ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಂದು ಸಂಭ್ರಮಿಸಿದ್ದೆ ಸಂಕೋಲೆಗಳ
ಕಿತ್ತೆಸೆದ ಸಂತಸಕೆ
ಮನೆ ಮಂದಿಗಳೊಡನೆ
ಬೀದಿ ತುಂಬ ಮೆರವಣಿಗೆ!
ಅದೇ ಸೂರ್ಯ ಅದೇ ಚಂದ್ರ
ಅದೇ ಭೂಮಿ, ನೆಲ, ನೀರು
ಬದಲಾದರು ಜನ
ಊಸರವಳ್ಳಿ ಹಾಗೆ…
ಎಲ್ಲವೂ ಹಾಗೆಯೇ
ಇತ್ತು ತಾಯೆ ದಾಸ್ಯದ ಬಾಳತೊರೆದು ಸ್ವರ್ಗ ಸಿಕ್ಕಹಾಗೆ
ನೆರೆ ಹೊರೆಯವರು
ಕಾಲ್ಕೆರೆದು ನಿಂತರು ಜಗಳಕ್ಕೆ
ಒಳಗಿನವರೂ ಕಡಿಮೆಯಿಲ್ಲ
ದ್ವೇಷ, ಮಾತ್ಸರ್ಯದ
ಬಗೆ ಬಗೆಯ ಧಗೆ
ಸ್ವತಂತ್ರ್ಯವಾದ ದಿನ
ಪಣ ತೊಟ್ಟಿದ್ದೆವು…
ರತ್ನ ಕಿರೀಟವ
ತಂದಿಡುವೆವು ನಿನ್ನ ಮುಡಿಗೆ!
ನಿನ್ನ ಈ ನೆಲದಲ್ಲಿ
ಒಟ್ಟಿಗಿರುವೆವು ನಾವು
ಅನವರತ
ಬರುವ ಕಷ್ಟಗಳ ತಳ್ಳಿ
ಬದುಕು ಸವೆಸುವೆವು
ನಾವು
ಸೋದರರ ಹಾಗೆ
ಪ್ರತಿಜ್ಞೆಗಳು ಮರೆತುಹೋದವು ತಾಯೆ
ಶಾಂತಿ, ಸಮನ್ವಯಕೆ
ಸಿಡಿಲೆರಗಿದ ಹಾಗೆ
ಎಲ್ಲೋ ನೋವಿನ
ಆಕ್ರಂದನ
ಕರಳು ಕಿವುಚಿದ ಹಾಗೆ
ಅಂತರ್ ಕಲಹದ ಛಾಯೆ
ಧರ್ಮಗಳ ನಡುವೆ
ರಾಮ ರಾಜ್ಯದ ಕನಸು
ದೂರ ಸರಿದ ಹಾಗೆ
ಸಾಧನೆಗೇನೂ
ಕಡಿಮೆ ಮಾಡಲಿಲ್ಲ
ಬೆಳಕಾಗಿರುವೆನೀ ಇಡಿಯ ಜಗಕೆ ಬಂದುಬಿಡು ತಾಯೇ
ಈಗಲೇ, ಈ ಕ್ಷಣವೆ
ಒಂದೊಂದು ದಿಕ್ಕಿಗೆ
ಮುಖಮಾಡಿ ಕುಳಿತಿರುವ
ನಮ್ಮ ನಡುವೆ
ಮಂತ್ರವ ಸಾರು ದ್ವೇಷದಳಿವಿಗೆ
ಹರಿಸಿಬಿಡು ನಿನ್ನ ಪ್ರೀತಿ ಒಸಗೆ
ದಾಸ್ಯದಿಂದ ಹೊರಬಂದಿರುವಿರಾ??
ನಿಜವಾಗಿ!
ಎಂದೊಮ್ಮೆ ಕೇಳಿಬಿಡು
ಈ ನಿನ್ನ ಮಕ್ಕಳು
ತಲೆ ತಗ್ಗಿಸುವ ಹಾಗೆ
ಮತ್ತೊಮ್ಮೆ
ಮನಸು ಜಾಗೃತಗೊಂಡು
ಮುದಗೊಂಡು, ಒಟ್ಟಾಗಿ
ಸ್ವಾತಂತ್ರ್ಯದ ಸಂಭ್ರಮವ
ಸವಿಯುವ ಹಾಗೆ…
ಸ್ವಾತಂತ್ರ್ಯದಾ ಸಂಭ್ರಮವ
ಸವಿಯುವ ಹಾಗೆ!

————-

About The Author

Leave a Reply

You cannot copy content of this page

Scroll to Top