ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮೊದಲ ಮಳೆಯ ಜಿನುಗು

ದೀಪ್ತಿ ಭದ್ರಾವತಿ

Raindrop, Drip, Rain, Water, Wet

: ಹೀಗೇ ಆ ದಿನ ಜೋರುಮಳೆ. ಮುತ್ತಿನ ತೇರೊಂದು ತಲೆಯಾಡಿಸಿ ನಕ್ಕ ಹಾಗೆ ಹನಿಗಳು ಪಟಪಟನೆ ಸುರಿಯುತ್ತಿದ್ದವು. ಆಗ ತಾನೆ ಕಣ್ಣು ಬಿಟ್ಟ ಮೊಳಕೆಗಳಲ್ಲಿ ಜಗತ್ತು ನೋಡುವ ತವಕ ತುಸು ಹೆಚ್ಚಾಗಿಯೇ ಕಾಣಿಸುತ್ತಿತ್ತು. ಸೋತು ನಿಂತ ಮರದ ಗೆಲ್ಲುಗಳಲ್ಲಿ ಹಸಿರು ತನ್ನ ಅಸ್ತಿತ್ವ ಚಿಮ್ಮಿಸುತ್ತಿತ್ತು. ಕಣ್ಣು ಹಾಯಿಸಿದಲೆಲ್ಲ ಎದ್ದ ನೀರ ಅಲೆಗಳ ಜಾಗರ. ಆಗಲೇ ಬಂದದ್ದು. ಹಾಗೆ ಬಂದವನು ಮತ್ತೆ ಅದ್ಯಾವ ನದಿಯ ಅದ್ಯಾವ ತಿರುವಿನಲ್ಲಿ ಮರೆಯಾಗಿದ್ದನೋ ಗೊತ್ತಿಲ್ಲ. ಸೆಳವು ಹಾಗೆಯೇ ಇತ್ತು. ಸುಳಿಯು ಸುತ್ತುತ್ತಲೇ ಇತ್ತು .ಹರಿವು ನಿಂತಿರಲಿಲ್ಲ. ಹೊಸ ಊರು ಹೊಸ ಕೇರಿ ಹೊಸ ಜನ ಹೊಸ ಬಂಧ ಎಲ್ಲವೂ ಹೊಸದಾಗಿ ಕಂಡು ಕಾಲಚಕ್ರದ ಅಡಿಯಲ್ಲಿ ಅದು ಹಳೆಯ ಅಂಗಿ ಧರಿಸಿ ಬದುಕು ಇದು ಇಷ್ಟೆ ಎಂದುಕೊಳ್ಳುವ ಹೊತ್ತಿಗೆ ಅವನ ಕನಸೊಂದು ಸರಕ್ಕೆಂದು ಆಕೆಯ ಕಣ್ಣಿಗಿಳಿದು ಮನಸ್ಸು ಮಾಗಿ ಮಾಗಿ ಮತ್ತೆ ಹನಿಯತೊಡಗಿದೆ. ಇರುಳು ಕವಿದ ಹೊತ್ತಿಗೆ ಸಣ್ಣ ಮಿಣುಕು ಹುಳವೊಂದು ಕಣ್ಣೆವೆಗಳ ಚುಂಬಿಸಿ ಓಡುವ ತೆರದಿ ನೋಟದ ಕಡಲಿನೊಳಗೆ ಎಂದೋ ಲೀನವಾದವನ ನಿನಾದವೊಂದು ಬೆರಳ ರಿಂಗಣಗಳಲ್ಲಿ ಮೊಳಕೆ ಒಡೆದಿದೆ. ರಥಬೀದಿಯ ಇಕ್ಕೆಲಗಳಲ್ಲಿ ಹರೆಯದ ಹುರುಪೊಂದು ಸರಾಗನೆ ಹರಿವಾಗ ಎದುರಾದವನ ಹೆಸರೇನು. ಹೆಸರು ಕೇಳುವುದಕ್ಕೇನು ಉಳಿದಿತ್ತು. ಜಾತ್ರೆಯ ತೇರು ನೋಡುವುದ ಬಿಟ್ಟು ಹೀಗೆ ಕಣ್ಣು ತಪ್ಪಿಸಿ ಅವ, ಆಕೆಯನ್ನು ನೋಡುತ್ತ ನಡೆವಾಗಲೆಲ್ಲ ತನ್ನ ಹೊತ್ತೊಯ್ಯಲು ಬಂದ ಅನಾಮಿಕ ನಗರದ ಮಾಂತ್ರಿಕ ಇವನೇ ಎಂದು ಆಕೆಗೆ ಅನ್ನಿಸಿತ್ತು. ಬಾಳೆ ಸುರುಳಿಯಂತಹ ಅವನ ಕೃಷ್ಣ ಮುಂಗುರುಳು, ಗಂಭೀರ ಘನ ಗಂಭೀರ ಮುಖಭಾವ. ಮಾತಾಡಿದರೆ ಎಲ್ಲಿ ಮೌನ ಮಾತು ಕಲಿತುಬಿಡುತ್ತದೆಯೋ ಎನ್ನುವ ಸಣ್ಣ ಅಹಂಕಾರ ನೀಳಕಾಯ. ಯಾರೂ ಕೂಡ ಸುಖಾಸುಮ್ಮನೆ ಪ್ರೀತಿಸಿ ಬಿಡಬಹುದಾದಷ್ಟು ಆಕರ‍್ಷಣೆ.ಬಿಟ್ಟೂ ಬಿಡದೆ ಕಾಡುವ ಮಲೆನಾಡ ಅದ್ಯಾವ ಮಳೆಯ ಹನಿಗಳ ನಡುವೆ ಆಕೆ ಅವನ ಕಣ್ಣಿಗೆ ಬಿದ್ದಳೋ ಖುದ್ದು ಅವಳಿಗೇ ಗೊತ್ತಿಲ್ಲ. ಆದರೆ ಅವನ ಸೆಳೆಸೆಳೆದು ನೋಡುವ ಭಂಗಿಗೆ ಪಾರಿಜಾತದ ಹೂವೊಂದು ಹಕ್ಕಿಯ ರೆಕ್ಕೆ ಸಿಕ್ಕಿಸಿ ನೀಲಾಗಸದಲ್ಲಿ ಸುಖಾಸುಮ್ಮನೆ ನವಿರು ಪಾದಗಳ ಊರಿಯೇ ಬಿಟ್ಟಿತ್ತು. ಎದುರಿನವರು “ಸಾಕು ಬಾಯಿ ಮುಚ್ಚು ಮಹರಾಯತಿ” ಎನ್ನುವಷ್ಟು ಮಾತಾಡುತ್ತಿದ್ದ, ಕಾರಣವೇ ಇಲ್ಲದೆ ವಿಪರೀತ ನಕ್ಕು “ಥೇಟ್‌ ಗಂಡುಬೀರಿ” ಎನ್ನುವ ಭಯಂಕರ ಪ್ರಬಾವಳಿಗಳ ಹೊತ್ತ ಆಕೆ, ಮಾತಾಡಿದರೆ ಎಲ್ಲಿ ಮಕರಂದ ಬಾಯಿ ತೆರೆದು ಕೂತುಬಿಡುತ್ತದೆಯೋ

ಎನ್ನುವಷ್ಟು ಹದ ಮಣ್ಣಿನ ದನಿಯ ಅವನು ಕಾರಣವೇ ಇಲ್ಲದೆ ಅವರವರ ನೆಲೆಯಲ್ಲಿ ಒಬ್ಬರು ಮತ್ತೊಬ್ಬರನ್ನು ಹುಡುಕಿಕೊಳ್ಳತೊಡಗಿದ್ದರು. ಜೋರು ಹನಿಗಳು ಗೋಲಿ ಬುಗುರಿಯಾಡುತ್ತ ತರಲೆ ತಾಪತ್ರಯಗಳ ಒಡ್ಡುತ್ತ ಮನೆಯ ವರಾಂಡವೆಲ್ಲ ಒದ್ದೆಯಾಗಿಇ ದ್ದವರೆಲ್ಲ ತಲೆಕೆಟ್ಟಿದೆ ಈ ಹುಡುಗಿಗೆ ಎಂದು ಬೈದು ಗೋಣಿತಾಟು ಹಾಸುವಾಗಲೂ ಆಕೆ ಕಿಟಕಿ ತೆರೆದು ಎದುರು ರಸ್ತೆಯ ನೋಡುತ್ತಲೇ ಇರುತ್ತಿದ್ದಳು.ಸುಳಿ ಸುಳಿವ ಗಾಳಿಯ ನಡುವೆ ತೂರಿ ಬರುವ ಹನಿಗಳ ಮಧ್ಯದಿಂದ ಯಾವುದೇ ಗಳಿಗೆಯಲ್ಲಿ ಕೊಡೆ ಹಿಡಿದು ಬರಬಹುದಾದ ಅವನ ಹೆಜ್ಜೆಯ ಸದ್ದೊಂದು ಎದೆಯ ಮಿಡಿತದೊಳಗೆ ಹೆಕ್ಕಿಕೊಳ್ಳುವ ಹುಕಿ ಅವಳದ್ದು. ಅವನೂ ಹಾಗೆಯೇ ಕಾಲುಗಳಲ್ಲಿ ಅದ್ಯಾವ ಋತುಮಾನಗಳ ಸಿಕ್ಕಿಸಿಕೊಂಡಿದ್ದನೊ ಅಲೆಮಾರಿಯ ತೆರದಿ ಅಲೆಯುತ್ತಿದ್ದ. “ಹೇ ಅವನಾ ಸೊಟ್ಟ ಮೂತಿ ಸುಂದರ” ಎಂದು ಅವಳು ಬೈದದ್ದು ಯಾವಾಗ ಕೇಳಿಸಿಕೊಂಡಿದ್ದನೋಜೇನು ನೋಣ ಬೆನ್ನು ಹತ್ತಿದಂತೆ ಜಿಗುಟಾಗಿ ರೊಚ್ಚಿಗೆದ್ದಿದ್ದ. ಆಕೆ ಹೋಗುವ ಅಂಗಡಿರ ಸ್ತೆಯ ಬಳಿಯಲ್ಲೆಲ್ಲ ಏನನ್ನೋ ಹುಡುಕುವವನಂತೆ ನಿಂತು ದುರುಗುಟ್ಟಿ ನೋಡುತ್ತಿದ್ದ. ಅವಳ ಅಗಲ ಕಣ್ಣುಗಳ ಅರಳಿಸಿ ನೋಡದವರಂತೆ ನಟಿಸುವಾಗಲೆಲ್ಲ. ಇವ ಮನದಲ್ಲಿಯೇ ನಕ್ಕು ಮರುಳಾಗುತ್ತಿದ್ದ. ಆಗೆಲ್ಲ ಅವನಿಗೆ ತನ್ನ ಸುಡುವ ಬೆಳಕ ತೊರೆ ಇವಳೇ ಅನ್ನಿಸಿದ್ದು ಸುಳ್ಳಲ್ಲ. ಕಳ್ಳರಂತೆ ಮಳ್ಳರಂತೆ ಮಾತೇ ಆಡದೆ ಮತ್ತೆ ಮತ್ತೆ ಹಿಂತಿರುಗಿ ನೋಡುವ ಅವರುಗಳ ಪರಿಗೆ ಮೊದಲ ಮಳೆಯಲ್ಲಿ ಹೂ ನೆನೆದದ್ದು ಸುಳ್ಳಲ್ಲ.ಅವಳು ಬೇಸಿಗೆಯ ರಜೆಗಳಲ್ಲಿ ನೆಂಟರ ಮನೆಗೆ ದೌಡಾಯಿಸಿ ಓಡುತ್ತಿದ್ದದ್ದು ಅವನ ಸಲುವಾಗಿಯೇ, ಅವ ಕಾತರಿಸಿ ಕಾಯುತ್ತಿದ್ದನೋ ಇಲ್ಲವೋ ಗೊತ್ತಿಲ್ಲ. ಪೋನು ಗೀನು ಏನೊಂದು ಇಲ್ಲದ ಕಾಲದಲ್ಲಿಯೂ ಅವನಿಗೆ ಆಕೆ ಬರುತ್ತಿದ್ದುದರ ಸುಳಿವು ಅದು ಹೇಗೆ ಸಿಗುತ್ತಿತ್ತೋ ಗೊತ್ತಿಲ್ಲ. ಆಕೆ ತುಂಗೆಯ ತಟದಲ್ಲಿ ಕೂತು ಎದುರು ರಾಮ ಮಂಟಪ ನೋಡುತ್ತ ಕಾಯುವಾಗಲೆಲ್ಲ ಅವ ಎದುರು ನಿಲ್ಲುತ್ತಿದ್ದ. ಮತ್ತದೇ ಕಣ್ಣ ಸಲಿಗೆಗಳ ವಿನಿಮಯ. ಎಂದು ಬಂದೆ? ಎಂದು ಅವ ಕೇಳಿದಂತೆಯೂ. “ಹೋಗಿದ್ದು ಯಾವಾಗ?” ಎಂದು ಅವಳು ಮರು ಪ್ರಶ್ನಿಸಿದಂತೆಯೂ..

ಆ ದಿನ ಹೀಗೆ ಜೋರು ಮಳೆ ಅವ ಸೀದಾ ಸೀದ ಆಕೆಯ ಎದುರು ಮನೆಯಲ್ಲಿ ಪ್ರತ್ಯಕ್ಷನಾಗಿ ಬಿಟ್ಟಿದ್ದ. ಆವರೆಗೂ ಪೇಟೆ ಬೀದಿಯಲ್ಲಿ, ಬಳೆ ಅಂಗಡಿಗಳಲ್ಲಿ, ಹೂವಿನ ಮಾರ‍್ಕೆಟ್ಟುಗಳಲ್ಲಿ ರುರು ಪ್ರಮದ್ವರೆಯರಂತೆ ಅಲೆದಾಡಿಕೊಂಡಿದ್ದವರು  ಈಗ ಪರ‍್ಮನೆಂಟ್ ನೋಟದ ಗಾಳಗಳಲ್ಲಿ ಸಿಲುಕಿಕೊಂಡಿದ್ದರು. ನೇರ ನೇರ ಬಾಗಿಲು ಹಗಲು ಮೂರು ಹೊತ್ತು ಬಾಗಿಲ ಬಳಿಯಲ್ಲಿಯೇ ನೆಟ್ಟ ಅವರಿಬ್ಬರ ನೋಟಗಳು. ತಾಕಲಾಟಗಳು. ಒಂದೂ ಮಾತಾಡದೆ ಸಾವಿರ ಸಾವಿರ ಹರಟುತ್ತಿದ್ದ ಬೆರಳುಗಳು. ಅವ ಕೊನೆಗೂ ಆಕೆಯ ಹೆಸರು ತಿಳಿದು ಕೊಂಡನೋ ಇಲ್ಲವೋ ಗೊತ್ತಿಲ್ಲ. ಆದರೆ ಆಕೆ ಮತ್ತು ಅವಳ ತರಲೆ ಕಸಿನ್‌ಗಳು ಅವನ ಅಡ್ಡ ಹೆಸರು ಹುಡುಕಿ ಅದನ್ನು ಬೆಕ್ಕಿಗೆ ಇಟ್ಟು ಬೇಕಂತಲೆ ಅದನ್ನು ಕರೆಕರೆದು ರೇಗಿಸುತ್ತಿದ್ದರು. ಅವ ತನ್ನ ಮನೆಯವರ ಎದುರು ಏನೊಂದು ನುಡಿಯಲಾಗದೆ ಕೈ ಕಟ್ಟಿದ ಕೈದಿಯಂತೆ ನಿಂತಲ್ಲಿಯೇ ರೋಷ ಉಕ್ಕಿಸಿ ನೋಡುತ್ತಿದ್ದ. ಯಾರೂ ಇಲ್ಲದ ಸಮಯದಲ್ಲಿ ಅವಳತ್ತ ಬಿಡದೆ ನೋಡಿ ಮಂತ್ರದಂಡದಂತಹ ನಗುವೊಂದನ್ನು ಹರಡಿ ಹೊರಟುಬಿಡುತ್ತಿದ್ದ. ಈ ಜೋಡಿ ಪಾದಗಳ ಸದ್ದು ಮಳೆಯ ಆಲಾಪದೊಡನೆ ಕಲೆತು ಚಿಗುರು ಹೊಮ್ಮುವ ಹೊತ್ತು. ಸುತ್ತಲಿದ್ದ ಗರಿಕೆಗಳು ಪಾದಗಳ ಮುತ್ತಿಕ್ಕಿ “ಅವನೇನಾದರೂ ನಿನ್ನ ಕಟ್ಟಿಕೊಂಡರೆ ನೀನು ಸಂತೆಯಲ್ಲಿಟ್ಟುಅವನನ್ನಮಾರ‍್ತಿ” ಎನ್ನುತ್ತ ಕಚಗುಳಿಯಿಟ್ಟು ನಕ್ಕವು. ಅವ ಅಂತೂ ಈ ಸ್ಥಿತಿಯಿಂದ ಬಚಾವಾಗಿಯೇ ಬಿಟ್ಟ. ಸುರಿಯುತ್ತಿದ್ದ ಮಳೆಯೊಂದು ಯಾವುದೋ ಅಡ್ಡ ಗಾಳಿಯ ನೆವಕೆ ಹಾರಿಯೇ ಬಿಟ್ಟಿತು. ಅವಳ ಸಂಬಂಧಿಗಳು ಊರು ಖಾಲಿ ಮಾಡಿ ಆ ಊರ ನೆಂಟಸ್ತಿಕೆ ತಪ್ಪಿ ಹೋಯಿತು. ಅವ ಓದಲಿಕ್ಕೆ ಮತ್ತೆಲ್ಲಿಗೋ ಹೋದ.ದಾರಿಗಳು ಹೇಳದೆ ಕೇಳದೆ ದಾರಿ ಬದಲಿಸಿದವು.

ಈಗ್ಗೆ ಇಪ್ಪತ್ತು ವರ‍್ಷದ ನಂತರವೂ. ಮಳೆ ಸುರಿವಾಗಲೆಲ್ಲ ಅವರು ಕಿಟಕಿ ಸರಳುಗಳ ನಡುವೆ ನೋಟ ತೂರಿಸಿ ತೂರಿ ಬರುವ ಹನಿಗಳ ನಡುವೆ ನೋಟ ಬೆರೆಸುತ್ತಾರೆ. ಫಳಾರನೆ ಮಿಂಚು ಮೈಗೆ ಹತ್ತಿದಂತೆಲ್ಲ ನೆನಪುಗಳ ಕಂಪುಗಳಲ್ಲಿ ಕರಗತೊಡಗುತ್ತಾರೆ. ಅಷ್ಟೇ ಏಕೆ ಬೆಳಿಗ್ಗೆ ಕಮಿಟ್ ಆಗಿ ಸಂಜೆ ಬ್ರೇಕಪ್ ಆಗುವ ಈ ದಿನಗಳಲ್ಲಿಯೂ ಅವರಿಬ್ಬರು ಹೇರ್‌ಡೈ ಮಾಡಿದ ಕೂದಲ ನೇವರಿಸಿಕೊಳ್ಳುತ್ತ.ವರ‍್ಷಕ್ಕೊಮ್ಮೆಯಾದರೂ ಸುಖಾಸುಮ್ಮನೆ ಆ ರಸ್ತೆಗಳಲ್ಲಿ ಅಲೆದು ಒಬ್ಬರನ್ನೊಬ್ಬರು ಹುಡುಕುತ್ತಾರೆ.. ಅವರಿಬ್ಬರ ತುಟಿಯಂಚ ಮಾತುಗಳ ಸಲ್ಲಾಪಗಳ ಹಿಡಿದಿಟ್ಟ ಆ ಬಾಡಿಗೆ ಮನೆಗಳು, ಸವಕಲು ಗೇಟುಗಳು ಏನನ್ನು ಹೇಳದೆ ಸುಮ್ಮನೆ ನೋಡುತ್ತ ನಿಲ್ಲುತ್ತವೆ.

*********************

…..

About The Author

2 thoughts on “ಮೊದಲ ಮಳೆಯ ಜಿನುಗು”

  1. Smitha Amrithraj.

    ಎಷ್ಟು ಚೆಂದ,ಕತೆಯ,ಲಹರಿಯ,ಭಾವಗೀತೆಯ…ಸೂಪರ್ ದೀಪ್ತಿ

Leave a Reply

You cannot copy content of this page

Scroll to Top