ಕಬ್ಬಿಗರ ಅಬ್ಬಿ -8 ನಿಸರ್ಗಕ್ಕೂ ಬೇಕು ಸ್ವಾತಂತ್ರ್ಯ ಈ ನೆಲ, ಈ ಜಲ ಈ ಆಕಾಶಈ ಜೀವ ಈ ಭಾವ ಅನಂತಾವಕಾಶಈ ಕಲ್ಲು ಪರಮಾಣು ಒಳದೇವರ ಕಣ್ಣುಈ ಸ್ಥಾವರ ಈ ಜಂಗಮ ಪ್ರಾಣ ವಿಹಂಗಮಈ ವಾತ ನಿರ್ವಾತ ಆತ್ಮನೇ ಆತ್ಮೀಯಈ ಅಂಡ ಬ್ರಹ್ಮಾಂಡ ಉಸಿರಾಡುವ ಕಾಯ ಕಾವ್ಯದೊಳಗೆ ಜೀವರಸವಿದೆ.ರಸದ ಸೆಲೆಯಿದೆ.ಕುದಿಸಮಯವನ್ನೂ ತಣಿಸುವ ಪ್ರೀತಿಯಿದೆ.ಕಲ್ಲ ಮೊಟ್ಟೆಯನ್ನೂ ಕಾವು ಕೊಟ್ಟು ಮರಿ ಮಾಡುವ ಸೃಷ್ಟಿ ತಂತುವಿನ ತರಂಗವಿದೆ.ಕವಿಯ ಕಣ್ಣೊಳಗೆ ಮೂಡಿದ ಪ್ರತೀ ವಸ್ತುವಿನ ಬಿಂಬ ಜೀವಾತ್ಮವಾಗಿ ಕಾವ್ಯದೇಹ ತೊಟ್ಟು ಹೊರ ಬರುತ್ತೆ.ಸ್ಪಂದನೆ ಮತ್ತು ಪ್ರತಿಸ್ಪಂದನೆ ಕಲ್ಲಿನೊಳಗಿನ ಪರಮಾಣು ಕೂಡಾ ಮಾಡುತ್ತೆ.ನೋಟದ ವ್ಯಾಪ್ತಿಗೆ ಸಿಕ್ಕಿದ ಅಷ್ಟನ್ನೂ ಕವಿಯ ಪ್ರಜ್ಞೆ ಬಾಚಿ ಎದೆಗಿಳಿಸುತ್ತೆ.ಮನುಷ್ಯ ಜಗತ್ತಿನ ನೋವು ನಲಿವು, ಶೋಷಣೆಗಳು, ಕಪ್ಪು ಬಿಳುಪು, ಹೆಣ್ಣು ಗಂಡು, ಬೇಧಭಾವಗಳು ಕವಿಗೂ ಕಾಣಿಸುತ್ತೆ, ಇತರರಿಗೂ ಕಾಣಿಸುತ್ತೆ. ಆದರೆ ದಿನಾಲೂ ಬೆಳಗ್ಗೆ ಕೂಗುವ, ಈ ದಿನ ಹಾಜರು ಹಾಕದ ಕೋಗಿಲೆ,ಚಿಟ್ಟೆಯ ರೆಕ್ಕೆಯಲ್ಲಿರುವ ಚುಕ್ಕಿಗಳ ಡಿಸೈನ್,ರಸ್ತೆಯಗಲಿಸಲು ಕಡಿದ ಮರದ ಕಾಂಡದಿಂದ ಜಿನುಗುವ ಕಣ್ಣೀರು,ನೀರ ಹರಿವು ನಿಂತು ಏದುಸಿರು ಬಿಡುತ್ತಿರುವ ನದೀ ಪಾತ್ರ,ಎಂಡೋಸಲ್ಫಾನ್ ಸ್ಪ್ರೇ ಯಿಂದ ಸತ್ತು ಬೀಳುವ ಜೇನು ನೊಣ,ಕಾರಿನ ಹೊಗೆ, ಗಗನ ಚುಚ್ಚುವ ಕಟ್ಟಡ,ಎಲ್ಲವೂ ಕವಿ ಹೃದಯಕ್ಕೆ ತುಂಬಾ ಚುಚ್ಚುತ್ತೆ. ಪರಿಸರದ ಪರಿವರ್ತನೆಗಳು, ಪರಿಸರದ ಮೇಲೆ ಮನುಷ್ಯನ ಯಾಂತ್ರಿಕ ಮನೋಭಾವದ ಅತ್ಯಾಚಾರ, ಮತ್ತು ಅದರಿಂದಾಗಿ, ಪರಿಸರದಲ್ಲಿ ನಢೆಯುತ್ತಿರುವ ಅಸಮತೋಲನ, ಅತಿವೃಷ್ಟಿ,,ಅನಾವೃಷ್ಟಿ ಕವಿಯನ್ನು ದರ್ಶಿಸಿ, ದರ್ಶನವಾಗಿ ಇಳಿದು ಬಂದಾಗ ಕವಿತೆ ಒಳಗೊಳಗೇ ಅಳುತ್ತೆ. ಅಂತಹ ಒಂದು ಎದೆತಟ್ಟುವ ಕವಿತೆ, ಚಂದಕಚರ್ಲ ರಮೇಶ್ ಬಾಬು ಅವರು ಪುಟಕ್ಕಿಳಿಸಿದ್ದಾರೆ. ಈ ಕವಿತೆಯಲ್ಲಿ, ಕೋಗಿಲೆ, ಮನುಷ್ಯನಲ್ಲಿ ಕ್ಷಮೆ ಕೇಳುತ್ತೆ. ಕೋಗಿಲೆಯ ಮಾತುಗಳು ಹೀಗಿವೆ. ಕ್ಷಮೆ ಇರಲಿ ವಸಂತವನದವಸ್ತುಪ್ರದರ್ಶನಕ್ಕೆನಿಮಗೆಲ್ಲ ಸ್ವಾಗತನನ್ನ ಹೆಸರು ಕೋಗಿಲೆನಾನು ವಸಂತನಆಗಮನಸೂಚಿನಾನು ಹೊರಡಿಸುವ ಇನಿದನಿವಸಂತನು ಕಾಲಿಟ್ಟ ಗುರುತು ಒಂದಾನೊಂದು ಕಾಲದಲ್ಲಿನನಗೆ ಎಲ್ಲೆಂದರಲ್ಲಿಮಾವಿನ ಚಿಗುರು ಸಿಗುತ್ತಿತ್ತುಅದು ಮೆದ್ದು ನಾನುನನ್ನ ಇನಿದನಿ ಹೊರಡಿಸುತ್ತಿದ್ದೆಈಗ ಹುಡುಕುವುದರಲ್ಲೇ ಸಾಕಾಗಿದೆದನಿ ಹೊರಡದಿದ್ದಲ್ಲಿ ಕ್ಷಮಿಸಿ ಹೀಗೆ ಬನ್ನಿಇಲ್ಲಿ ಒಂದು ಸಮಯದಲ್ಲಿನಿಸರ್ಗದ ಮಡಿಲಾದದಟ್ಟ ಕಾಡೊಂದಿತ್ತುಗಿಡಮರ ಹೂವು ಹಣ್ಣುಗಳಿಂದನಮ್ಮೆಲ್ಲರ ತಂಗುದಾಣವಾಗಿತ್ತುಈಗ ಇದು ಬರೀ ಅವಶೇಷ ಭೂಮಿಇಲ್ಲಿಗೆ ವಸಂತನ ಆಗಮನದಸುಳಿವು ಸಿಗುವುದಿಲ್ಲಕುರುಹೂ ಕಾಣುವುದಿಲ್ಲಆದಕಾರಣ ಏನೂ ಕಾಣದಿದ್ದರೆಕ್ಷಮೆ ಇರಲಿ ಹೀಗೆ ಬನ್ನಿಕೆಲವಾರು ದಶಕಗಳ ಹಿಂದೆ ಇಲ್ಲಿವನಜೀವಿಗಳ ಸಂಭ್ರಮವಿತ್ತುಪಶು ಪಕ್ಷಿಗಳ ಜಾತ್ರೆಯಿತ್ತುಹಸಿರುವನ ಸಿರಿಯ ನಡುವೆಅವುಗಳ ಜೀವನವೂ ಹಸಿರಾಗಿತ್ತುಈಗ ಇದು ಬರೇ ಬೀಡುಗುಡ್ಡ ದಿನ್ನೆಗಳ ನಾಡು ನನ್ನ ಬಿಕ್ಕಳಿಕೆಗಳನ್ನುತಡೆದು ತಡೆದುದನಿಯ ಒತ್ತಿ ಹಿಡಿದುಈಗ ಹೊರಡುವುದೇ ಕಷ್ಟವಾಗಿದೆನಿಮ್ಮೊಟ್ಟಿಗೆ ಬರಲೂ ಆಗದಾಗಿದೆ ವಸಂತನ ಆಗಮನದಕಾತರ ತೋರುವ ನಿಮಗೆನಿರಾಶೆ ಮಾಡುತ್ತಿದ್ದಕ್ಕೆಕ್ಷಮೆ ಇರಲಿನೀವು ಮುಂದುವರೆಸಿಎಲ್ಲಾದರೂ ವನಸಿರಿನಳನಳಿಸಿದ್ದು ಕಂಡುಬಂದರೇನನಗೆ ತಿಳಿಸಿ ಮತ್ತೆ ನನ್ನ ದನಿಗೊಂದುನವ ಜೀವನ ಬಂದೀತುವನ ಜೀವನದ ಸವಿ ತಂದೀತುಹೋಗಿಬನ್ನಿ ನಮಸ್ಕಾರ *** *** *** ಕೋಗಿಲೆಯ ಸ್ವಗತ ಈ ಕವಿತೆ. ವಸಂತವನದ ವಸ್ತುಪ್ರದರ್ಶನ ಕಾರ್ಯಕ್ರಮವನ್ನು ಪ್ರೇಕ್ಷಕರಿಗೆ ತೋರಿಸುವ ಕೆಲಸ ಕೋಗಿಲೆಯದ್ದು. ವಸಂತ ಎಂದರೆ ಪ್ರಕೃತಿ ನಳನಳಿಸಿ, ಹೂ ಅರಳಿಸಿದ ಹಸಿರು ಲಂಗ ತೊಟ್ಟು ಇನಿಯನಿಗಾಗಿ ಕಾದು ಪ್ರೇಮಿಸಿ,ಕಾಮಿಸಿ, ನಲಿದು ಗರ್ಭವತಿಯಾಗುವ ಕಾಲ. ಸೃಷ್ಟಿ ಕ್ರಿಯೆ ಔನ್ನತ್ಯವನ್ನು ಮುಟ್ಟುವ, ಕಲಾತ್ಮಕವಾಗುವ, ಜೀವರಾಶಿಗಳು ಸಂಭ್ರಮಿಸುವ ಕಾಲ. ಮಾವಿನ ಮರ ಹೂ ಬಿಡುತ್ತೆ,ಕೆಲವೆಡೆ ಚಿನ್ನದ ತಳಿರಾಗಿ ಮೆದು ಮೆದುವಾದ ಎಲೆ ಚಿಗುರಿ, ಕೋಗಿಲೆಗೆ ಹಬ್ಬವೋ ಹಬ್ಬ! ಇಂತಹ ಜೀವೋತ್ಸವವನ್ನು, ಕವಿ ವಸಂತವನದ ‘ ವಸ್ತುಪ್ರದರ್ಶನ’ ಅಂತ ಹೆಸರಿಟ್ಟು ಕರೆಯುವಾಗಲೇ ಜೀವರಾಶಿಗಳು ಹೆಣವಾಗಿ ಮಸಣ ಹುಡುಕುವುದರ ಚಿತ್ರಣದ ಅರಿವಾಗುತ್ತೆ. ವಸ್ತು ಪ್ರದರ್ಶನ, ಮಾನವ,ತನ್ನ ಸಾಧನೆಯನ್ನು ಪ್ರದರ್ಶಿಸುವ ಕಾರ್ಯಕ್ರಮ. ಮಾನವ ನಿರ್ಮಿತ ಎಂದರೆ ಅದು ನಿರ್ಜೀವ ವಸ್ತುವೇ. ‘ವಸಂತವನದ ವಸ್ತುಪ್ರದರ್ಶನ’ ಎಂಬ ಈ ಸಾಲಿನ ಮೊದಲ ಪದ ಜೀವತತ್ವ,ಎರಡನೆಯ ಪದ ನಿರ್ಜೀವ ತತ್ವ. ಈ ಕವಿತೆ ಅಷ್ಟೂ ದ್ವಂದ್ವಗಳನ್ನು, ಜೀವದಿಂದ ನಿರ್ಜೀವತ್ವದತ್ತ ನಡೆದ ದಾರಿಯನ್ನು ಎರಡೇ ಪದದಲ್ಲಿ ಸೆರೆಹಿಡಿಯಿತಲ್ಲಾ. ಇದು ಕವಿಸಮಯ. “ನನ್ನ ಹೆಸರು ಕೋಗಿಲೆನಾನು ವಸಂತನಆಗಮನಸೂಚಿನಾನು ಹೊರಡಿಸುವ ಇನಿದನಿವಸಂತನು ಕಾಲಿಟ್ಟ ಗುರುತು” ಕೋಗಿಲೆಯ ಸೆಲ್ಫ್ ಇಂಟ್ರೊಡಕ್ಷನ್ ನಲ್ಲಿ, ಗತವೈಭವದ ನೆನಪಿನ ಸುಖವಿದೆ. ಕವಿತೆ ಹಾಗೆ ಆರಂಭವಾಗುತ್ತೆ. ಕೋಗಿಲೆಯ ಸ್ವರ ವಸಂತಾಗಮನಕ್ಕೆ ರೂಪಕವೂ ಆಗಿದೆ. “ಒಂದಾನೊಂದು ಕಾಲದಲ್ಲಿನನಗೆ ಎಲ್ಲೆಂದರಲ್ಲಿಮಾವಿನ ಚಿಗುರು ಸಿಗುತ್ತಿತ್ತುಅದು ಮೆದ್ದು ನಾನುನನ್ನ ಇನಿದನಿ ಹೊರಡಿಸುತ್ತಿದ್ದೆಈಗ ಹುಡುಕುವುದರಲ್ಲೇ ಸಾಕಾಗಿದೆದನಿ ಹೊರಡದಿದ್ದಲ್ಲಿ ಕ್ಷಮಿಸಿ” ವಸಂತನ ಆಗಮನ ಸೂಚಿ, ಕೋಗಿಲೆಯ ಕೊರಳ ಕುಹೂ. ಮೇಲಿನ ಸಾಲಿನಲ್ಲಿ, ಹೇಳುವಂತೆ, ಕೋಗಿಲೆಗೆ ಇತ್ತೀಚೆಗೆ ಮಾವಿನ ತಳಿರು ಸಿಗುತ್ತಿಲ್ಲ. ಹುಡುಕಿ ಸಾಕಾಗಿದೆ. ತಳಿರು ಮೆದ್ದರೇ ಕೋಗಿಲೆಗೆ ಸ್ವರ. ತಳಿರು ತಿನ್ನದೆ ಸ್ವರ ಹೊರಡಲ್ಲ ಕೋಗಿಲೆಗೆ.ವಸಂತಾಗಮನದ ಮಾರ್ಗ ಸೂಚಿ ಕೂಗಿಲ್ಲ ಎಂದರೆ, ವಸಂತಾಗಮನವೇ ಆಗುತ್ತಿಲ್ಲ. ಮನುಷ್ಯನಿಗೆ ಅದರ ಪರಿವೆಯೂ ಇಲ್ಲ! ಆತ ಸ್ಪಂದನಾರಹಿತ ಸ್ವಾರ್ಥಿ ಜೀವ.ಆತನಿಗೆ ವಸ್ತು ಪ್ರದರ್ಶನ ನಡೆದರೆ ಸಾಕು ತಾನೇ. ಮುಂದುವರೆದು ಕೋಗಿಲೆ ಅಳುತ್ತೆ. ಬಿಕ್ಕಿ ಬಿಕ್ಕಿ ಅಳುತ್ತೆ. “ನನ್ನ ಬಿಕ್ಕಳಿಕೆಗಳನ್ನುತಡೆದು ತಡೆದುದನಿಯ ಒತ್ತಿ ಹಿಡಿದುಈಗ ಹೊರಡುವುದೇ ಕಷ್ಟವಾಗಿದೆನಿಮ್ಮೊಟ್ಟಿಗೆ ಬರಲೂ ಆಗದಾಗಿದೆ” ವಸ್ತುಪ್ರದರ್ಶನ ತೋರಿಸಲು ಕೋಗಿಲೆಗೆ ಮಾತು ಹೊರಡುತ್ತಿಲ್ಲ. ಅದು ಬಿಕ್ಕುತ್ತಿದೆ. ಬಿಕ್ಕಿ ಬಿಕ್ಕಿ ಅಳುವ ನಡುವೆ ಮಾತುಗಳು ತುಂಡು ತುಂಡಾಗಿ ನೋವಿನಲ್ಲಿ ಅದ್ದಿ ಅರ್ಧ ಪದಗಳಾಗಿ, ಉಳಿದರ್ಧ ಎಂಜಲಿನ ಜತೆ ಗಂಟಲು ಸೇರಿ ಮಾತಾಡಲಾಗಲ್ಲ. ದನಿಯ ಒತ್ತಿ ಹಿಡಿದು,ಅಳು ಕಟ್ಟಿ ಹೊರಡುತ್ತಿಲ್ಲ. “ಎಲ್ಲಾದರೂ ವನಸಿರಿನಳನಳಿಸಿದ್ದು ಕಂಡುಬಂದರೇನನಗೆ ತಿಳಿಸಿ ಮತ್ತೆ ನನ್ನ ದನಿಗೊಂದುನವ ಜೀವನ ಬಂದೀತುವನ ಜೀವನದ ಸವಿ ತಂದೀತುಹೋಗಿಬನ್ನಿ ನಮಸ್ಕಾರ” ಕೋಗಿಲೆ, ಪ್ರೇಕ್ಷಕನಿಗೆ, ವಿನಂತಿಸುತ್ತೆ. ಎಲ್ಲಾದರೂ ವನಸಿರಿ ನಳನಳಿಸಿದ್ದು ಕಂಡರೆ ತಿಳಿಸಿ, ಮತ್ತೆ ನನ್ನ ದನಿಗೊಂದು ನವಜೀವನ ಬಂದೀತು, ಅಂತ. ಹೋಗಿ ಬನ್ನಿ ನಮಸ್ಕಾರ ಎಂದು ಕೋಗಿಲೆ ಪ್ರೇಕ್ಷಕನಿಗೆ ಹೇಳುವಾಗ ನಮಸ್ಕಾರದೊಳಗೆ,ಮನುಷ್ಯಜಗತ್ತಿನತ್ತ ತಿರಸ್ಕಾರ ಭಾವನೆಯಿದೆಯೇ?. ಇಷ್ಟೊಂದು ನಿರಾಶೆಯಲ್ಲೂ ‘ನವ ಜೀವನ ಬಂದೀತು’ ಎಂಬ ಆಶಾಭಾವದೊಂದಿಗೆ ಕೋಗಿಲೆಯ ಕವಿತೆ ಮುಗಿಯುತ್ತೆ. ಕವಿತೆಯ ಶೀರ್ಷಿಕೆ ವಿಡಂಬನಾತ್ಮಕ. ಮನುಷ್ಯ ಕೋಗಿಲೆಯಲ್ಲಿ ಕ್ಷಮೆ ಕೇಳಬೇಕಿತ್ತು. ಆದರೆ ಮನುಷ್ಯನ ಸ್ವಕೇಂದ್ರಿತ ಮನಸ್ಸು ಸ್ಪಂದನೆಯನ್ನೇ ಮರೆತು ಒಣವಾದಾಗ, ಕೋಗಿಲೆಯೇ ಕ್ಷಮೆ ಕೇಳುವಂತಾಗಿದೆ. ಆದರೆ ಕವಿಯ ಪ್ರಜ್ಞೆ ಹೊಸತೊಂದು ಅನುಭವಕ್ಕೆ ತೆಗೆದುಕೊಂಡಾಗ, ಅದೇ ಕೋಗಿಲೆಯ ಕವಿತೆ ಹೇಗೆ ಬದಲಾಗುತ್ತೆ ಅಂತ ನೋಡಿ!.ಕರೋನಾ ಲಾಕ್ ಡೌನ್ ಆದಾಗ, ಮನುಷ್ಯನ ಇಂಟರ್ಫಿಯರೆನ್ಸ್ ಇಲ್ಲದೇ, ವನಪುಷ್ಪಗಳು ನಳನಳಿಸಿದಾಗ ಕೋಗಿಲೆಯ ಕನಸು ನನಸಾಗುತ್ತೆ. ರಮೇಶ್ ಬಾಬು ಅವರ ಕರೋನ ಸಮಯದ ಕೋಗಿಲೆಯ ಉಲ್ಲಾಸದ ಮಾತುಗಳು ಹೀಗಿವೆ. ತಳಿರು ಮೆದ್ದ ಕೋಗಿಲೆ ಪ್ರತಿವರ್ಷದಂತೆಯುಗಾದಿಯಂದುವಸಂತನ ಆಗಮನಸೂಚ್ಯವಾಗಿಸಾಂಕೇತಿಕವಾಗಿದನಿ ಹೊರಡಿಸಲುಕೊರಳು ಸರಿಪಡಿಸಿಕೊಂಡ ಕೋಗಿಲೆಎಂದಿನಂತೆ ಕೆಲ ಕ್ಷಣಕ್ಕೆಮಾತ್ರ ಎಂದು ತಯಾರಿಅದೇನಾಶ್ಚರ್ಯತನ್ನ ಉಸಿರು ಕಟ್ಟಲಿಲ್ಲದನಿ ಗೊಗ್ಗರಾಗಲಿಲ್ಲಸರಾಗವಾಗಿ ಹೊರಟ ಇಂಚರಉಬ್ಬಸ ಕಳೆದ ನಿಸರ್ಗಹರಡಿದ ರಂಗಸ್ಥಳದಿನವಿಡೀ ಮನತುಂಬಿಸಾಗಿತು ಗಾನಕೊರೋನಾದ ಖಬರಿಲ್ಲಆಡಳಿತದ ಅರಿವಿಲ್ಲಕಾಲುಷ್ಯ ಕಾಣದ್ದೇ ಮಾನದಂಡಅಂದಿನಿಂದ ಇಂದಿಗೂಚುಮುಚುಮು ವೇಳೆಆರಂಭವಾದರೆ ಕಚೇರಿಗೂಡು ಸೇರುವ ಹೊತ್ತಿಗೂ ಮುಗಿಯದುಮತ್ತೆಂದು ಸಿಕ್ಕೀತೋಎನ್ನುವ ಹಾಗೆಕತ್ತುಚಾಚಿಸ್ವರದೌತಣ ನೀಡುತ್ತಿದೆತಳಿರು ಮೆದ್ದ ಕೋಗಿಲೆ ! ** *** **** ಈ ಸಾಲುಗಳನ್ನು ನೋಡಿ! “ವಸಂತನ ಆಗಮನಸೂಚ್ಯವಾಗಿಸಾಂಕೇತಿಕವಾಗಿದನಿ ಹೊರಡಿಸಲುಕೊರಳು ಸರಿಪಡಿಸಿಕೊಂಡ ಕೋಗಿಲೆಎಂದಿನಂತೆ ಕೆಲ ಕ್ಷಣಕ್ಕೆಮಾತ್ರ ಎಂದು ತಯಾರಿಅದೇನಾಶ್ಚರ್ಯತನ್ನ ಉಸಿರು ಕಟ್ಟಲಿಲ್ಲದನಿ ಗೊಗ್ಗರಾಗಲಿಲ್ಲಸರಾಗವಾಗಿ ಹೊರಟ ಇಂಚರಉಬ್ಬಸ ಕಳೆದ ನಿಸರ್ಗ “ ಬಹುಷಃ ಕೋಗಿಲೆಯಷ್ಟೇ ನಿಮಗೂ ಖುಶಿಯಾಗಿರಬೇಕು!‘ತನ್ನ ಉಸಿರು ಕಟ್ಟಲಿಲ್ಲ ದನಿ ಗೊಗ್ಗರಾಗಲಿಲ್ಲ’ ಅಂತ ಕೋಗಿಲೆ ಮನುಷ್ಯಾಕ್ರಮಣದಿಂದ ಕಳೆದ ಕೊರಳು ಮರುಪಡೆದ ಸಂತಸ ವ್ಯಕ್ತಪಡಿಸುತ್ತದೆ. ಇಲ್ಲಿ ಕೋಗಿಲೆ, ವಸಂತನಿಗೆ ರೂಪಕ. ವಸಂತ ಪ್ರಕೃತಿಗೆ ಪ್ರತಿಮೆ. ಹಾಗೆ ಕೋಗಿಲೆಗೆ ಸ್ವರ ಬಂದಿದೆ ಎಂದರೆ ಪ್ರಾಕೃತಿಕ ಸಮತೋಲನ ವಾಪಸ್ಸಾಗಿದೆ ಅಂತ. ಉಬ್ಬಸ ಕಳೆದ ನಿಸರ್ಗ ಅನ್ನುವಾಗ, ಇದೇ ಧ್ವನಿ. ಸಾಧಾರಣವಾಗಿ ವಾತಾವರಣ ಕಲುಷಿತಗೊಂಡಾಗ ಉಬ್ಬಸ. ವಾತಾವರಣ ನಿರ್ಮಲವಾದಾಗ,ಪ್ರಕೃತಿಯ ಉಬ್ಬಸ ಕಳೆದಿದೆ. “ಚುಮುಚುಮು ವೇಳೆಆರಂಭವಾದರೆ ಕಚೇರಿಗೂಡು ಸೇರುವ ಹೊತ್ತಿಗೂ ಮುಗಿಯದುಮತ್ತೆಂದು ಸಿಕ್ಕೀತೋಎನ್ನುವ ಹಾಗೆಕತ್ತುಚಾಚಿಸ್ವರದೌತಣ ನೀಡುತ್ತಿದೆತಳಿರು ಮೆದ್ದ ಕೋಗಿಲೆ !” ಎಡೆಬಿಡದೆ ಸಂಭ್ರಮದಿಂದ ತಳಿರುಮೆದ್ದ ಕೋಗಿಲೆ ಸ್ವರದೌತಣ ಕೊಡುತ್ತೆ. ನೀವೆಲ್ಲಾ ಗಮನಿಸಿರಬಹುದು, ಕೊರೊನಾ ಲಾಕ್ ಡೌನ್ ನಲ್ಲಿ, ಮನುಷ್ಯ ಬಂದಿಯಾದಾಗ, ನಿಸರ್ಗಕ್ಕೆ ಸ್ವಾತಂತ್ರ್ಯ ದಿನದ ಸಂಭ್ರಮ. ಯಾಕೆ ಹೀಗೆ?. ಮನುಷ್ಯ ತಾನು ಮತ್ತು ಪ್ರಕೃತಿಯ ನಡುವೆ ಗೋಡೆ ಕಟ್ಟಿ, ಉಳಿದೆಲ್ಲಾ ಜೀವಸಂಕುಲಗಳನ್ನು ನಿಕೃಷ್ಟವಾಗಿ ನೋಡಿ, ಇಟ್ಟಿಗೆ ಪಟ್ಟಣ ಕಟ್ಟಿದ. ಆ ಪಟ್ಟಣ, ಪಶ್ಚಿಮ ಘಟ್ಟದ ಸಾಲುಗಳಲ್ಲಿ ನಡೆಯುತ್ತಿರುವ ಗುಡ್ಡಕುಸಿತದಡಿಯಲ್ಲಿ ಭೂಗರ್ಭದಲ್ಲಿ ಪಳೆಯುಳಿಕೆಯಾಗುತ್ತಿದೆ . ಕೊರೊನಾದಂತಹ ಕಣ್ಣಿಗೆ ಕಾಣಿಸದ ವೈರಾಣು ದಾಳಿಗೆ ಸಿಕ್ಕಿ ಸ್ತಬ್ಧವಾಗಿದೆ. ಭಾರತೀಯ ಜೀವನಶೈಲಿ ಹೀಗಿತ್ತೇ?. ಈಶಾವಾಸ್ಯಮಿದಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್ |ತೇನ ತ್ಯಕ್ತೇನ ಭುಂಜೀಥಾ ಮಾ ಗೃಧಃ ಕಸ್ಯಸ್ವಿದ್ಧನಮ್ || (ಈ ಜಗತ್ತಿನಲ್ಲಿ ಚಲನಾತ್ಮಕವಾದದ್ದು ಏನೇನಿದೆಯೋ ಅವೆಲ್ಲವೂ ಈಶನಿಂದ ಆವೃತವಾದದ್ದು. ಅದನ್ನು ಯಾವತ್ತೂ ನಿನ್ನದಾಗಿಸಿಕೊಳ್ಳಲು ಪ್ರಯತ್ನಿಸಬೇಡ. ಯಾವ ಸಂಪತ್ತನ್ನೂ ಬಯಸಬೇಡ) ಜಗತ್ತಿನ ಕಣ ಕಣದಲ್ಲಿ, ಜೀವವಿರಲಿ ನಿರ್ಜೀವ ವಸ್ತುವಾಗಿರಲಿ,ಎಲ್ಲದರಲ್ಲೂ ಈಶನನ್ನು ಕಾಣುವ ಆ ಮೂಲಕ ನಮ್ಮನ್ನೇ ಕಾಣುವ ದರ್ಶನ ನಮ್ಮದು.ನಮಗೆ ಸ್ವಾತಂತ್ರ್ಯ ಹೇಗೆ ಇಷ್ಟವೋ, ಹಾಗೆಯೇ ಉಳಿದ ಜೀವಜಾಲದ ಸ್ವಾತಂತ್ರ್ಯವನ್ನು ಗೌರವಿಸಿ ಸಹಬಾಳ್ವೆ , ಉಸಿರಿನಷ್ಟೇ ಸಹಜವಾಗಲಿ. ******************************** ಲೇಖಕರ ಬಗ್ಗೆ: ಹುಟ್ಟಿದ್ದು, ಗಡಿನಾಡ ಜಿಲ್ಲೆ,ಕೇರಳದ ಕಾಸರಗೋಡು ಜಿಲ್ಲೆಯಲ್ಲಿ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ, “ಮೆಟೀರಿಯಲ್ಸ್ ಸೈನ್ಸ್” ನಲ್ಲಿ ಸ್ನಾತಕೋತ್ತರ ಪದವಿ, ಐ.ಐ.ಟಿ. ಮದರಾಸು, ವಿನಿಂದ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದು, ಕಳೆದ ಎರಡು ದಶಕದಲ್ಲಿ, ಡಿ.ಆರ್.ಡಿ.ಒ. ಹೈದರಾಬಾದ್ ನಲ್ಲಿ, ವಿಜ್ಞಾನಿಯಾಗಿ ವೃತ್ತಿ. ಸಾಹಿತ್ಯ, ಓದು ಬರಹ, ಹಾಗೂ ಸಂಗೀತ ಹೃದಯಕ್ಕೆ,ಹತ್ತಿರ
ಮಕ್ಕಳ ಕವಿತೆ
ಇರುವೆ-ಆನೆ ಗಣಪ ಮತ್ತು ಪುಟ್ಟಿ ವಿಜಯಶ್ರೀ ಹಾಲಾಡಿ ಗಣಪನ ತಿಂಡಿ ಇರುವೆ ತಿಂದರೆತಪ್ಪು ಏನಮ್ಮಆನೆಮರಿಯೇ ಗಣಪ ಎಂದುಅಜ್ಜಿ ಅಂದಿಲ್ವ? ಆನೆಗೆ ಇರುವೆ ಗೆಳೆಯನು ತಾನೇನಾನೇ ನೋಡಿಲ್ವಕಾಡಿನ ಬಿಲದಲಿ ಹುಲ್ಲಿನ ಬೀಜಕೂಡಿ ಹಾಕಿಲ್ವ? ಹುಲ್ಲು ಮೊಳೆತು ಮಳೆಯ ಬೆರೆತುಆನೆಯು ತಿಂದಿಲ್ವಆನೆಗು ಇರುವೆಗು ಭೇದವೆ ಇಲ್ಲಬೆಲ್ಲ ಕದ್ದಿಲ್ವ? ಪುಟ್ಟಿಯ ಮಾತು ಸಿಡಿಯೋ ಅರಳುತಲೆಯು ಕೆಟ್ಟಿಲ್ವ!!ಅಮ್ಮ ಅಪ್ಪ ಅಜ್ಜಿ ಅಜ್ಜಬಿದ್ದು ನಕ್ಕಿಲ್ವ? ******************************
ಬೆಳಕಿನ ರೋಚಕತೆ ನೀಡುವ ಬೆಳದಿಂಗಳು. ಪುಸ್ತಕ- ಬೆಳದಿಂಗಳು ಕವಿ- ಗುರು ಹಿರೇಮಠ ವಿಶ್ವೃಷಿ ಪ್ರಕಾಶನ ಬೆಲೆ-೧೨೦/- ಗುರು ಹಿರೇಮಠ ತುಮಕೂರು ಟು ಹೊಸ್ಪೇಟ್ ಎಂದೇ ನನಗೆ ಪರಿಚಯವಾದವರು. ಮೃದು ಮಾತಿನ ಅಷ್ಟೇ ನಾಚಿಕೆ ಸ್ವಭಾವದ ಹುಡುಗ. ಯಾವಾಗ ಎದುರಿಗೆ ಸಿಕ್ಕರೂ ಒಂದು ನಗೆಯ ಹೊರತಾಗಿ ಬೇರೆ ಮಾತು ಆಡಲು ಬರುವುದೇ ಇಲ್ಲವೇನೋ ಎಂಬಷ್ಟು ಮೌನಿ. ಅವರ ಚುಟುಕುಗಳ ಸಂಕಲನ ಬೆಳದಿಂಗಳು ಓದಿದಾಗ ಅವರ ಮೌನಕ್ಕೊಂದು ಅರ್ಥ ದೊರಕಿತು ನನಗೆ. ಹೇಳಬೇಕಾದುದ್ದನ್ನೆಲ್ಲ ಚುಟುಕಾಗಿ ಮೂರು ನಾಲ್ಕು ಸಾಲುಗಳಲ್ಲಿ ಹೇಳಿ ನಿರುಮ್ಮಳವಾಗಿ ಬಿಡುವ ಗುರುವಿಗೆ ಬಹುಶಃ ಮಾತು ಮಣಭಾರ ಎನ್ನಿಸಿರಬಹುದು.. ಹೀಗಾಗಿಯೇ ಮೌನ ಸಾಮ್ರಾಜ್ಯದ ಚಕ್ರವರ್ತಿ ಅವರು. ಇಷ್ಟಾಗಿಯೂ ನಾನು ಕಂಡAತೆ ಸ್ನೇಹಿತರನ್ನು ತುಂಬಾ ನಂಬುವ ಸ್ವಭಾದ ಗುರು ಪ್ರೀತಿಸುವವರನ್ನು ನಂಬುತ್ತೇನೆ. ದ್ವೇಷಿಸುವವರನ್ನು ಪ್ರೀತಿಸುತ್ತೇನೆ ಹೋಗುವ ದಾರಿಯಲ್ಲಿ ನನ್ನೆದೆಯ ಹೂವುಗಳು ನೀವು ಎಂದು ಬರೆದರೆ ಅದರಲ್ಲಿ ಅಚ್ಚರಿಯೇನಿದೆ? ಪ್ರೀತಿಸುವವರನ್ನು ನಂಬುವುದು ಸಹಜ. ಎಲ್ಲರೂ ತಮ್ಮನ್ನು ಪ್ರೀತಿಸುವವರನ್ನು ನಂಬಿಯೇ ನಂಬುತ್ತಾರೆ. ಅದೇನೂ ವಿಶೇಷವಲ್ಲ. ಆದರೆ ದ್ವೇಷಿಸುವವರನ್ನು ಪ್ರೀತಿಸುವುದು ಮಾತ್ರ ಬಹುದೊಡ್ಡ ವಿಷಯ. ಹಾಗೆ ದ್ವೇಷಿಸುವವರನ್ನೂ ಪ್ರೀತಿಸುವುದು ಸಾಧಾರಣ ಜನರಿಗೆ ದಕ್ಕುವ ಮಾತಲ್ಲ. ಹೀಗಾಗಿಯೇ ಈ ಪ್ರೀತಿಸುವವರನ್ನು ಹಾಗೂ ದ್ವೇಷಿಸುವವರನ್ನು ತಾನು ಹೋಗುವ ದಾರಿಯಲ್ಲಿ ಸಿಗುವ ತನ್ನೆದೆಯ ಹೂವುಗಳು ಎನ್ನುತ್ತಾರೆ. ಬದುಕು ತೀರಾ ಚಿಕ್ಕದು. ದ್ವೇಷಿಸುವವರನ್ನು ತಿರುಗಿ ನಾವೂ ದ್ವೇಷಿಸುತ್ತಲೇ ಹೋದರೆ ಇಡೀ ಜೀವನಪೂರ್ತಿ ದ್ವೇಷಿಸುತ್ತಲೇ ಇರಬೇಕಾಗುತ್ತದೆ. ಪ್ರತಿ ಮಾತಿಗೂ ಒಂದು ಎದುರುತ್ತರ ಕೊಡುತ್ತಲೇ ಹೋದರೆ ಮಾತು ಮುಗಿಯುವುದಾದರೂ ಯಾವಾಗ? ಹೀಗಾಗಿಯೇ ದ್ವೇಷಿಸುವವರನ್ನು ಪ್ರೀತಿಸಿಬಿಟ್ಟರೆ ನಾವು ನಿರುಮ್ಮಳವಾಗಿರಬಹುದು. ಕಿuಚಿಟiಣಥಿ oಜಿ meಡಿಛಿಥಿ is ಣತಿiಛಿe bಟesseಜ ಎಂದು ಶೇಕ್ಸ್ಫೀಯರ್ ಹೇಳುತ್ತಾನೆ. ದ್ವೇಷಕ್ಕೆ ಪ್ರತಿಯಾಗಿ ದ್ವೇಷಿಸಿದರೆ ನಮ್ಮ ನಿರಾಳ ಮನಸ್ಥಿತಿಯನ್ನು ನಾವೇ ನಾಶಮಾಡಿಕೊಂಡAತೆ. ಹೀಗಾಗಿಯೇ ಜಗದ ಎಲ್ಲ ನೋವಿಗೂ ಪ್ರೀತಿಯೊಂದೇ ಔಷಧ. ಜಗದ ಎಲ್ಲ ದ್ವೇಷಕ್ಕೂ ಪ್ರೀತಿಯೇ ಮುಲಾಮು. ಕವಿಯ ಮಾನವೀಯತೆಯ ಪರಿಚಯವಾಗಲು ಈ ಎರಡು ಸಾಲು ಸಾಕು. ನಾನು ಕಡಲೂರಿನವಳು. ಜಗದ ಸೃಷ್ಟಿ ಕಡಲಲ್ಲಿಯೇ ಆದದ್ದು ಎಂದು ಬಲವಾಗಿ ನಂಬಿದವು. ಜಗದ ಅಂತ್ಯವೂ ಕಡಲಿಂದಲೇ ಆಗುತ್ತದೆ ಎಂದೂ ಮತ್ತೆ ಮತ್ತೆ ಹೇಳುತ್ತಿರುವವಳು. ಕಡಲ ಉಪ್ಪು ನೀರು ನಮಗೆ ಅಮೃತಕ್ಕೆ ಸಮಾನ. ನಾನು ಚಿಕ್ಕವಳಿರುವಾಗಲೆಲ್ಲ ಹೊಟ್ಟೆ ಕೆಟ್ಟರೆ, ತಲೆ ನೋವು ಬಂದರೆ ಉಪ್ಪು ನೀರು ಕುಡಿಸುತ್ತಿದ್ದರು. ಒಂದೋ ವಾಂತಿಯಾಗಿ ಎಲ್ಲವೂ ಹೊಟ್ಟೆಯಿಂದ ಹೊರಹೋಗಬೇಕು, ಅಥವಾ ಉಪ್ಪುನೀರು ಎಲ್ಲವನ್ನೂ ಜೀರ್ಣಿಸಬೇಕು. ಹೀಗಾಗಿ ಎಷ್ಟೋ ಸಲ ನನ್ನ ಮಕ್ಕಳು ಚಿಕ್ಕವರಿರುವಾಗಲೂ ಉಪ್ಪುನೀರಿನ ಔಷಧವೇ ನನ್ನನ್ನು ಸಂಕಟದಿAದ ಪಾರು ಮಾಡಿದ್ದು. ನಾಲ್ಕು ತಿಂಗಳಿನ ಪುಟ್ಟ ಮಗುವನ್ನು ಕೈಲಿಟ್ಟುಕೊಂಡು ಊರಲ್ಲೇ ಗಂಜಿ ಉಂಡುಕೊAಡು ಸುಖವಾಗಿ ಶಾಲೆಗೆ ಹೋಗಿ ಬರಬಹುದಾದ ಅವಕಾಶವನ್ನು ಬಿಟ್ಟುಕೊಟ್ಟು, ಅನುದಾನಿತ ಶಾಲೆ ಬೇಡ ನನಗೆ ಎನ್ನುತ್ತ ಮನೆಯವರೆಲ್ಲ ಅಸಮಧಾನಕ್ಕೆ ಕಾರಣವಾಗಿ ಬೆಳ್ತಂಗಡಿಯ ಗೊಂಡಾರಣ್ಯವಾದ ಕೊಯ್ಯೂರಿಗೆ ಸರಕಾರಿ ನೌಕರಿ ಮಾಡುತ್ತೇನೆ ಎಂದು ಹೊರಟಿದ್ದೆ. ಏನೂ ಅರಿಯದ ಬೊಮ್ಮಟೆಯಂತಹ ಮಗು ಮಧ್ಯರಾತ್ರಿ ಎದ್ದು ಅತ್ತಾಗಲೆಲ್ಲ ನನಗೆ ತಳಮಳ. ನಾನೇ ಮದುವೆ ಆಗುವವರೆಗೂ ಅಮ್ಮನ ಹೊಟ್ಟೆಗೆ ಕೈಯ್ಯಿಟ್ಟು ಮಲುಗುತ್ತಿದ್ದವಳು. ಈಗ ಈ ಮಗುವನ್ನು ಸಂಭಾಳಿಸುವ ಅಮ್ಮನಾಗಿದ್ದೆ. ಆಗೆಲ್ಲ ನನಗೆ ನೆನಪಾಗುತ್ತಿದ್ದುದು ಒಂದೇ. ನೀರು ಬೆಚ್ಚಗೆ ಮಾಡಿ ಒಂದು ಚಿಟಿಕೆ ಉಪ್ಪು ಹಾಕಿ ಕದಡಿ ಚಮಚದಲ್ಲಿ ನಾಲ್ಕಾರು ಹನಿ ಕುಡಿಸುತ್ತಿದ್ದೆ. ಸ್ವಲ್ಪ ಸಮಯದ ನಂತರ ಮಗು ಅಳುವುದನ್ನು ನಿಲ್ಲಿಸಿ ಮಲಗಿದರೆ ನನಗೆ ಏನೋ ದೊಡ್ಡ ಮಹತ್ಸಾಧನೆ ಮಾಡಿದ ಸಮಾಧಾನ. ರುಚಿ ನೀಡುವ ಉಪ್ಪಿನಲ್ಲಿ ಸಕಲ ಜೀವರಾಶಿಗಳ ಕಣ್ಣೀರಿದೆ ಆದರೆ ಇಲ್ಲಿ ಗುರು ಉಪ್ಪಿಗೆ ಬೇರೆಯದ್ದೇ ಅರ್ಥ ನೀಡಿದ್ದಾರೆ. ಉಪ್ಪುಪ್ಪಿನ ಕಣ್ಣೀರಿಗೆ ಹೋಲಿಸಿದ್ದಾರೆ. ಬದುಕಿನ ವಿವಿಧ ಅರ್ಥಗಳನ್ನು ಹಿಡಿದಿಡುವುದೇ ನಿಜವಾದ ಕವಿಯ ಸಾಧನೆ. ನಮಗೆಲ್ಲ ತಾಯಿಗಿಂತ ಬಂಧುವಿಲ್ಲ, ಉಪ್ಪಿಗಿಂತ ರುಚಿಯಿಲ್ಲ ಎಂದೆನಿಸಿದರೆ ಗುರು ಉಪ್ಪನ್ನು ಕಣ್ಣೀರಿಗೆ ಸಮೀಕರಿಸಿ ಹೊಸತೇ ಆದ ಆಯಾಮವನ್ನು ನೀಡಿದ್ದಾರೆ. ಯಶಸ್ಸು ಸುಲಭವಾಗಿ ದಕ್ಕುವಂತಹುದ್ದಲ್ಲ. ಒಂದು ಗುರಿಯನ್ನು ತಲುಪಲು ವಹಿಸಬೇಕಾದ ಶ್ರಮಕ್ಕೆ ಯಾವ ಬೆಲೆಯೂ ಇಲ್ಲ. ಯಶಸ್ಸಿಗೆ ಹತ್ತಾರು ದಾರಿಗಳಿರುವುದಿಲ್ಲ. ಬೇಗ ಹೋಗಿ ಯಶಸ್ಸನ್ನು ಪಡೆಯಲು ಯಾವ ಒಳದಾರಿಯೂ ಇರುವುದಿಲ್ಲ. ಇರುವುದು ಒಂದೇ ದಾರಿ. ಅದು ಸತತ ಪರಿಶ್ರಮ. ಏರುವ ಎತ್ತರಕ್ಕೆ ಒಂದೇ ದಾರಿ ಬೀಳಲು ನೂರು ದಾರಿ ಆದರೆ ಯಶಸ್ಸಿನ ಶಿಖರವನ್ನು ಹತ್ತಿದರೂ ಅದರಿಂದ ಕೆಳಗೆ ಬೀಳಲು ಬೇಕಷ್ಟು ದಾರಿಗಳಿರುತ್ತವೆ. ನಮ್ಮದೇ ವ್ಯಸನಗಳು ನಮ್ಮನ್ನು ದಾರಿ ತಪ್ಪಿಸಿ ಯಶಸ್ಸಿನ ಶಿಖರದಿಂದ ಒಮ್ಮೆಲೆ ಕೆಳಗೆ ಬೀಳಿಸಬಲ್ಲದು. ನಮ್ಮ ಒಂದು ತಪ್ಪು ಹೆಜ್ಜೆಯೂ ನಮ್ಮನ್ನು ಪ್ರಪಾತದ ಕಡೆ ತಳ್ಳುವ ಚಕ್ರವಾಗಿರಬಹುದು. ಆದರೂ ಈ ಜಗತ್ತು ಪ್ರೇಮಮಯ. ಪ್ರೇಮವೊಂದಿದ್ದರೆ ಸಾಕು, ಜಗತ್ತಿನ ನೂರಾರು ಸಂಕಷ್ಟಗಳನ್ನು ಸುಲಭವಾಗಿ ಜಯಿಸಬಹುದು. ಪ್ರೇಯಸಿಯ ಒಂದು ನಗು ಇಡೀ ಜಗತ್ತನ್ನೇ ಗೆಲ್ಲುವ ಪ್ರೇರಕ ಶಕ್ತಿಯಾಗಬಲ್ಲದು. ನಿನ್ನ ನಗು ಕಂಡ ಕ್ಷಣ ಕಡಲಿನ ಮುತ್ತುಗಳೆಲ್ಲ ಹೂವಾಗಿ ಅರಳಿದವು ಎನ್ನುವ ಕವಿಯಲ್ಲಿನ ತಾಜಾ ಭಾವನೆಗಳು ನಮ್ಮನ್ನು ಜೀವನ್ಮುಖಿಯಾಗಿಸುವುದರಲ್ಲಿ ಸಂಶಯವೇ ಇಲ್ಲ. ಈ ಪ್ರೇಮದ ಪರಿಯನ್ನೊಮ್ಮೆ ಗಮನಿಸಿ. ಯಾರೋ ನಡೆದ ದಾರಿಯಲ್ಲಿ ನಾ ನಡೆಯುತ್ತಿದ್ದೆ ಸುಮ್ಮನೆ ಒಮ್ಮೆ ದಾರಿ ಬದಲಿಸಿದೆ! ನೀ ಸಿಕ್ಕೆ ಬದುಕು ದಕ್ಕಿತು ಒಂದು ಪ್ರೇಮ ಬದುಕನ್ನು ನಮ್ಮ ತೆಕ್ಕೆಗೆ ನೀಡಬಲ್ಲದು ಎನ್ನುವುದಕ್ಕೆ ಸಾಕ್ಷಿಯಾಗಿರುವ ಈ ಸಾಲುಗಳನ್ನು ನೋಡಿ. ಸರಳವಾದ ಕೆಲವೇ ಶಬ್ಧಗಳಲ್ಲಿ ಈ ಭಾವ ನಮ್ಮನ್ನು ಇಡೀ ಜಗತ್ತಿನ ಪ್ರೇಮದ ರಹದಾರಿಯಲ್ಲಿ ನಿಲ್ಲಿಸುತ್ತದೆ. ಪಡೆದದ್ದು ಇಷ್ಟೇ ಅತ್ತ ನೀನು, ಇತ್ತ ನಾನು ದಡವಾಗಿ ಪ್ರೀತಿಯ ನದಿ ಎಂದೂ ಬತ್ತುವುದಿಲ್ಲ ಹೀಗಾಗಿ ಪ್ರೀತಿಯಲ್ಲಿ ಏನು ಪಡೆದೆ ಎಂದರೆ ಎಂದೂ ಬತ್ತದ ಪ್ರೀತಿಯನ್ನು ಪಡೆಯುವುದು ಮಾತ್ರ ಪ್ರೇಮದ ಕೊನೆಯ ಗುರಿಯಾಗಿರುತ್ತದೆ. ಪ್ರೇಮನದಿಯ ಎರಡು ದಡಗಳಲ್ಲಿ ಪ್ರೇಮಿಗಳಿಬ್ಬರೂ ನಿಂತುಕೊAಡರೆ ಆ ನದಿ ಎಂದಿಗೂ ಬತ್ತಬಾರದು. ಅಂತಹ ಪ್ರೇಮವನ್ನು ಪಡೆದರೆ ಜೀವನ ಸಾರ್ಥಕ ಎನ್ನುವ ಭಾವ ಕವಿಯಲ್ಲಿದೆ. ಅದಕ್ಕೆಂದೇ ಕವಿ ಬೆಳದಿಂಗಳು ಸೋತಿದೆ ಅವಳ ಹೆಸರಿಗೆ ಆ ಹೆಸರಲ್ಲಿ ನನ್ನ ಬದುಕಿನ ಉಸಿರಿದೆ ಎನ್ನುತ್ತಾರೆ. ಪ್ರೇಮದ ಸಾಫಲ್ಯವೇ ಹಾಗೆ. ಪ್ರೇಮಿಯ ಹೆಸರನ್ನು ಜಪಿಸುತ್ತ ಅದನ್ನೇ ಉಸಿರಾಡುವುದರಲ್ಲಿಯೇ ಬದುಕಿನ ಔನತ್ಯವನ್ನು ಕಾಣುವುದು ಪ್ರತಿ ಪ್ರೇಮಿಯ ಆಶಯವಾಗಿರುತ್ತದೆ. ಹೀಗೆಂದೇ ಪ್ರೇಮದಲ್ಲಿ ಬಿದ್ದ ಕಾಲೇಜು ವಿದ್ಯಾರ್ಥಿಗಳ ನೋಟ್‌ಬುಕ್‌ನ ಕೊನೆಯ ಹಾಳೆಯನ್ನು ಗಮನಿಸಿ. ಅಲ್ಲಿ ಕೇವಲ ಪ್ರೇಮಿಯ ಹೆಸರನ್ನೇ ಸಾವಿರ ಸಲ ಬರೆದಿರುತ್ತಾರೆ. ಕವಿ ಕೂಡ ತನ್ನವಳ ಹೆಸರಿಗೆ ಬೆಳದಿಂಗಳೂ ಸೋಲುತ್ತದೆ ಎನ್ನುತ್ತಾರೆ. ಕವಿಗೂ ವಿರಹ ಕಾಡುತ್ತದೆ. ವಿರಹವಿಲ್ಲದ ಪ್ರೇಮ ಈ ಜಗದಲ್ಲಿ ಇದ್ದೀತೆ? ಪ್ರತಿ ಪ್ರೇಮಕ್ಕೂ ವಿರಹ ಕಾಡಿದರೆ ಮಾತ್ರ ಆ ಪ್ರೇಮಕ್ಕೊಂದು ಅಧಿಕೃತತೆ ದಕ್ಕಿದ ಹಾಗೆ. ಪ್ರತಿ ಪ್ರೇಮದಲ್ಲಿಯೂ ಒಂದು ಮುನಿಸಿರುತ್ತದೆ, ಜಗಳವಿರುತ್ತದೆ. ಕೊನೆಗೆ ಪ್ರೇಮಿ ಕೈಕೊಟ್ಟು ಹೋದಳೆಂದು ಪರಿತಪಿಸುವ ಉಪಖ್ಯಾನವಿರುತ್ತದೆ. ಪ್ರೀತಿಯೊಂದಿಗೆ ಸ್ನೇಹ ಮಾಡಿಕೊಂಡವಳು ಮೊದಲೇ ಮೋಸದ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದು ತಿಳಿಯಲಿಲ್ಲ ಎನ್ನುತ್ತ ವಿರಹದ ಮಾತನಾಡುತ್ತಾರೆ. ಬದುಕಿನ ಬಣ್ಣಗಳನ್ನು ಹಂಚಿಕೊAಡವಳು. ಬದುಕಿನಲ್ಲಿರುವ ಕಾಮನಬಿಲ್ಲನ್ನು ಬಣ್ಣಗಳನ್ನು ತನಗಾಗಿ ತಂದವಳು ಬಣ್ಣಗಳ ಜೊತೆಗೆ ಬಣ್ಣ ಬದಲಿಸಿದಳು ಎಂದು ವಿಷಾದ ಪಡುತ್ತಾರೆ. ಬಣ್ಣಗಳ ಜೊತೆಗೆ ಆಟವಾಡುವುದನ್ನು ಕಲಿಸಿದವಳು ಬಣ್ಣ ಬದಲಿಸಿ ಹೋದಳು ಆದರೂ ಮೋಸ ಮಾಡಿ ಹೋದವಳ ಬಗ್ಗೆ ಬೇಸರವಿಲ್ಲ. ಅವಳ ಮೇಲಿನ ಪ್ರೇಮ ಕಿಂಚಿತ್ತೂ ಕಡಿಮೆಯಾಗುವುದಿಲ್ಲ. ಪ್ರೇಮವೆಂದರೆ ನಂಬಿಕೆ ಎಂದು ಮೊದಲೇ ಹೇಳಿದವರು ಈಗ ನಂಬಿಕೆಯನ್ನು ಕೊಂದವಳ ಬಗೆಗೂ ಮತ್ತದೇ ನಂಬಿಕೆ ಉಳಿಸಿಕೊಳ್ಳುವುದು ಸುಲಭದ ಮಾತಲ್ಲ. ನಂಬಿಕೆಯನ್ನು ಕೊಂದವಳ ಜೊತೆಗೆ ನAಬಿಕೆಯಿAದ ಬದುಕಿರುವ ಹೆಮ್ಮೆ ನನ್ನದಾಗಲಿ ಎನ್ನುತ್ತ ನಂಬಿಕೆಯನ್ನು ತಾನು ಕಳೆದುಕೊಳ್ಳದ ನಿಶ್ಚಯ ಮಾಡುತ್ತಾರೆ. ಪ್ರೀತಿಗಿಂತ ಮೊದಲೇ ಮೋಸವನ್ನೂ ತನ್ನೊಂದಿಗೆ ತಂದಿದ್ದಾಳೆAದು ಆರೋಪಿಸುವ ಕವಿಗೆ ಆಕೆ ತನ್ನನ್ನು ಬಿಟ್ಟು ಹೋದರೆ ಏನು ಮಾಡುವುದೆಂಬ ಭಯವಿದೆ. ಆಕೆಯನ್ನು ಕಳೆದುಕೊಳ್ಳಲಂತೂ ಸಾಧ್ಯವಿಲ್ಲ. ಹೊರಟು ಹೋದಳು ನನ್ನಲ್ಲಿರುವ ಬೆಳಕನ್ನು ಕೊಂದು ಅವಳ ನೆರಳೇ ದಾರಿ ತೋರಿಸುತ್ತಿದೆ ಕತ್ತಲೆಯಲ್ಲಿ ಎನ್ನುತ್ತ ಅವಳ ನೆನಪು, ನೆರಳು ಜೀವನದ ಕತ್ತಲಿನಲ್ಲೂ ದಾರಿ ತೋರುವ ಬೆಳಕಾಗುವ ಕುರಿತು ತುಂಬು ನಂಬಿಕೆಯ ಮಾತನಾಡುತ್ತಾರೆ. ಒಟ್ಟಿನಲ್ಲಿ ಬದುಕು ಅವಳ ಅವಳೊಂದ ಸಾಗಬೇಕೆನ್ನುವುದು ಕವಿ ಆಶಯ. ಎಲ್ಲವನ್ನೂ ಅಥೆಂಟಿಕ್ ಆಗಿ ಹೇಳುವ ಕವಿ ಸಾವಿನ ಬಗ್ಗೆ ಮಾತನಾಡದಿದ್ದರೆ ನಡೆದೀತು ಹೇಗೆ? ಹೀಗಾಗಿ ಬದುಕಿನ ನಶ್ವರತೆಯನ್ನು ಕತ್ತಲೆಗೆ ಹೋಲಿಸುತ್ತಾರೆ. ಕತ್ತಲೆಯ ಬದುಕು, ಬೆಳಕಿನ ಸಾವಿನ ರೂಪಕ ಇಲ್ಲ ಆಧ್ಯಾತ್ಮದ ಕೊನೆಯ ಹಂತವನ್ನು ನೆನಪಿಸುತ್ತದೆ. ನಾನು ಕತ್ತಲೆಯಲ್ಲಿ ಬದುಕಿದರೂ ಸಾವು ಬೆಳಕಿನಲ್ಲಿ ಬರಲಿ ವ್ಯಾವಹಾರಿಕ ಜಗತ್ತನ್ನು ತೊರೆದು ಅಲೌಕಿಕ ಜಗತ್ತನ್ನು ಸಾಮಕೇತಿಕವಾಗಿ ಪ್ರತಿನಿಧಿಸುವ ಕತ್ತಲಿನ ಬದುಕು ಮತ್ತು ಬೆಳಕಿನ ಸಾವು ಸಾವಿರಾರು ವರ್ಷಗಳ ಜ್ಞಾನವನ್ನು ಕೇವಲ ನಾಲ್ಕೇ ಸಾಲಿನಲ್ಲಿ ಕಣ್ಣೆದುರು ತೆರೆದಿಡುವ ಅದ್ಭುತ ಇದು. ಅಷ್ಟಾದರೂ ನಾವು ಎಷ್ಟೊಂದು ಸಾವನ್ನು ನೋಡುತ್ತೇವೆ. ಕಣ್ಣೆದುರಿಗೇ ಅದೆಷ್ಟೋ ಜನ ಪತಪತನೆ ಉದುರಿ ಬೀಳುತ್ತಿರುವ ಕಾಲಘಟ್ಟ ಇದು. ಸಾವಿನ ಲೆಕ್ಕಾಚಾರವನ್ನು ಬೆರಳೆಣಿಕೆಯಲ್ಲಿ ಮುಗಿಸಿ, ಸಾವಿರಗಟ್ಟಲೆ ಲೆಕ್ಕದಲ್ಲಿ ಎಣಿಸುತ್ತಿರುವ ಈ ಕೊರೋನಾ ಕಾಲದಲ್ಲಿ ಯಮ ಕೂಡ ಸಾವಿಗೆ ಕಣ್ಣೀರು ಹಾಕುತ್ತಿದ್ದಾನೆಯೇ? ಗೊತ್ತಿಲ್ಲ. ಆದರೆ ಪ್ರತಿ ಸಾವಿನ ಎದುರು ಯಮ ಅತ್ತಿದ್ದು ಯಾರ ಕಣ್ಣಿಗೂ ಕಾಣಿಸಲಿಲ್ಲ ಎನ್ನುವ ಕವಿಯ ಕಲ್ಪನೆ ಅದ್ಭುತವಾಗಿದೆ. ಇದ್ದರೂ ಇರಬಹುದು ಬಿಡಿ. ದಿನವೊಂದಕ್ಕೆ ಸಾವಿರ ಸಾವಿರ ಸಂಖ್ಯೆಯಲ್ಲಿ, ಕೆಲವೊಂದು ದಿನ ಲಕ್ಷದ ಎಣಿಕೆಯಲ್ಲಿ ಸಾವಿನ ಲೆಕ್ಕಾಚಾರ ಕಂಡಿದೆ ಈ ಜಗತ್ತು. ಜನರ ಮರಣದ ಪ್ರಮಾಣ ಆ ಯಮನಿಗೂ ದಿಗಿಲು ಹುಟ್ಟಿಸಿರಬಹುದು. ಆದರೆ ಸಾವಿಗೊಂದು ಗೌರವ ಕೊಡುತ್ತಿದ್ದೇವೆಯೇ? ಅದೂ ಇಲ್ಲ. ಕೊರೋನಾದಿಂದಾಗಿ ಸಾವುಗಳೆಲ್ಲ ಕೇವಲ ಬೀದಿ ಬದಿಯ ಹೆಣಗಳಷ್ಟೇ ಆಗಿಹೋಗುತ್ತಿರುವ ಈ ದುರಂತದ ಸಮಯದಲ್ಲಿ ಸಾವನ್ನು ಕುರಿತು ಮಾತನಾಡುವುದೇ ಅಪರಾಧ ಎನ್ನಿಸಿಬಿಡುತ್ತದೆ. ಸಾವಿನ ಮಾತು ಬಿಡಿ. ಬದುಕಿರುವವರನ್ನೇ ಮುಟ್ಟಿಸಿಕೊಳ್ಳಲು ನಾವು ಹಿಂದೇಟು ಹಾಕುತ್ತಿದ್ದೇವೆ. ಪರಸ್ಪರರನ್ನು ಭೇಟಿಯಾಗಲು ಅದೆಷ್ಟು ಮುಜುಗರ ಈಗ. ಅನಾವಶ್ಯಕವಾಗಿ ನಾವೀಗ ಯಾರೊಂದಿಗೂ ಮಾತನಾಡಲಾರೆವು. ಪಕ್ಕದ ಮನೆಯವರೊಂದಿಗೆ ಹರಟೆ ಹೊಡೆಯಲಾರೆವು. ಯಾಕೆಂದರೆ ಯಾರಿಗೆ ಗೊತ್ತು, ಅವರ ಮನೆಯ ಯಾವ ಸದಸ್ಯ ಹೊರಹೋಗಿ ಕೊರೋನಾ ಅಂಟಿಸಿಕೊAಡು ಬಂದಿದ್ದಾನೆಯೋ ಎಂಬ ಭಯ. ಇದರ ನಡುವೆ ಸಾವಿರಗಟ್ಟಲೆ ಹೆಣ ಸಂಪಾದಿಸುವ ಸಾವು ಮಾತ್ರ ಥೇಟ್ ರ‍್ಯಾದಿ ಕಳೆದುಕೊಂಡ ಭಿಕಾರಿ. ಅದೆಷ್ಟೋ ಕೋಟಿಗಳ ಒಡೆಯನಾದ ಮುಂಬೈನ ಒಬ್ಬ ಕೊರೋನಾದಿಂದ ಸತ್ತ ನಂತರ ಅವನ ಹೆಣವನ್ನು ಮನೆಯ ಗೇಟಿನ ಎದುರು ಬಿಸಾಡಿ ಹೋಗಿದ್ದಂತಹ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವಾಗ ಈ ಸಾವು ಅದೆಷ್ಟು ಭೀಕರ ಎನ್ನಿಸಿಬಿಟ್ಟಿದ್ದಂತೂ ಸುಳ್ಳಲ್ಲ. ಹೀಗಾಗಿ ಈ ಸಂದರ್ಭದಲ್ಲಿ ನಾನು ಹೋದಮೇಲೆ ಇನ್ನೂ ಇರಬೇಕಿತ್ತು ಎನ್ನುವ ನಿಮ್ಮ ನಂಬಿಕೆಯೇ ಸಾರ್ಥಕ ಬದುಕಿನ ಕವಿತೆ ನಾವು ಸತ್ತ ನಂತರ ನಮ್ಮನ್ನು ಕ್ಷಣಮಾತ್ರವಾದರೂ ನೆನಪಿಸಿಕೊಂಡು ಇನ್ನೂ ಇರಬೇಕಿತ್ತು ಎಂದು ಯಾರಾದರೂ ಮನಃಪೂರ್ವಕವಾಗಿ ಅಂದುಕೊAಡರೆ ಅದೇ ದೊಡ್ಡ ಶೃದ್ಧಾಂಜಲಿ. ಇದರ ಹೊರತಾಗಿ ಮಾಡುವ ಯಾವ ಧಾರ್ಮಿಕ ಶ್ರಾದ್ಧ, ತಿಥಿಗಳೂ ನನ್ನನ್ನು ಈ ಇಹಲೋಕದಿಂದ ಮುಕ್ತಗೊಳಿಸಲಾರದು. ಕವಿತೆ ಬರೆಯುವುದು ಎಂದರೆ ಮರ‍್ನಾಲ್ಕು ಪುಟದ ಗದ್ಯ ಕವನ ಬರೆಯುವ ನನ್ನಂಥವರಿಗೆ ನಾಲ್ಕೇ ಸಾಲಿನಲ್ಲಿ ಹೇಳಬೇಕಾದುದ್ದನ್ನೆಲ್ಲ ಓದುಗರೆದೆಗೆ ದಾಟಿಸುವುದು ಒಂದು ಅಚ್ಚರಿಯ ವಿಷಯವೇ ಸರಿ.
ಬಾಗಿಲುಗಳ ಆಚೀಚೆ ಬಾಗಿಲುಗಳ ಆಚೀಚೆ ಏನೆಲ್ಲ ಇರಬಹುದು! ಹುಟ್ಟಿದ ಭಾವನೆಗಳನ್ನೆಲ್ಲ ಹುಷಾರಾಗಿ ನಿರ್ವಹಿಸುವ ಮನಸ್ಸಿನಂತೆಯೇ ಬಾಗಿಲುಗಳು ಕೂಡಾ. ಅಗತ್ಯಕ್ಕೆ, ಅವಶ್ಯಕತೆಗೆ ಅನುಗುಣವಾಗಿ ತೆರೆದುಕೊಳ್ಳುವ ಒಂದೊಂದು ಬಾಗಿಲಿಗೂ ಅದರದೇ ಆದ ಪುಟ್ಟ ಹೃದಯವೊಂದು ಇರಬಹುದು; ಆ ಹೃದಯದ ಬಡಿತಗಳೆಲ್ಲವೂ ಮನೆಯೊಳಗಿನ ಮೌನವನ್ನೋ, ಅಂಗಡಿಗಳ ವ್ಯವಹಾರವನ್ನೋ, ಸಿನೆಮಾ ಹಾಲ್ ನ ಕತ್ತಲೆಯನ್ನೋ, ರಸ್ತೆಯೊಂದರ ವಾಹನಗಳ ವೇಗವನ್ನೋ ತಮ್ಮದಾಗಿಸಿಕೊಳ್ಳುತ್ತ ಏರಿಳಿಯುತ್ತಿರಬಹುದು. ಹೀಗೆ ಎಲ್ಲ ಪ್ರಾಪಂಚಿಕ ನೋಟ-ಅನುಭವಗಳನ್ನು ತಮ್ಮದಾಗಿಸಿಕೊಳ್ಳುವ ಬಾಗಿಲುಗಳಿಗೆ ಒಮ್ಮೊಮ್ಮೆ ಕೃಷ್ಣ-ರಾಧೆಯರ, ಶಿವ-ಪಾರ್ವತಿಯರ ಹೃದಯಗಳೂ ಅಂಟಿಕೊಂಡು ಈ ಬಾಗಿಲು ಎನ್ನುವ ವಿಸ್ಮಯದ ಜಗತ್ತು ವಿಸ್ತರವಾಗುತ್ತ ಹೋಗುತ್ತದೆ. ಅವರವರ ಕಲ್ಪನೆಗಳಿಗನುಸಾರವಾಗಿ ತೆರೆದುಕೊಳ್ಳುವ ಆ ಜಗತ್ತಿನಲ್ಲಿ ವೆಲ್ ಕಮ್ ಎಂದು ಸ್ವಾಗತಿಸುವ ಡೋರ್ ಮ್ಯಾಟ್ ನಿಂದ ಹಿಡಿದು ನೀಳವಾದ ಬಳ್ಳಿಯ ನೇಯ್ಗೆಗಳ ಫ್ಲೋರ್ ಕುಷನ್ ಗಳವರೆಗೂ ಹೊಸಹೊಸ ಸ್ಪರ್ಶಗಳು ನಿಲುಕುತ್ತವೆ; ಚುಕ್ಕಿಯಿಟ್ಟು ಎಳೆದ ರಂಗೋಲಿಯ ಸಾಲುಗಳ ಮಧ್ಯೆ ಹುಟ್ಟಿದ ಹೂವೊಂದು ಡಿಸೈನರ್ ಬ್ಲೌಸ್ ಗಳನ್ನು ಅಲಂಕರಿಸುತ್ತದೆ; ತೋರಣದೊಂದಿಗೆ ತೂಗುವ ಮಲ್ಲಿಗೆ ಮಾಲೆಯ ಗಂಧ ಗಾಳಿ ಹರಿದಲ್ಲೆಲ್ಲ ಹರಿದು ಹೃದಯಗಳನ್ನು ಅರಳಿಸುತ್ತದೆ. ಈ ಹೃದಯಗಳಿಗೂ ಬಾಗಿಲುಗಳಿಗೂ ಒಂದು ರೀತಿಯ ವಿಶಿಷ್ಟವಾದ ಸಂಬಂಧವಿರುವಂತೆ ಭಾಸವಾಗುತ್ತದೆ. ಈ ಸಂಬಂಧವನ್ನು ಮನುಷ್ಯ ಸಹಜವಾದ ರಾಗ-ದ್ವೇಷಗಳನ್ನೊಳಗೊಂಡ ಎಲ್ಲ ಭಾವನೆಗಳೂ ಒಂದಿಲ್ಲೊಂದು ರೂಪದಲ್ಲಿ ಸಲಹುತ್ತಿರುತ್ತವೆ. ಸಂಜೆಯ ಸಮಯದಲ್ಲೊಮ್ಮೆ ಬಾಲ್ಯವನ್ನು ಸುಂದರವಾಗಿ ರೂಪಿಸಿದ ಪ್ರೈಮರಿಯ ಅಥವಾ ಹೈಸ್ಕೂಲಿನ ಅಂಗಳದಲ್ಲಿ ಹೋಗಿ ನಿಂತರೆ ಮುಚ್ಚಿದ ಬಾಗಿಲುಗಳ ಹಿಂದಿರುವ ಅದೆಷ್ಟೋ ಬಗೆಬಗೆಯ ಭಾವನೆಗಳು ಹೃದಯವನ್ನು ತಾಕುತ್ತವೆ. ಮನೆಯಿಂದ ಶಾಲೆಯವರೆಗಿನ ದೂರವನ್ನು ಇದ್ದೂ ಇಲ್ಲದಂತಾಗಿಸಿದ ಗೆಳತಿಯರ ಗುಂಪು, ಪೇಪರಿನಲ್ಲಿ ಸುತ್ತಿ ಕಂಪಾಸು ಬಾಕ್ಸಿನಲ್ಲಿ ಭದ್ರವಾಗಿಟ್ಟಿದ್ದ ಎರಡೇ ಎರಡು ಪೆಪ್ಪರಮೆಂಟುಗಳನ್ನು ಶರ್ಟಿನ ಮಧ್ಯದಲ್ಲಿಟ್ಟು ಎಂಜಲು ತಾಗದಂತೆ ಚೂರು ಮಾಡಿ ಎಲ್ಲರಿಗೂ ಹಂಚುತ್ತಿದ್ದ ಎರಡನೇ ಕ್ಲಾಸಿನ ಹುಡುಗ, ಮಾರ್ಕ್ಸ್ ಕಾರ್ಡುಗಳಿಂದ ಹಿಡಿದು ಶಾಲೆಯ ಜಾತಕವನ್ನೆಲ್ಲ ಬಚ್ಚಿಟ್ಟುಕೊಂಡಿರುತ್ತಿದ್ದ ದೊಡ್ಡದೊಡ್ಡ ಕೀಗೊಂಚಲುಗಳ ಕಬ್ಬಿಣದ ಕಪಾಟು, ತೆರೆದ ಕಿಟಕಿಯ ಬಾಗಿಲುಗಳಿಂದ ನುಸುಳಿ ನೋಟ್ ಬುಕ್ ನ ಪುಟಗಳನ್ನು ನೆನೆಸುತ್ತಿದ್ದ ಮಳೆಹನಿಗಳು, ಹೀಗೆ ಮುಚ್ಚಿದ ಬಾಗಿಲಾಚೆಗಿನ ನೆನಪುಗಳೆಲ್ಲವೂ ವಿಧವಿಧದ ಭಾವನೆಗಳನ್ನು ಹೊತ್ತು ಅಂಗಳಕ್ಕಿಳಿಯುತ್ತವೆ. ಆ ಎಲ್ಲ ಭಾವನೆಗಳನ್ನು ಹೊತ್ತ ಹೃದಯ ಭಾರವಾಗುವುದು ಅಥವಾ ಹೃದಯದ ಭಾರವನ್ನೆಲ್ಲ ಅಂಗಳದಲ್ಲಿಳಿಸಿ ಹಗುರವಾಗುವುದು ಅವರವರ ಗ್ರಹಿಕೆಗಳನ್ನು ಅವಲಂಬಿಸಿರುವಂಥದ್ದು. ಈ ಗ್ರಹಿಕೆ ಎನ್ನುವುದು ಕೆಲವೊಮ್ಮೆ ಯಾವ ತರ್ಕಕ್ಕೂ ನಿಲುಕದೆ ತನ್ನ ಪಾಡಿಗೆ ತಾನು ವಿಹರಿಸುತ್ತ, ಮನಸ್ಸಿಗೆ ತೋಚಿದಂತೆ ನಡೆದುಕೊಳ್ಳುತ್ತದೆ. ದೇವರ ಕುರಿತಾಗಿ ಒಬ್ಬೊಬ್ಬರ ಗ್ರಹಿಕೆಯೂ ಒಂದೊಂದು ತೆರನಾದದ್ದು. ಭಕ್ತಿರಸವನ್ನೇ ಗ್ರಹಿಕೆಯ ಅಂತಸ್ಸಾರವನ್ನಾಗಿಸಿಕೊಂಡ ಭಕ್ತನೊಬ್ಬ ತನ್ನ ದೈನಂದಿನ ಚಟುವಟಿಕೆಗಳೆಲ್ಲವನ್ನೂ ಬೇಸರವಿಲ್ಲದೆ ದೇವರಿಗೆ ಅರ್ಪಿಸಬಹುದು; ತನ್ನೆಲ್ಲ ಗ್ರಹಿಕೆಗಳ ಮೇಲೆ ನಿಯಂತ್ರಣ ಸಾಧಿಸಿದವನಿಗೆ ದೇವರ ಪರಿಕಲ್ಪನೆ ಕೇವಲ ನೆಮ್ಮದಿಯ ವಿಷಯವಾಗಿರಬಹುದು; ನಾಸ್ತಿಕನಿಗೆ ದೇವರು ಎನ್ನುವುದೊಂದು ಮೂರ್ಖತನದ ಆಲೋಚನೆಯೆನ್ನಿಸಬಹುದು. ಆದರೆ ದೇವಸ್ಥಾನದ ಗರ್ಭಗುಡಿಯ ಮುಚ್ಚಿದ ಬಾಗಿಲುಗಳ ಎದುರು ನಿಂತು ಬಾಗಿಲುಗಳು ತೆರೆಯುವ ಸಮಯಕ್ಕಾಗಿ ಕಾದುನಿಂತಾಗ, ವಿಚಿತ್ರವಾದ ಭಯ-ಭಕ್ತಿಗಳೆರಡೂ ಕೂಡಿದ ಭಾವನೆಯೊಂದು ಎಲ್ಲರನ್ನೂ ಆವರಿಸಿಕೊಳ್ಳುತ್ತದೆ. ಹಾಗೆ ಕಾದುನಿಂತ ಸಮೂಹದಲ್ಲಿ ಹೊಸದಾಗಿ ಮದುವೆಯಾದ ಜೋಡಿಯೊಂದು ನಸುನಾಚಿ ನಿಂತಿರುತ್ತದೆ; ಹರಕೆ ಹೊತ್ತು ಮಗುವನ್ನು ಪಡೆದ ತಾಯಿಯೊಬ್ಬಳು ಮಗುವಿನೊಂದಿಗೆ ಕೈ ಜೋಡಿಸಿ ನಿಂತಿರುತ್ತಾಳೆ; ವಾಸಿಯಾಗದ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಯೊಬ್ಬ ತನ್ನ ಔಷಧಿಗಳ ಕೈಚೀಲದೊಂದಿಗೆ ಕಳವಳದಲ್ಲಿಯೇ ಕಾಯುತ್ತಿರುತ್ತಾನೆ; ನಾಸ್ತಿಕನಾದ ಪತ್ರಿಕಾ ವರದಿಗಾರನೊಬ್ಬ ದೇವಸ್ಥಾನದ ಬಗ್ಗೆ ವರದಿಯೊಂದನ್ನು ಬರೆಯಲು ದೇವರ ಮುಖದರ್ಶನಕ್ಕಾಗಿ ಅದೇ ಸಾಲಿನಲ್ಲಿ ನಿಂತಿರುತ್ತಾನೆ. ಎಲ್ಲ ನಿರೀಕ್ಷೆಗಳ ಏಕೈಕ ಉತ್ತರವೆನ್ನುವಂತೆ ತೆರೆದುಕೊಳ್ಳುವ ಬಾಗಿಲುಗಳು ಎಲ್ಲರಿಗೂ ಅವರವರಿಗೆ ಬೇಕಾದ ಸಮಾಧಾನವನ್ನು ಒದಗಿಸುತ್ತವೆ. ಮುಚ್ಚಿದ ಬಾಗಿಲುಗಳ ಹಿಂದೆ ಇದ್ದ ದೇವರು ಮುಂಭಾಗದಲ್ಲಿ ಕಾಯುತ್ತಿದ್ದವರೊಂದಿಗೆ ಮುಖಾಮುಖಿಯಾಗಿ ಎಲ್ಲರ ಮನಸ್ಸಿನ ತಲ್ಲಣಗಳನ್ನೂ ತನ್ನದಾಗಿಸಿಕೊಳ್ಳುತ್ತಾನೆ. ಹೀಗೆ ಎಲ್ಲರ ತಲ್ಲಣಗಳನ್ನು ತಣಿಸುವ, ಕಳವಳಗಳನ್ನು ಕಡಿಮೆ ಮಾಡುವ, ಸಮಾಧಾನದ ಸಾಧನಗಳಾಗುವ ಬಾಗಿಲುಗಳು ತಮ್ಮ ಹೃದಯದ ಭಾರವನ್ನೆಂದೂ ಇನ್ನೊಬ್ಬರಿಗೆ ವರ್ಗಾಯಿಸುವುದಿಲ್ಲ. ಗಾಳಿಯೊಂದಿಗೆ ಬಾಗಿಲವರೆಗೂ ತಲುಪುವ ಮಳೆಯ ನೀರು ಒಳಗಿಳಿಯದಂತೆ ತನ್ನೆಲ್ಲ ಶಕ್ತಿಯನ್ನೂ ಬಳಸಿ ತಡೆಹಿಡಿಯುವ ಬಾಗಿಲು ಮನೆಯೊಳಗಿನ ಜೀವಗಳನ್ನು ಬೆಚ್ಚಗಿಡುತ್ತದೆ; ಕೊರೆವ ಚಳಿಯನ್ನು, ಬೇಸಿಗೆಯ ಸೆಕೆಯನ್ನು ತನ್ನದಾಗಿಸಿಕೊಂಡು ತನ್ನನ್ನು ನಂಬಿದವರ ನಂಬಿಕೆಯನ್ನು ಕಾಪಾಡುತ್ತ ದೇವನೊಬ್ಬನ ಇರುವಿಕೆಯ ಸಾಕ್ಷಾತ್ಕಾರವನ್ನು ಗಟ್ಟಿಗೊಳಿಸುತ್ತದೆ. ನಂಬಿಕೆಯ ಪರಿಕಲ್ಪನೆಯೂ ಬಾಗಿಲುಗಳೊಂದಿಗೆ ತನ್ನದೇ ಆದ ಸಂಬಂಧವನ್ನು ಬೆಳಸಿಕೊಂಡಿದೆ. ರಾತ್ರಿಯಾಯಿತೆಂದು ಕದ ಮುಚ್ಚುವ ಪ್ರತಿ ಮನಸ್ಸಿನಲ್ಲಿಯೂ ಬೆಳಗು ಮೂಡಿ ಬಾಗಿಲು ತೆರೆಯುತ್ತದೆ ಎನ್ನುವ ನಂಬಿಕೆ ಕೆಲಸ ಮಾಡಿದರೆ, ನಗರದ ಬಾಡಿಗೆ ಮನೆಯಲ್ಲಿನ ಗೃಹಿಣಿಯೊಬ್ಬಳು ಗಂಡನನ್ನು ಕೆಲಸಕ್ಕೆ ಕಳುಹಿಸಿ ಬಾಗಿಲು ಮುಚ್ಚಿ ಸಂಜೆ ಆತ ಮನೆಗೆ ಬರುವ ನಂಬಿಕೆಯಲ್ಲಿಯೇ ತರಕಾರಿ ಹೆಚ್ಚುತ್ತಾಳೆ; ಮಗುವನ್ನು ಹತ್ತಿಸಿಕೊಂಡ ಸ್ಕೂಲ್ ವ್ಯಾನಿನ ಬಾಗಿಲಿನೊಂದಿಗೆ ಮಗುವಿನ ಭವಿಷ್ಯದ ನಂಬಿಕೆಯೊಂದು ಚಲಿಸಿದರೆ, ದಿನಸಿಯಂಗಡಿಯ ಬಾಗಿಲು ತೆರೆವ ಹುಡುಗನೊಬ್ಬ ಗಿರಾಕಿಗಳನ್ನು ನಂಬಿಕೊಂಡು ಅಗರಬತ್ತಿಯನ್ನು ಹಚ್ಚುತ್ತಾನೆ; ಮಲ್ಟಿಪ್ಲೆಕ್ಸ್ ನ ಎಸಿ ಥಿಯೇಟರಿನ ಬಾಗಿಲುಗಳು ಯಾರೋ ಸಮುದ್ರದಂಚಿಗೆ ಕೂತು ಬರೆದ ಕಥೆಯನ್ನು ನಂಬಿಕೊಂಡರೆ, ಬಂಗಾರದಂಗಡಿಯ ಬಾಗಿಲುಗಳು ಇನ್ಯಾರದೋ ಮದುವೆಯನ್ನು ನಂಬಿಕೊಂಡು ತೆರೆದುಕೊಳ್ಳುತ್ತವೆ. ಹೀಗೆ ನೇರ ಸಂಬಂಧವೂ ಇಲ್ಲದ, ಪರಿಚಯವೂ ಇಲ್ಲದ ಅದೆಷ್ಟೋ ನಂಬಿಕೆಗಳನ್ನು ಬಾಗಿಲುಗಳು ಅರಿವಿಲ್ಲದೆಯೇ ಸಲಹುತ್ತಿರುತ್ತವೆ. ಸಂಬಂಧಗಳನ್ನು ಬಾಗಿಲುಗಳು ಪೊರೆಯುವ ರೀತಿಯೂ ವಿಶಿಷ್ಟವಾದದ್ದು. ಹೆರಿಗೆ ಆಸ್ಪತ್ರೆಯ ಮುಚ್ಚಿದ ಬಾಗಿಲುಗಳು ತೆರೆಯುತ್ತಿದ್ದಂತೆಯೇ, ಮಗುವಿನ ಅಳುವೊಂದು ಅಪ್ಪ-ಮಗುವಿನ ಸಂಬಂಧವನ್ನು ಹುಟ್ಟುಹಾಕುತ್ತದೆ. ಹಾಗೆ ಹುಟ್ಟಿದ ಸಂಬಂಧ ಮನೆಯ ಬಾಗಿಲನ್ನು ಹಾದು, ಶಾಲೆಯ ಬಾಗಿಲನ್ನು ತಲುಪಿ, ಕಾಲೇಜು-ಯೂನಿವರ್ಸಿಟಿಗಳ ಕದ ತಟ್ಟಿ, ಹೊಸಹೊಸ ಸಂಬಂಧಗಳೊಂದಿಗೆ ಬೆಸೆದುಕೊಳ್ಳುತ್ತ ಹೊಸತನವನ್ನು ಕಂಡುಕೊಳ್ಳುತ್ತದೆ. ಅಳುತ್ತಲೇ ಮಗಳನ್ನು ಗಂಡನ ಮನೆಯ ಬಾಗಿಲಿಗೆ ಕಳುಹಿಸಿಕೊಡುವ ಅಪ್ಪ, ನಗುನಗುತ್ತ ಸೊಸೆಯನ್ನು ತೆರೆದ ಬಾಗಿಲಿನಿಂದ ಸ್ವಾಗತಿಸುತ್ತಾನೆ. ಹೀಗೆ ಹೆರಿಗೆ ಆಸ್ಪತ್ರೆಯ ಬಾಗಿಲಿನಿಂದ ಹೊರಬಂದ ಮಗುವಿನ ಅಳು ಸಂತೋಷವನ್ನು ಹಂಚಿ, ಬೆಳವಣಿಗೆ-ಬದಲಾವಣೆಗಳನ್ನು ತನ್ನದಾಗಿಸಿಕೊಳ್ಳುತ್ತ, ಸಂಬಂಧಗಳಿಗೊಂದು ಹೊಸ ಸ್ವರೂಪವನ್ನು ಒದಗಿಸುತ್ತದೆ. ಆಫೀಸಿನ ಕೊಟೇಷನ್, ಪ್ರೊಜೆಕ್ಟ್ ಗಳ ಗೌಪ್ಯತೆಯನ್ನು ಕಾಪಾಡಲು ತಾವಾಗಿಯೇ ಮುಚ್ಚಿಕೊಳ್ಳುವ ಬಾಗಿಲುಗಳ ಆಚೀಚೆ ಅಕ್ಕ-ತಮ್ಮಂದಿರು, ಜೀವದ ಗೆಳತಿಯರು, ಸಿಗರೇಟಿಗೆ ಜೊತೆಯಾಗುವ ಸ್ನೇಹಿತರು ವಯಸ್ಸು ಮರೆತು ಒಂದಾಗುತ್ತಾರೆ; ಲಿವ್ ಇನ್ ಸಂಬಂಧಗಳು, ದಾಂಪತ್ಯಗಳು, ಭಗ್ನಪ್ರೇಮಗಳು ಎಲ್ಲವುಗಳಿಗೂ ಬಾಗಿಲುಗಳು ತೆರೆದ ಹೃದಯದಿಂದ ಸ್ಪಂದಿಸುತ್ತವೆ. ರೆಸ್ಟ್ ರೂಮಿನ ಮುಚ್ಚಿದ ಬಾಗಿಲುಗಳ ಹಿಂದೆ ಉದ್ದನೆಯ ಕನ್ನಡಿಯ ಮುಂದೆ ಲಿಪ್ ಸ್ಟಿಕ್ ಸರಿಮಾಡಿಕೊಳ್ಳುತ್ತ ನಿಂತ ಹುಡುಗಿಯೊಬ್ಬಳು ವೀಕೆಂಡ್ ಪಾರ್ಟಿಯ ಬಗ್ಗೆ ಯೋಚಿಸಿದರೆ, ಕ್ಯಾಂಟೀನಿನ ಅಡುಗೆಮನೆಯ ಬಾಗಿಲಿನ ಹಿಂದೆ ಮಸಾಲೆದೋಸೆ ರೆಡಿಯಾಗುತ್ತಿರುತ್ತದೆ. ಶಿಫ್ಟ್ ಮುಗಿದು ಫ್ಲೋರಿನ ಲೈಟುಗಳೆಲ್ಲ ತಾವಾಗಿಯೇ ಆರಿಹೋದ ಮೇಲೂ ಬಾಗಿಲುಗಳು ಮಾತ್ರ ಡ್ರಾದಲ್ಲಿನ ಡಾಕ್ಯುಮೆಂಟುಗಳನ್ನು, ಮೀಟಿಂಗ್ ರೂಮಿನ ಮಾತುಕತೆಗಳನ್ನು ಜತನದಿಂದ ಕಾಪಾಡುತ್ತ ಮುಂದಿನ ಪಾಳಿಗಾಗಿ ಕಾಯುತ್ತಿರುತ್ತವೆ. ಆಚೀಚೆ ಸರಿದಾಡುವ ಶಾಪಿಂಗ್ ಮಾಲ್ ನ ಗಾಜಿನ ಬಾಗಿಲುಗಳ ಹಿಂದೆ ಅತ್ತರಿನ ಬಾಟಲಿಯೊಂದು ಗಿಫ್ಟಾಗಿ ಸಂಬಂಧಗಳನ್ನು ಸಲಹಿದರೆ, ಬ್ರ್ಯಾಂಡೆಡ್ ಚಪ್ಪಲಿಯೊಂದು ಪಾದಗಳ ಯೋಗಕ್ಷೇಮ ವಿಚಾರಿಸಿಕೊಳ್ಳುತ್ತದೆ; ವಿದೇಶದ ಕನಸು ಹೊತ್ತ ಕಾರ್ಪೊರೇಟ್ ಉದ್ಯೋಗಿಯೊಬ್ಬ ಟ್ರಾವೆಲ್ ಬ್ಯಾಗ್ ಖರೀದಿಸಿದರೆ, ನಿವೃತ್ತ ಪ್ರಾಧ್ಯಾಪಕರೊಬ್ಬರು ಪುಸ್ತಕದಂಗಡಿಯ ಬಾಗಿಲನ್ನು ತಲುಪುತ್ತಾರೆ. ಹೀಗೆ ಹೊಸ ಸಂಬಂಧಗಳಿಗೆ ತೆರೆದುಕೊಳ್ಳುತ್ತ, ಮುಗಿದುಹೋದ ಸಂಬಂಧಗಳ ನೆನಪುಗಳನ್ನು ನವೀಕರಿಸುತ್ತ, ಅಗತ್ಯಬಿದ್ದಾಗ ಗುಟ್ಟುಗಳನ್ನು ಕಾಪಾಡುತ್ತ, ತಮ್ಮ ಕರ್ತವ್ಯಗಳನ್ನೆಲ್ಲ ಚಾಚೂತಪ್ಪದೆ ನಿರ್ವಹಿಸುವ ಬಾಗಿಲುಗಳ ಆಚೀಚೆ ಬದುಕುಗಳು ನಿರಾಯಾಸವಾಗಿ ಕಾಲು ಚಾಚುತ್ತವೆ. ******************* ಲೇಖಕರ ಬಗ್ಗೆ ಎರಡು ಮಾತು: ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ
ಗಝಲ್
ಗಝಲ್ ಭಾಗೆಪಲ್ಲಿ ಕೃಷ್ಣಮೂರ್ತಿ ನೀ ದರ್ಷನಕೆ ಸಿಗದೆ ಕಾಡಿ ಕಾಡಿ ನೋಯಿಸುವೆನಿನ್ನ ಭಾವ ಚಿತ್ರವ ನೀಡದೆ ಕಾಡಿ ನೋಯಿಸುವೆ ನಮ್ಮ ಅಗಲಿಕೆ ಇಷ್ಟು ಧೀರ್ಘ ಕಾಲ ಆಗಿರುವಾಗಕನಸಲೂ ಅಪ್ಪಲು ಸಿಗದೆ ಹಿಂಸಿಸಿ ನೋಯಿಸುವೆ ನಮ್ಮ ಪ್ರೀತಿಯ ವಿಷಯ ಎಷ್ಟು ಗೋಪ್ಯ ವೆನೆನನ್ನ ಅಂತಿಮ ಕ್ಷಣವೂ ಅರಿಯದೆ ಬಹಳ ನೋಯಿಸುವೆ ಬೇರ್ಪಡಿಕೆಯಲಿ ನಮ್ಮ ಪ್ರೀತಿ ಇಷ್ಟು ಗಾಢವಾಗಿರೆಸೇರ್ಪಡಿಕಯ ಊಹೆ ಇದ್ದೂ ಹೀಗೇಕೆ ನೋಯಿಸುವೆ ಯಾವುದಾದರೂ ಬಹನೇ ಹುಡುಕಿ ಭೇಟಿಯಾಗು ಬಾಸುಮ್ಮನೆ ಹೆದರಿ ನೀನೂ ನೊಂದು ನನ್ನನೂ ನೋಯಿಸುವೆ ಕಾಲಕೂಡಿ ಬರಬೇಕೆಂದು ಕಾರಣ ಹೇಳುತ ‘ಮಂಕೇ ‘ಕೈಲಿರುವ ಅದ್ಭುತ ಕ್ಷಣ ಕಳೆದು ವೃಥಾ ನೋಯಿಸುವೆ. *************************
ಗಮ್ಯದಾಚೆ
ಕವಿತೆ ಗಮ್ಯದಾಚೆ ವಿಜಯಶ್ರೀ ಹಾಲಾಡಿ ಧೂಪ. ಹಿಡಿದು ಊರಿಡೀಘಮಲು ಹತ್ತಿಸುತ್ತಅಲೆವ ಅವಳಕೋಮಲ ಪಾದಕ್ಕೆತುಂಬು ಹೆರಳ ಗಂಧಕ್ಕೆಜೀವವಿದೆ. ….ಮಣ್ಣಿನಂತೆ ನೀರಿನಂತೆಕಡಲು -ಗಾಳಿಯಂತೆ ನಾರಿನ ಬೇರು ಅರೆಯುತ್ತಅರೆಮುಚ್ಚಿದ ಕಣ್ಣೆವೆಆಳದ ಹೊಳಪಿನೊಂದಿಗೆಮಾತಿಗಿಳಿಯುತ್ತಾಳೆತುಟಿ ಲಘು ಕಂಪಿಸುತ್ತವೆಅವಳ ಮೈಮಾಟಕ್ಕೆಚಿರ ಯೌವನಕ್ಕೆಮಿಂಚುಹುಳುಗಳ ಮಾಲೆ-ಯೇ ಕಾಣ್ಕೆಯಾಗುತ್ತದೆ. ಸಂಜೆಸೂರ್ಯನ ಬೆವರೊರೆಸಿಮನೆಗೆ ಹೆಜ್ಜೆಹಾಕುವ ನನ್ನಕಂಡು ಅವಳ ಕಾಲ್ಗೆಜ್ಜೆನಸು ಬಿರಿಯುತ್ತವೆಗುಡಾರದೊಳಗಿಂದ ತುಸುಬಾಗಿದ ಅವಳ ಸ್ಪರ್ಶಕ್ಕೆದಿನವೂ ಹಾತೊರೆಯುತ್ತೇನೆಗುನುಗಿಕೊಳ್ಳುವ ಹಾಡೆಂಬನೀರವಕ್ಕೆ ಪದವಾಗುತ್ತೇನೆ‘ಲಾಟೀನು ಬೆಳಗುವುದೇಕೆಇವಳೇ ಇಲ್ಲವೇ ‘ ಎಂದುಫಕ್ಕನೆ ತಿರುಗುವಾಗೊಮ್ಮೆಗುಡುಗುಡಿಯ ಸೇದಿನಿರುಮ್ಮಳ ಹೀರುತ್ತಾಳೆಒದ್ದೆಮಳೆಯಾದ ನಾನುಛತ್ರಿ ಕೊಡವುತ್ತ ಕೈಚಾಚಿದರೆ ತುಸುವೇನಕ್ಕುಬಿಡುತ್ತಾಳೆ.ಡೇರೆಯೊಳಗಿನ ಮಿಶ್ರಘಮಕ್ಕೆ ಸೋತು ಅವಳಅಲೆ ಅಲೆ ಸೆರಗ ಚುಂಗನ್ನು ಸೋಕಿ ಬೆರಳುಹಿಂತೆಗೆಯುತ್ತೇನೆ …ನಿಡಿದು ಉಸಿರಬಿಸಿಗೆ ಬೆಚ್ಚುತ್ತ ! ದಿನವೊಂದು ಬರುತ್ತದೆಹಿಡಿ ಗಂಟು ಇಟ್ಟಿದ್ದೇನೆಹೂವಿನಾಚೆಕಣಿವೆಯಾಚೆಅವಳ ಜೊತೆಪಯಣಿಸಿಯೇತೀರುತ್ತೇನೆ ! *********************************************************** ಚಿತ್ರಕೃಪೆ:ವಿಜಯಶ್ರೀ ಹಾಲಾಡಿ
ಶಿಶುತನದ ಹದನದೊಳು ಬದುಕಲೆಳಸಿ
ಪ್ರಬಂಧ ಶಿಶುತನದ ಹದನದೊಳು ಬದುಕಲೆಳಸಿ ಡಾ.ಲಕ್ಷ್ಮಿನಾರಾಯಣ ಭಟ್ ಈ ಸುಂದರ ಮುಂಜಾನೆ ನನಗೆ ತುಂಬಾ ಪ್ರಿಯವಾದ ಹಾಡೊಂದರ ಸಾಲುಗಳು ನನ್ನ ಮನ:ಪಟಲದಲ್ಲಿ ಭಾವ ತರಂಗಗಳನ್ನು ಎಬ್ಬಿಸುತ್ತಿವೆ. ನಾನು ಹಾಡುಗಾರನಲ್ಲದಿದ್ದರೂ, ಈ ಸಾಲುಗಳಿಗೆ ದಯವಿಟ್ಟು ಕಿವಿಗೊಡಿ. ನೆನಪಿದೆಯೇ ನಿನಗೆ? ನಾವಿಬ್ಬರೂ ಅಂದು ಹೊಳೆಯ ದಡದಲ್ಲಿ ನಿಂದು ಮರಳು ಮನೆಗಳ ಕಟ್ಟಿ ಆಟವಾಡಿದ್ದು ನಿನಗೆ ನೆನಪಿದೆಯೇ ನಿನಗೆ? ಬಾ ಗೆಳೆಯ ಬಾರಯ್ಯಾ, ಆಟವಾಡೋಣ ಬಾಲ್ಯದ ನೆನಪನು ಮರಳಿ ಕಟ್ಟೋಣ. ನೆನಪಿದೆಯೇ ನಿನಗೆ? ನನಗೆ ಬೇಜಾರಾದಾಗಲೆಲ್ಲಾ ಈ ಸಾಲುಗಳನ್ನು ಗುಣುಗುಣಿಸುತ್ತೇನೆ. ಆಗ ಬಾಲ್ಯದ ದಿನಗಳು ಮತ್ತೆ ಜೀವ ತಳೆಯುತ್ತವೆ. ಕನಸುಗಳು ಗರಿಬಿಚ್ಚಿ ಕುಣಿಯತೊಡಗುತ್ತವೆ. ನೆನಪಿನ ದೋಣಿಯಲ್ಲಿ ತೇಲುತ್ತಾ, ಕಾಲಾತೀತ ಭಾವಪ್ರಪಂಚಕ್ಕೆ ಮನಸ್ಸು ತೆರೆದುಕೊಳ್ಳುತ್ತದೆ. ಆದರೆ ಯಾವುದೇ ದಿನಪತ್ರಿಕೆಯ ಮುಖಪುಟದ ಸುದ್ದಿ, ಅಂತೆಯೇ ಟಿವಿ ಚ್ಯಾನೆಲ್-ಗಳ ಆರ್ಭಟ ಓದಿದೊಡನೆ/ನೋಡಿದೊಡನೆ ಕನಸಿನ ಈ ಸುಂದರ ಲೋಕ ನುಚ್ಚುನೂರಾಗಿ ಹೋಗುತ್ತದೆ. ದುರಂತಗಳ ಸರಮಾಲೆ –- ರಾಜಕೀಯ ದೊಂಬರಾಟ, ರೇಪ್, ಕೊಲೆ, ಸುಲಿಗೆ, ವಂಚನೆ, ಭಯೋತ್ಪಾದನೆ, ಅಪಘಾತ, ಈಗಂತೂ ಕೊರೊನಾ ಕೊರೊನಾ ಸಹಸ್ರನಾಮ ಕಣ್ಣಿಗೆ ಹೊಡೆಯುವಂತೆ ರಾರಾಜಿಸುತ್ತಿರುತ್ತದೆ. ಕೇವಲ ಯೋಚಿಸಿದರೂ ಭಯ, ಜಿಗುಪ್ಸೆ ಹುಟ್ಟಿಸುವ ಮಾನವನ ಅತೀ ಆಸೆ, ತೀರದ ದಾಹ -– ಹಣ, ಅಧಿಕಾರ, ಭೋಗಲಾಲಸೆಗಳೇ ನಮ್ಮನ್ನು ಈ ದುಃಸ್ಥಿತಿಗೆ ದೂಡಿವೆ. ಇದಕ್ಕೆ ಕಾರಣ, ಪರಿಹಾರ ಏನೆಂದು ಯೋಚಿಸಬೇಡವೇ? ಜೀವ ಪ್ರಪಂಚದಲ್ಲಿ ಮನುಷ್ಯ ಮಾತ್ರ ಕನಸು ಕಾಣಬಲ್ಲ, ನಗಬಲ್ಲ ಅದ್ಭುತ ಸಾಮರ್ಥ್ಯ ಪಡೆದಿದ್ದಾನೆ. ಇತರ ಯಾವ ಪ್ರಾಣಿಯೂ – ಪ್ರಾಣ ಇರುವುದೆಲ್ಲವೂ ‘ಪ್ರಾಣಿ’ಯೇ – ನಗುವುದೂ ಇಲ್ಲ, ಕನಸು ಕಾಣುವುದೂ ಇಲ್ಲ. ಹುಲಿ, ಸಿಂಹಗಳಂತಹ ಕೂರ ಪ್ರಾಣಿಗಳೂ ಕೂಡಾ ಭಾವನೆಗಳಿಗೆ, ನಾವು ತೋರುವ ಪ್ರೀತಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತವೆ. ಇದಕ್ಕೆ ಏಕೈಕ ಅಪವಾದವೆಂದರೆ ಮನುಷ್ಯ ಪ್ರಾಣಿ ಮಾತ್ರ! ಪ್ರೀತಿಗೆ ದ್ರೋಹ; ನಂಬಿಕೆ, ವಿಶ್ವಾಸಕ್ಕೆ ಪ್ರತಿಯಾಗಿ ಮೋಸ, ದಗಲ್ಬಾಜಿ ಎಲ್ಲವನ್ನೂ – ತನ್ನವರನ್ನೂ ಸೇರಿಸಿ – ಭಾವನಾರಹಿತವಾಗಿ, ಅಷ್ಟೇ ಚಾಣಾಕ್ಷತನದಿಂದ ಮನುಷ್ಯ ಮಾಡಬಲ್ಲ. ಇಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಾದದ್ದು ಏನು ಎಂದರೆ ಯಾವಾಗ ಮನುಷ್ಯ ಕನಸು ಕಾಣುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾನೋ ಆವಾಗಲೆಲ್ಲಾ ಭಾವನೆಗಳಿಗೆ ಎರವಾಗುತ್ತಾನೆ. ಎಲ್ಲಿಲ್ಲದ ದುರಂಹಕಾರ ಆತನ ರಾಕ್ಷಸೀ ಪ್ರವೃತ್ತಿಯನ್ನು ಬಡಿದೆಬ್ಬಿಸಿ, ವಿನಾಶದಂಚಿಗೆ ಆತನನ್ನು ತಳ್ಳುತ್ತದೆ. ಸುನಾಮಿ, ಭೂಕಂಪಗಳಂತಹ ಪ್ರಕೃತಿ ವಿಕೋಪಗಳು, ಹಾಗೆಯೇ ನಮ್ಮನ್ನೆಲ್ಲಾ ಕಾಡುತ್ತಿರುವ ಕೊರೊನಾ ವೈರಸ್-ನಂತಹ ಮಹಾವ್ಯಾಧಿಜನಕ ಹೆಮ್ಮಾರಿಗಳು ಉಂಟುಮಾಡುವ ವಿನಾಶಕ್ಕಿಂತಲೂ ಹೆಚ್ಚು ದುರಂತವನ್ನು ಕೆಟ್ಟ ಮನಸ್ಸಿನ ಕೇವಲ ಒಬ್ಬನೇ ಒಬ್ಬ ಮನುಷ್ಯ ಮಾಡಬಲ್ಲ! ಇದರಿಂದ ಬಿಡುಗಡೆ ಬೇಕಾದರೆ, ಮನುಷ್ಯ ಮತ್ತೆ ತನ್ನ ಬಾಲ್ಯದ ಮುಗ್ಧ, ಸ್ನಿಗ್ಧ ಭಾವಪ್ರಪಂಚಕ್ಕೆ ಹಿಂತಿರುಗಬೇಕು. ಸಹಜ ಮುಗ್ಧತೆ, ನಗು, ನಲಿವು, ಸಂಭ್ರಮಗಳ ಆ ದಿನಗಳನ್ನು ಪುನಃ ಜೀವಂತಗೊಳಿಸಬೇಕು. ಕನಸು ಕಾಣಬೇಕು. ಇದಕ್ಕೆ ಪೂರಕವಾಗಿ ಸಾಹಿತ್ಯ, ಸಂಗೀತ, ನಾಟಕ ಇತ್ಯಾದಿ ಭಾವ ಪ್ರಧಾನ ಮಾಧ್ಯಮಗಳಲ್ಲಿ ಅಭಿರುಚಿ ಬೆಳೆಸಿಕೊಂಡು ಮನಸ್ಸನ್ನು ಉದಾತ್ತ ಭಾವಗಳತ್ತ ಹರಿಯಬಿಡಬೇಕು. ಕನಸು ಕಾಣುವ, ಶಿಶುವಿನೋಪಾದಿಯಲ್ಲಿ ನಿರ್ಮಲವಾಗಿ ನಗುವ ಸಹಜ ಪ್ರವೃತ್ತಿಗೆ ಮತ್ತೆ ಮರಳಬೇಕು. ಪ್ರಸಿದ್ಧ ಆಂಗ್ಲ ದಾರ್ಶನಿಕ ಕವಿ ವಿಲಿಯಂ ಬ್ಲೇಕ್-ನ (೧೭೫೭-೧೮೨೭) ‘Auguries of Innocence’ ಎಂಬ ಕವನದಲ್ಲಿ ಬರುವ ಈ ಸಾಲುಗಳನ್ನು ಗಮನಿಸಿ: It is right it should be so Man was made for Joy & Woe And when this we rightly know Thro the World we safely go ಕಷ್ಟ, ಸುಖಗಳನ್ನು ಅನುಭವಿಸಲೆಂದೇ ದೇವರು ಮನುಷ್ಯನನ್ನು ಸೃಷ್ಟಿಸಿ ಈ ಪ್ರಪಂಚಕ್ಕೆ ತಂದ. ಇದರಲ್ಲಿ ಮನುಷ್ಯನಿಗೆ ಆಯ್ಕೆಯ ಅವಕಾಶವೇ ಇಲ್ಲ. ಎರಡನ್ನೂ ಅನುಭವಿಸಬೇಕು. ಹಾಗಿದ್ದಾಗ ಅದನ್ನು ಸಮಚಿತ್ತದಿಂದ ಸ್ವೀಕರಿಸುವುದೊಂದೇ ದಾರಿ. ಮಗುವಿಗೂ, ಅನುಭಾವಿಗೂ ಇರುವ ಸಾಮ್ಯತೆ ಎಂದರೆ ಈ ಸಮಚಿತ್ತತೆ; ಅನುಭಾವಿ ನಕ್ಕು ಸುಮ್ಮನಾಗುತ್ತಾನೆ, ಮಗು ಅತ್ತು, ನಗುತ್ತದೆ. ಮರುಕ್ಷಣ ನಕ್ಕದ್ದೇಕೆ, ಅತ್ತದ್ದೇಕೆ ಎಂಬುದನ್ನು ಮರೆತುಬಿಡುತ್ತದೆ. ದೊಡ್ಡವರು ನಾವು ಹೀಗಲ್ಲ. ಎಂದೋ ಆಗಿ ಹೋದ ಘಟನೆಗಳನ್ನು ಮತ್ತೆ ಮತ್ತೆ ನೆನಪಿಸಿಕೊಂಡು ನಿತ್ಯ ದುಃಖಿಗಳಾಗುತ್ತೇವೆ. ವಿಸ್ಮಯ ಎಂದರೆ ಇದು ‘ಸುಖದ ಕ್ಷಣಗಳಿಗೆ’ ಅನ್ವಯವಾಗುವುದಿಲ್ಲ. ಎಂದೋ ಅನುಭವಿಸಿದ ಸುಖವನ್ನು ಮತ್ತೆ ಮತ್ತೆ ನೆನಪಿಸಿಕೊಂಡರೆ ಆಗುವುದು ದುಃಖವೇ ಹೊರತು ಸಂತೋಷವಲ್ಲ! ಬ್ಲೇಕ್-ನ ಕವನದ ಇನ್ನೊಂದೆರಡು ಸಾಲುಗಳನ್ನು ನೋಡೋಣ: The Childs Toys & the Old Mans Reasons Are the Fruits of the Two seasons ಮಗುವಿನ ಆಟಿಕೆಗಳೇ ಅದರ ಪ್ರಪಂಚ ಹಾಗೂ ಸರ್ವಸ್ವ. ಮಲಗಿ ನಿದ್ರಿಸುವಾಗಲೂ ಒಂದು ಗೊಂಬೆಯನ್ನೋ, ಅಥವಾ ಇನ್ಯಾವುದಾರೊಂದು ಆಟದ ವಸ್ತುವನ್ನೋ ಎದೆಗವಚಿಕೊಂಡು ಮಗು ಸುಖ ನಿದ್ರೆಗೆ ಜಾರುವುದನ್ನು ನಾವೆಲ್ಲಾ ಕಂಡವರೇ. ಅಂತೆಯೇ ಜೀವನ ಸಂಧ್ಯಾಕಾಲದಲ್ಲಿರುವ ಒಬ್ಬ ಹಿರಿಯ ತನ್ನ ಅನುಭವದಿಂದ ಮಾಗಿ, ಹಣ್ಣಾಗಿ, ಪಕ್ವವಾಗಿರುತ್ತಾನೆ. ಈಗ ಆ ಹಿರಿಯನ ನಿಜವಾದ ಗಳಿಕೆ, ಆಸ್ತಿ ಎಂದರೆ ಈ ಅನುಭವದ ಮೂಟೆಗಳೇ. ಅವು ಸುಖಾಸುಮ್ಮನೆ ಬಂದವುಗಳಲ್ಲ. ಪ್ರತಿಯೊಂದು ಅನುಭವದ ಹಿಂದೆಯೂ ಒಂದೊಂದು ಕಾದಂಬರಿಗಾಗುವಷ್ಟು ಸರಕು ಇದ್ದಿರಬೇಕು. ಅವನ ಮುಖದ ಸುಕ್ಕುಗಳೇ ಅದಕ್ಕೆ ಸಾಕ್ಷಿ. ಹಲ್ಲಿಲ್ಲದ ಬೊಚ್ಚು ಬಾಯಲ್ಲಿ ಅವನು ನಗುವಾಗ ಅದೆಷ್ಟೋ ಅನುಭವಗಳು ಸದ್ದಿಲ್ಲದೇ ತೂರಿಹೋಗುತ್ತಾವೋ ಏನೋ! ವಾರ್ಧಕ್ಯ ಎಂದರೆ ಮತ್ತೆ ಶಿಶುತನಕ್ಕೆ ಜಾರುವುದು: ಹಣ್ಣೆಲೆಯನ್ನು ನೋಡಿ ಚಿಗುರೆಲೆ ಹಾಸ್ಯ ಮಾಡುವುದೂ ಉಂಟು. ಸಂದಿಗ್ಧ ಕಾಲದಲ್ಲಿ ಕಿರಿಯನಾದವನು ಹಿರಿಯನೊಡನೆ ಪರಾಮರ್ಶೆ ಮಾಡುವುದೂ ಉಂಟು. ತೀರಾ ಚಿಕ್ಕವನಾದರೆ ಕಥೆ ಹೇಳು ಎಂದು ಗೋಗರೆಯುವುದೂ ಉಂಟು. ಹೀಗೆ ಮಗುವಿಗೂ ಮುದಿಯನಿಗೂ ಬಿಡಿಸಲಾರದ ನಂಟು ಉಂಟೇ ಉಂಟು. ಮಗುವಿಗೆ ಆಟವಾಡಲು ಓರಗೆಯ ಸಮವಯಸ್ಕ ಮಕ್ಕಳಿಲ್ಲದಿದ್ದರೆ ಒಳ್ಳೆಯ ಜತೆ ಅಂದರೆ ಆಜ್ಜ, ಅಜ್ಜಿಯೇ ಅಲ್ಲವೇ? ಏಕೆಂದರೆ ಇಬ್ಬರಿಗೂ ಸಮಯದ ಒತ್ತಡ, ಧಾವಂತ ಇಲ್ಲ. ಎಲ್ಲವನ್ನೂ ನಿಧಾನವಾಗಿ ಮಾಡಿದರಾಯಿತು, ಸಲ್ಪ ಹೆಚ್ಚು ಕಡಿಮೆಯಾದರೂ ಆಕಾಶ ಕಳಚಿ ಬೀಳುವುದಿಲ್ಲ ಎನ್ನುವ ವಾಸ್ತವ ಹಿರಿಯನಿಗೆ ಅನುಭವದಿಂದ ದಕ್ಕಿದರೆ, ಮಗುವಿಗೆ ಅದು ಸಹಜ ಪ್ರಾಪ್ತಿ. ಅದಕ್ಕಾಗಿಯೇ ಮರಳಿ ಬಾಲ್ಯಕ್ಕೆ ಹೋಗೋಣ. ಬದುಕಿನ ನಿತ್ಯದ ಜಂಜಾಟದಲ್ಲಿ ನಾವು ಕಳೆದುಕೊಂಡ ಆ ಶಿಶು-ಸಹಜ-ವರ್ತನೆಯನ್ನು ಮತ್ತೆ ಆವಾಹಿಸಿಕೊಳ್ಳೋಣ. ಇದು ಕೇವಲ ಹಗಲುಕನಸು, ಸಾಧಿಸಾಲಾಗದ ಗೊಡ್ಡು ಆದರ್ಶ, ಕೈಲಾಗದವ ಮೈ ಪರಚಿಕೊಂಡಂತೆ ಎಂದೆಲ್ಲಾ ಅಂದುಕೊಂಡು ಒಳಗೊಳಗೇ ನೀವೂ ನಗುತ್ತಿಲ್ಲ ತಾನೇ? ಸರಿ ಹಾಗಾದರೆ, ಈ ನೆವದಿಂದಲಾದರೂ ನಿಮ್ಮ ಮುಖದಲ್ಲಿ ಒಂದಿಷ್ಟು ಮುಗುಳ್ನಗೆ ಬಂತಲ್ಲ, ಅಷ್ಟೇ ಸಾಕು ನನಗೆ. ಈಗ ನೋಡಿ, ನಕ್ಕು ಹಗುರಾಗುವುದೊಂದೇ ಇದಕ್ಕಿರುವ ಪರಿಹಾರ ಎಂದು ನೀವೂ ನಂಬುತ್ತೀರಲ್ಲ? ಹಾಗಾದರೆ ಒಮ್ಮೆ ಜೋರಾಗಿ ನಕ್ಕುಬಿಡಿ. ನಮಸ್ಕಾರ. ****************************
ಶಿಶುತನದ ಹದನದೊಳು ಬದುಕಲೆಳಸಿ Read Post »
ಕಾವ್ಯಯಾನ
ಅಳುತ್ತಿರಬೇಕು ಅವನು! ಪುರುಷೋತ್ತಮ ಭಟ್ ಕೆ ನಿಯಾಮಕನೆಲ್ಲಿದ್ದಾನೆ,ತಿರುಗಿನಿಂತಿದ್ದಾನೆಬೆನ್ನು ತೋರಿಸಿದ್ದಾನೆತನ್ನದೇ ಸೃಷ್ಟಿಯ ದುರಂತ ಕಾಣಲಾಗದೆಅಳುತ್ತಿರಬೇಕು ಪಾಪ ತುಂಬಿದ ಕೊಡವ ಏನುಮಾಡೋಣವೆಂದು/ ಆಲಯಗಳ ಕಲ್ಲು-ಸಂದುಗಳಲ್ಲಿಕೆತ್ತಿದ ಕೆಡವಿದ ಹೆಸರುಗಳೆಷ್ಟುಹಾಸಿಗೆಗೆಳೆದು ಚೀರಾಡಿಸಿ ಗೋಳಾಡಿಸಿದ ಕಥೆಗಳೆಷ್ಟುಪರರ ಕಿಸೆಯೊಳಗಿನ ದ್ರವ್ಯದಾಸೆಗೆ ಧಮನಿಯ ಕೊಯ್ದವರೆಷ್ಟುಅಳುತ್ತಿರಬೇಕು ಬೆನ್ನು ಕಾಣಿಸುತ್ತಿದೆ ಬೆಣ್ಣೆಯಲಾಡಿದವನ/ ಕವಾಟುಗಳೊಳಗೆ ಪೇರಿಸಿಟ್ಟ ಹೊತ್ತಗೆಗಳಿಗೆ ತುಂಬಿದೆ ಧೂಳುತುಳುಕುವ ಮಾನಪತ್ರಗಳನ್ನು ಆಪೋಶನಗೈಯ್ಯುತ್ತಿವೆ ಗೆದ್ದಲುವಿದ್ಯಯಾಚೆಯ ಬುದ್ದಿ, ವಿವೇಕ ಪಾತಾಳಕೆಹೆಣ್ಣು-ಹೆಸರುಗಳ ಬಾಂಡಲೆಯ ಹೊತ್ತು ಸಾಗುತ್ತೇವೆಅಳುತ್ತಿರಬೇಕು ಬೆನ್ನಷ್ಟೇ ಕಾಣಿಸುತ್ತಿದೆನವಿಲಗರಿ ಮುರಿದು ಮುಪ್ಪಾಗಿದೆ/ ಪೂಜೆ-ಪ್ರಾರ್ಥನೆ ಆಡಂಬರಒಳಗೆಲ್ಲ ಕೊಳಕು-ದಿಗಂಬರಪ್ರಚಾರದ ಪ್ರವಚನಹುಡುಕುತ್ತಿದ್ದಾನೆ ತನ್ನಸೃಷ್ಟಿಯಊನ ಕಳೆಯಲು ದಾರಿ ಮಹಾಮಳೆ, ಕೇಳರಿದ ವ್ಯಾದಿ, ಲೋಹದ ಹಕ್ಕಿ ಇನ್ನೇನೋ/ ****************************
ಯಾಕೀ ಪುನರುಕ್ತಿ? ಅಭಿಮಾನಿ ಓದುಗರೊಬ್ಬರು ಪತ್ರ ಬರೆದು ತಮ್ಮ ಪ್ರತಿಕ್ರಿಯೆ ತಿಳಿಸಲು ನನ್ನ ಫೋನ್ ನಂಬರ್ ಕೇಳಿದರು. ಕೊಟ್ಟದ್ದು ತಪ್ಪಾಯಿತು. ಅವರು ಯಾವಾಗೆಂದರೆ ಆವಾಗ ಸಣ್ಣಸಣ್ಣ ವಿಚಾರಕ್ಕೆಲ್ಲ ಕರೆಯಲಾರಂಭಿಸಿದರು. ಪ್ರತಿಸಲವೂ ಅರ್ಧ ತಾಸು ಕಮ್ಮಿಯಿಲ್ಲದ ಮಾತು. ನಿಜವಾದ ಸಮಸ್ಯೆ ಸಮಯದ್ದಾಗಿರಲಿಲ್ಲ. ಅವರು ಒಂದೇ ಅಭಿಪ್ರಾಯವನ್ನು ಬೇರೆಬೇರೆ ಮಾತುಗಳಲ್ಲಿ ಹೇಳುತ್ತಿದ್ದರು. ಸೂಚ್ಯವಾಗಿ ಹೇಳಿನೋಡಿದೆ. ಮುಟ್ಟಿದಂತೆ ಕಾಣಲಿಲ್ಲ. ಫೋನು ಎತ್ತಿಕೊಳ್ಳುವುದನ್ನು ನಿಲ್ಲಿಸಿದೆ. ಕಡೆಗೆ ನಂಬರ್ ಬ್ಲಾಕ್ ಮಾಡಬೇಕಾಯಿತು. ಮತ್ತೊಬ್ಬ ನಿವೃತ್ತ ಶಿಕ್ಷಕರು ಸಜ್ಜನರು ಹಾಗೂ ಶಿಷ್ಯವತ್ಸಲರು. ಹಿಂದೆಂದೊ ನಡೆದದ್ದನ್ನು ಇಸವಿ ದಿನ ಸಮಯ ಸಮೇತ ನೆನಪಿಟ್ಟಿದ್ದವರು. ಶಿಷ್ಯರು ಭೇಟಿಯಾಗಲು ಹೋದಾಗೆಲ್ಲ ಹಿಂದೆ ಹೇಳಿದ್ದನ್ನು ಹೊಸದಾಗೆಂಬಂತೆ ಹೇಳುತ್ತಿದ್ದರು. ನಿವೃತ್ತರಿಗೆ ಹೆಚ್ಚು ಟೈಮಿರುವುದರಿಂದ ವಿಷಯವನ್ನು ಚೂಯಿಂಗ್ ಗಮ್ಮಿನಂತೆ ಎಳೆದೆಳೆದು ವಿವರಿಸುವ ಕುಶಲತೆ ಗಳಿಸಿಕೊಂಡಿರುತ್ತಾರೆ. ನಮ್ಮ ನಂಟರಲ್ಲೂ ಇಂಥ ಒಬ್ಬರಿದ್ದಾರೆ. ಅವರು ಮನೆಗೆ ಆಗಮಿಸುತ್ತಾರೆಂದರೆ ಆತಂಕದಿಂದ ಕಿವಿಗೆ ಇಟ್ಟುಕೊಳ್ಳಲು ಅರಳೆ ಪಿಂಡಿ ಹುಡುಕುತ್ತಿದ್ದೆವು. ಅವರು ಝಂಡಾ ಹಾಕಿರುವಾಗ ಇಡೀ ದಿನ ಏನಾದರೊಂದು ವಿಷಯ ತೆಗೆದು ಸುದೀರ್ಘ ಮಾತಾಡುತ್ತಿದ್ದರು. ಹಳ್ಳಿಯಲ್ಲಿ ನಡೆದ ಸ್ವಾರಸ್ಯಕರ ಘಟನೆಗಳ ಸಂಚಿಯೇ ಅವರಲ್ಲಿರುತ್ತಿತ್ತು. ಸಮಸ್ಯೆಯೆಂದರೆ, ಬೆಳಿಗ್ಗೆ ಹೇಳಿದ್ದನ್ನೇ ಸಂಜೆಗೂ ನಿರೂಪಿಸುತ್ತಿದ್ದರು. ಅವರಿದ್ದ ಸ್ಥಳದಲ್ಲಿ ಅವರ ಭಾವನೆ ಚಿಂತನೆ ಅನುಭವ ಹಂಚಿಕೊಳ್ಳಲು ಜನರೇ ಇರುತ್ತಿರಲಿಲ್ಲ. ಹೊಸಬರು ಸಿಕ್ಕರೆ ಅವರಿಗೆ ಹತ್ತುನಾಲಗೆ ಬಂದಂತಾಗುತ್ತಿತ್ತು. ಈ ಪುನರುಕ್ತಿ ವೈಯಕ್ತಿಕ ಸ್ವಭಾವದಿಂದಲ್ಲ, ಸನ್ನಿವೇಶದಿಂದ ಹುಟ್ಟಿದ್ದು. ಪುನರುಕ್ತಿಯ ಸದ್ಗುಣ ಶಿಕ್ಷಕರಲ್ಲೂ ಇರುವುದುಂಟು. ಒಂದು ಗಂಟೆ ತರಗತಿ ನಿರ್ವಹಿಸಲು ಬೇಕಾದ ಸಿದ್ಧತೆಯಿಲ್ಲದೆ ಕೈಬೀಸಿಕೊಂಡು ಆಗಮಿಸುವ ಇವರು, ಒಂದೆರಡು ಪಾಯಿಂಟುಗಳನ್ನೇ ವಿವಿಧ ಬಗೆಯಲ್ಲಿ ದೋಸೆಯಂತೆ ಮಗುಚಿ ಹಾಕುವರು. ಇವರ ಕ್ಲಾಸಿನಲ್ಲಿ ಹತ್ತುನಿಮಿಷ ಹೊರಗೆದ್ದು ಹೋಗಿ ಬಂದರೆ ಬಹಳ ಲುಕ್ಸಾನಿಲ್ಲ. ಇವರ ಪುನರುಕ್ತಿಗೆ ಕ್ಷಮೆಯಿಲ್ಲ. ಇದು ಸನ್ನಿವೇಶದಿಂದಲ್ಲ, ಕರ್ತವ್ಯಗೇಡಿತನದಿಂದ ಬಂದಿದ್ದು. ಕೆಲವು ಶಿಕ್ಷಕರು ಜೋಕುಗಳನ್ನು ಪುನರುಕ್ತಿಸುವುದುಂಟು. ವಿದ್ಯಾರ್ಥಿಗಳು ನಗುವುದು ಜೋಕಿಗಲ್ಲ, ಈ ವರ್ಷ ಎಷ್ಟನೇ ಸಲ ಬಂದಿದೆ ಎಂದು ಲೆಕ್ಕಹಾಕಿ. 24 ಇಂಟು 7 ಟಿವಿಗಳದ್ದೂ ಇದೇ ಕಷ್ಟ. ಒಂದೇ ಸುದ್ದಿಯನ್ನು ಹತ್ತಾರು ಬಗೆಯಲ್ಲಿ ತೋರಿಸುತ್ತ ಪ್ರಾಣ ತಿನ್ನುತ್ತಿರುತ್ತಾರೆ. ಅವರಿಗೆ ದಿನದ ಸುದೀರ್ಘ ಕಾಲವನ್ನು ತುಂಬುವ ಅನಿವಾರ್ಯತೆ.ಕೆಲವು ಊರುಗಳಲ್ಲಿ ನಿಲಯದ ಕಲಾವಿದರು ವಾಗ್ ಭಯೋತ್ಪಾದಕರೆಂದು ಹೆಸರಾಗಿದ್ದಾರೆ. ಅವರು ಒಳ್ಳೆಯ ವಾಗ್ಮಿಗಳೇ. ಮೊದಲ ಸಲ ಕೇಳುವವರಿಗೆ ಅವರ ವಾಕ್ಪಟುತ್ವ ಇಷ್ಟವೂ ಆಗುತ್ತದೆ. ಸ್ಥಳೀಯರ ಪಾಡು ಬೇರೆ. ಸದರಿಯವರ ಭಾಷಣದ ಸರದಿ ಬಂದಾಗ ಅವರಿಗೆ ಪ್ರಾಣಸಂಕಟ. ಅವರು ಭಾಷಣ ತಪ್ಪಿಸಿಕೊಳ್ಳುವ ಅನಂತ ತಂತ್ರಗಳನ್ನು ಹುಡುಕಿಕೊಂಡಿರುತ್ತಾರೆ ಕೂಡ. ಕೆಲವು ವಾಗ್ಮಿಗಳ ನೆನಪಿನ ಶಕ್ತಿಯೇ ಲೋಕದ ಪಾಲಿಗೆ ಶಾಪ. ಸಣ್ಣಸಣ್ಣ ವಿವರಗಳನ್ನು ನೆನಪಿಟ್ಟು ಹೇಳುವರು. ಟಿವಿಗಳಲ್ಲಿ ಕಾಣಿಸಿಕೊಳ್ಳುವ ನಗೆಹಬ್ಬದ ಕಲಾವಿದರಿಗೆ ಇದು ಬೃಹತ್ ಸಮಸ್ಯೆ. ಮಾತು ಪುನರುಕ್ತಿಯಾಗುತ್ತಿದೆ, ಬೇಸರ ತರಿಸುತ್ತಿದೆ ಎಂಬ ಆತ್ಮವಿಮರ್ಶೆ ಹೇಳುಗರಲ್ಲಿಲ್ಲದೆ ಹೋದರೆ ಕೇಳುಗರಾದರೂ ಏನು ಮಾಡಬೇಕು? ಪುನರುಕ್ತಿ ಮಾತಿಗಿಂತ ಬರೆಹದಲ್ಲಿ ದೊಡ್ಡಶಾಪ. ಒಮ್ಮೆ ನನ್ನದೊಂದು ಲೇಖನದಲ್ಲಿ 500 ಪದಗಳನ್ನು ತೆಗೆದು ಚಿಕ್ಕದಾಗಿಸಲು ಸಾಧ್ಯವೇ ಎಂದು ಸಂಪಾದಕರು ಸೂಚಿಸಿದರು. ಅಭಿಮಾನ ಭಂಗವಾಗಿ ಬೇಸರಿಸಿಕೊಂಡು ಕಡಿಮೆಗೊಳಿಸಿದೆ. ಇಳಿಸಿದ ಬಳಿಕ ಗೊತ್ತಾಯಿತು, 500 ಪದಗಳನ್ನು ಅನಗತ್ಯವಾಗಿ ಬಳಸಿದ್ದೆನೆಂದು. ಪುನರುಕ್ತಿ ಕ್ಲೀಷೆಗಳ ತಾಯಿ ಕೂಡ. ನಮ್ಮ ರಾಜಕಾರಣಿಗಳ ಬಾಯಲ್ಲಿ `ಷಡ್ಯಂತ್ರ’ ಎಂಬ ಪದ ಎಷ್ಟು ಸವೆದುಹೋಗಿದೆ? `ಎಲ್ಲರ ಚಿತ್ತ ದೆಹಲಿಯತ್ತ’ ಎಂಬ ಪ್ರಾಸಬದ್ಧ ವಾಕ್ಯ ಮೊದಲಿಗೆ ಚಂದವಾಗಿ ಕಂಡಿತ್ತು. ಅದನ್ನು ಮಾಧ್ಯಮಗಳು ಹೇಗೆ ಉಜ್ಜಿದವು ಎಂದರೆ, ಈಗದನ್ನು ಓದುವಾಗ ಯಾವ ಭಾವನೆಯೂ ಸ್ಫುರಿಸುವುದಿಲ್ಲ. ನನ್ನ ಸಹಲೇಖಕರೊಬ್ಬರು ನನ್ನದೊಂದು ಬರೆಹದಲ್ಲಿದ್ದ `ಅಮಾಯಕ’ ಎಂಬ ಪದಕ್ಕೆ ಪ್ರತಿಕ್ರಿಯಿಸುತ್ತ, ಮಾಧ್ಯಮಗಳು ಅತಿಯಾಗಿ ಬಳಸಿ ಸವೆಸಿರುವ ಪದಗಳಲ್ಲಿ ಇದೂ ಒಂದೆಂದು ಎಚ್ಚರಿಸಿದರು. ದೋಷ ಭಾಷೆಯದಲ್ಲ; ಬರೆಯುವವರ ಶಬ್ದದಾರಿದ್ರ್ಯದ್ದು. ವಿಚಾರಗಳನ್ನು ಪುನರುಕ್ತಿ ಮಾಡುವುದು ವೈಚಾರಿಕ ಬಡತನದ ಸಂಕೇತ ಕೂಡ. ಕಡಿಮೆ ಮಾತಲ್ಲಿ ಹೆಚ್ಚು ಅರ್ಥ ಹೊರಡಿಸಬಲ್ಲ ಕವಿ ಪಂಪ ತನ್ನನ್ನು `ಹಿತಮಿತ ಮೃದುವಚನ ಚತುರ’ನೆಂದು ಬಣ್ಣಿಸಿಕೊಂಡನು. ಶರಣರ ಮತ್ತು ಸರ್ವಜ್ಞನ ವಚನಗಳ ರೂಪವಿನ್ಯಾಸವೇ ಅತಿಮಾತುಗಳಿಂದ ತನ್ನನ್ನು ಪಾರುಗೊಳಿಸಿಕೊಂಡಿತು. ಈ ಮಾತನ್ನು ಷಟ್ಪದಿಗೆ ಸಾಂಗತ್ಯಕ್ಕೆ ಹೇಳುವಂತಿಲ್ಲ. ಅಲ್ಲಿನ ವಾಚಾಳಿತನ ಹಾಡಿಕೆಯಲ್ಲಿ ಮುಚ್ಚಿಹೋಗುತ್ತದೆ. ಸಂಕ್ಷಿಪ್ತವಾಗಿ ಬರೆಯುವುದು ಪುನರುಕ್ತಿ ಮತ್ತು ಶಿಥಿಲತೆ ತಡೆಯುವ ಒಂದು ಒಳೋಪಾಯ. ಒಂದೇ ವಿಚಾರವನ್ನು ಹಲವು ಕೃತಿಗಳಲ್ಲಿ ಬೇರೆಬೇರೆ ತರಹ ಬರೆದರೆ ಜಾಣ ಓದುಗರಿಗೆ ತಿಳಿದುಬಿಡುತ್ತದೆ. ಅಡಿಗರು ರಮ್ಯ ಸಂಪ್ರದಾಯದಲ್ಲಿ ಬರೆಯುತ್ತ ಬೇಸತ್ತು `ಅನ್ಯರೊರೆದುದನೆ, ಬರೆದುದನೆ ನಾ ಬರೆಬರೆದು ಬಿನ್ನಗಾಗಿದೆ ಮನವು’ ಎಂದು ದುಗುಡಿಸಿದರು; `ನನ್ನ ನುಡಿಯೊಳಗೆ ಬಣ್ಣಿಸುವ ಪನ್ನತಿಕೆ ಬರುವನಕ ನನ್ನ ಬಾಳಿದು ನರಕ’ ಎಂದೂ ನುಡಿದರು. ತಾವೇ ಕಂಡುಕೊಂಡ ಭಾಷೆಯಲ್ಲಿ ಅಭಿವ್ಯಕ್ತಿಸಲು ಬಯಸುವ ಎಲ್ಲರಿಗೂ ಪುನರುಕ್ತಿ ಶಾಪವಾಗಿ ಕಾಡುತ್ತದೆ. ಇದರ ಒದ್ದಾಟ ಲಂಕೇಶರ ಪತ್ರಿಕಾ ಟಿಪ್ಪಣಿಗಳಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿತ್ತು. ವಾಗ್ಮಿಗಳಿಗೆ ಅವರ ಹಿಂದಿನ ಭಾಷಣವೇ ಎದುರಾಳಿ; ಸೂಕ್ಷ್ಮ ಲೇಖಕರಿಗೆ ಹಿಂದಣ ಯಶಸ್ವೀ ಕೃತಿಯೇ ಹಗೆ. ಅವು “ಭಿನ್ನವಾಗಿ ಮಾತಾಡಲು ಬರೆಯಲು ಸಾಧ್ಯವೇ ನಿನಗೆ?” ಎಂದು ಸವಾಲು ಹಾಕುತ್ತಿರುತ್ತವೆ. ಸವಾಲನ್ನು ಎತ್ತಿಕೊಂಡರೆ ಹೊಸಸೃಷ್ಟಿ; ಇಲ್ಲದಿದ್ದರೆ ಹಳತನ್ನೇ ಹೊಸತೆಂಬ ಭ್ರಮೆಯಲ್ಲಿ ಒದಗಿಸುವ ಕರ್ಮ. ಎಲ್ಲ ದೊಡ್ಡ ಬರೆಹಗಾರಲ್ಲಿ ಜೀವನದರ್ಶನವೊಂದು ಪುನರುಕ್ತಿ ಪಡೆಯುತ್ತ ಬಂದಿರುತ್ತದೆ- ಕುವೆಂಪು ಅವರಲ್ಲಿ ವಿಶ್ವಮಾನವ ತತ್ವ, ಬೇಂದ್ರೆಯವರಲ್ಲಿ ಸಮರಸ ತತ್ವ, ಕಾರಂತರಲ್ಲಿ ಜೀವನತತ್ವ, ತೇಜಸ್ವಿಯವರಲ್ಲಿ ವಿಸ್ಮಯತತ್ವ ಇತ್ಯಾದಿ. ಈ ಮೂಲತತ್ವವು ಕಾಲಕಾಲಕ್ಕೆ ಒಳಗಿಂದಲೇ ಬೆಳೆಯುತ್ತಲೂ ಬಂದಿರುತ್ತದೆ. ಹೀಗಾಗಿ ಅದು ಶಾಪವಲ್ಲ. ಆದರೆ ಇದೇ ಲೇಖಕರು ತಮ್ಮ ಕೊನೆಗಾಲದಲ್ಲಿ ಈ ತತ್ವವನ್ನು ವಿಸಕನಗೊಳಿಸದೆ, ಸ್ಟೀರಿಯೊ ರೆಕಾರ್ಡಿನಂತೆ ಪುನರುಕ್ತಿಸುವ ಕಷ್ಟಕ್ಕೆ ಸಿಕ್ಕಿಕೊಳ್ಳುವುದುಂಟು.ಸರ್ಕಸ್ ಮಾಡುವವರಿಂದ ಹಿಡಿದು ಪೂಜಾರಿಕೆ, ಪಾಠ, ವ್ಯಾಪಾರ, ಡ್ರೈವಿಂಗ್, ಅಡುಗೆ, ಕಛೇರಿ ಕೆಲಸ ಮಾಡುವವರಿಗೆ ಒಂದೇ ನಮೂನೆಯ ಕೆಲಸವನ್ನು ದಿನವೂ ಮಾಡುತ್ತ ಏಕತಾನೀಯ ಜಡತೆ ಆವರಿಸುತ್ತದೆ. ಅವರು ಪುನರಾವರ್ತನೆಯನ್ನು ಹೇಗೆ ನಿಭಾಯಿಸುತ್ತಾರೆ? ಬಹುಶಃ ಅದಕ್ಕೆ ಅನಿವಾರ್ಯತೆಯಲ್ಲಿ ಹೊಂದಿಕೊಂಡಿರುತ್ತಾರೆ. ಸತತ ತರಬೇತಿಯಿಂದ ಪಡೆದ ಪರಿಣತಿಯೇ ಅಲ್ಲಿ ಸಿದ್ಧಿಯಾಗಿ ನಿಂತುಬಿಟ್ಟಿರುತ್ತದೆ. ಆದರೆ ಸೃಜನಶೀಲರು ಪುನರಾವರ್ತನೆಯ ಇಕ್ಕಟ್ಟು ಬಂದಾಗ ಪ್ರತಿಸಲವೂ ವಿಭಿನ್ನತೆ ತೋರಲು ಹೋರಾಡುತ್ತಾರೆ. ತಾವೇ ಕಟ್ಟಿದ ಚೌಕಟ್ಟುಗಳನ್ನು ಮುರಿಯುತ್ತಾರೆ. ತಲ್ಲಣಿಸುತ್ತಾರೆ.ಆಡಿದ್ದನ್ನೇ ಆಡುವವರ ಮಾತು-ಬರೆಹ ಬೋರು ಹೊಡೆಸಬಹುದು. ಅದು ಅಪಾಯವಲ್ಲ. ಆದರೆ ಭಾಷೆ, ಧರ್ಮ, ಸಮುದಾಯ, ದೇಶ, ಸಿದ್ಧಾಂತದ ನೆಲೆಯಲ್ಲಿ ವಿದ್ವೇಷ ಹುಟ್ಟಿಸುವ ರಾಜಕಾರಣದ ಪುನರುಕ್ತಿಗಳು ಅಪಾಯಕರ. ಇಲ್ಲಿ ಪುನರುಕ್ತಿ ಅರೆಸತ್ಯವನ್ನು ಪೂರ್ಣಸತ್ಯವೆಂದು ಸಮೂಹವನ್ನು ನಂಬಿಸುತ್ತದೆ. ಈ ಮನಶ್ಶಾಸ್ತ್ರೀಯ ಪ್ರಯೋಗವನ್ನು ಜರ್ಮನಿಯ ಫ್ಯಾಸಿಸ್ಟರು ಮಾಡಿದರು. ಇದಕ್ಕಾಗಿ ಹಿಟ್ಲರನ ಪ್ರಚಾರ ಮಂತ್ರಿ ಗೊಬೆಲ್ಸ್ ಪ್ರಸಿದ್ಧನಾಗಿದ್ದ. ಜಾಹಿರಾತುಗಳು ಪುನರುಕ್ತಿಯಾಗುವುದು ಇದೇ ತಂತ್ರದಿಂದ. ತತ್ವಪದಗಳಲ್ಲಿ, ಜನಪದ ಹಾಡುಗಳಲ್ಲಿ ಪಲ್ಲವಿಯಾಗಿ ಬರುವ ಪುನರುಕ್ತಿಗೆ ಬೇರೆ ಆಯಾಮವಿದೆ. ಪ್ರತಿ ಖಂಡ ಮುಗಿದ ಬಳಿಕ ಬರುವ ಪಲ್ಲವಿ ಹೊಸಹೊಸ ಅರ್ಥಗಳನ್ನು ಹೊಳೆಸುತ್ತದೆ. `ಬಿದಿರೇ ನೀನಾರಿಗಲ್ಲದವಳು’-ಶರೀಫರ ಈ ಪಲ್ಲವಿ ಗಮನಿಸಬೇಕು. ಹಾಡಿನ ಪ್ರತಿಹೋಳಿನ ಬಳಿಕ ಬರುತ್ತ ಇದು ನವೀನ ಅರ್ಥಗಳನ್ನು ಹುಟ್ಟಿಸುತ್ತ ಬೆರಗುಗೊಳಿಸುತ್ತದೆ. ಹಿಂದುಸ್ತಾನಿ ಸಂಗೀತದಲ್ಲೂ ಒಂದೇ ಚೀಸನ್ನು ಬೇರೆಬೇರೆ ಲಯವಿನ್ಯಾಸದಲ್ಲಿ ಅಭಿವ್ಯಕ್ತಿಸಲಾಗುತ್ತದೆ. ಪ್ರತಿಯೊಂದೂ ಸ್ವರವಿನ್ಯಾಸವೂ ವಿಭಿನ್ನ ಮತ್ತು ವಿಶಿಷ್ಟವಾಗಿರುತ್ತದೆ-ಕರೆಗೆ ಅಪ್ಪಳಿಸುವ ಕಡಲ ಅಲೆಯಂತೆ, ಮರದಕೊಂಬೆ ಗಾಳಿಗೆ ಅಲುಗಿದಂತೆ, ಹಕ್ಕಿ ಹಾಡಿದಂತೆ. ಪ್ರತಿಭಾವಂತ ಗಾಯಕರು ಧ್ವನಿಮುದ್ರಿತ ಯಂತ್ರದಂತೆ ಒಂದೇ ತರಹ ಹಾಡುವುದಿಲ್ಲ. ನಮಗೆ ಪ್ರಿಯವಾದ ಹಾಡು, ಧ್ವನಿಮುದ್ರಣದಲ್ಲಿ ಅದೆಷ್ಟನೆಯ ಸಲವೊ ಕೇಳುವಾಗ ಕೂಡ, ಪುನರುಕ್ತಿ ಎನಿಸದೆ ಹೊಸದೇ ಅನುಭವ ಕೊಡುವುದು; ಹೊಸದೇ ಭಾವ ಹೊಳೆಸುವುದು. ಹಾಡು ಅದೇ. ಕೇಳುವವರ ಮನಸ್ಥಿತಿ ಬೇರೆಯಾಗಿದೆ. ನಮಗೆ ಪ್ರಿಯರಾದವರ ಮುಖವನ್ನು ಎಷ್ಟು ಸಲ ನೋಡಿದರೂ, ಅವರ ಮಾತನ್ನು ಅದೆಷ್ಟು ಸಲ ಆಲಿಸಿದರೂ ಏಕತಾನ ಎನಿಸುವುದಿಲ್ಲ. ಎಳೆಯ ಕಂದನ ಮೊಗವನ್ನು ಕನ್ನಡಿಯಂತೆ ಹಿಡಿದು ತಾಯಿ ದಣಿಯುವಳೇ? ನೋಡುವ ತಾಯಭಾವವೂ ನೋಟಕ್ಕೆ ವಸ್ತುವಾಗಿರುವ ಕೂಸಿನ ಭಾವವೂ ಪರಸ್ಪರ ಬದಲಾಗುತ್ತ ಜೀವಂತಿಕೆ ಸೃಷ್ಟಿಸುತ್ತವೆ. `ಮಲೆಗಳಲ್ಲಿ ಮದುಮಗಳು’ ಕಾದಂಬರಿಯನ್ನು ಅದೆಷ್ಟು ಸಲ ಓದಿರುವೆನೊ? ಹಳತೆನಿಸಿಲ್ಲ. ವಯಸ್ಸು ಅಭಿರುಚಿ ಆಲೋಚನಕ್ರಮ ಅನುಭವ ಬದಲಾದಂತೆ, ಹಿಂದೆ ಓದಿದ್ದು ಕೇಳಿದ್ದು, ಹೊಸ ಅನುಭವ ಮತ್ತು ಚಿಂತನೆಯಲ್ಲಿ ಬಂದು ಕೂಡಿಕೊಳ್ಳುತ್ತದೆ. ಪುನರುಕ್ತಿ ಸೃಜನಶೀಲವಾಗಿದ್ದಾಗ ಯಾಂತ್ರಿಕವಾಗಿರುವುದಿಲ್ಲ. ಹಿಂದೆ ಕೇಳಿದ ಹಾಡು ಸ್ಮತಿಯಿಂದ ಎದ್ದುಬರುವಾಗ ಹೊಸಜನ್ಮವನ್ನು ಪಡೆದಿರುತ್ತದೆ. ಪ್ರತಿವರ್ಷವೂ ಚಿಗುರುವ ಮರ ಹೊಸತನದಲ್ಲಿ ಕಾಣಿಸುವುದಕ್ಕೆ ಕಾರಣ, ಮರ ಮಾತ್ರವಲ್ಲ, ಅದನ್ನು ನೋಡುವ ಕಣ್ಣೂ ಸಹ. ********************************* ಲೇಖಕರ ಬಗ್ಗೆ: ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ
ಲಲಿತ ಪ್ರಬಂಧ
ಹಲಸಿನ ಕಡುಬು. ಶೀಲಾ ಭಂಡಾರ್ಕರ್ ನಮ್ಮೂರ ಕಡೆ ಹಲಸಿನ ಹಣ್ಣಿನ ಕಾಲದಲ್ಲಿ ಹಲಸಿನ ಹಣ್ಣಿನಿಂದ ಬಗೆ ಬಗೆಯ ಖಾದ್ಯಗಳನ್ನು ಮಾಡುತ್ತಾರೆ. ಹಪ್ಪಳ, ಚಿಪ್ಸ್, ದೋಸೆ, ಕಡುಬು, ಮುಳಕ, ಪಾಯಸ.. ಇನ್ನೂ ಎಷ್ಟೋ ಬಗೆ. ಅದರಲ್ಲಿ ಹಲಸಿನ ಕಡುಬು ನನಗೆ ಪಂಚಪ್ರಾಣ.ಅಕ್ಕಿಯನ್ನು ನೆನೆಸಿ, ತೆಂಗಿನ ತುರಿ, ಬೆಲ್ಲ, ಬಿಡಿಸಿದ ಹಲಸಿನ ತೊಳೆಯ ಜತೆ ತರಿ ತರಿಯಾಗಿ ರುಬ್ಬಿ ತೇಗದ ಎಲೆಯಲ್ಲಿ, ಕೆಂಡ ಸಂಪಿಗೆ ಎಲೆಯಲ್ಲಿ, ಅಥವಾ ತಟ್ಟೆಯಲ್ಲಿಟ್ಟು, ಹಬೆಯಲ್ಲಿ ಬೇಯಿಸಿ ಮಾಡುವ ಕಡುಬು.. ಆಹಾ..!!! ಘಮ್ ಅಂತ ನಾಲ್ಕೂ ದಿಕ್ಕಿಗೆ ಪರಿಮಳ ಸೂಸಿ ಎಲ್ಲರ ಮೂಗು ಅರಳಿಸುತ್ತದೆ.ಬಿಸಿ ಬಿಸಿ ಹಲಸಿನ ಕಡುಬನ್ನು ತಾಜಾ ಬೆಣ್ಣೆ, ಅಥವಾ ತುಪ್ಪದ ಜತೆ ತಿಂದರೆ.. ಆಹ್… ಬಿಡಿ.. ಬಲ್ಲವರೇ ಬಲ್ಲರು ಅದರ ರುಚಿಯ. ನಾನು ಆಗ ಆರನೇ ಕ್ಲಾಸಿನಲ್ಲಿದ್ದೆ. ಆಗ ನಾವೊಂದು ಚಿಕ್ಕ ಹಳ್ಳಿಯಲ್ಲಿದ್ದೆವು ಒಂದು ವರ್ಷದ ಮಟ್ಟಿಗೆ. ಅಲ್ಲಿ ನಾವು ಇದ್ದ ಕಡೆ ಹತ್ತಿರದಲ್ಲೇ ಒಂದು ಅಂಗಡಿ, ಅದರ ಮಾಲೀಕ ಶೇಷಪ್ಪ ಅಂತ. ಅವನೊಂದು ದಿನ ಒಂದು ಹಲಸಿನ ಹಣ್ಣು ತಂದು ಕೊಟ್ಟ. ಅವನು ತಂದಿಟ್ಟ ತಕ್ಷಣ ನಮಗೆಲ್ಲ ಕಡುಬು ತಿನ್ನುವ ಆಸೆಯಾಯ್ತು. ಸರಿ ಆವತ್ತು ರಾತ್ರಿ ಯಾರಿಗೂ ಊಟ ಬೇಡ, ಕಡುಬೇ ಸಾಕು ಅಂತ ನಿರ್ಧಾರವಾಯಿತು. ಆಗ ಈಗಿನ ಹಾಗೆ ಮಿಕ್ಸಿ, ಗ್ರೈಂಡರ್ ಇರಲಿಲ್ಲ ನಮ್ಮ ಮನೆಯಲ್ಲಿ. ರುಬ್ಬುವ ಕಲ್ಲಿನಲ್ಲಿ ಕಡುಬಿನ ಹಿಟ್ಟನ್ನು ತಯಾರು ಮಾಡಿ ಎರಡು ದೊಡ್ಡ ದೊಡ್ಡ ತಟ್ಟೆಗಳಲ್ಲಿ ಅಮ್ಮ ಬೇಯಿಸಲಿಕ್ಕಿಟ್ಟರು.. ಇನ್ನು ಸರಿಯಾಗಿ ಅರ್ಧ ಘಂಟೆಯಾದರೂ ಬೇಯಬೇಕು ಅಂತ ಮನಸ್ಸಿನಲ್ಲೇ ಅಂದುಕೊಂಡು ಕಾಯುತ್ತ ಕೂತಿದ್ದೆವು. ಅಜ್ಜಿ ಬೆಣ್ಣೆಯನ್ನು 2-3 ಸಲ ನೀರಿನಿಂದ ತೊಳೆದು ಇಟ್ಟರು.ಅಮ್ಮ ಮುಚ್ಚಳ ತೆಗೆದು ಬೆಂದಿದೆ ಅಂತ ಖಾತ್ರಿ ಮಾಡಿಕೊಂಡು ತಟ್ಟೆಗಳನ್ನು ಹಬೆ ಪಾತ್ರೆಯಿಂದ ತೆಗೆದು ನೆಲದಲ್ಲಿ ಆರಲು ಇಟ್ಟರು.ಅಜ್ಜಿ ಬಂದು ನೋಡಿ.. “ಎಷ್ಟು ಚಂದ ಬಂದಿದೆ ರಂಗು. ಪರಿಮಳ ಕೂಡ ವಿಶೇಷವಾಗಿದೆ “ಅದಕ್ಕೆ ಅಮ್ಮ “ಹೌದು ಶೇಷಪ್ಪ ತಂದುಕೊಟ್ಟ ಹಣ್ಣಲ್ವಾ ಅದಕ್ಕೆ ವಿಶೇಷವಾಗೇ ಪರಿಮಳ” ಅಂತ ಹೇಳುತ್ತ.. ಅಜ್ಜಿಗೆ ಒಂದು ಚಿಕ್ಕ ತುಂಡು ಕಡುಬನ್ನು ತಟ್ಟೆಯಲ್ಲಿಟ್ಟು ಬೆಣ್ಣೆ ಹಾಕಿ ಕೊಟ್ಟರು “ರುಚಿ ನೋಡಿ” ಅಂತ.“ಎಲ್ಲರೂ ಒಟ್ಟಿಗೆ ತಿನ್ನೋಣ” ಎಂದು ಹೇಳಿದರೂ ಕೂಡ ಅಜ್ಜಿ ಕಡುಬು ತಿಂದು “ಭಾಳ ರುಚಿಯಾಗಿದೆ” ಅಂತ ಸರ್ಟಿಫಿಕೇಟ್ ಕೊಟ್ಟಾಯಿತು.ಹಾಗೆ ತಮ್ಮನನ್ನು ಕರೆದು ಅಜ್ಜಿ “ಏ.. ಹೌದಾ.. ಆ ಶೇಷಪ್ಪ ಅಂಗಡಿ ಮುಚ್ಚಿ ಮನೆಗೆ ಹೋಗುವಾಗ ಬಂದು ಹೋಗಬೇಕಂತೆ ಅಂತ ಹೇಳಿ ಬಾ ಹೋಗು” ಅಂತ ಕಳುಹಿಸಿದರು.ಅವನು ಕಡುಬು ತಿನ್ನುವ ಆತುರದಲ್ಲಿ ಒಂದೇ ಏಟಿಗೆ ಓಡಿ ಹೋಗಿ ಶೇಷಪ್ಪನಿಗೆ ವಿಷಯ ಮುಟ್ಟಿಸಿ ಮನೆಗೆ ಬರುವುದರೊಳಗೆ ಹಿಂದೆಯೇ ಶೇಷಪ್ಪನೂ ಬಂದಾಯಿತು. ಅಲ್ಲೇ ಮೆಟ್ಟಲಲ್ಲಿ ಕೂತ ಅವನಿಗೆ ತಟ್ಟೆಯಲ್ಲಿ ಸಾಕಷ್ಟು ಕಡುಬು ಒಂದು ದೊಡ್ಡ ಬೆಣ್ಣೆ ಮುದ್ದೆ ಕೊಟ್ಟಾಯಿತು. ಅವನು ತಿಂದು ಹೋಗಲಿ ಆಮೇಲೆ ನಾವೆಲ್ಲ ತಿಂದ್ರಾಯ್ತು ಅಂತ ಅಮ್ಮ ಹೇಳಿದರು. ಹೂಂ … ಅಂತ ತಲೆ ಅಲ್ಲಾಡಿಸಿ ಕೂತೆವು. ಅಷ್ಟು ಒಳ್ಳೆಯ ಮಕ್ಕಳು ಆಗಿನವು. ಈಗಿನವಕ್ಕೆ ಫಿಜ್ಹಾ, ಬರ್ಗರ್, ಮುಂದೆ ಕಡುಬು ಎಲ್ಲಿ ಗಂಟಲಿಗಿಳಿಯುತ್ತದೆ.? “ಎಷ್ಟು ಒಳ್ಳೆಯ ಹಣ್ಣು..! ನಿಮ್ಮ ಮರದ್ದೇಯಾ? ತುಂಬಾ ಬಿಡ್ತದಾ ಹಣ್ಣು ? ಎಷ್ಟು ಮರ ಇವೆ..? ಎಂದೆಲ್ಲ ಪ್ರಶ್ನೆ ಮೇಲೆ ಪ್ರಶ್ನೆ ಹಾಕಿ ಅಜ್ಜಿ “ಇನ್ನೊಂದು ಹಣ್ಣು ಬೇಕು , ಮಗಳ ಮನೆಗೆ ಹೋಗ್ತಾ ಇದ್ದೇನೆ ಬರುವ ವಾರ ” ಅಂತ ಬುಕ್ ಮಾಡಿಸಿಟ್ಟರು. ಅವನೂ ಮಾತಾಡುತ್ತ .. ಕಡುಬನ್ನು ಚಪ್ಪರಿಸಿ ತಿನ್ನುವಾಗ, ಕಾದು ಕೂತ ನಮಗೆ ಇವನು ಬೇಗ ಬೇಗ ತಿಂದು ಹೋಗಬಾರದಾ..? ಎಷ್ಟು ಪಂಚಾದಿಕೆ ಈ ಅಜ್ಜಿಗೂ ಅಂತ ಮನಸ್ಸಿನಲ್ಲೇ ಗೊಣಗಾಟ. ತಿಂದಾಯ್ತು.. ಅವನಿಗೆ ಕೈ ತೊಳೆಯಲು ನೀರು ಅಲ್ಲೇ ತಂದು ಕೊಟ್ಟರೆ.. ತಟ್ಟೆ ತೊಳೆದಿಟ್ಟು ಹೋಗುತ್ತೇನೆ ಈ ನೀರು ಸಾಲದು. ಅಂತ ಬೇಡ ಬೇಡ ಎಂದರೂ ಕೇಳದೆ , ನನ್ನನ್ನು ಕರೆದು ಹಿಂದಿನ ಬಾಗಿಲು ತೆಗೆದು ಸ್ವಲ್ಪ ನೀರು ಹಾಕಿ ಅಮ್ಮ ಅಂತ ಹೇಳಿದ. ನಾನು ಹೋಗಿ ಹಿಂದಿನ ಬಾಗಿಲು ತೆಗೆದು ಅವನಿಗೆ ನೀರು ಕೊಟ್ಟು ಬಂದೆ. ಆಯ, ಆಕಾರವಿಲ್ಲದ ದೊಡ್ಡ ಹಳ್ಳಿ ಮನೆ.. ಬಂದು ಕೂತರೆ.. ಶೇಷಪ್ಪ.. ಕಡುಬನ್ನು ವರ್ಣಿಸಲು ತೊಡಗಿದ. ಹಾಗೆ ಇನ್ನೂ ಸ್ವಲ್ಪ ಹೊತ್ತು ಅಪ್ಪ, ಅಜ್ಜಿ , ಅಮ್ಮ ಅಂತ ಒಬ್ಬೊಬ್ಬರದೂ ಅವನ ಜೊತೆ ಮಾತಾಗುತಿತ್ತು. ಒಳಗೆ ಏನೋ “ಢಂಯ್ ” ಎಂದು ಸದ್ದಾಯಿತು. ಹಾರಿ ಹೋಗಿ ಒಳಗೆ ನೋಡಿದರೆ ನಾಯಿಯೊಂದು ತೆರೆದಿಟ್ಟ ಹಿಂದಿನ ಬಾಗಿಲಿನಿಂದ ಒಳಗೆ ಬಂದು ಆರಲು ಇಟ್ಟಿದ್ದ ಕಡುಬಿನ ತಟ್ಟೆಗಳಲ್ಲಿ ಒಂದನ್ನು ಖಾಲಿ ಮಾಡಿ ಇನ್ನೊಂದಕ್ಕೆ ಬಾಯಿ ಹಾಕಿ ಚಪ್ಪರಿಸುತಿತ್ತು. ತಿಂದು ಮುಗಿಸಿದ ತಟ್ಟೆಯಲ್ಲಿ ನಾಯಿ ಕಾಲಿಟ್ಟಿದ್ದರಿಂದ ಆ ಸದ್ದು ಕೇಳಿಸಿದ್ದು ಹೊರಗೆ. ಬಂದ ಕೋಪಕ್ಕೆ ಅಮ್ಮ ಕೈಗೆ ಸಿಕ್ಕಿದ ದೊಣ್ಣೆಯಿಂದ ಒಂದು ಕೊಟ್ಟರು ನಾಯಿಯ ಬೆನ್ನಿಗೆ. ಅದು ಕೊಂಯ್ ಅಂತ ಒಂದೇ ಉಸಿರಿಗೆ ಮಾಯವಾಯ್ತು.ಇನ್ನೊಂದು ನನಗೆ ಗ್ಯಾರಂಟಿ ಎಂದು ನಾನು ಹೆದರಿ ಯಾವುದೋ ಒಂದು ಸಂಧಿಯಲ್ಲಿ ಅಡಗಿ ಕೂತುಕೊಂಡೆ. ಅಮ್ಮನಿಗೆ ಪಾಪ.. ಅಷ್ಟು ಕಷ್ಟ ಪಟ್ಟು ಮಾಡಿದ ಕಡುಬು ಎಲ್ಲಾ ನಾಯಿ ತಿಂದು ಹೋಯಿತು.. ಈಗ ಪುನಹ ಇವರಿಗೆಲ್ಲ ಏನು ಮಾಡಿ ಬಡಿಸಲಿ ಅನ್ನೋ ಯೋಚನೆ,ನನಗೆ.. ಛೆ!! ನಾನು ಮರೆತು ಬಾಗಿಲು ಹಾಕದಿದ್ದರಿಂದಲೇ ಇವತ್ತು ಕಡುಬು ನಾಯಿ ಪಾಲಾಯಿತು.. ಎಂಥ ಕೆಲಸವಾಯಿತು. ಅಂತ ಮನಸ್ಸಲ್ಲೇ ದುಃಖ.ಅಜ್ಜಿಗೆ ತಿಂದ ಆ ಚಿಕ್ಕ ಕಡುಬಿನ ತುಂಡಿನ ರುಚಿ ಇನ್ನೂ ಬಾಯಲ್ಲೇ ಇದೆ.. ಏನಾಗಿ ಹೋಯಿತು ಇದು ಅಂತ ಮನಸ್ಸೆಲ್ಲ ಚುರುಚುರು.ಅಪ್ಪ ಎಂದಿನಂತೆ ಸ್ಥಿತಪ್ರಜ್ಞ.. ತಮ್ಮ-ತಂಗಿ ಇಬ್ಬರೂ ಯಾವುದೋ ಆಟದಲ್ಲಿ ಮಗ್ನರಾಗಿದ್ದರು. ಈಗ ಶೇಷಪ್ಪನ ಗೋಳಾಟ ಶುರುವಾಯಿತು., “ನೀವು ಬೇಡ ಬೇಡ ಅಂದರೂ ನಾನು ಮಾಡಿದ ತಪ್ಪಿನಿಂದಲೇ ಹೀಗಾಯಿತು.. ನೀವು ಇಷ್ಟು ಕಷ್ಟ ಪಟ್ಟು ಮಾಡಿದ್ದು ನಿಮಗೆ ತಿನ್ನಲಿಕ್ಕಾಗದೇ ಹೋಯಿತು” ಅಂತ. ನಮ್ಮ ದುಃಖದ ನಡುವೆ ಅವನನ್ನು ಸಮಾಧಾನ ಮಾಡಿ ಕಳಿಸಿದರು ಅಮ್ಮ ಮತ್ತು ಅಜ್ಜಿ.ಆಮೇಲೆ ಅಮ್ಮನಿಗೆ ನನ್ನನ್ನು ಹೊಡೆಯದೆ ಬಿಟ್ಟದ್ದು ನೆನಪಾಗಿ.. ನನ್ನನ್ನು ಹುಡುಕುವುದಕ್ಕೆ ಶುರು ಮಾಡಿದರು. ಹೊರಗೆ ಬಂದರೆ ನನಗೆ ಸರಿಯಾದ ಪೂಜೆಯಾಗುತ್ತದೆ ಅಂತ ಗೊತ್ತಿತ್ತು ನನಗೆ. ಸುಮ್ಮನೆ ಉಸಿರು ಕೂಡ ಆಡದೆ ಕೂತೆ. ಅಮ್ಮನ ಕೋಪ ನೋಡಿ ಅಜ್ಜಿ.. ಅವಳನ್ನು ಹೊಡೆಯುವುದಿಲ್ಲ ಅಂತ ಭಾಷೆ ಕೊಡು ಅಂತ ಒಪ್ಪಿಸಿ ನನ್ನನ್ನು ಕರೆದರು.. “ಬಾ.. ನಿನಗೆ ಹೊಡೆಯುವುದಿಲ್ಲ” .. ನಾನು ಮೆತ್ತಗೆ ಹೊರಗೆ ಬಂದೆ.ಆಮೇಲೆ ಅದೇನು ತಿಂದು ಮಲಗಿದೆವೋ ಅದು ನೆನಪಿಲ್ಲ. ಮಾರನೆ ದಿನ ಶೇಷಪ್ಪ ಇನ್ನೂ ದೊಡ್ಡದಾದ ಹಣ್ಣನ್ನು ತಂದಿಟ್ಟರೂ ಯಾರಿಗೂ ಅಷ್ಟೊಂದು ಉತ್ಸಾಹವಿಲ್ಲ. ಕಡುಬನ್ನು ಮಾಡಿದರೂ ಶೇಷಪ್ಪನನ್ನು ಕರೆಯಲಿಲ್ಲ ಈ ಸಾರಿ. ಅಜ್ಜಿ ತಿಂದು ನೋಡಿ ನಿನ್ನೆಯಷ್ಟು ರುಚಿಯಾಗಿಲ್ಲ ಅಂದಾಗ ಇನ್ನೂ ಮನಸ್ಸು ಮುದುಡಿ ಹೋಯಿತು. ಅದಾದ ಮೇಲೆ ಏಷ್ಟೋ ಸಲ ಹಲಸಿನ ಹಣ್ಣಿನ ಕಡುಬು ಮಾಡಿ ತಿಂದರೂ ಆ ದಿನದ ನಾವು ತಿನ್ನದಿದ್ದ ಕಡುಬಿನಷ್ಟು ರುಚಿ ಅನ್ನಿಸಿದ್ದಿಲ್ಲ. ಮತ್ತು ಪ್ರತೀ ಸಲ ಕಡುಬು ಮಾಡಿದಾಗಲೂ ಶೇಷಪ್ಪನನ್ನು ಮತ್ತು ಆ ನಾಯಿಯನ್ನು ಇಂದಿಗೂ ನೆನಸುತ್ತೇನೆ. **********************************************









