ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ವಿಶೇಷ ಲೇಖನ

ಪಂಜೆ ಮಂಗೇಶರಾಯರು

ತೆಂಕಣಗಾಳಿಯಾಟವಾಡಿದ
ಪಂಜೆ ಮಂಗೇಶರಾಯರು

ನಾಗರಹಾವೆ…ಹಾವೊಳು ಹೂವೆ
ಬಾಗಿಲ ಬಿಲದಲಿ ನಿನ್ನಯ ಠಾವೆ…ಬಾ..ಬಾ…

ಅರವತ್ತು ವರ್ಷಗಳಿಗೂ ಹಿಂದೆ‌ ತಮ್ಮ ಕನ್ನಡ ಶಾಲಾ ಪಠ್ಯಪುಸ್ತಕದಲ್ಲಿ ಓದಿದವರು ಯಾರೂ ಈ ಪದ್ಯವನ್ನು ಇಂದಿಗೂ ಮರೆತಿಲ್ಲ.
ಹಾಗೆಯೇ ಕನ್ನಡ ಕಾವ್ಯಾಧ್ಯಯನ ಮಾಡಿದ ಯಾರೂ ‌ಈ ಕೆಳಗಿನ ಕವನವನ್ನು ಮರೆಯಲು ಸಾಧ್ಯವಿಲ್ಲ. ಎಂಥ ಅದ್ಭುತ ಪದ್ಯವದು!


ಬರಲಿದೆ ಅಹಹಾ ದೂರದಿ ಬರಲಿದೆ
ಬುಸುಗುಟ್ಟುವ ಪಾತಾಳದ ಹಾವೋ
ಹಸಿವಿನ ಭೂತದ ಕೂಯುವ ಕೂವೋ
ಹೊಸತಿದು ಕಾಲನ ಕೋಣದ ಓ… ಓ..
ಉಸುರಿನ ಸುಯ್ಯೋ, ಸೂಸೂಕರಿಸುತೆ
ಬರುವದು ಭರಭರ. , ಭರದಲಿ ಬರುವದು…
ಬರಲಿದೆ ಅಹಹಾ….
*
ಬೊಬ್ಬೆಯ ಹಬ್ಬಿಸಿ ಒಂದೇ ಬಾರಿಗೆ
ಉಬ್ಬರ ಎಬ್ಬಿಸಿ ಕಡಲಿನ ನೀರಿಗೆ
ಬೊಬ್ಬುಳಿ ತೆರೆಯನು ದಡಕ್ಕೆ ಹೊಮ್ಮಿ
ಸಿ
ಅಬ್ಬರದಲಿ ಬೋರ್ ಬೋರನೆ ಗಮ್ಮಿಸಿ….
ಸಡಿಲಿಸಿ ಮಡದಿಯರುಡಿಯನು ಮುಡಿಯನು
ಬಡ ಮುದುಕರ ಕೊಡೆ ಗರಿ ಹರಿದಾಡಿಸಿ
ಹುಡುಗರ ತಲೆತಲೆ ಟೊಪ್ಪಿಯ ಆಟವ
ಗಡಬಡನಾಡಿಸಿ ಮನೆಮನೆ ತೋಟವ
ಅಡಿ ಮೇಲಾಗಿಸಿ, ತೆಂಗನು ಲಾಗಿಸಿ
ಅಡಕೆಯ ಬಾಗಿಸಿ, ಪನೆ ಇಬ್ಭಾಗಿಸಿ

ಬುಡದೂಟಾಡಿಸಿ ತಲೆ ತಾಟಾಡಿಸಿ
ಗುಡಿಸಲ ಮಾಡನು ಹುಲು ಹುಲು ಮಾಡಿಸಿ
ಬರಲಿದೆ ಅಹಹಾ..‌.

*
ಗಿಡಗಿಡದಿಂ ಚೆಲುಗೊಂಚಲು ಮಿಂಚಲು
ಮಿಡಿಯನು ಹಣ್ಣನು ಉದುರಿಸಿ ಕೆದರಿಸಿ
ಎಡದಲಿ ಬಲದಲಿ ಕೆಲದಲಿ ನೆಲದಲಿ
ಪಡುವಣ ಮೋಡವ ಬೆಟ್ಟಕೆ ಘಟ್ಟಕೆ
ಹೊಡೆದಟ್ಟುತ ಕೋಲ್ ಮಿಂಚನು ಮಿರುಗಿಸಿ
ಗುಡುಗನು ಗುಡುಗಿಸಿ , ನೆಲವನು ನಡುಗಿಸಿ
ಸಿಡಿಲನು ತಾಳೆಗೆ ಬಾಳೆಗೆ ಎರಗಿಸಿ

ಜಡಿಮಳೆ ಸುರಿವೋಲ್ ಬಿರುಮಳೆ ಬರುವೋಲ್
ಕುಡಿ ನೀರನು ಒಣಗಿಸಿ ನೆಲ ಕೆರೆವೋಲ್
ಬಂತೈ ಬೀಸುತ ಬಂತೈ..
ತೆಂಕಣ ಗಾಳಿಯ ಕೊಂಕಣ ಸೀಮೆಗೆ……

ಇದನ್ನು ಓದುತ್ತಲಿದ್ದರೆ ನಾವೂ ಆ ತೆಂಕಣ ಗಾಳಿಯಲ್ಲಿ ತೇಲಿಕೊಂಡು ಹೋದ ಹಾಗೆನಿಸುತ್ತದಲ್ಲವೆ. ಅದು ನಿಜವಾದ ಕಾವ್ಯಶಕ್ತಿ!
ಇದನ್ನು ಬರೆದ “ಕವಿಶಿಷ್ಯ ” ಕಾವ್ಯನಾಮದ ಕವಿ ಪಂಜೆ ಮಂಗೇಶರಾಯರು ಕನ್ನಡ ನವೋದಯ ಸಾಹಿತ್ಯದ ಆದ್ಯ ಪುರುಷರಲ್ಲೊಬ್ಬರು. ಕನ್ನಡ ಶಿಶು ಸಾಹಿತ್ಯದ ಜನಕರೂ ಹೌದು.

*
ಮೂಲತಃ ದಕ್ಷಿಣ ಕನ್ನಡದ ಪಂಜ ಗ್ರಾಮದವರು. ತಂದೆ ರಾಮಪ್ಪಯ್ಯ. ತಾಯಿ ಶಾಂತಾದುರ್ಗೆ. ೧೮೭೪ ಫೆ. ೨೨ ರಂದು ಜನಿಸಿದವರು. ಮನೆಯ ಜವಾಬ್ದಾರಿ ಬಿದ್ದುದರಿಂದ ಸ್ವಲ್ಪ ಕಲಿತು ಕೆಲಸಕ್ಕೆ ತೊಡಗಿದರು. ಇಪ್ಪತ್ತು ರೂ. ಸಂಬಳ. ನಂತರ ಶಿಕ್ಷಕರಾದರು. ಮತ್ತೆ ಕಲಿತರು. ಇನಸ್ಪೆಕ್ಟರ್ ಆದರು. ಕನ್ನಡ ಪಂಡಿತರಾದರು. ಹೈಸ್ಕೂಲ್ ಮುಖ್ಯಾಧ್ಯಾಪಕರಾದರು.
ಸಂಗಡ ಅಪಾರ ಸಾಹಿತ್ಯ ರಚನೆಯನ್ನೂ ಮಾಡಿದರು. ಕನ್ನಡ ಕೊಂಕಣಿ ತುಳು ಮೂರೂ ಭಾಷೆಯಲ್ಲಿ ಬರೆದರು. ಶಿಕ್ಷಕರಾದುದರಿಂದ ಮಕ್ಕಳಿಗೆ ಮಾತಿಗಿಂತ ಹಾಡು ಕಥೆ ಹೆಚ್ಚು ಹಿಡಿಸುತ್ತದೆಂಬ ಅರಿವು ಅವರಿಗಿತ್ತು. ಆದ್ದರಿಂದಲೇ ಅವರಿಂದ ನಾಗರ ಹಾವೇ ಹಾವೊಳು ಹೂವೇ ” ಯಂತಹ ಹಾಡುಗಳು ರಚನೆಯಾದವು. ಹುತ್ತರಿ ಹಾಡು, ಕೊಕ್ಕೊಕ್ಕೋಳಿ, ಇಲಿಗಳ ಥಕಥೈ, ಅಜ್ಜಿ ಸಾಕಿದ ಮಗು, ಕೋಟಿ ಚನ್ನಯ, ಐತಿಹಾಸಿಕ ಕಥಾವಳಿ, ಒಡ್ಡನ ಓಟ, ಮೊದಲಾದ ಕೃತಿಗಳು ಹೊರಬಂದವು.
ಅವರ ಶೈಲಿ ಅತ್ಯಂತ ಸುಂದರವಾದುದು.
ಎಲ್ಲಿ ಭೂರಮೆ ದೇವಸನ್ನಿಧಿ
ಬಯಸಿ ಬಿಮ್ಮನೆ ಬಂದಳೊ
ಎಲ್ಲಿ ಮೋಹನಗಿರಿಯ ಬೆಳಗಿನ
ರೂಪಿನಿಂದಲಿ ನಿಂದಳೊ…‌

ಇಂತಹ ಹಲವು‌ ಕವನಗಳನ್ನಿದಕ್ಕೆ ಉದಾಹರಿಸಬಹುದು. ಭಾರತೀಯರೆಲ್ಲ ಸುಳ್ಳುಗಾರರು ಎಂದು ಲಾರ್ಡ್ ಕರ್ಜನ್ ಹೇಳಿದಾಗ ಅವನ ವಿರುದ್ಧವೇ ಕವನ ಬರೆದು ಬೆವರಿಳಿಸಿದ ದಿಟ್ಟ ರಾಷ್ಟ್ರಪ್ರೇಮಿ. ಕನ್ನಡಕ್ಕಾಗಿ ತುಂಬ ಕೆಲಸ ಮಾಡಿದರು. ರಾಯಚೂರಲ್ಲಿ ಜರುಗಿದ ಅ. ಭಾ. ಕನ್ನಡ ಸಾಹಿತ್ಯ ಸಮ್ಮೇಳನದ ಆದ್ಯಕಷರಾಗಿದ್ದರು. ಆಗ ಹೈದರಾಬಾದ್ ನಿಜಾಮನ ಆಡಳಿತವಿತ್ತು. ಕನ್ನಡದಲ್ಲಿ ಕಿರುಗವಿತೆ ಸಂಪ್ರದಾಯ ತಂದವರು. ಮಕ್ಕಳ ಸಾಹಿತ್ಯಕ್ಕೆ ಬಹುದೊಡ್ಡ ‌ಕೊಡುಗೆ ನೀಡಿದರು.
ಪತ್ನಿ ಗಿರಿಜಾಬಾಯಿ. ಆರು ಮಕ್ಕಳು. ೧೯೩೭ ರಲ್ಲಿ ನಿಧನ. ಖಂಡಿತಕ್ಕೂ ಅವರು ಮರೆಯಲಾಗದ ಮಹನೀಯರು.


ಎಲ್. ಎಸ್. ಶಾಸ್ತ್ರಿ

About The Author

1 thought on “ಪಂಜೆ ಮಂಗೇಶರಾಯರು ಒಂದು ನೆನಪು”

  1. ಅಭಿನಂದನೆಗಳು ಸರ್ ರಾಯರನ್ನು ನೆನೆಯುವ ಸುದೀಪ್ ಇವತ್ತು
    ಧನ್ಯವಾದಗಳು

Leave a Reply

You cannot copy content of this page

Scroll to Top