮಾಡಿಟ್ಟು ಕಾಯುತ್ತಾಳೆ. ರಾತ್ರಿ ಕೂಡ ಒಳ್ಳೆಯ ರುಚಿಕರವಾದ ಅಡುಗೆಯನ್ನು ಬೇಸರವಿಲ್ಲದೆ ಮಾಡಿ ಹಾಕ್ತಾಳೆ.

 ಮತ್ತಿನ್ನೇನು ತೊಂದರೆ? ಎಂದು ಆತ ಗೊಂದಲದಿಂದ ಕೇಳಿದಾಗ ಯಾಕೋ ಗೊತ್ತಿಲ್ಲ ಇವತ್ತು ನಾನು ಮನೆಗೆ ಬಂದದ್ದೇ ತಡ..ತುಸು ದುಸು ಮುಸು ಎನ್ನುತ್ತಿದ್ದಳು.
 ಕೇವಲ ಕಾಫಿ ಬಿಸ್ಕೆಟ್ ನಲ್ಲಿ ಸಾಯಂಕಾಲ ಕಳೆಯಿತು. ಏನನ್ನು ಮಾತನಾಡದೆ ಇದ್ದ ಆಕೆಯನ್ನ ನಾನು ಕೂಡ ಅಷ್ಟಾಗಿ ಗಮನಿಸಲಿಲ್ಲ ಅನ್ಸುತ್ತೆ ಎಂದು ತುಸು ನೆನಪಿಸಿಕೊಂಡು ಹೇಳಿದ ಆತ….ರಾತ್ರಿ ಕೂಡ  ಬರಿ ಅನ್ನ ಸಾರು ಮಾಡಿದ್ದಳು..
 ಹೀಗೇಕೆ ಎಂದು ನೀನು ಕೇಳಲಿಲ್ಲವೇ? ಎಂದು ಸಂಜಯ್ ಪ್ರಶ್ನಿಸಲು ಉಹೂಂ! ಆಫೀಸಿನಿಂದ ಮನೆಗೆ ಮರಳಿದ ನಾನು ಮೊಬೈಲ್ ನಲ್ಲಿ ಮುಳುಗಿ ಹೋಗಿದ್ದೆ, ಆಕೆಗಾದ ತೊಂದರೆ ಏನು ಎಂದು ಗಮನಿಸಲೇ ಇಲ್ಲ ಎಂದು ತುಸು ತಪ್ಪಿತಸ್ಥ ಭಾವದಿಂದ ನುಡಿದ.

 ಜಗಳಕ್ಕೆ ಕಾರಣವಾದರೂ ಏನು? ಎಂದು ಸಂಜಯ್ ಕೇಳಿದಾಗ ನಾನು ಬರೀ ಅನ್ನ ಸಾರು ಉಣ್ಣುವುದಿಲ್ಲ ಎಂದು ಆಕೆಗೆ ಗೊತ್ತು. ಆದರೂ ಬರೀ ಅನ್ನ ಸಾರು ನೀಡಿದ್ದು ನನ್ನ ಸಿಟ್ಟಿಗೆ ಕಾರಣವಾಗಿ ಕಾರಣ ಕೇಳಿದರೆ ಆಕೆ ಉತ್ತರಿಸಲಿಲ್ಲ. ಅದಕ್ಕೆ ಸಿಟ್ಟಿನಿಂದ ಊಟ ಕೂಡ ಮಾಡದೆ ಮನೆಯಿಂದ ಹೊರ ಬಿದ್ದೆ.

 ಇಷ್ಟೇಯೋ? ಎಂದು ತುಸು ನಿರಾಳವಾದ ನಗೆಯನ್ನು ಚೆಲ್ಲಿದ ಸಂಜಯ್. ಅದೇನ್ ಸರ್ ಹೀಗೆ ಹೇಳ್ತೀರಿ?
 ನಾನು ಹಾಗೆ ಉಣ್ಣೊದಿಲ್ಲ ಅಂತ ಆಕೆಗೆ ಗೊತ್ತಿದ್ದೂ ನನಗೆ ಬರಿ ಅನ್ನ ಸಾರು ಬಡಿಸೋಕೆ ಹೇಗೆ ಮನಸ್ಸಾಯ್ತು ಆಕೆಗೆ? ಎಂದು ತುಸು ಕೋಪದಿಂದ ಪ್ರಶ್ನಿಸಿದ ಆಕಾಶ್.

 ಅಲ್ಲೇ ಇರೋದಪ್ಪ ರಹಸ್ಯ!… ಮುಂಜಾನೆ ಬೆಳಗಿನ ಸಮಯದಲ್ಲಿ ಮಕ್ಕಳಿಗೆ ಮತ್ತು ನಿನಗೆ ತಿಂಡಿ ಊಟದ ವ್ಯವಸ್ಥೆ ಮಾಡುವುದರಲ್ಲಿ ಆಕೆಯ ಸಮಯ ಸರಿದು ಹೋಗುತ್ತದೆ. ಸಂಜೆ ಮಕ್ಕಳು ಬಂದಮೇಲೆ ಅವರ ಹೋಂವರ್ಕ್ ಮುಂತಾದ ಎಲ್ಲಾ ಕೆಲಸ ಮಾಡಿ ದಣಿದಿರೋ ಆಕೆ ನಿಮಗೆ ಮತ್ತೆ ರಾತ್ರಿ ಬಿಸಿಯಾದ ಅಡುಗೆ ಮಾಡಿ ಬಡಿಸ್ತಾಳೆ. ಬಹುಶಹ ನೀನು ಯಾವಾಗಲೂ ಮೊಬೈಲ್ ನಲ್ಲಿ ಮುಳುಗಿರುವುದು ಆಕೆಯೊಂದಿಗೆ ಸಮಯ ಕಳೆಯದೇ ಇರುವುದು ಆಕೆಯ ಮನಸ್ಸಿಗೆ ಬೇಸರ ಹುಟ್ಟಿಸಿರಬಹುದು ಅಂತ ನಿನಗೆ ಅನ್ನಿಸ್ತಿಲ್ವಾ? ಎಂದು ಮರು ಪ್ರಶ್ನಿಸಿದ.

 ಹೌದಲ್ವೇ! ಹೀಗೆ ಇರಬಹುದು ಅಂತ ನಾನು ಯೋಚಿಸಲೇ ಇಲ್ಲ ಎಂದು ಹೇಳಿ ನಾಲಿಗೆ ಕಚ್ಚಿಕೊಂಡ ಆಕಾಶ್.

 ಎದ್ದು ಆತನ ಪಕ್ಕಕ್ಕೆ ಬಂದು ಕುಣಿತ ಸಂಜಯ್
 ಬಹುಷಃ ಹೀಗೆಯೇ ಇರುತ್ತದೆ… ನಿನ್ನನ್ನು ಮದುವೆಯಾಗಿ ಮನೆಗೆ ಬಂದ ಹೆಣ್ಣು ಮಗಳು ನಿನ್ನೆಲ್ಲಾ ಕಷ್ಟ ಸುಖಗಳಲ್ಲಿ ಭಾಗಿಯಾಗಿ ನಿನ್ನ ಸಂಸಾರದ ಏಳಿಗೆಗೆ ಕಾರಣವಾಗಿದ್ದಾಳೆ…. ಬಹುಶಃ ನಿನ್ನ ಕಾಳಜಿ, ಪ್ರೀತಿಯ ಕೊರತೆಯ ಕಾರಣ ಮೆದು ಸ್ವಭಾವದ ಆಕೆ
ಮೌನವಾಗಿ ಪ್ರತಿಭಟಿಸಿದ್ದಾಳೆ ಎಂದು ತೋರುತ್ತದೆ ಎಂದು ಸಂಜಯ್ ಹೇಳಿದಾಗ ತುಸು ಯೋಚನೆಗೆ ಬಿದ್ದ ಆಕಾಶ್.

 ಅಯ್ಯೋ! ಇಂದು ನಮ್ಮ ವಿವಾಹ ವಾರ್ಷಿಕೋತ್ಸವ. ಕೆಲ ದಿನಗಳ ಹಿಂದೆ ಈ ಕುರಿತು ಆಕೆ ನನ್ನೊಂದಿಗೆ ಮಾತನಾಡಿದ್ದಳು. ಆದರೆ ನಾನು ಮರೆತೇ ಬಿಟ್ಟಿದ್ದೆ. ಎಷ್ಟು ದೊಡ್ಡ ತಪ್ಪಾಯ್ತು! ಎಂದು ಪಶ್ಚಾತಾಪ ಪಡತೊಡಗಿದ.

 ನೋಡಿದೆಯಾ ಹೆಣ್ಣು ಮಕ್ಕಳು ಹಾಗೆಲ್ಲ ಸುಮ್ಮನೆ ಬೇಸರಪಟ್ಟುಕೊಳ್ಳಲ್ಲ.. ಅವರ ಮನಸ್ಸಿಗೆ ತೀವ್ರ ನೋವಾದಾಗ ಮಾತ್ರ ಅವರು ಹೀಗೆ ವರ್ತಿಸಬಹುದು. ಈಗಲಾದರೂ ನಿನಗೆ ನಿನ್ನ ತಪ್ಪಿನ ಅರಿವಾಯಿತಲ್ಲ. ನಿನ್ನನ್ನು ನೋಡಿದಾಗಲೇ ನನಗೆ ಒಂದು ವಿಷಯ ಸ್ಪಷ್ಟವಾಯಿತು ನೀನೆಂದು ಹೀಗೆ ಬಾರಿಗೆ ಬಂದವನಲ್ಲ ಎಂದು. ಕೂಡಲೇ ಮನೆಗೆ ಹೋಗಿ ನಿನ್ನ ಪತ್ನಿಯೊಂದಿಗೆ ಮಾತನಾಡಿ ನಡೆದ ತಪ್ಪನ್ನು ಸರಿಪಡಿಸು ಎಂದು ಆತನ ಬೆನ್ನು ತಟ್ಟಿದ.

 ಸಂಜಯನ ಎರಡೂ ಕೈಗಳನ್ನು ಹಿಡಿದುಕೊಂಡು ನೀವು ಯಾರೋ ನನಗೆ ಗೊತ್ತಿಲ್ಲ ಆದರೆ ನನ್ನ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನೀವು ಬಹಳವೇ ಸಹಾಯ ಮಾಡಿದಿರಿ. ನಿಮ್ಮ ಉಪಕಾರವನ್ನು ಎಂದೂ ಮರೆಯಲ್ಲ  ಎಂದು ತರಾತುರಿಯಿಂದ ಹೊರಟು ಬಿಲ್ ಪೇ ಮಾಡಲು ಜೇಬಿಗೆ ಕೈ ಹಾಕಿದ. ನೈಟ್ ಡ್ರೆಸ್ ನಲ್ಲಿಯೇ ಬಂದಿದ್ದ ಆತನ ಜೇಬಿನಲ್ಲಿ ಪರ್ಸ್ ಇರಲೇ ಇಲ್ಲ.

 ನಸುನಗುತ್ತಾ ಸಂಜಯ ಆತನಿಗೆ ಪರ್ವಾಗಿಲ್ಲ ಹೋಗು ನಾನು ಕೊಡುತ್ತೇನೆ  ಎಂದು ಆತನ ಕೈಯಲ್ಲಿ ಮತ್ತೆ 500ರ ಎರಡು ನೋಟುಗಳನ್ನು ಕೊಟ್ಟು ನಿನ್ನ ಪತ್ನಿಗೆ ಏನನ್ನಾದರೂ ತೆಗೆದುಕೊಂಡು ಹೋಗು . ಆಕೆ ನಿನಗೋಸ್ಕರ ಖಂಡಿತವಾಗಿಯೂ ಕಾಯುತ್ತಿರುತ್ತಾಳೆ ಎಂದು ಹೇಳಿದಾಗ ಸಂತಸದಿಂದ ಸಂಜಯನನ್ನು ತಬ್ಬಿಕೊಂಡ ಆಕಾಶ್ ಆತನಿಗೆ ಧನ್ಯವಾದ ಹೇಳಿ ನಿಮ್ಮ ಈ ಋಣ ತೀರಿಸುವುದು ಹೇಗೆ? ಮತ್ತೆ ನಾನು ನಿಮ್ಮನ್ನು ಭೇಟಿಯಾಗುವುದು ಯಾವಾಗ? ಎಂದು ಕೇಳಿದ.

 ಪರವಾಗಿಲ್ಲ ನಾನು ಈ ಬಾರ್ ಹೊರಗಿರುವ ಪಾರ್ಕಿನಲ್ಲಿ ಪ್ರತಿದಿನ ಮುಂಜಾನೆ ವಾಕಿಂಗ್ ಬರುತ್ತೇನೆ ಯಾವಾಗಲಾದರೂ ಒಮ್ಮೆ ಮಕ್ಕಳು ಮತ್ತು ಪತ್ನಿಯೊಂದಿಗೆ ಬಂದು ಭೇಟಿಯಾಗಿ ಎಂದು ಹೇಳಿ ಬೀಳ್ಕೊಂಡನು.

 ಮನೆಗೆ ಬರುವ ದಾರಿಯಲ್ಲಿ ಸಿಕ್ಕ ಬೇಕರಿಯಲ್ಲಿ ಪತ್ನಿಗೆ ಇಷ್ಟವಾಗುವ ಸಿಹಿ ತಿಂಡಿಯನ್ನು ಮಕ್ಕಳಿಗೆಂದು ಸಮೋಸ ಕಟ್ಟಿಸಿಕೊಂಡು ಪುಟ್ಟದೊಂದು ಕೇಕ್ ಮತ್ತು ಕ್ಯಾಂಡಲ್ ಗಳನ್ನು ಖರೀದಿಸಿ ಮನೆಗೆ ಬಂದಾಗ
ಮಕ್ಕಳಾಗಲೇ ಮಲಗಿ ನಿದ್ರಿಸಿದ್ದರು.

 ಟೇಬಲ್ ಮೇಲೆ ಕೈ ಇರಿಸಿ ಹಾಗೆಯೇ ನಿದ್ರೆ ಹೋದ
 ಪತ್ನಿಯನ್ನು ಕಂಡು ಎಲ್ಲ ಸಾಮಾನುಗಳನ್ನು ಟೇಬಲ್ ಮೇಲಿಟ್ಟು ಪ್ರೀತಿಯಿಂದ ಆಕೆಯ ತಲೆ ಸವರಿದಾಗ ಎಲ್ಲಿ ಹೋಗಿದ್ರಿ ನೀವು ಹೇಳದೆ ಕೇಳದೇ? ಅದೆಷ್ಟು ಗಾಬರಿಯಾಗಿತ್ತು ಗೊತ್ತಾ ನನಗೆ ಎಂದು ಮೆದುವಾಗಿ ಕೇಳಿದಾಗ ಹೀಗೆಯೇ ಕೊಂಚ ಹೊರಗೆ ಹೋಗಿದ್ದೆ ಎಂದು ಹೇಳಿ ಪುಟ್ಟ ಕೇಕನ್ನು ಆಕೆಯ ಮುಂದೆ ಇಟ್ಟು ಅದರ ಮೇಲೆ ಕ್ಯಾಂಡಲ್ ಇರಿಸಿ ದೀಪವನ್ನು ಬೆಳಗಿದಾಗ ಆಕೆಯ ಕಂಗಳಲ್ಲಿ ಅದಕ್ಕಿಂತಲೂ ಹೆಚ್ಚು ಪ್ರಕಾಶಮಾನವಾದ ಬೆಳಕನ್ನು ಕಂಡ ಆಕಾಶ್ ಪತ್ನಿಯನ್ನು ಮೆದುವಾಗಿ ತಬ್ಬಿಕೊಂಡು ಕೇಕನ್ನು ಕತ್ತರಿಸಿ ಆಕೆಯ ಬಾಯಿಗೆ ಇಟ್ಟು ಹಣೆಯ ಮೇಲೆ ಮುತ್ತಿಟ್ಟನು. ಪತಿಯ ವರ್ತನೆಯಿಂದ ಸಂತುಷ್ಟನಾದ ಆಕೆ ಆತನನ್ನು ಗಟ್ಟಿಯಾಗಿ ತಬ್ಬಿಕೊಂಡಾಗ ಆಕೆಯ ಕಂಗಳ ಸಂತಸವನ್ನು ಕಣ್ತುಂಬಿಕೊಂಡ ಆಕಾಶ್ ಮನದಲ್ಲಿಯೇ ಈ ಸಂತಸವನ್ನು ಹೀಗೆಯೇ ಕಾಪಾಡುವೆ ಎಂದು  ಸಂಜಯರನ್ನು ನೆನೆದು ಮನದಲ್ಲಿಯೇ ಶಪಥ ಮಾಡಿದನು.


About The Author

Leave a Reply

You cannot copy content of this page

Scroll to Top