ಸುಜಾತಾ ರವೀಶ್ ಅವರ ಕವಿತೆ-‘ಮತ್ತೆ ಮಗುವಾಗಿಸು ನನ್ನ’

ಓ ದೇವ ನನ್ನ ಮಗುವಾಗಿಸಿ ಬಿಡು
ಪ್ರೀತಿಯಲೆ ಮನ ತುಂಬಿರುವಂತೆ
ಆ ಮುಗ್ಧತೆಯನ್ನು ನೀಡಿ ಬಿಡು
ಕಸರುಗಳ ತೊಳೆಯುವಂತೆ

ಕಾರಣವಿಲ್ಲದೆ ಸದಾ ನಗುತಲಿರುವ
ಆನಂದಮಯ ಮನಃಸ್ಥಿತಿಯ
ಹಿಂದಿನ ಮುಂದಿನ ಚಿಂತೆಯಿರದ
ನಿರ್ಲಿಪ್ತ ಯೋಗ ಧ್ಯಾನ ಸ್ಥಿತಿಯ

ಜವಾಬ್ದಾರಿಗಳಿಲ್ಲದ ಹಗುರ ಹಕ್ಕಿ
ಹಾರಾಡುವಂತೆ ಬಾನಿನುದ್ದಗಲ
ಬಾಲ್ಯವದು ಸ್ವಚ್ಛಂದವಾಗಿ ಪಕ್ಷಿ
ತೇಲಾಡುವಂತೆ ಪಟಪಟ ರೆಕ್ಕೆಬಿಚ್ಚಿ

ತಿಳಿಯಿತು ನಿನ್ನಿಂದ ಅದು ಅಸಾಧ್ಯ!
ಹಾಗಾದರೆ ಕೊಟ್ಟುಬಿಡು ಮಗು ಮನಸ
ಚಿಂತೆ ಅಸೂಯೆ ರಾಗದ್ವೇಷಗಳಿಲ್ಲದ
ನಿಷ್ಕಲ್ಮಶ ಹೃದಯದ ಸೊಗಸ


About The Author


Comments

Leave a Reply

You cannot copy content of this page