ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಅನಸೂಯ ಜಹಗೀರದಾರ

ಜೀವ ಪ್ರಕ್ರಿಯೆ

[ಹೊಂಗೆ ಮರದ ನೆರಳಷ್ಟೇ ತಂಪಿನ
ತಣ್ಣಲರಿನ ಮಡಿಲಲಿ
ಒರಗಿದವನ ಹಣೆಯಲಿ
ಬೆವರ ಮುತ್ತಿನ ಸಾಲು..

ಅವಳು ತನ್ನ ಸೆರಗ ಒತ್ತಿ ಒತ್ತಿ
ಮುತ್ತುಗಳ ಹೆಕ್ಕುವ ಕ್ರಿಯೆಗೆ
ಕಣ್ಸನ್ನೆ…,ಮಂದಹಾಸದ ನಕ್ಷತ್ರ ಮಿನುಗು..
ಅವನದು..!

ನಿಲುಕದ ನಿಲ್ಲದ ಹಾತೊರೆಯವ
ಮನದ ಆತುರ ಕಾತರ..
ಅವರೀರ್ವರಲೂ‌.!!

ಸುರಿವ ಸೋನೆ ಮಳೆಯ ಸಿಂಚನಕೆ
ಬಾಯ್ದೆರೆದು ಹನಿಹನಿಯ ಹೀರುವಾಸೆ
ಹನಿ ಹನಿ ಇಂಗಿಸುವ ನೆಲಕೆ ತೊಯ್ಯುವಾಸೆ
ಪ್ರಕೃತಿ ಕೇಳಿಯಲೂ..!

ಸೆರಗ ಮರೆಯಲಿ ಒಸರುವ ನಿರುಸು
ಸೆಲೆ ನೆಲೆಯ ಸವಿಯುವ ಬಯಕೆ
ಅಧರಾಧರ ಮಧುರ ಮಧು ಬಯಕೆ
ಬಿಟ್ಟುಕೊಡದ ಬಿಟ್ಟೂ ಬಿಡದ ನಾಚಿಕೆ
ಕಚಗುಳಿ ಇಡುವ ನಾಭಿ ಚಳಿಗೆ
ಸಜ್ಜೆ ಲಜ್ಜೆಯ ಹೊದಿಕೆ

ಹೂವಲಿ ಹೊರಳಾಡುವ ದುಂಬಿಯ
ದಳದ ಕದ ಜಡಿದು ಹಿಡಿದಿಡುವ ಮೋಹಕೆ
ಸುರಿದ ಮುತ್ತುಗಳ ಒಂದೊಂದೇ ಹಿಡಿದು
ಒಡಲಲಿ ಕಾಪಿಡುವ ಬಯಕೆ..

ಮಧುಹೀರುವ ಮುಖವ ಎದೆಗೊತ್ತಿ
ಕಿವಿಯ ಬಳಿ ಉಸುರುವ ಬಯಕೆ
ಸುಡುವ ತುಟಿ ಕೆನ್ನೆ ತನು ಕಾವಿನಲಿ
ಆರದ ಗಾಯಗಳ ಮಾಗುವಿಕೆ

ಇಂಗುತ್ತ ಇನ್ನಿಲ್ಲವಾಗುವ
ಕರಗುತ್ತ ಏನೂ ಉಳಿಯದಂತಾಗುವ
ಉರಿದು ಆವಿಯಾಗುವ
ತೀರದ ದಾಹವ..ತಣಿಸುವ ಸನಿಹ..
ಜೀವ ಜೀವಕ ಕ್ರಿಯೆ!!

ಬೆನ್ನ ಮೇಲೆ ಬೆರಳ ಚಿತ್ತಾರ
ಹೊಸೆದ ಕರಗಳ ಮುಲುಕು
ಬೆಸೆದ ಬೆರಳುಗಳ ಬಿಗಿತ..ಬಾಹುಗಳ ಹಿಡಿತ
ಒಲವೋತ್ಸಾಹ ಜಿಗಿತ ನೆಗೆತ..

ಮೆಲ್ಲಗೆ..,
ಬಳಿ ಉಸುರುವ ಪಿಸು ದನಿ..,

ನಲ್ಲ..ಗೊತ್ತಾಯಿತೆ..ನಿನಗೆ..?

ಬಯಸಿದ ಮೌನಕೆ
ಉನ್ಮಾದ ಪ್ರಣಯಕೆ
ಭಾಷೆಯ ಗಡಿಯಿದೆಯೆ..
ಮಾತಿನ ಹಂಗಿದೆಯೇ..

ಉನ್ಮತ್ತತೆಯಲಿ ಮುಲುಗಿ
ಸಂವಾದಿಸುವ ಅನುಸಂಧಾನಕೆ
ದೇಹ ಪರಿಭಾಷೆಯೊಂದೇ

ಬಿಗಿಯಪ್ಪುಗೆಯ ನೋವ ದನಿಗೆ
ಹಲವು ರಂಗಿನ ಗುಂಗು
ಯಕ್ಷ ಯಕ್ಷಿಣಿಯ ರಸಕಾವ್ಯ..

ಪ್ರೇಮವೆಂದರೆ…,
ಶಿಥಿಲವಿಲ್ಲದ ಬೆಸುಗೆ..

ಅವನಿಗೆ ಕೇಳುತ್ತಾಳವಳು
ಇನ್ನೂ ಗೊತ್ತಾಗಲಿಲ್ಲವೆ..,
ಇದು..
ನಿರಂತರ ಜೀವಪ್ರಕ್ರಿಯೆ..!!


ಅನಸೂಯಾ ಜಹಗೀರದಾರ

About The Author

Leave a Reply

You cannot copy content of this page

Scroll to Top