ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಎ.ಎನ್.ರಮೇಶ್.ಗುಬ್ಬಿ.

ಹನಿಗಳು

  1. ಸ್ವಂತಿಕೆ.!

ನಮ್ಮ ಬದುಕು
ನಮ್ಮದೇ ಆಗಿರಬೇಕೆಂದರೆ..
ನಾವು ನಾವಾಗಿರಬೇಕು.!

  1. ಲೇಸು-ಸಲೀಸು.!

ವೃಥಾ ದಾಕ್ಷಿಣ್ಯಕೆ ಬಸಿರಾಗುವುದಕಿಂತ
ಧಾರ್ಷ್ಟ್ಯದಿ ಬಂಜೆಯಾಗಿರುವುದು ಲೇಸು.!
ಅವಡುಗಚ್ಚಿ ನುಂಗುತ ನರಳುವುದಕಿಂತ
ಧೈರ್ಯದಿ ಕಕ್ಕಿ ನಿರಾಳರಾಗುವುದು ಸಲೀಸು.!

  1. ಪ್ರಾರ್ಥನೆ.!

ಸದಾ ಬಾಗುವ ಶಿರಕ್ಕಿಂತ
ಬೀಗುವ ಕರನೀಡು ಶಿವ
ಕನಿಕರದಿ ಹರಸುವುದಕಿಂತ
ಹೆಮ್ಮೆಯಲಿ ಹಾರೈಸಲಿ ಭವ.!

  1. ಶವಯಾನ.!

ಅಡವಿಟ್ಟು ಆತ್ಮಾಭಿಮಾನ
ಬದಿಗಿಟ್ಟು ಸ್ವಾಭಿಮಾನ
ಹರಾಜಿಗಿಟ್ಟು ಮಾನಾಭಿಮಾನ
ಬದುಕುವುದೆಂತಹ ಜೀವನ?
ನಿತ್ಯ ಜೀವಚ್ಚವ ಯಾನ.!

  1. ಕೃತ್ರಿಮತೆ.!

ಇಷ್ಟವಿಲ್ಲದಿದ್ದರೂ ಅರಳಿಸುತ ಮೊಗ
ಸುಮ್ಮನೆ ಬೀರಲಾರೆ ಬಲವಂತದ ನಗೆ.!
ಮಾತಾಡುವ ಮನಸಿಲ್ಲದಿದ್ದರೂ ಒಳಗೆ
ತೋರಲಾರೆ ಸಿಹಿ ಸವಿನುಡಿ ಹೂರಗೆ.!

  1. ದುರಂತ.!

ಕಂಡವರ ಕನಿಕರದ
ಕಂಬನಿಯಲ್ಲೆ ಸುಖಿಸುವವರಿಗೆ
ಎದುರಿನವರ ಅನುಕಂಪದ
ಅಲೆಯಲ್ಲೆ ತೇಲುವವರಿಗೆ
ರುಚಿಸದು ಬೆವರಿನ ಸೆಲೆ
ತಿಳಿಯದು ಸ್ವಾಭಿಮಾನದ ಬೆಲೆ.!


ಎ.ಎನ್.ರಮೇಶ್.ಗುಬ್ಬಿ.

About The Author

Leave a Reply

You cannot copy content of this page

Scroll to Top