ಗಜಲ್ ಜುಗಲ್ ಬಂದಿ

ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಪ್ರತಿವಾರ ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ

ಗಜಲ್-07

ಪ್ರೇಮವೊಂದು ಪರಿಧಿಯಿಂದ ಜಾರುತ್ತಿದೆ ಎಂದರೆ ಏನರ್ಥ
ಲೋಕವೊಂದು ಅಲಿಪ್ತವಾಗಿದೆ ಎಂದರೆ ಏನರ್ಥ

ಒಂದೇ ದಿನದ ಬದುಕಿನಲಿ ಹೂವು ನಗುವುದ ಕಲಿಸುತ್ತದೆ
ತಂಗಾಳಿಗೆ ಮನಸು ಹೆಪ್ಪುಗಟ್ಟುತ್ತಿದೆ ಎಂದರೆ ಏನರ್ಥ

ಪುಟ್ಟ ಪುಟ್ಟ ಹೆಜ್ಜೆಗಳಲ್ಲಿ ದಣಿದ ರಿಂಗಣ ಕೇಳಲಾಗದು
ಗೂಡು ಕಟ್ಟುವ ಹಕ್ಕಿಯ ರೆಕ್ಕೆ ಸೋಲುತ್ತಿದೆ ಎಂದರೆ ಏನರ್ಥ

ಗತಿಸಿದ ಕಾಲದಲಿ ನೂರಾರು ಕುರುಹುಗಳ ಉಸಿರ ವೇದನೆ
ಶರಧಿ ಸ್ತಬ್ಧತೆಯ ಧರಿಸುತ್ತಿದೆ ಎಂದರೆ ಏನರ್ಥ

ಕಾಲಚಕ್ರದ ಮೈಗೆ ಏನೊಂದೂ ಅಂಟಿಕೊಳ್ಳುವದಿಲ್ಲ “ಸ್ಮಿತ “
ಮರೀಚಿಕೆಯ ಬೆನ್ನೇರಿ ಭಾವ ಸಾಗುತ್ತಿದೆ ಎಂದರೆ ಏನರ್ಥ/

ಸ್ಮಿತಾ ಭಟ್

ಆಡಿದ ಮಾತಿಗೆ ಜೀವವೇ ಇಲ್ಲವೆಂದರೆ ಏನರ್ಥ
ಕಂಡ ಕನಸಿಗೆ ಕಾಯವೇ ಇಲ್ಲವೆಂದರೆ ಏನರ್ಥ

ಹೊರ ಸುತ್ತ ಅದೆಷ್ಟು ಬಣ್ಣಗಳು ಮುತ್ತಿದರೇನು
ಅಂತರಂಗದಲಿ ಕುಂಚವೇ ಇಲ್ಲವೆಂದರೆ ಏನರ್ಥ

ಹಂಚಿಕೊಂಡ ಭಾವಗಳು ಆಸರೆಯ ಬೇಡುತಿವೆ
ಎದೆಗಡಲಿನೊಳಗೆ ಸಾರವೇ ಇಲ್ಲವೆಂದರೆ ಏನರ್ಥ

ಬಾಡುತ್ತಿದ್ದರೂ ಸಂಪಿಗೆ ಕಂಪೆರೆಯುವುದು ತಾನೇ
ಬೆಸೆದ ಬಂಧದಲಿ ಗಂಧವೇ ಇಲ್ಲವೆಂದರೆ ಏನರ್ಥ

ನಿನ್ನೆಗಳ ಗೋರಿಯೊಳಗೆ ಹೋಗಲಾರದು ‘ರೇಖೆ’
ನೆನಪುಗಳ ಸಂಚಿ ಭಾರವೇ ಇಲ್ಲವೆಂದರೆ ಏನರ್ಥ

ರೇಖಾ ಭಟ್




About The Author


Comments

4 responses to “”

  1.  Avatar
    Anonymous

    ರೇಖಾ ಮೇಡಂ ಗಜಲ್ ಜುಗಲ್ ಬಂದಿ ಸುಂದರವಾಗಿ ಮೂಡಿ ಬಂದಿದೆ.

  2.  Avatar
    Anonymous

    Excellent

  3. Vinay M Avatar
    Vinay M

    ರುಚಿಕಟ್ಟಾದ ಗಜಲ್ ಗಳನ್ನು ಉಣಬಡಿಸಿರುವ ಕವಯತ್ರಿದ್ವಯರಿಗೆ ಹೃತ್ಪೂರ್ವಕ ಧನ್ಯವಾದಗಳು

    1. Rekha Bhat Avatar
      Rekha Bhat

      ತುಂಬಾ ಧನ್ಯವಾದಗಳು ಸರ್..

Leave a Reply

You cannot copy content of this page