ಸುಜಾತಾ ರವೀಶ್ ಅವರ ಗಜಲ್

ಅಪನಂಬಿಕೆಯ ಕತ್ತಲು ಮುಸುಕಲು ಬೆಳಗಲಿ ಸಮೀಕ್ಷೆಯ ದೀಪ 
ಅಪಪ್ರಚಾರದ ತಿಮಿರ ಕವಿಯಲು ಬದುಕಲಿ ಪರೀಕ್ಷೆಯ ದೀಪ 

ಅಪಕರ್ಷವೆಂಬ ಕರಿಯ ನೆರಳಲಿ ಬೆಳಕಾಗಲಿ ವಿಶ್ವಾಸದ ಜ್ಯೋತಿ 
ಅಪಯಶವೆಂಬ ಗೆರೆಯ ದಾಟುತ ಮೆರೆಯಲಿ ಆಕಾಂಕ್ಷೆಯ ದೀಪ 

ಅಪಸವ್ಯದ ಗಾಳಿಗೆ ಎದುರಾಗಿ ಹಾರದಿರಲಿ ಜೀವನದ ಪ್ರೀತಿ 
ಅಪಮಾರ್ಗದ ದಾಳಿಗೆ ಸಿಲುಕದೆ ಉರಿಯಲಿ ಪ್ರತೀಕ್ಷೆಯ ದೀಪ 

ಅಪ್ರಾಕೃತ ಪರಿಗೆ ಬೀಳುತಲಿ ಹಾಳಾಗದಿರಲಿ ನಿಯಮ ನೀತಿ 
ಅಪ್ರಸ್ತುತ ಬಗೆಗೆ ಈಡಾಗದೆ ಪ್ರಜ್ವಲಿಸುತಿರಲಿ ಅಪೇಕ್ಷೆಯ ದೀಪ 

ಅಪಕ್ವತೆಯೇ ತುಂಬಿದ ಜಗದಲಿ  ಮೌನವೇ ಮಾರ್ಗ ರೀತಿ 
ಅಪಕೃತಳು ಕಪಟಕೆ ಸುಜಿಮನದೆ ಆರದಿರಲಿ ನಿರೀಕ್ಷೆಯ ದೀಪ 


ಸುಜಾತಾ ರವೀಶ್

About The Author


Comments

Leave a Reply

You cannot copy content of this page