ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಇಂದಿರಾ ಮೋಟೆಬೆನ್ನೂರ

ಸ್ನೇಹದೊರತೆ

ಭಾವಗಳ ತಕ್ಕಡಿಯಲ್ಲಿಟ್ಟು
ತೂಗ ಬೇಡ ಜೀವವೇ…….
ಸಂತೆಯ ಸರಕಲ್ಲ ಅವು.,..
ಎದೆ ಕೊರೆದು ಪುಟಿದ
ಜೀವ ಸೆಲೆಯ ಸಹಸ್ರ
ರುಧಿರ ಬಿಂದುಗಳು…ಗೆಳತಿ

ಮುಚ್ಚಿಡಲು ಬಚ್ಚಿಡಲು ಆಗದ
ವಿಶಾಲ ಭೋರ್ಗರೆವ ಕಡಲಿದು..
ದೃಷ್ಟಿ ಬೊಟ್ಟಿಟ್ಟು ಕಾಪಾಡಲು
ಸೌಂದರ್ಯದ ಪ್ರದರ್ಶನದ ವಸ್ತುವಲ್ಲ..
ಅಂತರಗಂಗೆ ಅಂಗೈಯಲ್ಲಿ ಅಡಗಿಸಲಾಗದ
ಅನಂತ ಹರವುಳ್ಳವಳು….ಗೆಳತಿ

ಸ್ನೇಹದೊರತೆಯ ಮುಷ್ಟಿಯಲ್ಲಿ
ಬಂಧಿಸಿಟ್ಟು ಜತನ ಮಾಡಲಾಗದು..
ನಿತ್ಯ ಒಸರುವ ಒರತೆ ತುಂಬಿ ತುಳುಕಿ
ಬೆರಳ ಸಂದಿಯಲ್ಲಿ ಹೊರ ಹೊಮ್ಮಿ
ಸತ್ಯ ಚಿಮ್ಮುವುದು….
ಪರಿಮಳದ ಬುಗ್ಗೆಯಿದು….ಗೆಳತಿ

ದುಃಖ ಮಡುಗಟ್ಟಿದ ಮನದ
ಸ್ನೇಹವ ಕಾಪಿಟ್ಟು ಪೊರೆವೆ ಹೇಗೆ?
ಸ್ನೇಹದ ಕುಲುಮೆ ನಿನ್ನದು….
ಕುದಿ ಕುದಿದು ಕುದಿಯೆಸರಾಗಿ
ಭಾವಗಳು ಉಕ್ಕಿ ಹರಿದಾಗ
ಅನಾವರಣವಾಗದಿದ್ದೀತೆ….ಗೆಳತಿ

ಪರರ ಮನದ ಭಾವಗಳ ಗೌರವಿಸು…
ಸ್ನೇಹ ಪ್ರೀತಿ ಪ್ರೇಮ ಗೆಳೆತನ
ಪೂರಕ ಪರಸ್ಪರ ಪ್ರೇರಕ ಶಕ್ತಿ
ಬಾಂಧವ್ಯದಿ ಬೆರೆತು ಅರಿತು
ನಡೆವಾಗ ಅವುಗಳ ಗೊಡವೆಯಿಲ್ಲದೇ
ಬಾಳಲಾದೀತೆ ಗೆಳತಿ..?

ಪವಿತ್ರ ಭಾವಗಳ ಉಸಿರ
ಹಸಿರಿನ ಜೀವದೊರತೆಯ ಪಯಣ..
ಭಾವ ಜೀವ ಹೇಳದೇ ಕೇಳದೇ
ಮೌನವಾಗಿ ತೊರೆದು ದೂರ
ಸಾಗಿದಾಗ ನೋವು ಹೂವುಗಳ
ಕಾವ ಬೇಗೆಯ ನೀನರಿಯುವೆ ಗೆಳತಿ….


About The Author

Leave a Reply

You cannot copy content of this page

Scroll to Top