ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಅಭೀಪ್ಸೆಗಳ ಬಸಿರು

ಅರ್ಚನಾ ಯಳಬೇರು

ಸಾರೋಟವನ್ನೇರಿ ಸಾಗುತಿವೆ
ಸಮ್ಮೋದ ಗೊಂಡ ವೇದನೆಗಳು
ಸಮುತ್ಪನ್ನ, ಸಮುಜ್ವಲ
ಸಾಕಲ್ಯ, ಸಂಲಬ್ಧತೆಯಲಿ
ಅಟ್ಟಹಾಸಗೈದು ಅಪರಾಧಿಯಲ್ಲ
ಎಂಬಂತೆ ನಟಿಸುತಲಿ
ಹರಿಸುತಿದೆ ಕಂಗಳಲಿ ನೆತ್ತರು..!!

ಸಂಕ್ಲಿಷ್ಟ, ಸಂಕ್ಲೇಷ
ಸಂಕ್ಷೋಭತೆಯ ಪಾರುಪತ್ಯದಲಿ
ಆಂತರ್ಯದ ಅಳಲನ್ನು
ಅಡಗಿಸಿ ಹುಚ್ಚೆದ್ದು ಕುಣಿದು
ಎದೆಯೂರಿನಲಿ ಮೌನದ
ತಾಂಡವಕೆ ಸಾಕ್ಷಿ ಹೇಳುತ
ಕಾರ್ಮೇಘಗಳಂತೆ ಮುತ್ತಿವೆ ಸುತ್ತಲು..!!

ಬಿತ್ತರಿಸುವ ಭಾವಗಳನು
ಬತ್ತಿಸುತ ಬಸವಳಿದರೂ
ತಸ್ಕರನಂತೆ ತಲ್ಲಣಗಳ
ತಹತಹಿಗೆ ಇಂಬು ನೀಡಿ
ನೋವುಗಳ ರೌರವತೆಯಲಿ
ತಥ್ಯ ಮಿಥ್ಯಗಳ ಅರಿಯದೆ
ಛಿದ್ರಗೊಂಡಿದೆ ಒಲವಿಲ್ಲದ ಒಡಲು.. !!

ಮನದ ಮರ್ಜಿಯ ಕೇಳದೆ
ನಿಶಾಂತ, ನಿಶೀಥವನು ನಿರ್ಲಕ್ಷಿಸಿದ
ನಿಶಿತಮತಿಯಿದು ವ್ಯಥೆ
ಪೃಥೆಯನು ಧಾರ್ಷ್ಟ್ಯದಲೆ ಕಾಡಿ
ಪ್ರೀತಿಯ ಪರಿಷೆಯಲಿ ವಿಷವುಣಿಸಿ
ವಿಷಾದದಲಿ ವಿನೋದವನುಂಡರೂ
ಮ್ಲಾನವದನದಲ್ಲಿ ಅಭೀಪ್ಸೆಗಳ ಬಸಿರು.. !!


About The Author

Leave a Reply

You cannot copy content of this page

Scroll to Top