ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅನಿತಾ ಪಿ.ತಾಕೊಡೆಯವರ ಹೊಸ ಕವಿತೆ

ಬದುಕಿನ ಬಣ್ಣ

ಕಾಲದ ಚಲನೆಯ ಹಾದಿ ಬೀದಿಯಲಿ
ಬಣ್ಣಗಳದೇ ಮೆರವಣಿಗೆ
ಕಪ್ಪು ಕೆಂಪು ಹಳದಿ ಹಸಿರು ನೀಲಿ ಬಿಳಿ
ಇವುಗಳಲಿ ಬದುಕಿನ ಬಣ್ಣ ಯಾವುದು?

ಎಲ್ಲಿ ನಡೆದರೂ ಎತ್ತ ನೋಡಿದರೂ
ಕಣ್ಣ ಪಾಪೆಯ ತುಂಬ ಬಣ್ಣಗಳದೇ ಬಿಂಬ
ಕಾಡು ಬಯಲು ಊರು ಕೇರಿ
ಸೂರ್ಯ ಚಂದ್ರ ನಕ್ಷತ್ರ ಭೂಮಿ ಬಾನು

ಎಷ್ಟೊಂದು ಮಾತು ಎಷ್ಟೊಂದು ಕತೆಗಳು
ಈ ಬಣ್ಣಗಳಲ್ಲಿ…!
ಬೀಸುವ ಗಾಳಿಯದು ಓಡುವ ರೈಲಿನದು
ಹಾರುವ ಹಕ್ಕಿ ತೇಲುವ ಮೋಡಗಳದು
ಯಾವುದೂ ಉಸುರುವುದೇ ಇಲ್ಲ
ಈ ಬದುಕಿನ ನಿಖರ ಬಣ್ಣ…!

ಏಳು ಮುಳುಗಿನ ಹಾಯಿಯಲಿ
ಪ್ರೀತಿಯ ನಗೆ ಲಾಲಿಯಲಿ
ಎದೆ ಮಾಳದಲಿ ಹಲವು ಭಾವಗಳ
ಮೀಟಿಸುವ ದಾಟಿಸುವ ಕರಗಿಸುವ
ಬದುಕಿಗೂ ಬಣ್ಣವಿರದಿರುವುದೇ…!

ಸಿರಿಯ ದಾಹ, ಉಕ್ಕುವ ಕಡಲಿನ ಮೋಹ
ಬೆಂಕಿಯ ರೋಷ ಇರಿಯುವ ಆವೇಶ
ಕೊಡುವ ಪಡೆಯುವ ಅಂಕೆಯ ಪರಿಭಾಷೆಯನು
ಬದಿಗಿರಿಸಿ ಹುಡುಕಿದರೆ ಸಿಗಬಹುದೇ?

ಇಲ್ಲಿಂದ ಹೊರಟ ಮೇಲೆ
ಸಣ್ಣ ಅವಕಾಶವೂ ಇಲ್ಲ
ಅದರ ಮೊದಲು ತಿಳಿಯಬೇಕು
ಈ ಬದುಕಿನ ಬಣ್ಣ ಯಾವುದೆಂದು

************************

ಅನಿತಾ ಪಿ. ತಾಕೊಡೆ

About The Author

8 thoughts on “ಬದುಕಿನ ಬಣ್ಣ”

  1. Gururaj sanil, udupi

    ಮನಮೋಹಕ ಬಣ್ಣಗಳಿಂದ ತುಂಬಿದ ಅರ್ಥಪೂರ್ಣ ಕವಿತೆ ಅನಿತಾ ಅವರೇ, ಶುಭಾಶಯ…

  2. ಆನಂದ ಶೆಟ್ಟಿ

    ಪ್ರಕೃತಿಯ ಆಗು ಹೋಗುಗಳನ್ನು ನಿಮ್ಮ ಕಲ್ಪನೆಯೊಂದಿಗೆ ಅಳವಡಿಸಿ ಬರೆದಿರುವ ಈ ಕವಿತೆ ತುಂಬಾ ಸೊಗಸಾಗಿದೆ.. ಅಭಿನಂದನೆಗಳು

  3. ಸಂದೀಪ್ ಕೋಟ್ಯಾನ್

    ಕವನ ತುಂಬಾ ಚೆನ್ನಾಗಿದೆ….ಅರ್ಥಪೂರ್ಣ ಸಾಲುಗಳು.

Leave a Reply

You cannot copy content of this page

Scroll to Top