ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸಣ್ಣಕಥೆ

ವಿಮೋಚನಾ ದಿನ – ನನ್ನ ಪತಾಕೆ

ಶೃತಿ ಮೇಲುಸೀಮೆ

ಹಣ್ಣು ಹಣ್ಣು ಮುದುಕ ಸಾಲಿಗುಡಿ ಮುಂದೆ ಅಲ್ಲಾಡುತ್ತಿದ್ದ ತಲೆ ಎತ್ತಿ ಆಕಾಶ ನೋಡ್ಕೊಂಡು ಮರದ ಕೆಳಗ ನಿಂತಿದ್ದ.ಏನಜ್ಜ! ‘ಯಾಕಿಂಗ ಮ್ಯಾಲ ನೋಡ್ಲಿಕ್ಕತ್ತಿಯ,ಆಕಾಶದಾಗ ಅಂತದು ಏನಿದೆ’ಎಂದೆ. ಅಜ್ಜ-‘ಆಕಾಶದಾಗ ಹಾರಾಡೋ ನನ್ನ ರಾಷ್ಟ್ರ ಪತಂಗ ನೋಡಕತಿನಿ ಯಪ್ಪಾ,’ಅಂದ. ಅದರಲ್ಲೇನಿದೆ ಅಜ್ಜ ನೋಡಲಿಕ್ಕೆ,ಬೆಳಿಗ್ಗೆ ಹಾರಿಸ್ತಾರೆ, ಸಂಜೆ ಇಳಿಸ್ತಾರೆ ಬಿಡು ಅಂದೆ.ಅದಕ್ಕೆ ಅಜ್ಜ ಕೋಡಿ ನಿನಗೇನು ಗೊತ್ತು ಅದ್ರ ಬಗ್ಗೆ, ಸುಮ್ನಾ ಹೋಗು ಎಂದು ಗದರಿಸಿದ. ಯಾಕಜ್ಜ ಸಿಟ್ಟಾಗ್ತಿ,ನೀನೇ ಹೇಳು ತಿಳ್ಕೊಳ್ತಿನಿ ಎಂದೆ. ಅಜ್ಜ-‘ಮಗಾ,ನಾವು ಚಿಕ್ಕೋರಾಗಿದ್ದಾಗ ನಡೆದ ಘಟನೆ ಹೇಳ್ತೀನಿ,ತಿಳ್ಕೊ ಆಗಲಾದ್ರೂ ನಿನಿಗೆ ಅದರ ಬಗ್ಗೆ ಗೊತ್ತಾಗುತ್ತೆ ಎಂದ’. ‘ಸರಿ,ಹೇಳಜ್ಜ ಹೇಳ್ತೀನಿ.

ಮಗಾ,ಅಂದು ಇಡೀ ದೇಶಕ್ಕೆ ದೇಶವೇ ಹಬ್ಬದ ವಾತಾವರಣದಲ್ಲಿ ಮಿಂದಿತ್ತು.ಎಲ್ಲೆಡೆ ಸ್ವಾತಂತ್ರದ ಉದ್ಘೋಷಣೆಗಳ ಕೇಳುತಿದ್ವು.ಆದರೆ ನಮ್ಮ ಸಂಸ್ಥಾನಗದಾಗ ರಜಾಕಾರರು ಅನ್ನೋ ಸುಲ್ತಾನನ ಕ್ರೂರ ರಾಕ್ಷಸರ ದಂಡು, ‘ಭಾರತ್ ಮಾತಾಕಿ ಜೈ’,ವಂದೇ ಮಾತರಂ ಅಂತ ಧ್ವಜ ಹಿಡ್ಕೊಂಡು ಕೂಗಿದೊರನ್ನೆಲ್ಲಾ ಕಂಡ ಕಂಡಲ್ಲಿ ಗುಂಡಿಟ್ಟು ಕೊಲ್ತಿತ್ತು. ಹೆಂಗಸರು,ಹರೆಯದ ಹೆಣ್ಣು ಮಕ್ಕಳ ಮೇಲೆ ಬೀದಿ ಬೀದಿಲಿ ಹಿಂಸೆ ಕೊಡ್ತಿತ್ತು. ನಾವೆಲ್ಲಾ ಕಂಗಾಲಾಗಿದ್ವಿ,ಆದ್ರೂ ಸ್ವಾತಂತ್ರ್ಯ ದೇಶದ ಕ್ ಮಣ್ಣಾಗಿರಲಿಲ್ಲ. ಹೆಂಗಾರ ಮಾಡಿ ನಾವು ಸ್ವಾತಂತ್ರ್ಯ ಪಡಿಲೇಬೇಕಂತ ತೀರ್ಮಾನಿಸಿದ್ವಿ.

ಆ ದಾಳಿಕೋರರು ನಮ್ಮೂರಿಗೆ ಬಂದಾಗ, ನಮ್ಮ ಮನೆಗಳ ಮ್ಯಾಲತ್ತಿ ಅವರಿಗೆ ಕಾಣಲಾರದಂಗೆ ಅವರ ತಲೀಮ್ಯಾಲೆ ಬಿಸೋ ಕಲ್ಲು, ರುಬ್ಬುಗುಂಡು ಎತ್ತಾಕಿದ್ವಿ, ಹೆಣ್ಣುಮಕ್ಕಳು, ಹೆಂಗಸರು ಹೊಲಿ ಮ್ಯಾಲ ಎಣ್ಣೆ ಕಾಸಿ ಸುಡ್ ಸುಡೋ ಎಣ್ಣೆನಾ ಅವರ ಮ್ಯಾಲ ಸುರಿದ್ರು, ಸಣ್ಣ ಪೋರುಗಳು ಸಂದಿ-ಗೊಂದಿಲಿ ಬಚ್ಚಿಟ್ಕೊಂಡು ಕಲ್ಲು ತೂರಿ ಹಣೆ ಹೊಡೆದು ಹಾಕಿದ್ರು. ಹಿಂಗ ಏನೇನೋ ಮಾಡಿ ನಮ್ಮೂರಿಂದ ಅವರನ್ನ ಓಡಿಸಿದ್ವಿ.

ನಮ್ಮ ಅವಸ್ಥೆ ನೋಡಿ ದಿಲ್ಲಿಲಿದ್ದ ಪಟೇಲ್ ಸಾಬ್ರು,ಒಂದು ದೊಡ್ಡ  ಸೈನ್ಯನೇ ನಮ್ಮ ರಕ್ಷಣೆಗೆ ಕಳ್ಸಿದ್ರು. ನಮ್ಮ ಸಂಸ್ಥಾನನ ಸುತ್ತಲಿಂದ ಮುತ್ತಿ ಆ ಸುಲ್ತಾನನ ಚೇಲಗಳನ್ನ ಚೀಲಕ್ಕೆ ತುಂಬಿದ್ರು,ರಜಾಕಾರರ ಸೊಕ್ಕಡಗಿಸಿ ಬೀದಿ ಬೀದಿಲಿ ಅವರ ಹೆಡೆಮುರಿ ಕಟ್ಟಿ ಮೆರವಣಿಗೆ ಮಾಡಿದ್ರು ,ನಮಗ ಆತ್ಮ ಸ್ಥೈರ್ಯ ತುಂಬಿದ್ರು.

ರಕ್ತ ಸುರಿದ ತಲೆಗಳಿಗೆ ಮುಲಾಮು ಹಚ್ಚಿದ್ರು,ಬಡ ಬಗ್ಗರಿಗೆ ಅನ್ನ ಕೊಟ್ರು,ತಬ್ಬಲಿಯಾಗಿ ಬಿದ್ದಿದ್ದ ಮಗುಗ ತಮ್ಮ ಚೀಲ ತಗ್ದು ತಿನಿಸಿದ್ರು. ಅವರು ಮಾಡಿದ ತ್ಯಾಗ ಬಲಿದಾನ, ನಮ್ಮ ಮ್ಯಾಲಿನ ಕರುಣೆ-ಪ್ರೀತಿ ನಮ್ಮ ಜೀವ,ಜೀವನಕ್ಕೂ ಭರವಸೆ ನೀಡಿತ್ತು.ಆ ಸೈನಿಕರು ತೊಟ್ಟ ಬಟ್ಟೆ,ಅವರ ಕೈಯಾಗಿನ ಬಂದೂಕು,ತ್ರಿವರ್ಣ ಧ್ವಜನ ಹಿಡ್ಕೊಂಡು ಸ್ವಾತಂತ್ರ್ಯ ಕೂಗು ಕೂಗ್ತಾ ಬರ್ತಿದ್ರೆ ಮೈಯಾಗಿನ ನರ ನರಗಳೆಲ್ಲಾ ಉಬ್ಬಿ ಭಾರತ್ ಮಾತಾಕಿ ಜೈ,ವಂದೇ ಮಾತರಂ ಹೇಳ್ತಿದ್ವು. ಮೈ ಕೈ ನೋವು,ಮನದಾಗಿನ ತಾಪ,ಹೆಂಗಸರ ಕಣ್ಣೀರು,ನೆತ್ತರು ಹರಿದ ರಸ್ತೆಗಳೆಲ್ಲ ಸ್ವಾತಂತ್ರದ ಕೂಗಿನಲ್ಲಿ ಮಿಂದೆದ್ದು ಧನ್ಯತೆ ಅನುಭವಿಸಿದ್ವು.

ನಮ್ಮ ಬಾಳಿನ ಕೆಟ್ಟ ದಿನಗಳ ನಂತರ “ಜವಾನ್ ಬಂದ ಜೀವನ ಪ್ರೀತಿ ತಂದ ಎಂದು ಹರ್ಷ ಪಟ್ಟಿದ್ವಿ”.ಆಮ್ಯಾಲ ನಮಗ ಹರ್ಷದ ಹೊನಲು,ಎಂದು ಅಜ್ಜ ತನ್ನ ಜೀವನದ ಕಥೆ ಹೇಳಿ ಮುಗಿಸಿದ್ದ. ಆ ಅಜ್ಜನ ಕಣ್ಣಲ್ಲಿ ಜಿನುಗಿದ ನೀರು,ದೇಶದ ಹೆಮ್ಮೆಯ ಭಾವ ನಮ್ಮಲ್ಲಿ ಇಂದು ಯಾವ ಮಟ್ಟದಲ್ಲಿದೆ ಎಂದು ಪ್ರಶ್ನೆ ಮೂಡಿತು.


About The Author

Leave a Reply

You cannot copy content of this page

Scroll to Top