ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಬಸವಣ್ಣ ಮತ್ತು ಚಲನಶೀಲತೆ

ಲೇಖನ ಬಸವಣ್ಣ ಮತ್ತು ಚಲನಶೀಲತೆ ವಚನ ಕಾಲದ ಜೊತೆ ಪಿಸುಮಾತು ನಾಗರಾಜ್ ಹರಪನಹಳ್ಳಿ ಕರ್ನಾಟಕ, ಕನ್ನಡಿಗರ ಮಟ್ಟಿಗೆ ೧೨ನೇ ಶತಮಾನ ಮಹತ್ವದ ಕಾಲಘಟ್ಟ. ಸಾಹಿತ್ಯ ಮತ್ತು ಸಾಮಾಜಿಕ ಬದಲಾವಣೆ ಕಂಡ ಕಾಲವದು. ಬಸವಣ್ಣ ಮತ್ತು ಆತನ ಸಮಕಾಲೀನ ವಚನಕಾರರು ಅನುಭವ ಮಂಟಪದ ಮೂಲಕ ಸಮಾಜದಲ್ಲಿ, ಜನರ ಬದುಕಲ್ಲಿ, ಅಧಿಕಾರ ಕೇಂದ್ರದಲ್ಲಿ ಚಲನಶೀಲತೆ ತಂದರು. ಜಡತ್ವಕ್ಕೆ ಚಾಟೀ ಬೀಸಿದರು. ಸ್ಥಗಿತ ವ್ಯವಸ್ಥೆಗೆ ಪರ್ಯಾಯ ಸೂಚಿಸಿದರು. ಬಸವಣ್ಣನ ಹೆಸರೇ ಚಲನಶೀಲ.‌ ಬುದ್ಧನ ನಂತರ ಭಾರತದಲ್ಲಿ ಆಂದೋಲ ಮತ್ತು ಚಳುವಳಿಯ ಮಾದರಿ ನಮಗೆ ಕಾಣಸಿಗುವುದು ಬಸವಣ್ಣನ ಕಾಲದಲ್ಲಿ. ಸ್ಥಗಿತ ವ್ಯವಸ್ಥೆಯನ್ನು ಪ್ರಶ್ನಿಸುತ್ತಲೇ ಅಕ್ಷರ ,ಅನ್ನ ಹಾಗೂ ಕ್ರಿಯೆಯ ಮೂಲಕ ಸಮಾಜದಲ್ಲಿ ಸ್ಥಾಪಿತ‌ಹಿತಾಸಕ್ತಿಗಳಿಗೆ ಸದ್ದಿಲ್ಲದೆ  ಪೆಟ್ಟುಕೊಟ್ಟವರು ಬಸವಣ್ಣ ಹಾಗೂ ವಚನಕಾರರು. ಬದಲಾವಣೆ ಬಯಸಿದ ವ್ಯವಸ್ಥೆಯ ಮಗ್ಗಲಿಗೆ ಪರ್ಯಾಯವನ್ನು ಸೂಚಿಸಿ ಅದನ್ನು ಕಾರ್ಯಗತ ಮಾಡ ಹೊರಟದ್ದು ಸಮಾಜದಲ್ಲಿ ಹೊಸ ಪರಿವರ್ತನೆಗೆ ಕಾರಣವಾಯಿತು. ಬಸವಣ್ಣ ಚಲನಶೀಲತೆಗೆ ಬಳಸಿದ ನಾಲ್ಕು ಅಸ್ತ್ರಗಳು : ಕಾಯಕ, ಸಮಾನತೆ, ಅಭಿವ್ಯಕ್ತಿ ಸ್ವಾತಂತ್ರ್ಯ, ದಾಸೋಹ. ಸಮಾಜದಲ್ಲಿ ಪ್ರತಿ ದುಡಿಮೆಗೂ ಒಂದು ಗೌರವ ತಂದು ಕೊಡುವ   ಮೂಲಕ ಕಾಯಕ ಪ್ರಜ್ಞೆಗೆ ಬಸವಣ್ಣ ಹೆಚ್ಚು ಒತ್ತು ನೀಡಿದರು.‌  ಹಾಗೆ ಶ್ರಮ ಜೀವಿಗಳನ್ನು ಸಮಾನವಾಗಿ ಕಂಡರು.‌ ಬಿಜ್ಜಳನ ಅಸ್ಥಾನದ ಪ್ರಧಾನ ಮಂತ್ರಿಯಾಗಿದ್ದ‌ ಬಸವಣ್ಣನವರು ಅತ್ಯಂತ ವಿನಯಿಯೂ ಆಗಿದ್ದರು. ಇದು ಸಹ ಒಂದು ಚಲನೆ. ಮಂತ್ರಿಯಾದವರು ವಿನಯಿಯಾಗಿರುವುದು ಭಾರತದಲ್ಲಿ ವಿರಳ ಸಂಖ್ಯೆಯಲ್ಲಿ ಕಾಣ ಸಿಗುತ್ತಾರೆ. ಹಾಗೆ ಅಧಿಕಾರ ಕೇಂದ್ರವನ್ನು ತಾವು ಕಾಪಾಡಿಕೊಂಡು  ಮೌಲ್ಯಗಳಿಗಾಗಿ ತ್ಯಜಿಸಿದವರು ಸಹ ವಿರಳಾತಿವಿರಳ. ಈ ನಿಟ್ಟಿನಲ್ಲಿ ಬಸವಣ್ಣ ನಮಗೆ ಸಿಗುವ ಮೊದಲ ಉದಾಹರಣೆ. ಅವರು ಅಧಿಕಾರ ಕೇಂದ್ರದಲ್ಲಿದ್ದು ವಿನಯಿಯಾಗಿದ್ದರು.  “ಮಾದಾರ ಚೆನ್ನಯ್ಯನ ಮನೆಯ ಮಗ ನಾನು” ಎನ್ನುವ ಬಸವಣ್ಣ ಇನ್ನೊಂದೆಡೆ “ ಕಕ್ಕಯ್ಯನ ಮನೆಯ ದಾಸಿಯ ಮಗನು ಚೆನ್ನಯ್ಯನ ಮನೆಯ ದಾಸಿಯ ಮಗಳು ಹೊಲದಲಿ ಬೆರಣಿಗೆ ಹೋಗಿ ಸಂಗವ ಮಾಡಿದರು ಅವರಿಬ್ಬರಿಗೆ ಹುಟ್ಟಿದ ಮನೆಯ ಮಗ ನಾನು ಕೂಡಲ ಸಂಗಮದೇವನ ಸಾಕ್ಷಿಯಾಗಿ…”  ಎಂಬಲ್ಲಿ ತನ್ನ ಜನ್ಮವನ್ನು ಸಮಾಜದ ಕೆಳಸ್ಥರದೊಂದಿಗೆ ಸಮೀಕರಿಸಿಕೊಂಡು ವಿನಯಿಯಾಗುತ್ತಾರೆ. ಹಾಗೆ ಜಾತಿ ವ್ಯವಸ್ಥೆಗೆ ಪೆಟ್ಟು ನೀಡಲು ಬಸವಣ್ಣ ಈ ವಚನ ಬರೆಯುತ್ತಾ , ಪ್ರತಿ ಹೆಜ್ಜೆಯಲ್ಲೂ  ಪ್ರಯೋಗಶೀಲತೆಗೆ ತನ್ನನ್ನೇ ಒಡ್ಡಿಕೊಂಡರು ಎನ್ನಬಹುದು. ಧರ್ಮಕ್ಕೆ ಹೊಸ ವ್ಯಾಖ್ಯಾನ: ” ದಯೆಯಿಲ್ಲದ ಧರ್ಮಯಾವುದಯ್ಯಾ, ದಯೆ ಇರಬೇಕು ಸಕಲ ಜೀವರಾಶಿಯಲ್ಲಿ” ಎನ್ನುತ್ತಾ ಧರ್ಮಕ್ಕೆ ಹೊಸ ವ್ಯಾಖ್ಯಾನ ನೀಡಿದ ಬಸವಣ್ಣ ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಸವಯ್ಯ” ಎನ್ನುವ ಮೂಲಕ ಬಹುದೊಡ್ಡ ಕ್ರಾಂತಿಗೆ ಮುನ್ನುಡಿ ಬರೆಯುತ್ತಾರೆ. ದೇವರನ್ನು ಮನುಷ್ಯರ ಹೃದಯದಲ್ಲಿ , ಅಂಗೈಯೊಳಗಿನ ಲಿಂಗವಾಗಿಸಿ, ಕರಸ್ಥಲಕ್ಕೆ ದೇವರನ್ನು ಕರೆತರುವುದು ಆ ಕಾಲದಲ್ಲಿ ತಂದ ಬಹುದೊಡ್ಡ ಚಲನೆ. ಕಾಯಕವೇ ಕೈಲಾಸ ಎನ್ನುವ ಮೂಲಕ ಸ್ವರ್ಗ ಎಂಬುದು ದುಡಿಮೆಯಲ್ಲಿದೆ ಎಂಬ ಸರಳ ತತ್ವವನ್ನು ಏಕಕಾಲಕ್ಕೆ ದೊರೆಗೂ, ಜನ ಸಾಮಾನ್ಯನಿಗೂ ತಲುಪಿಸಿದ್ದು ಬಸವಣ್ಣನ‌ ಹೆಗ್ಗಳಿಕೆ. ಕಾಯಕದಲ್ಲಿ ನಿರತನಾದೊಡೆಗೆ ಲಿಂಗವನ್ನು, ಜಂಗಮನನ್ನು ಮರೆಯಬೇಕು. ಅಂಥ ಶ್ರದ್ಧೆಯನ್ನು ಬಸವಣ್ಣ ಸಮಾಜದ ಮುಂದಿಡುತ್ತಾರೆ. “ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ”ಎನ್ನುವ ಮೂಲಕ ಜನರಿಗೆ ಸ್ಥಾವರ ವ್ಯವಸ್ಥೆಯ ಬಗೆಗಿನ‌ ನಂಬಿಕೆಯನ್ನು ಕೊಂಚ ತಗ್ಗಿಸುತ್ತಾರೆ. “ಆನು ಒಲಿದಂತೆ ಹಾಡುವೆನು ನಿನಗೆ ಕೇಡಿಲ್ಲವಾಗಿ” ಎನ್ನುವ ವಚನದ ಮೂಲಕ ಅಗಮ್ಯ ,ಅಗೋಚರನಾದ ಕೂಡಲ ಸಂಗಮನೊಂದಿಗೆ ಅನುಸಂಧಾನ ಮಾಡುತ್ತಾರೆ.‌ ನಿನೊಮ್ಮೆ ಒಡಲುಗೊಂಡು ನೋಡಾ ? ಎಂದು ದೇವರನ್ನು ಪ್ರಶ್ನಿಸುವ ವಚನಕಾರರ ಮನಸ್ಥಿತಿ ೧೨ನೇ ಶತಮಾನದಲ್ಲಿ ಹುಟ್ಟಿದ್ದು ಕ್ರಾಂತಿಯೇ ಸರಿ. ವ್ಯವಸ್ಥೆಯನ್ನು ಸೂಕ್ಷ್ಮವಾಗಿ ಗಮನಿಸಿದ್ದ ಬಸವಣ್ಣ ಒಂದು ಹಂತದಲ್ಲಿ ಹೀಗೆ ಹೇಳುತ್ತಾರೆ ; ಅನ್ನದೊಳಗೊಂದಗುಳ ಸೀರೆಯೊಳಗೊಂದೆಳೆಯ ಬಯಸಿದೆನಾದೊಡೆ ನಿಮ್ಮಾಣೆ,‌ನಿಮ್ಮ ಪ್ರಮಥರಾಣೆ…ಎನ್ನುವ ಆತ್ಮಸಾಕ್ಷಿಯ ಪ್ರಜ್ಞೆಯೊಂದಿಗೆ ವ್ಯವಸ್ಥೆಯನ್ನು ಪಲ್ಲಟಗೊಳಿಸಲು ಮಾಡಿದ ಪ್ರಯತ್ನ ದೊಡ್ಡದು. ” ಹಾವ ತಿಂದವರ ನುಡಿಸಬಹುದು ಗರ ಬಡಿದವರ ನುಡಿಸಬಹುದು ಸಿರಿಗರ ಹೊಡೆದವರ ನುಡಿಸಲಾಗದು ಬಡತನ ಎಂಬ ಮಂತ್ರವಾದಿ ಸುಳಿಯಲು ಒಡನೆ ನುಡಿವರು “ ಎನ್ನುತ್ತಾನೆ ಬಸವಣ್ಣ .ಸಮಾಜದಲ್ಲಿ ವರ್ಗ ವ್ಯವಸ್ಥೆ ಮೇಲ್ಪದರು ಹೇಗೆ ಕಲ್ಲಾಗಿರುತ್ತದೆ,‌ಹೃದಯಹೀನವಾಗಿರುತ್ತದೆ ಎಂಬುದನ್ನು ಬಸವಣ್ಣ ಹೇಳಿದ ಬಗೆ ಇದು.‌ ಬಡತನವನ್ನೇ ಸಿರಿಯ ಬಗ್ಗಿಸಲು ಇರುವ ಮಂತ್ರವಾದಿ ಎನ್ನುತ್ತಾನೆ. ಮಂತ್ರ ತಂತ್ರಗಳ, ವೇದ ಶಾಸ್ತ್ರ ಆಗಮಗಳ ಕಡು ವಿರೋಧಿಯಾಗಿದ್ದ ಬಸವಣ್ಣ , ವಚನದ ನುಡಿಗಟ್ಟು ಹಾಗೂ ಭಾಷಾ ಬಳಕೆಯಲ್ಲಿನ‌ ಲಯವೂ ಸಹ ಸೊಗಸು. ಬಾಲ್ಯದಲ್ಲಿ ತನಗೆ ಕೊಡಲು ಮುಂದಾಗಿದ್ದ  ಜನಿವಾರ ಸಂಸ್ಕಾರ ಅಕ್ಕ‌ನಿಗೆ ಏಕಿಲ್ಲ ಎಂದು ಪ್ರಶ್ನಿಸಿ , ಗಂಡು ಹೆಣ್ಣು ಸಮಾನರು ಎಂಬ ಆಲೋಚನೆಯನ್ನು ಬಾಲ್ಯದಲ್ಲಿಯೇ ತನ್ನ ಎದೆಯಲ್ಲಿ ಬಿತ್ತಿಕೊಂಡಿದ್ದ ಬಸವಣ್ಣ .‌ ಬಾಗೇವಾಡಿಯಲ್ಲಿ ಬಿತ್ತಿಕೊಂಡ ವೈಚಾರಿಕತೆ ಬೀಜ ಮರವಾಗಿ ಬೆಳೆದು  ಫಲ ಕೊಟ್ಟಿದ್ದು ಬೀದರಿನ ಕಲ್ಯಾಣದಲ್ಲಿ. ಇದು ಬಹು ಮಹತ್ವದ ಚಲನಶೀಲತೆಗೆ ಕಾರಣವಾಯಿತು. ಇಡೀ ವ್ಯವಸ್ಥೆ ಭ್ರಷ್ಟವಾಗಿ, ಅಧಿಕಾರಶಾಹಿ ಮತ್ತು ರಾಜ ಕೆಟ್ಟುಹೋದಾಗ ಹತಾಶನಾಗುವ ಬಸವಣ್ಣ ಬರೆದ ವಚನ ಹೀಗಿದೆ ; ” ಒಲೆ ಹತ್ತಿ ಉರಿದೊಡೆ ನಿಲಬಹುದಲ್ಲದೆ, ಧರೆ ಹತ್ತಿ ಉರಿದೊಡೆ ನಿಲಲುಬಾರದು ಏರಿ ನೀರುಂಬೆಡೆ, ಬೇಲೆಕೆಯ್ಯ ಮೇವಡೆ ತಾಯಿ ಮೊಲೆಹಾಲು ನಂಜಾಗಿ ಕೊಲುವೆಡೆ ಇನ್ನಾರಿಗೆ ದೂರುವೆ ಕೂಡಲಸಂಗಮದೇವಾ“ ಹೀಗೆ ಪ್ರತಿಯೊಂದು ಕ್ರಿಯೆಯನ್ನು ಕೂಡಲಸಂಗಮನ ಸಾಕ್ಷಿಯಾಗಿರಿಸಿಕೊಂಡೇ ಚಲನಶೀಲತೆಗೆ ದುಡಿದ ಬಸವಣ್ಣ ಹಾಗೂ ವಚನಕಾರರು ಕರ್ನಾಟಕಕ್ಕೆ ಸದಾ ನೆನಪಿಡುವ ವೈಚಾರಿಕತೆಯನ್ನು ನೀಡಿದರು. ***************

ಬಸವಣ್ಣ ಮತ್ತು ಚಲನಶೀಲತೆ Read Post »

ಕಥಾಗುಚ್ಛ

ಎಲ್ಲಿದ್ದೇನೆ?

ಕಥೆ ಎಲ್ಲಿದ್ದೇನೆ? ಬಿ ಎನ್ ಭರತ್  ಮಲಗಿಕೊಂಡು ಇರುವಾಗ ಮನೆಯಿಂದ ತಂದು ಕೊಟ್ಟಿದ್ದ ಮೆಚೂರ್  ಆದ ಎನ್ ಎಸ್ ಸಿ ನೆನಪಾಯಿತು.ಎದ್ದು ಕುಳಿತು  ಪೆನ್ನಿಗಾಗಿ ತಡಕಾಗಿ ಸಹಿ ಮಾಡಿ ಎತ್ತಿಟ್ಟೆ.  ಆಸ್ಪತ್ರೆಯ ಬಿಲ್ಲು ಕಟ್ಲಿಕ್ಕೆ ಎಷ್ಟು ದುಡ್ದಿದ್ರೂ ಸಾಕಾಗ್ಲಿಕ್ಕಿಲ್ಲ. ಮಂಪರು ಬಂದ ಹಾಗೆ ಆಯಿತು.   ” ಪೋಸ್ಟ್ ಮಾಷ್ಟ್ರು ಇಲ್ಲವಾ ” ವಿಟ್ಲ ಬಸ್ ಸ್ಟಾಂಡ್ ನ ಎದುರಿನ ಕಟ್ಟಡದ ಮಾಳಿಗೆಯಲ್ಲಿ ಹೋಗಿ ಕೇಳಿದೆ.  ಅಲ್ಲಿದ್ದವನು ಒಂಥರಾದಲ್ಲಿ ನನ್ನನ್ನೇ ನೋಡಿದ ” . ಕಾರಂತರು ರಜೆಯಲ್ಲಿದ್ದಾರಾ ” ಮತ್ತೆ ಕೇಳಿದೆ. ” ಬಟ್ಟೆಯಂಗಡಿಗೆ ಬಂದು ಇವನದ್ದೆಂತ? ಪೋಸ್ಟ್ ಅಂತೆ! ಪೆಟ್ಟು ಕಮ್ಮಿಯಾ ಅಂತ  ” ಅಲ್ಲಿಯವನು ಇನ್ನೊಬ್ಬನೊಟ್ಟಿಗೆ ಮಕ್ಕಾರು ಮಾಡಿದ. ಮನೆಗೆ ಬಂದು ಅಪ್ಪ ಹೇಳಿದ್ದನ್ನು ಪೋಸ್ಟ್ ಮಾಷ್ಟ್ರನ್ನೇ ಕೇಳುವ ಅಂತ ನೋಡಿದ್ರೆ ಇದೆಂತ ಹೀಗೆ? ಪಾಪ ರಿಟೈರ್ ಮೆಂಟ್ ದುಡ್ಡಲ್ಲಿ ಸ್ವಲ್ಪ ದೊಡ್ಡ ಅಮೌಂಟನ್ನೇ ಎನ್ ಎಸ್ ಸಿ ಯಲ್ಲಿ ಹಾಕಿದ್ರು. ಇರುವ ಆರೇಳು ಸ್ಟಾಫ್ ಗೆ ಚಾ ತರ್ಲಿಕ್ಕೆ ಹೇಳಿದ್ರಂತೆ ಅಪ್ಪ. ಅಲ್ಲಿರುವ ಪಿಯೋನ್ ಮಹಾಶಯ ಹೋಗಿ ಮಾಲ್ಪುರಿ, ಮಸಾಲೆ ದೋಸೆ, ಸ್ಪೆಷಲ್ ಚಾ ವನ್ನೇ ತರಿಸಿದ. ಪಾಪ ರಿಟೈರ್ ಆದ ಅಪ್ಪನಿಗೆ ಎಕ್ಸ್ಟ್ರಾ ಟ್ಯಾಕ್ಸ್ ! ಪೋಸ್ಟ್ ಮಾಷ್ಟ್ರು ಎಲ್ಲ ಫಾರ್ಮ್ ಗಳಲ್ಲಿ ಸೈನ್ ತೆಕ್ಕೊಂಡರಂತೆ. ಅಲ್ಲಿಯ ಸ್ಟಾಫ್ ನಮ್ಮ ನೆರೆಕರೆಯ ಕಾರಂತರು. ಮನೆಯ ಹತ್ರ ಬಂದು ಆಮೇಲೆ ಅಪ್ಪನ ಹತ್ರ ಹೇಳಿದ್ರಂತೆ. ಪೋಸ್ಟ್ ಮಾಷ್ಟ್ರು ಅವರ ಹೆಂಡತಿ ಹೆಸರಲ್ಲಿ ಏಜೆಂಟ್ ಆಗಿ ಸಾವಿರಗಟ್ಲೆ ಎಕ್ಸ್ಟ್ರಾ ಸಂಪಾದನೆ ಮಾಡ್ತಾರಂತೆ. ” ಕಮಿಷನ್ ನಲ್ಲಿ ನಿಮಿಗೂ ಶೇರ್ ಕೊಡ್ಬೇಕಿತ್ತು ” ಅಂತ ಕಾರಂತರು ಅಪ್ಪನ ಹತ್ರ ಹೇಳಿದ ಮೇಲೆ ಅಪ್ಪನಿಗೂ ಛೇ ಅಂತ ಚಪ್ಪೆ ಆಯ್ತಂತೆ.   ಹೋಗಿ ಆ ಬಗ್ಗೆ ವಿಚಾರಿಸುವ ಅಂತ ಮಾಡಿದ್ರೆ ಅಲ್ಲಿದ್ದವನು ಎಂತ ಹಾಗೆ ಪೆದಂಬು ಮಾತಾಡುದು. ” ಬಾಕಿಮಾರು ಗೆದ್ದೆಲಿ  ಇಂದು ಎಂತ ಆಟ  ಹೇಳಿ ಕೇಳಿಗೊಂಡು  ಬಾ ” ಅಂತ ಅಮ್ಮ ಹೇಳಿದ್ದು ನೆನಪಾಗಿ ಅಲ್ಲಿ ಪೇಪರ್ ಅಂಗಡಿಯ ಅಜ್ಜನ ಹತ್ರ ಕೇಳಿದಾಗ ದಪ್ಪ ಕನ್ನಡಕ ಸರಿ ಮಾಡಿ ” ಅಲ್ಲಿ ಗದ್ದೆ ಎಲ್ಲಿ ಉಂಟು ಈಗ? ಗವರ್ನಮೆಂಟ್ ಬಸ್ ಸ್ಟಾಂಡ್ ಆಗಿಯೇ ಮೂವತ್ತು ವರ್ಷಕ್ಕಿಂತ ಮೇಲೆ ಆಯ್ತಲ್ಲಾ? “ಅಂದ.   ” ಆಸ್ಪತ್ರೇಲಿ ಇದ್ದೀಯ ಅಂತ ಗೊತ್ತಾಯಿತು ಅದಕ್ಕೆ ಫೋನ್ ಮಾಡಿದ್ದು ” ಚಡ್ಡಿ ದೋಸ್ತಿ ಹರೀಶ ಫೋನ್ ಮಾಡಿ ” ಈಗ ಅಕ್ಕ ಅಷ್ಟು ಬರೆಯುವುದಿಲ್ಲವಾ ” ಎಂದು ಮಾತು ಮುಂದುವರಿಸಿದ. ನಿಜವಾಗಿಯೂ ಹೌದು ಆಗ ಅಕ್ಕ ಒಬ್ಬಳು ಉದಯೋನ್ಮುಖ ಬರಹಗಾರ್ತಿ. ಮತ್ತೆ ಎಲ್ಲ ಬತ್ತಿಯೇ ಹೋಗಿ ಬಿಟ್ಟಿತು, ಕೆಲವು ಕ್ರಿಕೆಟರ್ ಗಳು ಫಾರ್ಮ್ ಕಳಕೊಳ್ಳುವ ಹಾಗೆ.  ಅಕ್ಕ ನವಭಾರತ ತರ್ಲಿಕ್ಕೆ ಹೇಳಿದ್ದು ನೆನಪಾಗಿ ಅವನ ಹತ್ರ ಕೇಳಿದಾಗ ” ಅದೆಲ್ಲಿ ಉಂಟು ಈಗ ” ಅಂತ ಹೇಳಿ ಒ೦ಥರಾದಲ್ಲಿ ನೋಡ್ತಾ  ಅವನು ಗಿರಾಕಿಗೆ ಯಾವುದೋ ಮ್ಯಾಗಝೀನ್ ಕೊಟ್ಟ.   ನನಗೆ ಹೇಗೆ ಹೇಗೋ ಆಯ್ತು.  ತಲೆ ಬುಡ ಅರ್ತ ಆಗದೆ ನಾನು ನಾಕು ಮಾರ್ಗದ ಗೋಡೆಯ ಮೇಲಿದ್ದ ಸಿನಿಮಾ ಪೋಸ್ಟರ್ ನೋಡ್ತಾ ಹಾಗೇ ನಿಂತೆ. ಅಕ್ಕ ನವಭಾರತ ಪೇಪರ್ ತರ್ಲಿಕ್ಕೆ ಯಾಕೆ ಹೇಳಿದ್ದು ಮತ್ತೆ?    ಕಳೆದ ವಾರ ಅಕ್ಕ ಬರ್ದ ಕಥೆ ಮ್ಯಾಗಝೀನ್ ವಿಭಾಗದಲ್ಲಿ ಪ್ರಕಟ ಆಗಿತ್ತು. ಅದಕ್ಕೆ ಓದುಗರ ಪ್ರತಿಕ್ರಿಯೆ ಉಂಟಾ ಅಂತ ನೋಡ್ಲಿಕ್ಕೆ ಇರ್ಬಹುದು.   . ಬಾಯಿಗೆ ಮಾಸ್ಕ್ ಹಾಕಿಕೊಂಡು ಸ್ಟೆತೋಸ್ಕೋಪ್ ನಿಂದ ನನ್ನ ಎದೆಯಲ್ಲಿ ಬಡಿತ ಚೆಕ್ ಮಾಡಿದ ಬಿಳೀ ಕೋಟ್ ಹಾಕಿದ ಡಾಕ್ಟ್ರು ನಸು ನಗುತ್ತಾ ” ಯು ಹ್ಯಾವ್ ಇಮ್ ಪ್ರೂವ್ಡ್ ಎ ಲಾಟ್ ”  ಎನ್ನುತ್ತಾ ಕಾಟ್ ನ ಪ್ಯಾಡ್ ನಲ್ಲಿ ಏನೋ ನೋಟ್ ಮಾಡಿ ಮುಂದಿನ ಬೆಡ್ ಗೆ ಹೋದರು.  ಎಂತ ಇಂಪ್ರೂವ್ ಮಣ್ಣಾ೦ಗಟ್ಟಿ! ಆಯಾಸವಾದಂತಾಗಿ ಮತ್ತೆ ಕಣ್ಣು ಮುಚ್ಚಿದೆ. ಯಾರೋ ಕಾಲಿಂಗ್ ಬೆಲ್ ಸದ್ದು ಮಾಡಿದ ಹಾಗೆಯೋ ಮಾರ್ಗದಲ್ಲಿ ಜೋರಾಗಿ ಸೈಕಲ್ ಬೆಲ್ ಕಿಣಿ ಕಿಣಿ ಅಂತ ಬಾರಿಸಿದ ಹಾಗೆಯೋ ಶಬ್ದ ಕೇಳ್ತಾ ಉಂಟಲ್ಲಾ? ಬಸ್ ಸ್ಟಾಂಡ್ ನ ಹತ್ತಿರ ಇದ್ದ ಖಾಲಿ ಜಾಗದಲ್ಲಿ ಸೈಕಲ್ ಬ್ಯಾಲೆನ್ಸ್ ನೋಡ್ಲಿಕ್ಕೆ ಅಂತ ಸುಮಾರು ಹೊತ್ತು ನಿತ್ತುಕೊಂಡೇ ಇದ್ದೆ. ಪಳನಿ ಸ್ವಾಮಿ ಸೈಕಲ್ ನ ಪೆಡಲಲ್ಲಿ ನಿತ್ತುಕೊಂಡೇ ಕೊಡಪಾನ ದಿಂದ  ನೀರು ಸುರಿದು ಸ್ನಾನ ಮಾಡುದು, ಹ್ಯಾಂಡಲ್ ಮೇಲೆ ತಿರ್ಗಿ ಕೂತು ಪೆಡಲ್ ತುಳಿಯುವುದು ಇದೆಲ್ಲ ನೋಡ್ಲಿಕ್ಕೆ ಎಷ್ಟು ಚಂದ! ” ಮಕ್ಕಳೆಲ್ಲ ಜೋ …..ರಾ… ಗಿ ಚಪ್ಪಾಳೆ ಹೊಡೀರಿ ” ಅಂತ ಅವನು ಹೇಳುದನ್ನೇ ನಾವೆಲ್ಲ ಕಾಯ್ತಿದ್ದೆವು. ಒಂದು ವಾರ ಅವನು ಸೈಕಲ್ ನಿಂದ ಕೆಳಗೆ ಇಳೀಲಿಕ್ಕೆ ಇಲ್ಲ ಅಂತೆ. ರಾತ್ರಿ ಮಲಗ್ಲಿಕ್ಕೆ ಎಂತ ಮಾಡ್ತಾನೆ ಅಂತ. ಮತ್ತೆ ಒಂದು ಎರಡು ಎಲ್ಲಾ ಹೇಗೆ ಅಂತ?  ಶೆ! ಎಂಥ ಅವಸ್ಥೆ!  ” ನೀವು ಇನ್ನೂ ಮಾತ್ರೆ ತಿನ್ಲಿಲ್ವಾ , ಎಷ್ಟು ಸಲ ಹೇಳುದು ನಿಮಗೆ ” ಬಿಳೀ ಡ್ರೆಸ್ ನಲ್ಲಿದ್ದವಳು ಜೋರು ಮಾಡಿದಾಗ ” ಈವತ್ತು ಸೈಕಲ್ ಬ್ಯಾಲೆನ್ಸ್ ಇಲ್ವಾ ? ” ಅಂತ ಕೇಳಿದೆ. ಅದಕ್ಕವಳು ” ಸೈಕಲ್ ಬ್ಯಾಲನ್ಸ್ ಎಂತ ಅದು ” ಅಂತ ಕೇಳುದಾ? ಛೆ! ಪಳನಿ ಸ್ವಾಮಿ ಎಷ್ಟು ಚಂದ ಬ್ಯಾಲೆನ್ಸ್ ಮಾಡುದು. ಕೆಲವು ಸಲ ಸೈಕಲನ್ನು ಬ್ರೇಕ್ ಮತ್ತು ಪೆಡಲ್ ಮೂಲಕ ಬ್ಯಾಲೆನ್ಸ್ ಮಾಡುದು ನೋಡ್ಲಿಕ್ಕೆ ಎಷ್ಟು ಖುಷಿಯಾಗ್ತದೆ , ಇವಳಿಗೆ ಅದೆಲ್ಲಾ ಗೊತ್ತೇ ಇಲ್ವಾ ಅಂತ.     ಪಕ್ಕದಲ್ಲಿ ಮಲಗಿದ್ದವರು ಮೊಬೈಲ್ ಫೋನ್ ನೋಡ್ತಾ ಹಾಸಿಗೆಯಿಂದ ಎದ್ದು ಕೂತು ” ಔಟ್ ” ಅಂದ್ರು. ” ತೆಂಡೂಲ್ಕರ್ ಔಟಾ ” ಅಂತ ಆಶ್ಚರ್ಯದಲ್ಲಿ ಕೇಳಿದೆ.  ” ತೆಂಡೂಲ್ಕರಾ ? ಪರಬ್ಬನಿಗೆ ಎಂತ ಆಗಿದೆ? ” ಅಂತ ತಲೆ ಮೀಸೆ ಎಲ್ಲ ಬಿಳಿಯಾದವನು ನನಗೆ ಕೇಳುದು ಮಾರಾಯ್ರೆ!  ಎಂತದೋ ಜೋರು ಬಚ್ಚುತಾ ಉಂಟು ಆಯ್ತಾ , ಹಾಗೇ ಸ್ವಲ್ಪ ಮಲಗ್ತೇನೆ.     ಸಿದ್ದಾಪುರದಲ್ಲಿ  ಗ್ರೌಂಡಲ್ಲಿ ದೋಸ್ತಿ ಗಳೊಟ್ಟಿಗೆ ಬ್ಯಾಟ್ ಬಾಲ್ ಆಡಿದ ಮೇಲೆ ಸಾಯಂಕಾಲ  ತೆಂಗಿನ ಮರದ ಕಟ್ಟೆಯ ಹೋಟ್ಲಲ್ಲಿ ಒಂದು ಮಸಾಲೆ ದೋಸೆ ತಿಂದು, ರಾಗಿ ಮಾಲ್ಟ್ ಕುಡ್ದು ಇಪ್ಪತ್ತು ಪೈಸೆ ಕೊಟ್ಟೆ. ಕ್ಯಾಷಿಯರ್ ” ಎಲ್ಲಿಂದ ಎಲ್ಲ ಬರ್ತಾರೆ ಈ ಗಿರಾಕಿಗಳು ಅಂತ. ಕೊಡಿ ಮೂವತ್ತು ರೂಪಾಯಿ ” ಜೋರಲ್ಲೇ ಕೇಳಿದ. ”  ಶಂಕರ ನಾರಾಯಣ ಜಾತ್ರೆಗೆ ಹೋಗ್ಬೇಕು. ಶಂಕರ ವಿಠ್ಠಲ್ ಬಸ್ಸು ಎಷ್ಟು ಘಂಟೆಗೆ ” ಅಂತ ಕೇಳುವಾಗ ಅವನು ನನ್ನನ್ನೊಮ್ಮೆ ನೋಡಿ “ಶಂಕರ ವಿಠ್ಠಲಾ ಅದು ನಿಂತು ಹೋಗಿ ಮೂವತ್ತು ವರ್ಷ ಆಗಲಿಲ್ಲವಾ?  ಈ ಮರ್ಲ ಎಲ್ಲಿಂದ ಬಂದದ್ದು. ಹೋಗ್ತೀಯಾ ಇಲ್ವಾ ? ” ಜೋರು ಮಾಡಿದ.  ಜೋರು ಕೂಗುದು ಕೇಳಿಸಿತು. ಪಕ್ಕದ ಬೆಡ್ ನವ, ನಿನ್ನೆ ಕ್ರಿಕೆಟ್ ನೋಡುವಾಗ ನನಗೆ ಮಕ್ಕಾರು ಮಾಡಿದವ, ಎಂತ ಆಯ್ತು ಅವನಿಗೆ ಅಂತ. ನನಗಿಂತ ಸಣ್ಣ ಅಂತ ಇತ್ತು ಅವನಿಗೆ. ಛೆ ಎಂತ! ಅವನ ಮೇಲೆ ಇಡೀ ಬಿಳೀ ಬಟ್ಟೆ ಹಾಕಿದ್ದಾರೆ. ಎಂತ ಆಯ್ತು? ಅವನ ಸುತ್ತಲೂ ಎಲ್ಲರೂ ಕೂಗಿಕೊಂಡು ಇದ್ದಾರೆ. ನೋಡ್ಲಿಕ್ಕೆ ಆಗುದಿಲ್ಲ.  ಪಕ್ಕಕ್ಕೆ ಹೊರಳಿ ಮತ್ತೆ ಮಲಗಿದೆ.  ಎಂತ ಅದು ಅಷ್ಟು ಉದ್ದ ಕ್ಯೂ? ನೋಟ್ ಎಕ್ಸ್ಚೇಂಜ್ ಮಾಡ್ಲಿಕ್ಕಾ? ಮನೆಯಲ್ಲಿರುವ ಎಲ್ಲ ಐನೂರು ರೂಪಾಯಿ ಬೇಗ ತರುದು ಒಳ್ಳೇದಾ ಅಂತ. ಬೇಗ ಬೇಗ ಮನೆ ಸಾಮಾನೂ ತರ್ಬೇಕು ಮತ್ತೆ ಲಾಕ್ ಡೌನ್ ಆದರೆ ಕಷ್ಟ ಅಲ್ವಾ? ಗಾಳಿಯಲ್ಲಿ ತೇಲಾಡುವ ಹಾಗೆ ಆಗ್ತಾ ಇದೆ. ಎಂತ ಆಗ್ತಾ ಉಂಟು? ಯಾವ ಊರು ಇದು ಗೊತ್ತೇ ಆಗುದಿಲ್ಲ. ಸಮುದ್ರ, ಎಷ್ಟು ಒಳ್ಳೇ ಗಾಳಿ,  ಅದೆಂತ ಕಬ್ಬಿನ ಗದ್ದೆಯಾ, ಅದು ಅಡಿಕೆ ತೋಟವಾ, ಅದ್ಯಾವ ಸಂಕ, ಅಲ್ಲಿ ಅಷ್ಟು ದೊಡ್ಡ ಮೈದಾನ, ಮೈಕಲ್ಲಿ ಎಂತ ಭಜನೆಯಾ ಅದು, ಅಲ್ಲಿ ಮುಂದೆ ಅದೂ ..ಅದೂ ..ಎಂತ ಸರಿ ಕಾಣುದಿಲ್ಲ. ಹಾಂ …ಹಾಂ…   **************************   –

ಎಲ್ಲಿದ್ದೇನೆ? Read Post »

ಕಾವ್ಯಯಾನ

ಮರಣದ ಪರ್ವ

ಕವಿತೆ ಮರಣದ ಪರ್ವ ರೇಶ್ಮಾಗುಳೇದಗುಡ್ಡಾಕರ್ ಮರಣದ ಹಬ್ಬವಿದುಸಾವಿನ ಸರಣಿಯಿದುಹಿರಿಯ-ಕಿರಿಯ ಭೇದವಿಲ್ಲಕ್ಷಣಮಾತ್ರವು ಸಮಯವಿಲ್ಲಹಾರುವುದು ಪ್ರಾಣ ಪಕ್ಷಿದಿನ ,ಮುಹೂರ್ತ ನೋಡುವದಿಲ್ಲ..!!ಪಂಚಾಂಗದ ಹಂಗಿಲ್ಲ..!! ಬ್ಯಾನಿ ಎನೆಂದು ತಿಳಿಯುವುದಿಲ್ಲನಗುನಗತ್ತಲೇ ಬಾರದ ಲೋಕಕ್ಕೆ ತೆರಳುವರಲ್ಲಈಗ ಇದ್ದವರು ನಾ ಮುಂದೆ ತಾ ಮುಂದೆ ಎನ್ನುವಂತೆಸಾಗುತಿಹರಲ್ಲ….ಮರಣ ಮೃದಂಗ ಮೊಳಗಿದೆಯಲ್ಲಾ ಎತ್ತಿ ಆಡಿಸಿದ ಕೈ ಹಿಡಿದುನಡೆಸಿ ನಡೆನುಡಿಯ ತಿದ್ದಿದದಾತಸೆರಗಿನಲಿ ಕಾಪಿಟ್ಟು ಎದೆಯುಸಿರಲಿತಂಪಿಟ್ಟ ಅವ್ವ ,ಹೆಗಲ ಮೇಲೆ ಹೊತ್ತು ಊರೆಲ್ಲಾತಿರುಗಾಡಿದ ಅಣ್ಣಾ ಹೀಗೆಸಾಗುವದು ಮರಣದರಮನೆಯಸೇರಿದವರ ಪಟ್ಟಿ ….ನೆನದಷ್ಟು ನೆನಪುಗಳುಹೃದಯವ ತೋಯ್ಸವು…..ಕಾಣದ ಜೀವಿಗೆ ಹರಿದ ಬದುಕುಕಾಲನ ಕೈ ತುತ್ತಿಗೆ ಹಂಬಲಿಸುತಿದೆ ….!! ಗಾಯಗಳು ಮಾಗುವ ಮುನ್ನಬರೆ ಮತ್ತೆ ಮತ್ತೆ ಬೀಳುತಿದೆ.ಹಾಲುಗಲ್ಲದ ಕೆನ್ನೆ ಮಾಸುವ ಮುನ್ನವೇಮಣ್ಣಾಗುತಿದೆ…….!!!!ಹೇ…ಬದುಕೇ ನೀ ಎಷ್ಟುನಿಗೂಢ ….ಬರಿದಾಗಿದೆ ಮನೆಮನಉಳಿಯುವವೇ ಜನಮನ ….ಜನ ಮನ.. *********************

ಮರಣದ ಪರ್ವ Read Post »

ಇತರೆ

ಮಾನವೀಯತೆ ಮರೆಸುತ್ತಿದೆ ಕೊರೊನ

ಲೇಖನ ಮಾನವೀಯತೆ ಮರೆಸುತ್ತಿದೆ ಕೊರೊನ ರಾಧಾ ಆರ್.ಡಿ. ತವರು ಮನೆಗೆ ಹದಿನೈದು ದಿನದ ಮಟ್ಟಿಗೆ  ಹೋಗಿದ್ದ ನಾನು ಬಿಗಿ ಲಾಕ್ಡೌನ್ ಆಗುತ್ತೆ ಎಂದು ಒಂದೇ ವಾರಕ್ಕೆ ದಿಡೀರ್ ಅಂತ ವಾಪಸ್ ಹೊರಟೆ.ಊರಿಂದ ಶಿರದ ವರೆಗೂ  ನನ್ನ  ಮತ್ತು ಪಾಪುನ ಅಪ್ಪಾಜಿ ಅಣ್ಣ ಬಿಡಬೇಕು ಅಂತ ಹಾಗೆ ಅಲ್ಲಿಂದ ನಮ್ಮನೆಯವರು ಕರೆದುಕೊಂಡು ಹೋಗಬೇಕು ಅಂತ  ಹೊರಡುವ ಮುನ್ನ ತೀರ್ಮಾನ ಆಗಿತ್ತು, ಬೆಳಗ್ಗೆ ಸುಮಾರು ಆರು ಗಂಟೆಗೆ ನಮ್ಮ ಊರಿಂದ ಹೊರಟೆವು, ಮೂರು ತಾಸಿನ ಪ್ರಯಾಣದ ನಂತರ ಅಂದರೆ ಒಂಬತ್ತು ಗಂಟೆಗೆ ಶಿರ ಟೋಲ್ ತಲುಪಿ ದೆವು. ಅಷ್ಟರಲ್ಲಿ ನನ್ನ ಯಜಮಾನರು ಅಲ್ಲಿಗೆ ಬಂದು ಬೆಳಗಿನ ಉಪಹಾರ ಸವಿಯುತ್ತಾ ನಮಗಾಗಿ ಕಾದು ನಿಂತಿದ್ದರು. ಅಣ್ಣ ಹಾಗೂ  ಅಪ್ಪಾಜಿ,ಅಣ್ಣನ ಕಾರಿನಿಂದ   ಲಗೇಜ್ ಅನ್ನು ನಮ್ಮ ಕಾರಿಗೆ ಇಡುತ್ತಾ ನನ್ನ ಯಜಮಾನರ ಜೊತೆ ಮಾತಿಗಿಳಿದರು. ಪರಸ್ಪರ ಕ್ಷೇಮ ಸಾಮಾಚ್ಹಾರ ನಡೆಯುತ್ತಿತ್ತು, ಆಷ್ಟೊತ್ತಿಗೆ ಎಲ್ಲಿದ್ದನೋ ಏನೋ ಪಟ್ಟೆ ಪಂಚೆ ,ಅಂಗಿ ಧರಿಸಿ ತಲೆಮೇಲೆ ಇನ್ನೊಂದು     ಪಂಚೆ ಹೊದ್ದಿದ್ದ ಒಬ್ಬ ಮಧ್ಯಮ ವಯಸ್ಸಿನ ವ್ಯಕ್ತಿ ಬಂದು ಬೆಳಗಿನ ತಿಂಡಿ ತಿಂತಾ ಇದ್ದ ನನ್ನ ಯಜಮಾನರನ್ನು ಕೇಳಿದ….. ಸ್ವಾಮೀ….. ನಂಗೂ ಸ್ವಲ್ಪ ಊಟ ಕೊಡಿಅಂತ…. ಹತ್ತಿರಕ್ಕೆ ಬರುತ್ತಿದ್ದ,ಅವನು ಮಾಸ್ಕ್ ಬೇರೆ ಹಾಕಿರಲಿಲ್ಲ, ನಮಗೆ ಭಯ, ಕೊರೊನ ಕಾಲ ಅಂತ, ಇವರು ಹೇಳಿದ್ರು ಎಂಜಲಾಗಿದೆ ಕಣಪ್ಪ ಹೇಗೆ ಕೊಡಲಿ, ಹತ್ತಿರ ಬರಬೇಡ, ಅಲ್ಲೇ ನಿಲ್ಲು, ನಾನು ಒಂದೇ ಡಬ್ಬಿ ತಂದಿರುವೆ ಎಂಜಲಾಗಿದೆ ಹೇಗೆ ಕೊಡಲಿ ಅಂದರು, ಆ ವ್ಯಕ್ತಿ ಬಿಡುವ ಪೈಕಿ ಆಗಿರಲಿಲ್ಲ, ಅದರಲ್ಲೇ ಎರಡು ತುತ್ತು ಕೊಡಣ್ಣ, ಇಲ್ಲ ಅನಬ್ಯಾಡ, ನೀ ತಿನ್ನೋದ ನೋಡಿ ಊಟ ಸಿಗುತ್ತೆ ಅಂತ ಬಂದೀನಿ, ಕೊಡಣ್ಣ ಅಂತ ಕೇಳ್ತಾನೇ ಇದ್ದ. ಎಂಜಲು ಕೊಡಲು ಇವರಿಗೆ ಮನಸಿಲ್ಲ. ಹಾಗೆ ಹೋಗಲು ಆತ ತಯಾರಿಲ್ಲ, ನನ್ನಣ್ಣ ಆತನಿಗೆ ಹೇಳಿದ ಸ್ವಾಮೀ ಕಾರಿನಲ್ಲಿ ಮಗು ಇದೆ, ಹತ್ತಿರ ಬರ್ಬೇಡ, ಕೊಡಬಾರದು ಎಂಬ ಭಾವನೆ ನಮಗಿಲ್ಲ, ಕೊರೊನ  ಕಾಲ ಬರಬೇಡ ಹತ್ತಿರ ಎಂದು ಅಳಿಮಯ್ಯನಿಗಾಗಿ ಕೇಳಿಕೊಂಡ, ಇವ ಎಂದು ಯಾರನ್ನೂ ಹೀಗೆ ಕಳಿಸಿದ್ದವನಲ್ಲ, ಯಾರಾದರೂ ಕಷ್ಟ ಎಂದರೆ ,ಊಟ ಇಲ್ಲ ಎಂದರೆ ತನ್ನ ಬಳಿ ಇದ್ದ ಎಲ್ಲವನ್ನೂ ಎಷ್ಟೋ ಸಾರಿ ಕೊಟ್ಟು ಬಂದಿರುವ ಉದಾರಿ ಇವ. ಇವನ ಬಾಯಲ್ಲಿ ಕೊರೊನ ಹೀಗೆ ಮಾತನಾಡಿಸಿತ್ತು,ಅಷ್ಟರಲ್ಲಿ ಕಾರಿನ ಬಾಗಿಲು ತೆಗೆದು ಅಣ್ಣ ದೂರ ನಿಲ್ಲಿ ಮಗು ಇದೆ ತೊಂದರೆ ಕೊಡಬೇಡಿ ಎಂದು ನಾನು ಹೇಳಿದೆ. ಅಷ್ಟರಲ್ಲಿ ಜೇಬಿನಿಂದ ದುಡ್ಡು ತೆಗೆದು ನೆಲದ ಮೇಲೆ ಹಾಕಿ ತಗೊಳಪ್ಪ ಎಂದರು ನನ್ನ  ಅಪ್ಪಾಜಿ, ಅಣ್ಣ, ನೆಲದ ಮೇಲೆ ಹಾಕ್ತಿಯಲ್ಲಾ ಅಣ್ಣ ,ಅಂದ ಆ ವ್ಯಕ್ತಿ, ನನ್ನ ತಂದೆ ಎನ್ ಮಾಡ್ಲಿ ಕೊರೊನ ಕಾಲ ಕಾಣಪ್ಪ, ಅಂದರು, ಆತ ದುಡ್ಡು ಜೇಬಿಗೆ ಹಾಕಿಕೊಂಡ, ಆಗ ನನಗೆ ಸಣ್ಣ ವಯಸ್ಸಿನಲ್ಲಿ ನಮ್ಮ ಮನೇಲಿ ನಡೆದ ಒಂದು ಘಟನೆ ನನ್ನ ತಲೆಯಲ್ಲಿ ಮಿಂಚಿ ಮಾಯವಾಯ್ತು,,, ನಮ್ಮ ಮನೆಯಲ್ಲಿ  ಬಿಕ್ಷೆಗೆ ಯಾರಾದರೂ ಬಂದರೆ ಎಂದೂ ಕೂಡ ನನ್ನ ಅಪ್ಪ ಅಮ್ಮನ ಬಾಯಲ್ಲಿ ಬಿಕ್ಷುಕ  ಬಂದ ಎನ್ನುವ ಪದ ನಾನು ಕೇಳಿಲ್ಲ. ಬದಲಾಗಿ ಬಾಗಿಲಿಗೆ ಯಾರೋ ಬಂದಿದ್ದಾರೆ ನೀಡಿ ಎಂದು ಹೇಳುತ್ತಿದ್ದುದು ಈಗಲೂ ನಮ್ಮ ಮನೆಯಲ್ಲಿ ಇದೆ.ಒಂದು ದಿನ ಹೀಗೆ ಯಾರೋ ಬಾಗಿಲಿಗೆ ಒಬ್ಬ ಬಂದ, ಅಮ್ಮಯ್ಯ (ನನ್ನ ಅತ್ತೆ, ಮದುವೆ ವಯಸ್ಸಿನ ಕನ್ಯೆ, ಅವಳಿಗೆ ಎಂದೂ ಅತ್ತೆ ಎಂದು ನಾವು ಕರೆದಿಲ್ಲ, ಈಗಲೂ ಏಕವಚನದಿಂದಲೇ ಮಾತನಾಡಿಸುತ್ತೇವೆ) ನೀಡಲು ತಡ ಮಾಡಿದಳು, ಆ ವ್ಯಕ್ತಿ ಬಾಗಿಲಲ್ಲಿ ಕಾದು ಸಾಕಾಗಿ ಬೇರೆ ಊರಿನ ಕಡೆ ಹೊರಟ, ಇದು ಕೂಡಲೆ ನನ್ನ ತಂದೆಗೆ ಗೋತ್ತಾಗಿದೆ. ಅವರು ಒಳಗೆ ಬಂದು ಅಮ್ಮಯ್ಯಳಿಗೆ ಬೈದರು,ಯಾಕೆ ಹಾಗೆ ಕಳಿಸಿದೆ, ಯಾಕೆ, ಬಾಗಿಲಿಗೆ ಬಂದವರಿಗೆ ನೀಡಲು ಆಗಲ್ಲವಾ? ಅಂತ, ಅದಕ್ಕೆ ಅಮ್ಮಯ್ಯ ಇಲ್ಲ ಅಣ್ಣ  ಹಾಗೇನಿಲ್ಲ. ಮತ್ತೆ ಬರುತ್ತಾನೆ ಬಿಡು. ಹೋದ್ರೆ ಹೋಗ್ಲಿ. ಅಂದ್ಲು, ನನ್ನ ಅಪ್ಪನಿಗೆ ಪಿತ್ತ ನೆತ್ತಿಗೆ ಏರಿತು  ಆಕೆಗೆ ಬೈದು ಹೇಳಿದರು. ನೋಡು ಬಾಗಿಲಿಗೆ ಬಂದವರನ್ನು ಹಾಗೆ ಕಳಿಸಬಾರದು, ಹೋಗಿ ಏನಾದ್ರೂ ಕೊಟ್ಟು ಬಾ ಎಂದು, ಕೂಡಲೆ ಆಕೆ ಅವ ಪಕ್ಕದ ಮನೆ ಹತ್ತಿರ ಇರಬಹುದು ಎಂದು ಹೊರಗೆ ಹೋಗಿ ನೋಡಿದರೆ ಅವ ಅಲ್ಲಿ ಇರಲಿಲ್ಲ, ಸ್ವಲ್ಪ ಮುಂದೆ ಹೋಗಿ ನೋಡಿದ್ರೆ ಆಗ್ಲೇ ಮಜ್ಜಿ ಕಟ್ಟೆ ಮೋರಿ (ನಮ್ಮೂರಿನಿಂದ ಸ್ವಲ್ಪ ದೂರದಲ್ಲಿ ರಸ್ತೆಯ ಮಗ್ಗುಲಲ್ಲಿ   ಇದೆ ಕಟ್ಟೆ.ಇಲ್ಲಿ ಸಂಜೆ ಹೊತ್ತು ಕೆಲಸ ಮಾಡಿ ದಣಿದ ಕೆಲವರು ಪಟ್ಟಂಗ ಹೊಡೆಯಲು ಬಂದು ಕುಂತು ಮಾತಾಡ್ತಾರೆ)  ಹತ್ರ ಇದಾನೆ🙆🏾‍♀️ಹಾಗೆ ಮನೆಗೆ ಹೋದ್ರೆ ಅಣ್ಣ ಬೈತಾನೆ ಅಂತ ಓಡೋಕೆ ಶರು ಮಾಡಿದಳು….. ಅಣ್ಣ ನಿಲ್ಲು… ಅಣ್ಣ ನಿಲ್ಲು.. ಎಂದು ಕೂಗಿ ಕರೆದು ಮನೆಗೆ ಕರೆದುಕೊಂಡು ಬಂದು ನೀಡಿ ಕಳಿಸಿದಳು, ಆಗ ನನ್ನ ಅಪ್ಪಾಜಿ ಖುಷಿಃ ಪಟ್ಟರು.,,,, (ಹಾಗಂತ ನಾವೇನು ಆಗರ್ಭ ಸಿರಿಸಂತರೇನಲ್ಲ ).ಇಂತ ನನ್ನ ಅಪ್ಪನ ಕೈಲಿ ಈ ಕೊರೊನ ದುಡ್ಡನ್ನು ನೆಲದ ಮೇಲೆ ಹಾಕುವ ಹಾಗೆ ಮಾಡಿತ್ತು. . ಆ ದುಡ್ಡನ್ನು ಆ ವ್ಯಕ್ತಿ ಜೇಬಿಗೆ ಹಾಕಿಕೊಂಡು ಹೊರಟ… ಆದರೂ ಅವನ ಕಣ್ಣು ಊಟದ ಮೇಲೆ ಇತ್ತು. ಪಾಪ, ಎಷ್ಟು ಹಸಿದಿದ್ದನೋ ಏನೋ,,,, ,,, ಮುಂದೆ ಸ್ವಲ್ಪ ದೂರ ಹೋಗಿ ಅಲ್ಲಿ ನಿಂತಿದ್ದ ಲಾರಿ ಚಾಲಕನ ಹತ್ತಿರ ಮಾತಿಗಿಳಿದ,,,, ಅಷ್ಟರಲ್ಲಿ ನನ್ನ ಕಂದ ನಿದ್ದೆಯಿಂದ ಎದ್ದ, ನನಗೆ ಅದೇ ಬೇಕಿತ್ತು, ಪಾಪುವನ್ನು ಅವರ ಅಪ್ಪನ ಕೈಗೆ ಕೊಟ್ಟು ನಾವು ಉಪಹಾರಕ್ಕೆ ತಂದಿದ್ದ ತಿಂಡಿಯ ಚೀಲವನ್ನು ಆತುರ ಆತುರವಾಗಿ ಹುಡುಕಿ ತೆಗೆದೆ, ಒಂದು ಕಾಗದದ ತಟ್ಟೆಗೆ ಎರಡು ರೊಟ್ಟಿ ,ಚಟ್ನಿ, ಹಾಕಿದೆ ಪಲ್ಯ ಹಾಕುವ ಹೊತ್ತಿಗೆ ಅವನು ಹೋದರೆ, ಅಯ್ಯೋ ಸಾಕು ಇರಲಿ, ಎಂದು ಅವನ ಕಡೆ ನೋಡಿ ಬಾ ಎಂದು ಸನ್ನೆ ಮಾಡಿದೆ, ಅವ ನಮ್ಮ ಕಡೆ ಬರತೊಡಗಿದ, ಇವರೆಲ್ಲ ಹೇಯ್ ಅವನು ಮತ್ತೆ ಬರ್ತಾ ಇದಾನೆ…. ಅಂತ ಗಾಬರಿಯಲ್ಲಿ ಹೇಳಿದರು, ನಾನೇ ಕರೆದೆ ಎಂದು ಹೇಳುತ್ತಾ ಅವನಿಗೆ  ಸನ್ನೆ ಮಾಡಿದೆ…… ನಾನು ಈ ತಟ್ಟೆ ಇಲ್ಲಿ ಇಡುತ್ತೇನೆ. ನೆಲದ ಮೇಲೆ, ನೀನು ತಗೊಂಡು ಹೋಗು, ಅಂತ. ಅವನಿಗೆ ಅರ್ಥವಾಯಿತು, ಆಯ್ತು ಎಂದು ತಲೆ ಅಲ್ಲಾಡಿಸಿದ. ನಾನು ಆ ತಟ್ಟೆ ನೆಲದ ಮೇಲೆ…. (ಅಂದರೆ ಅದು ರಸ್ತೆನೇ…..) ಇಟ್ಟು… ತಗೊ ಎಂದು ಹೇಳಿ ನನ್ನವರ  ಹತ್ತಿರ  ಬಂದು ನಿಂತೆ…. ಅವನಿಗೆ ಆದ ಖುಷಿಃ ಅಷ್ಟು ಇಷ್ಟಲ್ಲ….. ಆ ತಟ್ಟೆಗೆ ಭಕ್ತಿ ಇಂದ ಮೂರು ಸಲ ನಮಸ್ಕರಿಸಿ ತನ್ನಲ್ಲಿ ಇದ್ದ ಒಂದು ಕಪ್ಪು ಕವರಿಗೆ ಹಾಕಿ ಕೊಂಡು..ನನ್ನ ಕಡೆ ನೋಡುತ್ತಿದ್ದ ಅವನಿಗೆ ನನ್ನನ್ನು  ಕ್ಷಮಿಸು ಎಂಬ ತಪ್ಪಿತ ಮನೋಭಾವದಿಂದ ನಾನು ಕೈ ಮುಗಿದೆ, ಆ ಹೊತ್ತಿನ ಊಟ ಸಿಕ್ಕಿತಲ್ಲ ಎಂಬ ತ್ರುಪ್ತ ಮನೋಭಾವದಿಂದ ಆತ ಕೈ ಎತ್ತಿ ಮುಗಿದು ಹೊರಟು ಹೋದ. ಆತನಿಗೆ ಊಟ ಕೊಟ್ಟೆನಲ್ಲಾ ಎಂಬ ಸಮಾಧಾನ ನನ್ನಲ್ಲಿ ಇತ್ತಾದರೂ ನೆಲದ ಮೇಲೆ ಇಟ್ಟೆನಲ್ಲ  ಎಂಬ ಅಸಮದಾನ ಇತ್ತು…. ಹಾಗೆಯೇ ನಾವು ಬೆಳಗಿನ ಉಪಹಾರ ಮುಗಿಸಿ ಪರಸ್ಪರ ನಮ್ಮ ಊರಿನ ಕಡೆ ಪ್ರಯಾಣ ಮುಂದುವರೆಸಿದೆವು… ಮಾರ್ಗ ಮದ್ಯೆ ನನ್ನ ಅಮ್ಮನ ನೆನಪಾಯಿತು. ನನ್ನಮ್ಮ ಹೇಳಿದ್ದ ಅವಳ ಅನುಭವದ ಒಂದು ಘಟನೆ ನೆನಪಾಯಿತು… ನಮ್ಮ ಮನೆಯ ಮುಂದೆ ಸುಮಾರು ಬೆಳಗ್ಗೆ ಹನ್ನೊಂದು  ಗಂಟೆ ಸಮಯದಲ್ಲಿ ಯಾರೋ ಒಬ್ಬ ವ್ಯಕ್ತಿ  ಕೂತಿದ್ದನಂತೆ. ಅಮ್ಮ ಹೊರಗಡೆ ಬಂದಾಗ ತಾಯಿ ಹೊಟ್ಟೆ ತುಂಬ ಹಸಿದಿದೆ ತಿನ್ನಲು ಏನಾದ್ರೂ ಕೊಡವ್ವ ಎಂದನಂತೆ, ಪ್ರತಿದಿನ ಒಬ್ಬರಿಗೆ ಉಳಿಯುವಷ್ಟು ಅಡಿಗೆ ತಿಂಡಿ ಮಾಡುತ್ತಿದ್ದ ನನ್ನಮ್ಮ ಅವತ್ತು ಅಳತೆಗೆ ಸರಿಯಾಗಿ ಅಡಿಗೆ ಮಾಡಿ ಎಲ್ಲ ಖಾಲಿ ಮಾಡಿ ತೊಳೆದು ಇಟ್ಟಿದ್ದಳಂತೆ. ಇವ ಊಟ ಕೇಳಿದರೆ ಕೊಡಲು ಅಡಿಗೆ ಇಲ್ಲ…. ಇಲ್ಲ ಎನ್ನಲು ಬಾಯಿ ಬಂದಿಲ್ಲ… ಕೊಡಲೇ ಆತನಿಗೆ ಹೇಳಿದಳಂತೆ… ಅಣ್ಣ ಹತ್ತು ನಿಮಿಷ ಇಲ್ಲೇ ಕೂತಿರು,ತಿನ್ನಲು ತರುವೆ….ಇಲ್ಲೇ ಇರು ಬಂದೆ, ಎಂದವಳೇ…. ಮುಂದಿನ ಬಾಗಿಲು ಹಾಕಿ…. (ಸುರಕ್ಷತೆಯನ್ನು ಸಹ ನೋಡಿಕೊಳ್ಳ ಬೇಕಲ್ಲ) ಅಡುಗೆ ಮನೆಗೆ ಹೋಗಿ ಹತ್ತು ನಿಮಿಷದಲ್ಲಿ ಚಿತ್ರಾನ್ನ ಮಾಡಿ, . ಮನೆಯ ಹಿಂದೆ ಇರುವ ಬಾಳೆ ಗಿಡದಲ್ಲಿ ಎಲೆ ಕೊಯ್ದು ಅದರಲ್ಲಿ ಊಟ ಇಟ್ಟು, ಒಂದು ನೀರಿನ ಬಾಟಲಿನಲ್ಲಿ ನೀರು ತುಂಬಿಸಿಕೊಂಡು  ಬಂದು ಬಾಗಿಲು ತೆಗೆದಳಂತೆ,,, ಪಾಪ ಆತ ಅಲ್ಲೇ ಕಾಯುತ್ತಾ ಕುಳಿತಿದ್ದ ನಂತೆ. ಕೊಡಲೇ ಅವನಿಗೆ ಊಟ ನೀರು ಕೊಟ್ಟು ತಗೊ ಅಣ್ಣ ಊಟ ಮಾಡು ಅಂದಳಂತೆ, ಪಾಪ ಎಷ್ಟು ಹಸಿವೆ ಇತ್ತೋ ಏನೋ ಗಪಗಪನೆ ತಿಂದು ನೀರು ಕುಡಿದು ನಿನ್ನ ಹೊಟ್ಟೆ ತಣ್ಣಗೆ ಇರಲವ್ವ ಎಂದು ಎರಡು ಕೈ ಎತ್ತಿ ಹರಸಿ ಹೊರಟು ಹೋದನಂತೆ,, ,, ಇಂತಹ ಎಷ್ಟೋ ಅನುಭವಗಳು ನನ್ನ ತಾಯಿಗೆ ಆಗಿವೆ. ಇಂತಹ ಎಷ್ಟೋ  ಆಶೀರ್ವಾದಗಳು ನನ್ನ ತಾಯಿಗೆ ಸಿಕ್ಕಿವೆ,,, ಅದಕ್ಕೆ ಏನೋ ದೇವರು ಆಕೆಯನ್ನ ಚನ್ನಾಗಿ ಇಟ್ಟಿದ್ದಾನೆ,,, ನಾನು ಕೂಡಲೆ ನನ್ನ ಅಮ್ಮನಿಗೆ ಫೋನ್ ಮಾಡಿ ನಡೆದ ಘಟನೆ ಹೇಳಿದೆ…. ಅದಕ್ಕೆ ನನ್ನ ಅಮ್ಮ ಹೇಳಿದಳು,,,, ಒಳ್ಳೆ ಕೆಲಸ ಮಾಡಿದೆ ಕಣವ್ವ,,,, ದೇವರು ಒಂದೊಂದು ಸಲ ಯಾವುದೋ ರೂಪದಲ್ಲಿ ಬಂದು ನಮ್ಮ  ಪರೀಕ್ಷೆ  ಮಾಡ್ತಾನಂತೆ,,, ಸದ್ಯ ನೀನು ಅವನ್ನ ಹಾಗೆ ಕಳಿಸಿಲ್ಲ ,,, ಯಾವತ್ತು,,, ಯಾರನ್ನು,,,, ಬರಿ ಹೊಟ್ಟೇಲಿ ಕಳಿಸಬೇಡ,,,,,, ಒಳ್ಳೇ ಕೆಲ್ಸ ಮಾಡಿದೆ ಕಣವ್ವ…… ಎಂದಳು…. ಮನಸಿಗೆ ಸ್ವಲ್ಪ ಮಟ್ಟಿಗೆ ಸಮಾಧಾನ ಆಯ್ತಾದರೂ…. ನೆಲದ ಮೇಲೆ ಇಟ್ಟೆನಲ್ಲ… ಎಂಬ ಅಸಮಧಾನ ಈಗಲೂ ಇದೆ. ಈ ಕೊರೊನ ನಮ್ಮನ್ನ ನಮ್ಮ ಮಾನವೀಯ ಗುಣವನ್ನು ಅಳಿಸಿ ಹಾಕುತ್ತಿದೆ ಎಂದು ಬೇಸರವಾಗುತ್ತಿದೆ. ಥೂ  ಎಂತ ಕಾಲ ಬಂತು ಯಾರಾದರೂ ಊಟ ನೀರು ಕೇಳಿದರೆ ಕೊಡಲು ಭಯ….. ಬಿಕ್ಷೆ ಕೊಡಲು ಭಯ…. ಹತ್ತಿರ ನಿಂತು ಮಾತನಾಡಲು ಭಯ…… ಯಾರಾದರೂ ಸತ್ತರೆ ನೋಡಲು ಹೋಗಲು ಭಯ…… ನೋಂದವರಿಗೆ ಸಾಂತ್ವನ ಹೇಳಲು ಭಯ….. ಹಣ್ಣು ತರಕಾರಿ. ಮುಟ್ಟಲು ಭಯ….. ಮಕ್ಕಳನ್ನು ಮೊಮ್ಮಕ್ಕಳನ್ನು ಮುದ್ದಿಸಲು ಭಯ…… ಥೂ ಎಂತ ಕಾಲ ಬಂತಪ್ಪ……… ಹೇ  ಕೊರೊನ ಹೋಗಿ ಬಿಡು ನೀ ಆದಷ್ಟು ಬೇಗ….. ನಿನ್ನಿಂದ ನಮ್ಮ ಮಾನವೀಯತೆಗೆ ಬಿದ್ದಿದೆ ಬೀಗ……… ಯರಲ್ಲೂ ಇರಲಿಲ್ಲ ಅಮಾನವೀಯತೆಗೆ ಜಾಗ…… ಏಲರಲ್ಲೂ ತುಂಬಿ ತುಳುಕಾಡಿದೆ ಭಯವೆಂಬ ರೋಗ….. ಹೇ ಕೊರೊನ ಹೋಗಿಬಿಡು ನೀ ಆದಷ್ಟು ಬೇಗ…… *******

ಮಾನವೀಯತೆ ಮರೆಸುತ್ತಿದೆ ಕೊರೊನ Read Post »

ಕಾವ್ಯಯಾನ

ಆಪ್ತೇಷ್ಟರು

ಕವಿತೆ ಆಪ್ತೇಷ್ಟರು ಪುಷ್ಪಾ ಮಾಳ್ಕೊಪ್ಪ ನರನಲ್ಲದೇ ಮರವ ನಿಂದಿಪರೇಯನ್ನ ನಿತ್ಯ ನಿಂದಿಪರು ಬೇಕುಅವರೇ ಯನ್ನ ಆಪ್ತರು ಕಾಣಾ ಅನ್ಯರನಲ್ಲದೇ ಲೋಕದಿ ತನ್ನಾಡಿಕೊಂಬರೇಅಡಿಗಡಿಗೆ ಯನ್ನ ಆಡಿಕೊಂಬರು ಬೇಕುಅವರೆನ್ನತ್ಯಾಪ್ತರು ಕಾಣಾ ಕಡುಗೋಪವಿಲ್ಲದೆಯೆ ಜಗದಿ ಜರಿಯುವರೇಯನ್ನ ಜನುಮಕಾಗುವಷ್ಟು ಜರಿಯುವರು ಬೇಕುಅವರೆನ್ನ ಜೀವಬಂಧುಗಳು ಕಾಣಾ ಹೀನಾಯದಿಂ ಕಾಣದೇ ಎನ್ನ ಹಿತವಪ್ಪುದೆ ಮರುಳೆಹಿತವಪ್ಪುದು ಅವರಿಂದೆ ಅವರೆನ್ನ ಹರಸಿದವರು ಕಾಣಾ ಛೀ ಥೂ ಎಂದರಲ್ಲವೇ ಶ್ವಾನದಿಂ ತೆರದಿಎನ್ನ ತುಚ್ಛೀಕರಿಸುವರು ಬೇಕುಅವರೆನ್ನ ತಾಳ್ಮೆಯಂ ಹೆಚ್ಚಿಸಿದವರು ಕಾಣಾ ಕುಟುಕಿದವರಲ್ಲವೇ ಎನ್ನ ಕಣ್ಣತೆರೆಸಿದವರುಕುಟುಕತನವದು ಬೇಕುಅವರೆನ್ನ ನಿದ್ದೆಯಿಂ ಎಬ್ಬಿಸಿದವರು ಕಾಣಾ ಖಂಡಿಸಿದವರೆನ್ನ ವಿಷಯ ಮಂಡಿಸಿದವರುಖಡಾಖಂಡಿತವು ಬೇಕುಅವರೆನ್ನ ಕಂಠಸ್ಥರಯ್ಯಾ ಇವರಲ್ಲವೇ ಎನ್ನ ತಿದ್ದಿ ತೀಡುವವರುಬಂದುದೆದುರಿಸುವುದ ಕಲಿಸುವವರುಬದುಕ ಕಲಿಸುವವರು. ***************

ಆಪ್ತೇಷ್ಟರು Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ನಮ್ಮ ಪೂರ್ವಜರು ನೆಲೆಸಿದ್ದ ‘ಗುಂದಿ ಹಿತ್ತಲು’ ನಮ್ಮ ಮನೆಯಿಂದ ಕೂಗಳತೆ ದೂರಮದಲ್ಲಿಯೇ ಇತ್ತಾದರೂ ಇತ್ತೀಚೆಗೆ ಅಲ್ಲಿ ನೆಲೆಸಿದ ಕುಟುಂಬಗಳು ಮಾಸ್ಕೇರಿ ಮತ್ತು ಅಗ್ಗರಗೋಣದ ಕಡೆಗೆ ವಲಸೆ ಹೋಗಿ ಸರಕಾರಿ ಭೂಮಿ ಪಡೆದು ನೆಲೆ ಕಂಡುಕೊಂಡಿದ್ದವು

Read Post »

ಇತರೆ, ದಾರಾವಾಹಿ

ದಾರಾವಾಹಿ ಆವರ್ತನ ಅದ್ಯಾಯ-18 ಶಂಕರನ ಭಾಗೀವನದಲ್ಲಿ ಗೋಪಾಲನ ಮನೆಯನ್ನು ಸೇರಿಸಿ ಒಟ್ಟು ಮೂವತ್ತೊಂದು ಮನೆಗಳಿವೆ. ಮುಸ್ಲೀಮರು ಮತ್ತು ಕ್ರೈಸ್ತರನ್ನು ಹೊರತುಪಡಿಸಿ ಉಳಿದ ಬಹುತೇಕ ಜಾತಿಯವರು ಭಾಗಿವನದಲ್ಲಿ ಐದು, ಆರು, ಏಳು, ಹತ್ತು ಮತ್ತು ಇಪ್ಪತ್ತು ಸೆಂಟ್ಸ್‍ಗಳ ಜಾಗದ ಮಾಲಕರಾಗಿ ಹೊಸ ಮನೆಗಳ ಒಡೆಯರಾಗಿ ನೆಮ್ಮದಿಯಿಂದ ಬಾಳುತ್ತಿದ್ದಾರೆ. ಗೋಪಾಲನ ಮನೆಯ ಪಕ್ಕದ ಮನೆ ಬ್ಯಾಂಕರ್ ನಾರಾಯಣರದ್ದು. ಅವರ ಒತ್ತಿನಲ್ಲಿ ಮರದ ವ್ಯಾಪಾರಿ ಸುಂದರಯ್ಯನವರಿದ್ದಾರೆ. ಅವರಾಚೆಗಿನದ್ದು ಜೀವವಿಮಾ ಕಂಪನಿಯ ನಿವೃತ್ತ ಉದ್ಯೋಗಿ ಲಕ್ಷ್ಮಣಯ್ಯ, ಸುಮಿತ್ರಮ್ಮ ದಂಪತಿಯದ್ದು. ಅವರ ಬಳಿಕದ್ದು ಉಮೇಶಯ್ಯನದ್ದು ಅದರ ನಂತರದ್ದು, ಪ್ರಸಿದ್ಧ ‘ನವರತ್ನ’ ಚಿನ್ನಾಭರಣ ಮಳಿಗೆಯ ಉದ್ಯೋಗಿ ರಮೇಶನದ್ದು. ಆ ನಂತರದವು ರಾಜೇಶ್ ಕುಮಾರ್ ಮತ್ತು ಜಗದೀಶ್ ಕುಮಾರ್ ಹಾಗೂ ಕೇಶವನದ್ದು. ಇನ್ನೂ ಮುಂದಕ್ಕೆ ಹೋದರೆ ಮೊಗವೀರರದ್ದೂ ಮತ್ತು ಸರಕಾರದ ವಿವಿಧ ಅಂಗಸಂಸ್ಥೆಗಳ ನೌಕರರದ್ದೂ ಕೆಲವು ಮನೆಗಳಿವೆ.    ಭಾಗೀವನದ ಮುಖ್ಯ ದ್ವಾರದ ಬಲಮುಗ್ಗಲಿನ ಸುಮಾರು ಇಪ್ಪತ್ತು ಸೆಂಟ್ಸ್ ಜಾಗದಲ್ಲಿ ವಿವಿಧ ಮರಮಟ್ಟುಗಳಿಂದ ತುಂಬಿ ಹಚ್ಚಹಸುರಿನಿಂದ ಕಂಗೊಳಿಸುತ್ತ ಭಾಗೀವನಕ್ಕೆ ವಿಶೇಷ ಶೋಭೆಯನ್ನು ನೀಡುವಂಥದ್ದೊಂದು ಚಂದದ ತೋಟವಿದೆ. ಅದರ ನಡುವೆ ಪ್ರಾಚೀನ ವಿನ್ಯಾಸದಿಂದ ನಿರ್ಮಿಸಿದ ಸುಂದರವಾದ ಹೆಂಚಿನ ಮನೆಯೊಂದಿದೆ. ಅದು ಆಯುರ್ವೇದ ವೈದ್ಯ ಡಾಕ್ಟರ್ ನರಹರಿಯ ಮನೆ. ಅವನು ಅಪ್ಪಟ ನಿಸರ್ಗಪ್ರೇಮಿ ಮತ್ತು ಮೇಲಾಗಿ ಬ್ರಹ್ಮಾಚಾರಿ ಕೂಡಾ. ಮಧ್ಯಮವರ್ಗದ ಸುಸಂಸ್ಕೃತ ಕುಟುಂಬವೊಂದರಲ್ಲಿ ಜನಿಸಿದ ಇವನು ಸುಮಾರು ಮೂವತ್ತೆರಡರ ಹರೆಯದ ಎಣ್ಣೆಗೆಂಪಿನ ಸ್ಫುರದ್ರೂಪಿ ತರುಣ. ನರಹರಿಯ ಹೈಸ್ಕೂಲ್ ವಿದ್ಯಾಭ್ಯಾಸದ ಹಂತದಲ್ಲಿ ಬಲಾಯಿ ಪಾದೆಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಬಸ್ಸು ಅಪಘಾತವೊಂದರಲ್ಲಿ ಅವನ ತಂದೆ ತಾಯಿ ಇಬ್ಬರೂ ಗತಿಸಿದರು. ಹಾಗಾಗಿ ಮಾವಂದಿರ, ಅಂದರೆ ತಾಯಿಯ ಅಣ್ಣ ತಮ್ಮಂದಿರ ಆಸರೆಯಲ್ಲಿ ಬೆಳೆಯುತ್ತ ವಿದ್ಯೆಯನ್ನು ಮುಂದುವರೆಸಿದವನು ಹೆತ್ತವರ ಮತ್ತು ತನ್ನಾಸೆಯಂತೆ ಆಯುರ್ವೇದ ವೈದ್ಯಕೀಯವನ್ನು ಕಲಿತ. ಪದವಿ ಶಿಕ್ಷಣ ಮುಗಿಯುತ್ತಲೇ ಈಶ್ವರಪುರದ, ‘ಆಯುರ್ ಕೇರ್ ಹೆಲ್ತ್ ಸೆಂಟರ್’ ಆಸ್ಪತ್ರೆಯಲ್ಲಿ ಉದ್ಯೋಗ ದೊರಕಿತು. ಕೆಲವು ವರ್ಷಗಳ ಕಾಲ ಅವಿರತವಾಗಿ ರೋಗಿಗಳ ಸೇವೆ ಮಾಡಿದವನು ಭಾಗೀವನದಲ್ಲಿ ಜಾಗವೊಂದನ್ನು ಖರೀದಿಸಿ ಪುಟ್ಟ ಮನೆಯೊಂದನ್ನು ಕಟ್ಟಿಕೊಂಡು ನೆಮ್ಮದಿಯ ಜೀವನ ನಡೆಸುತ್ತಿದ್ದಾನೆ. ನರಹರಿಯು ಬಾಲ್ಯದಿಂದಲೇ ಹಸಿರು ಪ್ರಕೃತಿ ಮತ್ತು ವನ್ಯಜೀವಿಗಳ ಕುರಿತು ಅಪಾರ ಪ್ರೀತಿಯನ್ನು ಬೆಳೆಸಿಕೊಂಡವನು. ಹಾಗಾಗಿ ತನ್ನ ಬಿಡುವಿನಲ್ಲಿ ದೇಶದಾದ್ಯಂತ ಹಬ್ಬಿರುವ ಪಶ್ಚಿಮಘಟ್ಟಗಳಲ್ಲೂ ಅವುಗಳ ತಪ್ಪಲಿನ ವಿವಿಧ ಅಭಯಾರಣ್ಯಗಳಲ್ಲೂ ದಣಿವರಿಯದೆ ಸಂಚರಿಸುವಂಥ ನೆಚ್ಚಿನ ಹವ್ಯಾಸವನ್ನು ರೂಢಿಸಿಕೊಂಡಿದ್ದ. ಅದರ ಫಲವಾಗಿ ಹಸಿರು ಪರಿಸರ ಮತ್ತು ಮೂಕ ಜೀವಜಾಲಗಳ ಕುರಿತು ವಿಶೇಷ ಜ್ಞಾನವೂ ಹಾಗೂ ನಿಸರ್ಗದೊಂದಿಗೆ ಅನ್ಯೋನ್ಯವಾಗಿ ಬೆರೆತು ಬಾಳುವ ಸಹಜ ಕಲೆಯೂ ಅವನಿಗೊಲಿದಿತ್ತು.    ಭಾಗೀವನದ ಬಡಾವಣೆಯ ಕುಟುಂಬಗಳಲ್ಲಿ ಮೇಲ್ಮಮಧ್ಯಮವರ್ಗ ಮತ್ತು ಶ್ರೀಮಂತರೇ ಹೆಚ್ಚಾಗಿರುವುದು. ಬಹುತೇಕರು ಸರಕಾರಿ ಉದ್ಯೋಗ ಮತ್ತಿತರ ಉನ್ನತ ನೌಕರಿಯಲ್ಲಿದ್ದಾರೆ. ಆದರೆ ಇವರೆಲ್ಲರ ನಡುವೆ ಗೋಪಾಲನದೊಬ್ಬನದೇ ಸಣ್ಣ ಹಂಚಿನ ಮನೆಯ, ಕಡು ಬಡತನದ ಕುಟುಂಬವಿರುವುದು. ಭಾಗೀವನದ ಎಡ ಮಗ್ಗುಲಿನ ಸುಮಾರು ಐವತ್ತು ಗಜ ದೂರದಲ್ಲಿ ಒಂದು ಎಕರೆಗಳಷ್ಟು ವಿಸ್ತಾರವಾದ ಮದಗವೊಂದಿದೆ. ಅದು ವರ್ಷವಿಡೀ ತುಂಬಿ ಹರಿಯುತ್ತದೆ. ಅದನ್ನು ನೋಡಿಯೇ ಶಂಕರ ಭಾಗೀವನದ ಭೂಮಿಯನ್ನು ಖರೀದಿಸಿದ್ದು. ಆ ಸಮೃದ್ಧ ಸರೋವರದಿಂದಾಗಿ ಬುಕ್ಕಿಗುಡ್ಡೆ ಗ್ರಾಮದ ನೂರಾರು ಮನೆಗಳ ಬಾವಿಗಳು ವರ್ಷವಿಡೀ ತುಂಬಿರುತ್ತವೆ. ಕೃಷಿಭೂಮಿಗಳು, ತೋಟಗಾರಿಕೆಗಳು ಉತ್ತಮ ಫಸಲು ನೀಡುತ್ತವೆ. ಭಾಗೀವನದ ಮನೆಗಳ ಬಾವಿಗಳಲ್ಲೂ ಹದಿನೈದರಿಂದ ಇಪ್ಪತ್ತು ಅಡಿಗಳೊಳಗೆ ಶುದ್ಧ ನೀರು ಸಿಕ್ಕಿದೆ. ಆದ್ದರಿಂದ ಈ ಬಡಾವಣೆಗೆ ನೀರಿನ ಸಮಸ್ಯೆ ಎಂದೂ ಕಾಡಿದ್ದಿಲ್ಲ.    ಈ ಸರೋವರವು ಸದಾ ತುಂಬಿರಲು ಮುಖ್ಯ ಕಾರಣವೂ ಇದೆ. ಮದಗದ ಸುತ್ತಲಿನ ಮುಕ್ಕಾಲು ಪ್ರದೇಶವನ್ನು ಪುರಾತನವಾದ ದೊಡ್ಡ ಅಡವಿಯೊಂದು ಆವರಿಸಿಕೊಂಡಿದೆ. ಈ ಪರಿಸರವು ಶೀನಯ್ಯ ಎಂಬವನ ಕುಟುಂಬಕ್ಕೆ ಸೇರಿದ್ದು ಎಂದು ಊರ ಜನರು ಹೇಳುತ್ತಾರೆ. ಈ ಕಾಡಿನಲ್ಲಿ ಮೂರು ನಾಲ್ಕು ಶತಮಾನಗಳಷ್ಟು ಪ್ರಾಚೀನವಾದ ಮರಗಳು, ಅನೇಕ ಬಗೆಯ ಬಳ್ಳಿಗಳು, ಬಗೆಬಗೆಯ ಔಷಧೀಯ ಸಸ್ಯಸಂಪತ್ತುಗಳು ಮತ್ತು ವಿವಿಧ ಜಾತಿಯ ಕಾಡುಪ್ರಾಣಿಗಳು ವಾಸಿಸುತ್ತಿದ್ದವು. ಅಲ್ಲದೇ ಆ ಮಲೆಯು ನಾಗ, ಪರಿವಾರ ದೈವಗಳ ವಾಸಾಸ್ಥಾನವೆಂದೂ ಹೇಳಲಾಗುತ್ತಿತ್ತು. ಆದ್ದರಿಂದ ಊರವರು ಆ ಹಾಡಿಯೊಳಗೆ ಹೋಗಲು ಹೆದರುತ್ತಿದ್ದರು. ದೇಶವನ್ನು ಸಂರಕ್ಷಿಸುವ ಬಲಿಷ್ಠ ಯೋಧರ ಪಡೆಯಂತಿದ್ದ ಆ ಅರಣ್ಯದ ಅಸಂಖ್ಯಾತ ಮರಗಳು ಪ್ರತೀವರ್ಷ ಮಳೆ ಮೋಡಗಳನ್ನು ತಡೆದು ನಿಲ್ಲಿಸಿ, ಮಳೆಯನ್ನು ಭೂವಿಗಿಳಿಸಿ ಮದಗವನ್ನು ತುಂಬಿಸುತ್ತ ಸುತ್ತಮುತ್ತಲಿನ ಚರಾಚರ ಜೀವರಾಶಿಗಳಿಗೂ ಜೀವನಾಡಿಯಾಗಿವೆ. ಹಾಗಾಗಿ ಮಳೆಗಾಲ ಸಮೀಪಿಸುತ್ತಿದ್ದಂತೆಯೇ ವಿವಿಧ ದೇಶಗಳಿಂದ ವಲಸೆ ಹೊರಡುವ ಪಕ್ಷಿಸಂಕುಲವು ಇಲ್ಲಿಗೆ ಬಂದು ಮದಗದ ದಡದ ಮರಗಳಲ್ಲೂ ಮತ್ತು ಹಾಡಿಯೊಳಗೂ ಗೂಡುಕಟ್ಟಿ ಸಂತಾನೋತ್ಪತ್ತಿ ಮಾಡುತ್ತ ಬದುಕುವುದನ್ನು ನೋಡುವುದೇ ಒಂದು ಮಧುರಾನಂದ!    ಭಾಗೀವನದಲ್ಲಿ ಜಾಗಕೊಳ್ಳಲು ಮತ್ತು ಮನೆಗಳನ್ನು ಖರೀದಿಸಲು ಬಂದವರಲ್ಲಿ ಹೆಚ್ಚಿನವರು ಅದರ ಸುತ್ತಮುತ್ತಲಿನ ಹಸಿರು ಸೌಂದರ್ಯಕ್ಕೆ ಮಾರುಹೋಗಿಯೇ ಶಂಕರನ ದುಬಾರಿ ಬೆಲೆಯನ್ನೂ ಲೆಕ್ಕಿಸದೆ ಕೊಂಡಿದ್ದರು. ಶಂಕರ ಭಾಗೀವನದ ಜಮೀನನ್ನು ಲೇಔಟ್ ಮಾಡಿಸಿ, ಮನೆಗಳನ್ನು ಕಟ್ಟಿಸಿ ಮಾರಾಟವನ್ನೇನೋ ಮಾಡಿದ್ದ. ಆದರೆ ಆ ಬಡಾವಣೆಯ ಸುತ್ತಲೂ ಆವರಣವೊಂದನ್ನು ಕಟ್ಟಿಸಿಕೊಡಲು ಅವನ ಜಿಪುಣತನ ಬಿಟ್ಟಿರಲಿಲ್ಲ. ಇತ್ತೀಚೆಗೆ ಬಾಕುಡಗುಡ್ಡೆಯ ಜಾಗಕ್ಕೆ ದೊಡ್ಡ ಮೊತ್ತವನ್ನು ಸುರಿದಿದ್ದುದರಿಂದಲೂ ಅದರಲ್ಲಿ ಹುಟ್ಟಿಕೊಂಡಿದ್ದ ನಾಗನ ಸಮಸ್ಯೆಯಿಂದಲೂ ಭಾಗೀವನದ ಆವರಣದ ಕಥೆಯನ್ನು ಮರೆತುಬಿಟ್ಟಂತಿದ್ದ. ಆದರೆ “ತಮ್ಮ ಬಡಾವಣೆಯ ಸುತ್ತಮುತ್ತ ಹೊಲಗದ್ದೆಗಳು ಮತ್ತು ದಟ್ಟ ಕುರುಚಲು ಹಾಡಿಗಳು ಇದ್ದುದರಿಂದ ಕಾಡುಪ್ರಾಣಿಗಳು, ಹಾವು, ಅರಣೆ, ಚೇಳು ಮತ್ತು ಕ್ರಿಮಿಕೀಟಗಳು ತಮ್ಮ ವಠಾರದೊಳಗೂ, ಮನೆಗಳೊಳಗೂ ಬಂದು ತೊಂದರೆ ಕೊಡುತ್ತವೆ. ಆದ್ದರಿಂದ ಆದಷ್ಟು ಬೇಗ ಪಾಗರ ನಿರ್ಮಿಸಿಕೊಡಬೇಕು!” ಎಂದು ವಠಾರದವರು ಶಂಕರನನ್ನು ಒತ್ತಾಯಿಸುತ್ತಿದ್ದರು.    ಆದರೆ ಅವನು, ‘ಆಯ್ತು, ಆಯ್ತು. ಸದ್ಯದಲ್ಲೇ ಮಾಡಿಸಿ ಕೊಡುವ. ಮೊನ್ನೆಯವರೆಗೆ ಶಿಲೆಕಲ್ಲಿನ ತಾಪತ್ರಯ ಇತ್ತು. ಈಗ ಮರಳು ಮತ್ತು ಸಿಮೆಂಟಿನ ಕೊರತೆ ಶುರುವಾಗಿದೆ. ಹಾಗಾಗಿ ಇನ್ನೂ ಸ್ವಲ್ಪ ಕಾಲ ಹೋಗಲಿ!’ ಎನ್ನುತ್ತ ಕಾಲಾಹರಣ ಮಾಡುತ್ತಿದ್ದ. ಹೀಗಿದ್ದವನಿಗೆ ಈಚೆಗೆ ಹೊಸದೊಂದು ಉಪಾಯವೂ ಹೊಳೆದಿದ್ದುದರಿಂದ, ‘ಅಲ್ಲಾ, ನಿಮ್ಮ ನಿಮ್ಮ ಜಾಗಗಳಿಗೆ ನೀವು ನೀವೇ ಕಂಪೌಂಡ್ ವಾಲ್ ಹಾಕಿಕೊಂಡಿದ್ದೀರಿ. ಹೀಗಿರುವಾಗ ಮತ್ತೆಂಥ ಭಯ ನಿಮಗೆ?’ ಎಂದು ನಗುತ್ತ ಜಾರಿಕೊಳ್ಳುತ್ತಿದ್ದಾನೆ. ಇನ್ನು ಹತ್ತು ಹದಿನೈದು ಮನೆಗಳವರೂ ತಂತಮ್ಮ ಜಾಗಗಳಿಗೆ ಪಾಗರ ಕಟ್ಟಿಕೊಂಡರೆ ಇಡೀ ಬಡಾವಣೆಯ ಆವರಣಕ್ಕೆ ತಗಲುವ ದೊಡ್ಡ ಖರ್ಚುವೆಚ್ಚ ಉಳಿದಂತೆಯೇ ಎಂಬುದು ಅವನ ಯೋಚನೆ. ಆದರೆ ಅವನ ಈ ಲೆಕ್ಕಾಚಾರದಿಂದ ಮುಂದೊಂದು ದಿನ ಇಡೀ ಭಾಗೀವನದ ನಿವಾಸಿಗಳಿಗೆ ದೊಡ್ಡ ತಾಪತ್ರಯಗಳು ಬಂದು ಬಡಿಯಲಿವೆ ಎಂಬುದು ಅವನಿಗಾಗಲಿ ಅಥವಾ ಭಾಗೀವನದ ನಿವಾಸಿಗಳಿಗಾಗಲಿ ತಿಳಿದಿರಲಿಲ್ಲ!                                                                                                *** ರಾಧಾ, ಕೃಷಿಕ ಕುಟುಂಬದಿಂದ ಬಂದ ಹೆಣ್ಣು. ಹಾಗಾಗಿ ಬಾಲ್ಯದಿಂದಲೂ ಅವಳಿಗೆ ಹಸು, ಕೋಳಿ, ನಾಯಿ, ಬೆಕ್ಕುಗಳೆಲ್ಲ ಹತ್ತಿರದ ಬಂಧುಗಳಂತಿದ್ದವು. ಆದರೆ ಅಲೆಮಾರಿಯಂಥ ಗಂಡನನ್ನು ಕಟ್ಟಿಕೊಂಡ ಮೇಲೆ ಅವಳಿಗೆ ಆ ಪ್ರಾಣಿಗಳೊಂದಿಗಿನ ಸಂಬಂಧವು ಕಡಿದುಹೋಗಿತ್ತು. ತನಗೊಂದು ಸ್ವಂತ ಮನೆಯಾದ ಮೇಲಾದರೂ ತನ್ನಿಷ್ಟದ ಪ್ರಾಣಿಪಕ್ಷಿಗಳನ್ನು ಸಾಕಬೇಕು ಎಂದು ಅವಳು ಆಗಾಗ ಅಂದುಕೊಳ್ಳುತ್ತಿದ್ದಳು. ಹಾಗಾಗಿ ಈಗ ಸ್ವಂತ ಮನೆಯೇನೋ ಆಗಿದೆ. ಆದರೆ ಕೇವಲ ನಾಲ್ಕು ಸೆಂಟ್ಸಿನಷ್ಟಗಲದ ಜಾಗದಲ್ಲಿ ಸಣ್ಣ ಮನೆಯಾಗಿ ಒಂದು ತುಂಡು ಅಂಗಳ ಮಿಕ್ಕಿರುವುದೇ ಹೆಚ್ಚು. ಅಂಥದ್ದರಲ್ಲಿ ಸಾಕುಪ್ರಾಣಿಗಳಿಗೆಲ್ಲಿಯ ನೆಲೆ! ಎಂದುಕೊಳ್ಳುತ್ತ ನಿರಾಶಳಾಗುತ್ತಿದ್ದಳು. ಆದರೂ ಅವಳು ತನ್ನ ಆಸೆಯನ್ನು ಬಿಟ್ಟಿರಲಿಲ್ಲ. ವಠಾರದವರಿಗೆ ತೊಂದರೆಯಾಗದಂತೆ ಕೋಳಿ, ನಾಯಿ ಮತ್ತು ಗಬ್ಬದ ಹಸುವೊಂದನ್ನು ತಂದು ಇದ್ದ ಜಾಗದೊಳಗೆಯೇ ಸುಧಾರಿಸಿಕೊಂಡು ಸಾಕಿದರೆ ಒಂದಿಷ್ಟು ಮೇಲ್ಸಂಪಾದನೆಯಾದರೂ ಆದೀತು ಎಂದು ಆಲೋಚಿಸುತ್ತಿದ್ದಳು. ಹೀಗಾಗಿ ಆ ಸಂಗತಿಯನ್ನು ಒಮ್ಮೆ ಗಂಡನಿಗೂ ಹೇಳಿ ಚರ್ಚಿಸಿದಳು. ಗೋಪಾಲನ ಅಜ್ಜಿ, ಅಜ್ಜಂದಿರೂ ಕೃಷಿಕರಾಗಿದ್ದವರು. ಅವನ ಬಾಲ್ಯವೂ ಕೆಲವು ಕಾಲ ಅವರೊಂದಿಗೆ ಕಳೆದಿತ್ತು. ಶಾಲಾ ರಜಾ ದಿನಗಳಲ್ಲಿ ಅಜ್ಜಿಯ ಮನೆಗೆ ಹೋದಾಗಲೆಲ್ಲ ಅವನೂ ಹೆಚ್ಚಾಗಿ ದನಕರು, ನಾಯಿ ಮತ್ತು ಕೋಳಿಗಳೊಂದಿಗೆ ಆಟವಾಡಿಕೊಂಡೇ ಬೆಳೆದವನು. ಆದ್ದರಿಂದ ಮಡದಿಯ ಯೋಚನೆ ಅವನಿಗೂ ಇಷ್ಟವಾಯಿತು. ‘ಆಯ್ತು ಮಾರಾಯ್ತಿ ಸಾಕುವ. ಆದರೆ ನಮ್ಮ ವಠಾರದಲ್ಲಿ ಹೆಚ್ಚಾಗಿ ಮಡಿಮೈಲಿಗೆಯವರೇ ಇರುವುದಲ್ಲವಾ. ಅವರ್ಯಾರೀಗೂ ತೊಂದರೆಯಾಗದಂತೆ ಸಾಕಬೇಕು ನೋಡು!’ ಎಂದ ಗಂಭೀರವಾಗಿ. ‘ಹೌದು ಮಾರಾಯ್ರೇ, ನನಗೂ ಆ ಯೋಚನೆ ಬಂದಿತ್ತು. ಆದರೂ ನೀವು ಹೇಳಿದ ಹಾಗೆ ಅವುಗಳು ಇನ್ನೊಬ್ಬರ ವಠಾರದತ್ತ ಹೋಗದಂತೆ ನೋಡಿಕೊಂಡರಾಯ್ತು!’ ಎಂದಳು ತಾನೂ ಕಾಳಜಿಯಿಂದ. ಗೋಪಾಲ ಮರುದಿನವೇ ಗರಡಿಗುಡ್ಡೆಯ ವನಜಕ್ಕನ ಮನೆಗೆ ಹೋಗಿ ಒಂದು ಜೊತೆ ಊರ ಕೋಳಿಯನ್ನು ಕೊಂಡು ತಂದು ಹೆಂಡತಿಗೊಪ್ಪಿಸಿದ. ಅವು ಬಹಳಬೇಗನೇ ಮನೆಮಂದಿಯ ಆರೈಕೆಯಿಂದಲೂ, ಪಕ್ಕದ ಹಾಡಿಗುಡ್ಡೆಗಳಲ್ಲಿ ಸಿಗುವ ಕ್ರಿಮಿಕೀಟಗಳ ಸೇವನೆಯಿಂದಲೂ ತಮ್ಮ ವಂಶೋತ್ಪತ್ತಿಯನ್ನು ಹುಲುಸಾಗಿ ಬೆಳೆಸತೊಡಗಿದವು. ಪರಿಣಾಮ ಕೆಲವೇ ಕಾಲದೊಳಗೆ ನಾಲ್ಕೈದು ಹುಂಜಗಳು ಅಂಕದ ಹೋರಾಟಕ್ಕೂ ಹುರಿಗೊಂಡು ನಿಂತವು. ಇದರಿಂದ ಹುರುಪುಗೊಂಡ ಗೋಪಾಲ ಅವುಗಳನ್ನು ಮಸಣದಗುಡ್ಡೆ, ಪುತ್ತೂರು, ಗರಡಿಗುಡ್ಡೆ ಮತ್ತು ಕೆಂಪ್ತೂರಿನಲ್ಲಿ ನಡೆಯುವ ಕೋಳಿ ಅಂಕಗಳಿಗೆ ಕೊಂಡುಹೋಗಿ ಮಾರುತ್ತ ಸಾವಿರ ಸಾವಿರ ಗಳಿಸತೊಡಗಿದ. ಅದೇ ಹಣದಿಂದ ಒಂದು ಗಬ್ಬದ ಹಸುವೂ ರಾಧಾಳ ಮನೆಯನ್ನು ಪ್ರವೇಶಿಸಿತು. ಅಷ್ಟಾಗುತ್ತಲೇ ನೆರ್ಗಿಹಿತ್ತಲಿನ ಕರಿಮಾರು ಹಾಡಿಯೊಂದರ ಪಕ್ಕದ ಕಸದ ತೊಟ್ಟಿಯಲ್ಲಿ ಯಾರೋ ಎಸೆದು ಹೋಗಿದ್ದ ಮತ್ತು ಇನ್ನೂ ಕಣ್ಣು ಬಿಟ್ಟಿರದ ಮೂರು ನಾಯಿ ಮರಿಗಳಲ್ಲಿ ದಷ್ಟಪುಷ್ಟವಾದ ಚೆಂದದ ಹೆಣ್ಣು ಮರಿಯೊಂದನ್ನು ಗೋಪಾಲ ಮನೆಗೆ ತಂದು ಸಾಕತೊಡಗಿದ. ರಾಧಾ ಅದಕ್ಕೆ ‘ಮೋತಿ’ ಎಂದು ಹೆಸರಿಟ್ಟಳು. ಆ ಕುನ್ನಿಯು ಅವನ ಮಕ್ಕಳ ಪ್ರೀತಿಯ ಆರೈಕೆಯಿಂದ ಎಲ್ಲರೊಡನೆ ಅನ್ಯೋನ್ಯವಾಗಿ ಬೆರೆತು ತನ್ನ ನಾಲ್ಕು ಸೆಂಟ್ಸಿನ ಪ್ರದೇಶದೊಳಗೆ ಅಪರಿಚಿತವಾದ ಸಣ್ಣದೊಂದು ಕೀಟವನ್ನೂ ನುಸುಳಲು ಬಿಡದೆ ಕಾವಲು ಕಾಯುತ್ತ ಬೆಳೆಯುತ್ತಿತ್ತು. ಹೀಗೆ ಗೋಪಾಲನ ಸಂಸಾರ ಸ್ವಂತ ಜಾಗದಲ್ಲಿ ಪ್ರಕೃತಿಗೆ ಅತೀ ಆಪ್ತವಾಗಿ ಜೀವನ ಸಾಗಿಸತೊಡಗಿತು.    ಗೋಪಾಲ ಹೊಸದಾಗಿ ಕೊಂಡು ತಂದಿದ್ದ ‘ಫೈಟರ್’ ಜಾತಿಯ ಹೇಟೆಯೊಂದು ಒಮ್ಮೆ ಹದಿನಾರು ಮೊಟ್ಟೆಗಳನ್ನಿಟ್ಟು ಇಪ್ಪತ್ತೊಂದು ದಿನಗಳ ಕಾಲ ಅವುಗಳಿಗೆ ಕಾವು ನೀಡಿ ಮರಿ ಮಾಡಿತು. ಆ ಹೇಟೆಯು ತನ್ನ ಮರಿಗಳೊಂದಿಗೆ ಹೊರಗೆ ಹೋದೀತೆಂದುಕೊಂಡು ರಾಧಾ ದಿನಾಲು ಅದನ್ನು ತನ್ನ ಇಳಿ ಮಾಡಿನ ಕಂಬಕ್ಕೆ ಕಟ್ಟಿ ಹಾಕಿ ಸಾಕುತ್ತಿದ್ದಳು. ಹಾಗಾಗಿ ಮರಿಗಳು ಮನೆಯ ವಠಾರದೊಳಗೆಯೇ ಓಡಾಡುತ್ತ ಬಲಿಯುತ್ತಿದ್ದವು. ಆದರೆ ಕ್ರಮೇಣ ಬೆಳೆದ ಮರಿಗಳು ತಾಯಿಯನ್ನು ಬಿಟ್ಟು ಹೊರಗೆ ಇಣುಕಲು ಮತ್ತು ಓಡಲು ಹವಣಿಸತೊಡಗಿದವು. ಅದನ್ನು ಕಂಡ ರಾಧಾ ಒಂದು ದಿನ ಹೇಟೆಯನ್ನು ಮರಿಗಳೊಂದಿಗೆ ಸುಮಾರು ದೂರದ ಮದಗದತ್ತ ಅಟ್ಟಿಕೊಂಡು ಹೋಗಿ ಮೇಯಲು ಬಿಟ್ಟು ಬಂದಳು. ಆದರೆ ಚುರುಕು ಬುದ್ಧಿಯ ಆ ಹೇಟೆಯು ಯಜಮಾನ್ತಿ ಗಮನಿಸುವವರೆಗೆ ಮಾತ್ರವೇ, ‘ಕೊಟ, ಕೊಟಾ…ಕೊಟ, ಕೊಟಾ…!’ ಎಂದು ತನ್ನ ಮರಿಗಳನ್ನು ಕರೆಯುತ್ತ ಮದಗದತ್ತ ಹೋಯಿತು. ಅವಳು ಯಾವಾಗ ಹಿಂದಿರುಗಿ ಹೋದಳೋ ಹೇಟೆಯೂ ತಟ್ಟನೆ ತನ್ನ ದಿಕ್ಕು ಬದಲಿಸಿಬಿಟ್ಟಿತು. ತನ್ನ ಮರಿಗಳ ಮೇಲೆ ಅತೀವ ಕಾಳಜಿಯಿದ್ದ ಅದು ಮದಗದ ಆಸುಪಾಸು ಹದ್ದು, ಗಿಡುಗ, ಕಾಗೆ, ನರಿ, ಮುಂಗುಸಿ ಮತ್ತು ಕಾಡುಬೆಕ್ಕುಗಳಂಥ ಅಪಾಯದ ಪ್ರಾಣಿಗಳಿರುವುದನ್ನು ತಿಳಿದಿತ್ತು. ಹಾಗಾಗಿ ಅವುಗಳಿಂದ ತನ್ನ ಮರಿಗಳಿಗೆ ಅಪಾಯವೆಂದೂ ಮತ್ತು ಇಲ್ಲಿನ ಕ್ರಿಮಿಕೀಟಗಳಿಗಿಂತಲೂ ಮೇಲ್ಮಟ್ಟದ ಮೇವು ತನ್ನ ಬಡಾವಣೆಯೊಳಗಿನ ಮನೆಗಳಲ್ಲಿಯೇ ದೊರಕುತ್ತದೆ ಎಂಬುದನ್ನೂ ಅರಿತಿತ್ತು. ಆದ್ದರಿಂದ ಹೇಟೆಯು ತನ್ನ ವಠಾರದ ಮನೆಗಳತ್ತಲೇ ಮುಖ ಮಾಡಿದ್ದು ಮೊದಲಿಗೆ ಬ್ಯಾಂಕರ್ ನಾರಾಯಣರ ಮನೆಯ ಗೇಟು ನುಸುಳಿ ಅಂಗಳವನ್ನು ಹೊಕ್ಕಿತು. (ಮುಂದುವರೆಯುವುದು)  *************************** ಗುರುರಾಜ್ ಸನಿಲ್ ಗುರುರಾಜ್ ಸನಿಲ್

Read Post »

You cannot copy content of this page

Scroll to Top