ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ವರ್ತಮಾನ

ಕೇಂದ್ರ ಕೃಷಿ ಕಾಯ್ದೆ ರೈತರಿಗೆ ಮಾರಕ ಹೇಗೆ?

ಕೃಷಿ ರಂಗದ ಸಮಸ್ಯೆಗಳಿಗೆ ಪರಿಹಾರವಿರುವುದು ವಿಕೆಂದ್ರೀಕೃತ ಅರ್ಥ ನೀತಿಯಲ್ಲಿ ; ಸಹಕಾರಿ ತತ್ವದಲ್ಲಿ. ಬೇಸಾಯ, ಉತ್ಪಾದನೆ , ಸಂಗ್ರಹಣೆ ಮತ್ತು ಮಾರಾಟ ವ್ಯವಸ್ಥೆಯನ್ನು ಸಹಕಾರಿ ರಂಗದಲ್ಲೇ ಕೈಗೊಳ್ಳುವುದು. ಕೃಷಿ ಪೂರಕ ಮತ್ತು ಕೃಷಿ ಆಧಾರಿತ ಉದ್ದಿಮೆಗಳನ್ನು ಗ್ರಾಮೀಣ ಭಾಗದಲ್ಲಿ ಪ್ರಾರಂಭಿಸಲು ಪ್ರೋತ್ಸಾಹ ನೀಡುವುದರಿಂದ. ಕೇಂದ್ರೀಕೃತ ಅರ್ಥವ್ಯವಸ್ಥೆಯಾದ ಬಂಡವಾಳವಾದಿ ನೀತಿಯನ್ನು ಕೈಬಿಡದೇ ರೈತರ ಬದುಕನ್ನು ಹಸನಾಗಿಸಲು ಸಾಧ್ಯವಾಗದು

ಕೇಂದ್ರ ಕೃಷಿ ಕಾಯ್ದೆ ರೈತರಿಗೆ ಮಾರಕ ಹೇಗೆ? Read Post »

ಇತರೆ, ದಾರಾವಾಹಿ

ಆವರ್ತನ

ಇದು ಗುರುರಾಜ್ ಸನಿಲ್ ಅವರ ‘ಆವರ್ತನ’ ಎಂಬ ಸಾಮಾಜಿಕ ಕಾದಂಬರಿ. ಪ್ರಸ್ತುತ ಕಾಲಘಟ್ಟದ ಸಮಾಜದಲ್ಲಿ ನಮ್ಮ ಕೆಲವು ನಂಬಿಕೆ, ಆಚರಣೆಗಳು ಯಾವ ಯಾವ ರೀತಿಗಳಲ್ಲಿ ಜನಜೀವನ ಶೋಷಣೆಗೂ, ಹಸಿರು ಪರಿಸರ ಮತ್ತು ವನ್ಯಜೀವರಾಶಿಗಳ ಮಾರಣಹೋಮಕ್ಕೂ ಕಾರಣವಾಗುತ್ತಿವೆ ಎಂಬುದನ್ನು ಬಹಳ ಸಮೀಪದಿಂದ ಕಾಣುತ್ತ ಬಂದವರು ಇವರು.. ಹಾಗಾಗಿ ಅದೇ ಕಥಾವಸ್ತುವನ್ನು ಕಾದಂಬರಿ ಪ್ರಕಾರದಲ್ಲೂ ಆಯ್ದುಕೊಂಡು ಜನಜಾಗ್ರತಿ ಮೂಡಿಸುವುದು ಅಗತ್ಯ ಎಂದು ತೋರಿ ಈ ಕೃತಿಯನ್ನು ರಚಿಸಿದ್ದಾರೆ. ಇದು ಪುಸ್ತಕರೂಪದಲ್ಲಿ ಪ್ರಕಟವಾಗುವ ಮುನ್ನ ಸಂಗಾತಿಯ ಓದುಗರನ್ನು ತಲುಪಲೆಂದು ಪ್ರತಿ ಬಾನುವಾರ ಇದನ್ನು ಕಂತುಗಳಲ್ಲಿ ಪ್ರಕಟಿಸಲಾಗುತ್ತಿದೆ. ದಾರಾವಾಹಿ ಕ್ಷೇತ್ರದಲ್ಲಿ ಇದು ಸಂಗಾತಿಯ ಮೊದಲ ಪ್ರಯತ್ನ ಓದುಗರು ತಮ್ಮ ಅನಿಸಿಕೆ ತಿಳಿಸಬೇಕೆಂದು ಕೋರುತ್ತೇವೆ

ಆವರ್ತನ Read Post »

ಅಂಕಣ ಸಂಗಾತಿ, ಮರಣವೇ ಮಹಾನವಮಿ

ವಚನಚಳುವಳಿಗೆ ಕನ್ನಡ ಸಾಹಿತ್ಯದಲ್ಲಿ ಬಹುದೊಡ್ಡ ಸ್ಥಾನವಿದೆ. ವಚನಗಳಲ್ಲಿ ಆಡಿದ, ಸಾರಿದ, ಸಾಧಿಸಿ ತೋರಿಸಿದ ಮೌಲ್ಯಗಳು ಕೇವಲ ಘೋಷಣೆಗಳಾಗದೆ ನಡೆ ನುಡಿಯಲ್ಲಿ ಒಂದಾಗಿ ಏಕವನ್ನು ಸ್ಥಾಪಿಸಿದ ಕಾರಣದಿಂದ ವಚನಕಾರರು ಈ ನೆಲದಲ್ಲಿ ಮಾನ್ಯ ಮತ್ತು ಮುಖ್ಯರಾಗುತ್ತಾರೆ.

Read Post »

ಇತರೆ

ಪ್ರೇಮಪತ್ರ ಸ್ಪರ್ದೆ

ಪ್ರೇಮಪತ್ರ ಸ್ಪರ್ದೆ ಪಂಜು ಅಂತರ್ಜಾಲ ವಾರಪತ್ರಿಕೆ ವತಿಯಿಂದ 2021 ರ ಪ್ರೇಮ ಪತ್ರ ಸ್ಪರ್ಧೆಗೆ ನಿಮ್ಮ ಪ್ರೇಮ ಪತ್ರಗಳನ್ನು ಆಹ್ವಾನಿಸಲಾಗಿದೆ. ನಿಯಮಗಳು: ಪ್ರೇಮ ಪತ್ರ ನಿಮ್ಮ ಸ್ವಂತ ಬರಹವಾಗಿರಬೇಕುಕನಿಷ್ಟ 500 ಪದಗಳ ಬರಹವಾಗಿರಬೇಕುಫೇಸ್ ಬುಕ್ ಮತ್ತು‌ ಬ್ಲಾಗ್ ಸೇರಿದಂತೆ ಬೇರೆಲ್ಲೂ ಪ್ರಕಟವಾಗಿರಬಾರದು.ನಿಮ್ಮ ಬರಹವನ್ನು ಕಳುಹಿಸಿಕೊಡಬೇಕಾದ ಮಿಂಚಂಚೆ: editor.panju@gmail.com, smnattu@gmail.com ಮಿಂಚಂಚೆಯ ಸಬ್ಜೆಕ್ಟ್ ನಲ್ಲಿ “ಪಂಜು ಪ್ರೇಮ ಪತ್ರ ಸ್ಪರ್ಧೆ” ಎಂದು ತಿಳಿಸಲು ಮರೆಯದಿರಿ. ಮಿಂಚಂಚೆಯಲ್ಲಿ ನಿಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ನಿಮ್ಮ ಕಿರು ಪರಿಚಯ ಹಾಗು ಫೇಸ್ ಬುಕ್ ಲಿಂಕ್ ಕಳುಹಿಸಿ.. ಬರಹಗಳು ತಲುಪಬೇಕಾದ ಕೊನೆಯ ದಿನಾಂಕ: 10.02.2021 ಬಹುಮಾನಗಳು: ಮೊದಲ ಬಹುಮಾನ: 3000 ರೂಪಾಯಿ ಎರಡನೇ ಬಹುಮಾನ: 2000 ರೂಪಾಯಿ ಮೂರನೇ ಬಹುಮಾನ: 1000 ರೂಪಾಯಿ ಹಾಗು ತೀರ್ಪುಗಾರರ ಮೆಚ್ಚುಗೆ ಪಡೆದ ಐವರಿಗೆ ಸಮಾಧಾನಕರ ಬಹುಮಾನ ನೀಡಲಾಗುವುದು. ಈ ಪತ್ರಗಳನ್ನು ಪಂಜುವಿನಲ್ಲಿ ಪ್ರಕಟಣೆಗೆ ಬಳಸಿಕೊಳ್ಳುವ ಹಕ್ಕು ‘ಪಂಜು’ಗೆ ಇರುತ್ತದೆ. ***********************************************************************

ಪ್ರೇಮಪತ್ರ ಸ್ಪರ್ದೆ Read Post »

ಅಂಕಣ ಸಂಗಾತಿ, ರಂಗ ರಂಗೋಲಿ

ಅಂಕಣ ಬರಹ ವಸಂತ ಬಂದ! ರಂಗಕ್ಕೆ ರಂಗು ತಂದ!! ವೈಶಾಲಿ ನಗರದ ಬೀದಿ. ವೈಭವದ ಅರಮನೆ. ಅದು ರಾಜನ ಅರಮನೆಯಲ್ಲ. ನಗರದ ಮುಖ್ಯ ನೃತ್ಯಗಾರ್ತಿ,ರಾಜನರ್ತಕಿ ಆಮ್ರಪಾಲಿಯ ಮನೆ. ಆಮ್ರಪಾಲಿ ಚಿಗುರು ಮಾವಿನ ತಳಿರಂತಹವಳು. ಅವಳ ಸೌಂದರ್ಯದ ಕಥನ ಕೇಳಿ ನೆರೆ ಹೊರೆಯ ರಾಜರೂ, ರಾಜಕುಮಾರರೂ ಬಂದಿದ್ದಾರೆ. ಅವಳ ಪ್ರೇಮ ಭಿಕ್ಷೆಗಾಗಿ ಹೊರಬಾಗಿಲಲ್ಲಿ ಸರದಿಯಲ್ಲಿ ಕಾಯುತ್ತಿದ್ದಾರೆ. ಆಕೆ ಒಳಗಡೆ ಇದ್ದಾಳೆ, ಪ್ರಣಯದ ತುರೀಯದ ಅಮಲಲ್ಲಿ. ಆದರೂ ಅದೇನೋ ಬೇಸರ. ಅವಳನ್ನು ಆವರಿಸಿದೆ. ಎಲ್ಲವೂ ಇದ್ದರೂ ಏನೋ ಕೊರತೆ. ತಳಮಳ.  ಬಿಂದುಸಾರನಂತಹ ಮಗಧ ಚಕ್ರವರ್ತಿ ಮಾರುವೇಷದಲ್ಲಿ ಬಂದು ಅವಳ ಪಾದದ ಬಳಿ ಪ್ರೇಮ ಭಿಕ್ಷೆ ಬೇಡುತ್ತಾನೆ. ಆಮ್ರಪಾಲಿ ಪ್ರಣಯ ವೈಭವದಲ್ಲಿರುವಾಗಲೇ ಸಖಿ ಅರಹುತ್ತಾಳೆ. ನಗರಕ್ಕೆ ಗೌತಮ ಬಂದಿದ್ದಾರೆ. ಆಮ್ರಪಾಲಿಯ ಜೀವ, ಜೀವನ ಪಲ್ಲಟಗೊಳ್ಳತ್ತದೆ. ಗೌತಮ ಆಮ್ರಪಾಲಿಯ ಮನೆಗೆ ಬರುತ್ತಾನೆ. ಎಂತಹ ಅದ್ಬುತ ಕಥೆ. ಆಮ್ರಪಾಲಿ..ಗೌತಮ ಬುದ್ದ. ನಾನೂ ಕಥೆಯ ಮೋಹಕ್ಕೊಳಗಾಗಿದ್ದೆ.‌ ಆಮ್ರಪಾಲಿಯ ಕಾಲಕ್ಕೆ ಸಂದುಹೋಗಿದ್ದೆ. ನನಗೆ ಅದರಲ್ಲಿ ರಾಜಕುಮಾರನ ಪಾತ್ರ. ಆಮ್ರಪಾಲಿಯನ್ನು ಕಾಣ ಬೇಕೆಂಬ ತುಡಿತ. ಆಕೆಯ ಎದುರು ಮಣಕಾಲೂರಿ ಬೇಡಿಕೆ. ಅಷ್ಟೆ..ಅಷ್ಟೇ ನನ್ನ ಪಾತ್ರ.  ಆಮ್ರಪಾಲಿ, ” ನೀನಿನ್ನೂ ಚಿಕ್ಕ ಬಾಲಕ. ನಿನ್ನ ರಾಜ್ಯಕ್ಕೆ ಹಿಂತಿರುಗು” ಎನ್ನುತ್ತಾಳೆ. ನನಗೆ ನಿಜಕ್ಕೂ ಹಿಂತಿರುಗಲಾಗುತ್ತಿರಲಿಲ್ಲ. ಇನ್ನು ಎರಡು ಮಾತುಗಳಿದ್ದರೆ!. ಆಮ್ರಪಾಲಿಯ ಎದುರು ಇನ್ನೇನಾದರೂ ಹೇಳುವಂತಿದ್ದರೆ..ಆಸೆ. ಅದು ತುಡಿತ. ಮೋಹದಸೆಳೆತ..ಏನಂದರೂ ಒಪ್ಪುವ ಭಾವ ತೀವ್ರತೆ.  ನಾಟಕದ ತರಬೇತಿ ನಡೆಯುವಾಗಲೂ ನಾನು ಆಮೃಪಾಲಿಯ ಹಿಂದೆ,ಬಿಟ್ಟ ಕಣ್ಣು ಬಿಟ್ಡಂತೆ ನೋಡುತ್ತಿದ್ದೆ. ನಾಟಕದ ದಿನ ಎಂತಹ ರೋಮಾಂಚನಗಳು. ನನಗೆ ರಾಜಕುಮಾರನ ದಿರಿಸುಗಳು. ಸಿಕ್ಕಿಸಿದ್ದ ಖಡ್ಗ,ಕಿರೀಟ..ಸಂತಸದ ಹೊಳೆಯೊಂದು ಒಳಗಡೆ ಕುಪ್ಪಳಿಸುತ್ತ ಹರಿಯುತ್ತಿತ್ತು. ಆಮ್ರಪಾಲಿ ಎಂತಹ ಸೌಂದರ್ಯ. ಅದೆಷ್ಟು ಆಭರಣಗಳು, ಚೆಂದದ ಸೀರೆ. ನಾಟಕ ಮುಗಿದರೂ ಅದೇ ಗುಂಗು. ಆಮ್ರಪಾಲಿ..ಆಮ್ರಪಾಲಿ ನಾನು ರಾಜಕುಮಾರನ ಪಾತ್ರವೇ ಆಗಿದ್ದೆ. ತಳ್ಳಿಸಿಕೊಂಡು ಹೊರದಬ್ಬಲ್ಪಟ್ಟ ರಾಜಕುಮಾರ. ಕನಸಿನ ಹೂ ನಸು ಬಿರಿದು ಕಂಪು ಸೂಸಲು ಆರಂಭಿಸಿತ್ತು. ಈ ನಾಟಕದ ಪಾತ್ರ ನನಗೆ ಸಿಕ್ಕಿದ್ದರ ಹಿಂದೆ ಬಣ್ಣ ಕಲಸುವ ಕುಂಚದಂತಹಾ ಮನಸ್ಸಿತ್ತು. ಏಳನೇ ತರಗತಿಯ ಶಾಲೆಯ ಅಂಗಳದಿಂದ ಹಿರಿಯಡಕ ಹೈಸ್ಕೂಲ್ ಮತ್ತು ಜೂನಿಯರ್ ಕಾಲೇಜಿನ ಎತ್ತರದ ಕಟ್ಟಡ ಸಮುಚ್ಛಯದೊಳಗೆ ಹೆಜ್ಜೆಯಿಟ್ಟ ಗುಬ್ಬಿ ಮರಿಯ ಪುಕ್ಕ ಬೆಳೆದಿತ್ತು. ಎಂಟನೆಯ ತರಗತಿಯಿಂದ ಪಿಯೂಸಿ ವರೆಗೆ. ವಾರ್ಷಿಕೋತ್ಸವಕ್ಕೆ ಒಂದು ನಾಟಕ. ಉಳಿದಂತೆ ನೃತ್ಯಗಳು. ನನಗೆ ಈ ನೃತ್ಯವೆಂಬುದು ಬಲು ಕಠಿಣ. ಸಂಜೆ ಮನೆಗೆ ಹೋದ ಬಳಿಕ ಮನೆಯ ಹತ್ತಿರದ ಗೆಳತಿಯರಿಗೆ,ತಂಗಿಗೆ ಮನೆಯ ಹಿಂದಿನ ಹಾಡಿಯ ಮರದ ಬುಡದಲ್ಲಿ ನನಗೆ ಕಂಠಪಾಠ ಆಗಿದ್ದ ಅದೆಷ್ಟೋ ಭಕ್ತಿಗೀತೆಗಳಿಗೆ ನೃತ್ಯಸಂಯೋಜನೆ ಮಾಡಿ ನಿರ್ದೇಶಕಿಯಾಗಿದ್ದೆ. ಅದು ಬಲು ಗುಟ್ಡಿನ ತಾಲೀಮು. ನಾನು ತಂಡದಲ್ಲಿ ಸೇರಿಕೊಂಡು ಕುಣಿಯುವುದು.. ಅಬ್ಬಬ್ಬಾ..ಎಂತ ಕಷ್ಟ. ಅದಕ್ಕೆ ಅದನ್ನು ಬಿಟ್ಟು ನನ್ನ ಪರಮ ಪ್ರೀತಿಯ ನಾಟಕದತ್ತ ಹೊಂಚು ಹಾಕಿದ್ದೆ. ಆದರೆ ಅದು ದೊಡ್ಡ ಹುಡುಗಿಯರಿಗೆ ಮೀಸಲಾಗಿತ್ತು. ಪಿಯುಸಿ ಓದುವ ಚೆಂದದ ಸವಿತಾ ಅನ್ನುವವರು ನಾಟಕದ ನಾಯಕಿಯಾಗಿ ಆಯ್ಕೆಯೂ ಆಗಿಯಾಗಿತ್ತು. ನಾಟಕದ ಉಸ್ತುವಾರಿ ತೆಗೆದುಕೊಂಡ ಉಪನ್ಯಾಸಕರ ಬಳಿ ಹೋಗೆ ದೀನಳಾಗಿ ನಿಲ್ಲುತ್ತಿದ್ದೆ. ಹೇಳಲು, ಕೇಳಲು ಸಂಕೋಚ.  ಕೊನೆಗೂ ಅವರ ಕೃಪೆ ದೊರಕಿ ಪಿ.ಯು.ಸಿಯವರೇ ತುಂಬಿದ್ದ ನಾಟಕದಲ್ಲಿ ಎಂಟನೆಯ ತರಗತಿಯ ನಾನು ಸೇರ್ಪಡೆಯಾಗಿದ್ದೆ. ಹಾಗೆ ಹದಿಹರೆಯದ ರಾಜಕುಮಾರನ ಪಾತ್ರದ ಕಣ್ಣೊಳಗೆ ಅಮ್ರಪಾಲಿ ರಂಗು ಚೆಲ್ಲಿದ್ದಳು. ಎಂಟನೇ ಕ್ಲಾಸ್ ಎಂದರೆ!. ಅದು ಅಂದ, ಅದು ಚಂದ, ಅದು ಶೃಂಗಾರದತ್ತ ಕಣ್ಣು ತೆರೆಯುವ ಕದ. ಆಟವೆಂಬ ಆಟದಲ್ಲಿ ಮುಳುಗಿದ್ದ ನಮಗೆ ವಿಸ್ಮಯಗಳ ಲೋಕ ತೆರೆದಂತೆ. ಹೊಸತನ್ನು ಹುಡುಕುವ, ಮುಚ್ಚಿದ ಬಾಗಿಲಿನಾಚೆಯೇನಿದೆ ಎಂಬ ಅನ್ವೇಷಕ ಕುತೂಹಲದ, ಗೋಡೆಯಾಚೆಗಿನ ಶಬ್ಧ ಸ್ಪರ್ಶಗಳ, ಹಗಲು ಕನಸುಗಳ ತುಂಬಿದಂಗಳ. ವಿಶಾಲವಾದ‌ ಮೈದಾನ. ಅದಕ್ಕೆ ಬೇಲಿ ಹಾಕಿದಂತೆ ಎರಡು ಬದಿ ಕಟ್ಟಡ ಒಂದು ಬದಿಯಲ್ಲಿ ಸಾಲು ಮರಗಳು. ಮಗದೊಂದು ಬದಿ ರಾಜದ್ವಾರ ತೆರೆದಂತೆ ಇರುವ ಕೆಂಪು ಮಣ್ಣಿನ ರಂಗಸ್ಥಳವದು. ಇಲ್ಲೇ ಎಷ್ಟು ಆಟಗಳು, ಪರೀಕ್ಷೆಗೆ ಕ್ಲಾಸಿಗೆ ಹೋಗುವ ಮುನ್ನ ಕೊನೆಯ ಜೀವದಾನದ ಗುಟುಕಿನಂತೆ ಸಿಗುವ ಓದು, ಸ್ನೇಹಿತರೊಂದಿಗೆ ಹಂಚಿ ತಿಂದ ಜಂಬೂ ನೇರಳೆ ಹಣ್ಣು, ಕಾಗೆ ಎಂಜಲು ಮಾಡಿ ಜೊತೆಗೆ ಮೆಲ್ಲಿದ ಮಾವಿನ ಮಿಡಿ, ಹುಣಿಸೆ ಹಣ್ಣು, ಪೇರಳೆ. ಆ ಎಲ್ಲ ನೆನಪುಗಳಿಗೆ ಈ ಮಣ್ಣಿನ ರುಚಿಯೂ ಇದೆ, ಜತೆಗೆ ವಾಸನೆಯೂ . ಮೈದಾನದ ಪಶ್ಚಿಮಕ್ಕೆ‌ ಮುಖ್ಯರಸ್ತೆ. ರಸ್ತೆಯ ಆ ಬದಿ ಸರಕಾರಿ ಆಸ್ಪತ್ರೆ. ಖಾಸಗಿ ಡಾಕ್ಟರ್ ಗಳು ಇದ್ದರೂ ಆಗೆಲ್ಲ ಊರಿನವರ ಮೊದಲ ಆಯ್ಕೆ ಸರಕಾರಿ ಆಸ್ಪತ್ರೆಯಾಗಿತ್ತು.  ಮೆಟ್ಟಲು ಹತ್ತಿ ಒಳಗೆ ಹೆಜ್ಜೆ ಇಟ್ಟರೆ ಕೋಳಿ ಗೂಡಿನೊಳಗೆ ಕೂತಂತೆ ಚೀಟಿ ಬರೆಯುವ, ಮದ್ದು ಕೊಡುವ, ಡಾಕ್ಟರ್ ಬಳಿ ಕಳುಹಿಸುವ  ಕಂಪೌಂಡರ್ ನ ಕತ್ತೆತ್ತಿ ಚಾಚಿದ ಮುಖ ಕಾಣಿಸುತ್ತದೆ. ಪ್ರಾಥಮಿಕ ವಿಚಾರಣೆ ನಡೆಯುವುದು ಅವರ ಬಳಿ. ಅಲ್ಲಿಂದ ಎಡಕ್ಕೆ ತಿರುಗಿದರೆ ಬಾಗಿಲಿಗೆ ನೇತು ಬಿದ್ದ ನೀಲಿ ಪರದೆಯ ಸಂದಿನಲ್ಲಿ ಡಾಕ್ಟರ್ ರೂಮಿನ ಮೇಜು, ಸ್ಕೆತಸ್ಕೋಪ್ ನ  ಉದ್ದದ ಬಾಕ್ಸ್ ಕಾಣಿಸುತ್ತದೆ.  ದಾಟಿ ಹೋದರೆ ಪರೀಕ್ಷಾಕೊಠಡಿ,  ನಂತರ ಲೇಡಿ ಡಾಕ್ಟರ್ ರೂಮ್.  ಹಿಂದೆ ಬಂದು ಕಾಂಪೌಂಡರ್ ಗೂಡಿನಿಂದ ಮುಂದೆ ನೇರಕ್ಕೆ ಹೋದರೆ ಒಂದು, ಎರಡು, ಮೂ..ರು ಕೊಠಡಿ. ಅದು ಅಲ್ಲಿ ದಾಖಲಾದ ರೋಗಿಗಳಿಗೆ. ನಮ್ಮದು ಬಾಲ್ಯ, ಹರೆಯ ಎರಡೂ ಅಲ್ಲದ, ಎಲ್ಲೂ ಒಪ್ಪದ, ಅಲ್ಲೂ ಇಲ್ಲೂ ಸಲ್ಲುವ ಬದುಕಿನ ಸಂಕ್ರಮಣದ ಕಾಲ.  ತರಗತಿಯ ನಡುವಿನ ಬಿಡುವಿನಲ್ಲಿ ನಾವು ಆಸ್ಪತ್ರೆಗೆ ಹೋಗುವುದು. ಅಲ್ಲಿ ಮಲಗಿರುವ ರೋಗಿಗಳನ್ನು ಇಣುಕುವುದು, ಲೊಚಗುಟ್ಟುವುದು, ಕೆಲವೊಮ್ಮೆ ಡಾಕ್ಟ್ರ್, ದಾದಿಯರ ಕಣ್ಣು ತಪ್ಪಿಸಿ ಒಳನುಗ್ಗಿ ಎಲ್ಲದರ ತಪಾಸಣೆ ನಡೆಸಿ ರೋಗಿಯ ರೋಗದ ವಿವರ ಪಡೆದು ಶಾಲೆಗೆ ಓಡುವುದು. ಆ ಕುಟುಂಬದ ಎಲ್ಲರೂ ನಮಗೆ ಪರಿಚಯ. ಆಗ ಗುಂಡುಗುಂಡಗಿದ್ದ ಒಬ್ಬ ಡಾಕ್ಟರ್ ವರ್ಗಾವಣೆ ಗೊಂಡು ಬಂದಿದ್ದರು. ನಮಗೆ ಅವರ ಪರಿಚಯ ಮಾಡಿಸಿಕೊಳ್ಳುವ, ಆತ್ಮೀಯತೆ ಬೆಳೆಸಿಕೊಳ್ಳುವ ಆತುರ. ಜೊತೆಗೆ ಡಾಕ್ಟರ್ ಜೋರಾ, ಪಾಪ ಇದ್ದರಾ..ಚರ್ಚೆ. ಅದಕ್ಕಾಗಿ ನನ್ನನ್ನೂ ಸೇರಿದಂತೆ ಕೆಲವು ಗೆಳತಿಯರಿಗೆ ಅನಾರೋಗ್ಯ ಕಾಡಿತು. ನನಗೆ ಕಿವಿನೋವು, ಒಬ್ಬ ಗೆಳತಿಗೆ ಹೊಟ್ಟೆನೋವು, ತಲೆನೋವು.ಹೀಗೆ ಹಲವು ಬಗೆಯ ಕಾಯಿಲೆಗಳಿಗೆ ತುತ್ತಾಗಿ ನಮ್ಮ ತಂಡವೇ ಆಸ್ಪತ್ರೆಗೆ ಧಾವಿಸಿತು ಅಲ್ಲಿ ಹೊಸ ಡಾಕ್ಟರ್ ಬಳಿ ಹೋಗುವುದು‌‌ ಒಬ್ಬರನ್ನು ಡಾಕ್ಟರ್ ಪರೀಕ್ಷೆ ಮಾಡುತ್ತಿದ್ದರೆ ಉಳಿದ ಬಾಲೆಯರು ಹೊಸ ಬೆಳಕಿನಲ್ಲಿ ಡಾಕ್ಟರ್ ನ್ನು ನೋಡುವುದು, ಮುಸಿಮುಸಿ ನಗುವುದು. ಅಲ್ಲಿ ಹಲವು ದಾದಿಯರು ಇದ್ದರು. ಬಾನುಮತಿ,ಶಶಿರೇಖಾ,ಸುಮನ ಚಂದ್ರಿಕಾ..ಹೂತೋಟದ ಪರಿಮಳ ಸೂಸುವ ಸೇವಂತಿಗೆ,ಇರುವಂತಿಗೆ,ಗುಲಾಬಿ,ಸಂಪಿಗೆ ಹೂಗಳ ಹಾಗಿದ್ದ ದಾದಿಯರು. ಬಾನುಮತಿ ತುಂಬ ಸುಂದರವಾಗಿದ್ದರು. ಎತ್ತರ ಹಿಮ್ಮಡಿಯ ಚಪ್ಪಲ್, ಸ್ವಚ್ಛ ಬಿಳಿಬಣ್ಣ, ಸುತ್ತಿ ಮೇಲೆ ಕಟ್ಟಿದ ತಲೆಗೂದಲು,ಸುಂದರ ಮೈಕಟ್ಟು. ಬಿನ್ನಾಣದ ನಡುಗೆ. ಅವರು ಹತ್ತಿ, ಕತ್ತರಿ, ಮದ್ದು ಇಟ್ಟ ಟ್ರೇ ಹಿಡಿದು ಆಸ್ಪತ್ರೆಯ ಕಾರಿಡಾರಿನಲ್ಲಿ ನಡೆದಾಡುತ್ತಿದ್ದರೆ ನಾವು ಅಚ್ಚರಿ, ಕುತೂಹಲ, ತುಂಟತನದಿಂದ ಹಿಂಬಾಲಿಸುತ್ತಿದ್ದೆವು. ಅವರು ಡಾಕ್ಟರ್ ಬಳಿ ಕಣ್ಣು, ಬಾಯಿ, ಕೈ ಚಲನೆಗಳೊಂದಿಗೆ ಮಾತನಾಡುತ್ತಿದ್ದರೆ ನಮಗೋ ತಮಾಷೆ, ಕೀಟಲೆ, ಸಣ್ಣ ಹೊಟ್ಟೆಕಿಚ್ಚು!. ತರಗತಿಗೆ ಬಂದರೆ ನಮ್ಮ ಟೀಚರ್ ಗೆ ತಮಾಷೆ ಮಾಡುವ, ಸಲುಗೆ ಬೆಳೆಸುವ ಆಸಕ್ತಿ. ಹುಚ್ಚುಕೋಡಿ ಮನಸ್ಸು. ಆಗ ನಮ್ಮ ಮನೆಯ ಹಿಂದೆ ಬಾಡಿಗೆಗೆ ಒಬ್ಬ ಟೀಚರ್ ಬಂದಿದ್ದರು. ಅವಿವಾಹಿತೆ. ನಾನು ಬೆಳಗ್ಗೆ, ಮಧ್ಯಾಹ್ನ ಸಂಜೆ ಅವರ ಪುಟ್ಟ ಮನೆಯ ಸುತ್ತ ‌ಪ್ರದಕ್ಷಿಣೆ ಹಾಕುವುದಿತ್ತು. ಹಲವಷ್ಟು ಸಲ ಶಾಲೆಗೂ ಅವರ ಜೊತೆಯೇ ಹೋಗುವುದು. ಅವರು ಆಗ ಕೆಲವು ರುಚಿಕರ ವಿಷಯ ತಿಳಿಸುತಿದ್ದರು. ಪಿಯುಸಿ ಹುಡುಗನೊಬ್ಬ ಅವರನ್ನು ಹಿಂಬಾಲಿಸಿದ್ದು, ಕಣ್ಣಲ್ಲಿ ಸನ್ನೆ ಮಾಡಿದ್ದು. ಮನೆಯವರೆಗೂ ಬಂದಿದ್ದು, ಇತ್ಯಾದಿ!. ನಾನು ಬೆಳಗ್ಗೆ ನನ್ನ ಡ್ರೆಸ್ ಸಿಕ್ಕಿಸಿ ಅವರ ರೂಮಿಗೆ ಓಡುವುದು. ಹೆಚ್ಚಾಗಿ ಅವರಿನ್ನೂ ತಯಾರಾಗಿರುವುದಿಲ್ಲ. ಅವರು ಸೀರೆ ಉಟ್ಟು ಸಿಂಗರಿಸುವ ಚೆಂದ ವನ್ನು ನನ್ನ ಬೆರಗುಗಣ್ಣು ಗಮನಿಸುತ್ತಿತ್ತು. ಅವರು ಹಚ್ಚುವ ಕ್ರೀಂ, ಹಣೆಗೆ ಇಡುವ ಬಣ್ಣಬಣ್ಣದ ತಿಲಕ, ಲಿಪ್ ಸ್ಟಿಕ್, ಸೀರೆಯ ಒನಪು, ನೆರಿಗೆ, ನೆರಿಗೆಯ ಬಿನ್ನಾಣ. ಅಲ್ಲಿ ಅಚ್ಚರಿಯನ್ನೂ ಮೀರಿದ ಕುತೂಹಲ. ನಮ್ಮದು ಆಗ ಬಾಲ್ಯಕ್ಕೆ ಟಾಟಾ ಹೇಳಿ ಮುಗಿದಿತ್ತು. ಹರೆಯವಿನ್ನೂ ಪೂರ್ತಿ ಒಳಗೆ ಬಂದಿರಲಿಲ್ಲ. ಎಂತದೋ ಹೊಸತನ. ಮುಸ್ಸಂಜೆ ಯ ಬೇಸರದಂತೆ, ಮರುಳುತನ ಸುರಿದಂತೆ ಕಾಡುವ, ಆವರಿಸಿದ ಕಾಲ. ಅಮ್ಮನ ಸೀರೆಯ ಸೆರಗನ್ನು ಡ್ರೆಸ್ಸಿನ ಮೇಲೆ ಹಾಕಿಕೊಂಡು ಕನ್ನಡಿಯ ಎದುರು ಬಿಂಬವನ್ನೇ  ಮೋಹಿಸುವ ಮರುಳುತನ. ಶಾಲೆಯಲ್ಲಿ ಟೀಚರುಗಳಿಗೆ ಅಡ್ಡ ಹೆಸರುಗಳು. ಮಾತ್ರವಲ್ಲ ವಿದ್ಯಾರ್ಥಿಗಳಿಗೂ ನವನವೀನ ನಾಮಕರಣದ ಸಂಭ್ರಮ. ಕಾಲೇಜಿನ ಉಪವನದಲ್ಲಿ ಮೊಗ್ಗುಗಳು ಮೆಲ್ಲನೆ ದಳಗಳನು ಬಿಡಿಸಿ ಬಿರಿಯುವ ಪ್ರಕೃತಿಯ ಜಾದು. ಎಂತದೋ ಸಂಕೋಚ, ಲಜ್ಜೆ, ಅಪರಿಚಿತ ಭಾವಗಳು ತೆವಳಿಕೊಂಡು ಕಾಯವನ್ನು ಆವರಿಸಿ ಕಣ್ಣಿನೊಳಗಿಳಿದು ಹುತ್ತಗಟ್ಟುತ್ತಿದ್ದವು. ಚಂದಮಾಮ,ಬೊಂಬೆಮನೆಗಿಂತ ಸಾಯಿಸುತೆ,ತ್ರಿವೇಣಿ,ಸಿ.ಎನ್. ಮುಕ್ತಾ ,ಈಚನೂರು ಜಯಲಕ್ಷ್ಮಿ, ಎಂ.ಕೆ.ಇಂದಿರಾ ಮುಂತಾದವರ ಕಾದಂಬರಿಗಳ ಮೇಲೆ ಅಕ್ಕರೆ ಹೆಚ್ಚಿತ್ತು. ಅದನ್ನು ಓದಿ ನಾವೇ ಕಥಾನಾಯಕಿಯರಾಗಿ ಪುಳಕಗೊಳ್ಳುತ್ತಿದ್ದೆವು, ಕಣ್ಣೀರು ತುಂಬಿ ಕೊಳ್ಳುತ್ತಿದ್ದೆವು. ಹಾದಿಯಲ್ಲಿ ನಡೆಯುವಾಗಲೂ ಒಬ್ಬೊಬ್ಬರೇ ಮುಸಿಮುಸಿ ನಕ್ಕು ವಸಂತನಿಗೆ ತೆರೆಯುತ್ತಾ ಕೆನ್ನೆಗೆಂಪುಗಟ್ಟುತ್ತಿತ್ತು.  ಚಿಗುರು ಮಾವಿನೆಲೆಗಳು ಗೊಂಚಲ ಗೊಂಚಲಾಗಿ ಮರಮರಗಳಲ್ಲಿ ನಮ್ಮ ನೋಡಿ ನಗುತ್ತಿದ್ದವು. ************************************************* ಪೂರ್ಣಿಮಾ ಸುರೇಶ್ ರಂಗಭೂಮಿ ಹಾಗೂ ಕಿರುತೆರೆ ಕಲಾವಿದೆ.ಕವಯತ್ರಿ. ಕನ್ನಡ,ತುಳು,ಕೊಂಕಣಿ ಭಾಷೆ ಯ ಸಿನೇಮಾಗಳಲ್ಲಿ ಅಭಿನಯ. ಕೊಂಕಣಿ ಸಿನೇಮಾ ” ಅಂತು” ವಿನ ಅಭಿನಯಕ್ಕೆ ರಾಷ್ಟ್ರಮಟ್ಟದ Hyssa Cini Global Award Best supporting actor ದೊರಕಿದೆ. ” ಸಿರಿ” ಏಕವ್ಯಕ್ತಿ ಪ್ರಸ್ತುತಿ 29 ಯಶಸ್ವೀ ಪ್ರದರ್ಶನ ಕಂಡಿದೆ.ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ಸದಸ್ಯೆ. ಪ್ರಸ್ತುತ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡಮಿ ಸದಸ್ಯೆ. “ಅಮೋಘ ಎಂಬ ಸಂಸ್ಥೆ ಹುಟ್ಟುಹಾಕಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ. ಆಕಾಶವಾಣಿ ಕಲಾವಿದೆ.ಇದುವರೆಗೆ 3 ಕವನ ಸಂಕಲನ ಸೇರಿದಂತೆ 6 ಪುಸ್ತಕಗಳು ಪ್ರಕಟಗೊಂಡಿವೆ. GSS ಕಾವ್ಯ ಪ್ರಶಸ್ತಿ,ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ,GS Max ಸಾಹಿತ್ಯ ಪ್ರಶಸ್ತಿ. ಹಲವಾರು ಕವಿಗೋಷ್ಠಿಯಲ್ಲಿ ಭಾಗವಹಿಸುವಿಕೆ

Read Post »

ಕಾವ್ಯಯಾನ

ಕೂಸು

ಕವಿತೆ ಕೂಸು ಎಂ. ಆರ್. ಅನಸೂಯ ತಾಯೊಡಲ ಹಸುಳೆಯೊಂದುಅನಾಮಧೇಯನಾಗಿ ಭುವಿಗಿಳಿಯಿತುಮುಕ್ತ ಮನದಮುಗ್ಧ ಕೂಸಾಗಿ ಮಡಿಲ ತುಂಬಿತು ಹುಟ್ಟುಡುಗೆಯ ಕೂಸಿಗೆಜಾತಿಯ ವಸ್ತ್ರ ತೊಡಿಸಿದೆವುಮುಗ್ಧ ನಗೆಯ ಮುದ್ದು ಮೊಗದಹಣೆಗೆ ಧರ್ಮದ ತಿಲಕವಿಟ್ಟೆವುನಿದ್ರೆಯಲಿ ನಗುವ ಮುದ್ದು ಮಗುವಅಂತಸ್ತಿನ ತೊಟ್ಟಿಲಲ್ಲಿ ತೂಗಿದೆವು ********************************

ಕೂಸು Read Post »

ಕಾವ್ಯಯಾನ

ಹೇಗಾಯಿತು ಹೊಸ ವರುಷ

ಕವಿತೆ ಹೇಗಾಯಿತು ಹೊಸ ವರುಷ ಶರಶ್ಚಂದ್ರ ತಳ್ಳಿ ಕುಪ್ಪಿಗುಡ್ಡ ಚುಕ್ಕಿಗಳು ಕರ್ರಗಾದವೆ?ಹಕ್ಕಿಗಳು ಬೆರಗಾದವೆ?ಕತ್ತಲೆ ಥಳಥಳ ಹೊಳೆಯಿತೆ?ಬೆಳಕು ಉಮ್ಮಳದಿ ಅದುರಿತೆ?ಮೂಡಿತೇಗೆ ಹೊಸ ವರುಷ? ನೆತ್ತರು ಬಿಳಿಯಾಯಿತೆ?ಸತ್ತವರೆದ್ದು ಕುಳಿತರೆ?ಎಲೆ ಉದುರಿ ತಲೆ ಸವರಿತೆ?ಕೋಗಿಲೆ ನೇಗಿಲು ಹೂಡಿತೆ? ಬದುಕುಗಳು ಭವಣೆಗೆ ಮಿಕ್ಕವೆ?ಕೆದಕುಗಳು ಎಣಿಕೆಗೆ ಸಿಕ್ಕವೆ?ಕಳೆದ ಘಳಿಗೆ ಎದೆ ಹೊಕ್ಕಿತ್ತೆ?ಜಗದ ನಗು ಮುಗಿಲ ನೆಕ್ಕಿತೆ?ಮೂಡಿತೇಗೆ ಹೊಸ ವರುಷ? ಬೈಬಲ್ ಕಥೆ ಹೊನ್ನಾಯಿತೆ?ಕುರಾನ ನುಡಿ ಭಿನ್ನವಾಯಿತೆ?ಭಗವದ್ಗೀತೆ ಕಣ್ಣಾಯಿತೆ?ಮೂಡಿತೇಗೆ ಹೊಸ ವರುಷ? ಬಡವರ ಕೊರಗು,ಹೂವಾಯಿತೆ?ಹಸಿದ ಕೂಸು ನಕ್ಕಾಡಿತೆ?ನದಿಯ ಹರಿವು,ಕುದಿತವಾಯಿತೆ?ಗಾಳಿಯ ತುದಿ ಕಣ್ಣಿಗೆ ಕಂಡಿತಾ?ಮೂಡಿತೇಗೆ ಹೊಸ ವರುಷ? ಜಾತಿಧರ್ಮ,ಪ್ರೇಮ ಕಲಿಸಿದವೆ?ಉಸಿರು-ಬಸಿರು ಒಲುಮೆಯಾದವೆ?ಕಾಮಕ್ರೋದ ಭುವಿ ತೊರೆದವೆ?ದೀನರ ಬಾದೆ ಬದಿ ಸರಿಯಿತೆ?ಮೂಡಿತೇಗೆ ಹೊಸ ವರುಷ? ಕ್ಯಾಲೆಂಡರ್ ತಿರುವಿದೆವಷ್ಟೆಬೆಡಗು ಬಿನ್ನಾಣ ತೊರೆದು ಬದುಕಬೇಕಷ್ಟೆ. *****************************

ಹೇಗಾಯಿತು ಹೊಸ ವರುಷ Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ-10 ಆತ್ಮಾನುಸಂಧಾನ ಬನವಾಸಿಯಲ್ಲಿ ನೋವಿನ ನೆನಪುಗಳು ಬಾಲ್ಯದ ನಾಲ್ಕು ವರ್ಷಗಳನ್ನು ಬನವಾಸಿಯಲ್ಲಿ ಕಳೆಯುವ ಅವಕಾಶ ದೊರೆತದ್ದು ನನ್ನ ಬದುಕಿನಲ್ಲಿ ಒದಗಿ ಬಂದ ಭಾಗ್ಯವೆಂದೇ ನಾನು ಭಾವಿಸಿದ್ದೇನೆ. ಅತ್ಯಂತ ಆಪ್ತ ಸ್ನೇಹಿತರಾಗಿ ದೊರೆತ ಮುಖೇಶ್ ಕುಚಿನಾಡ, ಸೊಮಶೇಖರ ಒಡಿಯರ್, ಅಶೋಕ ಪಾಳಾ, ಸೆಂಟ್ರಲ್ ಕೆಫೆಯ ಸದಾನಂದ ಶೆಟ್ಟಿ, ಕಿರಾಣಿ ಅಂಗಡಿಯ ಸಚ್ಚಿದಾನಂದ ಮೂಡ್ಲಗಿರಿ ಶೆಟ್ಟಿ ಮುಂತಾದ ಗೆಳೆಯರ ಒಡನಾಟದಲ್ಲಿ ಅತ್ಯಂತ ಮಧುರವಾದ ಅನುಭವಗಳು ನನಗೆ ದಕ್ಕಿವೆ. ಈ ಗೆಳೆಯರೆಲ್ಲ ಆಟ ಪಾಠ ವಿನೋದಗಳಲ್ಲಿ ಜೊತೆ ಸೇರುವಾಗ ಜಾತಿಗೀತಿಯ ಯಾವ ಕೀಳರಿಮೆಯೂ ಕಾಡದಂತೆ ನಮ್ಮನ್ನು ನೋಡಿಕೊಂಡರು. ನೋವಿನ ಸಂಗತಿಯೆಂದರೆ ಈ ಯಾವ ಗೆಳೆಯರೂ ಈಗ ನನ್ನ ಸಂಪರ್ಕದಲ್ಲಿ ಇಲ್ಲ. ಅವರೆಲ್ಲ ಹೇಗಿದ್ದಾರೆ? ಎಲ್ಲಿದ್ದಾರೆ? ಎಂಬ ಯಾವ ಸುಳಿವೂ ನನಗಿಲ್ಲ. ಆದರೆ ಅವರೆಲ್ಲ ನನಗಿಂತ ಉತ್ತಮ ಸ್ಥಿತಿವಂತರಾಗಿಯೇ ಇದ್ದಿರಬೇಕು ಎಂದು ನಾನು ಭಾವಿಸಿದ್ದೇನೆ.             ಬನವಾಸಿಯ ಬಾಲ್ಯದ ಸಂತಸದ ದಿನಗಳಲ್ಲಿಯೂ ನನ್ನನ್ನು ನೋವಿನ ನೆನಪಾಗಿ ಕಾಡುವ ಒಂದೆರಡು ಸಂದರ್ಭಗಳು ಮತ್ತೆ ಮತ್ತೆ ನನ್ನನ್ನು ಕಾಡುತ್ತಲೇ ಇರುತ್ತದೆ…..             ಬನವಾಸಿಯ ವಾಸ್ತವ್ಯದ ಸಂದರ್ಭದಲ್ಲಿ ಹುಟ್ಟಿದವನು ಎಂಬ ಕಾರಣದಿಂದ ಬಹುಶಃ ನನ್ನ ಎರಡನೆಯ ಸಹೋದರನಿಗೆ ಮಧುಕೇಶ್ವರ ಎಂದು ಹೆಸರನ್ನಿಟ್ಟಿರಬೇಕು. ಆಗ ತಾನೆ ಎದ್ದು ನಿಂತು ಹೆಜ್ಜೆಯಿಕ್ಕಲು ಕಲಿಯುತ್ತಿದ್ದ. ಹೆಚ್ಚೂ ಕಡಿಮೆ ಅವನನ್ನು ಎತ್ತಿಕೊಂಡು ಆಡಿಸುವುದೂ, ನಡೆಸುವುದೂ ಮಾಡುತ್ತಿದ್ದೆನಾದ್ದರಿಂದ ನನ್ನೊಡನೆ ವಿಶೇಷ ಸಲುಗೆಯಿಂದ ಇರುತ್ತಿದ್ದ. ನಾನು ಆಟವಾಡಲು ಹೊರಟಾಗ ಹಠಮಾಡಿ ಬೆನ್ನಹಿಂದೆ ಬರುತ್ತಿದ್ದ.             ಒಮ್ಮೆ ಅವ್ವ ಒಂದಿಷ್ಟು ರೇಶನ್ ಸಾಮಾಗ್ರಿಗಾಗಿ ನನ್ನನ್ನು ಅಂಗಡಿಗೆ ಕಳುಹಿಸಿದ್ದಳು. ಅಪ್ಪನ ಸೈಕಲ್ ಮನೆಯಲ್ಲಿತ್ತು. ಅದನ್ನು ಹತ್ತಿ ಕೂರಲು ನನಗೆ ಸಾಧ್ಯವಾಗುತ್ತಿರಲಿಲ್ಲ. ಒಳ ಪೆಡಲ್ ಮೇಲೆ ಕಾಲಿಟ್ಟು ಹೊಡೆಯುವ ರೂಢಿಮಾಡಿಕೊಂಡಿದ್ದೆ. ನನಗೋ ಇಂಥ ಅವಕಾಶ ಸಿಕ್ಕಾಗ ತುಂಬಾ ಖುಷಿಯಾಗುತ್ತಿತ್ತು. ಅವಸರದಲ್ಲಿ ಸೈಕಲ್ ಏರಿ ಹೊರಟೆ. ಮಧು ನನ್ನ ಬೆನ್ನ ಹಿಂದೆ ಬರುತ್ತಿದ್ದಾನೆ. ಎಂಬುದನ್ನು ಗಮನಿಸಲೇ ಇಲ್ಲ. ಓಣಿಯ ತಿರುವಿನಲ್ಲಿ ನಾನು ಮರೆಯಾಗುವವರೆಗೆ ನನ್ನ ಹಿಂದೆಯೇ ಓಡಿ ಬರುತ್ತಿದ್ದ ಮಧು, ನಾನು ಮರೆಯಾಗುತ್ತಲೇ ಹಿಂದಿರುಗಿದವನು ಬೇರೆ ದಾರಿ ಹಿಡಿದು ಮುಂದೆ ಸಾಗಿದ್ದಾನೆ. ಆಗ ತಾನೆ ಓಡಾಡಲು ಕಲಿತ ಹುಡುಗ ದಾರಿ ತಪ್ಪಿ ಅಳುತ್ತ ಓಡುವಾಗ ಅವರಿವರು ತಡೆದು ನಿಲ್ಲಿಸುವ ಪ್ರಯತ್ನ ಮಾಡಿದಷ್ಟು ಅವರಿಂದ ತಪ್ಪಿಸಿಕೊಂಡು ಅಳುತ್ತ ಒಂದು ದಿಕ್ಕು ಹಿಡಿದು ಓಡುತ್ತಲೇ ಇದ್ದಾನೆ. ದಾರಿಯಲ್ಲಿ ನಮಗೆ ಪರಿಚಯವಿದ್ದ ಹೆಂಗಸೊಬ್ಬಳು ಅವನನ್ನು ಗುರುತು ಹಿಡಿದವಳು ಶತಾಯ ಗತಾಯ ತಡೆದು ನಿಲ್ಲಿಸಲು ಪ್ರಯತ್ನಿಸಿದ್ದಾಳೆ. ಆದರೆ ಅವಳು ಮೂಕಿ. ಮಾತು ಸ್ಪಷ್ಟವಿಲ್ಲ. ತನ್ನ ಮೂಕ ಭಾಷೆಯಲ್ಲಿ ವಿಕಾರವಾಗಿ ಅರಚುತ್ತ ಮಧುವನ್ನು ತಡೆಯುವ ಪ್ರಯತ್ನ ಮಾಡಿದ್ದಾಳೆ. ಆದರೆ ಆತ ಇನ್ನಷ್ಟು ಗಾಬರಿಗೊಂಡು ಚೀರುತ್ತ ಓಡಿದ್ದಾನೆ.             ಇತ್ತ ಮನೆಯಲ್ಲಿ ಮಧುವನ್ನು ನಾನೇ ಕರೆದೊಯ್ದಿರಬೇಕೆಂದು ನಿರುಮ್ಮಳವಾಗಿದ್ದ ತಾಯಿ, ತಂಗಿಯರೆಲ್ಲ ನಾನೊಬ್ಬನೇ ಮರಳಿ ಬಂದಾಗ ಹೌಹಾರಿ ಹೋದರು. ಮನೆಯಲ್ಲಿ, ನೆರೆಮನೆಗಳಲ್ಲಿ, ಬೀದಿಗಳಲ್ಲಿ ಮಧುವನ್ನು ಅರಸಿ ಕಾಣದೆ ಕಂಗಾಲಾದೆವು.             ತಾಸರ್ಧ ತಾಸು ವಾತಾವರಣವೇ ಪ್ರಕ್ಷುಬ್ಧವಾಗಿ ಹೋಯಿತು. ಎಲ್ಲರೂ ನನ್ನ ನಿರ್ಲಕ್ಷ್ಯ ವೇ  ಇದಕ್ಕೆ ಕಾರಣವೆಂದು ಆಡಿಕೊಳ್ಳುವಾಗ ನಾನು ಕುಸಿದು ಹೋಗಿದ್ದೆ. ಸುದೈವವೆಂದರೆ ಮಧುವನ್ನು ಗುರುತಿಸಿ ತಡೆದು ನಿಲ್ಲಿಸಲು ಪ್ರಯತ್ನಿಸಿ ವಿಫಲಳಾದ ಮೂಕಜ್ಜಿ ಅಷ್ಟಕ್ಕೆ ನಿಲ್ಲದೆ ನಮ್ಮ ಮನೆಯವರೆಗೆ ಓಡೋಡಿ ಬಂದು ಸಂಗತಿಯನ್ನು ತಿಳಿಸಿ ಉಪಕಾರ ಮಾಡಿದಳು. ಅಪ್ಪ ಅವ್ವ ಪೇಟೆಯಲ್ಲಿ ಸಿಕ್ಕುಬಿದ್ದ ಮಧುವನ್ನು ಹುಡುಕಿ ಕರೆತರುವ ಹೊತ್ತಿಗೆ ಸರಿರಾತ್ರಿಯಾಗಿತ್ತು. ಆದರೆ ಈ ಘಟನೆ ನನ್ನ ನಿರ್ಲಕ್ಷ್ಯ ಕ್ಕೆ ಉದಾಹರಣೆಯಾಗಿ ಈಗಲೂ ನನ್ನನ್ನು ಕಾಡುತ್ತಲೇ ಇದೆ. ಆದರೆ ಅಂದು ಮರಳಿ ಮನೆ ಸೇರಿದ ಮಧು ಇಂದು ಈ ನೆನಪುಗಳನ್ನು ಬರೆಯುವ ಹೊತ್ತಿಗೆ ನಮ್ಮೊಡನಿಲ್ಲ. ವೃತ್ತಿಯಿಂದ ಕಂಡಕ್ಟರನಾದ. ಮದುವೆಯಾಗಿ ಒಂದು ಗಂಡು ಒಂದು ಹೆಣ್ಣು ಮಗುವಿನ ತಂದೆಯಾದ. ತನ್ನ ೫೪ ನೇ ವಯಸ್ಸಿನಲ್ಲಿ ೨೦೧೭ ರ ಮೇ ತಿಂಗಳ ಒಂದು ದಿನ ತೀವೃವಾದ ನಿಮೋನಿಯಾ ಕಾಯಿಲೆಯಿಂದ ಬಳಲಿ ನಮ್ಮನ್ನೆಲ್ಲ ಬಿಟ್ಟು ಹೊರಟು ಹೋದ.             ಬನವಾಸಿಯ ನೆನಪುಗಳಲ್ಲಿ ನನ್ನನ್ನು ಈಗಲೂ ಕೀಳರಿಮೆಯಿಂದ ಕಾಡುವ ಇನ್ನೊಂದು ಘಟನೆ ಬಂಕಸಾಣ ಜಾತ್ರೆ. ಅಪ್ಪ ಏಳನೆಯ ತರಗತಿಯ ವಿದ್ಯಾರ್ಥಿಗಳನ್ನು ಬಂಕಸಾಣ ಜಾತ್ರೆಯ ಪ್ರವಾಸಕ್ಕೆ ಕರೆದೊಯ್ದಿದ್ದರು. ಜಾತ್ರೆಯಾದ್ದರಿಂದ ನನ್ನನ್ನು, ನನ್ನ ತಮ್ಮ ನಾಗೇಶನನ್ನು ಜೊತೆಯಲ್ಲಿ ಕರೆದೊಯ್ದರು. ನಮಗಂತೂ ಬಹಳ ಸಂಭ್ರಮವಾಗಿತ್ತು. ಜಾತ್ರೆಯ ಮೋಜು ಮಜಾ ಎಲ್ಲವನ್ನು ಅನುಭವಿಸಿ ತಿರುಗಿ ಹೊರಡುವಾಗ ಅಪ್ಪನ ಕೆಲವು ವಿದ್ಯಾರ್ಥಿಗಳು ಮತ್ತಷ್ಟು ಖರೀದಿಯ ನೆಪದಲ್ಲಿ ಸಂತೆ ಅಂಗಡಿಗಳಲ್ಲಿ ಹೊಕ್ಕು ಚೌಕಾಶಿ ಮಾಡುತ್ತಿದ್ದರು. ಯಾವುದೋ ಹುಡುಗ ಕಾಲಿನ ಸ್ಲಿಪರ್ ಕೊಳ್ಳಲು ಚೌಕಾಶಿ ಮಾಡುತ್ತಿದ್ದಾಗ ಅಪ್ಪ ಮಧ್ಯ ಪ್ರವೇಶಿಸಿ ಒಂದು ರೇಟಿಗೆ ಹೊಂದಿಸಿ ಹುಡುಗನಿಗೆ ಸ್ಲಿಪರ್ ಕೊಡಿಸಿದರು.             ಅವರಿಗೆ ಏನನ್ನಿಸಿತೋ… ನನ್ನ ತಮ್ಮ ನಾಗೇಶನಿಗೂ ಒಂದು ಜೊತೆ ಹವಾಯಿ ಚಪ್ಪಲಿ ಕೊಡಿಸಿದರು. ಅಂಗಡಿಯಿಂದ ಹೊರ ಬಂದ ಬಳಿಕ ನಾನು ನಡೆದುಕೊಂಡ ರೀತಿಯನ್ನು ನೆನಪಿಸಿಕೊಂಡರೆ ನನಗೆ ಈಗಲೂ ಸಹಿಸಲಾಗದಷ್ಟು ನಾಚಿಕೆ ಮತ್ತು ಅಸಹ್ಯವುಂಟಾಗುತ್ತದೆ. ತಮ್ಮ ತೊಟ್ಟ ಚಪ್ಪಲಿಗಳನ್ನು ನೋಡಿ ನನ್ನ ಕಾಲುಗಳು ಭಾರವಾದವು ಕಣ್ಣುಗಳಲ್ಲಿ ಕಂಬನಿ ತುಂಬಿ ಬಂತು. ಮುಖ ಊದಿಕೊಂಡಿತು. ಹೆಜ್ಜೆ ಮುಂದಿಡಲಾಗದೆ ತಡವರಿಸುತ್ತಿದ್ದೆ.             ಇದನ್ನು ಗಮನಿಸಿದ ಅಪ್ಪ ತುಂಬಾ ನೊಂದುಕೊಂಡರು. ನನಗೂ ಒಂದು ಜೊತೆ ಚಪ್ಪಲಿ ಕೊಡಿಸುವ ಆಸೆ ಅವರಿಗೂ ಇತ್ತಾದರೂ ಅಷ್ಟೊತ್ತಿಗಾಗಲೇ ಅವರ ಕಿಸೆ ಖಾಲಿಯಾಗಿತ್ತು. ಅಸಹಾಯಕತೆಯಿಂದ ಅವರು ಚಡಪಡಿಸುತ್ತಿದ್ದರೆ ಅದನ್ನು ಗ್ರಹಿಸಲಾಗದ ದಡ್ಡತನ ನನ್ನದಾಗಿತ್ತು. ಬೇರೆ ದಾರಿ ಕಾಣದೆ ವಿದ್ಯಾರ್ಥಿಯೊಬ್ಬನಿಂದ ಒಂದಿಷ್ಟು ಹಣವನ್ನು ಸಾಲವಾಗಿ ಪಡೆದ ಅಪ್ಪ ನನಗೆ ಚಪ್ಪಲಿ ಕೊಡಿಸಿದ ಬಳಿಕವಷ್ಟೇ ನನ್ನ ಕಾಲುಗಳು ಮುಂದುವರಿದವು.             ಆದರೆ ಬನವಾಸಿಗೆ ಬಂದ ಮರುದಿನವೇ ಮಧುಕೇಶ್ವರ ದೇವಾಲಯದ ಆವರಣದಲ್ಲಿ ಆಟವಾಡಲು ಹೊರಡುತ್ತ ದೇವಸ್ಥಾನದ ಮೆಟ್ಟಿಲ ಮೇಲೆ ಕಳೆದಿಟ್ಟು ಹೋದ ಇಬ್ಬರ ಚಪ್ಪಲಿಗಳನ್ನು ಯಾರೋ ಅಪಹರಿಸಿ ಬಿಟ್ಟಿದ್ದರು….             ಅಪ್ಪನ ದೊಡ್ಡತನಕ್ಕೆ ನನ್ನ ಸಣ್ಣತನಕ್ಕೆ ಈ ಘಟನೆ ಉದಾಹರಣೆಯಾಗಿ ನನ್ನನ್ನು ಈಗಲೂ ಕಾಡುತ್ತಿದೆ.             ಬನವಾಸಿಯ ಬದುಕಿನ ಅವಧಿಯಲ್ಲಿ ಒಂದು ಅಚ್ಚಳಿಯದ ನೆನಪು ಮಳ್ಳು ಸುಕ್ರಣ್ಣನದು. ಸುಕ್ರಣ್ಣ ಮೊದಲಿಂದ ಮಳ್ಳನೇನಲ್ಲ. ಬನವಾಸಿಯ ವಿದ್ಯಾರ್ಥಿ ನಿಲಯದಲ್ಲಿ ಅವನು ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಬಹಳ ದೂರದ ಊರಿನಲ್ಲಿ ನಮಗೆ ಸ್ವಜಾತಿಯ ಬಂಧು ಎಂದರೆ ಈತನೊಬ್ಬನೇ ಮೂಲತಃ ನಮ್ಮ ನೆರೆಯ ಅಂಕೋಲಾ ತಾಲೂಕಿನ ಮೊಗಟಾ ಎಂಬ ಊರಿನವನು. ಮದುವೆಯಾಗಿದ್ದ. ಮಕ್ಕಳಾಗಿರಲಿಲ್ಲ. ಹೆಂಡತಿ ಶಿವಮ್ಮನೊಡನೆ ವಿದ್ಯಾರ್ಥಿ ನಿಲಯದ ಪಕ್ಕದಲ್ಲಿ ಒಂದು ಚಿಕ್ಕ ಬಾಡಿಗೆ ಮನೆಯಲ್ಲಿ ಉಳಿದಕೊಂಡಿದ್ದರು. ಹಬ್ಬ ಹುಣ್ಣಿಮೆಯಂಥ ಅಪರೂಪದ ಸಂದರ್ಭದಲ್ಲಿ ನಮ್ಮ ಮನೆಗೂ ಬಂದು ಹೋಗುತ್ತಿದ್ದರಿಂದ ಸಹಜವಾಗಿಯೇ ನಾವೆಲ್ಲ ಅವರನ್ನು ಹಚ್ಚಿಕೊಂಡಿದ್ದೆವು.             ನಮಗೆಲ್ಲ ಒಂದು ಹಂತದವರೆಗೆ ಆಪ್ತನಾಗಿಯೇ ಇದ್ದ. ಸುಕ್ರಣ್ಣ ಇದ್ದಕ್ಕಿದ್ದಂತೆ ಕೂಗಾಡುವುದು, ಯಾರ ಯಾರನ್ನೋ ಬಯ್ಯುವುದು, ಹೆಂಡತಿಯೊಡನೆ ಜಗಳವಾಡುತ್ತ ಸಿಕ್ಕ ಸಿಕ್ಕ ವಸ್ತುಗಳಿಂದ ಹೊಡೆಯುವುದು ಮಾಡ ಹತ್ತಿದ. ವಸತಿ ನಿಲಯದಲ್ಲಿ ಆಗ ಏಳನೆಯ ತರಗತಿಯ ವಿದ್ಯಾರ್ಥಿಗಳಲ್ಲಿ ಚಿಗುರು ಮೀಸೆಯ ಹೊಂತಕಾರಿಗಳೂ ಇದ್ದರು. ಅವರಲ್ಲಿ ಯಾರೇ ಆದರೂ ತನ್ನ ಪತ್ನಿಯೆಡೆಗೆ ನೋಡಿದರೆ ಮಾತಾಡಿದರೆ ಅನುಮಾನಗೊಂಡು ಜಗಳ ಕಾಯುತ್ತಿದ್ದನಂತೆ. ಕೆಲವು ಅವಿವಾಹಿತ ಶಿಕ್ಷಕರೂ ಸುಕ್ರಣ್ಣನ ಅನುಮಾನದ ಕಣ್ಣಿಗೆ ಗುರಿಯಾಗಿ ಬೈಸಿಕೊಂಡದ್ದನ್ನೂ, ಅಪ್ಪನೇ ಮುಂದೆ ಹೋಗಿ ಅವನಿಗೆ ಬುದ್ದಿ ಹೇಳಿ ಸಂತೈಸಿದ್ದನ್ನು ಅಪ್ಪ ಮನೆಗೆ ಬಂದಾಗ ಅವ್ವನೊಡನೆ ವಿವರಿಸುವಾಗ ನಾವು ಕೇಳುತ್ತಿದ್ದೆವಾದರೂ ಚಿಕ್ಕವರಾದ ನಮಗೆ ಸಮಸ್ಯೆಯ ಅರಿವಾಗುತ್ತಿರಲಿಲ್ಲ. ಆದರೆ ಮಾತಿನ ಕೊನೆಯಲ್ಲಿ “ಮಳ್ಳ ಸುಕ್ರು … ಜಾತಿ ಮರ್ಯಾದೆನೆಲ್ಲಾ ಕಳೀತಾನೆ…” ಎಂದು ಮುಗಿಸುವುದನ್ನು ಕೇಳುತ್ತಾ ಸುಕ್ರಣ್ಣನಿಗೆ ಮಳ್ಳು ಹಿಡಿದಿದೆ ಎಂದೇ ನಾವು ನಂಬ ತೊಡಗಿದ್ದೆವು .             ಸುಕ್ರಣ್ಣನ ಸಂಸಾರದ ನಡುವೆ ಬಿರುಕು ಬೆಳೆಯುತ್ತಾ ಸಾಗಿತು. ಶಿಕ್ಷಕರು, ವಿದ್ಯಾರ್ಥಿಗಳ ಮೇಲೆಲ್ಲಾ ಅನುಮಾನ ಪಡುತ್ತಾ ಶಾಲೆಯ ಆವರಣವನ್ನು ಪ್ರವೇಶಿಸಿ ಅವರನ್ನು ಬಯ್ಯ ತೊಡಗಿದಾಗ ಎಲ್ಲರಿಗೂ ಇವನ ಉಪದ್ರವ ಅಧಿಕವಾಯಿತೆಂದೇ ಅಸಹ್ಯಪಡುತ್ತಿದ್ದರು. ಕೆಲವೊಮ್ಮೆ ಯಾರನ್ನೂ ನೇರವಾಗಿ ಗುರಿಯಾಗಿಸದೇ ಎಲ್ಲರನ್ನೂ ದಿನವಿಡೀ ಬಯ್ಯುತ್ತ ಹುಚ್ಚರಂತೆಯೇ ವರ್ತಿಸತೊಡಗಿದ್ದ. ಕೊನೆ ಕೊನೆಗೆ ಸಾರ್ವಜನಿಕರೂ ಅವನನ್ನು ಮಳ್ಳನೆಂದೇ ಗುರುತಿಸುವ ಹಂತವನ್ನೂ ತಲುಪಿದ.             ೧೯೬೨-೬೩ ರ ಅವಧಿ ಎಂದು ನೆನಪು. ಎಲ್ಲೆಡೆ ಭಯಂಕರ ಮಳೆ. ವರದಾ ನದಿ ಉಕ್ಕಿ ಹರಿಯುತ್ತಾ ರಥ ಬೀದಿಯವರೆಗೂ ಪ್ರವಾಹ ಹರಿದು ಬಂದಿತ್ತು. ಶಾಲೆಗಳಿಗೆ ರಜೆ ಘೋಷಣೆಯಾಗಿತ್ತು. ಚಿಕ್ಕವರಾದ ನಾವುಗಳೆಲ್ಲ ಮನೆಯಿಂದ ಹೊರಗೆ ಹೋಗಲೂ ಸಾಧ್ಯವಿಲ್ಲದೆ ಗ್ರಹ ಬಂಧನಕ್ಕೊಳಗಾಗಿದ್ದೆವು.             ಅಂಥ ಭಯಾನಕ ಮಳೆಯ ಒಂದು ರಾತ್ರಿ ಸುಕ್ರಣ್ಣ ಇದ್ದಕ್ಕಿದ್ದಂತೆ ನಾಪತ್ತೆಯಾದ. ನಂತರದ ಎರಡು ದಿನ ಶಾಲಾ ಸಿಬ್ಬಂದಿಗಳೂ, ಊರಿನ ಕೆಲವು ಜನರೂ ಸೇರಿ ಊರೆಲ್ಲಾ ಹುಡುಕಾಡಿದರು. ಎಲ್ಲಿಯೂ ಅವನ ಸುಳಿವು ದೊರೆಯಲಿಲ್ಲ. ಭಯಂಕರವಾದ ಬಿರುಗಾಳಿ ಮಳೆಯ ಒಂದು ರಾತ್ರಿ ಮನುಷ್ಯ ಮಾತ್ರರು ಹೊರಬರಲಾಗದ ಕಗ್ಗತ್ತಲೆಯಲ್ಲಿ ಯಾರೋ “ಬೋಲೋ ಭಾರತ್ ಮಾತಾಕೀ….ಜೈ” ಎಂದು ಕೂಗುತ್ತಾ ಹೋದುದನ್ನು ಕೇಳಿದ್ದೇವೆ ಎಂದು ರಸ್ತೆಯಂಚಿನ ಮನೆಗಳ ಕೆಲವರು ಮಾತಾಡಿಕೊಂಡರು. ಅದು ಸುಕ್ರಣ್ಣನೇ ಇರಬಹುದೆಂದೂ ಬಹುತೇಕ ಜನ ಭಾವಿಸಿದರು. ನಾವು ಹಾಗೆಯೇ ಅನುಮಾನ ಪಟ್ಟುಕೊಂಡೆವು.             ಮೂರನೆಯ ದಿನ ಶಾಲೆಯ ಶಿಕ್ಷಕರೂ ವಿದ್ಯಾರ್ಥಿ ಗುಂಪಿನೊಡನೆ ಸುಕ್ರಣ್ಣನನ್ನು ಅರಸಲು ಹೋದ ಅಪ್ಪ ನಿರಾಶೆಯಿಂದಲೇ ರಾತ್ರಿ ತಡವಾಗಿ ಮನೆಗೆ ಬಂದರು. ಅಪ್ಪ ಒಳಗೆ ಬಂದದ್ದೇ ನನ್ನ ತಮ್ಮ ನಾಗೇಶ ತುಂಬ ಮುಗ್ಧತೆಯಿಂದ “ಅಪ್ಪ ಸುಕ್ರಣ್ಣ ಸತ್ತೋದ್ನಂತೆ….” ಎಂದು ಹೇಳಿದ. ಅಪ್ಪ ಇದುವರೆಗೆ ತನ್ನ ದುಗುಡವನ್ನು ಹೊಟ್ಟೆಯೊಳಗೇ ತಡೆದಿಟ್ಟುಕೊಂಡಿದ್ದನೆನೋ.. ಒಮ್ಮೆಲೆ ಬಿಕ್ಕಿ ಬಿಕ್ಕಿ ಅಳತೊಡಗಿದ. ಅವ್ವ ಮತ್ತು ನಾವೆಲ್ಲ ಅಪ್ಪನನ್ನು ಸಂತೈಸಲು ಪಟ್ಟ ಶ್ರಮ ಅಷ್ಟಿಷ್ಟಲ್ಲ. ****************************** ರಾಮಕೃಷ್ಣ ಗುಂದಿ ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿದೆ

Read Post »

You cannot copy content of this page

Scroll to Top