ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗುರುರಾಜ್ ಸನಿಲ್ ಕವಿತೆ

ಅಗಲಿಕೆ

ಒಲಿದ ಜೀವವನು ಅಗಲುವುದೆಷ್ಟು ಕಷ್ಟ!
ಒಮ್ಮೆಲೆ ಹಾಲು ಜೇನಂತೆ ಬೆರೆತ ಅಂತರಂಗಗಳು
ಹಲವು ವಸಂತ ಒಡನಾಡಿ ಸರಸವಾಡಿ
ಪ್ರೇಮದ ಕಂಪು ಸವಿದು ಸ್ನೇಹ,
ಸುಖ ದುಃಖದಲಿ ಒಂದಾಗಿ ಮಾಗಿದ
ಹೃದಯಗಳೆರಡಾಗುವುದು ಯಾವ ನ್ಯಾಯ?

ಅಗಲಿಕೆಗೆ ನೆಪಗಳಾದರೂ ಒಂದೇ ಎರಡೇ!
ಅರಿವಿರದೆ ಕಡೆಗಣಿಸಿದ ಸಿಟ್ಟು, ಸಾಧನೆಯ ಗತ್ತು
ಗೆಲುವಿನ ಮತ್ತು, ಪುರಾವೆಯಿಲ್ಲದ ಶಂಕೆ,
ಕೊನೆಗೆ ಉಜ್ಜಿ ಉಜ್ಜಿ ಸವಕಲಾದ ಕಾಮವೂ!
ಒಟ್ಟಾರೆ ಮುಖ್ಯ ನಿಮಿತ್ತ ಎಲ್ಲವನೊಳಗೊಂಡ
ನಾನೆಂಬ ‘ಅಹಂ’ ಒಂದರದೇ ಅಬ್ಬರವಲ್ಲಿ!
ಆದರೂ ಅಗಲಿಕೆಯೇ ಅಂತಿಮವೇಕೆ?

ಎರಡರ ಆಪ್ತತೆಯಲ್ಲಿ ಬಿರುಕಾಡಿದ್ದೆಂದು?
ಅಸಹನೆಯ ಜ್ವಾಲೆಯೆದ್ದು ಲಾವಾರಸ ಚಿಮ್ಮಿದಾಗಿರಬಹುದು
ಆದರೆ ಶಿಲಾರಸ ಹರಿದ ಮೇಲೆ ಫಲವತ್ತಾಗಬೇಕಲ್ಲವೇ!
ಒಲವಿನ ಸಂಘರ್ಷದಲಿ ಹಾಗೇಕಾಗಲಿಲ್ಲ?

ಅಗಲಿಕೆಗೆ ಅದರದರದೇ ಸರಿ ತಪ್ಪಿನ ಸಮರ್ಥನೆ
ಹಾಗಿದ್ದರೆ ಜೀವ ಜೀವಗಳ ಅನುಬಂಧಕೆ
ಚರಮಾವಧಿ ಎಂಬುದೊಂದಿದೆಯೇ?
ಬಹುಶಃ ಅದೇ ಮೂಲ ಸತ್ಯವಿರಬಹುದೇನೋ

ಸರಿ, ಒಂದೊಮ್ಮೆ ಅಗಲುವುದಾದರೂ ಹೇಗೆ,
ಮುದುಡಿದ ಹೂವಿನ ಪಕಳೆ ಉದುರುವಂತೆ
ಕಲಿತ ಹಣ್ಣೊಂದು ತೊಟ್ಟು ಕಳಚುವಂತೆ
ಹಕ್ಕಿ ತಾ ಬದುಕಿದ ಗೂಡು ತೊರೆವಂತೆ
ಮಳೆಯಲಿ ಮರವನಪ್ಪಿ ನಲಿವ ಪಾಚಿ
ಬೇಸಿಗೆಯಲಿ ತೊಗಟೆಯೊಂದಿಗೆ ಕಳಚುವಂತೆ
ನಿರಾಳ ಅಗಲಿಕೆಯನು ಮನವೇಕೆ ಅರಿಯದು!

ನೊಂದ ಹೃದಯವನೀಗ ಶಮನಿಸುವುದು ಹೇಗೆ?
ಎರಡರ ಬಂಧ ಬಲಿತಿಲ್ಲವೆಂದೋ,
ತ್ಯಾಗ ಸಮರ್ಪಣಾ ಕಲೆ ಸಿದ್ಧಿಸಿಲ್ಲವೆಂದೋ,
ಸಂಯೋಗದಲೇ ವಿಯೋಗವಡಗಿದೆ ಎಂದೋ?

ಸಾಂತ್ವನ ಹೇಗಿದ್ದರೂ,ಒಮ್ಮೆ ಒಂದಾದುದು ಮತ್ತೆ
ಅಗಲಬೇಕು, ಇದು ಮನದ ಸ್ವಭಾವವೇ ಇರಬೇಕು.
ಹೀಗೆ ಅಂದುಕೊಳ್ಳದೇ ಅನ್ಯ ವಿಧಿಯಿಲ್ಲ!


ಗುರುರಾಜ್ ಸನಿಲ್, ಉಡುಪಿ

About The Author

2 thoughts on “ಗುರುರಾಜ್ ಸನಿಲ್ ಕವಿತೆ-ಅಗಲಿಕೆ”

  1. ಮಧುರ ಭಾವಗಳ ಜೊತೆಗೆ ವಿರಹವೇದನೆಗಳ ಸಮ್ಮಿಲನದ ಕವಿತೆ ಸೊಗಸಾಗಿದೆ

Leave a Reply

You cannot copy content of this page

Scroll to Top