ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹತಾಶೆಯಲಿ ಬಿರಿದ ಮುಖ
ಮಣ್ಣಲಿ ಹುದುಗಿದ ಕಾಲು
ಹಾಳು ಬಿದ್ದ ಆಗಸ
ಇರಿದ ದಿನಗಳು
ಛೇದಿಸುವ ಶೋಕಗಳು
ಪೀಡಿಸುವ ಬೆಳಕ ಕಿರಣಗಳು
ರೇಗಿಸುವ ಕಣ್ಣ ದೃಶ್ಯಗಳು
ತಲೆಗಂಟಿದ ಕೆಸರು
ಮುಳ್ಳುಕಂಟಿಗಳ ನಡುವೆ ಬರಿದೆ ಕಾಲಲಿ ನಡೆದು ಸೋತ ಉಸಿರು
ಹೀಗೆ ಒಂದೇ? ಎರಡೇ?
ಬುಡ ಮೇಲಾಗುವ ಹಳೆಯ ಬೇರಿನಂತಹ ಜೀವಕೆ ಬದುಕು ಕರುಣಿಸಿದ್ದು ತುಂಬಿ ತುಳುಕುವ ಏಕಾಕಿತನ..!!

ಬದುಕಲಿ ಸೋತ ಉಸಿರಿನ ಕೂಗು ಮೆಲ್ಲನೆ ನುಡಿಯುತ್ತದೆ
ಓ.. ಪ್ರಭುವೇ….
ಈಗಲಾದರೂ ನರಕದ ಬಂಧೀಖಾನೆಯ ಬಾಗಿಲು ತೆರೆ
ಉಳಿದ ನನ್ನೆದೆಯ ಕವಿತೆಯ ಸಾಲು ಜಗಕೆ ಕೇಳಬೇಕಿದೆ
ಗಡಿಯಿರದ ಗಾಳಿ ನನ್ನ ಮೖ ಸೋಕುವುದಿದೆ
ಈ ದೇಹ ಚೂರಾಗುವವರೆಗೆ ನಕ್ಷತ್ರಗಳಿಗೆ ಹೆಸರಿಡಬೇಕಿದೆ
ನನ್ನ ನರನಾಡಿ ತೊಗಲನ್ನು ಕಸೂತಿ ಮಾಡಿ ನನ್ನವಳಿಗೆ ನೀಡಬೇಕಿದೆ..!!

ಓ ಬದುಕಿನ ಪರಮಾನಂದವೇ..
ನನ್ನ ದನಿಯಾಲಿಸು
ಅವಳಿರುವಲ್ಲಿ ಹಸಿರಿದೆ
ತೋರಿಸೊಮ್ಮೆ ಅವಳ ಮೊಗವನು
ನನ್ನ ಕನಸಿನ ರಾಣಿಯನು
ಸ್ವರ್ಗಸುಖದ ಕೋಣೆಯನು
ಸುಗಂಧವೇ ತುಂಬಿದ ಲೋಕವನು
ನಿಶೆಯನು ತುಂಬಿಕೊಡುವ ಸಾಕಿಯ ಮಧುಶಾಲೆಯನು..!!

ಭೂತದ ಪುರಾಣವೆನಬೇಡ
ಭವಿಷ್ಯದ ಕಥೆಯಿದು
ಕೊಂಚ ಕಾಲವಾದರೂ ಅವಳನೂ, ಜಗವನು ಪ್ರೀತಿಸಬೇಕಿದೆ ನಾನು
ದಯಮಾಡಿ…
ನನ್ನುಸಿರ ಬಲೂನಿಗೆ ಚುಚ್ಚಬೇಡ
ಅದರೊಳಗೆ ಸೋತ ನನ್ನುಸಿರ ಕಾವು.. ತಣ್ಣಗಾಗುವವರೆಗಾದರೂ ಸುಮ್ಮನಿದ್ದುಬಿಡು
ಸುಮ್ಮನಿದ್ದುಬಿಡು..!!


About The Author

Leave a Reply

You cannot copy content of this page

Scroll to Top