ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಈ ಸಲವೂ ಬರಲಾಗಲಿಲ್ಲ

ವಿಭಾ ಪುರೋಹಿತ್

Black, White, Abstract, Concept, 3D

ಬುದ್ಧ ಬಾಣ ಭ್ರಮಣ
ತಲೆಗೆ ಹತ್ತುತ್ತಿಲ್ಲ !
ಭಯಾನಕ ನಿರ್ಣಾಯಕ ದಿನಗಳು
ಸೆಡ್ಡು ಹೊಡೆಯುತ್ತಿವೆ
ಮನುಕುಲವೇ ಬಲಿಯಾಗಬೇಕೆಂಬ
ದುರಾಸೆ, ಆ ವಿಷಾಣುಗೆ
ಚರಾಚರಗಳ ಋಣಸಂದಾಯವಾಗುತ್ತಿದೆ
ಉತ್ಸವ,ತೇರು,ನಂದೀಕೋಲು ಕಣ್ತುಂಬಿಕೊಳ್ಳಲಿಲ್ಲ
ಈ ಸಲವೂ ಬರಲಾಗಲಿಲ್ಲ
ಇದ್ದಲ್ಲೇ ಇರುವ ಅಸಹಾಯಕತೆ !
ಹುಲುಮಾನವರಲ್ಲವೇ ?
ನಿರ್ಮಮ ಏಕಾಕಿತನ
ಶೂನ್ಯತೆಯ ಸಿಮೆಂಟಿನಿಂದಾದ ಗೋಡೆ
ಕನಸನ್ನೂ ಕಸಿಯುವ ನಿಸ್ಸಹಾಯಕ ರಾತ್ರಿಗಳು
ಅನೇಕ ನಂಬಿಕೆಗಳು ಶವಗಳಾಗಿ ಬಿದ್ದಂತೆ
ಕಣ್ಣೊರೆಸುವ ಹೊಣೆ ಕಳೆದುಕೊಂಡ
ಭರವಸೆಗಳು ನಿಟ್ಟುಸಿರೊಡೆದಾಗ……..
ದೇಹವೆಂಬ ಖಾಸಗಿ ದಿರಿಸು ದೂಡಿ
ಒಳಗಣ ಜ್ಯೋತಿಯ ಮುಖಾಮುಖಿಯಾಗಿದ್ದು
ಸಮೀಕ್ಷೆ ನಡೆಸಿದ್ದು ಇದೇ ವೈರಾಣು!
ನನಗೆ ಹೋಗಲಾಗಲಿಲ್ಲವಾದರೇನು?
ಅವನೇ ಬಂದಿದ್ದಾನೆ ! ಮತ್ತೆ ಹತ್ತವತಾರವೆತ್ತಿ !
ಪಿಪಿಕಿಟ್ ಧರಿಸಿ
ದಿನಸಿಕಿಟ್ ಹಿಡಿದು
ಜೀವಸ್ವರದ ಊದುಗೊಳವೆ ವ್ಹೆಂಟಿಲೇಟರ್ ನಂತೆ
ಹಾಲುತರಕಾರಿಯವ,ಕಸಸಾಗಿಸುವ
ಗಡಿಕಾಯುವ ವೀರನಾಗಿ
ದಾದಿಯಾಗಿ ಆರಕ್ಷಕನಾಗಿ ಚಾಲಕನಾಗಿ
ಕರ್ಮಚಾರಿಯಾಗಿ
ಅವನೇ ಬಂದಿದ್ದಾನೆ !
ಹೇ ವಿಶ್ವಂ, ಈ ನಡುವೆ ನಿನ್ನೊಂದಿಗೆ
ಮೌನ ಮಾತಾಡಿದಷ್ಟು
ಹಿಂದೆಂದೂ ಮಾತಾಡಿರಲಿಲ್ಲ !
———-0—–‐——–

About The Author

Leave a Reply

You cannot copy content of this page

Scroll to Top