ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಅಬಾಬಿಗಳು

ಧನಪಾಲ ನಾಗರಾಜಪ್ಪ

..

೨೬)
ನಿಜವಾಗಿಯೂ ಇದೇ ನಿಜ
ಶಾಲೆಯೇ ದಿಟವಾದ ಮಂದಿರ ಮಸೀದಿ ಇಗರ್ಜಿ
ವಿದ್ಯಾಲಯದಲ್ಲೇಕೆ ರಾಜಕಾರಣ
ಧನು…
ಈ ಪುಂಡರಿಗೆಲ್ಲಾ ಪಾಠ ಮಾಡಿದವರು ಯಾರು?

೨೭)
ಯಾರದ್ದೋ ನಿರ್ಮಾಣ
ಯಾರದ್ದೋ ನಿರ್ದೇಶನ
ನಶ್ವರದ ಬದುಕು ಬಲು ನಿಗೂಢ
ಧನು…
ಮರೆಯಬೇಡ ಮೆರೆಯಬೇಡ.

೨೮)
ಇಲ್ಲೇ ಜನನ
ಇಲ್ಲೇ ಮರಣ
ಇನ್ನೊಮ್ಮೆ, ಮತ್ತೊಮ್ಮೆ, ಮಗದೊಮ್ಮೆ
ಧನು…
ಎಂದೆಂದೂ ಕರುನಾಡೇ ನಿನ್ನ ಕರ್ಮಭೂಮಿ.

೨೯)
ಬಗೆಹರಿಯದ ಗೊಂದಲ
ಮಾಧ್ಯಮಗಳು ತೋರುವುದೇ ಸತ್ಯವೆ?
ಮಾಧ್ಯಮಗಳು ಸತ್ಯವನ್ನೇ ತೋರುತ್ತಿವೆಯೆ?
ಧನು…
ಮಾಧ್ಯಮಗಳೆಂದರೆ ವಾರ್ತಾ ತಯಾರಕ ಕಾರ್ಖಾನೆಗಳೆ?

೩೦)
ಎಲ್ಲರ ವಿಶ್ವಾಸದೊಂದಿಗೆ
ಎಲ್ಲರನ್ನೂ ಜೊತೆಗೂಡಿಸಿಕೊಂಡು
ಎಲ್ಲರ ಏಳಿಗೆಗಾಗಿ ಸೇವೆಗೈಯ್ಯುವುದೇ ರಾಜಕಾರಣ
ಧನು…
ನಂಬದಿರು ಈ ನಯವಂಚಕ ನಾಯಕರನ್ನು!

೩೧)
ಕೃತಜ್ಞತೆಯಲ್ಲಿ ನಾಯಿಯೇ ಮೊದಲು
ಕೃತಘ್ನತೆಯಲ್ಲಿ ಮನುಷ್ಯನೇ ಮೊದಲು
ಎಂಥಾ ವಿಪರ್ಯಾಸವಿದು!
ಧನು…
ಎಷ್ಟು ಬುದ್ದಿವಂತಿಕೆಯಿದ್ದರೇನು?

೩೨)
ಪ್ರೀತಿ…
ಅಕ್ಷಯ ಸಂಪತ್ತು
ಎಂದೂ ಮಾಸದ ನಿಯತ್ತು
ಧನು..
ಏನೇ ಬರಲಿ ಎಲ್ಲಾ ಎದುರಿಸುವ ತಾಕತ್ತು.

೩೩)
ಗಳಿಕೆಯ ಆತುರ
ಖ್ಯಾತಿಯ ಕಾತುರ
ಕುಣಿಸುತಿದೆ ಸಂಸಾರ
ಧನು…
ಘೋರ ಅಕ್ಷರದ ಹಾದರ.

೩೪)
ಮನವೇ ಮಂದಿರ
ಸತ್ಯವೇ ಸಿಂಧೂರ
ಥರವಲ್ಲ ಡಂಭಾಚಾರ
ಧನು..
ಪ್ರೀತಿಯೇ ಪರಮೇಶ್ವರ.

೩೫)
ಬೀಗವ ಮುರಿದಿಲ್ಲ
ಬಾಗಿಲು ತೆರೆದಿಲ್ಲ
ಕನ್ನವೂ ಕೊರೆದಿಲ್ಲ
ಧನು
ಹೇಗೋ ಕಳುವಾಗಿವೆ ಕನಸುಗಳು?!

೩೬)
ಭಕ್ತರೆಲ್ಲಾ ಕಂಗಾಲಾಗಿದ್ದಾರೆ
ದೇವರುಗಳೆಲ್ಲಾ ಕಾಣೆಯಾಗಿದ್ದಾರೆ!
ಎಲ್ಲಿ ಅಂತ ಹುಡುಕುವುದು?
ಧನು
ಪ್ರೀತಿ ಸ್ನೇಹಗಳೇ ದಿಟವಾದ ದೈವಗಳಲ್ಲವೆ?

೩೭)
ಹದ್ದು ಮೀರಿದ ಅಧರ್ಮಕ್ಕೆ ಹೆದರಿ
ಸರ್ವ ಧರ್ಮದ ದೈವಗಳು ದಿಕ್ಕೆಟ್ಟಿವೆ!
ಜಾತಿಗಳ ಜಗಳದಿಂದ ಕುಲದೈವಗಳು ಬೇಸತ್ತಿವೆ
ಧನು
ಜೀವನವೇ ಧರ್ಮ; ಜೀವವೇ ದೈವ.

೩೮)
ಬದುಕೇ ಬೃಹತ್ ವಿಶ್ವವಿದ್ಯಾಲಯ
ನಿತ್ಯವೂ ನೂರೆಂಟು ಹೊಸ ಪಾಠಗಳು
ಕಠಿಣವಾದ ಪರೀಕ್ಷೆಗಳು ನಕಲು ಮಾಡಲಾಗದು
ಧನು
ಅನುಭವಗಳು ದಾರಿ ದೀಪಗಳು.

೩೯)
ನಿಜವಾಗಿಯೂ ಇದೇ ನಿಜ
ಶಾಲೆಯೇ ದಿಟವಾದ ಮಂದಿರ ಮಸೀದಿ ಇಗರ್ಜಿ
ವಿದ್ಯಾಲಯದಲ್ಲೇಕೆ ರಾಜಕಾರಣ
ಧನು…
ಈ ಪುಂಡರಿಗೆಲ್ಲಾ ಪಾಠ ಮಾಡಿದವರು ಯಾರು?

೪೦)
ಮಾನವತೆಯೇ ಮಹಾ ದೈವ
ಮಾನವ ಜೀವನವೇ ಮಹಾ ಧರ್ಮ
ಮನುಷ್ಯರಿದ್ದರಷ್ಟೇ ಧರ್ಮಗಳಿಗೆ ಉಳಿಗಾಲ
ಧನು
ಸಮತೆಯನ್ನು ಕಲಿಸದ ಧರ್ಮಗಳೇತಕ್ಕೆ?

೪೧)
ಹಿಂಗಾಂದ್ರೆ ಹೆಂಗ್ಲ?
ದೇಶದ ಗತಿ ಏನ್ಲ?
ಬಡವರ ಬದ್ಕು ಸಾಗುತ್ತೇನ್ಲ?
ಧನು…
ಕೋಮುವಾದ ಕಾರ್ಕೋಟಕ ಇಷಯಿದ್ದಂಗೆ.

೪೨)
ಹಾಳು ಲೋಕ
ಇದು ಹುಚ್ಚರ ಸಂತೆ
ಎಲ್ಲರಿಗೂ ಅವರವರದ್ದೇ ಚಿಂತೆ
ಧನು…
ಅಧಿಕಾರ, ಅಂತಸ್ತು, ಕೀರ್ತಿಗಳ ನಶೆ ಮಾರಕ.

೪೩)
ಹಣದ ಮಾಯೆ
ಗಟ್ಟಿ ಸಂಬಂಧಗಳನ್ನು ಮುರಿಯಬಲ್ಲದು
ಪೊಳ್ಳು ಬಂಧಗಳನ್ನು ಬೆಸೆಯಲೂ ಬಲ್ಲದು
ಧನು…
ಅನುರಾಗ ಅನುಬಂಧಗಳೆಂದರೇನು?

೪೪)
ಭುವಿಯಲ್ಲಿ ಹಸಿರನ್ನು ಬಿತ್ತಿದವರ್ಯಾರೋ?
ಗಾಳಿಯಲ್ಲಿ ಜೀವವನ್ನು ಹುದುಗಿಸಿದವರ್ಯಾರೋ?
ಬಾನಿನಲ್ಲಿ ಚುಕ್ಕಿಗಳನ್ನು ಮೆತ್ತಿದವರ್ಯಾರೋ?
ಧನು…
ಕಾಣದ ಸೃಷ್ಟಿ ರಹಸ್ಯವೇ ದೈವವೇನೋ?!

೪೫)
ಇನ್ನೆಷ್ಟು ದಿನಗಳು?
ಇನ್ನೆಷ್ಟು ವರ್ಷಗಳು?
ಈ ಅತಂತ್ರ ಬದುಕು
ಧನು…
ದಯೆಯಿರದ ದಣಿಗಳು ಜೀವಚ್ಛವಗಳು.

೪೬)
ಮನಸನು ಹೊಸಕಿ ಹಾಕು
ಮುಖಕ್ಕೆ ಮುಸುಗು ಹಾಕು
ಸುಖ ಸಂತೋಷಗಳೇ ಮುಖ್ಯವಂತೆ!
ಧನು…
ನೀತಿ, ನಿಯಮಗಳು ಯಾರಿಗೆ ಬೇಕು?

೪೭)
ಎಲ್ಲರನ್ನೂ, ಎಲ್ಲವನ್ನೂ…
ಹಣದಿಂದಲೇ ಅಳೆಯಬಾರದು
ಹಣವೇ ಎಲ್ಲಾ ಎಂದೆಣಿಸಬಾರದು
ಧನು…
ಯಾರೂ ಏನೂ ಹೊತ್ತುಕೊಂಡು ಹೋಗಲಾಗದು.

೪೮)
ಹುಟ್ಟು ನಿಜ ಸಾವೂ ನಿಜ
ನಟ್ಟನಡುವಿನ ಬದುಕು ಬರೀ ನಾಟಕ
ಕಣ್ಣುಗಳಿಗೆ ಕಾಣುವುದು ಮಾಯಾಲೋಕ
ಧನು…
ಕಠಿಣ ಸಾಧಕರಿಗಷ್ಟೇ ಕೈವಲ್ಯ ದಕ್ಕುವುದು.


ಧನಪಾಲ ನಾಗರಾಜಪ್ಪ

About The Author

3 thoughts on “ಅಬಾಬಿಗಳು-ಧನಪಾಲ ನಾಗರಾಜಪ್ಪ”

  1. ಚಿಂತನೆ ಯೋಗ್ಯ ಅಬಾಬಿಗಳು ಸರ್.
    ಸಾಮಾಜಿಕ ಕಳಕಳಿಯ ಅಬಾಬಿಗಳು ತಮ್ಮ ಲೇಖನಿಯಿಂದ ಇನ್ನೂ ಹರಿದು ಬರಲಿ.

Leave a Reply

You cannot copy content of this page

Scroll to Top