ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮಕ್ಕಳ ಸಂಗಾತಿ

ಕರಿಯ

ಅರುಣಾ ರಾವ್

ಕರಿಯ ನನ್ನ ಆಪ್ತ ಗೆಳೆಯ
ಕಣ್ಣು ಏನು ಚುರುಕದು
ಬೊಗಳಲೆಂದು ಬಾಯಿ ತೆರೆಯೆ
ಮಿಂಚು ನಾಚಿ ನಿಲುವುದು

ಕರಿಯ ಇಲ್ಲಪಾಪ ಕಾಲು ಚಾಚಿ
ಮಲಗಿಹನು ಸುಮ್ಮನೆ
ಯಾವುದನ್ನು ಕುರಿತು ಅವನು
ಮಾಡುತಿಹನು ಯೋಚನೆ

ಮಾಂಸ ಮುದ್ದೆ ಮೂಳೆ ರೊಟ್ಟಿ
ಅವನಗಿಷ್ಟ ತಿನ್ನಲು
ಬಾಲ ಅತ್ತ ಇತ್ತ ತೂಗಿ
ಖುಷಿಯ ಪಡುವ ಹಾಕಲು

ಅಪರಿಚಿತರ ಕಂಡರಂತೂ
ಬೊಗಳೊ ಬಾಯಿ ಮುಚ್ಚನು
ಕಳ್ಳ ಸುಳ್ಳ ದರೋಡೆಕೋರ
ಪತ್ತೆ ಹಚ್ಚೆ ಬಿಡುವನು

ಸ್ವಾಮಿ ನಿಷ್ಠೆ ಪ್ರೀತಿಗಳಲಿ
ಅವನಿಗವನೆ ಸಾಟಿಯು?
ಪ್ರಾಮಾಣಿಕತೆಗೆ ಇವನ ಹೆಸರು
ಇಟ್ಟರೇನು ತಪ್ಪದು?


ಅರುಣಾ ರಾವ್

ಮೂಲತಃ ಬೆಂಗಳೂರಿನವರೇ ಆದ ಶ್ರೀಮತಿ ಅರುಣಾ ರಾವ್ ಎಂಎ ಬಿಎಡ್ ಪದವೀಧರೆಯಾಗಿದ್ದು, ಪ್ರಸ್ತುತ ಬೆಂಗಳೂರಿನ ಕೇಂಬ್ರಿಡ್ಜ್ ಪ್ರೌಢಶಾಲೆಯಲ್ಲಿ ಕನ್ನಡ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೇ ಕಥೆ ಕವನಗಳನ್ನು ಬರೆಯುವ ಹವ್ಯಾಸವನ್ನು ರೂಡಿಸಿಕೊಂಡಿದ್ದ ಇವರು ತಮ್ಮ ಸಾಹಿತ್ಯ ಕೃಷಿಯನ್ನು ಈಗಲೂ ಮುಂದುವರಿಸುತ್ತಿದ್ದಾರೆ.
ಮುಸ್ಸಂಜೆಯ ನೋಟ ಪ್ರಕಟಿತ ಕವನಸಂಕಲನ. ಇದರ ಮುನ್ನುಡಿಯು ಖ್ಯಾತ ಹನಿಗವಿಗಳಾದ ಶ್ರೀ ಜರಗನ ಹಳ್ಳಿ ಶಿವಶಂಕರ್ ರವರಿಂದ ಬರೆಯಲ್ಪಟ್ಟಿದೆ. ಈ ಕವನ ಸಂಕಲನದಲ್ಲಿರುವ ‘ಮಹಾತ್ಮ’ ಕವನ ಪ್ರಸ್ತುತ ICSE ಶಾಲಾ ಪಠ್ಯ ಕ್ರಮದಲ್ಲಿನ ಐದನೇ ತರಗತಿಗೆ ಪದ್ಯವಾಗಿ ಭೋದಿಸಲ್ಪಡುತ್ತಿದೆ.
ಇದಲ್ಲದೆ ವಸುಂಧರಾ, ಬಾನ ಬಯಲ ಚುಕ್ಕಿಗಳು, ಭರವಸೆಯ ಹಾದಿಯಲ್ಲಿ ಮುಂತಾದ ಸಂಪಾದಿತ ಕೃತಿಗಳಲ್ಲಿ ಕತೆ, ಕವನ, ಲೇಖನಗಳು ಪ್ರಕಟಗೊಂಡಿವೆ. ಇವರ ಕಥೆ ಲೇಖನ, ಕವನಗಳು ತರಂಗ, ಮಂಗಳ, ಕರ್ಮವೀರ ಮುಂತಾದ ವಾರಪತ್ರಿಕೆಗಳಲ್ಲಿ, ಉದಯ ಕಾಲ, ಜನಮಿತ್ರ, ಪ್ರಜಾ ಪ್ರಗತಿ ಸಂಗಾತಿ ಸಾಹಿತ್ಯ ಪತ್ರಿಕೆ ಮುಂತಾದ ದಿನ ಪತ್ರಿಕೆಗಳಲ್ಲಿ ಪ್ರಕಟಿಗೊಂಡಿದೆ.

ಕನ್ನಡ ಸಾಹಿತ್ಯ ಪರಿಷತ್ ನೀಡುವ ಪ್ರತಿಷ್ಟಿತ “ಕನ್ನಡ ಸೇವಾ ರತ್ನ ” ಪ್ರಶಸ್ತಿ. ಕಥಾಗುಚ್ಛ ನಡೆಸಿದ ಐತಿಹಾಸಿಕ ಕಥಾ ಸ್ಪರ್ಧೆಯಲ್ಲಿ ಹೆಚ್. ರಾಧಾ ದೇವಿ‌ ಪ್ರಶಸ್ತಿ, ಅತ್ಯುತ್ತಮ ಕಥಾ ಪ್ರಶಸ್ತಿ ಸಂದಿದೆ.. ಲೇಖಿಕಾ ಸಾಹಿತ್ಯ ವೇದಿಕೆಯವರು ಏರ್ಪಡಿಸಿರುವ ಕಥಾ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನವನ್ನು, ಗುರುಕುಲ ಕಲಾ ಪ್ರತಿಷ್ಠಾನ ಏರ್ಪಡಿಸುವಂತಹ ಅವಳ ಕಥಾ ಸ್ಪರ್ಧೆಯಲ್ಲಿ ತೃತೀಯ ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನ ಸೇರಿದಂತೆ ಹಲವಾರು ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಹಾಗೂ ರಾಜ್ಯ ಮಟ್ಟದ ಕವಿಗೋಷ್ಠಿಗಳಲ್ಲಿ ಪಾಲ್ಗೊಂಡಿದ್ದಾರೆ.

About The Author

1 thought on “ಅರುಣಾ ರಾವ್ ಮಕ್ಕಳ ಕವಿತೆ”

Leave a Reply

You cannot copy content of this page

Scroll to Top