ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ದಡ ಮೀರಿದ ನದಿ

ಲೀಲಾಕುಮಾರಿ ತೊಡಿಕಾನ

ಅದೆಲ್ಲೋ ಹುಟ್ಟಿ ಇನ್ನೆಲ್ಲೊ ಹರಿದು
ಸಾಗರ ಸೇರುವ ಹೊಳೆ
ಹರಿಯುತ್ತಿದೆ
ಜವಬ್ದಾರಿಗಳನ್ನೆಲ್ಲಾ ಹೊತ್ತುಕೊಂಡೇ…
ಕರ್ತವ್ಯ ಲೋಪವಾಗದಂತೆ!

ಒಲವು ಹೊಮ್ಮಿದೆಡೆಗೆ
ಸೆಳೆತವಿದ್ದಾಗ..
ದಿಕ್ಕು ಬದಲಿಸಲೆತ್ನಿಸಿದವರಿಗೆ
ರಭಸದಲ್ಲೇ ಉತ್ತರಿಸಿ
ತನ್ನ ಹರಿವನ್ನೇ ದಾರಿಯಾಗಿಸಿ
ಅಸ್ತಿತ್ವಕ್ಕೆ ಹೆಣಗಾಡುವ ಪರಿ
ಮತ್ತೆ ಸಪ್ಪೆಯೂಟಕ್ಕೆ
ಉಪ್ಪಾಗಿ ಬರುವ ಛಲವೋ?!

ಹರಿವಿನಯದ್ದಕ್ಕೂ
ಅಲ್ಲಲ್ಲಿ ತಡೆಯುವ ಬಂಡೆ
ಪ್ರತಿ ಅಪ್ಪಳಿಕೆಯಲ್ಲೂ
ನೋವಿನಾಘಾತ..
ಆಗೆಲ್ಲ..ಮನಕ್ಷೋಭೆಗೊಂಡು
ಸುಳಿಗಾಹುತಿ ಪಡೆಯಲೆತ್ನಿಸಿದರೂ
ಮತ್ತೆ ಶಾಂತವಾಗಿ
ತನ್ನ ನಂಬಿದವರ ಬಂಜರೆದೆಗೆ
ಒಲವೂಡಿಸುತ್ತಾ..
ದಾಹ ತೀರಿಸುತ್ತಾ ಸಾಗಿದರೂ
ತನ್ನೊಳಗುದಿ ಮಾತ್ರ..
ಹೆಚ್ಚುತ್ತಲೇ ಇತ್ತು..

ಪಯಣದುದ್ದಕ್ಕೂ
ಎಲ್ಲೆ ಮೀರದಂತೆ ದಡಗಳ ಕಾವಲು!
ಎಷ್ಟು ಕಾಲ ದಡಕ್ಕೆ
ಆತುಕೊಳ್ಳುವ ಬದುಕು?
ಮೀರುವ ಪ್ರಕ್ರಿಯೆಗೆ
ಎದೆಯಳಗೆ ಭರವಸೆಯ ಬೆಳಕು
ಮಳೆ ಮಿಂಚು ಗುಡುಗು
ಬಚ್ಚಿಟ್ಟ ಕಣ್ಣ ಹನಿಗಳಿಗೀಗ
ವರ್ಷಧಾರೆಯ ರೂಪ!
ಕೆಂಗಣ್ಣು ಬೀರಿ
ಆರ್ಭಟಿಸುತ್ತಲೇ ರೊಚ್ಚೆದ್ದ
ಜಲಪ್ರಳಯಕ್ಕೆ
ದಡಗಳೇ ಮುಳುಗಿವೆ!


ಲೀಲಾಕುಮಾರಿ ತೊಡಿಕಾನ

About The Author

4 thoughts on “ಲೀಲಾಕುಮಾರಿ ತೊಡಿಕಾನ ಕವಿತೆ-ದಡ ಮೀರಿದ ನದಿ”

  1. ಸಂಗೀತ ರವಿರಾಜ್

    ಚೆನ್ನಾಗಿದೆ ಕವಿತೆ. ಅರ್ಥವತ್ತಾಗಿ ಇದೆ.

Leave a Reply

You cannot copy content of this page

Scroll to Top