ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬಂದ ಕ್ಷಣಗಳನು ಬರಸೆಳೆದು ಬಿಗಿದಪ್ಪುತ
ಬದುಕಿ ಬಿಡಬೇಕು ಸ್ಮರಣೀಯವಾಗುವಂತೆ
ಉಸಿರಿರುವವರೆಗು ಎದೆಗೂಡು ಹಸಿರಾಗುವಂತೆ
ಬದುಕಿದ ಪ್ರತಿಕ್ಷಣವೂ ಚಿರ ಹೆಸರಾಗುವಂತೆ.!
ಬಾಳಿನುದ್ದಕೂ ಮಧು ಮಧುರ ನೆನಪಾಗುವಂತೆ.!

ಅಚ್ಯುತನಿತ್ತ ಅನುಗ್ರಹವೆಂದು ಆಸ್ವಾಧಿಸುತ
ಬಾಗಿ ಬೊಗಸೆಯೊಡ್ಡಿ ಕರದಿ ಮೊಗೆ ಮೊಗೆದು
ಬಾಯ್ತೆರೆದು ಒಡಲು ತುಂಬಿಸಿಕೊಳ್ಳಬೇಕು
ಹನಿಯೊಂದೂ ಅಂಗೈಯಿಂದ ಕೆಳಗೆ ಜಾರದಂತೆ.!
ಪ್ರತಿ ಬಿಂದುವೂ ಹೃದಯ ಹಸಿಯಾಗಿಸುವಂತೆ.!

ಇಟ್ಟ ಹೆಜ್ಜೆಯ ಪ್ರತಿ ಸಪ್ಪಳ ಇನಿಯಾಗುವಂತೆ
ಆಡಿದ ನುಡಿಯ ಪ್ರತಿ ಸದ್ದೂ ಇಂಚರಿಸುವಂತೆ
ಮಿಡಿದ ಪ್ರತಿ ಭಾವವೂ ಬೆಳದಿಂಗಳಾಗುವಂತೆ
ಜೊತೆಯಿದ್ದ ಜೀವಗಳು ಹಾಡಿ ಝೇಂಕರಿಸುವಂತೆ
ಆನಂದ ಆಸ್ವಾಧನೆಗಳು ನಿತ್ಯ ಅನುರಣಿಸುವಂತೆ.!

ಕಳೆದುಹೋದ ನಿನ್ನೆ ಕಂಡಿರದ ನಾಳೆಗಳ ನಡುವೆ
ಅವನೇ ಕರುಣಿಸಿದ ಕಣ್ಣೆದುರ ಇಂದುಗಳಷ್ಟೆ ಸತ್ಯ
ಮುಂದಿನ ಕ್ಷಣದ ಭ್ರಮೆ ಭ್ರಾಂತಿಗಳೆಲ್ಲವೂ ಮಿಥ್ಯ
ಬದುಕು ಯಾವ ಕ್ಷಣಕೂ ಸೇರಬಹುದು ನೇಪಥ್ಯ
ಜೀವಿಸುವ ಇಂದಿನ ಈ ಸಮಯವಷ್ಟೇ ನಿಜಸತ್ಯ.!

ಬದುಕುವ ಘಳಿಗೆ ಘಳಿಗೆಗೂ ನಮ್ಮದೇ ನಾಯಕತ್ವ
ನಮ್ಮೆಲ್ಲ ಸಂತಸಕೆ ನಾವಷ್ಟೆ ಇಲ್ಲಿ ಉತ್ತರದಾಯಿತ್ವ
ಸಿಕ್ಕಿದ್ದೆಲ್ಲವನು ಜತನದಿ ಕಾಪಿಟ್ಟು ಸಂಭ್ರಮಿಸಬೇಕು
ಕೊಟ್ಟವರ ಕಂಗಳಲಿ ಮೂಡಿಸಬೇಕು ಆನಂದಭಾಷ್ಪ
ಬಾಳಬಣ್ಣಗಳಲಿ ಮಿಂದು ಮಿನುಗಬೇಕು ಜೀವಶಿಲ್ಪ.!

ಪ್ರತಿಕ್ಷಣವೂ ವಿಧಾತನಿತ್ತ ಪಾಲಿನ ಪಂಚಾಮೃತ
ಆರಾಧಿಸುತ ನಮ್ಮದಾಗಿಸಿಕೊಳ್ಳಬೇಕು ಆದ್ಯಂತ
ಅವಿಸ್ಮರಣೀಯವಾಗುವಂತೆ ಬಾಳಿನ ಪರ್ಯಂತ
ಬೆಳಕಾಗುತ ಬೆಳಗಬೇಕು ಹೃನ್ಮನಗಳ ದಿಗ್ಧಿಗಂತ
ಬದುಕಿದ ಕ್ಷಣ ಅಮರವಾದರಷ್ಟೆ ಜೀವಜೀವಂತ.!


About The Author

Leave a Reply

You cannot copy content of this page

Scroll to Top