ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಗಜಲ್

ಗಜಲ್ ಪ್ರಭಾವತಿ ಎಸ್ ದೇಸಾಯಿ ಮಲ್ಲಿಗೆಯಿಲ್ಲ ಮುಡಿಯಲಿ ಘಮವಾದರೂ ಇರುಳಿಗೆ ಇರಲಿಶಶಿಯಿಲ್ಲ ನಭದಲಿ ನಕ್ಷತ್ರ ವಾದರೂ ಇರುಳಿಗೆ ಇರಲಿ ಬತ್ತಿ ಎಣ್ಣೆ ಕುಡಿದು ಖುಷಿಯಲಿ ಹರಡಿತು ಬೆಳಕು ಕೋಣೆಯಲಿಅಮಲೇರಲು ಪ್ರೀತಿಯ ಮಧುವಾದರೂ ಇರುಳಿಗೆ ಇರಲಿ ಮೌನ ಚೂರಿಯಿಂದ ಇರಿದು ಗಾಯಗೊಳಿಸಿದೆ ಒಲಿದ ಹೃದಯಎದೆಯ ಉರಿ ಆರಲು ಲಾಲಿ ಹಾಡಾದರೂ ಇರುಳಿಗೆ ಇರಲಿ ಬಯಕೆಯ ಮೃಗಜಲದ ಬೆನ್ನಹಿಂದೆ ಓಡಿ ಓಡಿ ಬಳಲಿದೆಅನುರಾಗದ ಬದುಕಾಗಲು ಕನಸಾದರೂ ಇರುಳಿಗೆ ಇರಲಿ ಏಕಾಂಗಿಯ ಬೇಸರದ ಉಸಿರು ಎಣಿಸುತಿದೆ ತಾರೆಗಳನೊಂದ ಜೀವಿಗೆ ಸುಖದ “ಪ್ರಭೆ” ಯಾದರೂ ಇರುಳಿಗೆ ಇರಲಿ ******************************************************

ಗಜಲ್ Read Post »

ಕಾವ್ಯಯಾನ

ಮಿಂಚು ನಾದದಲೆಯ ಮೇಲೆ

ಕವಿತೆ ಮಿಂಚು ನಾದದಲೆಯ ಮೇಲೆ ನೂತನ ದೋಶೆಟ್ಟಿ ನಗುವ ಹೂಗಳು ಹಲವುಬೇಲಿಗುಂಟ ಬೆಳೆದಿವೆಕೈಚಾಚುವ ಆಸೆ ಮಾತ್ರ ಇಲ್ಲ ಕಣ್ಣು ಮಿಟುಕಿಸಿದ ನಕ್ಷತ್ರದ ಮೋಹಏಕೆಂದು ಹೇಳಲಿ? ಹಗಲು ಕಾಣುವ ಹೂಗಳಅಂದ ಚಂದ ಕಂಪುಯಾವುದೂ ಕಂಪಿಸಲೇ ಇಲ್ಲ ರಾತ್ರಿ ನಕ್ಕ ತಾರೆಗೆಒಲವೇ ಧಾರೆ ಎರೆದೆಹೊಳಪಿಗೊ ಚೆಲುವಿಗೊ ಹೇಳಲಾರೆ ಅಂತರಂಗವ ಆವರಿಸಿದ ಬೆಳಕುಮೂಲೆ ಮೂಲೆಯಲಿ ಮಿನುಗುತಿದೆಮಿಂಚುನಾದದಲೆಯ ಮೇಲೆಒಲುಮೆ ಹಾಯಿ ನಡೆಸಿದೆ ಸೊಗಸ ಸಂಗ ಸಾಕು ಇನ್ನುಪ್ರೀತಿ ತೊರೆಯು ಹರಿಯಲಿಬಾಳಿನಾಟದಂಕದಲ್ಲಿಬಣ್ಣ ಮೂಡಿ ಬರಲಿ **********************************

ಮಿಂಚು ನಾದದಲೆಯ ಮೇಲೆ Read Post »

ಇತರೆ, ಲಹರಿ

ಎದಿಹಿಗ್ಗು ಕಡೆತನಕ.

ಭಾವಲಹರಿ. ಎದಿಹಿಗ್ಗು ಕಡೆತನಕ. ರಶ್ಮಿ .ಎಸ್. ಅಳಬಾರ್ದು ಅಂತ ನಿರ್ಧಾರ ಮಾಡೇನಿ ಅಕ್ಕ. ಆಮ್ಯಾಲೆ ಕಣ್ಣೀರು ತಂದಿಲ್ಲ. ಕಂಠ ಮೀರಿ ದುಖ್ಖಿಸಿಲ್ಲ. ಬಿಕ್ಕಿಲ್ಲ’. ‘ತ್ರಾಸು ಆಗ್ತದ. ಆದ್ರ ಅಳೂದ್ರಿಂದ ಸಂದರ್ಭ ಇರೂದಕ್ಕಿಂತ ಬ್ಯಾರೆ ಏನಾಗೂದಿಲ್ಲ. ಇಡೀ ಪರಿಸ್ಥಿತಿಯನ್ನಂತೂ ಬದಲಸಾಕ ಆಗೂದಿಲ್ಲ. ಅದಕ್ಕೆ ಅಳಬಾರ್ದು ಅಂತ ಮಾಡೇನಿ’. ನಮ್ಮ ಚಿಗವ್ವ ನಮ್ಮಮ್ಮಗ ಹೇಳ್ತಿದ್ಲು. ಮನಿ ಹಿತ್ತಲದಾಗ ಬೇವಿನ ಮರಕ್ಕ ಕಟ್ಟಿದ್ದ ಜೋಕಾಲಿಯೊಳಗ ತೂಗಕೊಂತ ಕುಂತ ಚಿಕ್ಕಮ್ಮ ಆಗಲೇ ೫ ದಶಕ ನೋಡ್ದಕ್ಕಿ. ನಮ್ಮಮ್ಮ ೬. ಬ್ಯಾಸಗಿ ಝಳ ತಾಕಲಾರ್ದ ಹಂಗ ಅಪ್ಪ ಹಿತ್ತಲದಾಗ ತೋಟ ಮಾಡ್ಯಾರ. ಅಲ್ಲಿ ತಣ್ಣಗೆ ಕುತ್ಗೊಂಡು ಕಷ್ಟ ಸುಖ ಮಾತಾಡೂ ಮುಂದ ನಾವು ಮಕ್ಕಳು ಇಬ್ಬರ ಮುಖ ಮಿಕಮಿಕ ನೋಡ್ಕೊಂತ ಸುಮ್ನಾಗಿದ್ವಿ. ಮೈ ಇಡೀ ಕಣ್ಣಾಗಿದ್ವು. ಕಿವಿಯಾಗಿದ್ವು. ಅಕ್ಕ–ತಂಗಿ ಇಬ್ರೂ ಕಷ್ಟ ಉಂಡು ಗಟ್ಟಿಯಾದೋರು. ಅಮ್ಮ ಅತ್ತು ಹಗುರಾಗ್ತೀನಿ ಅಂತಂದ್ರ, ಅತ್ರ ಮಂದಿಮುಂದ ಹಗುರಾಗ್ತೀವಿ ಅನ್ನೂ ನಂಬಿಕಿ ತಂಗೀದು. ಭಾಳ ತ್ರಾಸ ಆದ್ರ ಕಣ್ಣೀರಿನ ಮುತ್ತು ಗಲ್ಲಗುಂಟ ಇಳೀತಾವ. ಮುತ್ತಿನ ಮಣಿಯಂಥ ಬಣ್ಣ ನಮ್ಮ ಚಿಗ್ಗವ್ವಂದು. ಹಾಲಿನ ಕೆನಿ ಮ್ಯಾಲೆ ಹಬೆ ಇಬ್ಬನಿ ಕುಂತಂಗ ಕಾಣ್ತದ ಅವಾಗ. ಚಿಕ್ಕಮ್ಮ ಮಾತು ಮುಂದುವರಿಸಿದ್ರು.  ‘ಅಳೂದಂದ್ರ ಏನು? ನಾವು ನಮ್ಮ ದೌರ್ಬಲ್ಯವನ್ನು ತೋರಸೂದು. ನಾವು ನಂಬಿದ್ದು ಎಲ್ಲೊ ಖೊಟ್ಟಿ ಆಗೇದ ಅಂತ ತ್ರಾಸ ಮಾಡ್ಕೊಳ್ಳೂದು. ನಂಬಿದೆದಿಗೆ ಕಾಲ ನೀಡೂ ಪೆಟ್ಟು. ಅದು ಯಾವಾಗಲೂ ಎದಿ ಮುರದು ಬಿರದು ಬರೂಹಂಗ ಇರ್ತದ. ಈ ದುಃಖ್ಖದ್ದ ಕಟ್ಟಿ ಮುರದು ಬರೂವ ನೀರೆ ಕಣ್ಣೀರು. ಅವಕ್ಕೂ ಗಟ್ಟಿಯಾಗಬೇಕು. ಕಲ್ಲಾಗಬೇಕು. ಮನಸು ಹೂ ಕಲ್ಲಾಗಬೇಕು. ಅಂದ್ರ ಸಂತೋಷ ಆದಾಗ ಹೂವಿನ್ಹಂಗ ಅರಳೂದು. ನೋವು ಬಂದ್ರ ಕಲ್ಲಿನ್ಹಂಗ ಗಟ್ಟಿಯಾಗೂದು ಅಷ್ಟೆ. ನಾವು ಅಳೂದ್ರಿಂದ ಏನಾಗ್ತದ? ಇಷ್ಟಕ್ಕೂ ನಮ್ಮ ತ್ರಾಸೇ ದೊಡ್ದು ಅಂದ್ಕೊಂಡಾಗ ಅಳ್ತೀವಿ. ನಮಗ ಎದುರಸಾಕ ಆಗ್ದೇ ಇರೂದು ಯಾವುದೂ ನಮ್ಮ ಜೀವನದಾಗ ಘಟಿಸಾಕ ಸಾಧ್ಯನೇ ಇಲ್ಲ. ಇದು ನಮ್ಮ ಜೀವನದೊಳಗ ಆಗೇದ ಅಂದ್ರ, ಅದಕ್ಕ ನಾವು ಲಾಯಕ್ಕದೀವಿ. ಅದನ್ನು ಎದುರಿಸುವ, ನಿಭಾಯಿಸುವ ಛಾತಿ ನಮಗದ ಅಂತನೇ ಅರ್ಥ. ಹಂಗಿದ್ದಾಗ ಕಣ್ಣೀರು ಸುರಿಸಿ, ಸ್ವಮರುಕದ ಬಾವಿಯೊಳಗ ನಮ್ಮನ್ನೇ ನಾವು ದೂಡಬೇಕು ಯಾಕ?’ ಇಬ್ಬರೂ ಅಕ್ಕಾ ತಂಗೇರು ಹತ್ತು ವರ್ಷದ ನಂತರ ಮಾತಾಡಾಕ ಕುಂತಿದ್ರು. ಅಳಾಕ, ನಗಾಕ ಎರಡಕ್ಕೂ ರಾಶಿ ರಾಶಿ ಮಾತುಗಳಿದ್ವು. ಇವರ ಸಾಲಿಗೆ ದೊಡ್ಡಮ್ಮನೂ ಸೇರ್ಕೊಂಡರ ಅಲ್ಲೊಂದು ಬದುಕಿನ ಪಡಸಾಲಿನ ಬಿಚ್ಕೊಂತದ. ಅವರು ಸೀರಿ ತೊಗೊಂಡ ಲೆಕ್ಕದಿಂದ ಶುರು ಆಗುವ ಮಾತು, ದೇವರಿಗೆ ಒಂದು ಕೈ ನೋಡ್ಕೊಳ್ಳೂತನಾನೂ ಹೋಗ್ತದ.  ಅವರಿಬ್ಬರ ನಡು ನಾನು ಬಾಯಿ ಹಾಕಿದ್ದೆ. ‘ಯಾರರೆ ಅನುಮಾನಿಸ್ದಾಗ, ಅವಮಾನ ಮಾಡ್ದಾಗ, ನಿರ್ಲಕ್ಷ್ಯ ಮಾಡ್ದಾಗ, ನಮ್ಮ ಇರುವನ್ನು ಅಲ್ಲಗಳೆದಾಗ ಮಾತ್ರ ಅಳು ಉಕ್ಕಿ ಬರ್ತದ. ಅದನ್ನು ತಡ್ಯಾಕ ಆಗಾಂಗಿಲ್ಲ. ನೀನೂ ಕಾಕಾರೂ ೩೫ ವರ್ಷಾ ಸಂಸಾರ ಮಾಡೇರಿ. ಈಗ ಹಿಂಗ ಹೇಳ್ತಿ. ನೀ ಖರೆ ಹೇಳು ಮದಿವಿಯಾದ ಹೊಸತರೊಳಗ ಅತ್ತಿಲ್ಲೇನು?’ ಚಿಕ್ಕಮ್ಮ ಸುಮ್ಮನಾಗಿದ್ಲು. ಅಳು ಬರ್ತಿತ್ತೇನೋ? ಇಲ್ಲ. ಒಮ್ಮೆ ನಮ್ಮನಿ ಮಾವಿನ ಗಿಡ ದಿಟ್ಟಿಸಿ ನೋಡ್ದಕ್ಕಿನ, ‘ನೋಡಲ್ಲೆ, ಆ ದೊಡ್ಡ ಮಾವಿನ ಕಾಯಿನ ಎಲಿ ಹೆಂಗ ಮರೀ ಮಾಡ್ಯಾವು ನೋಡು… ಎಷ್ಟು ಮಂಗ್ಯಾ ಬಂದ್ರೂ ಕಂಡಿಲ್ಲದು’ ಅಂದ್ರು. ಅಂಗಳದಾಗ ನಿಂತು ಹಿಸಿಕಿ ಕೊಟ್ಟ ಹಣ್ಣು, ಕಣ್ಮುಚ್ಚಿ ಹೀರ್‌್ಕೊಂತ ನಿಂತ ನನಗ ಆ ಕಾಯಿ, ಎಲಿ, ಮಂಗ್ಯಾ ಯಾವೂ ಕಾಣವಲ್ದಾಗಿತ್ತು. ನಾನು ಚಿಕ್ಕಮ್ಮನಿಗೆ ಸವಾಲು ಹಾಕೇನಿ ಅನ್ನೂ ಮದದೊಳಗ ರಸ ಹೀರ್ತಿದ್ದೆ. ‘ಮನಸು ಹಂಗೆ. ಕೆಲವೊಮ್ಮೆ ಹುಡುಕಿ ಹೆಕ್ಕಿ, ಹಣ್ಣು ಕಿತ್ತೊಗಿಯೂ ಮಂಗ್ಯಾನ್ಹಂಗ. ಇನ್ನೂ ಕೆಲವೊಮ್ಮೆ ಯಾರ ಕಣ್ಣಿಗೂ ಕಾಣದೇ ಇರೂಹಂಗ ಬೆಚ್ಚಗೆ ಕಾಪಿಡುವ ಎಲಿ ಇದ್ಹಂಗ. ಇದು ಕಡೀಕ ಕೇಳೂದು ನಮ್ಮ ಮಾತು ಮಾತ್ರ. ಎಲ್ಲಿ ಮಂಗ್ಯಾ ಆಗಬೇಕು? ಎಲ್ಲಿ ಮನಶಾ ಆಗಬೇಕು ಅನ್ನೂ ನಿರ್ಧಾರ ನಮ್ಮದೇ ಆಗಿರ್ಬೇಕು. ಅಳ್ತಿದ್ದೆ. ನಮ್ಮತ್ತಿ ಎಲ್ಲಾ ಹೆಣ್ಣ ಹಡದಿಯಲ್ಲಬೇ ಅಂತ ಹಂಗಿಸಿದಾಗೆಲ್ಲ ಅಳ್ತಿದ್ದೆ. ಹಿಂಗೆ ಒಮ್ಮೆ ಅತ್ತು ಅತ್ತು ಹೈರಾಣಾದಾಗ ಅನಿಸಿದ್ದು ಅತ್ರೇನು ಮಕ್ಕಳು ಗಂಡಾಗ್ತಾವ? ಇಲ್ಲ. ಅತ್ತೇನು ಪ್ರಯೋಜನ? ದೇವರು ಹೆಣ್ಣು ಕೊಟ್ಟಾನ. ನಮಗೂ ಅಂಥಾ ಹೆಣ್ಣು ಕೊಡಲಿಲ್ಲ ಅಲ್ಲ ಅಂತ ಮಂದಿ ಕರಬೂಹಂಗ ಮಕ್ಕಳನ್ನ ಬೆಳಸ್ತೀನಿ ಅಂತ ನಿರ್ಧಾರ ಮಾಡ್ದೆ. ಯಾವ ಕಾರಣಕ್ಕೂ ಅಳೂದಿಲ್ಲ. ದೇವರು ನಾ ಅತ್ತೂ ಕರದು ಮಾಡ್ಲಿ ಅನ್ನೂವಂಥ ಸಂದರ್ಭ ತಂದಾಗೂ ಕಲ್ಲಾಗಿದ್ದೆ. ಇದು ಜಿದ್ದು. ದೇವರ ಮ್ಯಾಲಿನ ಜಿದ್ದು. ಈ ಜಿದ್ದಿನಿಂದ ಇನ್ನೊಬ್ಬರಿಗೆ ತ್ರಾಸಂತೂ ಇಲ್ಲಲ್ಲ.  ಆಮೇಲೆ ನಿಮ್ಮಣ್ಣ ಹುಟ್ದಾ. ಆ ಮಾತು ಬ್ಯಾರೆ. ಆದ್ರ ಇವೊತ್ತಿಗೂ ಅಳಬಾರದು ಅನ್ನೂ ನಿರ್ಧಾರ ಗಟ್ಟಿಯಾಗಿಯೇ ಉಳದದ. ಇದು ನಮ್ಮೊಳಗಿನ ಬೆಳಕು. ಅದು ನಮಗೇ ಕಾಣಬೇಕು. ನಮ್ಮ ಜೀವನಾನ ತೋರಬೇಕು. ಮುಂದ ಅಳಬೇಕು ಅನ್ನಸ್ದಾಗಲೆಲ್ಲ ಬೇಂದ್ರೆ ಅಜ್ಜನ ಪದಗಳು ನನಗ ಗಟ್ಟಿಯಾದ್ವು. ರೊಟ್ಟಿ ಬಡ್ಕೊಂತ ‘ನನ್ನ ಕೈ ಹಿಡಿದಾಕೆ ಅಳುನುಂಗಿ ನಗು ಒಮ್ಮೆ, ನಾನೂನು ನಕ್ಕೇನ’ ಹಾಡು ಹಾಡ್ತಿದ್ರ ರೊಟ್ಟಿ ತೆಳು ಆಗ್ತಿದ್ವು. ಮನಸೂ ತಿಳಿ ಆಗ್ತಿತ್ತು. ತೀರ ಅಂಥ ಸಂದರ್ಭ ಬಂದ್ರ, ನೀನು ಇದನ್ನ ಮನನ ಮಾಡ್ಕೊ. ‘ಹುಸಿ ನಗುತ ಬಂದೇವ, ನಸುನಗುತ ಬಾಳೋಣ, ತುಸು ನಗುತ ತೆರಳೋಣ’ ‘ಬಡತನ ಗಿಡತನ ಕಡೆತನಕುಳಿದಾವೇನ, ಎದೆಹಿಗ್ಗು ಕಡೆ ಮಟ್ಟ, ಬಾಳಿನ ಕಡಲಾಗ ಅದನ ಮುಳುಗಿಸಬ್ಯಾಡ, ಕಡೆಗೋಲು ಹಿಡಿ ಹುಟ್ಟ’ ಅಂತ ಹಾಡಾಕ ಸುರು ಮಾಡಿದ್ರು. ಮೊದಲಾದ್ರ ಇವರ ಚಿತ್ರಹಾರ್ ಮುಗಿಯೂದಿಲ್ಲ ಅಂತ ಮೂಗುಮುರಿಯೂ ಮಕ್ಕಳು ಅವೊತ್ತು ಸುಮ್ನ ಕೇಳಿರಲಿಲ್ಲ. ಕೇಳಿ ಸುಮ್ನ ಆಗಲೂ ಇಲ್ಲ. ‘ಗಂಡ ಅಂತಾನಂತ ಅತ್ಗೊಂತ ಕುಂತ್ರ, ಸಿಟ್ಟಿಗೆದ್ರ ಬದುಕು ಮೂರಾಬಟ್ಟಿ ಆಗ್ತದ. ಕಟ್ಗೊಂಡ ಗಂಡ ಪೂರ್ವಜನ್ಮದ ಮಗಾ ಅಂತ ತಿಳ್ಕೊಂಡು ಕ್ಷಮಿಸ್ಕೊಂತ ಹೋಗಬೇಕು. ಅವರೂ ಅಷ್ಟೆ. ಕಟ್ಗೊಂಡು ಹೆಂಡ್ತಿ, ಮಗಳಿದ್ಹಂಗ ಅನ್ನೂ ಮಮಕಾರ ಬೆಳಸ್ಕೊಂಡ್ರ ಜಗಳ ಕಡಿಮಿ ಆಗ್ತಾವ. ಎದಿಹಿಗ್ಗು ಉಳದೇ ಉಳೀತದ… ಇವೆಲ್ಲ ಕಾಲ ಮಾಗಿದ್ಹಂಗ, ಪ್ರೀತಿ ಗಟ್ಟಿ ಆದ್ಹಂಗ ಬರ್ತದ. ಈಗೀಗ ನೀವು ಪ್ರೀತಿ ಬಲಿಯಾಕೆ ಬಿಡೂದಿಲ್ಲ. ಪ್ರೇಮದ ಕಾವು ಇಳಿಯೂ ಮುನ್ನ, ಪ್ರೇಮದ ಪೂರ ಕಡಿಮಿ ಆಗಿ, ನದಿ ಹೊಳಿ ಹರಿಯೂ ಮೊದಲೇ ದಾರಿ ಬ್ಯಾರೆ ಅನ್ನೂಹಂಗ ಜಗಳಾಡ್ತೀರಿ. ಕಾದು ನೋಡ್ರಿ. ‘ಜಗಳ ಕಾಯ್ದು’ ಅಲ್ಲ‘ ಅಂತಹೇಳಿ ಸುಮ್ನಾಗಿದ್ರು. ಈ ‘ಎದಿಹಿಗ್ಗು ಕಡೆತನಕ’ ಅನ್ನೂ ಪದ, ಹಸಿ ಗೋಡಿಯೊಳಗ ಹಳ್ಳ ನೆಟ್ಟಂಗ ಗುರಿ ಮುಟ್ಟಿತ್ತು. ಅನ್ನೋರು ಅಂತಾರ. ಆಡ್ಕೊಳ್ಳೋರು ಆಡ್ಕೊಂತಾರ. ನಮ್ಮ ಎದಿ ಹಿಗ್ಗು ನಮಗಿದ್ರ ಯಾವ ನೋವು ಎಷ್ಟು ಹೊತ್ತಿನ ಅತಿಥಿ? ಸದಾ ಕಣ್ಣೀರೊಳಗ ತೇಲೂ ನನಗ ಇದು ಪಾಠ ಆಗಿತ್ತು. ಆದ್ರ ಗಟ್ಟಿಯಾಗೂದು, ಗಟ್ಟಿ ಮಾಡೂದು ಅವರಿವರ ಮಾತಲ್ಲ. ನಮ್ಮ ಬದುಕು. ****************************************

ಎದಿಹಿಗ್ಗು ಕಡೆತನಕ. Read Post »

ಕಾವ್ಯಯಾನ

ಕನಸು

ಕವಿತೆ ಕನಸು ಮೋಹನ್ ಗೌಡ ಹೆಗ್ರೆ ಜಗದಗಲವ ಅಳೆದ ಕಣ್ಗಳುಎದೆಯದವ ತಟ್ಟಿದ ಮೌನ ಮಾತುಗಳುಅಮೂರ್ತ ವಿಸ್ಮಯಗಳ ಮೂಟೆ ಕಟ್ಟಿ ಮುದ್ದಾಡುತ್ತವೆನಮ್ಮೊಳಗೆ ಹೊಸ ಕನಸಿನ ಪರಪಂಚದೊಂದಿದೆ…….. ಕಣ್ಣಲ್ಲಿ ನೋಡದೇ ಇದ್ದರೂಕೈಯಲ್ಲಿ ಮುಟ್ಟದಿದ್ದರೂಅಲ್ಲೊಂದು ಕ್ಷಣಿಕ ಮೂರ್ತ ಸ್ಥಿತಿಪರಿಚಿತ ಅಪರಿಚಿತ ವ್ಯಕ್ತಿ ಜಾಗೆಗಳ ಅನಾವರಣ ಕನಸುಗಳಿಗೋ ಸಾಕಷ್ಟು ಕವಲುಗಳುಹೌದೆನಿಸುವ, ಬೇಕು, ಬೇಡವೆನಿಸೋನಮ್ಮದೇ ವಸ್ತು ವಿಷಯಗಳೇ ಕನಸಿನ ಒಡಲಾಳಆದರೂ ಹೋಲಿಕೆಯಾಗದ ಕನಸುಗಳೂ ಒಮ್ಮೊಮ್ಮೆ ಕನಸಿನ ನೂರು ಮುಖಗಳಲ್ಲಿಪ್ರೀತಿ, ಖುಷಿ, ಭಯ, ನಿರೀಕ್ಷೆಗಳಿದ್ದರೂಕಂಡು ಕಾಣದಾದ ಕನಸನೂಕ್ಷಣಿಕ ಮನದಾಳದಲ್ಲಿ ಇರಿಸಿಕೊಂಡಿದ್ದಿದೆ ಕನಸಿನ ವಿಳಾಸ ಪಡೆದು ಮಾತಾಡಬೇಕಿದೆಭ್ರಷ್ಟತೆ, ನ್ಯಾಯ ನಿಷ್ಠತೆಕೆಡಕುಗಳಮುಂಚಿತವಾಗಿಯೇ ಎದುರಿಸುವ ತಯಾರಿಗಾಗಿಒಡೆದು ಹೋದ ಅನಾಥ ಮನಸುಗಳಿಗೆಮನೆ ಇದ್ದೂ ಹಸಿದೇ ಇರುವ ಒಡಲುಗಳಿಗೆಎಲ್ಲ ಇದ್ದೂ ಇಲ್ಲದಂತ ಕಣ್ಣುಗಳಿಗಿಷ್ಟುಕನಸಲ್ಲಾದರೂ ಖುಷಿ ಪಡಿಸೆಂದುಒಂದು ಆಪ್ತ ತಾಕಿತು ಮಾಡಲು…….. ********************************

ಕನಸು Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಅಂಕಣ ಬರಹ ಕತೆಗಾರ ರಾಮಕೃಷ್ಣ ಗುಂದಿ ಅವರ ಆತ್ಮಕಥೆ ….7 ಅಲಗೇರಿಯಲ್ಲಿ ಬೆಂಕಿ ಮತ್ತು ಮೊಲ             ನಾಗಮ್ಮಜ್ಜಿಯ ಅಂತ್ಯಸಂಸ್ಕಾರ ಅನಿವಾರ್ಯವಾಗಿ ಕಾರವಾರದಲ್ಲಿ ನಡೆದುಹೋಯಿತು. ಕ್ರಿಯಾ ಕರ್ಮಗಳನ್ನು ಪೂರ್ಣಗೊಳಿಸುವವರೆಗೆ ಊರಿಗೆ ಮರಳುವ ಹಾಗೆಯೂ ಇರಲಿಲ್ಲ. ತಾತ್ಕಾಲಿಕವಾಗಿ ನಮ್ಮ ಪರಿವಾರ ಕಾರವಾರ ತಾಲೂಕಿನ ಅರಗಾ ಎಂಬಲ್ಲಿ ಶಾನುಭೋಗಿಕೆಯಲ್ಲಿರುವ ನಾರಾಯಣ ಆಗೇರ ಎಂಬ ಜಾತಿ ಬಂಧುವೊಬ್ಬರ ಮನೆಯಲ್ಲಿ ವಾಸ್ತವ್ಯ ಮಾಡಬೇಕಾಯಿತು. ಶಾನುಭೋಗರ ಪತ್ನಿ (ಅವಳ ಹೆಸರೂ ನಾಗಮ್ಮ) ನನ್ನ ಯೋಗಕ್ಷೇಮಕ್ಕೆ ನಿಂತಳು. ತಬ್ಬಲಿ ತನದಲ್ಲಿ ನೊಂದು ಹಾಸಿಗೆ ಹಿಡಿದ ಅವ್ವ, ತರಬೇತಿಯ ಜವಾಬ್ದಾರಿಯಲ್ಲಿ ದಿಕ್ಕು ತೋಚದಂತಿದ್ದ ಅಪ್ಪ ಮತ್ತು ಹಸುಳೆಯಾದ ನನಗೆ ಅಂದು ನಾರಾಯಣ ಶಾನುಭೋಗ ದಂಪತಿಗಳು ನೀಡಿದ ಆಶ್ರಯ, ಮಾಡಿದ ಉಪಕಾರಗಳಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ ಎಂದು ಅವ್ವ ಈಗಲೂ ನೆನಪಿಸಿಕೊಳ್ಳುತ್ತಾಳೆ. ಆದರೆ ಅವರಿಗೆ ಕೃತಜ್ಞತೆ ಹೇಳಲು ಇಬ್ಬರೂ ಬದುಕಿ ಉಳಿದಿಲ್ಲ ಎಂಬುದು ನಮ್ಮ ದೌರ್ಭಾಗ್ಯ!             ಮರಳಿ ಮಾಸ್ಕೇರಿಯ ತೌರಿಗೆ ಬಂದು ಸೇರುವಾಗ ಅವ್ವನಿಗೆ ತಾಯಿಯಿಲ್ಲದ ತೌರುಮನೆಯಾಗಿತ್ತು ಅದು. ಹಾಗೆಂದು ಅವ್ವ ನೊಂದುಕೊಂಡಿದ್ದರೂ ಮಾಸ್ಕೇರಿಯ ಜಾತಿ ಬಂಧುಗಳೆಲ್ಲರೂ ತಾಯಿ ತಂದೆಯರ ಹಾಗೆ ಅಕ್ಕರೆ ತೋರಿದರಂತೆ. ಅದರಲ್ಲಿಯೂ ಸಾಕವ್ವ ಎಂಬ ಮುದುಕಿ ಸರಿಯಾದ ಬಾಣಂತನವಿಲ್ಲದೆ ಅವ್ವನ ಮುಖ ಸೊರಗಿದುದನ್ನು ಗ್ರಹಿಸಿ ಎರಡು ತಿಂಗಳು ಕಟ್ಟು ನಿಟ್ಟಿನ ಬಾಣಂತನ ಮಾಡಿದಳಂತೆ. ತನ್ನ ಮನೆಯಿಂದ ಹತ್ತಾರು ಮಾರು ಅಂತರದಲ್ಲಿದ್ದ ನಮ್ಮ ಮನೆಗೆ ಮುಂಜಾನೆ ಸಂಜೆ ತಪ್ಪದೇ ಬರುತ್ತ ಅರಶಿನ ಎಣ್ಣೆ ತಿಕ್ಕಿ, ಅಡಕಲ ತುಂಬ ಬಿಸಿನೀರು ಹೊಯ್ದು, ಧೂಪದ ಹೊಗೆ ಹಾಕಿ ತಾಯಿ ಮಗುವನ್ನು ಉಪಚರಿಸಿದ ಸಾಕವ್ವ ಅವ್ವನಿಗೆ ಹದವಾದ ಕಾಳು ಮೆಣಸಿನ ಚಟ್ನಿಯನ್ನು ಮಾಡಿ ಉಣ್ಣಿಸುತ್ತಿದ್ದಳಂತೆ. ಸಾಕವ್ವನ ಅಂಥ ಕಟ್ಟುನಿಟ್ಟಿನ ಬಾಣಂತನದಿಂದಾಗಿಯೇ ಮುಂದೆ ಮತ್ತೆ ಐದು ಜನ ಮಕ್ಕಳನ್ನು ಹೆತ್ತರೂ ತನ್ನ ದೇಹದ ಚೈತನ್ಯ ಉಡುಗದೆ ಉಳಿಯುವುದು ಸಾಧ್ಯವಾಯಿತು ಅನ್ನುತ್ತಾಳೆ ಅವ್ವ.             ಬೆಳ್ಳಗೆ ಎತ್ತರದ ನಿಲುವಿನ ಸಾಕವ್ವ’ ಅವ್ವನಿಗೆ ಮಾತ್ರ ಸಾಕವ್ವನಾಗಿರದೆ ಕೇರಿಗೇ ಅಕ್ಕರೆಯ ಅವ್ವನಾಗಿದ್ದಳಂತೆ. ಶುಚಿಯಾಗಿ ಅಡಿಗೆ ಮಾಡುವ ಅವಳು, ಕೇರಿಯಲ್ಲಿ ಯಾರಿಗೇ ಕಾಯಿಲೆಯಾದರೂ ನಾರುಬೇರುಗಳ ಕಷಾಯ ಮಾಡಿ ಕುಡಿಸಿ ಕಾಯಿಲೆಗಳನ್ನು ಗುಣ ಪಡಿಸುತ್ತಿದ್ದಳಂತೆ. ೧೯೬೧-೬೨ ರ ಸುಮಾರಿಗೆ ನಾವೆಲ್ಲ ಬನವಾಸಿಯಲ್ಲಿರುವಾಗ ಊರಲ್ಲಿ ಹಬ್ಬಿದ ಆಮಶಂಕೆ’ ಕಾಯಿಲೆ ನಮ್ಮಕೇರಿಯ ಒಂದಿಷ್ಟು ಪ್ರಾಯದ ಮತ್ತು ಎಳೆಯ ಮಕ್ಕಳನ್ನು ಬಲಿತೆಗೆದುಕೊಂಡಿತ್ತು. ಸಾಕವ್ವಜ್ಜಿ ಕೂಡ ಇದೇ ಕಾಯಿಲೆಯಲ್ಲಿ ಸಾವು ಕಂಡಿದ್ದಳು.             ಕಾರವಾರದ ಶಿಕ್ಷಕ ತರಬೇತಿಯ ಬಳಿಕ ಕೆಲವು ವರ್ಷಗಳಲ್ಲಿ ಅಪ್ಪನಿಗೆ ಅಂಕೋಲಾ ತಾಲೂಕಿನ ಅಲಗೇರಿ’ ಎಂಬ ಹಳ್ಳಿಯ ಸರಕಾರಿ ಶಾಲೆಗೆ ವರ್ಗವಾಯಿತು. ನನಗೆ ಮೂರೋ ನಾಲ್ಕೋ ವರ್ಷ ತುಂಬಿರಬಹುದು. ಆಗಿನ್ನೂ ಬಾಲವಾಡಿ, ಅಂಗನವಾಡಿ ಇತ್ಯಾದಿ ವ್ಯವಸ್ಥೆ ಇರಲಿಲ್ಲ. ನಾನು ಮನೆಯಲ್ಲೇ ಆಡಿಕೊಂಡಿದ್ದೆ. ನಮಗೆ ನಮ್ಮ ಜಾತಿಯ ಜನರ ಕೇರಿಯಲ್ಲೇ ವಾಸ್ತವ್ಯಕ್ಕೆ ಒಂದು ಚಿಕ್ಕ ಹುಲ್ಲಿನ ಮನೆ ವ್ಯವಸ್ಥೆಯಾಗಿತ್ತು. ಅಪ್ಪ ಅದಾಗಲೇ ಹಳ್ಳಿಯ ಜನರ ಯಕ್ಷಗಾನ ಬಯಲಾಟಗಳಿಗೆ ಅರ್ಥಬರೆದುಕೊಡುವುದೂ, ಕುಣಿತ ಕಲಿಸುವುದೂ ಇತ್ಯಾದಿ ಮಾಡುತ್ತಿದ್ದ. ಇದರಿಂದ ಇತರ ಸಮಾಜದ ಜನರು ಅಪ್ಪನನ್ನು ವಿಶೇಷ ಗೌರವದಿಂದ ಕಾಣುತ್ತಿದ್ದರು. ಸಮಯಕ್ಕೊದಗಿ ಸಹಾಯವನ್ನು ಮಾಡುತ್ತಿದ್ದರು. ಹೆಚ್ಚಾಗಿ ಅಲ್ಲಿನ ಹಾಲಕ್ಕಿಗಳು ಮನೆಯವರೆಗೂ ಬಂದು ಹೆಚ್ಚಿನ ಪ್ರೀತಿ, ವಿಶ್ವಾಸ ತೋರಿಸುತ್ತಿದ್ದರು. ತಾವು ಬೆಳೆದ ತರಕಾರಿಗಳನ್ನು ಪುಕ್ಕಟೆಯಾಗಿ ತಂದು ಕೊಡುತ್ತಿದ್ದರು. ಒಬ್ಬ ಹಾಲಕ್ಕಿ ಗೌಡನಂತೂ ಒಂದು ಮೊಲವನ್ನು ಜೀವಂತ ಹಿಡಿದು ತಂದು ಅಪ್ಪನಿಗೆ ಕಾಣಿಕೆಯಾಗಿ ಒಪ್ಪಿಸಿದ್ದ. ಅಪ್ಪ ಅದಕ್ಕೊಂದು ಪಂಜರ ಮಾಡಿ ಸೊಪ್ಪು ಸದೆ ತಿನ್ನಿಸಿ ಅಕ್ಕರೆ ತೋರುತ್ತಿದ್ದರೆ, ನನಗೋ ಅದು ಜೀವಂತ ಆಟಿಗೆಯ ವಸ್ತುವಾಗಿತ್ತು. ಒಂದೆರಡು ತಿಂಗಳಲ್ಲೇ ನಮಗೆ ಹೊಂದಿಕೊಂಡ ಮೊಲ ಪಂಜರದ ಹೊರಗೂ ಅಷ್ಟೇ ನಿರಾಳವಾಗಿ ಓಡಾಡತೊಡಗಿತು. ಅಪ್ಪ ಶಾಲೆಗೆ ಹೊರಟರೆ ಹತ್ತು ಹೆಜ್ಜೆಯಾದರೂ ಅವನೊಟ್ಟಿಗೆ ಕುಪ್ಪಳಿಸಿ ನಡೆದು ಮತ್ತೆ ಆಚೀಚೆ ಬೆಕ್ಕು ನಾಯಿಗಳ ಸದ್ದು ಕೇಳಿದರೆ ಮರಳಿ ಬಂದು ಗೂಡು ಸೇರುತ್ತಿತ್ತು.             ಯಾವ ಊರಿನಲ್ಲಾದರೂ ಸಜ್ಜನರ ನಡುವೆಯೇ ಒಂದಿಬ್ಬರಾದರೂ ನಯವಂಚಕ ಜನ ಇದ್ದೇ ಇರುತ್ತಾರೆ ಎಂಬ ಸರಳ ಸತ್ಯದ ಅರಿವು ನಮ್ಮ ಮುಗ್ಧ ತಾಯಿ ತಂದೆಯರ ಗಮನಕ್ಕೆ ಬರಲೇ ಇಲ್ಲ. ಮೊಲವನ್ನು ಕಾಣಿಕೆ ನೀಡಿದ ಅದೇ ಜಾತಿಯ ಮನುಷ್ಯನೊಬ್ಬ ಮೆತ್ತಗಿನ ಮಾತನಾಡಿ, “ಮೊಲಕ್ಕೆ ಹುಲ್ಲು ಮೇಯಿಸಿ ತರುವೆ” ಎಂದು ಸುಳ್ಳು ಹೇಳಿ ಕೊಂಡೊಯ್ದವನು ಅದನ್ನು ಕೊಂದು ತಿಂದು ವಂಚನೆ ಮಾಡಿದ. ಅಪ್ಪ-ಅವ್ವ ಮತ್ತು ನಾನು ಮೊಲದ ಸಾವಿಗಾಗಿ ಮರುಗುವುದನ್ನು ಬಿಟ್ಟರೆ ಬೇರೆ ಏನನ್ನೂ ಮಾಡುವಂತಿರಲಿಲ್ಲ.             ಅಲಗೇರಿಯಲ್ಲಿ ನನ್ನನ್ನು ಆಡಿಸುವುದಕ್ಕೂ ಆಯಿತು ತಾನು ಶಾಲೆ ಕಲಿಯುವುದಕ್ಕೂ ಆಯಿತು ಎಂಬ ಉದ್ದೇಶದಿಂದ ಅವ್ವನ ಚಿಕ್ಕಪ್ಪನ ಮಗ (ನನ್ನ ಸೋದರ ಮಾವ) ರಾಮ ಎಂಬ ಹುಡುಗ ಬಂದು ನಮ್ಮ ಜೊತೆಗೆ ಉಳಿದುಕೊಂಡಿದ್ದ. ಅಗ್ಗರಗೋಣದ ನಮ್ಮ ಸೋದರತ್ತೆಯ (ನಮ್ಮ ತಂದೆಯವರ ಅಕ್ಕ) ಮಗ ನಾರಾಯಣ ಎಂಬುವವನೂ ಕೆಲವು ದಿನ ನಮ್ಮೊಡನೆಯೇ ಇದ್ದ. ಇಬ್ಬರೂ ನನ್ನನ್ನು ಮುದ್ದು ಮಾಡುತ್ತ, ಹಟ ಮಾಡಿದರೆ ಬಡಿದು ತಿದ್ದುತ್ತ ಅಕ್ಕರೆಯಿಂದ ಆಟವಾಡಿಸುತ್ತಿದ್ದರು. ನಮಗೆ ಇಂಥಹುದೇ ಆಟಿಗೆ ವಸ್ತು ಎಂಬುದೇನೂ ಇರಲಿಲ್ಲ. ಮುರಿದ ತೆಂಗಿನ ಹೆಡೆ, ಗರಟೆ ಚಿಪ್ಪು, ಬಿದಿರಿನ ಕೋಲು, ಹುಲ್ಲಿನ ಬಣವೆ ಇತ್ಯಾದಿ ನಿಸರ್ಗ ಸಹಜ ವಸ್ತುಗಳೇ ನಮಗೆ ಆಟಿಕೆಯಾಗಿದ್ದವು.             ಒಂದು ಮುಸ್ಸಂಜೆಯ ಹೊತ್ತು. ಅವ್ವ ಮೀನು ಕೊಯ್ಯುತ್ತಾ ಅಂಗಳದ ಆಚೆ ಕುಳಿತಿದ್ದಳು. ಬದಿಯ ಮನೆಯವಳು ಕತ್ತಲಾಯಿತೆಂದು ನಮ್ಮ ಮನೆಯ ದೀಪದ ಬುರುಡಿಯನ್ನು ತನ್ನ ಮನಗೊಯ್ದು ಎಣ್ಣೆ ಹಾಕಿ ಹೊತ್ತಿಸಿ ತಂದ… ************************************************** ರಾಮಕೃಷ್ಣ ಗುಂದಿ ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿದೆ

Read Post »

You cannot copy content of this page

Scroll to Top