ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಸುಗ್ಗಿಸಂಕ್ರಾಂತಿ ವಿಶೇಷ

ಅಭಿಜ್ಞಾ ಪಿ.ಎಮ್ ಗೌಡ

ಸಮನ್ವಿತದೊಂದಿಗೆ
ಸುಷಮೆಗೊಂಡ
ಸಂಕ್ರಾಂತಿಯ ಹೊಸ ಕ್ರಾಂತಿ
ಸುವೃಷ್ಠಿ ಸುರಿಸುತಿರಲಿ
ಸೂರ್ಯ ಪಥ ಬದಲಾವಣೆಯೊಂದಿಗೆ..!
ಸಂದೇಶ ಹೊತ್ತು
ಸೂಚನೆಯಿತ್ತು ಬರುತಿದೆ
ವರ್ಷದ ಮೊದಲ ಹಬ್ಬದ ವಿಶೇಷ
ಸಂಕ್ರಾಂತಿ ಸುಗ್ಗಿಯೊಂದಿಗೆ..!

ಸೌಷ್ಠವದ ಸಂಕ್ರಮಣ
ಸೌಹಾರ್ದತೆಯಲಿ ಸಂಗೊಳಿಸುತ
ಸಂಗತಗೊಂಡಿದೆ ಸಮಾಗಮ
ಸಮಸ್ತ ಜನತೆಯ ಹುಮ್ಮಸ್ಸು
ಉತ್ಸಾಹ ಹೆಚ್ಚಿಸೊ ಹಬ್ಬ
ಸಂಕ್ಲಿಷ್ಟಗಳನು ತೊಲಗಿಸಿ
ಸಂಹೃಷ್ಟವನು ನೀಡುವ
ಸದ್ಭಕ್ತಿ ಸಂತ್ಕೃತಿಗಳು ಅನುಪಮ…!

ಮನುಜ ಬದಲಾಗಬೇಕು ಕಾಲಕಾಲಕ್ಕೆ
ಪ್ರಕೃತಿಯಂತೆ
ತನ್ನ ಪಥವನ್ನು ಬದಲಿಸುತ್ತಿರುವ
ಸೂರ್ಯನಂತೆ
ಬದಲಾವಣೆ ಜಗದ ನಿಯಮ ಅಲ್ವೆ..!

ಬದಲಾವಣೆ ಹೀಗಿರಲಿ
ಜಗತ್ತನ್ನು ಪ್ರೀತಿಯಿಂದ
ಗೆಲ್ಲುವಂತಾಗಬೇಕು
ಅದು ಬುದ್ಧನಂತೆ
ಜ್ಞಾನದಿಂದ ಗೆಲ್ಲಬೇಕು ಬಸವಣ್ಣನಂತೆ
ಭಾವನೆಗಳಿಂದ ಗೆಲ್ಲಬೇಕು
ಸಂತ ಶಿಶುನಾಳ ಷರಿಫರಂತೆ
ಆಧ್ಯಾತ್ಮದಿಂದ ಗೆಲ್ಲಬೇಕು
ವಿವೇಕಾನಂದರಂತೆ
ನಿಸ್ವಾರ್ಥದಿಂದ ಗೆಲ್ಲಬೇಕು
ಸಿದ್ಧೇಶ್ವರರಂತೆ
ಧೈರ್ಯದಿಂದ ಗೆಲ್ಲಬೇಕು ಸೈನಿಕರಂತೆ
ಮುಗ್ಧತೆಯಿಂದ ಗೆಲ್ಲಬೇಕು
ಕುಸುಮಗಳಂತೆ..!

ಏಕೆಂದರೆ
ಅಹಂಕಾರದಿಂದ ಯಾರನ್ನು
ಯಾವುದನ್ನು ಗೆಲ್ಲಲಾಗದು
ವಿನಾಶವೆ ಹೊರತು ವಿಶೇಷವೇನಿಲ್ಲ..
ಪ್ರಕೃತಿಗೆ ಹೊಸಹೊಳಪು
ಹೊಸ ಝಲಕು ಬರುವಂತೆ
ನಾವಿನ್ಯತೆಯೊಂದಿಗೆ
ಬೆರೆಯೋಣ ಬೆರೆತು ಉತ್ತಮ
ಬಂಧವ ಬಿತ್ತೋಣ….

ದ್ವೇಷಾಸುಯೆಗಳ ಮರೆತು
ಎಳ್ಳುಬೆಲ್ಲ ತಿಂದು ಒಳ್ಳೊಳ್ಳೆ ಮಾತಾಡಿ
ಸ್ನೇಹ ಬಂಧದ ಗಟ್ಟಿಯೊಂದಿಗೆ
ಸುವ್ಯಕ್ತರಾಗಿ ಬದುಕೋಣ…!
ದುಪ್ಪಟ್ಟಾಗಲಿ ರೈತರ ಖುಷಿ
ಉಪೋದ್ಘಾತವಾಗಿರಲಿ
ಮಕ್ಕಳ ಆಸಕ್ತಿ
ಶ್ಲೇಷವಾಗುತಿರಲಿ ಒಳ್ಳೆತನ
ಕ್ಲೇಶ ಕಳೆಯುತಿರಲಿ ಚಿರಂತನ
ಮನದ ಸಂಪದ ಸಮೃದ್ಧಿಯಾಗಿರಲಿ
ಸದ್ಭಾವದಿ ಸಾಗೋಣ..!

ಸೂರ್ಯನ ಹೊಂಗಿರಣದಂತೆ
ಬಾಳಯಾನ
ಪುಟಿದೇಳುತಿರಲಿ
ಜ್ಞಾನಯೋಗಿಗಳಂತೆ ಸಮಸ್ತರೆಲ್ಲರು
ಕ್ರಿಯಾಶೀಲರಾಗಿರಲಿ..
ಸಂಕ್ರಾಂತಿಯ ಹೊಸ ಕ್ರಾಂತಿ
ಸರ್ವರಲಿ ಹೊಸ ಬೆಳಕು ಮೂಡಿ
ಸೌಹಾರ್ದತೆ ಹೆಚ್ಚಿಸಲಿ….


About The Author

Leave a Reply

You cannot copy content of this page

Scroll to Top