ಶಾಂಭವಿ, ಬಣ್ಣ, ಜಾತಿ ಮುಂತಾಗಿ..
ಸಣ್ಣಕಥೆ ಶಾಂಭವಿ, ಬಣ್ಣ, ಜಾತಿ ಮುಂತಾಗಿ.. ಡಾ. ಅರಕಲಗೂಡು ನೀಲಕಂಠ ಮೂರ್ತಿ –01– ಮೊಬೈಲ್ ವಾಟ್ಸ್ಯಾಪ್ ರಿಂಗಾದಾಗ ಸುಮಾರು ರಾತ್ರಿ ಹತ್ತು ಗಂಟೆಯ ಸಮಯ. ಊಟ ಮುಗಿಸಿ, ಪಾತ್ರೆ ತೊಳೆಯುವುದು ಇನ್ನೂ ಬಾಕಿ. ಅಷ್ಟರಲ್ಲಿ ಫೋನ್. ಉದ್ದ ರಿಂಗ್ ಆದಾಗಲೇ ಬಹುಶಃ ಇದು ಭಾರತದ್ದಲ್ಲ ಅನ್ನಿಸಿತು. ನಿರಂಜನ್ ತಮ್ಮ ಆಫೀಸಿನ ಫೈಲ್ ಹಿಡಿದು ಮಗ್ನರಾಗಿದ್ದರು. ಇಂತಹ ಫೋನ್ ಕಾಲ್ ಗಳು ಬರುವುದೇ ಅವರಿಗೆ. ಹಾಗಿದ್ದರೂ ಸುಮ್ಮನೆ ಫೈಲೊಳಗೇ ಇಳಿದಿದ್ದಾರೆ. ನಾನು ಕಿಚನ್ನಿನಲ್ಲಿದ್ದೇನೆ, ಹಾಲ್ನಲ್ಲಲ್ಲ, ಅಂತ ಅರಿತೂ ಸಹ. ಪಾಪು ಗಾಢ ನಿದ್ದೆಯಲ್ಲಿದ್ದಳು. ಯಾರಿರಬಹುದು? ಉದ್ದವಾದ ರಿಂಗ್ ಬೇರೆ. ವಿದೇಶದ್ದೇ ಅನ್ನಿಸಿತು. “ತಮ್ಮದೇ ಕಾಲ್, ಅವರೇ ಎದ್ದು ನೋಡಬಹುದು, ಆದರೂ ನೋಡು,ಅವರನ್ನ”, ಅನ್ನಿಸಿತು. ಕೊನೆಗೆ ನಾನೇ ಓಡಿದೆ. ನನ್ನದೇ ಫೋನ್. ನನಗೆ ಈ ಫೋನಿನ, ಆ ಫೋನಿನ ಅಂತ ‘ಕರೆಯ ರಿಂಗ್’ ಗಳನ್ನು ಕೇಳಿ ಗುರುತು ಹೀಡಿಯೋದು ಸ್ವಲ್ಪ ಕಷ್ಟವೇ. ಆದರೆ, ಈಗ ಆಶ್ಚರ್ಯ ಕಾದಿತ್ತು. ನನಗೆ ವಾಸ್ತವವಾಗಿ ವಿದೇಶೀ ಫೋನ್ ಬಂದದ್ದೇ ಇಲ್ಲ – ಶಾಂಭವಿ ಹೋದ ಹೊಸದರಲ್ಲಿ ಮಾಡಿದ್ದು ಬಿಟ್ಟು. ಅವಳಲ್ಲದೆ ನನ್ನವರು ಅಂತ ವಿದೇಶದಲ್ಲಿ ಯಾರಿದ್ದಾರೆ? ಶಾಂಭವಿ! ಹೌದು, ಶಾಂಭವಿಯ ಫೋನ್, ಅಮೇರಿಕಾದಿಂದ! ನನ್ನ ಖುಷಿ ನಾನೇ ಅಮೇರಿಕಕ್ಕೆ ಒಮ್ಮೆಲೇ ಹಾರಿದಂತೆ. ನನ್ನ ಆತ್ಮೀಯ ಗೆಳತಿಯಿಂದ. ಅವಳೂ ಅರ್ಜೆಂಟ್ನಲ್ಲಿದ್ದಳು, ಅನ್ನಿಸಿತು; ಆತುರಾತುರವಾಗೇ ಮಾತು ಮುಗಿಸಿಬಿಟ್ಟಳು. ಮೂರ್ನಾಲ್ಕು ನಿಮಿಷಗಳು ಅಷ್ಟೇ. ಆದರೆ, ಮುಖ್ಯ ಸುದ್ದಿಯೆಂದರೆ, ಅವಳು ನಾಳೆಯೇ ಅಲ್ಲಿಂದ ಹೊರಟು ರಜೆಗೆ ಬರುವವಳಿದ್ದಾಳೆ! ಇಷ್ಟು ತಿರುಳು…ಶಾಂಭವಿ ನನ್ನ ಆಪ್ತ ಗೆಳತಿ. ಅವಳು ಮತ್ತು ವೈಶಾಲಿ ಇಬ್ಬರೇ ನನ್ನ ಆತ್ಮೀಯ ಗೆಳತಿಯರು . ಶಾಂಭವಿ ನಿಜಕ್ಕೂ ಗಿಣಿಯೇ. ಅದೂ ಬಿಳೀ ಗಿಣಿ! ನಮ್ಮ ಕಾಲೇಜಿನಲ್ಲಿ ಅವಳಷ್ಟು ಬೆಳ್ಳಗಿದ್ದವರು, ಎಲ್ಲ ಕ್ಲಾಸ್ ನವರನ್ನೂ ಸೇರಿಸಿ ಹುಡುಕಿದರೂ, ಸಿಗುವುದೇ, ಬಹುಶಃ ಒಂದಿಬ್ಬರು. ಹಾಗಾಗಿ ಅವಳು ನಮ್ಮ ಬಿಳಿ ಗಿಣಿ. ಅಂದಾಕ್ಷಣ, ಖಂಡಿತ ಗಿಣಿ ಮೂತಿಯವಳಂತೂ ಅಲ್ಲ!ಶಾಂಭವಿ ನನ್ನ ಆಪ್ತ ಗೆಳತಿ, ಆದುದರಿಂದ, ಈ ಹೊಗಳಿಕೆ, ಅಂತೇನೂ ಅಲ್ಲ. ಅವಳು ನೈಜ ಶ್ವೇತದ ಗೊಂಬೆ. ಕೇವಲ ಬಿಳಿ ಬಣ್ಣ ಮಾತ್ರವಲ್ಲ, ಸುಂದರಿಯೂ ಹೌದು! ಸಿನಿಮಾ ನಟಿಯರೂ ನಾಚುವಷ್ಟು! ಇಡೀ ಕಾಲೇಜೇನು, ಕಾಲೇಜಿನ ಪ್ರತಿ ಇಟ್ಟಿಗೆಯೂ, ಬಹುಶಃ ಅವಳ ಮೇಲೆ ಕಣ್ಣಿಟ್ಟಿತ್ತು ಅಂದರೆ ಅತಿಶಯವಲ್ಲ! ಹೌದು, ಇದೂ ವಾಸ್ತವ – ಸುಂದರಿಯರೆಲ್ಲರೂ ನಟಿಯರಾಗಿಲ್ಲ; ನಟನೆಯಲ್ಲಿ ಸಾಕಷ್ಟು ನುರಿತಿದ್ದರೂ ಸಹ! ಹಲ್ಲು ಮತ್ತು ಕಡ್ಲೆ ಕಥೆ…ಬದುಕಿನ ಕಟು ಸತ್ಯ! ಅಷ್ಟೇ ಅಲ್ಲ; ಶಾಂಭವಿ ಇಂಟೆಲಿಜಂಟ್ ಕೂಡ. ವೆರಿ ಮಚ್! ಬ್ರಹ್ಮದೇವ ಎಲ್ಲರಿಗೂ ಇಂಥ ತಥಾಸ್ತು ಹೇಳುವುದು ಅಸಾಮಾನ್ಯ.ವೈಶಾಲಿ ಕೂಡ ಬಹಳ ಬುದ್ಧಿವಂತೆ. ಅವಳೂ ಸಹ ನನಗಿಂತ ಚೆನ್ನಾಗಿದ್ದಳು. ಹಾಗಾದರೆ, ನಾನು? ಅದನ್ನ ಅವರಿಬ್ಬರಲ್ಲಿ ಯಾರೋ ಒಬ್ಬರಾದರೂ ಹೇಳಬೇಕು ಅಲ್ಲವೇ-“ಲೇ,ನೀರಜ, ನೀನೂ ಚೆನ್ನಾಗಿದ್ದೀಯ” ಅಂತ… ನಾವು ಮೂವರು ಕೂಡ ಈಗ, ನಮ್ಮ ನಮ್ಮ ಮದುವೆಯ ನಂತರ ಬೇರೆ ಬೇರೆ ದಿಕ್ಕು. ವೈಶಾಲಿ ಬೆಳಗಾವಿಯಲ್ಲಿ, ಶಾಂಭವಿ ಅಮೆರಿಕದ ಫ್ಲಾರಿಡದಲ್ಲಿ ಮತ್ತು ನಾನು ಬೆಂಗಳೂರಿನ ಮಲ್ಲೇಶ್ವರದ ಹತ್ತಿರ. ಶಾಂಭವಿಯ ಪತಿ ಬೆಂಗಳೂರಲ್ಲೇ ಸೆಟ್ಲಾಗುವ ಐಡಿಯಾದಿಂದ ಅಲ್ಲೇ ಕೋರಮಂಗಲದ ಹತ್ತಿರ ಮನೆ ಮತ್ತು ಸಾಕಷ್ಟು ಇತರ ಆಸ್ತಿ ಮಾಡಿಟ್ಟಿದ್ದಾರೆ. ನಾವು ಮೂವರು ಇಷ್ಟೊಂದು ಗಾಢ ಸ್ನೇಹಿತರು, ನಿಜ. ಆದರೂ ಸಹ, ‘ಎಲ್ಲರ ಬಗ್ಗೆ ಯಾರಿಗೂ ಅಥವಾ ಎಲ್ಲರಿಗೂ, ಒಬ್ಬೊಬ್ಬರ ವೈಯಕ್ತಿಕವಾದ ಸಂಪೂರ್ಣ ಅರಿವಿರುವುದಿಲ್ಲ’ ಅನ್ನುವುದೂ ಅಷ್ಟೇ ಸತ್ಯ! ಹಾಗೆಯೇ ಶಾಂಭವಿಯ ವಿಷಯದಲ್ಲೂ, ಅವಳ ಆತ್ಮೀಯ ಗೆಳೆತಿಯಾದ ನೀರಜ, ಅಂದರೆ ನನಗೂ ಸಹ ಸಂಪೂರ್ಣ ಮಾಹಿತಿ ಇರಲಿಲ್ಲ ಅಂತ ಅನ್ನಿಸುತ್ತೆ…ಅದೂ ಸಹ ಶಾಂಭವಿಯ ಮದುವೆಯ ನಂತರದ ಬದುಕಿನ ಬಗ್ಗೆ. ಕಾರಣ ಮದುವೆಯ ಹೊಸ್ತಿಲಿನಿಂದಲೇ ಅನ್ನಿಸುವಂತೆ, ಅವಳು ತರಾತುರಿಯಿಂದ ಗಂಡನ ಜೊತೆ ಅಮೆರಿಕದ ವಿಮಾನ ಏರಿಬಿಟ್ಟಿದ್ದಳು. ಆಮೇಲೆ ಕಷ್ಟ-ಸುಖ ಅಂತಿರಲಿ, ಹೆಚ್ಚು ಫೋನ್ ಕೂಡ ಇಲ್ಲ. ವಾಟ್ಸ್ಯಾಪ್ ಇನ್ನೂ ಉಗಮ ಆಗದಿದ್ದ ಕಾಲದಲ್ಲಿ, ಫೋನಿನಲ್ಲಿ, ಅದೂ ಅಷ್ಟು ದೂರದ ಕರೆಗಳಲ್ಲಿ ಏನೇನು ಅಂತ ಮಾತಾಡಲು ಸಾಧ್ಯ? ಅವಳ ಅಪ್ಪ ಅಮ್ಮ ನನ್ನ ಜೊತೆ ಸಲಿಗೆಯಿಂದ ಇದ್ದರೂ, ಸುಮಾರು ಬಾರಿ ಫೋನ್ ಮಾಡಿದ್ದರೂ ಸಹ, ಎಲ್ಲ ರೀತಿಯ ವಿಚಾರ ವಿನಿಮಯ ಅವರೊಂದಿಗೆ ನನಗೆ ಸಾಧ್ಯವೇ? ಅವರೇನು ನನ್ನ ಓರಗೆಯವರೇ? ಶಾಂಭವಿಯ ಮದುವೆ, ನನ್ನ ಮತ್ತು ವೈಶಾಲಿಯ ಮದುವೆಯಾಗಿ ಬರೋಬ್ಬರಿ ಎರಡೂವರೆ ವರ್ಷದ ನಂತರ, ಆದದ್ದು. ಅದಕ್ಕೆ ಕಾರಣವೂ, ಇಲ್ಲದಿಲ್ಲ. ನನಗೆ ಗೊತ್ತಿರುವುದು ಅಷ್ಟಿಷ್ಟು ಮಾತ್ರ; ಶಾಂಭವಿ ಮಧ್ಯೆಮಧ್ಯೆ ಹೇಳುತ್ತಿದ್ದಷ್ಟು. ನಮ್ಮ ಎಜುಕೇಷನ್ ಮುಗಿದ ಮೇಲಂತೂ, ನಾನು ಮಲ್ಲೇಶ್ವರದಲ್ಲಿ, ಅವಳು ಕೆಂಗೇರಿಯಲ್ಲಿ; ಆಗಾಗ ಫೋನ್ ಕರೆ ಬಿಟ್ಟು, ಪರಸ್ಪರ ಹೋಗೋದು ಬರೋದು ಅಂತಲೂ ಇರಲಿಲ್ಲ. ಇನ್ನೆಲ್ಲಿಯ ವಿಚಾರ ವಿನಿಮಯ? ಮದುವೆಯ ನಂತರ ಅಂತೂ ಏನೇನು ಗೊತ್ತಿಲ್ಲ. ಪೂರ್ತಿ ಮಾಹಿತಿಯಂತೂ ಇಲ್ಲವೇ ಇಲ್ಲ. ಹಾಗಾಗಿ, ಅದರ ಬಗೆಗೆ….. –02– ನಾವೀಗ ಬೆಂಗಳೂರು ನಗರದ ಹೊರವಲಯದಲ್ಲಿ ವಾಸವಿದ್ದೇವೆ – ಕೆಂಗೇರಿಯಲ್ಲಿ. ನಾನು ಪದವಿ ಕಾಲೇಜಿನಲ್ಲಿ ಪ್ರಾಧ್ಯಾಪಕನಾಗಿ ರಿಟೈರ್ ಆಗಿ, ಸರಿ ಸುಮಾರು ಹತ್ತು ವರ್ಷಗಳೇ ಸಂದಿವೆ. ನನ್ನದು ಅಂತರ್ಜಾತೀಯ ವಿವಾಹ. ನಾನಾಗ ಲೆಕ್ಚರರ್ ಆಗಿದ್ದಾಗಿನಿಂದ ನನ್ನ ಪ್ರೇಮಕಥಾ ಪ್ರಸಂಗ ಆರಂಭ. ನನಗೆ ಡೆಪ್ಯೂಟೇಶನ್ ಮೇಲೆ ಚಿತ್ರದುರ್ಗಕ್ಕೆ ಎರಡು ತಿಂಗಳ ಕಾಲ ಕಳಿಸಿದ್ದರು. ಆಗ ಒಂದು ದಿನ ಲೈಬ್ರರಿಯಲ್ಲಿ ಯಾವುದೋ ಪುಸ್ತಕದ ಶಿಕಾರಿಯಲ್ಲಿ ಬಿಜಿಯಾಗಿದ್ದಾಗ, ಬಹುಶಃ ನನ್ನ ಕಷ್ಟ ನೋಡಲಾರದೆ ಇವಳು, ಪ್ರಭ – (ಹೌದು, ಈಗಿನ ಈ ಇವಳು, ಪ್ರಭ; ಆಗ ಇವಳಾಗಿರಲಿಲ್ಲ ಅಥವಾ ಪ್ರಭ ಕೂಡ ಆಗಿರಲಿಲ್ಲ; ಬದಲಿಗೆ, ಅವಳು ಮತ್ತು ಪ್ರಭಾಮಣಿ ಆಗಿದ್ದಾಗಿನ ಕಾಲ), – ತಾನೆ ಖುದ್ದು ಬಂದು, “ಎನಿ ಹೆಲ್ಪ್ ನೀಡೆಡ್” ಅಂತ ಕೇಳಿದ್ದಳು, ಕೇಳಿ ಒಂದು ಹೊಸ ಅಧ್ಯಾಯದ ಆರಂಭಕ್ಕೆ ಕಾರಣವಾಗಿ ಆಶ್ಚರ್ಯ ಮೂಡಿಸಿದ್ದಳು! ಹಾಗೆ ಪರಿಚಯವಾಗಿ, ಅಲ್ಲಿದ್ದ ಆ ಎರಡು ತಿಂಗಳ ಅವಧಿಯಲ್ಲಿ, ಅದು ಪ್ರೀತಿ- ಪ್ರೇಮ ಅಂತಲೂ ತಿರುವು ಪಡೆದು, ‘ನಮ್ಮ ಕಥೆ ನಾವೇ ದಿಗ್ಧರ್ಶಿಸಿಕೊಂಡ ಹಾಗೆ’ ಡೆಪ್ಯೂಟೇಶನ್ ಮುಗಿಸಿ ವಾಪಸ್ ಆದ ಎರಡು ವರ್ಷಗಳ ನಂತರ ತಾಳಿ ಅಂತ ಭದ್ರ ಬಿಗಿದದ್ದು! ನಮ್ಮ ಆ ಬೆಚ್ಚನೆಯ ಭಾವನಾ ಬದುಕಿನ, ಕೆಚ್ಚಿನ ಸಮಯದಲ್ಲಿ, (ಮತ್ತು ಆಮೇಲೆ ಹಾಗೂ ಈಗ ಕೂಡ, ಅಥವ ಎಂದೆಂದಿಗೂ-ಬಹುಶಃ ನಾವು ಬದುಕಿರುವವರೆಗೂ) ನಮ್ಮ ಬಗ್ಗೆ ಯಾರು ಯಾರು ಏನೇನು ಕಥೆ ಹೆಣೆದಿದ್ದಾರೆ, ಏನೇನು ಹಿಂದೆಮುಂದೆ, ಸುತ್ತ ಮುತ್ತ ತಿವಿದು ತಿವಿದು ಅಣಕಿಸಿದ್ದಾರೆ, ಅದೆಲ್ಲ ಆಗಲೂ ನಮಗೆ ಮುಖ್ಯವಾಗಿರಲಿಲ್ಲ, ಹಾಗೂ ಈಗಲೂ ಇಲ್ಲ! ಆದರೆ…ನನ್ನ ಪ್ರೀತಿಯ ಅಪ್ಪ ಅಮ್ಮ? ಅವರಾದರೂ, ನನ್ನ ‘ಭುಜದೊಡನೆ ಭುಜವಾಗಿ’ ನಿಂತಿದ್ದರೆ, ಆ ದಿನಗಳಲ್ಲಿ, ಆನಂದ ಹಾಗೂ ಹಿಂಸೆಗಳ ದ್ವಂದ್ವ ಪರಿಸ್ಥಿತಿಯ ಆ ದಿನಗಳಲ್ಲಿ, ಮುಖ್ಯವಾಗಿ ಮದುವೆಯಾದ ತಕ್ಷಣದ ಕಾಲದಲ್ಲಿ, “ನಾವಿರುವೆವು ನಿಮ್ಮೊಂದಿಗೆ” ಅಂದಿದ್ದರೆ, ಅಷ್ಟಕ್ಕೇ ನಾನು ‘ಕೆಚ್ಚೆದೆಯಾಗಿರುತ್ತಿದ್ದೆ’! … ಆದರದು ಹಾಗಾಗಲೇ ಇಲ್ಲ. ಎಣಿಕೆಯೇ ಬೇರೆ, ನಡೆಯುವುದೇ ಬೇರೆ…! ಹಾಗಂತ ನಾನು ಹೇಡಿಯಾದೆ ಅಂತಲೂ ಅಲ್ಲ. ಹಾಗಾದರೆ ನನ್ನ ಹೆತ್ತವರನ್ನು ನಾನು ದೂಷಿಸಬಹುದೇ? ಅಕಸ್ಮಾತ್ ನಾನೇ ಅವರ ಸ್ಥಾನದಲ್ಲಿ ಇದ್ದಿದ್ದರೆ; ಆಗ ನನ್ನ ಯೋಚನೆಗಳು ಯಾವ ಕೋನದತ್ತ ತಿರುಗುತ್ತಿದ್ದವು? ಮೇಲಾಗಿ, ಮನೆಗೆ ನಾನೇ ಹಿರಿಯನಾಗಿದ್ದೆ; ಆದರೆ ನನ್ನ ನಂತರ ಹೆಣ್ಣು ಮಕ್ಕಳು ಅಂತಲೂ ಇರಲಿಲ್ಲ. ಇದ್ದವರಿಬ್ಬರೂ ಅವಳಿ ತಮ್ಮಂದಿರು. ಈ ದಿಕ್ಕಿನಲ್ಲಿ ಯೋಚಿಸುವುದೂ ಸಹ ತಪ್ಪಾಗಿ, ನನ್ನ ಮೂತಿ ನೇರಕ್ಕೆ ನನ್ನದೇ ಮಾತಾದಂತೆ, ಆಗಬಿಡಬಹುದು ಅಲ್ಲವೇ? ಹೌದು, ಜಾತಿ! ಹ್ಞೂ, ಜಾತಿ ಅನ್ನುವುದು ಎಷ್ಟು ಕಠೋರ. ಇದು ಯಾವ ಬೇತಾಳ-ಸೃಷ್ಟಿ ಅನ್ನಿಸಿಬಿಡುತ್ತದೆ! ಕನಿಷ್ಠ ವಿಷಮ ಘಳಿಗೆಗಳಲ್ಲಿ… ನನ್ನ ಮೊದಲ ಮಗಳು, ಶಕುಂತಲ ಹುಟ್ಟಿದ ನಂತರ, ಏಳು ವರ್ಷಗಳು ಮಕ್ಕಳೇ ಆಗಿರಲಿಲ್ಲ. ವಾಸ್ತವವಾಗಿ, ನಮ್ಮಿಬ್ಬರಿಗೇ ಬೇಡ ಅನ್ನಿಸಿ, ಒಂದೇ ಸಾಕು, ಅವಳನ್ನೇ ಚೆನ್ನಾಗಿ ಸಾಕಿ ಸಲಹಿ, ಉತ್ತಮ ವಿದ್ಯಾವಂತಳನ್ನಾಗಿ ಬೆಳೆಸಿದರಾಯಿತು, ಅಂದುಕೊಂಡು ಸುಮ್ಮನಿದ್ದೆವು. ಶಕ್ಕುವಿನ (ಶಕುಂತಲೆಯನ್ನು ನಾವು ಕರೆಯುವ ಹ್ರಸ್ವ ಹೆಸರು), ಆರನೇ ಹುಟ್ಟು ಹಬ್ಬದ ನಂತರ, ಅಥವಾ ಅಷ್ಟರಲ್ಲಿ, ಇದ್ದಕ್ಕಿದ್ದಂತೆ ಪ್ರಭಾಳಿಗೆ, ಇನ್ನೊಂದು ಮಗು, ಗಂಡುಮಗು, ಬೇಕೆಂಬ ಹೆಬ್ಬಯಕೆ ಉಂಟಾಗಿ, ಮತ್ತು ತನ್ನ ಮೊದಲ ಮಗಳು ಮದುವೆಯಾಗಿ ಗಂಡನ ಮನೆ ಸೇರಿದ ಮೇಲೆ, ಈ ನಮ್ಮ ಮನೆ ಭಣಗುಡುವುದಲ್ಲ, ಅನ್ನುವ ಭ್ರಮೆ ಅಥವಾ ಭಯ ಕಾಡಲು ಆರಂಭಿಸಿ, ಹಠ ಹಿಡಿದ ಕಾರಣ ಬಂದವಳೇ ಈ ನಮ್ಮ ಶಾಂಭವಿ! ಪ್ರಭಾಳ ದುರದೃಷ್ಟ, ಗಂಡಾಗಲೇ ಇಲ್ಲ! ನಮ್ಮ ಶಕುಂತಲೆಯ ಮದುವೆ ಬಹಳವೇ ಕೆಟ್ಟಕಾಲದಂತೆ ಕಾಡಿ, ನಮ್ಮನ್ನು ಹಿಂಸಿಸಿ ಹಿಂಡಿಬಿಟ್ಟಿತ್ತು. ಯಾರು ಬಂದರೂ, ಹುಡುಗಿ ಒಪ್ಪಿಗೆಯಾಗಿದೆ, ತೀರ್ಮಾನ ಮಾಡಿ ತಿಳಿಸುವೆವು ಅಂತ ಹೇಳಿ ಹೋಗುತ್ತಿದ್ದರು; ಕ್ರಮೇಣ ಬ್ರೋಕರ್ ಮೂಲಕವೋ, ಇನ್ನಾರದೋ, ಅಥವ ಇನ್ನಾವುದೋ ಮುಖಾಂತರವೋ, ಈಗಲೇ ಮದುವೆ ಮಾಡಲ್ಲ ಅಂತಲೋ, ಬೇರೊಂದು ಕಾರಣವನ್ನೋ, ಅಥವಾ ಕಾರಣವೇ ಇಲ್ಲದ ಕಾರಣವೊಂದನ್ನು ತೂರಿ, ನಿರ್ಗಮಿಸುತ್ತಿದ್ದರು. ಸತ್ಯ ಅಂದರೆ ನಮ್ಮಿಬ್ಬರ ಅಂತರ್ಜಾತಿ ಅಡ್ಡಲಾಗಿ ನಿಂತ ಮುಳ್ಳು ಅಂತ ನಮಗೆ ಅರಿವಂತೂ ಆಗಿಬಿಡುತ್ತಿತ್ತು; ಈ ತೆರನಾದ ಅನುಭವಗಳು ವಿಪುಲವಾಗಿ ನಮ್ಮಿಬ್ಬರನ್ನೂ ಹೈರಾಣಾಗಿಸಿದ್ದವು.. ಅಂತಹ ಸಂದರ್ಭಗಳಲ್ಲಿ ಪ್ರಭ ಬೆಡ್ ರೂಮಿನಲ್ಲಿ ಬಳ್ಳಗಟ್ಟಲೆ ಕಣ್ಣೀರು ಹರಿಸಿದ್ದಳು. ಕೊನೆಗೆ, “ಯಾವುದೇ ಕಾರ್ಯ ಆಗುವ ಹಾಗಿದ್ದರೆ, ಯಾವ ಪ್ರಚೋದನೆ ಇಲ್ಲದೆಯೂ, ಆಗಿಯೇ ತೀರುತ್ತದೆ, ಆ ಸುವರ್ಣ ಸಮಯಕ್ಕೆ ಸರಿಯಾಗಿ”, ಅನ್ನುವಂತೆ ನಮ್ಮ ಪಾಲಿನ ಭಗವಂತ ಒಮ್ಮೆ ಕಣ್ತೆರೆದೇಬಿಟ್ಟ! ನನ್ನ ಹಳೆಯ ಕೊಲೀಗ್ ಒಬ್ಬರ ಮೂಲಕ…ಅವರ ಆಪ್ತರ ಮಗ, ಫಿಸಿಕ್ಸ್ ಲೆಕ್ಚರರ್, ಶಶಾಂಕ್ ಎಂಬೊಬ್ಬರು ಒಪ್ಪಿ ಮದುವೆ ಅಂತ ಆಯಿತು! ಶಕುಂತಲೆಯ ರೂಪ ಕೂಡ ತೆಗೆದುಹಾಕುವ ಹಾಗೇನಿರಲಿಲ್ಲ. ಶಾಂಭವಿಯಷ್ಟು ಬಣ್ಣ ಮತ್ತು ಸೌಂದರ್ಯ ಇಲ್ಲದಿದ್ದರೂ ಸಹ. ಆದರೂ ಸಹ, ನಮ್ಮ ಶಾಂಭವಿ ಬಹಳವೇ ರೂಪವಂತೆ ಆಗಿದ್ದುದರಿಂದ, ಯಾರೇ ಶಕುಂತಲೆಯನ್ನು ನೋಡಲು ಬಂದಾಗ, ಶಾಂಭವಿಯನ್ನು ಹೊರಗೆ ಏಲ್ಲಾದರೂ ಕಳಿಸಿ, ಅವಳು ಕಾಲೇಜಿಗೆ ಹೋಗಿದ್ದಾಳೆ, ಎಂದು ಕೇಳಿದವರಿಗೆ ಸುಳ್ಳು ಹೇಳುತ್ತಿದ್ದೆವು. ಇಷ್ಟಕ್ಕೂ ಈ ಜಾತಿ! ಜಾತಿ ಯಾರ ಅಪ್ಪನ ಮನೆ ಸ್ವತ್ತು, ಅಲ್ಲವೇ…! ನನ್ನ ಅಳಿಯ, ಶಶಾಂಕ್ ಕೂಡ, ಅಂತರ್ಜಾತೀಯ ತಾಯಿತಂದೆಯ ಮಗನೇ ಆಗಿದ್ದರು. ಅದೇ ನಮಗೆ ವರಪ್ರದಾಯವಾದದ್ದು! ಆಗ ನನಗೆ ಅನಿಸಿದ್ದು ಹೀಗೆ ಮತ್ತು ಇಷ್ಟು: ನಾನು ಮತ್ತು ಪ್ರಭಾಮಣಿ ಮಾತ್ರ ಈ ಪರಿಸ್ಥಿತಿಯ “ಯಜ್ಞಪಶು”ಗಳಾಗಿರಲಿಲ್ಲ”, ಬದಲಿಗೆ ನಮ್ಮಂಥಹವರು ಈ ಜಗತ್ತಿನಲ್ಲಿ, ಕನಿಷ್ಠ ನನ್ನ ಸುತ್ತಮುತ್ತಲಿನ ಜಗತ್ತಿನಲ್ಲಿ, ಅನೇಕ- ರಿದ್ದಾರೆ ಅನ್ನಿಸಿ ಸಮಾಧಾನ ಆಗಿತ್ತು! “ಅಯ್ಯಾ, ಗೆದ್ದುಬಿಟ್ಟೆಕಣೋ, ಮನೋಹರ!” ಅಂದುಕೊಂಡು ಸಮಾಧಾನ ಪಟ್ಟಿಕೊಂಡು , ಪ್ರಭಾಳಿಗೂ ಬೆನ್ನು ತಟ್ಟಿದ್ದೆ…ಆದರೆ, ಇನ್ನೂ ಮುಂದೆ ಮುಂದೆ ಬೃಹತ್ತಾಗಿ, ಬೆನ್ನುಫಣಿಯ ಹಾಗೆ ಅದೇ ಸಾಂಕ್ರಾಮಿಕ, ಅವಳ ತಂಗಿಯ ಮೂಲಕ, ಶಾಂಭವಿಯ ಮದುವೆ ಮೂಲಕ, ಕಾಡಬಹುದು ಅನ್ನಿಸಿರಲಿಲ್ಲ… ನಮ್ಮಪ್ಪ ಅಮ್ಮನಿಗೆ ನನ್ನ ನಂತರ ಹುಟ್ಟಿದ್ದು ನನ್ನ ಇಬ್ಬರು ತಮ್ಮಂದಿರು, ಅವಳಿ ಎಂದು ಆಗಲೇ ಹೇಳಿದ್ದೇನೆ. ಆದರೂ, ಅಷ್ಟಕ್ಕೇ ಅವರಿಗೆ ನನ್ನ ಅಂತರ್ಜಾತಿ ವಿವಾಹದ ‘ಭಯಂಕರ ಭೂತ’ ಹೊಕ್ಕಂತೆ ಜಿಗುಪ್ಸೆ ಕಾಡತೊಡಗಿ, ನನ್ನನ್ನು ದೂರ
ಶಾಂಭವಿ, ಬಣ್ಣ, ಜಾತಿ ಮುಂತಾಗಿ.. Read Post »



