ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಥಾಗುಚ್ಛ

ಚೇರ್ಮನ್ ಸೋಮಯ್ಯ

ಯಾರು ಏನೇ ಹೇಳಲಿ ಸೋಮಯ್ಯ ಪಕ್ಷಾತೀತ ರಾಜಕಾರಣಿ. ಅವನಿಗೆ ಪಕ್ಷರಾಜಕಾರಣದಲ್ಲಿ ನಂಬಿಕೆ ಇಲ್ಲ. ಯಾವುದೋ ಪಕ್ಷದವರು ಸೇರಿಸಿಕೊಂಡರೆ ನಂಬಿಕೆ ಬರುತ್ತಿತ್ತೋ ಏನೋ. ಪಾಪ ಇವನದೇನು ತಪ್ಪು. ಇವನ ಮೇಲೆ ವಿಶ್ವಾಸ ಇಡುವ ಅರ್ಹತೆ ಯಾವ ಪಕ್ಷದವರಿಗಿದೆ? ಮತ್ತೊಂದು, ಇವನಿಂದ ಆಗುವ ಲಾಭವಾದರೂ ಏನು?

ಚೇರ್ಮನ್ ಸೋಮಯ್ಯ Read Post »

ಇತರೆ, ದಾರಾವಾಹಿ

ದಾರಾವಾಹಿ ಆವರ್ತನ ಅದ್ಯಾಯ-25 ಸುಮಿತ್ರಮ್ಮನ ಭಯಭಕ್ತಿಯ ಪ್ರಾರ್ಥನೆಗೆ ಒಲಿದು ನಾಗರಹಾವು ಮಾಯವಾದುದು (ವಾಸ್ತವದಲ್ಲಿ  ಆ ಹಾವು ಅವರೆಲ್ಲರ ಕಣ್ಣು ತಪ್ಪಿಸಿ ಹೊರಗೆ ಹೊರಟು ಹೋದುದು) ವಠಾರದವರಿಗೆಲ್ಲ ವಿಸ್ಮಯವನ್ನು ತರಿಸಿತು! ಜೊತೆಗೆ ಸುಮಿತ್ರಮ್ಮನ ಮೇಲೆ ಅವರೆಲ್ಲರಲ್ಲಿ ಆವರೆಗೆ ಇದ್ದಂಥ ಅಸಹನೆ, ಅಸಡ್ಡೆಗಳೂ ತುಸು ಮರೆಯಾಗಿ ಅದರ ಬದಲಿಗೆ ಯರ್ರಾಬಿರ್ರಿ ಗೌರವಾದರಗಳು ಮೂಡಿಬಿಟ್ಟವು. ಇತ್ತ ತಮ್ಮ ಪ್ರಾರ್ಥನೆಗೆ ಬೆಲೆಕೊಟ್ಟು ನಾಗದೇವನು ಹೊರಟು ಹೋದುದು ಸುಮಿತ್ರಮ್ಮನನ್ನೂ ರೋಮಾಂಚನಗೊಳಿಸಿತು. ಅದೇ ಕಾರಣದಿಂದ ಅವರಲ್ಲಿ ನಾಗರಹಾವಿನ ಬಗ್ಗೆ ಸ್ವಲ್ಪ ಧೈರ್ಯವೂ ಹುಟ್ಟಿತು. ಆದರೆ ಲಕ್ಷ್ಮಣಯ್ಯನ ಮನಸ್ಸು ಹಾಳಾಗಿತ್ತು. ಸುಂದರಯ್ಯ ಮತ್ತು ತಮ್ಮ ಹೆಂಡತಿ ಜೋಯಿಸರಲ್ಲಿ ಪ್ರಶ್ನೆಯಿಡುವ ವಿಚಾರ ಎತ್ತಿದಾಗಿನಿಂದ ಅವರು, ಅಯ್ಯೋ, ದೇವರೇ…ಮುಂದೇನಾಗುತ್ತದೋ…? ಎಂಬ ಚಿಂತೆಯಿಂದ ಒದ್ದಾಡುತ್ತಿದ್ದವರು, ಈ ನೆರಕರೆಯವರನ್ನು ನಮ್ಮ ಆಪತ್ಕಾಲದಲ್ಲಿ ಯಾಕಾದರೂ ಕರೆಯುತ್ತೇವೆ? ನಮ್ಮಿಂದಾಗದ ಸಮಸ್ಯೆಯನ್ನು ಅವರಾದರೂ ಬಗೆಹರಿಸಿಕೊಡಲಿ ಎಂದಲ್ಲವಾ? ಆದರೆ ಅವರು ಬಂದು ಮಾಡಿದ್ದಾದರೂ ಏನು? ಆ ಫಟಿಂಗ ಸುಂದರಯ್ಯನಿಗೆ ಯಾಕಾದರೂ ಬೇಕಿತ್ತು ನಾಗದೋಷ ಮಣ್ಣು ಮಸಣ ಅಂತ ಇವಳ ತಲೆಗೆ ಹುಳ ಬಿಡುವ ಕೆಲಸ? ಛೇ! ಛೇ! ಅಧಿಕ ಪ್ರಸಂಗಿ ಮನುಷ್ಯನನ್ನು ತಂದು! ಎಂದು ಬೈದುಕೊಂಡರು. ಮತ್ತೆ ಯೋಚನೆ ಬಂತು. ಅಲ್ಲಾ, ಇನ್ನು ಇವಳಾದರೂ ಸುಮ್ಮನಿರುತ್ತಾಳಾ…? ಇವಳಿಂದ ಇನ್ನೇನೇನು ಅನುಭವಿಸಲಿಕ್ಕುಂಟೋ ಕೃಷ್ಣ, ಕೃಷ್ಣಾ…! ತಮ್ಮ ಕೈಕಾಲು ಗಟ್ಟಿ ಇರುವವರೆಗೆ ತಾವು ಯಾರ ಹಂಗಿಗೂ ಬೀಳಬಾರದು ಅಂತ ಕೇವಲ ಪೆನ್ಷನ್ ಹಣದಿಂದಲೇ ಜೀವನ ನಡೆಸುತ್ತಿರುವುದೂ ಈ ಕತ್ತೆಗೆ ತಿಳಿಯುವುದಿಲ್ಲವಾ? ಕಷ್ಟಪಟ್ಟು ಉಳಿಸಿರುವ ಇನ್ಷೂರ್ ಹಣವನ್ನೂ ಈ ತಲೆ ಕೆಟ್ಟವಳು ಇಂತಹದ್ದೇ ಹರಕೆ ಕರ್ಮಗಳಿಗೆ ಸುರಿದು ಹಾಳು ಮಾಡುತ್ತಾಳೋ ಏನೋ? ಇನ್ನು ಇವಳು ಆ ಜೋಯಿಸನ ಹತ್ತಿರ ಹೋದಳೆಂದರೆ ಅವನು ಸುಮ್ಮನಿರುತ್ತಾನಾ? ಅವನ ಅಪರ ಕರ್ಮಗಳಿಗೆ ತಾವೆಷ್ಟು ಸಾವಿರ ಬಿಚ್ಚಬೇಕೋ…?’ ಎಂದು ತೀವ್ರ ಚಿಂತೆಯಿಂದ ತಮ್ಮ ಅರೆ ಬಕ್ಕ ತಲೆಯನ್ನು ಪರಪರನೇ ಕೆರೆದುಕೊಂಡರು. ಬಳಿಕ ಸುಂದರಯ್ಯನನ್ನೂ ಹೆಂಡತಿಯನ್ನೂ ಕೆಕ್ಕರಿಸಿ ನೋಡಿ ರಪ್ಪನೆ ಒಳಗೆ ನಡೆದುಬಿಟ್ಟರು. ಗಂಡ ನೆರಕರೆಯವರೆದು ತಮ್ಮನ್ನು ಗುರಾಯಿಸಿ ಹೊರಟು ಹೋದುದು ಸುಮಿತ್ರಮ್ಮನಿಗೆ ಕೆಟ್ಟ ಅವಮಾನವೆನಿಸಿ ಅವರನ್ನು ಸರಿಯಾಗಿ ಬೈದು ಬಿಡಬೇಕೆಂದುಕೊಂಡರು. ಆದರೆ ಇಂಥ ಹೊತ್ತಲ್ಲಿ ಕೋಪಿಸಿಕೊಂಡರೆ ನಂತರ ಈ ಮನುಷ್ಯ ಜೋಯಿಸರ ಹತ್ತಿರ ಹೋಗಲು ನಯಾಪೈಸೆ ಬಿಚ್ಚಲಾರರು. ಹಾಗಾಗಿ ಕಾರ್ಯವಾಸಿ ಮುದಿ ಕತ್ತೆ ಕಾಲನ್ನೂ ಹಿಡಿಯಲೇಬೇಕು ಎಂದು ಯೋಚಿಸಿ ತಮ್ಮ ಸಿಟ್ಟನ್ನು ಹತೋಟಿಗೆ ತಂದುಕೊಂಡರು. ಆದರೆ ಸುಂದರಯ್ಯ ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತಮ್ಮ ಕಾರ್ಯಸಿದ್ಧಿಯ ಖುಷಿಯಿಂದ ನಗುತ್ತ ಎಲ್ಲರೊಡನೆ ಹೊರಟು ಹೋದರು. ಅಂದು ರಾತ್ರಿ ಊಟವಾದ ಮೇಲೆ ಸುಮಿತ್ರಮ್ಮ ಗಂಡನ ಸಮೀಪ ಬಂದು ಕುಳಿತುಕೊಂಡು ಎಲೆಯಡಿಕೆ ನೀಡುತ್ತ ತಾವೂ ಒಂದಿಷ್ಟು ಬಾಯಿಗೆ ತುರುಕಿಸಿಕೊಂಡು ಮಾತಿಗೆ ಪೀಠಿಕೆ ಹಾಕಿದರು. ‘ಅಲ್ಲ ಮಾರಾಯ್ರೇ ನಾವು ಇಲ್ಲಿಗೆ ಬಂದು ಎಷ್ಟು ವರ್ಷವಾಯ್ತು ಹೇಳಿ…?’ ಎಂದು ಆತಂಕದಿಂದ ಕೇಳಿದರು. ಲಕ್ಷ್ಮಣಯ್ಯನಿಗೆ ಹೆಂಡತಿಯ ಉದ್ದೇಶ ಅರ್ಥವಾಯಿತು. ಆದರೂ ತೋರಿಸಿಕೊಳ್ಳದೆ, ‘ಯಾಕೆ ಮಾರಾಯ್ತೀ… ನೀನೂ ನನ್ನ ಜೊತೆಯಲ್ಲೇ ಬಂದವಳಲ್ಲವಾ. ನಿನಗೂ ಗೊತ್ತಿರಬೇಕಲ್ವಾ…?’ ಎಂದು ತಿರುಗೇಟು ಕೊಟ್ಟು ಸುಮ್ಮನಾದರು. ‘ಅಯ್ಯೋ, ಹಾಗಲ್ಲ ಮಾರಾಯ್ರೇ. ನಾವಿಲ್ಲಿಗೆ ಬಂದ ನಂತರ ಈ ವಠಾರದೊಳಗೆ ಯಾವತ್ತಾದರೂ ನಾವು ನಾಗರಹಾವನ್ನು ನೋಡಿದ್ದುಂಟಾ ಹೇಳಿ?’ ‘ಇಲ್ವಲ್ಲ ಯಾಕೇ…?’ ‘ಹಾಗಿದ್ದರೆ ಇವತ್ತು ಅಂಥ ಹಾವು ಏಕಾಏಕಿ ನಮ್ಮನೆಯೊಳಗೆಯೇ ಕಾಣಿಸಿಕೊಂಡಿದೆ ಅಂದರೆ ಏನರ್ಥ? ಯೋಚಿಸಿದಿರಾ…?’ ಎಂದು ಅಸಹನೆಯಿಂದ ಗಂಡನ ಮುಖ ನೋಡಿದರು. ‘ಓಹೋ, ಇದಾ ವಿಷಯಾ? ಅರ್ಥವಾಯಿತು ಬಿಡು. ಹೌದು ಅದರ ಬಗ್ಗೆ ನಾನೂ ಯೋಚಿಸಿದೆ. ನಮ್ಮನೆಯೊಳಗೆ ಇಲಿಯೋ ಕಪ್ಪೆಯೋ ಸೇರಿಕೊಂಡಿರಬೇಕು. ಅವುಗಳನ್ನು ಹಿಡಿಯಲು ಆ ಹಾವು ಬಂದಿರಬೇಕು ಅಂತ ಆಮೇಲೆ ಅರ್ಥವಾಯಿತು. ಯಾಕೆ ಇದು ಸರಿಯಾದ ಯೋಚನೆ ಅಲ್ಲವಾ?’ ಎಂದರು. ಆಗ ಸುಮಿತ್ರಮ್ಮನ ಮುಖ ಇನ್ನಷ್ಟು ಬಿಗುವಾಯಿತು. ಅದನ್ನು ಗಮನಿಸಿದ ಲಕ್ಷ್ಮಣಯ್ಯ, ‘ಅಲ್ಲ ಮಾರಾಯ್ತೀ ಹಾವು ಬಂದೂ ಆಯ್ತು. ನಿನ್ನ ಪ್ರಾರ್ಥನೆಗೆ ಓಗೊಟ್ಟು ಹೊರಗೆ ಹೋಗಿಯೂ ಆಯ್ತು. ಆದರೆ ನಿನ್ನ ತಲೆಯೊಳಗೆ ಹೊಕ್ಕಿರುವ ಹಾವಿನ್ನೂ ನಿನ್ನನ್ನು ಬಿಟ್ಟು ಹೋಗಲಿಲ್ಲವಲ್ಲ…!’ ಎಂದು ನಗುತ್ತ ಅಂದವರು, ‘ಆ ವಿಷಯವನ್ನು ಅಷ್ಟೊಂದು ದೊಡ್ಡದು ಮಾಡಿ ಆಲೋಚಿಸುವ ಅಗತ್ಯ ಉಂಟಾ ಹೇಳು? ಹಾವುಗಳ ಆಹಾರದ ಜೀವಿಗಳು ಇದ್ದರೆ ಮಾತ್ರ ಅವು ಮನೆಯೊಳಗೆ ಬರುತ್ತವೆ ಅಂತ ನನ್ನ ಸ್ನೇಹಿತ ಶ್ರೀಪತಿ ಬೆಳಿಗ್ಗೆನೇ ಹೇಳಿದ್ದ. ನೀನು ಮೊದಲು ಮನೆಯನ್ನು ಸ್ವಚ್ಛವಾಗಿಟ್ಟುಕೋ. ಆಮೇಲೆ ಯಾವ ಹಾವು ಬರುತ್ತದೆ ಅಂತ ನೋಡುವ. ಯಾರೋ ಬುದ್ಧಿ ಕೆಟ್ಟವರು ಏನೇನೋ ಕಥೆ ಕಟ್ಟಿ ಹೇಳುತ್ತಾರೆಂದರೆ ನೀನೂ ಅದನ್ನೆಲ್ಲ ನಂಬಿ ಮಂಡೆ ಹಾಳು ಮಾಡಿಕೊಳ್ಳುವುದು ಎಷ್ಟು ಸರಿ ಹೇಳು?’ ಎಂದು ಬೇಸರದಿಂದ ಹೇಳಿದರು.    ಸುಮಿತ್ರಮ್ಮನಿಗೆ ತಟ್ಟನೆ ರೇಗಿತು. ‘ನಿಮ್ಮ ಮಂಡೆ! ಇಲಿ, ಕಪ್ಪೆಗಳು ಇರಲು ಈ ಮನೆಯೇನು ಮಸಣದಗುಡ್ಡೆಯ ಡಂಪಿಂಗ್‍ಯಾರ್ಡ್ ಅಂತ ತಿಳಿದುಕೊಂಡ್ರಾ…? ನಿಮ್ಮ ಶ್ರೀಪತಿಗೆ ಮೊದಲೇ ತಲೆಕೆಟ್ಟಿದೆ. ಹಾಗಾಗಿಯೇ ಅವನು ಹೆಂಡತಿ ಮಕ್ಕಳನ್ನು ಓಡಿಸಿ ಒಂಟಿ ಭೂತದಂತೆ ಬದುಕುತ್ತಿರುವುದು. ನೀವು ಅವನ ಮಾತುಕಟ್ಟಿಕೊಂಡು ನನಗೆ ಬುದ್ಧಿ ಹೇಳಲು ಬರಬೇಡಿ ಗೊತ್ತಾಯಿತಾ!’ ಎಂದು ಸಿಡುಕಿದರು. ಆಗ ಲಕ್ಷ್ಮಣಯ್ಯ, ‘ಅಯ್ಯೋ ದೇವರೇ…ಇವಳಿಗೆ ಬುದ್ಧಿ ಹೇಳುವುದು ವ್ಯರ್ಥ!’ ಎಂದು ಸುಮ್ಮನಾದರು. ಅದನ್ನು ಗಮನಿಸಿದ ಸುಮಿತ್ರಮ್ಮ ಸೌಮ್ಯವಾಗಿ, ‘ಸ್ವಲ್ಪ ಸರಿಯಾಗಿ ಯೋಚಿಸಿ ನೋಡಿ ಮಾರಾಯ್ರೇ. ಆಗ ನಿಮಗೂ ಸುಂದರಯ್ಯನ ಮಾತು ಸತ್ಯ ಅಂತ ಅನ್ನಿಸುತ್ತದೆ. ನಮಗೇ ಗೊತ್ತಿರದ ಯಾವುದೋ ದೋಷ, ಸಮಸ್ಯೆ ಇದ್ದರೆ ಮಾತ್ರ ನಾಗರಹಾವು ಕಾಣಿಸಿಕೊಳ್ಳುವುದು ಅಂತ ನಮ್ಮ ಅಜ್ಜಿ ಪಿಜ್ಜಂದಿರ ಕಾಲದಿಂದಲೂ ನಾವು ನಂಬಿಕೊಂಡು ಬಂದವರಲ್ಲವಾ! ಆ ನಂಬಿಕೆಯನ್ನು ಅಷ್ಟುಬೇಗ ಬಿಟ್ಟು ಬಿಡಲು ನಿಮ್ಮಿಂದಾಗಬಹುದು. ನನ್ನಿಂದ ಸಾಧ್ಯವಿಲ್ಲ. ನಾವು ಹೆಂಗಸರು ನಿಮ್ಮಷ್ಟು ಗಟ್ಟಿ ಮನಸ್ಸಿನವರಲ್ಲ…ಹಾಗಾಗಿ ಅದು ಹೌದೋ ಅಲ್ಲವೋ ಅಂತ ತಿಳಿದುಕೊಳ್ಳುವುದಕ್ಕೇ ನಾಳೆ ಬೆಳಿಗ್ಗೆ ಜೋಯಿಸರ ಹತ್ತಿರ ಹೋಗುತ್ತಿದ್ದೇನೆ. ನೀವು ಒಂದೈನ್ನೂರು ರೂಪಾಯಿ ಕೊಡುತ್ತೀರಿ ಅಷ್ಟೆ. ಬೇರೇನೂ ಮಾತಾಡಬೇಡಿ!’ ಎಂದು ಗದರಿಸುವ ಧ್ವನಿಯಲ್ಲೇ ಆಜ್ಞಾಪಿಸಿದರು.    ಅಷ್ಟು ಕೇಳಿದ ಲಕ್ಷ್ಮಣಯ್ಯನ ಹೊಟ್ಟೆ ಚುರುಕ್ಕೆಂದಿತು. ‘ಅಲ್ಲ ಮಾರಾಯ್ತೀ, ನೀನಿಷ್ಟೊಂದು ಹೆದರು ಪುಕ್ಕೆಲಿ ಆದದ್ದು ಯಾವಾಗ? ಹಿಂದೆಲ್ಲಾ ಎಂಥೆಂಥ ಸಮಸ್ಯೆಗಳು ಬಂದರೂ ಡೋಂಟ್ ಕೇರ್! ಅನ್ನುತ್ತಿದ್ದವಳು ಈಗ ವಯಸ್ಸಾಗುತ್ತ ಬಂದಂತೆ ಏನೇನೋ ಯೋಚಿಸುತ್ತ, ಆ ಮುಠ್ಠಾಳ ಸುಂದರಯ್ಯನ ಮಾತನ್ನೂ ಕಟ್ಟಿಕೊಂಡು ನಿನ್ನ ನೆಮ್ಮದಿ ಕೆಡಿಸಿಕೊಂಡಿರುವುದಲ್ಲದೇ ನನ್ನ ಹಣವನ್ನೂ ಪೋಲು ಮಾಡುವುದು ಸರಿಯಾ ಹೇಳು…?’ ಎಂದು ಹತಾಶೆಯಿಂದ ಅಂದವರು, ‘ಸಾಯುವತನಕ ಯಾರ ಹಂಗಿನಲ್ಲೂ ಬೀಳದೆ ಬದುಕಬೇಕೆಂದಿರುವ ನನ್ನ ಸ್ವಾಭಿಮಾನವನ್ನು ಹಾಳು ಮಾಡಬೇಡ ಮಾರಾಯ್ತೀ…ಒಮ್ಮೆ ತಾಳ್ಮೆಯಿಂದ ಯೋಚಿಸಿನೋಡು, ನೀನು ಹೇಳುವಂತೆ ನಮ್ಮಲ್ಲಿ ಇಲಿ, ಕಪ್ಪೆಗಳಿಲ್ಲದಿರಬಹುದು. ಆದರೆ ಹೊರಗೆ ಬೇರೆ ಯಾವುದೋ ಪ್ರಾಣಿಗೆ ಹೆದರಿಯೂ ಆ ಹಾವು ಒಳಗೆ ಓಡಿ ಬಂದಿರಬಹುದಲ್ಲಾ? ಸುಮ್ಮನೆ ಏನೇನೋ ಚಿಂತಿಸಿ ಕೊರಗಬೇಡ. ಬಾ ಹೋಗಿ ಆರಾಮವಾಗಿ ಮಲಗಿಕೊಳ್ಳುವ!’ ಎಂದು ಮೃದುವಾಗಿ ಕರೆದರು.    ಸುಮಿತ್ರಮ್ಮನಿಗೆ ಮರಳಿ ರೇಗಿತು, ‘ಅಂದರೆ ನಿಮ್ಮ ಈ ಉಪದೇಶದ ಅರ್ಥ ನಾಳೆ ನೀವು ಹಣ ಕೊಡುವುದಿಲ್ಲವೆಂದಾ…? ಸರಿ. ಆಯ್ತು ಮಾರಾಯ್ರೇ. ನೀವೇನಾದರೂ ಮಾಡಿಕೊಳ್ಳಿ. ಆದರೆ ಮುಂದೇನಾದರೂ ಹೆಚ್ಚುಕಮ್ಮಿಯಾದರೆ ಅದಕ್ಕೆಲ್ಲ ನೀವೇ ಹೊಣೆಯಾಗುತ್ತೀರಿ ಎಂಬುದನ್ನೂ ನೆನಪಿಟ್ಟುಕೊಳ್ಳಿ ಅಷ್ಟೇ!’ ಎಂದು ಸಿಡುಕಿ ಮುಖ ತಿರುವಿ ಕುಳಿತುಬಿಟ್ಟರು. ‘ಆಯ್ತು. ಆಯ್ತು. ಅದೇನಾಗುತ್ತದೋ ನಾನೇ ನೋಡಿಕೊಳ್ಳುತ್ತೇನೆ. ಆದರೆ ಇನ್ನು ಮುಂದೆ ಇಂಥ ಕಳಪೆ ವಿಷಯಗಳನ್ನೆಲ್ಲ ನನ್ನ ತಲೆಗೆ ಕಟ್ಟುವುದನ್ನು ನೀನೂ ನಿಲ್ಲಿಸಿಬಿಡಬೇಕು ಅಷ್ಟೇ!’ ಎಂದು ಲಕ್ಷ್ಮಣಯ್ಯನೂ ಒರಟಾಗಿ ಹೇಳಿ ಎದ್ದು ಹೋಗಿ ಮಲಗಿಕೊಂಡರು.                                                            *** ಮರುದಿನ ಬೆಳಿಗ್ಗೆ ಸುಮಿತ್ರಮ್ಮ ಎಂದಿನಂತೆ ಬೇಗನೆದ್ದವರು, ಎದುರಿನ ಗುಡ್ಡೆಯತ್ತ ಹೋಗಿ ಗೋಮಯ ತಂದು ನಿನ್ನೆ ನೆರೆಕರೆಯವರು ಹೊಕ್ಕಿದ್ದ ಕೋಣೆಗಳಿಗೆಲ್ಲ ಸಿಂಪಡಿಸಿ ಅಶುದ್ಧ ನಿವಾರಿಸಿಕೊಂಡರು. ನಂತರ ಉಪಾಹಾರ ತಯಾರಿಸಿ, ಕಾಫಿ ಮಾಡಿ ಗಂಡನಿಗೆ ಕೊಟ್ಟು ತಾವೂ ಸೇವಿಸಿದರು. ಅಷ್ಟರಲ್ಲಿ ಮರಳಿ ಅವರನ್ನು ಹಾವಿನ ಚಿಂತೆ ಕಾಡಿತು.  ಅಯ್ಯೋ ದೇವರೇ! ಆ ಹಾವು ಮತ್ತೆ ಬಂದರೇನಪ್ಪಾ ಮಾಡುವುದು! ಎಂದುಕೊಂಡು ಭಯಪಟ್ಟರು. ಅದೇ ಹೊತ್ತಿಗೆ ಲಕ್ಷ್ಮಣಯ್ಯನೂ ಪೇಟೆಗೆ ಹೊರಡುತ್ತಿದ್ದರು. ಅವರನ್ನು ಕಂಡ ಸುಮಿತ್ರಮ್ಮನಿಗೆ ಸಿಟ್ಟು ಬಂತು. ‘ಏನ್ರೀ, ಎಲ್ಲಿಗೆ ಹೊರಟಿದ್ದೀರೀ…?’ ಎಂದರು ಸಿಡುಕಿನಿಂದ. ‘ಪೇಟೆಯಲ್ಲಿ ಸ್ಪಲ್ಪ ಕೆಲಸವಿದೆ ಮಾರಾಯ್ತೀ…!’ ಎಂದು ಲಕ್ಷ್ಮಣಯ್ಯ ಹೊರಡುವ ಗಡಿಬಿಡಿಯಲ್ಲೇ ಉತ್ತರಿಸಿದರು. ‘ಕೆಲಸವಿದ್ದರೆ ಅಲ್ಲೇ ಇರಲಿ. ಇವತ್ತು ನೀವು ಎಲ್ಲಿಗೂ ಹೋಗುವುದು ಬೇಡ. ನಿನ್ನೆ ನೀವೇ ಹೇಳಿದಿರಲ್ಲ, ಮನೆಯೊಳಗೆ ಇಲಿ, ಕಪ್ಪೆಗಳಿರಬಹುದು ಅಂತ. ಇದ್ದರೆ ನನ್ನೊಬ್ಬಳಿಂದಲೇ ಅವುಗಳನ್ನು ಹಿಡಿಯಲು ಆಗಲಿಕ್ಕಿಲ್ಲ. ಇಬ್ಬರೂ ಸೇರಿಯೇ ಹಿಡಿದು ಹೊರಗೆ ಹಾಕುವ. ಸ್ವಲ್ಪ ಸಹಾಯ ಮಾಡಿ!’ ಎಂದು ಒರಟಾಗಿ ಆಜ್ಞಾಪಿಸಿದರು. ಅಷ್ಟು ಕೇಳಿದ ಲಕ್ಷ್ಮಣಯ್ಯನಿಗೆ ಒಳಗೊಳಗೇ ನಗು ಬಂತು. ‘ಹ್ಞೂಂ, ಆಯ್ತು ಮಾರಾಯ್ತೀ…’ ಎಂದುತ್ತರಿಸಿ ಉದಾಸೀನದಿಂದ ಕುಳಿತುಕೊಂಡರು. ಸುಮಿತ್ರಮ್ಮ, ಗಂಡನೊಂದಿಗೆ ಮನೆಯ ಮೂಲೆ ಮೂಲೆಗಳನ್ನು ಗುಡಿಸಿ ಒರೆಸಿ ಹಳೆಯ ಸಾಮಾನುಗಳನ್ನೆಲ್ಲ ಹೊತ್ತೊಯ್ದು ಹಿತ್ತಲಿನ ಶೆಡ್ಡಿನೊಳಗೆಸೆದು ಬಂದು ಸ್ನಾನ ಮಾಡಿದ ನಂತರ ನೆಮ್ಮದಿಯ ಉಸಿರುಬಿಟ್ಟರು. ಅಷ್ಟಾಗುವ ಹೊತ್ತಿಗೆ ಮಧ್ಯಾಹ್ನ ಸಮೀಪಿಸಿತು. ಆದ್ದರಿಂದ ಹಿಂದಿನ ರಾತ್ರಿಯ ಅಡುಗೆಯನ್ನೇ ಬಿಸಿ ಮಾಡಿ ಇಬ್ಬರೂ ಉಂಡು ಒಂದು ಸುತ್ತು ನಿದ್ದೆ ತೆಗೆದರು. ಸುಮಿತ್ರಮ್ಮ ಎದ್ದು ಗಂಡನಿಗೆ ಕಾಫಿ ಮಾಡಿ ಕೊಟ್ಟು ಹಿಂದಿನ ದಿನ ನಾಗರಹಾವಿನ ರಂಪಾಟದ ಕಥೆಯಿಂದಾಗಿ ಮೂಲೆ ಸೇರಿದ್ದ ಬಟ್ಟೆಬರೆಗಳನ್ನು ಗಂಡನಿಂದಲೇ ಕೊಡವಿ ಕೊಡವಿ ಪರೀಕ್ಷಿಸಿ ಹಾವಿಲ್ಲ ಎಂದು ಖಚಿತವಾದ ನಂತರ ಅವನ್ನೆಲ್ಲ ಒಗೆದು ಹಾಕಿದರು. ಅಷ್ಟೊತ್ತಿಗೆ ಸಂಜೆಯಾಯಿತು. ಕಾಲು ಸೇರಕ್ಕಿಯ ಅನ್ನ ಮಾಡಿಟ್ಟು ಅದಕ್ಕೊಂದು ಮೆಂತೆ ಸಾರು ಮಾಡುವ ಎಂದುಕೊಂಡು ತಯಾರಿ ನಡೆಸಿದರು.    ಗ್ಯಾಸಿನ ಒಂದು ಒಲೆಯಲ್ಲಿ ಸಾರು ಕುದಿಯುತ್ತಿತ್ತು. ಇನ್ನೊಂದರ ಮಂದಾಗ್ನಿಯಲ್ಲಿ ಸಾರಿಗೆ ಹುಯ್ಯುವ ಒಗ್ಗರಣೆಯೆಣ್ಣೆ ಬಿಸಿಯೇರುತ್ತಿತ್ತು. ಸುಮಿತ್ರಮ್ಮ ಅದಕ್ಕೆ ಸಾಸಿವೆ ಸುರಿದು ಸಿಡಿದ ನಂತರ ಕರಿಬೇವಿನ ಸೊಪ್ಪು, ಬೆಳ್ಳುಳ್ಳಿ, ಉದ್ದು ಮತ್ತು ಒಣಮೆಣಸಿನ ಚೂರುಗಳನ್ನು ಸುರುವಿದರು. ಸ್ವಲ್ಪ ಹೊತ್ತು ತಿರುವಿದ ನಂತರ ಇನ್ನೇನು ಸೌಟನ್ನೆತ್ತಿ ಸಾರಿನ ಪಾತ್ರೆಗೆ ಹುಯ್ಯಬೇಕು ಎಂಬಷ್ಟರಲ್ಲಿ ಒಗ್ಗರಣೆಯಂಥದ್ದೇ ಶಬ್ದವೊಂದು ಸುಮಿತ್ರಮ್ಮನ ಪಕ್ಕದಲ್ಲೇ ಗಟ್ಟಿಯಾಗಿ ಹೊಮ್ಮಿತು! ಅವರು ಬೆಚ್ಚಿಬಿದ್ದರು. ಶಬ್ದವು ಕಾಲ ಬುಡದಲ್ಲೇ ಬಂದಿದ್ದಲ್ಲವಾ ಎಂದುಕೊಂಡವರು, ಆ ಹೆದರಿಕೆಯ ನಡುವೆಯೂ ಕೈಯಲ್ಲಿದ್ದ ಸೌಟನ್ನು ರಪ್ಪನೆ ಸಾರಿನ ಪಾತ್ರೆಗೆಸೆದು ಮಾರು ದೂರ ನೆಗೆದು ನಿಂತರು. ಅದು ಜುಂಯ್ಯೀ…! ಎಂದು ಅರಚಿ ಸ್ತಬ್ಧವಾಯಿತು. ಆದರೆ ಕಾಲ ಹತ್ತಿರದಿಂದ ಬರುತ್ತಿದ್ದ ಶಬ್ದವು ಇನ್ನೂ ಜೋರಾಗಿ ಬಂತು. ಹೆದರುತ್ತ ಅತ್ತ ಇಣುಕಿದರು. ಆದರೆ ಅಲ್ಲಿ ಉಪ್ಪಿನಕಾಯಿಯ ಜಾಡಿಗಳ ಎಡೆಯಲ್ಲಿ ನಿನ್ನೆಯ ಫಣಿರಾಜನು ಇವತ್ತೂ ಅದೇ ಭಂಗಿಯಲ್ಲಿ ನಿಂತುಕೊಂಡು ಬುಸುಗುಟ್ಟುತ್ತಿದ್ದ! ಸುಮಿತ್ರಮ್ಮನ ಹೃದಯ ನಡುಗಿಬಿಟ್ಟಿತು. ‘ಅಯ್ಯಯ್ಯೋ ದೇವರೇ…ಹಾವು, ಹಾವು…!’ ಎಂದು ಕೂಗುತ್ತ ಹೊರಗೆ ಓಡಿದರು. ಅದೇ ಹೊತ್ತಿಗೆ ಶೌಚಕ್ಕೆ ಹೋಗಿ ಪಂಚೆ ಸುತ್ತಿಕೊಳ್ಳುತ್ತ ಬರುತ್ತಿದ್ದ ಲಕ್ಷ್ಮಣಯ್ಯ ಹೆಂಡತಿಯ ಬೊಬ್ಬೆ ಕೇಳಿ ಅದುರಿಬಿದ್ದು ಪಂಚೆಯನ್ನು ಅರ್ಧಂಬರ್ಧ ಸುತ್ತಿಕೊಂಡು ಹೊರಗೆ ಧಾವಿಸಿದರು. ಸುಮಿತ್ರಮ್ಮ ಇನ್ನೇನು ವರಾಂಡ ದಾಟಿ ಅಂಗಳಕ್ಕೆ ಜಿಗಿಯಬೇಕು ಎಂಬಷ್ಟರಲ್ಲಿ ಗಬಕ್ಕನೇ ಅವರ ರಟ್ಟೆ ಹಿಡಿದು ನಿಲ್ಲಿಸಿ, ‘ಹೇ, ಹೇ, ಎಲ್ಲಿಗೆ ಓಡುತ್ತಿ ಮಾರಾಯ್ತಿ… ಹೆದರಬೇಡ. ನಿಲ್ಲು ನಿಲ್ಲು! ಎಲ್ಲಿದೆ ಹಾವು…? ನೋಡುವ ಬಾ!’ ಎಂದು ಸಾಂತ್ವನಿಸಿದರು. ಆಗ ಸುಮಿತ್ರಮ್ಮ ಸ್ವಲ್ಪ ಹತೋಟಿಗೆ ಬಂದರು.   

Read Post »

You cannot copy content of this page

Scroll to Top