ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

*ಗೋರಿಯೊಳಗಿನ ಉಸಿರು”

ಪುಸ್ತತಕ ಸಂಗಾತಿ *ಗೋರಿಯೊಳಗಿನ ಉಸಿರು” ಗೋಕಾವಿ ನಾಡಿನ ಪ್ರಾಥಮಿಕ ಶಾಲೆಯೊಂದರ‌ ಮುಖ್ಯೋಪಾದ್ಯಾಯರಾಗಿರುವ  ಶ್ರೀ ಈಶ್ವರ ಮಮದಾಪೂರ ಅವರು ಈಗಾಗಲೇ‌ ಕನ್ಮಡ‌ ಕಾವ್ಯ ಕ್ಷೇತ್ರದ ಪರಿಚಿತ ಹೆಸರು. ಮಮದಾಪೂರರ ಚುಟುಕುಗಳು,ಮಮದಾಪೂರ  ಹನಿಗವಿತೆಗಳು , ಕಾವ್ಯಯಾನ (ಕವನ ಸಂಕಲನ) ಮೊದಲಾದ ಸಂಕಲನಗಳನ್ನು ಹೊರ ತಂದಿದ್ದಾರೆ. ಈಚೆಗೆ ಕಾವ್ಯ ರಚನೆಗೆ ಕಾವ್ಯರಚಕರಿಗೆ ಪ್ರಧಾನ ವೇದಿಕೆಯಾಗಿರುವದು ವ್ಯಾಟ್ಸಪ್ ಎಂಬ ವಿನೂತನ ಮಾದ್ಯಮ.ಕನ್ನಡ ಕಾವ್ಯಕೂಟ ಎಂಬ ವ್ಯಾಟ್ಸಪ್ ಬಳಗದ  ಮೂಲಕವೇ ನೂರಾರು ಜನ‌ ಸಶಕ್ತ ಕವಿಗಳನ್ನು ಒಂದುಗೂಡಿಸಿದ ವಿಶೇಷತೆ ಈಶ್ವರ ಅವರದು.ಅವರು ಬರೆದಿರುವ ಚುಟುಕುಗಳ ವಿಶೇಷತೆಯನ್ನು ಗುರುತಿಸಿದ ಹಿರಿಯ ಕವಿ ಡಾ.ಸಿ.ಪಿ.ಕೆ ಯವರು ಈಶ್ವರ‌ ಮಮದಾಪೂರ ಅವರನ್ನು‌      ‘ ಪ್ರೇಮದ ಪ್ರವಾದಿ’  ಎಂದು ಗುರುತಿಸಿರುವುದು  ಮಮದಾಪೂರ ರ ಕಾವ್ಯಕ್ಕೆ ಸಂದ ಗೌರವವಾಗಿದೆ.       “ಗೋರಿಯೊಳಗಿನ‌ ಉಸಿರು” ಮಮದಾಪೂರ ಅವರು ರಚಿಸಿದ ಒಟ್ಟು ೩೭ ಗಜಲ್ಗಳ ಸಂಕಲನ .  ಇದು ೨೦೨೦ ರಲ್ಲಿ ಈಶ್ವರ ಪ್ರಕಾಶನ ಗೋಕಾಕದಿಂದ ಪ್ರಕಟವಾಗಿದೆ .ಇಲ್ಲಿನ  ಪ್ರತಿ ಗಜಲ್ ಗಳೂ ಹೊಂದುವ ಚಂದದ ರೇಖಾ ಚಿತ್ರ ಒಳಗೊಂಡಿವೆ . ಈಚೆಗೆ ಕಾವ್ಯ‌ ಮತ್ತು‌ ಕುಂಚಗಳೆರಡೂ ಸ್ಪಂದಿಸುತ್ತ ಸಂಕಲನ ಗಳ ಅಂದ ಹೆಚ್ಚುತ್ತಿರುವುದನ್ನು ಕಾಣುತ್ತೇವೆ. ತೀರಾ ಈಚೆಗೆ ಬಂದ ಗದುಗಿನ ಕವಿ ಏ. ಎಸ್‌.ಮಕಾನದಾರ ಅವರ ‘ಪ್ಯಾರಿ ಪದ್ಯಗಳು’ ಹನಿಗವನ ಸಂಕಲನದಲ್ಲಿ  ಕವಿಯಂತೆಯೆ ಚಿತ್ರ ಒದಗಿಸಿದ ಚಿತ್ರಕಲಾವಿದ ವಿಜಯ ಕಿರೇಸೂರ ಅವರ ಪರಿಚಯದ ಒಂದು ಪುಟ ಸೇರಿಸಿದ್ದು ನಿಜಕ್ಕೂ ಕಲೆಗಳ ಸಾಂಗತ್ಯದ ಉದಾಹರಣೆಯಾಗಿದೆ. ಈಶ್ವರ ಅವರ ಸಂಕಲನಕ್ಕೆ ಅವರ ಕಾವ್ಯದ ಓದುಗ ಸದಾ ಪ್ರೇರಕರೆಂದು ಗುರುತಿಸಿಕೊಂಡ ಯುವ‌‌ ಗಜಲ್ ಕಾರರಾದ ಶ್ರೀ ಜಬೀವುಲ್ಲಾ .ಎಂ.ಅಸದ್ ರವರು ಚಿತ್ರ ಬಿಡಿಸಿದ್ದಾರೆ ಮಾತ್ರವಲ್ಲ ,ಈಶ್ವರ್ ಅವರ ಗಜಲ್ ಗಳ ಕುರಿತು ಕೆಲವು ಮೆಚ್ಚಿಕೆಯ‌‌ ಮಾತೂ‌ ಬರೆದಿದ್ದಾರೆ.   ಈಶ್ವರ ಅವರ ಗಜಲ್ ಗಳು ಕೇವಲ ಪ್ರೇಮದ ಆಲಾಪಗಳಲ್ಲ. ನವಿರು‌ಭಾವದ ನಿರೂಪಣೆಗಳಲ್ಲ ಬೆನ್ನುಡಿ ಬರೆದಿರುವ ಹಿರಿಯ ಕವಿಗಳಾದ ಡಾ. ಸರಜೂ ಕಾಟ್ಕರ್ ಅವರು ಗುರುತಿಸಿರುವಂತೆ .” ಮಮದಾಪೂರ ಅವರ ಗಜಲ್ ಯಾಕೆ ವಿಶಿಷ್ಟವಾಗುತ್ತದೆ ಎಂದರೆ ಅವರು ಬರೀ ಪ್ರೀತಿ ,ಪ್ರೇಮ, ವಿರಹ , ಸಾಕಿ,ಚಂದ್ರ , ಚಕೋರಿಗಳನ್ನು ಮಾತ್ರ ತಮ್ಮ ಗಜಲ್ಗಳಲ್ಲಿ ತರುವದಿಲ್ಲ. ಸಾಮಾಜಿಕ ಅನಿಷ್ಠಗಳಾದ ಬಡತನ‌,ಪರಿಸರ ಮಾಲಿನ್ಯ ನಗರೀಕರಣದ ಶಾಪ ,ಜಾತಿ,ವರ್ಣಭೇದ, ಮುಂತಾದ ಸಾಮಾಜಿಕ  ಪಿಡುಗುಗಳ ಬಗ್ಗೆಯೂ ಅವರ ಗಜಲ್ ಗಳ ಮೂಲಕ ಧ್ವನಿ ಒದಗಿಸಿದ್ದಾರೆ. ಕಾವ್ಯವು ನೊಂದವರ ಧ್ವನಿಯಾಗಬೇಕು. ಹಾಗಾದಾಗ ಮಾತ್ರ ಅವರ ಸಾರ್ಥಕತೆಗೆ ಅರ್ಥ ಬರುತ್ತದೆ.ಈಶ್ವರ ಮಮದಾಪೂರ ಕಾವ್ಯವು ನೊಂದವರ , ಬೆಂದವರ ಧ್ವನಿಯಾಗಿ ಹೊರಹೊಮ್ಮಿದೆ ” ಎನ್ನುವ ಅವರ ಮಾತುಗಳೂ ಈಶ್ವರ ಅವರ ಗಜಲ್  ಕಾವ್ಯಕ್ಕೆ‌ ನಿಜವಾಗಿ ಸಂದ ಗೌರವವಾಗಿದೆ.ಮತ್ತು‌ ಅವರು ಬರೆದಿರುವ ಸಾಲುಗಳಿಗೆ‌ ಪೂರಕವಾದ ಪುರಾವೆಗಳನ್ನು ಒದಗಿಸುವ ಎಷ್ಟೋ ಗಜಲ ಗಳು ಈ ಸಂಕಲನದಲ್ಲಿರುವುದೂ ಅಷ್ಟೇ ಸತ್ಯವಾಗಿದೆ.          ಎರಡನೆಯ ಗಜಲ್ ದಲ್ಲಿ ಅನುಭಾವಿಕ‌ ನೆಲೆ ಇದೆ. ದಾಸರು‌ ಮನುಷ್ಯನ ಐಹಿಕ ಬದುಕು ಅರ್ಥಹೀನ, ಆತನ‌‌ ನಿಜವಾದ ನೆಲೆ ಏನಿದ್ದರೂ ಅದು‌ ಪರಲೋಕ, ಇಲ್ಲಿಗೆ ಬಂದಿರುವದು ಸುಮ್ಮನೇ ಎನ್ನುವ ಅರ್ಥದ ವಿಚಾರ‌ ಮಂಡಿಸಿದ್ದರು. ಈ‌ ಕವಿ ಕೂಡಾ ದಾಸರ ಪದ್ಯದ ಸಾಲನ್ನೇ ಬಳಸಿಕೊಂಡು ಗಜಲ್ ವಿಸ್ತರಿಸುವ ರೀತಿ ಕುತೂಹಲಕ ರವಾಗಿದೆ. ಇಲ್ಲಿರುವದು ಸುಮ್ಮನೆ ನಿಜವಲ್ಲವೆ‌ ಗೆಳೆಯ ಅಲ್ಲಿರುವದು ನಮ್ಮ‌ ಮನೆ ಹೌದಲ್ಲವೇ ಗೆಳೆಯ ಎನ್ನುವ ಕವಿ ಆದರೆ ಇರುವಷ್ಟು ಕಾಲವಾದರೂ ಪರಸ್ಪರರು ಹೊಂದಿಕೊಂಡು ಹೋಗುವದು ಅಗತ್ಯ ವಲ್ಲವೇ ? ಎಂಬ ಬಹು‌ ಮಹತ್ವದ ತಿರುವನ್ನು‌‌ ಕವಿತೆಗೆ ಒದಗಿಸುತ್ತದೆ. .ಬದುಕನ್ನು ನಿರಾಕರಿಸುವ ನೆಲೆಯಿಂದ ಬದುಕನ್ನು ಸಹ್ಯವಾಗಿಸುವ ನೆಲೆಗೆ ಎತ್ತರಿಸುವ ಪ್ರಯತ್ನವಿದು. ಅದನ್ನೇ ಹೇಳುವ ಗಜಲ್ ಅನುಭಾವಿಕ ನೆಲೆಯಲ್ಲಿ ನಿಲ್ಲದೇ “ಇರುವಷ್ಟು ದಿನವಾದರೂ ಬದುಕನ್ನು ಸ್ವೀಕರಿಸುವ ಧನಾತ್ಮಕ ಚಿಂತನೆಗಿಳಿಯುವುದು”   ಈಶ್ವರರ ಕವಿತೆಯ ವಿಶೇಷತೆಯಾಗಿದೆ. ಅಂತೆಯೆ ಗಜಲ್‌ ಕೊನೆಮುಟ್ಟುವ  ಈ ತೀರ್ಮಾನ ಮಹತ್ವದ್ದು. ನಿನ್ನಷ್ಟಕ್ಕೆ ನೀನೋಬ್ಬನೇ ನಗುತ್ತಿದ್ದರೇನು ಬಂತು ನೊಂದವರ ಹೃದಯದಲ್ಲಿರಲು ಈಶ್ವರನಿಗೂ ಪ್ರೀತಿಯಲ್ಲವೇ ಮಿತ್ರ ಕವಿತೆಯ ಬಂಧ ಯಾವುದಾದರೇನು? ಅದು ಬದುಕನ್ನು ಪ್ರೀತಿಸುವುದು‌ ಮುಖ್ಯ ಎನ್ನುವದು ‌ಇಲ್ಲಿ‌ ಮಹತ್ವದ್ದು .           ಸಂಕಲನಕ್ಕೆ ಅರ್ಥಪೂರ್ಣ  ಮುನ್ನುಡಿ ಬರೆದಿರುವ ಡಾ,ಮಲ್ಲಿನಾಥ ಎಸ್ ತಳವಾರ ಅವರು  ಗಜಲ್ ಓದಿಗೆ ಹೊಸ ಪ್ರಸ್ತಾವಣೆ ಎನ್ನುವ ರೀತಿಯಲ್ಲಿ ಕೆಲವು‌ ಮಾತು ಹೇಳಿರುವದು ಗಜಲ್‌ ಪ್ರವೇಶಕ್ಕೆ ಒಳ್ಳೆಯ ದಾರಿ ತೋರುತ್ತದೆ. ಗಜಲ್‌ ಕುರಿತು ಶ್ರೀಯುತರು ಹೇಳುವ‌ ಮಾತುಗಳು ಸದಾ ಮನನಯೋಗ್ಯವಾಗಿವೆ. ಆರಂಭದಲ್ಲಿ ಪ್ರೀತಿ, ‌ಪ್ರೇಮ, ವಿರಹಗಳ ಸುತ್ತ ಸುತ್ತುತ್ತಿದ್ದ ಗಜಲ್ ಕಾವ್ಯ ಪ್ರಕಾರ ಇಂದು ಮಾನವ ಬದುಕಿನ ಸಕಲ ಲೋಕಕ್ಕೂ ವಿಸ್ತಾರಗೊಂಡು ಗಜಲ್ ಕಾವ್ಯ ಆಧುನಿ‌ಕ ಕನ್ನಡದ ಪ್ರಮುಖ ಕಾವ್ಯ ಪ್ರಕಾರವಾಗಿ ಹೊರಹೊಮ್ಮಿದೆ  . ನೂರಾರು ಜನ‌ ಕವಿಗಳು ಗಜಲ್ ಬರವಣಿಗೆಯತ್ತ ಧಾವಿಸುತ್ತಿದ್ದಾರೆ. “ಲಯ,ನಿಯಮ, ಲಕ್ಷಣಗಳನ್ನು ಹೊಂದಿರುವ ಗಜಲ್ ಕಾವ್ಯ ಪ್ರಕಾರವು ಸಾಹಿತ್ಯಾಸಕ್ತರ ಮನ ಸೆಳೆಯುತ್ತಿದೆ.ಇದರ ಮೂಲ ಛಂದಸ್ಸು  ಅರಬ್ ರಾಷ್ಟ್ರದಿಂದ ಬಂದಿದ್ದರೂ ಅದು ನೆಲೆಸಿದ್ದು ,ವಿಕಸನ ಗೊಂಡಿದ್ದು ಹಾಗೂ ಸಮೃದ್ಧ ಪರಂಪರೆಯಾಗಿ ಬೆಳೆದು ಬಂದದ್ದು‌ ಮಾತ್ರ ನಮ್ಮ ಭರತ ಖಂಡದಲ್ಲಿಯೇ. ಹಿಂದೂಸ್ತಾನಕ್ಕೆ ಬಂದ ಗಜಲ್ ನಲ್ಲಿ ಈ ದೇಶದ ಲೋಕಗೀತೆ ,ರೀತಿ ರಿವಾಜುಗಳು, ಋತು, ನೀರು,ಗಾಳಿ,ಹಸಿರು,ನೆಲ,ಹೂ ಹಬ್ಬ… ಹೀಗೆ ಹತ್ತು ಹಲವಾರು ವಿಷಯಗಳನ್ಮು ಒಳಗೊಂಡು ಇಂದು ಭಾರತೀಯ ಸಾಹಿತ್ಯ ಪ್ರಕಾರವಾಗಿ ಸಹೃದಯರ‌ ಮನವನ್ನು ತಣಿಸುತ್ತದೆ. ಎಷ್ಟರ ಮಟ್ಟಿಗೆ ಎಂದರೆ ಕಾವ್ಯ‌ಕೃಷಿಯಲ್ಲಿ ತೊಡಗಿರುವ ಪ್ರತಿಯೊಬ್ಬ ಕವಿಯೂ ತಾವೊಂದು ಗಜಲ್ ಬರೆಯಲೇಬೇಕು,ಬರೆಯದೆ ಹೋದರೆ ತನ್ನ ಸಾರಸ್ವತ ಲೋಕವೇ ಅಪೂರ್ಣ ಎಂದು ಭಾವಿಸಬಹುದಾದಷ್ಟು ”  (ಗಜಲ್ ಎಂಬ ಜೀವನದಿಯಲ್ಲಿ..-ಡಾ.ಮಲ್ಲಿಕಾರ್ಜುನ .ಎಸ್ ತಳವಾರ – ಮುನ್ನುಡಿಯಲ್ಲಿ) ಎಂದಿರುವದು ಸತ್ಯವಾಗಿದೆ. ಇಲ್ಲಿನ ಗಜಲ್ ಗಳನ್ನು  ಎರಡು ಭಾಗವಾಗಿಸಬಹುದು.ಪ್ರೀತಿ ಪ್ರೇಮ ವಿರಹ,ತನ್ನ ನಲ್ಲೆಯ ಅಗಲಿಕೆ , ಅದರ ವಿಷಾದ ಈ ಅಂಶಗಳನ್ನು ಹೇಳುವ ಗಜಲ್ ಗಳು ಇಲ್ಲಿ ಕೆಲವಿವೆ. “ಕೇಳದೇ ಕೊಟ್ಟಿರುವೆ ಹೃದಯವನ್ನು ಸ್ವೀಕರಿಸು ಗೆಳತಿ ಇನ್ನೇನು ಬೇಕು ನನ್ನನ್ನು‌ ಮೀಸಲಿಟ್ಟಿರುವೆ  ಪ್ರೀತಿಸು ಗೆಳತಿ” ಈ ಬಗೆಯ ಅಹವಾಲುಗಳು , ” ಜೀವಂತ ಕೊಲ್ಲದಿರು ಪ್ರೀತಿಯನ್ನು ಹೊರಗಿಟ್ಟು ಸತ್ತರೂ  ಮುಳ್ಳಿರದ ಗುಲಾಬಿ ನೀಡುವೆ ಮುದ್ದಿಸು ಗೆಳತಿ “   ಎಂಬ ಈ ಥರದ ಪ್ರೇಮಾಧಿಕ್ಯದ ಸಾಲುಗಳೂ ಇವೆ. ಅತಿಶಯ ಪ್ರೇಮ ಇಲ್ಲಿನದು.ಅವಳ ಪ್ರೇಮದ ತಿರಸ್ಕಾರ ಅವನನ್ನು  ಜೀವಂತ  ಹೆಣವಾಗಿಸಿದೆ.ಅದಕ್ಜೆ ತನ್ನವಳಾಗಿದ್ದವಳನ್ನು “ಒಲವ ಜಲದಿಂದ ಹೊರಗೇಕೆ ನೂಕಿದೆ ನನ್ನನ್ನು ಪ್ರೀತಿಯ ಉಸಿರಿಲ್ಲದೆ ಹೆಣವಾಗಿಸಿದೆ ಗೆಳತಿ‌ “ ಎಂದು ಕೇಳುತ್ತಾನೆ .ಅವಳಿಲ್ಲದ ರಾತ್ತಿ ತುಂಬ ಜಡವಾಗಿದ್ದು ” ಚಂದ್ರಮನ ಬೆಳಕದಿಂಗಳು ಕೂಡ ಬಿಸಿಯಾಗಿದೆ ” ಎನ್ನುತ್ತಾರೆ.ಈ ಜಗತ್ತು ಇಂತ‌ಹ ಪ್ರೀತಿಯನ್ನು ಹುಚ್ವು ಎನ್ನುತ್ತದೆ . ಆದರೆ ಯಾವ‌ ಪ್ರೇಮಿಗಳು ತಾನೇ  ಲೋಕದ ಮಾತು‌ ಕೇಳಿದ್ದಾರೆ?ಸತ್ತರೂ ಗೋರಿಯಲ್ಲದ್ದು  ಕನಸು ಕಾಣುವ ಇರಾದೆ ಇರುವ ಇಲ್ಲಿನ‌ ಪ್ರೇಮಿ ದೇವರನ್ನು “ಪ್ರೇಮಿಗಳಿಗೆ ವಿರಹದ ಶಾಪ ಇರಬಾರದು ಈಶ್ವರನೇ   ಒಂದಾಗಿ ಬಾಳುವಾಸೆ ಇನ್ನು ಜೀವಂತವಿದೆ ಗೆಳತಿ “ ಎಂದು ತಪಿಸುತ್ತಾನೆ  ಇಂತಹ ಹತ್ತಾರು ಸಾಲುಗಳನ್ನು  ಸಂಕಲನದಲ್ಲಿ ಕಾಣಬಹುದು. ಆದರೆ ನಿಜಕ್ಕೂ ಈ ಗಜಲ್ ಸಂಕಲನದ ಮಹತ್ವ ಇರುವದು ಇಲ್ಲಿ ಸಾಮಾಜಿಕವಾಗಿರುವ ಗಜಲಗಳ ರಚನೆಯಲ್ಲಿ. ಪಗರಾಣಿಗಳನ್ನು‌ ಮನುಷ್ಯ ನಡೆಸಿಕೊಳ್ಳುವ ರೀತಿಯೂ ಕವಿಯ ಮನವನ್ನು ನೋಯಿಸಿದೆ. ಗೋವಿನ ಹಾಡಿನ ರೀತಿಯಲ್ಲಿ ಇರುವ ಗಜಲ್ ಕಸ ತಿಂದರೂ ರಸವನ್ನೇ ನೀಡುವ ಅಕಳ‌ ಮೊಲೆಗೆ ಎಂಜಿನ್ ಗಳನ್ನು ಹಾಕಿ ಹಿಂಡುವ ದಾರುಣ ಚಿತ್ರನೀಡುತ್ತಾರೆ.ಇಲ್ಲಿ ಸಂಬಂಧಗಳು ಕುಸಿಯುತ್ತಿರುವದರತ್ತವೂ ಕವಿಯ ನೋವಿದೆ. ಇದರ ಜೊತೆಗೆ ಜ್ಞಾನದ  ಹಂಬಲವನ್ನು ಕವಿ ವ್ಯಕ್ತಪಡಿ ಸುತ್ತಾನೆ. ಆದರೆ ಆ ಜ್ಞಾನದ ಹಂಬಲ ಸ್ವ ಉಧ್ದಾರವನ್ನು ಬಯಸುವ ಪಾರಮಾರ್ಥದ ಹಂಬಲ ಮಾತ್ರವಾಗಿರದೆ ಅಲ್ಲಿಯೂ ಕೊನೆಗೆ ಕವಿ ಹಸಿದ ಹೊಟ್ಡೆಗಳು ಕಂಡರೂ ಕುರುಡತನವೇಕೆ ನನ್ನಲ್ಲಿ ಹಂಚಿ ತಿನ್ನುವ ಗುಣ ಬರಬೇಕಿದೆ  ನನ್ನಲ್ಲಿ ಎನ್ನುವಲ್ಲಿ ಮತ್ತೆ ಅದೃ ಬಡವರ ಪರ,ಇಲ್ಲದವರ ಪರ ಕಾಳಜಿ ವಹಿಸುವ ಪ್ರಜ್ಞೆಯಾಗಿ ಕಂಡಿದೆ. ಹಾಗೆಯೇ ಬಾಲ್ಯದ ಸ್ನೇಹ ಎಂದೂ ಕಡಿಮೆಯಾಗದುದನ್ನು ಮಕ್ಕಳ ಮೃದು ಹೃದಯಗಳನ್ನು ಗುರುತಿಸುತ್ತಾರೆ.ಅವರದು ” ಪುಟ್ಟ ಎದೆಯಲ್ಲಿ ಅಡಗಿಹ ಗಟ್ಟಿ ನಿಷ್ಕಲ್ಮಶ ಪ್ರೀತಿ” ಎಂದು ಕಂಡುಕೊಂಡಿದ್ದಾರೆ. ಅವರ ಕಾವ್ಯದ ಪ್ರಮುಖ ಉದ್ದೇಶವೆ ಒಡೆದವ ಮನಸುಗಳನ್ನು ಒಂದು‌ ಮಾಡುವದು‌ ಮತ್ತು ” ಭಿನ್ನ‌ಮನಸುಗಳ ಸುಟ್ಟು ಪ್ರೀತಿ ಬಿತ್ತುವುದು” ಆಗಿದೆ.ಒಟ್ಟಾರೆ ಅವರ ಗಜಲು ಗಳು ಸಾರುವದು ಮನುಷ್ಯ  ಪ್ರೀತಿಯನ್ನೇ..ಅದು ಅವರು‌‌ ಕಂಡು‌ಕೊಂಡ ಗಂಡು ಹೆಣ್ಣಿನ‌ ಪ್ರೀತಿಯಲ್ಲಿಯೂ ಇದೆ ಅಂತೆಯೆ ತಮ್ಮ ಚೆಲುವೆಗೆ ಹೇಳುವ ಈ‌ಮಾತು ಲೋಕ‌ ಕಾಪಾಡುವ ಮಾತೂ ಹೌದು. ದಿಕ್ಕೆಟ್ಟ ದಾರಿಯಲ್ಲಿ ದಾರಿ ದೀವಿಗೆಯಾದೆ ಚಲುವೆ ಕತ್ತಲೆ ರಾತ್ರಿಯಲ್ಲಿ‌ತೋರು ಬೆಳಕಾದೆ ಚಲುವೆ ಕಾವ್ಯವೂ ದಿಕ್ಜೆಟ್ಟ ದಾರಿಯಲ್ಲಿ ಬೆಳಕು ಚಲ್ಕುವ ದೀವಿಗೆ ಎಂದು ನಂಬಿದ ಶ್ರೀ ಈಶ್ವರ ಮಮದಾಪೂರ ಕಾವ್ಯೋದ್ಯೋಗದ ಆರಂಭದಿಂದಲೂ‌ ಪ್ರೀತಿ ಬೆಳೆಯನ್ನೇ ಬಿತ್ತಿ‌ ಬೆಳೆದಿದ್ದಾರೆ. ಅವರಿಂದ ಇನ್ನೂ ಇಂತಹ ಹತ್ತಾರು ಕೃತಿ‌ ನಿರೀಕ್ಷಿಸಬಹುದಾಗಿದೆ. ***************************** ಡಾ.ಯ.ಮಾ.ಯಾಕೊಳ್ಳಿ

*ಗೋರಿಯೊಳಗಿನ ಉಸಿರು” Read Post »

ಕಾವ್ಯಯಾನ

ಕವಿತೆ ಹುಟ್ಟುವಾಗ

ಕವಿತೆ ಕವಿತೆ ಹುಟ್ಟುವಾಗ ಅಬ್ಳಿ,ಹೆಗಡೆ ಸೂರ್ಯ,ಸಾಯುತ್ತಿದ್ದ.ಕಾಯುವಹಾಗಿಲ್ಲ,ತಿರುಗಿ ಹುಟ್ಟುವವರೆಗೆ.ಕತ್ತಲು ಕಳೆಯುವವರೆಗೆ.ಪ್ರಸವವೇದನೆ ತಾಯಿಗೆ–ಭಯ,ಆತಂಕ,ಸಂತಸಒಟ್ಟೊಟ್ಟಿಗೆ,ಹೊಟ್ಟೆಯೊಳಗೆಕೈ,ಕಾಲಾಡಿಸುವ ಪುಟ್ಟ-ಕವಿತೆ,ದೈತ್ಯ ಪ್ರಸವವಾದರೆ‌ ಅಳಿವು,ಉಳಿವಿನ ಪ್ರಶ್ನೆ.ತಂದೆಯಾರೊ ಗೊತ್ತಿಲ್ಲ.ವ್ಯಭಿಚಾರಿಣಿ ಪಟ್ಟ ಗಟ್ಟಿಆಗುವ ಆತಂಕ,ಒಳಗೊಳಗೆ,ಅಸಾಧ್ಯ-ನೋವಿನಲ್ಲೂ ತಾಯ್ತನ-ದ ಖುಷಿ,ಅಪ್ಯಾಯಮಾನ.ಸುಖ ಪ್ರಸವ ಕತ್ತಲಲ್ಲಿ,ಕಣ್ತೆರೆಯಬೇಕು-ಮುದ್ದು ಕವಿತೆ,ಹುಟ್ಟುವಹೊಸ ಬೆಳಕಲ್ಲಿ.ತನ್ನ,ಪುಟ್ಟ,ಪಿಳಿ,ಪಿಳಿಕಣ್ಣುಗಳಿಂದ ನೋಡಬೇಕು,ನಿಚ್ಚಳ ಬೆಳಕಲ್ಲಿ,ಹೊಚ್ಚ ಹೊಸ ಜಗತ್ತನ್ನು.ಮುಗಿಲೆತ್ತರಕ್ಕೆ ಎದ್ದುನಿಲ್ಲಬೇಕು ನೀಳಕಾಯಳಾಗಿ.ತಾಯ್ತನದ ಸಾರ್ಥಕತೆಇರುವದೇ ಇಲ್ಲಿ.ಭಯ,ಆತಂಕ,ನೋವು,ಸಂತಸ ಎಲ್ಲದರಸಾರ್ಥಕತೆಯೂ ಇಲ್ಲೆ.ಕತ್ತಲಲ್ಲಿ ಹುಟ್ಟಿದಕವಿತೆಯಲ್ಲಿ. **************************

ಕವಿತೆ ಹುಟ್ಟುವಾಗ Read Post »

ಪುಸ್ತಕ ಸಂಗಾತಿ

‘ ಬಯಲೊಳಗೆ ಬಯಲಾಗಿ’

ಪುಸ್ತಕ ಸಂಗಾತಿ ‘ ಬಯಲೊಳಗೆ ಬಯಲಾಗಿ’ ಕನ್ನಡ ಗಜಲ್ ಸಾಹಿತ್ಯ ಲೋಕದಲ್ಲಿ ಈಗಾಗಲೇ ಅಂತರ್ಜಾಲದ ಗುಂಪುಗಳ ಮೂಲಕ ಗಜಲ್ ಕಾರರಾಗಿ ಹೆಸರು ಮಾಡಿರುವ ಶ್ರೀ. ಲಕ್ಷ್ಮಿಕಾಂತ ಮಿರಜಕರ ಅವರು ಬಯಲೊಳಗೆ ಬಯಲಾಗಿ ತಮ್ಮ ಮೊದಲ ಗಜಲ್ ಸಂಕಲನವನ್ನು ಲೋಕಾರ್ಪಣೆಗೊಳಿಸಿದ್ದಾರೆ. ಹಾವೇರಿ ಜಿಲ್ಲೆಯ ಶ್ರೀ. ನೇತಾಜಿ ಹಾಗೂ ಶ್ರೀಮತಿ. ಲಕ್ಷ್ಮಿ ದಂಪತಿಯ ಪುತ್ರರಾದ ಲಕ್ಷ್ಮಿಕಾಂತ ಹುಟ್ಟೂರು ಶಿಗ್ಗಾಂವನಲ್ಲಿಯೇ ಪ್ರಾಥಮಿಕ, ಪ್ರೌಢ ಮತ್ತು ಪದವಿ ಶಿಕ್ಷಣವನ್ನು ಪೂರೈಸಿದವರು. ಬೆಂಗಳೂರಿನ ಎಂ. ವಿ. ಜೆ. ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ. ಎಡ್. ಪದವಿ ಪಡೆದು ನಂತರ ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ , ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ ಹಾಗೂ ಮಾಧ್ಯಮ ಅಧ್ಯಯನ ಎಂ.ಎ ಪದವಿಗಳನ್ನು ಪೂರೈಸಿದ್ದಾರೆ. ಪ್ರಸ್ತುತ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ದೇವಸಮುದ್ರದ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಪ್ರಭಾರ ಪ್ರಾಂಶುಪಾಲರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಲಕ್ಷ್ಮಿಕಾಂತ ಅವರ ಕಥೆ, ಕವನ ಮತ್ತು ಗಜಲ್ ಗಳು ಪ್ರಕಟಗೊಂಡಿವೆ. ನವೀನಚಂದ್ರ ಕಾವ್ಯ ಬಹುಮಾನ, ಗೋವಿಂದ ಪೈ ಸ್ಮಾರಕ ಕಾವ್ಯ ಬಹುಮಾನ , ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾವ್ಯ ಸ್ಪರ್ಧೆಯ ಬಹುಮಾನ ಹಾಗೂ ಅಕ್ಷರ ಐಸಿರಿ ಕಾವ್ಯ ಸ್ಪರ್ಧೆ ಬಹುಮಾನಗಳಿಗೆ ಭಾಜನರಾಗಿದ್ದಾರೆ. ಮೈಸೂರಿನ ಕರ್ನಾಟಕ ಕಾವಲು ಪಡೆ ಬಳಗದಿಂದ ೨೦೧೬ ನೇ ಸಾಲಿನ ‘ಆದರ್ಶ ಶಿಕ್ಷಕ ಪ್ರಶಸ್ತಿ’ , ಚಿತ್ರದುರ್ಗದ ಸಿರಿಗನ್ನಡ ಪ್ರಕಾಶನ ಬಳಗದಿಂದ ‘ಕನ್ನಡ ರತ್ನ ಶಿಕ್ಷಕ ಪ್ರಶಸ್ತಿ’, ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ೨೦೧೮ ನೇ ಸಾಲಿನ ‘ಉತ್ತಮ ಕನ್ನಡ ಶಿಕ್ಷಕ ಪ್ರಶಸ್ತಿ’ಗಳು ಲಭಿಸಿವೆ. ಗಜಲ್ ರಚನೆಯ ನಿಯಮಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡಿದ ನಂತರವೇ ಲಕ್ಷ್ಮಿಕಾಂತ ಅವರ  ಮೊದಲ ಗಜಲ್ ಸಂಕಲನದ ಕನಸು ನನಸಾದುದು. ನೇತಾಜಿ ಪ್ರಕಾಶನದಿಂದ ಪ್ರಕಟಗೊಂಡಿರುವ ಬಯಲೊಳಗೆ ಬಯಲಾಗಿ ಕೃತಿಯಲ್ಲಿ ಒಟ್ಟು ೬೩ ಗಜಲ್ ಗಳಿವೆ. ಮುರದ್ಧಫ್ ಗಜಲ್ ಗಳೇ ಹೆಚ್ಚಾಗಿದ್ದು ಗೈರ್ ಮುರದ್ಧಫ್ , ಜುಲ್ ಕಾಫಿಯಾ ಮತ್ತು ಸಂಪೂರ್ಣ ಮತ್ಲಾ ಗಜಲ್ ಗಳೂ ಇವೆ. ಗಜಲ್ ಕ್ಷೇತ್ರದಲ್ಲಿ ಖ್ಯಾತನಾಮರಾದ ಶ್ರೀ. ಅಲ್ಲಾಗಿರಿರಾಜ್, ಕನಕಗಿರಿ ಅವರ ಮುನ್ನುಡಿ ಹಾಗೂ ಶ್ರೀಮತಿ. ಪ್ರೇಮಾ ಹೂಗಾರ ಅವರ ಬೆನ್ನುಡಿ ಇವೆ.ಸಂಕಲನಕ್ಕೆ ಮುಖಪುಟವೇ ಮುಖ್ಯ ಆಕರ್ಷಣೆಯಾಗಿದೆ. ಮುದ್ರಣ ಅಚ್ಚುಕಟ್ಟಾಗಿದ್ದು ಪ್ರತೀ ಗಜಲಿನ ಪುಟ ವಿನ್ಯಾಸ ಓದುಗರ ಮನಸೆಳೆಯುತ್ತದೆ. ಗಜಲ್ ಗಳು ಕೇವಲ ಪ್ರೇಮ, ಪ್ರೀತಿ , ಶೃಂಗಾರಗಳಿಗೆ ಸೀಮಿತವಾಗಿರದೇ ಗಾಂಧಿ, ಡಾ.ಅಂಬೇಡ್ಕರ್, ದಮನಿತರ ನೋವು, ಹೆಣ್ಣಿನ ಶೋಷಣೆ, ಅಸಮಾನತೆ, ಮನುಷ್ಯರ ಸ್ವಾರ್ಥ, ಬಲಹೀನರ ಅಸಹಾಯಕತೆ , ಕೋಮುವಾದ…ಹೀಗೆ ವಿವಿಧ ವ್ಯಕ್ತಿ , ವಿಷಯಗಳ ಬಗ್ಗೆ ಪರಿಣಾಮಕಾರಿಯಾಗಿ ರಚಿಸಲ್ಪಟ್ಟಿವೆ. ಅಗಲಿದ ಪ್ರೀತಿಯ ತಂದೆಯವರಿಗೆ ಈ ಸಂಕಲನವನ್ನು ಅರ್ಪಿಸಿರುವ ಲಕ್ಷ್ಮಿಕಾಂತ ಅವರೇ ತಮ್ಮ ನುಡಿಗಳಲ್ಲಿ ಹೇಳಿರುವಂತೆ ‘ ಬಯಲು ‘ ಎಂಬ ಪದಕ್ಕೆ ‘ ಖಾಲಿಯಾದ ಆವರಣ ‘ ಎಂಬ ಅರ್ಥವಿದ್ದರೂ ಶರಣರು ಈ ಪದವನ್ನು ಪರಮಾತ್ಮನಿಗೆ ಸಮೀಕರಿಸಿದ್ದಾರೆ. ‘ಬಯಲು’ ಎಂಬುದಕ್ಕೆ ಸೃಷ್ಟಿಯೆಂಬ ದೇವರು, ಸತ್ಯ, ಜ್ಞಾನ, ಆನಂದ, ಶಕ್ತಿ , ಮುಕ್ತಿ, ನಿರ್ವಾಣ, ಸಮಾಧಿ, ಶಿವತ್ವ, ಬುದ್ಧತ್ವ, ಬಸವತ್ವ…… ಇತ್ಯಾದಿ ಅರ್ಥಗಳಿದ್ದು ಪರಿಪೂರ್ಣವಾದ ಅನಂತ ಚೈತನ್ಯದ ಪ್ರತೀಕವಾಗಿದೆ. ಮನುಷ್ಯ ಸ್ಥಾವರನಾಗದೇ ಜಂಗಮನಾಗಿದ್ದು ಬಯಲೊಳಗೆ ಬಯಲಾಗಿ ಬೆರೆತು ಯಾವಾಗಲೂ ಬಯಲಾಗುವ ಗುಣವನ್ನು ಹೊಂದಿರಬೇಕೆಂಬ ಆಶಯದೊಂದಿಗೆ ಈ ಗಜಲ್ ಸಂಕಲನವನ್ನು ಹೊರತಂದಿರುವ ಲಕ್ಷ್ಮಿಕಾಂತ ಅವರು ಗಜಲ್ ರಚನೆಯ ಅಮಲಿನಲ್ಲಿ ಕಳೆದುಹೋಗಿದ್ದಾರೆ. ಅವುಗಳು ನೀಡಿದ ಸುಖ ಮತ್ತು ಪ್ರಶಾಂತ ಭಾವನೆಯನ್ನು ತನ್ಮಯತೆಯಿಂದ ಅನುಭವಿಸಿದ್ದಾರೆ. ಬದುಕನ್ನು ವಿವಿಧ ದೃಷ್ಟಿಕೋನಗಳಿಂದ ನೋಡುವುದನ್ನು ಕಲಿತಿದ್ದಾರೆ. ಬಯಲೊಳಗೆ ಬಯಲಾಗಿ ಸಂಕಲನದ ಗಜಲ್ ಗಳನ್ನು ಓದುತ್ತಿದ್ದಂತೆ ಓದುಗರೂ ಓದಿನ ನಶೆಯಲ್ಲಿ , ದೊರೆವ ಹಿತ ಸಂವೇದನೆಯಲ್ಲಿ ಕಳೆದುಹೋಗುವುದು ಸುಳ್ಳಲ್ಲ. ಮನಮುಟ್ಟುವ, ನನಗಿಷ್ಟವಾದ ಕೆಲವು ಗಜಲ್ ಗಳ ಸಾಲುಗಳನ್ನು ನಾನೀಗ ಉಲ್ಲೇಖಿಸುತ್ತಿದ್ದೇನೆ. ಜಗದ ಎಲ್ಲ ಜೀವಿಗಳಲ್ಲಿ ಕಷ್ಟವೂ ಇದೆ ಸುಖವೂ ಇದೆ ಹಣೆಯಲಿ ವಿಧಿ ಬರೆದ ನಸೀಬಿನ ಎದುರು ಎಲ್ಲರೂ ಒಂದೇ ( ಗಜಲ್ ೧ ) ಅರಿವೆಂಬ ಬಯಲೊಳಗೆ ಬಯಲಾಗಬೇಕಿದೆ ಸಾಕಿ ಭಕ್ತಿಯೆಂಬ ಬಯಲೊಳಗೆ ಶರಣನಾಗಬೇಕಿದೆ ಸಾಕಿ ( ಗಜಲ್ ೪ ) ಸುಲಭವಾಗಿ ಸ್ನೇಹ ಸಂಬಂಧಗಳ ಕಡಿದುಕೊಳ್ಳುತ್ತಾರೆ ಕಾಂತ ಮನಸ್ಸುಗಳ ನಡುವೆ ಗೋಡೆ ಕಟ್ಟಿದ್ದಾರೆ ಯಾರನ್ನು ದೂರದಲಿ ( ಗಜಲ್ ೮ ) ಪ್ರಕ್ಷುಬ್ಧ ಕಾಶ್ಮೀರ ಮತ್ತೆ ಪ್ರೇಮ ಕಾಶ್ಮೀರವಾಗಿ ಬದಲಾಗಲಿ ಇನ್ನಾದರೂ ಕಲ್ಲು ತೂರುವ ಕೈಗಳಲಿ ಶಾಂತಿ ಹೂವುಗಳು ಅರಳಲಿ ಇನ್ನಾದರೂ ( ಗಜಲ್ ೧೩ ) ಕನಸು ಮುರಿದಿದೆ ಮನಸು ಮುರಿದಿಲ್ಲ ರಟ್ಟೆ ಗಟ್ಟಿಯಿದೆ ಇನ್ನೂ ಕೆಸರಾದ ಭೂಮಿಯಲ್ಲೇ ಕಮಲ ಅರಳಿಸುವೆವು ಮುಳುಗಿಲ್ಲ ಬದುಕು ( ಗಜಲ್ ೧೯ ) ಜಾತಿ, ಧರ್ಮ ,ಅಂತಸ್ತು ಎಂದು ಹೆಚ್ಚು ಬೀಗಬೇಡ ಕಾಂತ ಇತಿಹಾಸ ನೆನಪಿಸಿಕೊಳ್ಳುವುದಿಲ್ಲ ಮನುಷ್ಯತ್ವ ಮರೆತರೆ ( ಗಜಲ್ ೨೨ ) ಬೆಳಕನೀಯುವ ದೀಪಕ್ಕೂ ಇದೆ ಉರಿಯುವ ಸಂಕಟ ನೋವುಂಡ ಮನವೇ ಮುಕ್ತವಾಗಿ ನಗುವುದು , ತಿಳಿಯಿತೇ ಸಖಿ ( ಗಜಲ್ ೨೮ ) ನೀನಿಲ್ಲದೆ ನನ್ನ ಹಗಲು ಇರುಳು ಕಳೆದಿಲ್ಲ ನಿನ್ನ ತೋಳಲಿ ಇರದ ದಿನ ಅದು ನನ್ನದಲ್ಲ ( ಗಜಲ್ ೩೪ ) ನೀನು ಬೆಳಗಿದ ದೀಪದ ಬೆಳಕನು ಆರಿಸಿದ್ದೇವೆ ಕ್ಷಮಿಸು ಗಾಂಧಿ ನೀನು ತೋರಿಸಿದ ಸರಿದಾರಿಯನ್ನು ತೊರೆದಿದ್ದೇವೆ, ಕ್ಷಮಿಸು ಗಾಂಧಿ ( ಗಜಲ್ ೪೦ ) ಒಳಕೊಳೆ ತೊಳೆಯುವ ಜೀವಕೆ ಹತ್ತಿದಾಗಬೇಕು ಭರವಸೆ ತುಂಬುವ ಜೀವಕೆ ಹತ್ತಿರಾಗಬೇಕು ( ಗಜಲ್ ೪೪  ) ಪ್ರೀತಿ ಬಿಟ್ಟು ಯಾವುದೂ ಶ್ರೇಷ್ಠವಲ್ಲ ಇಲ್ಲಿ ಒಬ್ಬರಿಗೆ ಒಬ್ಬರು ನೆರವಾಗಬೇಕು ಮನುಷ್ಯರಂತೆ ( ಗಜಲ್ ೫೦ ) ನಡೆಯುತ್ತ ಅಂದುಕೊಂಡ ಗಮ್ಯ ಸೇರುವ ಅಲೆಮಾರಿಯಂತೆ ನಾನು ಈಜುತ್ತ ಕಷ್ಟಗಳ ನದಿಯನ್ನು ದಾಟುವ ಸಾಹಸಿಯಂತೆ ನಾನು ( ಗಜಲ್ ೬೦ ) ಲಕ್ಷ್ಮಿಕಾಂತ ಅವರ ಬರವಣಿಗೆ ಶಕ್ತಿಯುತವಾಗಿರುವುದಷ್ಟೇ ಅಲ್ಲದೆ ಸಾಮಾಜಿಕ ಪಿಡುಗುಗಳ ಬಗ್ಗೆ ಸ್ಪಷ್ಟ ಚಿತ್ರಣವನ್ನು ಹಾಗೂ ಮೌಲ್ಯಯುತ ಸಂದೇಶವನ್ನು  ನೀಡುತ್ತಿರುವುದು ಅವರ ಹೆಗ್ಗಳಿಕೆಯಾಗಿದೆ. ಆದರೆ , ಕೆಲವು ಗಜಲ್ ಗಳ ಮಿಸ್ರಾಗಳು ಸ್ವತಂತ್ರವಾಗಿಲ್ಲದಿರುವುದು ಒಂದು ಸಣ್ಣ ಕೊರತೆ. ಮುಂದಿನ ದಿನಗಳಲ್ಲಿ ಇದನ್ನು ನೀಗಿಸಿಕೊಂಡು ಅವರು ಮತ್ತಷ್ಟು ಸತ್ವಯುತ ಗಜಲ್ ಸಂಕಲನಗಳನ್ನು ಹೊರತರುವ ಮೂಲಕ ಗಜಲ್ ರಚನೆಯ ಕಲಿಕಾರ್ಥಿಗಳಿಗೆ ಮಾರ್ಗದರ್ಶನ ನೀಡುವಂತಾಗಲೆಂದು ಪ್ರೀತಿಪೂರ್ವಕವಾಗಿ ಹಾರೈಸುತ್ತೇನೆ. ಆ ತಾಯಿ ಸರಸ್ವತಿಯ ಆಶೀರ್ವಾದ ಎಂದೂ ಕಾಂತ ನ ಮೇಲಿರಲಿ. ***************************                          ಎ . ಹೇಮಗಂಗಾ                         

‘ ಬಯಲೊಳಗೆ ಬಯಲಾಗಿ’ Read Post »

ಕಥಾಗುಚ್ಛ

ತವರಿನ ಬೆಟ್ಟ

ಕಥೆ ತವರಿನ ಬೆಟ್ಟ ಶಾಂತಿ ವಾಸು ನಿಮ್ಮವ್ವ ಯೋಳ್ಕೊಟ್ಟಾಳೆನೋ? ಯಾವನ್ತವ ಉಕ್ತೈತೆ ಅಂತ ಮಾಡೀ? ಅವ್ನು ಯಾವನೋ ಮನೆ ಕಟ್ಟುದ್ರೆ ನಿನ್ನನ್ಡ್ಯಾಕೇ ಉರ್ಕಂತೈತೆ ರಂಡೆ?  ಪಿರ್ಯಾದಿ ಯಾಕೆ ಕೊಟ್ಟೆ ಅಂದ್ರೆ ನನ್ನಿಷ್ಟ ಅಂತೀಯ”? ಎನ್ನುತ್ತಾ ಹೆಂಡತಿ ಟಂಕಿಯ ಬೆನ್ನಿನ ಮೇಲೆ ಒಂದೇ ಸಮ ನಾಲ್ಕೈದು ಸಲ ಕುಟ್ಟಿ ಹೊಸ್ತಿಲು ದಾಟಿ ಹೊರಬಂದ ಅಳ್ಳಯ್ಯನಿಗೆ ಎಡಗಡೆಯ ಜಗುಲಿಯ ಮೇಲೆ ಪಟ್ಟಾಪಟ್ಟಿ ಚಡ್ಡಿ, ಮಾಸಿದ ಬನಿಯನ್ನು ತೊಟ್ಟು ಪಕ್ಕದಲ್ಲೇ ಚೌಕದ ಮನೆಗಳ ತೂತು ಬಿದ್ದ ಕಂಬಳಿ ಅದರ ಮೇಲೊಂದು ಕೋಲಿಟ್ಟು, ಕುಕ್ಕರಗಾಲಲ್ಲಿ ಕೂತು ಬೀಡಿ ಸೇದುತ್ತಿದ್ದ ಅಪ್ಪ, ತಾತು ಕಂಡಿದ್ದೇ ತಡ ದುರುಗುಟ್ಟಿ ನೋಡಿ “ಆ ಬಟ್ಟೆ ಬಿಚ್ಚಿ ಒಗಿಯೋಕ್ಕಾಕು ಅಂತ ಎಷ್ಡಪ ಯೋಳಾನಿ? ಮೂಸಾದೇ ಬ್ಯಾಡ ನೋಡೀರೇ ಸಾಕು ಗಬ್ಬಂತದೆ” ಎಂದವನು ಪಂಚೆಯನ್ನು ಮೊಣಕಾಲುಗುಂಟ ಮಾಡಚುತ್ತಾ ತಾತುವನ್ನು ದಾಟಿ ಮುಂದೆ ಹೋಗಿ, ತೆನೆ ಬಿಟ್ಟ ಜೋಳದ ಹುಲ್ಲಿಗೆ ಮೂತ್ರ ಸಿಂಪಡಿಸಿ ಬಂದು, ಮಡಚಿದ ಪಂಚೆಗಿಂತಲೂ ಕೆಳಕ್ಕಿದ್ದ ಖಾಕಿ ಚಡ್ಡಿ ಕಾಣಿಸುವಂತೆ ತಾತುವಿನ ಎದುರಿಗೆ ತುಸು ದೂರವಿದ್ದ ನೇರಳೆಮರದ ಕೆಳಗೆ ಕುಕ್ಕರಗಾಲಲ್ಲಿ ಕುಳಿತು ಮೊಣಕಾಲುಗಳನ್ನು ಕೈಗಳಿಗೆ ಆಸರೆ ಕೊಟ್ಟು, ಓಲೆಯೂರಿನ ಬೀದಿಬೀದಿಗಳಲ್ಲಿ ಟಂಕಿ ನೀಡಿದ ಪಿರ್ಯಾದಿ ಬಗೆಹರಿಸುವ ಸಲುವಾಗಿ ಮಾರನೇದಿನ ಮಧ್ಯಾಹ್ನ ಮೂರು ಗಂಟೆಗೆ ಊರಹಿರಿಯ ಗುಡ್ಡಯ್ಯನ ಮನೆ ಮುಂದೆ ಜನ ಸೇರಬೇಕೆಂದು ಇಂದು ಬೆಳ್ಳಂಬೆಳಗ್ಗೆ  ಸಾರಿದ ಡಂಗೂರದ ಖಾರ ಅಳ್ಳಯ್ಯನ ಮನದಲ್ಲಿ ಉರಿಯುತ್ತಿತ್ತು. ಅವನು ತೊಟ್ಟ ಬಟ್ಟೆ ತಾತುವಿನಷ್ಟು ಮಾಸದಿದ್ದರೂ, ಒಗೆದು ಐದಾರು ತಿಂಗಳಾಗಿರುವ ಲಕ್ಷಣವೆಂಬಂತೆ ಮೂಲ ಬಣ್ಣ ಕಳೆದುಕೊಂಡಿದ್ದವು. ಸುಮ್ಮನೆ ಕುಳಿತು ಅತ್ತಿತ್ತ ನೋಡುತ್ತಿದ್ದ ತಾತು ಕೊನೆಗೆ ತಾನೇ ಮೌನ ಮುರಿದು “ಮತ್ತೇನಂತೆ ನಿನ್ನೆಂಡ್ರಿಗೆ? ವತ್ತಾರೆದ್ದು ವಟಗುಡ್ತಾವ್ಳಿ. ನಿಮ್ಮವ್ವುನ್ನ ಬೆಟ್ಟ ಬ್ಯಾಡ ಗದ್ದೆ ಕೇಳು ಅಂತಂದು ತಮ್ಮನ್ಮನೀಗೆ ಕಳ್ಸಿರವ್ಳು ಇವ್ಳು. ಈಗ್ಯಾಕೆ ಪಂಚಾತಿಗೆ ಪಿರ್ಯಾದು ಕೊಟ್ಟಾಳೋ ಕೇಲ್ಲಾ ಅಂದ್ರೆ, ಮನೆ ಕಟ್ಟೋ ಮಾತಾಡ್ತೀ ಯಾಕ್ಲಾ ಬಾಡ್ಕೋ? ಈಗ್ಲೇ ಉಣ್ಣಾಕ್ಕಿಕ್ಕಲ್ಲಾ, ನಂಬಟ್ಟೆ ಒಗ್ಯಾ ಕೆಲ್ಸ ಒಂದಪನಾರಾ ಮಾಡಾಳೇನ್ಲಾ? ನಿಮ್ಮವ್ವ ಓಗಿ ಆಗ್ಲೇ ಮೂರು ವರ್ಸಾ ಆದೋ.  ಈಗ್ಯಾಕೆ ನಿನ್ನವ್ವನ್ಮ್ಯಾಲೆ ಪಿರೀತಿ ಉಕ್ತಾ ಐತೆ ಅಂತ ಕೇಳೀಯಾ?” ಎನ್ನುತ್ತಾ ತಾನೂ ಸುಟ್ಟು ಬೆರಳನ್ನೂ ಸುಟ್ಟ ಬೀಡಿ ಎಸೆದು ಸುಮ್ಮನೆ ನಾಲಿಗೆ ಹೊರಚಾಚಿ “ಥು ಥು” ಎಂದು ನಾಲಿಗೆಗಂಟಿದ ತಂಬಾಕಿನ ನಾರನ್ನು ಹೊರದಬ್ಬಿದ. ಎಲ್ಲಿಯೋ ನೆಟ್ಟ ನೋಟವನ್ನು ಬದಲಿಸದ ಅಳ್ಳಯ್ಯ “ವತ್ತಾರಿಂದಲ್ಲ ಮೊನ್ನೆ ಬಂದಾಗಿಂದ್ಲೇ, ಅತ್ತೆ ಬಂದ್ರೆ ಜೊತೆಗೇ ಬೆಟ್ಟ ಬತ್ತದೆ ಆಮ್ಯಾಕೆ ಬೆಟ್ಟ ಮಾರಿ, ಈ ಮನೆ ಕೆಡವಿ ಬ್ಯಾರೆ ಮನೆ ಕಟ್ಟುಸ್ಬೇಕು ಅಂತವ್ಳೇ” ಎನ್ನುತ್ತಾ ಮುಂದುವರೆಸಿ “ಬೆಟ್ಟ ಬ್ಯಾಡಾಂದು ಊರುಕೇರಿ ಒಂದ್ಮಾಡ್ದೂಳು ನೀನು ಈಗ್ಯಾಕೇ ಪಂಚಾತಿ ರಂಡೆ ಅಂತ ನಾನಂದ್ರೆ, ಅವ್ವನ್ನ ಕರ್ಕೊಂಬರ್ಲಿ ಅಂತನೇ ನಾಳೆ ಪಂಚಾತಿ ಕರ್ದಾಳಂತೆ” ಎಂದವನು ಖೇದಕರ ಮುಖ ಮಾಡಿ “ಆಸ್ತಿಗಂತ ಅವ್ವನ್ನ ತವರಿಗೆ ಓಡುಸ್ದೆ ಅಂತ ಊರೇ ಉಗೀತಾ ಅದೆ. ಅದ್ರಾಗೆ ಈ ರಂಡೆ  ಶಿಲ್ಮಾವನ್ಮ್ಯಾಲೆ (ಶಿಳ್ಳೆ ಮಾವ) ಪಿರ್ಯಾದು ಕೊಟ್ಟವಳೆ. ಓಗಿಬರೋ ತಾವು ಮುಖ ತೋರ್ಸೋದೆಂಗೆ?” ಎನ್ನುತ್ತಾ ಬಲಗಡೆ ಕತ್ತು ಹೊರಳಿಸಿ ಜಗುಲಿಯ ಮೇಲಿದ್ದ ತಾತುವನ್ನು ನೋಡಿ “ಇವ್ಳವ್ವ ಬೆಟ್ಟ ಮಾರೋಕೆ ಯೋಳಿ ಕಳ್ಸಿರೊ ಹಂಗೆ ಕಾಣ್ತದೆ ಕಣಪ್ಪ. ಯಾರೋ ಯೋಳಾರಂತೆ, ಅವ್ವನ್ಗೆ ಶಿಲ್ಮಾವ ಕೊಟ್ಟಿರೋ ಬೆಟ್ಟ ಪೂರಾ ಗ್ರೇನಿಟ್ ಇದ್ದಾದಂತೆ. ತೊಂಬತ್ತು ಲಕ್ಸಾನೋ ಒಂದು ಕೋಟಿನೊ ಆದಾತಂತೆ.” ಎಂದ. ತಾತು ಯಾವುದೇ ಭಾವನೆ ತೋರದೆ ಗಡಸು ದನಿಯಲ್ಲಿ “ಅಲ್ಲಲೇ ಅವ್ಳು ಬೆಟ್ಟ ಮಾರು ಅಂದ್ರೆ ಮಾರಕ್ಕೇನು ಅವಳವ್ವoದೇನ್ಲಾ?” ಎನ್ನುವಷ್ಟರಲ್ಲಿ ಕೋಳಿಗಳಿಗೆ ಹಿಂದಿನ ದಿನದ ಮುದ್ದೆ ಪಾತ್ರೆಗಂಟಿದ ಅಟ್ಟೆಸೆಯಲು ಬಂದ ಅಳ್ಳನ ಹೆಂಡತಿ ಟಂಕಿ ತುಸು ನಿಂತಂತೆ ಮಾಡಿ ಬಾಗಿಲ ಕಡೆ ತಿರುಗಿದ ಭಂಗಿಯಲ್ಲಿ ಆಕಸ್ಮಿಕವೆಂಬಂತೆ “ಮಾವ ನಾಳೆ ಅತ್ತೆ ಬರ್ಬೋದು ?” ಎಂದಳು. ತನ್ನ ಮಾತು ಅರ್ಧಕ್ಕೆ ನಿಲ್ಲಿಸಿ, ಟಂಕಿಯ ಮಾತಿಗೆ ಉರಿದುಬಿದ್ದ ಮಾವ. “ಓಯ್ ಓಗು ಒಳ್ಗೆ. ತೂದ್ಬುಟ್ರೆ ಅಂಗೇ ಉದ್ರೋಯ್ತಿಯ. ಯಾ ಗಳ್ಗೆನಾಗೆ ಬಂದ್ಯೋ ಅಲ್ಲಿಂದ್ಲೇ ಸುರುವಾತು ದರಿದ್ರ. ಹರೀವಲ್ದಾಗೈತೆ ಕರ್ಮ. ಒಂದಪನಾರ ನೆಲ ಗುಡ್ಸುದ್ದೇ ಕಾಣೆ. ಬಂದುದ್ದೇ ಬಂದೆ ಎಲ್ರು ಸಂತೋಸ ಗುಡುಸ್ಬುಟ್ಟೆ. ಸಾಲ್ದು ಅಂತ ಪಿರ್ಯಾದಿ ಕೊಟ್ಟಿದ್ದೀಯಲ್ಲ, ಏನು ನಮ್ಮಾನ ಕಳೀಬೇಕಂತ ಮಾಡಿದ್ದೀಯ ಯಂಗೆ? ಮನಿ ಬುಟ್ಟೋಗೂ ಅಂದ್ರೂ ಹೋಗವಲ್ಲೇ?” ಎನ್ನುತ್ತಾ ಬುಸುಗುಟ್ಟಿದ ತಾತುವನ್ನು  ಓರೆಗಣ್ಣಿಂದ ನೋಡಿ ಒಳಗೆ ಹೋದವಳಿಗೆ ಕೇಳುವಂತೆ “ನೀನು ಬೋದು, ಓಗು ಅಂದೇಟ್ಗೆ ನನ್ಪೀರಿ ದಡ್ಡಿ ಸುಮ್ಮುನೋಗ್ಬುಟ್ಲು. ಕರ್ಯಾಕೆ ಅಂತ ಓದ್ನನ್ಮಗುನ್ನ ಆ ಶಿಳ್ಳೆ ಬಾಯ್ಗೆ ಬಂದಂಗೆ ಅಂದು ಕಳುಸ್ದ. ಈಗ ಯಾಮಕ ಇಟ್ಕಂಡು ಪಂಚಾತಿನಾಗೆ ಅವುಳ್ನ ಬೇಕು ಅಂತ ಕೇಳೀ?” ಅಂದ. ಟಂಕಿಗೆ ಕೇಳಿಸಿತೋ ಇಲ್ಲವೋ ತಿಳೀದಾಗಲೀ ಮತ್ತೆ ಬಂದು “ಮುದ್ದೆ ಉಣ್ಣಕ್ಕಿಕ್ಕಾನೇ?” ಎಂದಳು. ಎದ್ದು ಪಂಚೆ ಇಳಿಬಿಟ್ಟು ಹೊರಟ ಅಳ್ಳಯ್ಯನನ್ನು ಹಿಂಬಾಲಿಸಲು ತಾತು ಕುಳಿತಂತೆಯೇ ಕಂಬಳಿಯನ್ನು ಎಡ ಹೆಗಲಿನ ಮೇಲೆ ಹಾಕಿ, ಕೋಲು ಅಲ್ಲೇ ಬಿಟ್ಟು ಎದ್ದು ಒಳಗೆ ಹೋದವ ಬಾಗಿಲ ಎಡಮಗ್ಗುಲಲ್ಲಿ ಹಾಸಿದ್ದ ಚಾಪೆಯ ಮೇಲೆ ಕುಳಿತ. ಪಂಚೆ ಕಾಲಿಗೆ ತೊಡರಿ ‘ರಪ ರಪ’ ಸದ್ದು ಮಾಡಿ ಗುಡಿಸದೇ ಎಷ್ಟೋ ದಿನಗಳಾಗಿದ್ದ ನೆಲದ ಧೂಳನ್ನು ಮೇಲೆಬ್ಬಿಸಿ, ಹೊಸ್ತಿಲಿನಿಂದ ಒಳಗಿಣುಕಿದ ಹನ್ನೊಂದು ಗಂಟೆಯ ಬಿಸಿಲಿನ ದಟ್ಟ ಕಿರಣಕ್ಕೆ ಧೂಪವನ್ನಾಗಿಸಿದ್ದ ಅಳ್ಳಯ್ಯ. ತವರುಮನೆಯವರು ಮೂರು ವರ್ಷದ ಕೆಳಗೆ ಭಾಗವಾಗುವ ಸಂಧರ್ಭದಲ್ಲಿ ಹರಿಷಿಣ ಕುಂಕುಮಕ್ಕೆಂದು ಒಬ್ಬಳೇ ಹೆಣ್ಣುಮಗಳು ಪೀರಿಗೆ, ಬಸ್ಸು ಓಡಾಡುವ ರಸ್ತೆ ಬದಿಯಲ್ಲಿ ಎಪ್ಪತ್ತೈದು ತೆಂಗಿನಮರ, ಒಂದು ಭಾವಿ ಇರುವ ಎರಡೆಕರೆ ಜಾಗ ಹಾಗೂ ಊರೊಳಗೆ ನದಿ ಕೊಳ್ಳದ ಪಕ್ಕಕ್ಕಿದ್ದ ಎರಡೆಕರೆ ಭತ್ತದ ಗದ್ದೆಯನ್ನು ಬಳುವಳಿಯಾಗಿ ನೀಡಿದ್ದರು. ಆದರೆ ಊರೊಳಗಿನ ಗದ್ದೆಯ ಜಾಗದಲ್ಲಿ ಹರಡಿದ್ದ ಎರಡಾಳೆತ್ತರದ ಬೆಟ್ಟವು ಪೀರಿಯ ಒಂದೂಕಾಲೆಕರೆ ಜೊತೆಗೆ ಅಕ್ಕಪಕ್ಕದ ಸುಮಾರು ಇಪ್ಪತ್ತೆರಡು ಎಕರೆ ಜಮೀನನ್ನು ನುಂಗಿತ್ತು. ತಮಗೆ ನೀಡಿದ ಜಮೀನಿನಲ್ಲಿ ಬೆಟ್ಟ ಬಂದಿದ್ದು ಅದನ್ನು ಹಿಂತಿರುಗಿಸಿ, ಬಸ್ಸು ಓಡಾಡುವ ಜಾಗದಲ್ಲಿ ಪೀರಿಗೆ ಮೊದಲೇ ನೀಡಿದ ಜಮೀನಿನ ಪಕ್ಕದಲ್ಲೇ ಬದಲಿ ಜಾಗ  ಕೇಳಿ ಪಡೆದು ತರಬೇಕೆಂದು, ಲೋಕಜ್ಞಾನವಿಲ್ಲದ ಅತ್ತೆಯನ್ನು ಪುಸಲಾಯಿಸಿ ಓಲೆಯೂರಿನಿಂದ ಅವಳ ತವರಿಗೆ ಕಳುಹಿಸಿದ್ದಳು ದುರಾಶೆಯ ಹೆಣ್ಣು ಟಂಕಿ. ಅತ್ತೆಯನ್ನು ತವರಿಗೆ ಅಟ್ಟಿದವಳಿಗೆ ಮನೆಯಲ್ಲಿದ್ದ ಎರಡು ಗಂಡುಗಳು ಲೆಕ್ಕದಲ್ಲೇ ಇರಲಿಲ್ಲವಾಗಿ ಸದಾ ಅವಳಮ್ಮನ ಮನೆಗೆ ಹೋಗಿ ಬಿಡಾರ ಹೂಡುವುದು, ಅಪ್ಪಮಗ ಆಳುಗಳನ್ನಿಟ್ಟು ಉದುರಿಸಿ ಸಿಪ್ಪೆಬಿಡಿಸಿ ಬೀಜ ತೆಗೆಸಿಟ್ಟ ಹುಣಸೆಹಣ್ಣು,ಅಕ್ಕಿ, ಬೆಲ್ಲ, ತೆಂಗಿನಕಾಯಿಗಳನ್ನು ಆಗಾಗ ಬಂದು, ಯಾರನ್ನೂ ಕೇಳದೆ ಹೊತ್ತುಕೊಂಡು ಹೋಗಿ ತವರು ಮನೆಯನ್ನು ಉದ್ದಾರ ಮಾಡುವವಳಾಗಿದ್ದಳು. ಮದುವೆಯಾಗಿ ಐದು ವರ್ಷಗಳಾದರೂ ಮಕ್ಕಳಿಲ್ಲದ ಟಂಕಿ ಆ ಮನೆ ಈ ಮನೆ ಸುತ್ತುತ್ತಾ, ಸಂಸಾರ ಮಾಡುವ ಹಂಗಿಗೇ ಹೋಗಿರಲಿಲ್ಲ. ಇವಳಿಲ್ಲದಾಗ ಪಕ್ಕದೂರಿನಲ್ಲಿದ್ದ ತಾತುವಿನ ಮಗಳು ಚಕ್ಕಿಯನ್ನು ಕರೆತರುವ ಅಪ್ಪಮಗ ಊಟದ ಚಿಂತೆಯೊಂದಿಲ್ಲದೆ ಕಾಲಕಳೆಯುತ್ತಿದ್ದರು. ಆದರೆ ಈಗ ಒಂದು ವರ್ಷದ ಹಿಂದೆ ಇದ್ದಕ್ಕಿದ್ದಂತೆ ಮನೆಗೆ ಬಂದ ಟಂಕಿ, ಚಕ್ಕಿಯನ್ನು ಬಾಯಿಗೆ ಬಂದಂತೆ ಬೈದು ಮತ್ತೆ ಬಾರದಂತೆ ತಾಕೀತು ಮಾಡಿ ಕಳಿಸಿದ್ದಳು. ನಂತರದ ವ್ಯವಸ್ಥೆಯಲ್ಲಿ ಆಳು ಕರಿಯನ ಹೆಂಡತಿ ಅವೇರಿ, ನಿತ್ಯ ಬಂದು ನಾಲ್ಕು ಮುದ್ದೆ ಯಾವುದೋ ಒಂದು ಸಾರು ಮಾಡಿಟ್ಟು ಹೋದರೆ ಈ ನತದೃಷ್ಟರು ಎರಡು ಹೊತ್ತು ತಾವೇ ಬಡಿಸಿಕೊಂಡು ಉಣ್ಣುವರು. ಬೇರೆ ಮನೆಯ ಹೆಣ್ಣನ್ನು ಸೊಸೆಯಾಗಿ ಕರೆತಂದ ಈ ಸಂಸಾರವು ಯಾವುದೇ ತಪ್ಪೇ ಮಾಡದೆ ಪ್ರತಿದಿನ ಶಿಕ್ಷೆ ಅನುಭವಿಸುತ್ತಿತ್ತು. ಒಂದು ವಾರದ ಹಿಂದೆ ಇದ್ದಕ್ಕಿದ್ದಂತೆ ಅತ್ತೆಯ ಬಗ್ಗೆ ಅತೀ ಅಕ್ಕರೆ ಬಂದು “ಅತ್ತೆ ಪೀರಿಯನ್ನು ಕರೆತಂದು ಬಿಡಲು ಅವಳ ತಮ್ಮನಿಗೆ ತಾಕೀತು ಮಾಡಬೇಕು” ಎಂದು ಊರ ಹಿರಿಯರಲ್ಲಿ ಪಿರ್ಯಾದಿ ನೀಡಿದ್ದಳು. ಅಂತೆಯೇ ನಾಳೆ ಪಂಚಾಯ್ತಿ ಕೂಡುವುದಿತ್ತು. ಚಾಪೆಯ ಮೇಲೆ ಕುಳಿತ ತಾತು ಅಲ್ಲೇ ಮಲಗಿ, ಒಂದು ಗೊರಕೆ ತೆಗೆದು ಎದ್ದು ತೊಟ್ಟಿಯ ನಂತರದ ಅಡುಗೆಮನೆ ದಾಟಿ ಹೋಗಿ ಹೊತ್ತಲಿನ ತೆಂಗಿನಮರದ ಹಿಂದಿನ ಗೋಡೆ ಮೇಲೆ ಮೂತ್ರವಿಸರ್ಜಿಸಿ ಬಂದು ಮತ್ತೆ ಚಾಪೆಯ ಮೇಲೆ ಕುಳಿತ. ನೋಡಿದರೆ ಸೊಸೆಯ ಸುಳಿವೂ ಇಲ್ಲ. ಮುದ್ದೆಯ ಘಮಲೂ ಇಲ್ಲ. ಅಳ್ಳಯ್ಯ ಎಲ್ಲೂ ಕಾಣಲಿಲ್ಲ. ಎದ್ದು ಅಡುಗೆ ಮನೆಯತ್ತ ಇಣುಕಿದವನಿಗೆ ಒಲೆ ಹಚ್ಚಿಯೇ ಇಲ್ಲದ್ದು ಕಂಡಿತು. ಹೊರಗೆ ಬಂದರೆ ಮಗ ಮರದಡಿ ಕುಂತು ಕಾಗದ ಸುತ್ತಿ ಕಿವಿಯೊಳಕ್ಕೆ ಬಿಟ್ಟು ನವೆಯನ್ನು ಹಿತವಾಗಿ ಶಮನ ಮಾಡಿಕೊಳ್ಳುತ್ತಿದ್ದ. “ಓಡೋದ್ಲೇನ್ಲಾ ಮತ್ತೆ?” ಎಂದ ತಾತುವನ್ನು ನೋಡದೆಯೇ  ಸಾಧಾರಣವೆಂಬ ಧೋರಣೆಯಲ್ಲಿ “ಊ” ಎಂದ ಅಳ್ಳಯ್ಯ. ಮಾರನೇ ದಿನ ಊರ ಹಿರಿತಲೆ ಗುಡ್ಡಯ್ಯನ ಮನೆಯ ಅಕ್ಕಪಕ್ಕದ ಜಗುಲಿ ಮೇಲೆ ಸಾಲಾಗಿ ಕಾಲು ಇಳಿಬಿಟ್ಟು ಹಾಗೂ ನೆಲದ ಮೇಲೆ ಅಲ್ಲಲ್ಲಿ ಕುಕ್ಕರಗಾಲಲ್ಲಿ ಕುಳಿತ ಹದಿನೆಂಟು ಜನರಲ್ಲಿ ಮೂವರು ಪಟ್ಟಾಪಟ್ಟಿ ಚಡ್ಡಿ ಧರಿಸಿದ್ದರೆ ಮಿಕ್ಕವರು ಪಂಚೆಯನ್ನುಟ್ಟು ಪಂಚಾಯ್ತಿ ಕೇಳಲು ಬಂದಿದ್ದರು. ಇತ್ತ ಏಳು ಜನ ಬಂಧುಗಳೊಡನೆ ಓಲೆಯೂರಿಗೆ ಬಂದ ಶಿಳ್ಳೆ, ಅಕ್ಕ ಪೀರಿಯನ್ನು ಅವಳ ಮನೆಯಲ್ಲಿ ಬಿಟ್ಟು ಗುಡ್ಡಯ್ಯನ ಮನೆ ಬಳಿ ಬಂದು ನಾಲ್ಕು ಜನರ ಮಧ್ಯೆ ಜಗುಲಿಯ ಮೇಲೆ ಕುಳಿತ. ಹೊರ ಬಂದ ಗುಡ್ಡಯ್ಯ ಜಗುಲಿಯ ಕಂಬದ ಬಳಿ ನಿಂತು ಶಿಳ್ಳೆಯನ್ನುದ್ದೇಶಿಸಿ “ಊರಗೆಲ್ಲಾ ಸಂದಾಕದಾರೆನ್ಲಾ ಶಿಳ್ಳಾ?” ಎಂದರು. “ಊ” ಎನ್ನುತ್ತಾ ಸ್ವಲ್ಪ ಹೊತ್ತು ಸುಮ್ಮನಿದ್ದು, ತಲೆ ಮುಂದೆ ಮಾಡಿ “ಬೆಟ್ಟ ಬ್ಯಾಡ ಅಂದೋಳು ಟಂಕಿ, ಬ್ಯಾರೆ ಕಡೆ ಗದ್ದೆ ಬೇಕು ಅನ್ನೋಳು ಟಂಕಿ, ಆಸ್ತಿ ತತ್ತಾ ಅಂತಂದು ಅತ್ತೇನ ತವ್ರಿಗೆ ಅಟ್ಟಿರೋಳು ಟಂಕಿ. ಈಗ ಅತ್ತೇನ ಬಿಟ್ಟೋರೋಕ್ಕೇ ಆಗಲ್ದು ತಂದು ಬುಡಿ ಅನ್ನೋಳು ಟಂಕಿನೇ. ಅದುಕ್ಕೇ ಬೆಟ್ಟ ನಾನೇ ಮಡೀಕ್ಕಂಡು, ರೊಡಾಗಿರೋ ಯಳ್ದೆಕ್ರೆ ಗದ್ದೆ ಅಕ್ಕಯ್ನ ಯಸುರ್ಗೆ ಮಾಡಿ ಕರ್ಕೊಂಬಂದು ಬುಟ್ಟಿವ್ನಿ. ಅತ್ತೆಸೊಸೆ ಮಧ್ಯ ನಾವ್ಯಾಕೆ?” ಎನ್ನುತ್ತಾ ಜಗುಲಿ ಇಳಿದು ಗುಡ್ಡಯ್ಯನ ಮುಂದೆ ಬಂದು “ಆದ್ರೆ ಅಣ್ಣೊ, ನಮ್ಮಕ್ಕನ್ನ ಸಾಯೋಗುಂಟ ನೋಡ್ಕಂಡ್ರೆ ಆಸ್ತಿ. ಇಲ್ದಿದ್ರಿಲ್ಲ ಅಂತ ಬರಸಿವ್ನಿ.” ಎನ್ನುತ್ತಾ ಪತ್ರವನ್ನು ಹಿರಿಯನ ಕೈಗಿತ್ತು “ಇಕಾ ಇದ್ನಾ ನೀನೇ ಟಂಕಿಗೆ ಕೊಡು. ನಾನು ಓಯ್ತೀನಿ” ಅನ್ನುತ್ತಾ ಏನನ್ನೋ ನೆನಪಿಸಿಕೊಂಡಂತೆ “ಭಾವನಾಸ್ತೀನೂ ಹಂಗೇ ಬರ್ಸೀವ್ನಿ”. ಎನ್ನುತ್ತಾ ತುಸುವೇ ದನಿಯೇರಿಸಿ “ನಿಮ್ಮೊರಿನ ಹೆಣ್ಣು ಟಂಕಿ ಹೇಳ್ದಂಗೆ ಎಲ್ಲಾ ಕೇಳಿವ್ನಿ. ಈಗ ಅವ್ಳು ನಮ್ಮಕ್ಕಯ್ಯನ್ನ ಸರೀ ನೋಡಲ್ಲಾಂದ್ರೆ ಏನು ಮಾಡ್ತೀರಿ?” ಕೇಳಿದ. ಹಿರಿಯ ಗುಡ್ಡಯ್ಯನಿಗೆ “ನಿಮ್ಮೂರಿನ ಹೆಣ್ಣು” ಎಂದದ್ದು ಅವಮಾನವಾದಂತಾಗಿ “ನಾವಿರೋದು ಯಾಕ್ಲಾ? ಅವುಳ್ನ ಈಗೇ ಕರ್ಸಿ ಯೋಳ್ತೀವಿ. ಬುದ್ದಿ ಬಂದಿಲ್ಲಾಂದ್ರೆ ಊರೊಳಿಕ್ಕೆ ಕಾಲು ಮಡಗಾಂಗಿಲ್ಲ. ಬೈಸ್ಕಾರ ಆಕ್ತೀವಿ. ಆದಾತೆ??” ಎಂದಂದು “ಅಲ್ಲಲೇ ಆಗ್ಲೇ ಪಂಚಾತಿ ಕರ್ಸಕ್ಕೇನಾಗಿತ್ಲಾ ನಿಂಗೆ? ಅತ್ತೇನ ವರ್ದಕ್ಸಿನೆ ತಾ ಅಂತ ಅಟ್ಟೋದೆಲ್ಲಾರ ಉಂಟೇನಲಾ?” ಎಂದು ಮಾತು ನಿಲ್ಲಿಸಿ ಪತ್ರದ ಕಡೆ ನೋಡಿ “ನೀನು ಸರಿಯಾಗೇ ಮಾಡಿದ್ದೀ ಬುಡು” ಎನ್ನುತ್ತಾ ಪಕ್ಕದಲ್ಲಿದ್ದವನನ್ನು ಕರೆದು “ಪಿರ್ಯಾದಿ ಕೊಟ್ಟು, ಡಂಗೂರ ಹಾಕ್ಸಿರೋಳು ಇಲ್ಲಿ ಬರೊಕ್ಕಾದೇ? ಓಗಿ ಒಂಕೂಗಾಕಿ ಬಾ ಓಡು” ಎಂದ. ಶಿಳ್ಳೆ “ನಾನ್ಯಾಕೆ ಪಂಚಾತಿ ಸೇರುಸ್ಲಿ? ನಮ್ಮಕ್ಕಯ್ಯುಗೆ ಒಂದು ಪಿಡ್ಚೆ ಊಟ ಹೆಚ್ಗೆ ಬೇಯಾಕಿಲ್ವೆ ನಮ್ಮಟ್ಟಿನಾಗೆ? ನಂಗಾರ ಎಷ್ಟು ಹೆಣ್ಮಕ್ಕಳದಾವು? ನಿಮ್ಮೂರೋರು ಪಿರ್ಯಾದಿ ಕೊಟ್ಮ್ಯಾಲೂ ಅಕ್ಕಯ್ನ

ತವರಿನ ಬೆಟ್ಟ Read Post »

ಕಾವ್ಯಯಾನ

ಮಾಯಾಮೃಗ

ಕವಿತೆ ಮಾಯಾಮೃಗ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಸುಡು ಬಿಸಿಲಲ್ಲಿ ಅಲೆದಾಡಿದಧೂಳು ಮೈಯ ಗಾಳಿಗೆ ಜ್ವರವೇರಿಇಳಿದಿದೆ ಹರಿವ ನೀರಿನಲೆಗೆ ಗಾಳಿ ಮೈಕೊಡವಿದಲ್ಲಿಉದುರಿದ ಬಕುಳ ಹೂವಿಗೆ ವಿರಹ ಬೆಂಕಿಹಾ! ಹಾ! ಎನುತ ತುಂಬಿಯ ಚುಂಬನದ ನೆನಪಲ್ಲಿ ಮೈನೆನೆದುಅಲೆಗಳಿಗೆ ಮೈಯೊಡ್ಡಿ ತೇಲಿ ಹೋಗಿದೆ. ಮರಗಿಡ ಬಳ್ಳಿಗಳ ಮೈತುಂಬಮದನಶರ ನಾಟಿ ನೇಸರಗೆ ಬಸಿರಾಗಿಮೊಗ್ಗುಗಳ ಹೆತ್ತು ತೊಟ್ಟುಗಳ ತೊಟ್ಟಿಲಲಿ ತೂಗಿಕೆಂಪು ಚಿಗುರು ಬೆರಳುಗಳಹಸಿಮೈ ಬಾಣಂತಿಕೇಶಗಳ ಬಿಚ್ಚಿ ಮಳೆನೀರ ಕಾದಿದೆ ಚಿತ್ರಗಳು ತಮ್ಮನ್ನು ತಾವೆಬರೆದುಕೊಂಡಂತೆಹಕ್ಕಿಗಳು ರೆಕ್ಕೆ ಬಿಡಿಸಿ ಚಿಮ್ಮಿಬಾಂದಳವ ಬಿಳಿ ಹಾಳೆ ಮಾಡಿವೆಅವನು ಬಿಡಿಸಿದ ಚಿತ್ರದಂಥಪ್ರಕೃತಿಗೆ ಜೀವ ಬಂದುಬಿಟ್ಟ ಕಣ್ಣಲಿ ಆಗಸದ ಕನ್ನಡಿಯಲಿತನ್ನ ಬಿಂಬ ಹುಡುಕಿದೆ ಸೀತೆಯ ಮನವುಜಿಂಕೆಯ ಹಿಂದೆ ಜಿಗಿಜಿಗಿದು ಚಿಮ್ಮಿದಂತೆನನ್ನ ಹೃದಯವಿಂದು ನಿನ್ನ ಹಿಂದೆಯೇ ಅಲೆದುಮಾಯವಾಗಿದೆ ಮಾಯಾಮೃಗಸಿಕ್ಕರೆ ಮೂಗುದಾರಹಾಕಬೇಕು ***************************

ಮಾಯಾಮೃಗ Read Post »

You cannot copy content of this page

Scroll to Top