ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಕೊನೆಯಾಗದ ದಾರಿ

ಡಾ.ಯ.ಮಾ.ಯಾಕೊಳ್ಳಿ

ನಡೆವವವನಿಗೆ‌ಇರಬಹುದು ಕೊನೆ
ದಾರಿಗೆಲ್ಲಿಯ ಅಂತ್ಯ‌
ಹರಿಯುತಿದೆ ಹೊಳೆಯ ನೀರು ತನ್ನೊಳಗೆ
ನನ್ನದೆಲ್ಲವನು ಎಳೆದುಕೊಂಡು
ಅದರಿಂದ ಪಾರಾಗಲೆಷ್ಟೊ ನನ್ನ ಸಾಹಸ
ಸಾದ್ಯವಾಗದೆ ಕೈ ಸೋತಿವೆ
ಆದರೂ ಬಿಟ್ಟಿಲ್ಲ ಹೊಳೆಯೊಂದಿಗೆ
ಸೆಣಸುವ ಸಾಹಸ

ಅದೆಷ್ಟೋ ಜೀವ ಕಣ್ಣಮುಂದೆಯೆ ನೀರು ಪಾಲು
ಆದರೂ ನಿಂತಿಲ್ಲ ನನ್ನ ಸಾಹಸದ ಸಾಲು
ಏಕೆ ? ಯಾರ ವಿರುದ್ಧ ಈ ಓಟ ನನಗೂ
ತಿಳಿಯದು, ಇರುವದಕೆ ಸಾಕ್ಷಿಯಾಗಿ
ನಡೆದಿದೆ ಹೋರಾಟ
ಹಗಲು ರಾತ್ರಿ ಇದಕಿಲ್ಲ ಅಡೆ ತಡೆ

ಜಗವ ಗೆದ್ದವರೂ ಕಡೆಗೊಮ್ಮೆ
ಸೋತಿದ್ದಾರೆ ಸೆಣಸದೆ
ಸುಖವ ಹುಡುಕಿ ಕಾಡ ಮೇಡ ಅಲೆದವರೂ
ಕಡೆಗೆ ಬಂದದ್ದು ಈ ಏರು ಇಳಿಯುವ ಚಕ್ರಕ್ಕೇ

ತ್ಯಾಗದ ತುತ್ತತುದಿಯಲು ಕುಳಿತವರೂ
ಸುಖವ ಕಂಡು
ಜಿಗಿದಿದ್ದಾರೆ ಅಂದಣವನೇರಿದ ಸೊಣಗನಂತೆ
ಖಾವಿ ವಸ್ತ್ರದ ನಿರಿಗೆ ಸಡಿಲಗೊಂಡು
ಸೋತರೂ ನಾಚಿಕೆಯಿಲ್ಲದೆ ಸೆಣಸಿವೆ.
ಹುಲುಮಾನವರದೆಷ್ಟು ಬಿಡಿ

ಅಲ್ಲಮನೂ ಅಕ್ಕನೂ
ಮೀರಾ …ಇನ್ನೂ ಯಾರ್ಯಾರೋ
ನಡೆದೇ ಇದ್ದಾರೆ ಗಮ್ಯವನರಸಿ
ಸಿಗುವರೆಗೆ ಅವರ ಸಂಪರ್ಕ ನಮಗೆ…
ಸಿಕ್ಕ ಮೇಲಾರೂ ನಮಗೆ ಸಿಕ್ಕಿಲ್ಲ

ಆದರೂ ನಾವೂ ಬಿಟ್ಟಿಲ್ಲ ತಥ್ಯವನರಸುವ
ಸಾಹಸ.ಬುದ್ದನ ದಾರಿ ಬುದ್ದನಿಗೆ
ಸಿದ್ದನ ದಾರಿ ಸಿದ್ದನಿಗೆ..
ಎಲ್ಲರದೂ ದಾರಿ ನಡೆಯುವ ಯಾಣವಷ್ಟೆ
ಸಿಕ್ಕವರು ಹೇಳಿಲ್ಲ
ಸಿಗದವರು ಬಿಟ್ಟಿಲ್ಲ…..


ಕೊನೆಯಾಗದ ದಾರಿ

About The Author

Leave a Reply

You cannot copy content of this page

Scroll to Top