ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ಕವಿತೆ ಸಂಧಿಸದ ಆ ಹೊತ್ತು

ಅನಸೂಯ ಜಹಗೀರದಾರ

ಆ ಹೊತ್ತು…,
ಸಂಜೆಯಲಿ
ಬಾನು ನಸುಗೆಂಪು
ರಂಗೇರಿದ ಹೊತ್ತು

ಹೂ ಬಿಸಿಲಿಗೆ
ಮಾಳಿಗೆಯಲ್ಲಿ
ನಿಂತ ನಾನು
ನಿನ್ನೂರಿನ ದಾರಿಯನು
ನನ್ನೆರಡೂ
ಕಂಗಳು ಎಳೆಯುವವರೆಗೂ
ನೋಡುತ್ತಲಿದ್ದೆ..

ನಕ್ಷತ್ರ ಮೂಡುವ ಸಮಯ
ಕುಶಲೋಪರಿ
ಮಾತಿನ ಮುನ್ನುಡಿ
ನಿನ್ನೊಂದಿಗಿನ ಸಂಭಾಷಣೆ..,

ಭಾವಗಳ ತೇವದಲಿ
ಕನಸು ವರ್ಣಗಳಲಿ
ಅಕ್ಕರವ ಅದ್ದುತ್ತಲಿದ್ದೆ
ಕವಿತೆಯಾಗಿಸಲು..

ಮತ್ತೇ ಮತ್ತೇ…
ಪೀಠಿಕೆಗಳ ಕಡೆಗೆ
ಮೂರ್ತ ಸ್ವರೂಪದೆಡೆಗೆ
ಮುನ್ನೆಲೆ ಮತ್ತು ಹಿನ್ನೆಲೆಯ ಎಳಸಿನೆಡೆಗೆ
ಅಲೆಯುವ ಮನ
ರಸಗವಳ ಲಹರಿ
ಮೌನವೂ ಮಾತೂ..

ಎಳೆದಷ್ಟೂ ಎಳೆಯುವ
ಅಕ್ಕರ ಪೋಣಿಸಿದ
ಆ ಎಳೆ ನೂಲ ಹಿಡಿದು
ಜಾಡ ಬಗೆದು
ನಡೆದಿದ್ದೆವು ನಾವು

ಪರಸ್ಪರ ವಶವಾಗಿದ್ದೆವು
ಪರವಶವಾಗಿದ್ದೆ ನಾನೂ
ಆ ಗೀಳಿನಲಿ..
ಕಾವ್ಯದಮಲಿನಲಿ..!

ಆದರೆ…,
ವೈಚಿತ್ರ್ಯವೆಂದರೆ…,
ಒಮ್ಮೆಯೂ
ಕವಿತೆ ಸಂಪನ್ನಗೊಳ್ಳಲಿಲ್ಲ
ಪದಗಳು ಮಿಲನಗೊಳ್ಳಲಿಲ್ಲ
ಬೆಗಡಿನ ನುಡಿಗಟ್ಟಿನಲಿ
ಮಾತಿನ ಬೆಚ್ಚರದಲಿ
ಪರಸ್ಪರ ಜಯಕಾರದಲಿ
ಹದಗವಿತೆಯ ರೂಪಿಸುವದನು
ಕಡೆಗಣಿಸಿದ್ದೇ ಆಯ್ತು..!
ಚಿಕಿತ್ಸಕ ಬುದ್ಧಿಯಲಿ,ತರ್ಕದಲಿ,
ವಿತಂಡ ವಾದದಲಿ
ಅಲೆದದ್ದೇ ಬಂತು..!

ಚಿಂತಿಸುತ್ತೇನೆ ಹಲವುಬಾರಿ..!
ಫುಜುಲಾದ ಗಳಿಗೆಗಳ ನೆನೆದು
ಪಡೆದದ್ದೇನೆಂದು ಯೋಚಿಸುತ್ತೇನೆ
ನವೆದು ಬಾರಿ ಬಾರಿ

ಗಾಳಿಗುದುರಿದ ಎಲೆಗಳು
ಚೆಲ್ಲಿ ಚೆದುರಿದ ಕಾಮನೆಗಳನು…,
ಒಂಟಿಯಾಗಿ ಬೆಳಕಿಸುವ ತಾರೆಗಳು
ಉದುರಿದ ಅಕ್ಕರಗಳನು…,
ನೆನಪಿಸಿ ಕೊಲ್ಲುತ್ತವೆ

ಹೀಗೆ
ನಿನ್ನೂರಿನ ದಾರಿಯನು
ಕಂಗಳು ಎಳೆಯುವವರೆಗೂ
ನಾ
ನೋಡುತ್ತಲಿದ್ದೇನೆ
ಉಪ್ಪರಿಗೆಯಲಿ ನಿಂತು..

ಹಳಹಳಿಕೆ ಇದೆ ಇಲ್ಲಿ
ಸಂಧಿಸದ; ಸಂಪನ್ನಗೊಳ್ಳದ
‘ಉತ್ತರದ್ರುವದಿಂ ದಕ್ಷಿಣದ್ರುವಕೆ’
ಮೋಹಕ ಗಾಳಿ ಬೀಸಿಯೂ
ಮಿಲನವಾಗದ ಕವಿತೆಯ
ದುರಂತ ನೆನೆದು..!!


About The Author

8 thoughts on “ಅನಸೂಯ ಜಹಗೀರದಾರ ಕವಿತೆ-ಕವಿತೆ ಸಂಧಿಸದ ಆ ಹೊತ್ತು”

  1. ಭಾವಪೂರ್ಣವಾಗಿ ಕಾಡುತ್ತಿದೆ ನಿಮ್ಮ ಗಜಲ್

    ಒಂದೆರಡು ಗಜಲ್ ಗಳನ್ನು ನನ್ನ ಓದಿಗಾಗಿ ಕಳಿಸಿದ್ದೀರಾ

  2. ನಿಮ್ಮ ಹೆಸರು ಇಮೇಲ್ ಅಥವಾ ಮೊ ನಂ ಕೊಡಿ ಕಳಿಸುವೆ.ಕ್ಷಮಿಸಿ ಯಾರೆಂದು ತಿಳಿಯಲಿಲ್ಲ.ನಿಮ್ಮ ಸಹೃದಯತೆ ಮತ್ತು ಕಾವ್ಯ ಪ್ರೀತಿಗೆ ವಂದನೆಗಳು.

    1. ನಿನ್ನೂರಿನ ದಾರಿಯೆನ್ನುವ ರೂಪಕದೆಳೆಯನ್ನಿಡಿದು ಪ್ರೀತಿಯ ಹೆಜ್ಜೆಗಳ ಸೂಕ್ಷ್ಮ ಸಂವೆದನೆಗಳನು ವಿಸ್ತಾರಿಸುವ ವಸ್ತುವೇ ಕವಿತೆಯ ಗ್ರಹಿಕೆಯಾಗಿದೆ.ಕಣ್ಣೆದುರು ಮೌನದ ಅಕ್ಕರಗಳು ಪೋಣಿಸಿದರೂ ಅದು ಮಾಲೆಯಾಗಲಿಲ್ಲ.,ಒಮ್ಮೆಯೂ ಕವಿತೆ ಸಂಪನ್ನಗೊಳ್ಳಲಿಲ್ಲ.,ಪದಗಳು ಮಿಲನವಾಗಲಿಲ್ಲ ಎನ್ನುವ ಪ್ರತಿಮಾ ಸಂಕೇತಗಳು ಕನಸುಗಳಾಗಿ ಉಳಿಯುತ್ತವೆ.ನದಿಯೊಳಗೆ ತಮ್ಮಷ್ಟಕ್ಕೆ ತಾವೇ ನಿಂತ ದೋಣಿಗಳಂತೆ,ಒಂದರ ಚಲನೆ ಮತ್ತೊಂದು ನೋಡದಂತೆ ಪ್ರೀತಿಯ ಕಂಗಳು ತಣಿದರೂ ಒಲವು ಮಾತ್ರ ಮೂಲೆಗೆ ಮಡಚಿಕೊಳ್ಳುತ್ತದೆ.
      ಬಹುದಿನಗಳಿಂದ ಒಂದು ಒಳ್ಳೆಯ ಕವಿತೆ ಓದಿದಂತಾಯಿತು.

  3. dr k govinda bhat bhat

    ಕಾಡುವ ಕವಿತೆ ಬರೆದಿದ್ದೀರಿ ಅಭಿನಂದನೆಗಳು

Leave a Reply

You cannot copy content of this page

Scroll to Top