ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ರೇಣುಕಾ ರಮಾನಂದ ಗೆ ವಿಭಾ ಸಾಹಿತ್ಯ ಪ್ರಶಸ್ತಿ

೨೦೨೧ ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಯು ರೇಣುಕಾ ರಮಾನಂದ ಅವರ ‘ಸಾಂಬಾರ ಬಟ್ಟಲ ಕೊಡಿಸು’ ಎಂಬ ಕವನ ಸಂಕಲನದ ಹಸ್ತಪ್ರತಿಗೆ ದೊರೆತಿದೆ. ಕವಿ, ವಿಮರ್ಶಕರಾದ ಬಾನು ಮುಷ್ತಾಕ್ ಮತ್ತು ಕೆ. ಫಣಿರಾಜ ಅವರು ಅಂತಿಮ ಸುತ್ತಿನ ಆಯ್ಕೆ ತೀರ್ಪುಗಾರರಾಗಿದ್ದರು. ‘ಬದುಕಿನ ಅಸ್ತತ್ವದ ಸ್ಥಿತಿ, ಅದರಿಂದ ಉಂಟಾಗುವ ಆತಂಕಗಳು ಹಾಗೂ ಅವುಗಳನ್ನು ಎದುರಿಸುವ ಭಂಡ ಸಂಕಲ್ಪ ಭಾವವನ್ನು ಭಾಷೆಯನ್ನು ಮಾತ್ರವೇ ಪ್ರಮಾಣವಾಗಿಟ್ಟುಕೊಂಡು ಚಿತ್ರವತ್ತಾಗಿ ಕಟ್ಟುವ ಬಗೆಗಾಗಿ “ಸಾಂಬಾರ ಬಟ್ಟಲ ಕೊಡಿಸು” ನಮ್ಮ ಆಯ್ಕೆ’ ಎಂದು ತೀರ್ಪುಗಾರರು ಅಭಿಪ್ರಾಯಪಟ್ಟಿದ್ದಾರೆ. ಈ ಪುರಸ್ಕಾರವು ಹತ್ತು ಸಾವಿರ ನಗದು ಹಾಗೂ ಪ್ರಶಸ್ತಿ ಪಲಕವನ್ನು ಒಳಗೊಂಡಿದೆ.

ಪಠ್ಯ 'ವಿಭಾ 2021 ಸಾಹಿತ್ಯ ಪ್ರಶಸ್ತಿ ರೇಣುಕಾ ರಮಾನಂದ' ಹೇಳುತ್ತಿದೆ ನ ಚಿತ್ರವಾಗಿರಬಹುದು

ಕವಿ ಪರಿಚಯ:

ರೇಣುಕಾ ರಮಾನಂದ ಅವರು ಉತ್ತರಕನ್ನಡ ಜಿಲ್ಲೆಯ ಅಂಕೋಲದ ಶೆಟಗೇರಿಯವರು. ವೃತ್ತಿಯಲ್ಲಿ ಶಿಕ್ಷಕಿ. ೨೦೧೭ ರಲ್ಲಿ ಪ್ರಕಟವಾದ ಇವರ ಮೊದಲ ಕವಿತಾ ಸಂಕಲನ ‘ಮೀನು ಪೇಟೆಯ ತಿರುವು’ ಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ, ಮುಂಬೈ ಸುಶೀಲಾ ಶೆಟ್ಟಿ ಕಾವ್ಯ ಪ್ರಶಸ್ತಿ, ಅಮ್ಮ ಪ್ರಶಸ್ತಿ, ಕಾವ್ಯ ಮಾಣಿಕ್ಯ ಪುರಸ್ಕಾರ, ಹರಿಹರಶ್ರೀ ಪ್ರಶಸ್ತಿ, ಕೆ.ವಿ ರತ್ನಮ್ಮ ದತ್ತಿ ಇನ್ನಿತರ ಪ್ರಶಸ್ತಿಗಳು ದೊರೆತಿವೆ. ಇವರ ಬಿಡಿ ಕಥೆ, ಕವಿತೆಗಳಿಗೆ ಮುಂಬೈ ನೇಸರು ಜಾಗತಿಕ ಬಹುಮಾನ, ಜೀವನ ಪ್ರಕಾಶನ ಯುಗಾದಿ ಕಾವ್ಯ ಬಹುಮಾನ, ತುಷಾರದ ಸಾಹಿತ್ಯಾಂಜಲಿ ಕ್ಯಾಲಿಫೋರ್ನಿಯಾ ಕಥಾ ಬಹುಮಾನ, ಮುಂಬೈ ಗೋಕುಲವಾಣಿ ಕಥಾ ಬಹುಮಾನ, ಗುಲ್ಬರ್ಗಾ ವಿ.ವಿ ಜಯತೀರ್ಥ ರಾಜಪುರೋಹಿತ ಕಥಾ ಬಹುಮಾನಗಳು ದೊರಕಿವೆ. ಇಟಲಿಯ ಪಿಯಾಸೆಂಜಾ ಮ್ಯೂಸಿಯಂ ನಲ್ಲಿ ಇವರ ಕವಿತೆ ದಾಖಲಾಗಿದೆ. ಕಥೆ, ಕವಿತೆ, ಅಂಕಣಗಳಲ್ಲಿ ಉತ್ತರಕನ್ನಡದ ದಟ್ಟ ಪ್ರಾದೇಶಿಕತೆಯ ಸೊಗಡಿದೆ.


About The Author

1 thought on “ರೇಣುಕಾ ರಮಾನಂದ ಗೆ ವಿಭಾ ಸಾಹಿತ್ಯ ಪ್ರಶಸ್ತಿ”

Leave a Reply

You cannot copy content of this page

Scroll to Top