ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

 ಒಂದೊಮ್ಮೆ ಭಾರತದ ಓರ್ವ ಪ್ರಸಿದ್ಧ ವ್ಯಕ್ತಿ ತನ್ನ ವ್ಯಾಪಾರ ವಹಿವಾಟುಗಳ ವಿಸ್ತರಣೆಗೆ ತನ್ನ ನಿಯೋಗದೊಂದಿಗೆ ವಿದೇಶಕ್ಕೆ ಪ್ರಯಾಣ ಬೆಳೆಸಿದ್ದರು. ಒಂದೆರಡು ದಿನಗಳಲ್ಲಿ ಮುಗಿಯುವಂತಹ ಭೇಟಿ ಅವರದಾಗಿರಲಿಲ್ಲ.

 ಹಲವಾರು ಉದ್ಯಮಗಳನ್ನು ಸಂದರ್ಶಿಸಿ ಅದಕ್ಕೆ ಸಂಬಂಧಪಟ್ಟ ವ್ಯಕ್ತಿಗಳೊಂದಿಗೆ ಮಾತುಕತೆ ನಡೆಸಿ ವಿವರಗಳನ್ನು ತಿಳಿದುಕೊಳ್ಳುವುದರಲ್ಲಿ ಅವರ ಸಾಕಷ್ಟು ಸಮಯ ಕಳೆದುಹೋಗುತ್ತಿತ್ತು. ಹೀಗೆ ಒಂದು ದಿನ ತಮ್ಮ ದೈನಂದಿನ ಭೇಟಿಗಳಲ್ಲಿ ನಿರತರಾದ ಉದ್ಯಮಿ ಮತ್ತು ಅವರ ತಂಡ ತಡವಾಗಿ ಮಧ್ಯಾಹ್ನದ ಊಟಕ್ಕೆ  ರೆಸ್ಟೋರೆಂಟ್ ಒಂದಕ್ಕೆ ಧಾವಿಸಿದರು.

 ವಿಪರೀತ ಹೊಟ್ಟೆ ಹಸಿದ ಕಾರಣ ಎಲ್ಲರೂ ತಮ ತಮಗೆ ಬೇಕಾದ ಆಹಾರವನ್ನು ಆರ್ಡರ್ ಮಾಡಿದರು. ಆಗ ಹೋಟೆಲ್‌ನ ಮ್ಯಾನೇಜರ್ ಅವಶ್ಯಕತೆಗಿಂತ ಹೆಚ್ಚು ಆಹಾರವನ್ನು ಆರ್ಡರ್ ಮಾಡಿದ್ದೀರಿ… ನೀವು ಎಲ್ಲವನ್ನೂ ತಿನ್ನುತ್ತೀರಲ್ಲವೇ? ಎಂದು ವಿನಯದಿಂದ ಕೇಳಿದನು. ತುಂಬಾ ಹಸಿವಿದ್ದ ಕಾರಣ ಅವರೆಲ್ಲರೂ ಹೌದು ಹೌದು! ನಾವು ಎಲ್ಲವನ್ನು ಖಾಲಿ ಮಾಡುತ್ತೇವೆ ಎಂದು ಹೇಳಿದರು.ನಂತರ ಮಾತನಾಡುತ್ತಾ ಎಲ್ಲರೂ ಊಟ ಮಾಡಿದರು. ಎಲ್ಲರ ಊಟವಾದ ನಂತರವೂ ಸ್ವಲ್ಪ ಆಹಾರ ತಟ್ಟೆಯಲ್ಲಿ ಹಾಗೆಯೇ ಉಳಿದು ಹೋಯಿತು. ಕೂಡಲೇ ಹೋಟೆಲ್ನ ಮ್ಯಾನೇಜರ್ ಫೋನಿನಿಂದ ಕರೆ ಹೋಯಿತು.ಅತ್ತ ಕಡೆಯಿಂದ ಕರೆ ಸ್ವೀಕರಿಸಿದ ಅಧಿಕಾರಿಗಳು ಕೂಡಲೇ ಹೋಟೆಲ್ ಗೆ ಧಾವಿಸಿ ಬಂದರು.

 ಬಿಲ್ ಪಾವತಿಸಲು ಉದ್ಯಮಿಯ ಮ್ಯಾನೇಜರ್ ಹೋಟೆಲ್ನ ಮ್ಯಾನೇಜರ್ ಬಳಿ ಬಂದಾಗ ಅವರಿಗೆ ಬಿಲ್ ನ ಜೊತೆಗೆ ದಂಡವನ್ನು ಸಹಿತ ಹಾಕಲಾಗಿತ್ತು. ಈ ಕುರಿತು ಉದ್ಯಮಿಯ ಮ್ಯಾನೇಜರ್ ಹೋಟೆಲ್ ನ ಮ್ಯಾನೇಜರ್ ನನ್ನು ಪ್ರಶ್ನಿಸಿದಾಗ ನೀವು ತಟ್ಟೆಯಲ್ಲಿ ಆಹಾರವನ್ನು ಉಳಿಸಿದ್ದೀರಲ್ಲವೇ ಅದಕ್ಕೆ ನೀವು ಈ ಜುಲ್ಮಾನೆಯನ್ನು ತುಂಬಬೇಕಾಗುತ್ತದೆ ಇದು ನಮ್ಮ ದೇಶದ ಕಾನೂನು ಎಂದು ಹೇಳಿದನು.ಅದಕ್ಕೆ ಉತ್ತರವಾಗಿ ಉದ್ಯಮಿಯ ಮ್ಯಾನೇಜರ್ ಅರೆ! ನಾವು ಆರ್ಡರ್ ಮಾಡಿದ ಆಹಾರ ನಮ್ಮ ತಟ್ಟೆಯಲ್ಲಿ ನಾವು ಉಳಿಸಿದರೆ ನಿಮ್ಮದೇನು ಗಂಟು ಹೋಯಿತು? ಎಂದು ಪ್ರಶ್ನಿಸಿದ.ಮೆಲ್ಲನೆ ನಸುನಗುತ್ತಾ ಹೋಟೆಲ್ ನ ಮ್ಯಾನೇಜರ್ ಪಕ್ಕದಲ್ಲಿದ್ದ ಅಧಿಕಾರಿ  “ತಟ್ಟೆಯಲ್ಲಿರುವ ಆಹಾರ ನಿಮ್ಮದೇ ನಿಜ,ಆದರೆ ಹಾಳಾಗಿರುವುದು ನಮ್ಮ ದೇಶದ ಸಂಪನ್ಮೂಲ ಅಲ್ಲವೇ? ಎಂದು ಮರು ಪ್ರಶ್ನಿಸಿದಾಗ ಉದ್ಯಮಿಯ ಮ್ಯಾನೇಜರ್ ಮರು ಮಾತಿಲ್ಲದೆ ಹೋಟೆಲ್ ನ ಬಿಲ್ ನ ಜೊತೆಗೆ ಜುಲ್ಮಾನೆಯನ್ನು ಕೂಡ ಭರಿಸಿದ.

 ನೋಡಿದಿರಾ ಸ್ನೇಹಿತರೆ, ನಾವು ಎಷ್ಟೋ ಸಾರಿ ದುಡ್ಡು ಕೊಟ್ಟು ಕೊಂಡಿದ್ದೇವೆ ಎಂದು ಸೊಕ್ಕಿನಿಂದ ಮಾತನಾಡುತ್ತೇವೆ, ದುಡ್ಡು ನಮ್ಮದಾದರೆ ಸಂಪನ್ಮೂಲಗಳು ನಮ್ಮವಲ್ಲ ಎಂಬುದನ್ನು ಪಾಶ್ಚಾತ್ಯ ದೇಶಗಳಲ್ಲಿ ಅದೆಷ್ಟು ಚೆನ್ನಾಗಿ ಮನವರಿಕೆ ಮಾಡಿಕೊಡುತ್ತಾರೆ. ಅಲ್ಲವೇ?

 ದೀಪದ ಝಗ ಮಗ ಬೆಳಕಿನಲ್ಲಿ ಕಣ್ಣು ಕೋರೈಸುವ ಅಲಂಕಾರದ ವೈಭವೋಪೇತ ಸಮಾರಂಭಗಳಲ್ಲಿಯೇ ಆಗಲಿ ಅತ್ಯಂತ ಕಡು ಬಡವರ ಮನೆಯ ಮದುವೆಯೇ ಆಗಲಿ ಆಹಾರ ಎಲ್ಲೂ ಪೋಲಾಗಬಾರದು.
 ಒಂದು ಹಿಡಿ ಭತ್ತ ಬೆಳೆಯಲು ಹಲವಾರು ದಿನಗಳ ರೈತನ ಶ್ರಮ ಇರುತ್ತದೆ… ಆದರೆ ಒಂದು ಹಿಡಿ ಅನ್ನ ಕೆಡಿಸಲು ಕೆಲವೇ ಸೆಕೆಂಡುಗಳು ಸಾಕು.

 ನಮ್ಮ ಒಂದು ಹೊತ್ತಿನ ಊಟ ಎಷ್ಟೋ ಜನರ ಬೆವರಿನ ಫಲ ಎಂಬ ತಿಳುವಳಿಕೆ ನಮ್ಮಲ್ಲಿರಬೇಕು. “ಕುಂಬಾರನಿಗೆ ವರುಷ,ದೊಣ್ಣೆಗೆ ನಿಮಿಷ” ಎಂಬ ಗಾದೆಯ ಮಾತಿನಂತೆ ಪ್ರತಿಯೊಂದು ಆಹಾರಧಾನ್ಯದ ಹಿಂದೆ ಇರುವ ಶ್ರಮ ಮತ್ತು ಅದನ್ನು ಪೋಲು ಮಾಡುವುದರಿಂದ ಉಂಟಾಗುವ ಹಾನಿಯ ಕುರಿತು ನಮಗೆ ಅರಿವಿರಬೇಕು.

 ಒಂದು ಮಹತ್ವದ ಸಮೀಕ್ಷೆಯ ಪ್ರಕಾರ 2050 ನೇ ಸಾಲಿನ ಹೊತ್ತಿಗೆ ಸದ್ಯಕ್ಕೆ ಇರುವ ಜನಸಂಖ್ಯೆಯ ಹೊಟ್ಟೆಯನ್ನು ತುಂಬಿಸಲು  ಒಂದು ಭೂಮಿ ಸಾಲದು. ನಮ್ಮ ಬೆಳೆಯುವ ಸಾಮರ್ಥ್ಯವನ್ನು ನಾವು ಹೆಚ್ಚಿಸಿಕೊಳ್ಳಬೇಕು…. ಆದರೆ ಭೂಮಿ ಎಲ್ಲಿದೆ? ಎಂಬಂತಹ ಪರಿಸ್ಥಿತಿ ಬಂದೊದಗಬಹುದು.ಅದೆಷ್ಟೇ ವಿಜ್ಞಾನ ತಂತ್ರಜ್ಞಾನಗಳು ಬೆಳೆದಿದ್ದು ತಿಂಗಳನಿಂದ  ಮಂಗಳ ಗ್ರಹದವರೆಗೆ ನಾವು ಉಪಗ್ರಹ ಉಡಾವಣೆ ಮಾಡಿರಬಹುದು ಆದರೆ ಬದುಕಿನ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾದ ಆಹಾರವೇ ಇಲ್ಲವಾದ ಮೇಲೆ ಬದುಕುವುದು ಹೇಗೆ ಎಂಬುದು ಯಕ್ಷಪ್ರಶ್ನೆಯಾಗಿ ಕಾಡುತ್ತಿದೆ?

 ಹೊಟ್ಟೆಗೆ ಬೇಕಾಗಿರುವುದು ಹಿಡಿ ಅನ್ನವೇ ಹೊರತು ನಮ್ಮ ವೈಜ್ಞಾನಿಕ ಆವಿಷ್ಕಾರಗಳಲ್ಲ. ವೈಜ್ಞಾನಿಕ ಆವಿಷ್ಕಾರಗಳು ನಮ್ಮ ಬದುಕನ್ನು ಸುಲಭವಾಗಿ ನಡೆಸಲು ಸಾಧ್ಯವಾಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತವೆ ಎಂಬುದು ನಿಜವಾದರೂ ಆಹಾರ ಬೆಳೆಯುವುದು ನಮ್ಮ ಪುರಾತನ ಕೃಷಿ ಪದ್ಧತಿಯಿಂದ ಮಾತ್ರ ಎಂಬುದನ್ನು ನಾವು ಮರೆಯಬಾರದು.

 ಈ ಕುರಿತು ನುರಿತ ತಜ್ಞ ವೈದ್ಯರು ಸಾಮಾಜಿಕ ಚಿಂತಕರು ಪರಿಸರವಾದಿಗಳು ಬುದ್ಧಿಜೀವಿಗಳಲ್ಲಿ ಸಾಕಷ್ಟು ಪರ ವಿರೋಧದ ಚರ್ಚೆಗಳು ನಡೆಯುತ್ತಿವೆ. ವಾದಕ್ಕಾಗಿ ವಾದ, ಮಾತಿಗಾಗಿ ಮಾತು ಎಂಬಂತೆ ಇವರ ಚರ್ಚೆ ವಾದ ವಿವಾದಗಳಲ್ಲಿ ಕೊನೆಯಾಗದೆ ಸುಭದ್ರವಾದ ಭವಿಷ್ಯವನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ಫಲಪ್ರದವಾಗುವ ಯೋಜನೆಗಳು ರೂಪುಗೊಳ್ಳಬೇಕು.

 ಅದು ಮೇಲ್ಮಟ್ಟದಲ್ಲಾಗಲಿ ಬಿಡಿ… ಪ್ರತಿದಿನ ನಾವು ನಮ್ಮ ನಮ್ಮ ಮನೆಗಳಲ್ಲಿ, ಸಮುದಾಯಗಳಲ್ಲಿ ಆಹಾರದ ಕುರಿತಾದ ಜಾಗೃತಿಯನ್ನು ಬೆಳೆಸಿಕೊಂಡು  ಆಹಾರದ ಪೋಲಾಗದಂತೆ, ದವಸ ಧಾನ್ಯಗಳು ಹಾಳಾಗದಂತೆ ರಕ್ಷಿಸಿಕೊಳ್ಳುವ ಮೂಲಕ ದೇಶಕ್ಕೆ ನಮ್ಮ ಅಮೂಲ್ಯವಾದ ಕಾಣಿಕೆಯನ್ನು ನೀಡೋಣ.


About The Author

1 thought on “”

  1. ಡಾ. ಮೀನಾಕ್ಷಿ ಪಾಟೀಲ್ ವಿಜಯಪುರ

    ತುಂಬಾ ಚೆನ್ನಾಗಿ ಬರೆದಿರಿ ಮೇಡಂ ಧನ್ಯವಾದಗಳು
    ಆಗಾಗ ತಮ್ಮ ಲೇಖನಗಳನ್ನು ನಾನು ಓದುತ್ತೇನೆ ಚೆನ್ನಾಗಿ ಬರೆಯುತ್ತೀರಿ

Leave a Reply

You cannot copy content of this page

Scroll to Top