ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಯಾನ

ಮತ್ತೊಂದು ಅಪಿಡೆವಿಟ್ಟು

ಡಾ.ಯ.ಮಾ.ಯಾಕೊಳ್ಳಿ


ನೀನು‌ ಮಾಡಿದ ತಪ್ಪುಗಳು
ನಿನಗೆ ಎದುರಾಗಿ ನಿಂತು
ನಿನ್ನನೆ ಕಟಕಟೆಯಲಿ
ನಿಲ್ಲಿಸಿ ಪಾಟಿ ಸವಾಲೊಡ್ಡಿ
ಇರಿಯುತಿರುವಾಗ
ಯಾವ ಕೋರ್ಟಿನೊಳಗಡೆ
ಇದೆ ನಿನಗೆ ರಿಯಾಯಿತಿ?

ಹೊರ ಹೊರಗಿನ ಕೋರ್ಟು ಕಛೇರಿಗಳ ಶಿಕ್ಷೆ ದಂಡಗಳಿಂದ
ತಪ್ಪಿಸಿಕೊಳ್ಳುವದು ಸುಲಭ
ಮನದ ನ್ಯಾಯಾಧೀಶನೊಬ್ಬ ನಿರಂತರ
ಎಚ್ಚರಿರುವನಲ್ಲ!
ಅವನ ಕಣ್ಣ ತಪ್ಪಿಸಿ ಏನ ಮಾಡಬಲ್ಲೆ ನೀನು?


ಅದೆಷ್ಟು ಅಡ್ಡ ಹಾದಿಗಳು
ಕಳ್ಳಬಂಧಗಳು, ಕಣ್ಣ ತಪ್ಪಿಸಿ
ಜಿಗಿದ ಬೇಲಿಗಳು, ನಿನಗೆ ನೀನೆ ಮಾಡಿಕೊಂಡ ಸಮರ್ಥನೆಗಳು!

ದಿನವೆಲ್ಲ ಹುದಲ ರಾಡಿಯ ನಡುವೆ
ಮಲಗಿ‌ ಮುಳುಗೆದ್ದು,
ಸಂಜೆಗೆ ನೆಟ್ಟಗೆ ಗೆರೆ ಮುರಿಯದ
ಗರಿ ಅಲುಗದ ಅಂಗಿಯನು ಧರಿಸಿ
ಬೆಳ್ಳನೆ ಬೆಳಕೊಳಗೆ ಝಗಮಗಿಸುವಾಗಲೂ
ಚುಚ್ಚಿದ ನಿನ್ನ ಆತ್ಮ ಸಾಕ್ಷಿಯ ಧಿಕ್ಜರಿಸಿ
ಬದುಕಿದ್ದು ನಾಚಿಕೆಯನ್ನಂತೂ ತರಲಿಲ್ಲ!

ಬುದ್ಧ ಬಸವ,ಗಾಂಧಿ ಅಂಬೇಡ್ಕರ
ಮಾತುಗಳನ್ನು ಪುಂಖಾನು‌ಪುಂಖ ಸಿಡಿಸಿ,
ಚಪ್ಪಾಳೆಗಳ ಗುಂಗಿನಲಿ ಕಳೆದು
ಹೋದಾಗಲೂ ಇರಿಯುತ್ತಿದ್ದ ನಿನ್ನದೇ ಪೆಡಂಭೂತಗಳ ಮೌನದಿ
ದೂರ ಸರಿಸಿ ಮುಖವಾಡದಲೆ
ಬದುಕಿದ್ದು ಅವಮಾನವೆನ್ನಿಸಲೇ ಇಲ್ಲ!

ಇಲ್ಲ ಗೆಳೆಯ ,ಸಾಕು,
ಅವರಿವರ ಮೋಸ ಮಾಡಲು ನೀನು ಬಳಸಿದ್ದ ಮೋಸ ಮಾಡಲು
ಧರಿಸಿದ ಆಟಗಳು- ಹೂಟಗಳು,
ತಂತ್ರಗಳು- ಕುತಂತ್ರಗಳು!


ಇನ್ನಾದರೂ ನಿನ್ನನೀನೇ ಎದುರುಗೊಳ್ಳು,
ಕನ್ನಡಿಯ ಮುಂದೆ ಬೆತ್ತಲಾದವಗೆ
ತನ್ನ ದೇಹದ ಕಲೆ, ಗಾಯದ ಗುರುತುಗಳು
ದರ್ಶನವಾಗಲೇಬೇಕು!
ನಿನ್ನ ತಪ್ಪು ಹೆಜ್ಜೆಗಳು ನಿನ್ನ ನಿರಿದು ಕೊಲುವ ಮುನ್ನ,
ನಿನ್ನದೇ ಮನದ ಕೋರ್ಟಿನಲಿ
ನೀ ಗಲ್ಲಿಗೇರುವ ಮುನ್ನ ,
ಒಮ್ಮೆ ಈ ಅಹವಾಲು ಸಲ್ಲಿಸು,
ದಯಾಮಯಿ ನಿನ್ನ ಮನ ಕ್ಷಮಿಸೀತು?

ಆದರದೇ ಪರಿಹಾರ,ಲೋಕದ
ನ್ಯಾಯಾಲಯದಲಿ ದೊರೆತೀತೆಂಬ
ಭರವಸೆ ,ನಿಶ್ಚಯ ಸಲ್ಲ!
” ಮಾಡಿದ್ದುಣ್ಣೋ ಮಾರಾಯ” ಖಂಡಿತದಿ
ಬರೀ ಗಾದೆಯ ಮಾತಲ್ಲ!!


About The Author

1 thought on “ಮತ್ತೊಂದು ಅಪಿಡೆವಿಟ್ಟು”

Leave a Reply

You cannot copy content of this page

Scroll to Top