ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ವಿಶೇಷ ಲೇಖನ

ವಸುದೈವ ಕುಟುಂಬಕಂ

ರಶ್ಮಿ ಹೆಗಡೆ,ಮುಂಬೈ

ಒಬ್ಬ ಮಹಾನ್ ದಾರ್ಶನಿಕ,ಆಧ್ಯಾತ್ಮ ಚಿಂತಕ ಹಾಗೂ ಸಾಮಾನ್ಯ ವ್ಯಕ್ತಿಯ ಚಿಂತನೆ ಮತ್ತು ದೃಷ್ಟಿಕೋನಗಳ ನಡುವೆ ಗಮನಾರ್ಹ ವ್ಯತ್ಯಾಸವಿರುತ್ತದೆ. ಕಾರಣ ಅವರ ಅಸಾಧಾರಣ ಹಾಗೂ ಅತ್ಯಂತ ಉತ್ಕೃಷ್ಟವಾದ ವಿಚಾರಧಾರೆಗಳು. ಅದಕ್ಕೇ ಇರಬೇಕು,ಅಂಥವರು ಸಾಮಾನ್ಯರಲ್ಲಿ ಅಸಾಮಾನ್ಯರು ಎನಿಸಿಕೊಳ್ಳುವುದು. 

ಸ್ವಾರ್ಥವೆಂಬುದು ಅಂತಹ ವ್ಯಕ್ತಿಗಳ ಜೀವನದಲ್ಲಿ ತನ್ನ ಅಸ್ತಿತ್ವವನ್ನು ಸಂಪೂರ್ಣವಾಗಿ ಕಳೆದುಕೊಂಡಿರುತ್ತದೆ. ತಮ್ಮ ಸ್ವಯಂ ಬೆಳವಣಿಗೆ,ಅಭಿವೃಧ್ಧಿ ಹಾಗೂ ಹಾಗೂ ಒಳಿತನ್ನು ಲೆಕ್ಕಿಸದೆ ಈ ಸಮಾಜ,ದೇಶ ಹಾಗೂ ಸಂಪೂರ್ಣ ಮಾನವಕುಲದ ಸರ್ವಾಂಗೀಣ ಅಭಿವೃದ್ಧಿಗಾಗಿ ಅಂತಹ ಮಹಾನ್ ವ್ಯಕ್ತಿಗಳು ತಮ್ಮ ಸಂಪೂರ್ಣ ಜೀವನವನ್ನೇ ಮುಡಿಪಾಗಿಡುತ್ತಾರೆ.  

ಸೆಪ್ಟೆಂಬರ್ ೧೧ ನ್ನು ಜಗತ್ತು ಸಾಮಾನ್ಯವಾಗಿ ನೆನಪಿಸಿಕೊಳ್ಳುವುದು ಬಿನ್ ಲಾಡೆನ್ನಿನ ಅಮೆರಿಕದ ಮೇಲಿನ ಭೀಕರ ದಾಳಿಯ ಕುರಿತು. 

ಆದರೆ ೧೮೯೩ರ ಇದೇ ತಾರೀಕಿನಂದು ಸಂಪೂರ್ಣ ವಿಶ್ವಕ್ಕೆ ಭಾರತ ತನ್ನನ್ನು ತಾನು ಅದೆಷ್ಟು  ಶ್ರೇಷ್ಠ ಸಂಸ್ಕೃತಿಯುಳ್ಳ ದೇಶವೆಂದು ಮರು ಪರಿಚಯಿಸಿಕೊಟ್ಟ ದಿನ. ವಸುದೈವ ಕುಟುಂಬಕಂ ಎಂಬುದು ಭಾರತೀಯತೆಯ ಇನ್ನೊಂದು ಮುಖ  ಎಂದು ಜಗತ್ತಿಗೆ ಮತ್ತೊಮ್ಮೆ ತೋರಿಸಿದ ಅತ್ಯಂತ ಹೆಮ್ಮೆಯ ದಿನ. 

ಸ್ವಾಮಿ ವಿವೇಕಾನಂದರು ಅಮೆರಿಕೆಯ ಶಿಕಾಗೋದ ವಿಶ್ವಧರ್ಮ ಸಮ್ಮೇಳನದಲ್ಲಿ, ಸಾವಿರಾರು ವರ್ಷಗಳವರೆಗೆ ಈ  ಜಗತ್ತು ನೆನಪಿಸುವಂಥ ಐತಿಹಾಸಿಕ ಉಪನ್ಯಾಸ ನೀಡಿದ ಅಮೃತ ಘಳಿಗೆ .

 “ಅಮೆರಿಕೆಯ ನನ್ನ ಸಹೋದರ ಸಹೋದರಿಯರೇ” ಎಂದು ಪ್ರಾರಂಭಿಸಿದ್ದೇ ತಡ,ಇಡೀ ಸಮ್ಮೇಳನದಲ್ಲಿ ಚಪ್ಪಾಳೆಯ ಶಬ್ದ ಮೊಳಗಿತ್ತು. ನಂತರ ಅವರ ಮಾತಿನ ಮೋಡಿಗೆ ಸಮ್ಮೇಳನ ಸಂಪೂರ್ಣ ಸ್ತಬ್ಧ,ಎಲ್ಲರ ಚಿತ್ತ ಕೇವಲ ವಿವೇಕರ ಭಾಷಣದೆಡೆಯಿತ್ತು.

   ಅವರ ಆ ಒಂದು ಉಪನ್ಯಾಸದಿಂದ ಜಗತ್ತೇ ನಿಬ್ಬೆರಗಾಗಿ ಭಾರತವನ್ನು ವಿಭಿನ್ನ ದೃಷ್ಟಿಕೋನದಿಂದ ಕಾಣುವ ಹಾಗಾಯಿತು. ಹಿಂದೂ ರಾಷ್ಟ್ರಕ್ಕೆ ಹೊಸ ಸಾಂಸ್ಕೃತಿಕ ಆಯಾಮ,ಆಧ್ಯಾತ್ಮಿಕ ಅಸ್ತಿತ್ವ ತಂದುಕೊಟ್ಟ ಸ್ವಾಮಿ ವಿವೇಕಾನಂದರು ಅತ್ಯಂತ ಮೇಧಾವಿಯೂ,ವಾಗ್ಮಿಯೂ,ವಿವೇಕ ಹಾಗೂ ತೇಜಸ್ಸುಳ್ಳ ವ್ಯಕ್ತಿಯಾಗಿದ್ದರು.  

ಪೂರ್ವ ಹಾಗೂ ಪಾಶ್ಚಿಮಾತ್ಯ ದೇಶಗಳ ಸಂಸ್ಕೃತಿ ಹಾಗೂ ಭಾಷೆಗಳ ಬಗ್ಗೆ ಅವರಿಗಿದ್ದ ಅಪಾರ ಜ್ಞಾನವೇ ಅವರನ್ನು ಅಮೆರಿಕೆಯ ವಿಶ್ವಧರ್ಮ ಸಮ್ಮೇಳನದವರೆಗೂ ಕರೆದೊಯ್ದಿತ್ತು.

 ಒಬ್ಬ ವ್ಯಕ್ತಿಯ ವ್ಯಕ್ತಿತ್ವಕ್ಕೆ ತೂಕ ಬರುವುದು ಆತನ ವಿದ್ಯೆ,ಬುದ್ಧಿ,ಸಂಸ್ಕಾರ,ಕಲೆ ಹಾಗೂ ಸಂಸ್ಕೃತಿಯ ಬಗೆಗಿನ ಆಸಕ್ತಿ,ಶ್ರೇಷ್ಠ ಚಿಂತನೆ ಹಾಗೂ ಆತನಲ್ಲಡಗಿದ ಉತ್ಕೃಷ್ಟ ಮಾನವೀಯ ಮೌಲ್ಯಗಳ ಆಧಾರದ ಮೇಲೆ.

ಹೆತ್ತ ತಾಯಿಯೇ ಆಗಿರಲಿ ಅಥವಾ ಮಾತೃಭೂಮಿಯೇ ಆಗಿರಲಿ,ಅನ್ಯರೆಡೆಗಿನ ಅವರ ಸಹಾನುಭೂತಿ ಹಾಗೂ ಕಾಳಜಿಯನ್ನು ನಿದರ್ಶಿಸುವ ಒಂದು ಕುತೂಹಲಕಾರಿ ಘಟನೆಯೊಂದು ಹೀಗಿದೆ.

ಒಮ್ಮೆ ವಿಶ್ವಧರ್ಮ ಸಮ್ಮೇಳನಕ್ಕೆ ತೆರಳುವ ಕೆಲವು ದಿನಗಳ ಮುಂಚೆ ತಮ್ಮ ತಾಯಿ ಭುವನೇಶ್ವರಿಯ ಆಶೀರ್ವಾದ ತೆಗೆದುಕೊಳ್ಳಲು ತಮ್ಮ ಮನೆಗೆ ಹೋಗಿದ್ದರು. ಅವರಮ್ಮ ಪ್ರೀತಿಯಿಂದ ಆತನಿಗೆ ಇಷ್ಟವಾದ ಭೋಜನ ತಯಾರಿಸಿ ಬಡಿಸಿದ್ದಳು. ಊಟದ ನಂತರ ಹಣ್ಣು ಕತ್ತರಿಸಲು ಪಕ್ಕದಲ್ಲಿದ್ದ ಚಾಕುವನ್ನು ಕೊಡೆಂದು ಮಗನಿಗೆ ಕೇಳಿದರು. 

ಆಗ ವಿವೇಕರಲ್ಲಿ ಕಂಡು ಬಂದ ಆ ಒಂದು ನಡೆ ಅವರಮ್ಮನಲ್ಲಿ ಹೊಸ ಆತ್ಮವಿಶ್ವಾಸದ ಜೊತೆ ಮಗನ ಮೇಲೆ ಹೆಮ್ಮೆಯನ್ನೂ ಹುಟ್ಟಿಸಿತ್ತು.

ಚಾಕುವನ್ನು ಅಮ್ಮನಿಗೆ ಕೊಡಬೇಕಾದರೆ ಅದರ ಚೂಪಾದ ಭಾಗವನ್ನು ತಾವು ಹಿಡಿದು ಕಟ್ಟಿಗೆಯ ಹಿಡಿಕೆಯ ಭಾಗವನ್ನು ಅಮ್ಮನೆಡೆ ಹಿಡಿದಿದ್ದರು.

ಆಗ ಅವರಮ್ಮ “ನರೇಂದ್ರ,ನೀನೀಗ ಮಾತೃಭೂಮಿಯನ್ನು ಪಾಶ್ಚಾತ್ಯರೆದುರು ಪ್ರತಿನಿಧಿಸಲು ಸಂಪೂರ್ಣ ತಯಾರಿರುವೆ. ಹೋಗಿ ಬಾ. ಒಳ್ಳೆಯದಾಗಲಿ” ಎಂದಾಗ ವಿವೇಕರು ಅರ್ಥವಾಗದೆ ಅಮ್ಮನೆಡೆ ಆಶ್ಚರ್ಯದಿಂದ ನೋಡಿದರು.

“ಯಾವ ಮಗು ತನ್ನಮ್ಮನಿಗೆ ನೋವಾಗದಿರಲಿ ಎಂದು ಚಾಕುವಿನ ಚೂಪಾದ ಭಾಗವನ್ನು ತಾನು ಹಿಡಿದು,ಕಟ್ಟಿಗೆಯ ಹಿಡಿಕೆಯನ್ನು ಆಕೆಯೆಡೆ ಹಿಡಿಯುತ್ತಾನೋ ಆತ ಮಾತೃಭೂಮಿಯನ್ನೂ ಅಷ್ಟೇ ಕಾಳಜಿ ಹಾಗೂ ಜವಾಬ್ದಾರಿಯಿಂದ ನೋಡಿಕೊಳ್ಳುವ. ಸ್ವಂತಕ್ಕಿಂತ ಇತರರ ಕ್ಷೇಮಾಭಿವೃದ್ಧಿ ಯಾವ ಮನುಷ್ಯನಿಗೆ ಮುಖ್ಯವಾಗುತ್ತೋ ಆತ ಎಂದಿಗೂ ಯಾರನ್ನೂ ನೋಯಿಸಲಾರ. ದೇಶದ ಘನತೆ ಗೌರವಕ್ಕೆ ಧಕ್ಕೆ ಬರದಂತೆ,ಅದರ ಕೀರ್ತಿಯನ್ನು ವಿಶ್ವದ ನಾಲ್ಕೂ ದಿಕ್ಕಿಗೆ ಪಸರಿಸುವಂತೆ,ಯಶಸ್ವಿಯಾಗಿ ಸಮ್ಮೇಳನವನ್ನು ಪ್ರತಿನಿಧಿಸಲು ನೀನೀಗ ಸಂಪೂರ್ಣ ಶಕ್ಯನಾಗಿರುವೆ. ಚಾಕು ಕೊಡಲು ಹೇಳಿದ್ದು ಒಂದು ಸಣ್ಣ ಪರೀಕ್ಷೆಯಷ್ಟೇ” ಎಂದು ಆಶೀರ್ವದಿಸಿದರು.

ವಿವೇಕಾನಂದರಲ್ಲಿದ್ದ ಇತರರೆಡೆಗಿನ ಸಹಾನುಭೂತಿ,ತಾಳ್ಮೆ,ನಿಸ್ವಾರ್ಥತೆಯಂತಹ ಶ್ರೇಷ್ಠ ಗುಣಗಳು ಇಂದಿಗೂ ಸಮಾಜಕ್ಕೊಂದು ಆದರ್ಶ. ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಡೆಯೋಣ.

“ದಿನಕ್ಕೊಮ್ಮೆಯಾದರೂ ನಿಮ್ಮೊಂದಿಗೆ ನೀವು ಮಾತನಾಡಿಕೊಳ್ಳಿ. ಇಲ್ಲವಾದಲ್ಲಿ ಜಗತ್ತಿನ ಒಬ್ಬ ಮೇಧಾವಿ ವ್ಯಕ್ತಿಯನ್ನು ಭೇಟಿಯಾಗುವುದರಿಂದ ವಂಚಿತರಾಗುತ್ತೀರಿ”ಎಂಬ ವಿವೇಕಾನಂದರ ವಾಣಿಯಂತೆ, ನಮ್ಮಲ್ಲಿರುವ ಶಕ್ತಿಯನ್ನು,ಒಬ್ಬ ಶ್ರೇಷ್ಠ ವ್ಯಕ್ತಿಯನ್ನು ನಾವು ಮೊದಲು ಅರಿಯಬೇಕು. ಆ ಅರಿವೇ ಮುಂದೆ ನಮ್ಮ ಅಭಿವೃದ್ಧಿಗೆ,ಬೆಳವಣಿಗೆಗೆ ದಾರಿಯಾಗುತ್ತದೆ. ರಶ್ಮಿ ಹೆಗಡೆ,ಮುಂಬೈ


ರಶ್ಮಿ ಹೆಗಡೆ,ಮುಂಬೈ

About The Author

2 thoughts on “ರಶ್ಮಿ ಹೆಗಡೆ,ಮುಂಬೈ-ವಸುದೈವ ಕುಟುಂಬಕಂ”

  1. ಗೋಪಾಲ ತ್ರಾಸಿ

    ವಿವೇಕಾನಂದರು ಅಪ್ರತಿಮ ಧಾರ್ಮಿಕ ಗುರು, ದಿಟ್ಟ ವೈಚಾರಿಕ, ಸಾಮಾಜಿಕ ಸಂತ ,ಅವರ ಕುರಿತು ಅಚ್ಚುಕಟ್ಟಾದ ಆಪ್ತ ಬರಹ, ಅಭಿನಂದನೆಗಳು. ಅವರ ಆಲೋಚನೆಗಳನ್ನು ಎದೆಗಪ್ಪಿಕೋ ಬೇಕು. ಇಂದವರು ಹೆಚ್ಚು ಪ್ರಸ್ತುತ.

    1. ಲೇಖನದ ಬಗೆಗಿನ ತಮ್ಮ ಅನಿಸಿಕೆಗೆ ಹೃತ್ಪೂರ್ವವಕ ಧನ್ಯವಾದಗಳು ಸರ್. ಸ್ವಾಮಿ ವಿವೇಕಾನಂದರ ಬಗ್ಗೆ ತಮಗಿರುವ ಅಭಿಪ್ರಾಯ, ಗೌರವ ಹಾಗೂ ಭಕ್ತಿಗೆ ತಲೆಬಾಗಿ ವಂದಿಸುವೆ. ಧನ್ಯವಾದಗಳು ಸರ್

Leave a Reply

You cannot copy content of this page

Scroll to Top