ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಮಾತೃ ದೇವೋಭವ

ಮಾತೃ ದೇವೋಭವ ಸಂಮ್ಮೋದ ವಾಡಪ್ಪಿ ದೇವ ಬಿತ್ತಿದ ಇಲ್ಲಿ ಎದ್ದು ನಿಲ್ಲಲೆಂದು ಹಸಿರ ಚಿಗುರೊಡೆದು ಮೇಲೇಳಲೆಂದು ಬಸಿರ ಭೂತಾಯಿಯ ಒಡಲ ಹೊರಬಂದು ಉಸಿರ ಬೆಸೆದು ನಸು ನಗುವ ಬೀರಲೆಂದು ಇದು ಜನುಮ ಅಗೋಚರ ಶಕ್ತಿಯಿಂದ ಅಳುವ ದ್ವನಿಯ ಕೇಳುವ ತವಕದಿಂದ ಹುಟ್ಟು ನವಮಾಸದ ತಪದ ದಾರಿಯಿಂದ ಪಯಣ ಆ ಮಾತೆಯ ಲಾಲಿ ಹಾಡಿನಿಂದ ರತ್ನವಾಗಲಿ ಎನುತ ತೊಟ್ಟಿಲ ತೂಗಿದಾಗ ಮಂದಹಾಸದಿ ದೃಷ್ಟಿ ಬೊಟ್ಟು ಒತ್ತಿದಾಗ ಸುಪಥವ ಹಿಡಿದು ನಡೆಸಲು ಹರಸಾಹಸ ಯಶೋದೆಯ ಪರಿಶ್ರಮವೇ ಅವನ ವಿಕಾಸ ಭವದ ದಾರಿಯಲಿ ತಂದು ನಿಲ್ಲಿಸಿದ ದಾತ ಅವನು ನಿರ್ವಿಕಾರ,ಮಾತೆಯನಿಟ್ಟು ಮಾಡಿದ ಸಾಕಾರ ಎರಡು ಬಿಂದು ನಡುವೆ ಬಹು ಏಳು ಬೀಳು ಚಲಿಸು ಮುಂದೆ, ಒಳಿತು ಮಾಡು, ಅವಳು ಕೊಟ್ಟ ಬಾಳು **********

ಮಾತೃ ದೇವೋಭವ Read Post »

ಇತರೆ

ಅಮ್ಮಂದಿರ ದಿನದ ವಿಶೇಷ- ಬರಹ

ಅಮ್ಮನದಿನ          ಎನ್.ಶೈಲಜಾ ಹಾಸನ   ಕಳೆದ ವರ್ಷವಷ್ಟೆ ಅಮ್ಮನ ದಿನ ಆಚರಿಸಿದೆವು.ಈ ವರ್ಷವೂ ಅಮ್ಮಂದಿರ ದಿನ ಬಂದಿದೆ. ಅಮ್ಮನಿಗಾಗಿ ಒಂದು ದಿನವೇ ಎಂದು ಹುಬ್ಬೇರಿಸುವವರ ನಡುವೆಯೂ ಅಮ್ಮನನ್ನು ನೆನೆಸಿಕೊಂಡು ಅಮ್ಮನಿಗಾಗಿ ಉಡುಗರೆ ನೀಡಿ ಅಮ್ಮನ ಮೊಗದಲ್ಲಿ ಸಂತಸ ತುಂಬಿzವರು, ಅಮ್ಮನ ದಿನ ಮಾತ್ರವೇ ನೆನಸಿಕೊಂಡು ಅಮ್ಮನ ದಿನ ಆಚರಿಸಿದವರೂ, ತಮ್ಮ ಜಂಜಾಟದ ನಡುವೆ ಅಮ್ಮನನ್ನೆ ಮರೆತವರೂ, ಈ ಅಮ್ಮಂದಿರ ದಿನದ ಆಚರಣೆಗಳೆÉಲ್ಲ ನಮ್ಮ ಸಂಸ್ಕ್ರತಿ ಅಲ್ಲ, ನಾವೂ ದಿನವೂ ಅಮ್ಮನನ್ನು ಜೊತೆಯಲ್ಲಿಯೇ ಇಟ್ಟುಕೊಂಡು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದೆವೆ, ಈ ಒಂದು ದಿನ ಮಾತ್ರ ನೆನೆಸಿಕೊಂಡು ಉಡುಗೊರೆ ಕೊಟ್ಟು ಕೈ ತೊಳೆದುಕೊಂಡು ಮತ್ತೆ ಮುಂದಿನ ವರ್ಷವೇ ಅಮ್ಮನ ನೆನೆಸಿಕೊಂಡು ಬರುವ ವಿದೇಶಿ ಸಂಸ್ಕ್ರತಿ ನಮ್ಮದಲ್ಲ ಅಂತ ಮೂಗು ಮುರಿಯುವವರೂ ಇದ್ದಾರೆ. ಅದರೆ ಅಮ್ಮನ ದಿನ ಆಚರಿಸಿ ಉಡುಗೊರೆ ಕೊಟ್ಟಾಗ ಸಂಭ್ರಮಿಸುವ ಅಮ್ಮಂದಿರೇ ಹೆಚ್ಚಾಗಿದ್ದಾರೆ  ನನ್ನ ಮಗಳು ಕೂಡಾ ಬುದ್ದಿ ತಿಳಿದಾಗಿನಿಂದಲೂ ನನಗೆ ಪ್ರತಿ ವರ್ಷ ಉಡುಗರೆ ನೀಡುತ್ತಲೇ ಬಂದಿದ್ದಾಳೆ. ಅವಳು ನೀಡುವ ಪುಟ್ಟ ಪುಟ್ಟ ಉಡುಗರೆ ಕೂಡಾ ನನಗೆ ಅಮೂಲ್ಯವಾದದ್ದು ಹಾಗೂ ಆಪ್ಯಾಯಮಾನವಾದದ್ದು. ಇಂತಹ ಚಿಕ್ಕ ಚಿಕ್ಕ ವಿಚಾರಗಳು ಕೂಡಾ ಅಮ್ಮಂದಿರಿಗೆ  ಅದೆಷ್ಟು ಸಂತೋಷ ನೀಡುತ್ತದೆ ಅಂತ ಅಮ್ಮಂದಿರಿಗೆ ಗೊತ್ತು. ಆದರೆ ಅಂತಹ  ಸಣ್ಣ ಸಣ್ಣ ಸಂತೋಷವನ್ನೂ ಕೊಡಲಾರದ ಮಕ್ಕಳು ನಮ್ಮ ನಿಮ್ಮ ನಡುವೆಯೇ ಇದ್ದಾರೆ.     ಅಮ್ಮ ಅಂದರೆ ದೇವತೆ, ದೇವರು ಎಲ್ಲಾ ಕಡೆ ಇರಲು ಸಾದ್ಯವಿಲ್ಲ ಎಂದೇ  ದೇವರು ಅಮ್ಮನನ್ನು ಸೃಷ್ಟಿಸಿದ್ದಾನೆ. ಅಮ್ಮ ಎನ್ನುವ ಮಾತಿನಲ್ಲೇ ಅಮೃತವಿದೆ. ಪ್ರೀತಿ. ಕರುಣೆ, ವಾತ್ಸಲ್ಯ , ಮಮತೆ, ಕ್ಷಮಾಗುಣ, ಆರ್ದತೆ,ತ್ಯಾಗ, ಸಹಿಷ್ಣುತೆ  ಮುಂತಾದ ಪ್ರಪಂಚದ ಎಲ್ಲಾ ಒಳ್ಳೆಯ ಗುಣಗಳನ್ನು ಅಮ್ಮನಲ್ಲಿ ಇಟ್ಟು  ದೇವರು ತನ್ನ ಪ್ರತಿನಿಧಿಯಾಗಿ ಈ ಲೋಕದಲ್ಲಿ ಸೃಷ್ಟಿಸಿದ್ದಾನೆ.  ಕರುಳ ಕುಡಿಯನ್ನು ನವ ಮಾಸಗಳು ತನ್ನ ಉದರದಲ್ಲಿ ಪೋಷಿಸಿ , ಪ್ರಾಣವನ್ನೇ ಒತ್ತೇ ಇಟ್ಟು ಮಗುವಿಗೆ ಜನ್ಮ ನೀಡಿ, ಹಸುಗೂಸನ್ನು  ಲಾಲಿಸಿ, ಪಾಲಿಸಿ, ಪೋಷಿಸಿ ಒಂದು ವ್ಯಕ್ತಿಯನ್ನಾಗಿ ಮಾಡುವಲ್ಲಿ ಅಮ್ಮನ ಪಾತ್ರದಿಂದಾಗಿಯೇ ಈ ಜಗದಲ್ಲಿ ಸರ್ವ ಶ್ರೇಷ್ಠ ಸ್ಥಾನ ಅಮ್ಮನಿಗೆ. ಸಿರಿ ಸಂಪತ್ತು. ವೈಭೋಗ. ಜೀವ ಸೃಷ್ಟಿಯಲ್ಲಿ ತಾಯಿ ಹಾಗೂ ಆಕೆಯ ಪ್ರೀತಿ, ವಾತ್ಸಲ್ಯಕೆ  ಸರಿಸಾಟಿಯಿಲ್ಲ, ಜಗಕೆ ಒಡೆಯನಾದರೂ ಅಮ್ಮನಿಗೆ ಮಗನೇ. ತಾಯಿ ದೇವರು ಸಕಲ ಸರ್ವಸ್ವ, ಪೂಜ್ಯ ಮಾತೆ. ಕರುಣ ಮಯಿ, ಬಂಧು ಬಳಗ ಮುಂತಾದುವುಗಳೆಲ್ಲಾ ಒಂದು ತೂಕ ಅಥವಾ ಒಂದು ಭಾಗವಾದರೆ, ತಾಯಿಯೇ ಒಂದು ಪ್ರತ್ಯೇಕ ಭಾಗ. ತಾಯಿ ಸ್ಥಾನವನ್ನು ಯಾರೂ ತುಂಬಲಾರರು. ಹಾಗಾಗಿಯೇ ಅಮ್ಮನೆಂದರೆ ಪೂಜನೀಯ. ಅಮ್ಮ ಎನ್ನುವ ಮಾತಿನಲ್ಲಿ ಅಮೃತವಿದೆ. ಕಷ್ಟ ಸುಖ ಆನಂದದಲ್ಲಿ ಮೊದಲು ಹೊರಡುವ ಪದವೇ ಅಮ್ಮ .” ಅಮ್ಮ ಎಂದರೆ ಮೈ ಮನವೆಲ್ಲಾ ಹೂವಾಗುವುದಮ್ಮಾ ನೋವೋ ನಲಿವೋ ಹೊರಡುವ ದನಿಯೇ ಅಮ್ಮಾ ಅಮ್ಮಾ “ಅಂತ ಹಾಡಿದ್ದಾರೆ. ಕೆಟ್ಟ ಮಕ್ಕಳು ಇರಬಹುದು ಆದರೆ ಕೆಟ್ಟ ತಾಯಿ ಇರಲಾರಳು ಅಂತ ಶಂಕರಚಾರ್ಯರು ಹೇಳಿದ್ದಾರೆ. ಈ ಕುರಿತು  ಪ್ರಚಲಿತವಿರುವ ಒಂದು ಕಥೆ ನೆನಪಾಗುತ್ತದೆ. ಒಂದು ಸಂಸಾರದಲ್ಲಿ ತಾಯಿ, ಮಗ , ಸೊಸೆ ಇರುತ್ತಾರೆ. ಸಂಸಾರವೆಂದ ಮೇಲೆ ಜಗಳ ಕದನ ಇದ್ದದ್ದೆ. ಅವರ ಮನೆಯಲ್ಲೂ ಅತ್ತೆ ಸೊಸೆಗೆ ಮುಗಿಯದ ಜಗಳ. ಯಾರ ಪರ ವಹಿಸಿದರೂ ಕಷ್ಟವೇ. ಇತ್ತ ಅಮ್ಮಾ, ಅತ್ತ ಹೆಂಡತಿ. ಯಾರಿಗೂ ಏನನ್ನು ಹೇಳದೆ ಸುಮ್ಮನಿದ್ದು ಬಿಡುತ್ತಿದ್ದ. ಅಮ್ಮಾ ಮಗನ ಮನೆಯಲ್ಲಿ ಇರಲಾರದೆ ಬೇರೆ ವಾಸಿಸ ತೊಡಗುತ್ತಾಳೆ. ಹಾಗೊಂದು ದಿನ ಹೆಂಡತಿ, ಅತ್ತೆಯನ್ನು ಹೇಗಾದರೂ ಮಾಡಿ ಅತ್ತೆಯನ್ನು ನೀವಾರಿಸಿಕೊಳ್ಳಬೇಕು ಅಂತ ಉಪಾಯಮಾಡಿ ತನಗೆ ತುಂಬಾ ಕಾಯಲೆ ಎಂಬಂತೆ ನಟಿಸುತ್ತಾಳೆ, ಯಾವ ವೈದ್ಯರಿಗೆ ತೋರಿಸಿದರೂ ವಾಸಿಯಾಗದಿದ್ದಾಗ ಗಂಡನಿಗೆ ಚಿಂತೆಯಾಗುತ್ತದೆ. ಆಗ ಹೆಂಡತಿ ಗಂಡನಿಗೆ ಹೇಳುತ್ತಾಳೆ ತನ್ನ ಕಾಯಲೆ ವಾಸಿಯಾಗ ಬೇಕಾದರೆ ನಿನ್ನ ತಾಯಿಯ ಹೃದಯ ಬೇಕು ಅದನ್ನು ತಂದು ಕೊಡು ಎಂದು ಹೇಳುತ್ತಾಳೆ. ಹೆಂಡತಿಯ ಕಾಯಲೆ ವಾಸಿಯಾದರೆ ಸಾಕು ಅಂತ ಮಗ ಅಮ್ಮನ ಬಳಿ ಬಂದು ಅಮ್ಮನನ್ನು ಕೊಂದು ಅವಳ ಹೃದಯ ತೆಗೆದು ಕೊಂಡು  ಆತುರ ಆತುರವಾಗಿ ಹೋಗುತ್ತಿರುವಾಗ ಎಡವುತ್ತಾನೆ. ಆಗ ಅವನ ಕೈಯಲ್ಲಿದ್ದ ಅವನ ಅಮ್ಮಾನ ಹೃದಯ ಮೆಲ್ಲಗೆ ಹೋಗಪ್ಪ ಎಡವಿ ಬಿದ್ದಿಯಾ ಜೋಕೆ ಅಂತ ಎಚ್ಚರಿಸುತ್ತದೆ. ಮಗ ತನ್ನನ್ನು ಕೊಂದರೂ ಮಗನನ್ನು ದ್ವೇಷಿಸದೆ, ಅವನಿಗಾಗಿ ಅವನ ಕ್ಷೇಮಕ್ಕಾಗಿ ಅಮ್ಮನ ಹೃದಯ ತುಡಿಯುತ್ತದೆ ಎಂಬುದಕ್ಕೆ ಈ ಕಥೆ ನಿದರ್ಶನವಾಗಿದೆ.      ಹತ್ತು ಜನ ಬೋಧಕರಿಗಿಂತ ಒಬ್ಬ ಜ್ಞಾನಿ ಹೆಚ್ಚು. ಹತ್ತು ಮಂದಿ ಜ್ಞಾನಿಗಳಿಗಿಂತ ಒಬ್ಬ ತಾಯಿಯೇ ಹೆಚ್ಚು. ತಾಯಿಗಿಂತ ಉತ್ತಮ ಗುರುವಿಲ್ಲ. ಹಾಗೆಂದೇ ಮನೆಯನ್ನು ಮೊದಲ ಪಾಠಶಾಲೆ, ಜನನಿಯೇ ಮೊದಲ ಗುರು ಅಂತ ಕೈಲಾಸಂ ಹೇಳಿದ್ದಾರೆ. ಮಗುವನ್ನು ತಿದ್ದಿ ತೀಡಿ ಒಬ್ಬ ಯೋಗ್ಯ ವ್ಯಕ್ತಿಯನ್ನಾಗಿ ಮಾಡುವ ಗುರುತರವಾದ ಹೊಣೆಗಾರಿಕೆ ತಾಯಿಯದ್ದೇ ಆಗಿದೆ. ಆ ಹೊಣೆಯನ್ನು ಸಮರ್ಥವಾಗಿ ನಿರ್ವಹಿಸುವ ತಾಯಿ ತನ್ನ  ಮಗುವನ್ನು ಉತ್ತಮ ವ್ಯಕ್ತಿಯನ್ನಾಗಿ ರೂಪಿಸಿ ಸಮಾಜಕ್ಕೆ ನೀಡುವಳು. ತಾನು ಹೆತ್ತ ಮಗುವಿಗಾಗಿ ಏನನ್ನು ಬೇಕಾದರೂ ಮಾಡಲು ಸಿದ್ದವಾಗಿರುವ ತಾಯಿಯ ಪ್ರೀತಿಗೆ, ವಾತ್ಸಲ್ಯಕ್ಕೆ ಎಣೆ ಇದೆಯೇ. ಅಮ್ಮಾ ಎನ್ನುವುದು ಮಧುರವಾದ ಮಾತು. ಜೀವನಕ್ಕೆ ಬೆಳಕು ನೀಡುವ ಜ್ಯೋತಿ. ಮಗುವಿಗೆ ಅಮ್ಮನ ರಕ್ಷಾಕವಚದಿಂದಾಗಿ ಸುರಕ್ಷತೆ. ದೇವರು ಇಲ್ಲಾ ಎಂದು   ಯಾರು ಬೇಕಾದರೂ ಹೇಳ ಬಹುದು, ಆದರೆ ಅಮ್ಮಾ ಇಲ್ಲ ಎಂದು ಹೇಳಲು ಸಾದ್ಯವೇ ಇಲ್ಲ ಈ ಜಗತ್ತಿನಲ್ಲಿ. ತ್ಯಾಗಕೆ, ಮಮತೆಗೆ, ವಾತ್ಸಲ್ಯಕೆ, ಅನುರಾಗಗಳಿಗೆ ಮತ್ತೊಂದು ಹೆಸರೆ ಅಮ್ಮಾ. ಮಕ್ಕಲ ಸುಖದಲ್ಲಿ ತನ್ನ ಸುಖ ಕಾಣುವ ಏಕೈಕ ಜೀವಿ ಎಂದರೆ ತಾಯಿ ಮಾತ್ರಾ. ಇಂತಹ ಅಮ್ಮನ ಋಣ ತೀರಿಸಲು ಸಾದ್ಯವೇ ಇಲ್ಲ, ಹಾಗಾಗಿಯೇ ಈ ದೇಶದಲ್ಲಿ ಅಮ್ಮನಿಗೆ ಪೂಜನೀಯ ಸ್ಥಾನ. ಇಂತಹ ಪೂಜನೀಯ ಅಮ್ಮನಿಗಾಗಿ ವಿದೇಶಗಳಲ್ಲಿ ವರ್ಷದಲ್ಲಿ ಒಂದು ದಿನವನ್ನು ತಾಯಿಗಾಗಿ ಮಿಸಲಿಟ್ಟು” ಮದರ್ಸ ಡೇ” ಎಂದು ಆಚರಿಸಿ ಅಂದು ಅಮ್ಮನನ್ನು ಕೊಂಡಾಡಿ ಅವಳಿಗೆ ಪ್ರೀತಿಯ ಉಡುಗರೆ ನೀಡಿ ಆ ದಿನದಲ್ಲಿ ಆಕೆ ಹೆಚ್ಚು ಸಂತೋಷವಾಗಿರುವಂತೆ ನೋಡಿಕೊಳ್ಳುತ್ತಾರೆ.     ಜಾಗತೀಕರಣದಿಂದಾಗಿ ಆ ಹಬ್ಬ ನಮ್ಮ ದೇಶಕ್ಕೂ ಕಾಲಿಟ್ಟಿತು. ಮದರ್ಸ ಡೇಯನ್ನು  ಹುಟ್ಟಿದ ದೇಶವನ್ನು ಮಾತೃಭೂಮಿ ಎಂದು ಗೌರವಿಸುವ ಈ ದೇಶದಲ್ಲಿ ಕೂಡಾ   ಸಂತೋಷವಾಗಿ ಸ್ವಾಗತಿಸಿ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಇಂಟರ್‍ನೆಟ್ ಮತ್ತು ಮೊಬೈಲ್ ಕ್ರಾಂತಿಯಿಂದಾಗಿ ಭಾರತ ದೇಶದಲ್ಲಿಯೂ ಅಮ್ಮನಿಗಾಗಿ ಒಂದು ದಿನವನ್ನು ಮೀಸಲಿಟ್ಟು ಅಮ್ಮನ ದಿನದ ಗೆಲುವಿಗೆ ಕಾರಣರಾಗಿದ್ದಾರೆ. ಮಗುವಿಗೆ ಜನ್ಮ ನೀಡುವುದರಿಮದ ಮೊದಲುಗೊಂಡು ಉಸಿರು ಇರುವವರೆಗೂ ಮಕ್ಕಳ ಏಳ್ಗೆಗಾಗಿ ತಪಸ್ಸಿನಂತೆ ಸೇವೆ ಸಲ್ಲಿಸುವ ನಿಸ್ವಾರ್ಥ ಜೀವಿ ಅಮ್ಮನಿಗಾಗಿ ಮೇ ತಿಂಗಳ ಎರಡನೇ ಭಾನುವಾರ ಅಂತರಾಷ್ಟ್ರೀಯ ಮಾತೃ ದಿನೋತ್ಸವವನ್ನಾಗಿ ಆಚರಿಸಲಾಗುತ್ತಿದೆ,      ಬದಲಾಗುತ್ತಿರುವ ಈ ದಿನಗಳಲ್ಲಿ ಮಾನವ ಸಂಬಂಧಗಳು ತನ್ನ ಮೌಲ್ಯಗಳನ್ನು ಕಳೆದು ಕೊಂಡು ಮಾನವೀಯತೆ ಕ್ಷೀಣಸುತ್ತಿರುವ ಈ ಸಂದರ್ಭದಲ್ಲಿ ಅಮ್ಮಾ ಕೂಡಾ ಹೊರೆಯಾಗುತ್ತಿದ್ದು ಮಕ್ಕಳ ತಿರಸ್ಕಾರಕ್ಕೆ ಗುರಿಯಾಗುತ್ತಿರುವುದು ವಿಪರ್ಯಾಸವಾಗುತ್ತಿದೆ. ಹೆತ್ತ ಮಕ್ಕಳು ಸ್ವಾರ್ಥಿಗಳಾಗಿ ತಮ್ಮ ಭೋಗ ಲಾಲಸೆಯಲಿ ಮುಳುಗಿ ಹೆತ್ತ ತಾಯಿಯನ್ನೇ ಮರೆತು ಬಿಟ್ಟಿರುವ ನಿದರ್ಶನಗಳನ್ನು ನಾವು ಪ್ರತಿ ನಿತ್ಯನಾವು ಕಾಣುತ್ತಲೆ ಇರುತ್ತೆವೆ, ಹೈಟೆಕ್ ಯುಗದಲ್ಲಿ ವೃದ್ದಾಶ್ರಮಗಳು ತಲೆಯೆತ್ತಿ ಅಮ್ಮಂದಿರ ಆಶ್ರಯ ತಾಣಗಳಾಗುತ್ತಿರುವುದು ನೋವಿನ ಸಂಗತಿಯಾಗಿದೆ, ಅಲ್ಲಿ ಸೂಕ್ತ ಆರೈಕೆ, ಪೋಷಣೆ ಸಿಗದೆ ಹಿಡಿ ಪ್ರೀತಿಗಾಗಿ ಹಂಬಲಿಸುತ್ತ ಕಾಲನ ಕರೆಗೆ ಕಾಯುತ್ತಿರುವುದು ಕರುಳಿರಿವ ಸಂಗತಿ. ಈ ದುರಂತದ ಅಂತಿಮ ದಿನಗಳು ಯಾರ ಬಾಳಿನಲ್ಲೂ ಬರಬಾರದು. ಹೆತ್ತ ಅಮ್ಮ ತಮ್ಮ ಕಣ್ಮುಂದೆ ಸದಾ ನಗುತ್ತಿರಲಿ ಎಂದು ಬಯಸುವ ಮಕ್ಕಳೆ ಈ ಭೂಮಿ ಮೇಲೆ ತುಂಬಿರಲಿ . ಅಮ್ಮನ ಆರೋಗ್ಯಕ್ಕಾಗಿ,  ಆರೈಕೆಗಾಗಿ,ಆನಂದಕ್ಕಾಗಿ ಮಕ್ಕಳು ತಮ್ಮ ಬದುಕಿನ ದಿನಗಳ ಕೆಲ ಗಂಟೆಗಳನ್ನಾದರೂ ಮೀಸಲಿಟ್ಟು ಆ ತಾಯ ಕಣ್ಣಲಿ ಮಿಂಚರಿಸಲಿ ಎಂಬುದೇ ಈ ಲೇಖನದ ಆಶಯ. *****************                                                  

ಅಮ್ಮಂದಿರ ದಿನದ ವಿಶೇಷ- ಬರಹ Read Post »

ಇತರೆ

ಅಮ್ಮಾ ಎಂಬ ಬೆಳದಿಂಗಳು

ಅಮ್ಮಾ ಎಂಬ ಬೆಳದಿಂಗಳು ನಾಗರೇಖಾ ಗಾಂವಕರ ಅಮ್ಮಾ! ಅಂದ ಕೂಡಲೇ ಅದೇನೋ ಮಧುರವಾದ ಭಾವ ಎದಗೂಡಲ್ಲಿ ಚಕ್ಕನೇ ಸುಳಿದಂತಾಗುತ್ತದೆ. ಆಪ್ತವಾದ ಹೃದಯವೊಂದರ ಬಡಿತ ದೂರದಲ್ಲಿದ್ದರೂ ನಮ್ಮ ಹತ್ತಿರವೇ ಸುಳಿದಾಡುತ್ತಿದೆ ಎಂಬಂತೆ ಭಾಸವಾಗುತ್ತದೆ. ಮಗಳಿಗೆ ಇಷ್ಟವೇನು? ಕಷ್ಟವೇನು ಎಂಬುದನ್ನು ನನ್ನಮ್ಮ ಅರಿತುಕೊಂಡಿದ್ದಳೇ? ಕೆಲವೊಮ್ಮೆ ಅನ್ನಿಸುತ್ತಿತ್ತು. ಅಮ್ಮನಾಗುವುದೆಂದರೆ ಆ ಪರಿಯ ಜವಾಬ್ದಾರಿಯೇ!  ನನ್ನಮ್ಮನೇಕೆ ಸಣ್ಣದಕ್ಕೂ ರೇಗುತ್ತಾರೆ? ಯಾಕೆ ನನ್ನ ಹುಟ್ಟಿಸಿಕೊಳ್ಳಬೇಕಿತ್ತು. ಬೈಯುವುದಾದರೂ ಏಕೆ? ಅಮ್ಮ ಬೈದಾಗ ತಂದೆ ಬೆಂಬಲಿಸುತ್ತಿದ್ದರೂ ಅಮ್ಮ ಅದಕ್ಕೂ ಹುಸಿಮುನಿಸು ತೋರುತ್ತಿದ್ದಾಗ  ಅಮ್ಮ ! ನಿನಗೆ ಹೊಟ್ಟೆ ಕಿಚ್ಚು ಅಂತೆಲ್ಲಾ ನಗುತ್ತಿದ್ದ  ನನಗೆ ಈಗ ಅದರರ್ಥವಾಗುತ್ತಿದೆ. ಒಳಗೊಳಗೆ ಖುಷಿ ಪಡುತ್ತಿದ್ದ ತಾಯಿ ಹೃದಯ, ಗಂಡನಾದವ ತನ್ನ ಮಕ್ಕಳನ್ನು ಮುದ್ದಿಸುತ್ತಿದ್ದರೆ ತಾಯಿ ತೋರುವ ಹುಸುಮುನಿಸು ವಿಚಿತ್ರ ಖುಷಿಯ ಸಂಭ್ರಮವೆಂದು. . ಬದುಕಿನ ಹಲವು ಪಾಠಗಳನ್ನು ಕಲಿಸಿದ್ದು ಹೆತ್ತವರಲ್ಲವೆ? ಆ ಪಾಠಗಳ ಇಂದಿಗೂ ನನ್ನ ಮಕ್ಕಳಿಗೆ ಮುದ್ದಾಂ ಆಗಿ ಹೇಳುವಾಗ ನನಗೆ ನನ್ನಮ್ಮ ನೆನಪಾಗುತ್ತಾರೆ. ಅಮ್ಮನ ಮಾತಿಗೆ ಅಂದು ಸಿಡಿಮಿಡಿಗುಡುತ್ತಿದ್ದ ನಾನು ಇಂದು ಅಮ್ಮನಾದ ಮೇಲೆ ಆ ಮಾತುಗಳನ್ನು, ನಡೆಯನ್ನು ಅನುಕರಿಸುವುದೇಕೆಂದು ಹಲವು ಬಾರಿ ನನ್ನಷ್ಟಕ್ಕೆ ಕೇಳಿಕೊಂಡಿದ್ದೇನೆ. ಕಾರಣ ಆ ಮಾತುಗಳು ಹೊರ ಮನಸ್ಸಿಗೆ ಕಹಿಯಾಗಿದ್ದರೂ, ಒಳಮನಕ್ಕೆ ಹಿತವಾಗಿರಬೇಕು. ಹಾಗಾಗೇ ಅವುಗಳನ್ನು ನನ್ನ ಸುಪ್ತ ಮನ ನೆನಪಿನಲ್ಲಿಟ್ಟುಕೊಂಡಿರಬೇಕು. ಅಲ್ಲವೇ?                                                   ಆಕೆಯ ಒಳಗುದಿ, ಹೆಣ್ಣು ಹೆತ್ತ ಕರುಳಿನ ಜವಾಬ್ದಾರಿ ಎಷ್ಟೆಂಬುದು ಆ ನಂತರವಷ್ಟೇ ನನಗರ್ಥವಾಗಿದ್ದು. ಹುಡುಗಿಯಾದ ತಪ್ಪಿಗೆ ನನಗಿಂತ ಶಿಕ್ಷೆ ಎಂದು ಆಗ ಅನ್ನಿಸುತ್ತಿತ್ತಾದರೂ, ಅಮ್ಮನ ಉಪದೇಶಗಳು ಕಿರಿಕಿರಿಗಳು, ಕೊರೆತದ ಗರಗಸವೆನ್ನಿಸುತ್ತಿತ್ತಾದರೂ ಅದು ನನ್ನನ್ನು ಕೊರೆಯಲಿಕ್ಕಲ್ಲ. ಬದಲಿಗೆ ನನ್ನ ಸುತ್ತ ಇದ್ದ ಮುಳ್ಳು ಹಿಂಡುಗಳನ್ನು ಕತ್ತರಿಸಿ ನನಗೊಂದು ಸುಂದರ ಉಪವನ ನಿಮರ್ಿಸಿಕೊಡುವ ಆಸೆಯಿಂದಾಗಿತ್ತು ಎಂಬುದು ನನಗರ್ಥವಾಗಿದ್ದು ನಾನು ತಾಯಿಯಾಗಿ ಆ ಹೊರೆ ಹೊತ್ತಾಗಲೇ. ಅಮ್ಮ ನನ್ನ ಎತ್ತಿ ಎತ್ತಿ ಮುದ್ದಿಸಿರಲಿಲ್ಲ. ಹೊಗಳಿ ಹಾಡುತ್ತಿರಲಿಲ್ಲ.  ಆದರೆ  ತೆಗಳಲು ಹಿಂದೆ ಮುಂದೆ ನೋಡುತ್ತಿರಲಿಲ್ಲ. ಹೀಯಾಳಿಸುವುದು, ನೋಯಿಸುವುದು ಮಾಡಿದಾಗಲೆಲ್ಲ ಅಮ್ಮ ಕ್ರೂರಿಯಂತೆ ಕಾಣುತ್ತಿದ್ದರು. ಮೂದಲಿಕೆ ಮಾಡಿಗೊತ್ತೆ ಹೊರತು ಮುದ್ದಿಸಿ ಗೊತ್ತಿಲ್ಲ ನಿನಗೆ ಎಂದು ದೊಡ್ಡವಳಾದಾಗ ಹೇಳುತ್ತಿದ್ದೆ ಅಮ್ಮನಿಗೆ. ಆಗ ಆಕೆ . ನಾ ಮುದ್ದಿಸ್ತಾ ಕೂತ್ರೆ, ನೀ ಮುದ್ದೆ ತಿನ್ನುಕಾತತೇ ಮಗನೇ?  ಎನ್ನುತ್ತಿದ್ದರು. ಅದೂ ನಮಗೂ ಅರಿವಿತ್ತು.                 ಆದರೆ ಅಮ್ಮ ಮಕ್ಕಳ ಬಗ್ಗೆ ಅದೆಷ್ಟು ಕಾಳಜಿ ಮಾಡುತ್ತಿದ್ದರು. ಮನೆಯಿಂದ  ಹೊರಹೋದ ಮಕ್ಕಳು  ಸರಿಯಾದ ಸಮಯಕ್ಕೆ ಬರದಿದ್ದಲ್ಲಿ ಅಮ್ಮ ಕಳವಳ ಪಡುತ್ತಿದ್ದಳು.  ಶಾಲೆಗೋ,ಇನ್ನಿತರ ಕೆಲಸಕ್ಕೋ  ಹೊರಹೋದ ಮಕ್ಕಳು  ಬರುವುದು  ಒಂದಿಷ್ಟು ವಿಳಂಬವಾದರೂ ಆಕೆಯ ಮನಸ್ಸು ಪರಿತಪಿಸುತ್ತಿತ್ತು.  ಮನೆಯಂಗಳದಲ್ಲಿ ನಿಂತು ಕಣ್ಣು ಹಾಯುವಷ್ಟು ದೂರ ನೋಡುತ್ತಾ ಕಾಯುತ್ತ ಉಳಿದು ಬಿಡುತ್ತಿದ್ದಳು. ದೂರದಲ್ಲಿ ಬರುವ ಮಕ್ಕಳನ್ನು ಕಂಡೊಡನೆ ಆಕೆಗೆ ಸಮಾಧಾನವಾಗುತ್ತಿತ್ತು. ಅಮ್ಮ ಆಗಾಗ ನನ್ನ ಎಣ್ಣೆಗಪ್ಪು ಮೈಬಣ್ಣವನ್ನು ಲೇವಡಿ ಮಾಡುತ್ತಿದ್ದರು. ಅಕ್ಕಂದಿರ ಬಿಳಿ ಚರ್ಮದೊಂದಿಗೆ ಹೋಲಿಸುತ್ತಿದ್ದರು. ಬಿಸಿಲಿಗೆ ಮುಖ ಕೊಟ್ಟು  ನಡೆವ ನನಗೆ ಬೈಯುತ್ತಿದ್ದರು. ಆಗೆಲ್ಲ ನನಗೆ ಅತಿಯಾದ ನೋವು, ಜಿಗುಪ್ಸೆ ಬರುತ್ತಿತ್ತು. ನನಗೂ ಬಂಗಾರದ ಬಣ್ಣವನ್ನು ದೇವರು ಕೊಡಲಿಲ್ಲವೇಕೆಂದು ದೇವರನ್ನು ದೂರುತ್ತಿದ್ದೆ. ಸದಾ ನನ್ನ ಕಾಡುವ ನನ್ನ ಬಣ್ಣವನ್ನು ಹಂಗಿಸುವ ಅಣ್ಣಂದಿರ ಜೊತೆ ಸೇರಿ ತಾನೂ ನನ್ನ ತಮಾಷೆ ಮಾಡುವುದರಲ್ಲಿ ಅದ್ಯಾಕೋ ಅಮ್ಮ ಖುಷಿ ಪಡುತ್ತಿದ್ದಳು. ಎಳೆಯ ಮನಸ್ಸಿಗೆ ನೋವಾಗುವುದೆಂಬ ಕನಿಷ್ಟ ತಿಳುವಳಿಕೆ ಅಮ್ಮನಾದವಳಿಗೆ ಇರಲಿಲ್ಲವೇ? ಎಂಬ ವಿಸ್ಮಯ ನನಗೀಗ ಆಗುತ್ತಿದೆ.  ಆಗೆಲ್ಲ ಮಾನಸಿಕವಾಗಿ ನಾನು ಎಷ್ಟು ಕುಗ್ಗಿ ಹೋಗುತ್ತಿದ್ದೆ ಎಂದರೆ ಯಾರೂ ಇಲ್ಲದಾಗ ಮನೆ ಹಿಂದಿನ ಹಳ್ಳದ ಕಡೆ ನಡೆದುಬಿಡುತ್ತಿದ್ದೆ. ನೀರಿನ ಝಳು ಝಳು ನಾದದೊಂದಿಗೆ ನನ್ನ ಆಕ್ರಂದನ ಬೆರೆದು ಹೋಗುತ್ತಿತ್ತು. ಈಗೆಲ್ಲ ನಾವು ಮಕ್ಕಳು ಅತ್ತರೆ ಅದೆಷ್ಟು ಮುದ್ದಿಸುತ್ತೇವೆ. ಆಗ ನಮಗೆ  ನೋವನ್ನು  ಉಂಟುಮಾಡಿಯೂ ಸಂತೈಸಲು ಇಷ್ಟಪಡದ, ಆ ಪರಿಯ ಪ್ರೀತಿಯನ್ನು ಎಂದೂ ತೋರದ ಹೆತ್ತವರು ಕೆಲವೊಮ್ಮೆ ಕ್ರೂರಿಗಳಂತೆ ಕಂಡಿದ್ದರು. ಪ್ರೀತಿ ಹೃದಯದಲ್ಲಿತ್ತೆಂದು ಈಗ ಅರಿವಾಗುತ್ತದೆ ಅಷ್ಟೇ! ಅದನ್ನು ಪ್ರಕಟಿಸಬಾರದಿತ್ತೇ ಆಗಲೇ ಎಂದೂ ಅನ್ನಿಸುತ್ತದೆ. ಇದೆಲ್ಲ ನಾನು ಪ್ರೌಢೆಯಾಗುತ್ತಾ ಅರಿವಾಗುತ್ತಿದೆ. ಕಾಲೇಜು ಮುಗಿಯುವವರೆಗೂ ಅಮ್ಮ ನನ್ನನ್ನೆಂದೂ ಪ್ರೀತಿಯಿಂದ ಮುದ್ದಿಸಿರಲಿಲ್ಲ. ಕಾಲೇಜು ಮುಗಿಸಿ ಮನೆಗೆ ಬರುತ್ತಲೇ ನನ್ನ ಅಣ್ಣಂದಿರು  ಹಾಗೂ ಎರಡನೇಯ ಅಕ್ಕನಿಗೆ ಅಮ್ಮನ ಕೈ ಅಡುಗೆಯೇ ಆಗಬೇಕಿತ್ತು. ಅಮ್ಮ ಬಡಿಸದಿದ್ದರೆ ಉಣ್ಣದೇ ಉಳಿಯುವ ಜಾಯಮಾನ ಅವರದು. ಆದರೆ ನನಗೆ? ಅಮ್ಮ ಗಟ್ಟಿಗಾತಿ. ಸ್ವಲ್ಪ ಕೋಪಿಷ್ಟೆ. ಇಪ್ಪತ್ತಾರು ವರ್ಷಕ್ಕೆ ಆರು ಮಕ್ಕಳ ತಾಯಿಯಾಗಿ ಸಂಸಾರದ ನೊಗ ಹೊತ್ತಿದ್ದರು. ಸರಕಾರಿ ನೌಕರನಾದ ತಂದೆ ವಗರ್ಾವಣೆಗೊಂಡಲ್ಲೆಲ್ಲಾ ಊರೂರು ಅಲೆಯುತ್ತಾ ಸುಮಾರು ಹತ್ತು ವರ್ಷ ಹೇಗೋ ಕಾಲ ತಳ್ಳಿದ ಮೇಲೆ ಮಕ್ಕಳ ವಿಧ್ಯಾಭ್ಯಾಸದ ಜೊತೆಗೆ  ತನ್ನದೇ ಸ್ವಂತ ಸೂರು, ಬಂಧುಬಾಂಧವರ ಜೊತೆ ಹತ್ತಿರದ ನೆಲೆಯನ್ನು, ಭದ್ರತೆಯನ್ನು ಆಪೇಕ್ಷಿಸಿ ಅಮ್ಮ  ಮಕ್ಕಳ ಕಟ್ಟಿಕೊಂಡು ಊರಿಗೆ  ಬಂದೇಬಿಟ್ಟರು. ತಂದೆಯನ್ನು ನಾವು ‘ದಾದ’ ಎಂದೇ ಕರೆಯುತ್ತಿದ್ದೆವು. ದಾದ  ಊರಲ್ಲಿ ಹತ್ತು ಹದಿನೈದು ಎಕರೆ ಜಮೀನು ಖರೀದಿಸುವಂತೆ ಮಾಡಿ, ಆ ಭೂಮಿಯಲ್ಲಿ ಕೃಷಿಗೆ ನಿಂತರು ಅಮ್ಮ. ಅವರ ಮಹತ್ವಾಕಾಂಕ್ಷೆಯನ್ನು ಮನಗಂಡ ದಾದ ಅದಕ್ಕೆ ಪೂರಕವಾಗಿ ಜಮೀನಿನಲ್ಲಿ ಭತ್ತದ ಜೊತೆ ತೆಂಗು ಕಂಗುಗಳ ಕೃಷಿಯನ್ನು ಮಾಡಿದರು. ಫಸಲು ಬರುವುದಕ್ಕೆ ಇನ್ನೂ ಕಾಲವಿತ್ತು ಎರಡೆರಡು ಬಾವಿಗಳು ತಲೆ ಎತ್ತಿದ್ದವು. ತಂದೆ ಸರಕಾರಿ ನೌಕರಿಯಲ್ಲಿ ತಮ್ಮ ತೊಡಗಿಸಿಕೊಂಡಿದ್ದರು.                     ಸದಾ ಸಮಾಜಮುಖಿ ಕೆಲಸದಲ್ಲಿ ಇತರರಿಗೆ ಸಹಾಯ, ಸಹಕಾರ, ಮಾರ್ಗದರ್ಶನ ಅಂತೆಲ್ಲ ತನ್ನನ್ನು ತೊಡಗಿಸಿಕೊಂಡಿದ್ದ ತಂದೆ, ಒಬ್ಬರೇ ಕೆಲಸದ ಸ್ಥಳದಲ್ಲಿ ಉಳಿಯಬೇಕಾಯ್ತು. ಯಾವತ್ತೂ ಕ್ರಿಯಾಶೀಲನಾಗಿರುತ್ತಾ, ಹಣವನ್ನೂ ನೀರಿನಂತೆ ಖರ್ಚು ಮಾಡುತ್ತಿದ್ದ ತಂದೆ ನನ್ನಮ್ಮನ ಮದುವೆಯಾದ ನಂತರವೇ ಒಂದು ಹದಕ್ಕೆ ಬಂದಿದ್ದು ಎಂದು ಅಮ್ಮ ಅವರೆದುರು ಹೇಳುತ್ತಿದ್ದರೆ ತಂದೆ ಸಣ್ಣಗೆ ನಗುತ್ತಿದ್ದರು. ಮತ್ತು ತಮಾಷೆಯಾಗೇ  ನನ್ನ ದುಡ್ಡು ತಕ್ಕಂಡೇ ನಂಗೆ ಆರತಿ ಮಾಡ್ತಾಳೇ ನಿಮ್ಮಮ್ಮ ಎನ್ನುತ್ತಿದ್ದರು. ಅಮ್ಮನದು ಒಂದಿಷ್ಟು ಜಾಸ್ತಿಯೇ ಎನ್ನುವ ಹಿಡಿತದ ಕೈ. ಮಕ್ಕಳ ಕುರಿತು ಮುದ್ದಿಗಿಂತ ಅವರ ಮುಂದಿನ ಭವಿಷ್ಯದ ಕುರಿತು ಚಿಂತೆ.                            ತಂದೆ ಹೊರ ಊರಲ್ಲಿ ಹೋಟೆಲ್ಲು ಊಟ ಎನ್ನುತ್ತ ಆರೋಗ್ಯವನ್ನು ಕೆಡಿಸಿಕೊಂಡಿದ್ದರು. ನಲವತ್ತೇಳು ವರ್ಷಕ್ಕೆ ಮೊದಲ ಭಾರಿಗೆ ಹೃದಯಬೇನೆಗೆ ಗುರಿಯಾಗಿದ್ದರು. ಗಟ್ಟಿಗಾತಿ ಅಮ್ಮ ಮೊದಲ ಬಾರಿಗೆ ಅತ್ತಿದ್ದನ್ನು ನೋಡಿದ್ದೆ. ಆಕೆ ಕಳವಳಗೊಂಡಿದ್ದಷ್ಟೇ ಅಲ್ಲ ಆರು ಮಕ್ಕಳ ಹೊತ್ತ ಒಡಲು ಅವರನ್ನು ಪೊರೆಯಬೇಕಾಗಿತ್ತಲ್ಲ. ಹಾಗಾಗಿ ತಂದೆಗೆ ಕಡ್ಡಾಯ ಪೆನಷನ್ ಪಡೆಯಲು ಹೇಳಿ ಮನೆಯಲ್ಲಿ ಆರಾಂ ಆಗಿ ಇರುವಂತೆ ಮಾಡಿದ್ದರು. ಅಂದಿನಿಂದ ತಾವೇ ಹೊಲ ತೋಟ ನೋಡಿಕೊಳ್ಳುತ್ತ ಇರತೊಡಗಿದರು.  ಹೊಲದಲ್ಲಿ ಕೆಲಸದವರೊಂದಿಗೆ ತಾವೂ ದುಡಿಯುತ್ತಿದ್ದರು. ಮನೆಯ ಅಡುಗೆ ಕೆಲಸ, ತೋಟದ ಕೆಲಸ ಗದ್ದೆಯ ಕೆಲಸ, ತೋಟಕ್ಕೆ, ಗದ್ದೆಗೆ  ಔಷಧಿ ಹೊಡೆಯುವುದು, ಗಂಡು ಆಳುಗಳು ಮಾಡುವ ಕೆಲಸಕ್ಕಿಂತ ಹೆಚ್ಚೆ ಮಾಡುತ್ತಿದ್ದರು. ತನ್ನ ದೈಹಿಕ ಆರೋಗ್ಯದ ಕಡೆ ಕಾಳಜಿ ಮಾಡದೇ ಇರುವ ಕಾರಣವೇ ಇರಬೇಕು. ಅಮ್ಮ ಮೂವತ್ತೊಂಬತ್ತು ವರ್ಷಕ್ಕೆ ಮೊದಲ ಬಾರಿ ವಿಪರೀತ ರಕ್ತಸ್ರಾವಕ್ಕೆ ಗುರಿಯಾಗಿ  ಹಾಸಿಗೆ ಹಿಡಿದರು. ಬಂಗಾರದ ಮೈಬಣ್ಣದ ಅಮ್ಮ ಬಿಳಿಚಿಕೊಂಡಿದ್ದರು. ಅಶಕ್ತರಾಗಿದ್ದರು.                                      ನಾನಾಗ ಎಂಟನೇ ತರಗತಿ ಪಾಸಾಗಿದ್ದೆ. ಅಮ್ಮನಿಗೆ ವಿಪರೀತ ರಕ್ತಸ್ರಾವ ಆಗಿ ಊರಲ್ಲಿಯ ಆಸ್ಪತ್ರೆಗಳಿಗೆ ಎಡತಾಕಿದರೆ, ಅಲ್ಲಿ ಗುಣಕಾಣದೇ ಹುಬ್ಬಳ್ಳಿಗೆ ಪೂರ್ತಿ ತಪಾಷಣೆಗೆ ಕೊಂಡೊಯ್ದರು. ಅಲ್ಲಿ ಅವರನ್ನು ಕಾನ್ಸರ್ ತನ್ನ ಮುಷ್ಟಿಯಲ್ಲಿ ಬಂಧಿಸಿರುವುದು ಗೊತ್ತಾಗುತ್ತಲೇ ನಾವೆಲ್ಲ ಮಾತು ಕಳೆದುಕೊಂಡಂತೆ ಅಸಹಾಯಕರಾಗಿದ್ದೆವು. ತಂದೆ ಕಣ್ಣಿರಿಟ್ಟಿದ್ದರು. ಎಲ್ಲ ಮಕ್ಕಳು ಕಲಿಯುತ್ತಿರುವ ಹಂತದಲ್ಲಿ, ಯಾರೂ ತಮ್ಮ ಜೀವನದ ಹಾದಿಯನ್ನು ಕಂಡುಕೊಳ್ಳದ ಹೊತ್ತಲ್ಲಿ, ಅಮ್ಮಾ1 ನೀವು ಎಷ್ಟು ನೋವುಂಡಿರಿ? ಅದೆಲ್ಲ ನಮಗೆ ತಾಕಬಾರದೆಂದು ನೀವಿಬ್ಬರೂ ಇರುವಾಗ ನೀವು ತಣೆಯ ಮೇಲೂ ದಾದ ತಣೆಯ ಮೇಲ್ಚಿಟ್ಟೆಯ ಮೇಲೂ ಕೂತು ಮನಸ್ಸನ್ನು ಹಗುರಮಾಡಿಕೊಳ್ಳುತ್ತಿದ್ದದ್ದನ್ನು ಕೊನೆಯವಳಾದ ನಾನು ಗ್ರಹಿಸುತ್ತಿದ್ದೆ. ಆಗ ಬುದ್ದಿ ಇರಲಿಲ್ಲ. ಸುಮ್ಮನೇ ಇಷ್ಟೊಂದು ನೋಯುತ್ತಾರೆ ಎಂದೆಲ್ಲಾ ಅವರಿಗೆ ಉಪದೇಶ ಮಾಡುತ್ತಿದ್ದೆ. ನೀವಾಗ ನಗುತ್ತಿದ್ದಿರಿ.                            ಅಮ್ಮ ತಿಂಗಳುಗಟ್ಟಲೇ ಆಸ್ಪತ್ರೆಯಲ್ಲಿ ಉಳಿದರು.  ಅರ್ಬುದ ರೋಗಕ್ಕೆ ನೀಡುತ್ತಿದ್ದ ಕರೆಂಟುಗಳು ಅವರ ನರಗಳನ್ನು ನಿರ್ಜೀವ ಮಾಡುತ್ತಿದ್ದವು. ಅಮ್ಮ ಸಾವನ್ನು ಗೆದ್ದು ಬಂದಿದ್ದಳು. ಆದರೆ ಈ ಸಂತೋಷ ಕೂಡಾ ಬಹಳ ದಿನ ಉಳಿಯಲಿಲ್ಲ. ತಂದೆ ಹೃದಯಬೇನೆ ದಿನವೂ ಔಷಧಿ ತಿಂದರೆ ಅಮ್ಮ ಅರ್ಬುದ ರೋಗಕ್ಕೆ. ಮನೆ ಎನ್ನುವದು ಸಣ್ಣ ಔಷಧಾಲಯವಾಗಿತ್ತಲ್ಲ. ಎರಡೇ ವರ್ಷಕ್ಕೆ ಪುನಃ ಅಮ್ಮನ ಮೈ ಮತ್ತೆ ಕ್ಯಾನ್ಸರ್ಗೆ ಬಲಿಯಾಗಿತ್ತು. ಆಗ ಮನೆ ಜನರೆಲ್ಲ ಆಶಾವಾದವನ್ನೆ ಕಳೆದುಕೊಂಡಿದ್ದರು. ಅಲ್ಲವೇ ಅಮ್ಮ?                 ತಂದೆ ಕೂಡಾ ಆಗ ಅತ್ತಿದ್ದರು. ಹಿರಿಯಣ್ಣ ಮನದಲ್ಲೆ ಸಂಕಟ ಪಟ್ಟಿದ್ದ. ಅಮ್ಮನ ಹಿಂದೆ ಯಾವಾಗಲೂ  ಇರುತ್ತಿದ್ದ ಎರಡನೇಯ ಅಣ್ಣ ಕಳವಳಪಟ್ಟಿದ್ದ. ಹಿರಿಯಕ್ಕ  ಕಿರಿಯರಾದ ನಮಗೆ ಅಮ್ಮನಂತೆ ಸಾಂತ್ವನ ಹೇಳುವುದು, ಮೊದಲಿಗಿಂತ ಹೆಚ್ಚು ಪ್ರೀತಿ ತೋರುವುದು ಮಾಡಲಾರಂಭಿಸಿದಳು. ಕಿರಿಯಣ್ಣ ಮೌನಿಯಾಗಿದ್ದ. ಒಟ್ಟು ದಿನಕ್ಕೆರಡು ಕರೆಂಟುಗಳನ್ನು ಕೊಡಿಸಿಕೊಳ್ಳುತ್ತಾ ತಿಂಗಳಾನುಗಟ್ಟಲೆ ಅಮ್ಮ ಹುಬ್ಬಳ್ಳಿ ಕಾನ್ಸರ್ ಆಸ್ಪತ್ರೆಯಲ್ಲಿ ಜನರಲ್ ವಾಡರ್ಿನ ಹಾಸಿಗೆಯಲ್ಲಿ ಮಲಗಿರುತ್ತಿದ್ದರು. ಸ್ವಚ್ಛತೆಯನ್ನು ಇಷ್ಟ ಪಡುತ್ತಿದ್ದ ಅಮ್ಮ ಹುಬ್ಬಳ್ಳಿ ಜನರ ಹಚ್ಚಿಕೊಳ್ಳುವ ಗುಣವನ್ನು ಇಷ್ಟ ಪಡುತ್ತಿದ್ದರೂ, ಅವರ ಸ್ವಚ್ಛವಲ್ಲದ ಜೀವನ ಶೈಲಿಗೆ ಕಷ್ಟ ಪಡುತ್ತಿದ್ದರು. ಬಾತರೂಮುಗಳು, ಟಾಯ್ಲೆಟ್ಗಳು ಎಲ್ಲರೂ ಬಳಸುತ್ತಿದ್ದರಿಂದ ಅಲ್ಲಿಯ ವ್ಯವಸ್ಥೆಯನ್ನು ಕಣ್ಣುಮುಚ್ಚಿ ಬಾಯಿ ಮುಚ್ಚಿ ಸಹಿಸಿಕೊಂಡಿದ್ದರು. ಕಾರಣವಿಷ್ಟೇ, ಖಚರ್ುಮಾಡಲು ಹಣವಿರಲಿಲ್ಲ. ಒಂದಿಷ್ಟು ಇದ್ದರೂ ಮುಂದೆ ಮೂರು ಹೆಣ್ಣು ಮಕ್ಕಳು, ಮೂವರು ಗಂಡು ಮಕ್ಕಳ ಭವಿಷ್ಯ ನೆಲೆಯಾಗಬೇಕಿತ್ತಲೇ? ಅಮ್ಮನೊಂದಿಗೆ ಆಸ್ಪತ್ರೆ ವಾಸಕ್ಕೆ ನಾನೂ ಜೊತೆಯಾಗಿದ್ದೆ.  ಒಂದೊಂದು ಅನುಭವವೂ ನನ್ನ ಮಿತಿಯನ್ನು ವಿಸ್ತರಿಸುತ್ತಲೇ ಇದ್ದವು.  ಸಹನೆಯನ್ನು, ಸಂಕಟಗಳನ್ನು ಎದುರಿಸುತ್ತಾ ಬೆಳೆದೆ. ಆಸ್ಪತ್ರೆಯಲ್ಲಿ ಅಕ್ಕಪಕ್ಕದ ಜನರ ಜೊತೆ ಮಾತನಾಡುತ್ತಾ, ಅಮ್ಮ ಒಮ್ಮೊಮ್ಮೆ ಕಣ್ಣಲ್ಲಿ ನೀರು ತಂದುಕೊಳ್ಳುತ್ತಿದ್ದರು. ನನಗೂ ಅಳು ಬರುತ್ತಿತ್ತು.  ಅಂತೂ ಎರಡನೇ ಬಾರಿಯೂ ಸಾವಿನೊಡನೆ ಹೋರಾಡಿ ಗೆದ್ದು ಮನೆಗೆ ಬಂದಳು ಅಮ್ಮ. ಅಕ್ಕನ ಮದುವೆ ಮಾಡುವ ನಿಧರ್ಾರಕ್ಕೆ ಬಂದರು. ಮದುವೆಯೂ ಆಯಿತು. ಅಣ್ಣನಿಗೆ ಆಗಷ್ಟೇ ನೌಕರಿ ಸಿಕ್ಕಿತು. ಎರಡು ಮೂರು ವರ್ಷಗಳಲ್ಲಿ ಎರಡನೇ ಅಕ್ಕನ ಮದುವೆಯೂ ಆಗಿ ಸಮಾಧಾನ ಎಂದುಕೊಳ್ಳುತ್ತಿರುವಾಗ ಅಮ್ಮನಿಗೆ ಸಕ್ಕರೆ ಕಾಯಿಲೆ ಗಂಟುಬಿದ್ದಿತ್ತು. ಸಿಹಿ ಎಂದರೆ ಪ್ರಾಣವಾಗಿದ್ದ ಅಮ್ಮ ಸಿಹಿಯನ್ನು ಬಿಟ್ಟೆ ಬಿಟ್ಟರು. ಕಟ್ಟು ನಿಟ್ಟಾಗಿ ಪಥ್ಯ ಮಾಡತೊಡಗಿದರು. ಡಯಾಬೀಟಿಸ್ ಮಹಾಶಯ ಕ್ಯಾನ್ಸರ್ಗೆ ಕೊಟ್ಟ ಕರೆಂಟ್ನ ಬಳುವಳಿಯಾಗಿ ಬಂದಿದ್ದ. ಮತ್ತೇ ಶೋಕ! ತಂದೆ ಮೂರನೇ ಬಾರಿ ಹೃದಯಾಘಾತಕ್ಕೆ ಒಳಗಾದಾಗ ಮತ್ತೆ ಬದುಕಲಿಲ್ಲ. ಆ ಒಂದು ಕೆಟ್ಟ ಮುಂಜಾನೆ ಬೆಳಿಗ್ಗೆಯ ನಾನೇ ಕೊಟ್ಟ ಚಹಾ ಲೋಟ ಕೈಯಲ್ಲಿ ಹಿಡಿದಿದ್ದರಷ್ಟೇ! ಮರುಕ್ಷಣ ಮಂಚದ ಮೇಲಿನ  ಹಾಸಿಗೆಯಿಂದ ಕೆಳಗೆ ಬಿದ್ದವರು ಹೊರಟೇ ಹೋಗಿದ್ದರು. ಅಮ್ಮ ಈಗ ಒಂಟಿಯಾಗಿದ್ದರು. ಮಕ್ಕಳನ್ನು ಇನ್ನೂ ಜಾಸ್ತಿ ಜಾಸ್ತಿ ಪ್ರೀತಿಸತೊಡಗಿದರು. ಎಲ್ಲರ ಮದುವೆಯೂ ಆಯಿತು. ಅಮ್ಮ ಅದೆಷ್ಟು ನಿರಾಶೆ, ನೋವು, ಮೂದಲಿಕೆಗಳನ್ನು ಮಾಡಿ ನನ್ನ ತಿದ್ದುವ ಪ್ರಯತ್ನ ಮಾಡುತ್ತಿದ್ದರೋ, ಅಷ್ಟೇ ಪ್ರೀತಿ,ವಿಶ್ವಾಸ, ಕರುಣೆಯನ್ನೂ ಬಡಿಸಿದ್ದರು.  ಒಂದಿಷ್ಟು ಹೇಳಿದ್ದನ್ನು ಕೇಳದ ಅಧಿಕಪ್ರಸಂಗಿ ಎಂದು ಬೈಯುತ್ತಿದ್ದರೋ ಅವರೇ ನನ್ನ ಹಚ್ಚಿಕೊಳ್ಳತೊಡಗಿದರು. ಅದೂ ಅತಿಯಾಗಿ ಪ್ರೀತಿಸಿದ್ದ ಅಕ್ಕ ಮದುವೆಯಾಗಿ ಹೋದ ಮೇಲೆ.  ಎರಡನೇಯ ಅಣ್ಣನ ಮದುವೆಯಾದ ಮೇಲೆ. ಅಮ್ಮ ನನ್ನ ಪ್ರೀತಿಸತೊಡಗಿದ್ದರು. ನಾನು ಅಮ್ಮನ ಮಗಳಾಗಿದ್ದೆ.

ಅಮ್ಮಾ ಎಂಬ ಬೆಳದಿಂಗಳು Read Post »

ಕಾವ್ಯಯಾನ

ಕಾವ್ಯಯಾನ

ಕ್ವಾರೆಂಟೈನ್ ಹಾಯ್ಕುಗಳು. ಪ್ರಮೀಳಾ ಎಸ್.ಪಿ. ಕರೊನಾಕ್ಕೆ ಕಾರಣವಂತೆ ಶಾಂಗ್ಲಿ ಮತ್ತವಳ ಬಾವಲಿ ನರಳುತ್ತಿರೋದು ಮಾತ್ರ ಇಟಲಿಯ ಇಲಿ. ಸತ್ತರಂತೆ ಅಮೆರಿಕಾದಲ್ಲಿ ಅಷ್ಟೊಂದು ಜನ. “ಹೊಯ್” ! ಟೀವಿಯಲ್ಲಿ ಮಾರಾಯ… ಎಂದು ಅಡ್ಡಾಡಿದರು ನಮ್ಮೂರ ಜನ . ಸುರರೇ ಕುಡಿಯುತ್ತಿದ್ದರು ಎಂಬ ನೆಪ ಕುಡುಕರದ್ದು ಕೇಳದಿದ್ದರೂ ನೀಡಿದವರು ಹೇಳಲಾರದ ನೆಪ ‘ಗಲ್ಲ’ದ್ದು. ಕಂಠ ಪೂರ್ತಿ ಕುಡಿದು ಅಪ್ಪ ಅಮ್ಮನಾದರು ಬೆತ್ತಲು ಕಣ್ಣು ಬಿಟ್ಟ ಮಗುವಿನ ಮನದಲ್ಲೀಗ ಕತ್ತಲು. ಕೇಳುವರೆಲ್ಲ ತೆರೆಯಲೆಂದು ಅವರವರ ಆದಾಯದ ಬಾಗಿಲು ತೆರೆಯಿರಿ ಎಂದು ಕೇಳುವುದೇ ಇಲ್ಲ ಮಕ್ಕಳು ಶಾಲೆಯ ಬಾಗಿಲು. ***********************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಹೆಣ್ಣಿನಂತರಾಳ ವಾಣಿ ಮಹೇಶ್ ಮಮತೆಯ ಮಡಿಲಲ್ಲಿ ಮಮತೆಯ ಕಾಣದೆ ಮರುಗುವುದ ಕಲಿತೆ ಮರುಳ ಮನಸು ಅರಿಯದೆಲೆ ಆಸೆಗಳು ಕಂಗಳ ತುಂಬಿವೆ / ಕೊರಳುಬ್ಬಿ ಕಂಗಳ ಕಂಬನಿ ಜಾರಲು.. ಹೆದರಿ ಅಲ್ಲೇ ಅವಿತು ತನ್ನಿರವ ಸೂಚಿಸಿದೆ / ಪ್ರೇಮಮಯಿ ಮಾತೆ ತನ್ನಿರವ ಮರೆತಳು ನಾ ಬರೆದ ರಾಗಕೆ ಸ್ವರವೇ ಇಲ್ಲವಾಗಿಸಿಹಳು ತಂತಿ ಕಡಿದು ಜೀವವೀಣೆ ಜೀವಚ್ಛವವಾಗಿದೆ/ ರಾಗಾಲಾಪಗಳು ಶೋಕದಿ ಬಿಕ್ಕುತಿವೆ ಬಯಸಿದ ಮಮತೆ ದೂರ ಸಾಗಿ ಹೋಗಿದೆ.. ಕಾಣದಾ ಲೋಕಕೆ ನೆನಪು ಹಚ್ಚ ಹಸಿರಾಗಿ ಬೊಬ್ಬಿಡುತಿದೆ / ಮೌನ ಕೆಣಕಿದೆ ಕಾಮನಬಿಲ್ಲಂತೆ ಕಂಗೊಳಿಸುವ ವಯಸ್ಸಿನಲ್ಲೇ… ಚಿವುಟಿದ ಕಾರಣ ಅರಿಯದಾಗಿದೆ../ ಅವಿತಿದ್ದ ಭಾವನೆಗಳು ಪ್ರೀತಿಯ ಪ್ರಣಯಕೆ ಜೋತು ಬಿದ್ದಿದೆ ಬೇಕು ಬೇಡದ ಭಾವನೆಗಳೆಲ್ಲಾ ಚಿಗುರೊಡೆದು ಬದುಕೇ ಇಷ್ಟೆನಿಸಿದೆ / ಮಾತೆಯ ಮಡಿಲಿನ ಮಹಿಮೆ ಆಕಾಂಕ್ಷೆ ಕೊನೆಗೂ ಕರುಣಿಸದೆ ಕನಸಾಗಿಸಿದೆ / *************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಅಂತಃಶುದ್ಧಿಯ ಸಮಯ…!! ಅರ್ಚನಾ ಹೆಚ್ ಜಾತಿ ಧರ್ಮಗಳ ಸುಳಿಯಲರಳಿದ ಕುಸುಮಗಳಿಂದು‌ ಶಿವಪೂಜೆಗೊದಗದೆ ಬರಿದೆ ಬಾಡಿದ ಬೆರಗು..!! ಹೆತ್ತ ಮಡಿಲಲಿ ಮತ್ತೆ ಕೂಸುಗಳು..! ಬದುಕಿದರೂ ಸತ್ತರೂ ಅವಳೊಡಲೇ ಗಮ್ಯ.. ಮಣ್ಣಾಗಬಾರದವುದೆಂಬುದೊಂದೇ ತಾಯಿ ಹರಕೆ..!! ನಾನು ನನ್ನಂದೆಂಬ ತುಂಬು ಗರ್ವದಲಿದ್ದೆ..!!?? ಮತ್ತೆ ಮೇಲಿಹನಾಗ್ರಹ..! ಕಣ್ಣೆವೆಯಿಕ್ಕದೆ ದಿಟ್ಟಿಸಿ ನೋಡು..! ಸ್ವಾರ್ಥ ದುರಾಗ್ರಹದ ಪೀಡೆಯೊಳಾಡಿದ ಮರುಳ ಮಾನವರಿಗಿದೇಟು! ರಣತಂತ್ರ!! ವಿಕೃತ ಮನಸ್ಥಿತಿಗಳಾಟ! ವಿಶ್ವವ್ಯಾಪಿ ಬೀಸಿ ಚಾಟಿಯೇಟು..!! ಧನವೋ! ಋಣವೋ!?? ಶಕ್ತಿಯಾಟದಲಿ ಸತ್ತವರ ಲೆಕ್ಕಗಳು ಸರ್ವವ್ಯಾಪಿ! ಮೃತ್ಯು ಕಡುಕೋಪಿ..!! ಮಾತೃಭೂಮಿಯ ಸೊಗಡು ಭಕ್ತಿ ಮರೆತವಗೆ ಜಯಘೋಷವಪರಿಮಿತವಿದ್ದ ಕಾಲ…! ಹೆತ್ತವರ ಮರೆತವರು ಗೂಡ ಸೇರಿದರು ಹಾರಿದ ಹಕ್ಕಿಗಳ ರೆಕ್ಕೆ ಮುರಿದು..! ಹಾರಲಾಗದೇ ಛೀಮಾರಿಯಲಿ ಮುಗಿದು..! ಮನೆಯೊಳಗೆ ಬೆಚ್ಚಗಿನ ನಾಲ್ಕು ಗೋಡೆಗಳೊಳಗೆ ಮರೆತ ಮಂತ್ರದ ಘೋಷ ಉದ್ಘೋಷ..!! ಬದುಕಲು ಹೊರನಡೆದು ದುಡಿಯುವಂತಿಲ್ಲ.. ಕೂತಲ್ಲಿ ತಳಹಿಡಿದು ಸೀಯಬೇಕು!! ಸೊರಗಿದ ಸೊಡರು ಗಲಬರೆಸಿ ತೊಳೆದು ಮಡಿಯಲಿ ಕರ್ತನೆಡೆ ಮನಮಾಡಿ ಕೂಡಬೇಕು..! ಧರ್ಮದ ಹಂಗಿರದೆ, ಮೇಲು ಕೀಳೆನ್ನದೆ ಉರಿವ ಜ್ಯೋತಿಯು ಒಂದೇ ಲೋಕನೀತಿ..! ಮೂಡಣದ ನೇಸರನ ಅಸ್ತಂಗತಕೂ ಮುನ್ನ ಮುಚ್ಚಿದ ರೆಪ್ಪೆಗಳು ತೆರೆದುಬಿಡಲಿ..! ನ್ಯಾಯನೀತಿಯು ಉಳಿದು ಈರ್ಷೆ ದುರ್ಬುದ್ಧಿ ಅಳಿದು ಅಂತಃಶುದ್ಧಿಯ ಸಮಯ‌‌ ಸದುಪಯೋಗವಾಗಿಬಿಡಲಿ…!! ***********************

ಕಾವ್ಯಯಾನ Read Post »

ಕಥಾಗುಚ್ಛ

ಕಥಾಯಾನ

 ಒಂದು ಹನಿ ನೀರಿನ ಕಥೆ ಜ್ಯೋತಿ ಬಾಳಿಗಾ ಸದಾಶಿವ ರಾಯರಿಗೆ ಆರೋಗ್ಯದಲ್ಲಿ ತೊಂದರೆ ಆಗಿ ಆಸ್ಪತ್ರೆಗೆ ಸೇರಿಸಿದ್ದಾರಂತೆ. ಹಳ್ಳಿಯಿಂದ ನಿನ್ನ ಮಾವನ ಪೋನು ಬಂದಿತ್ತು ಸಚಿನ್. ರಾಯರು ಹೇಗಿದ್ದಾರೆ ಅಂತ ಒಮ್ಮೆ ನೋಡಿಕೊಂಡು ಬರೋಣ ಅಂದರೆ ಅಷ್ಟು ದೂರ ಪ್ರಯಾಣ ನನ್ನಿಂದ ಸಾಧ್ಯವಿಲ್ಲ ಮಗನೇ….ನಿನ್ನ ವಿದ್ಯಾಭ್ಯಾಸಕ್ಕೆ ತುಂಬಾ ಸಹಾಯ ಮಾಡಿದ್ದಾರೆ ರಾಯರು. ನೀನಾದರೂ ಅವರ ಬಗ್ಗೆ ವಿಚಾರಿಸಿಕೊಂಡು ಬಾ ಎಂದು ಅಪ್ಪಾಜಿ ಹೇಳಿದಾಗ,ಆಸ್ಪತ್ರೆ ಎಂದರೆ ಮಾರು ದೂರ ಓಡುವ ನನಗೆ ಏನು ಮಾಡುವುದೆಂದು ತಿಳಿಯದೇ ಹುಂಗುಟ್ಟಿದೆ. ಊರಿಗೆ ಹೋಗದೇ ಕೆಲವಾರು ವರ್ಷಗಳೇ ಕಳೆದಿವೆ. ಸದಾಶಿವರಾಯರ ಜೊತೆಗೆ ಹಳೆಯ ಸ್ನೇಹಿತರನ್ನು ಭೇಟಿಮಾಡಿದ ಹಾಗೆ ಆಗುವುದು ಎಂದು ಬೆಂಗಳೂರಿನಿಂದ ಮಂಗಳೂರಿನ ಕಡೆಗೆ ಪ್ರಯಾಣ ಬೆಳೆಸಿದೆ. ರೋಗಿಯನ್ನು ಬರಿಗೈಯಲ್ಲಿ ನೋಡಲು ಹೋಗಲಾಗುವುದೇ ಎಂದು , ಸ್ವಲ್ಪ ಮುಸುಂಬಿ, ಕಿತ್ತಳೆ ಹಣ್ಣುಗಳನ್ನು ತೆಗೆದುಕೊಂಡು ಮಂಗಳೂರಿನ ಪ್ರಸಿದ್ಧ ಎ.ಜೆ ಆಸ್ಪತ್ರೆಯ ಮೆಟ್ಟಿಲು ಹತ್ತಿದೆ. ಸದಾಶಿವ ರಾಯರು ಯಾವ ವಾರ್ಡನಲ್ಲಿದ್ದಾರೆ ಎಂದು ರಿಷೆಪ್ಶ್ ನ್ ಕೌಂಟರ್ ಬಳಿ ವಿಚಾರಿಸಿ ಅವರ ಕೋಣೆಯ ಬಳಿ ಹೋದಾಗ ಒಳಗಿನಿಂದ ಅಳುವ ಸ್ವರ ಕೇಳಿಸುತ್ತಿತ್ತು. ಅಯ್ಯೋ,ನಾನು ಬಂದ ಹೊತ್ತು ಚೆನ್ನಾಗಿಲ್ಲ !, ಸದಾಶಿವ ರಾಯರು ನಮ್ಮನೆಲ್ಲ ಬಿಟ್ಟು ಹೋದರು ಕಾಣಬೇಕು ಅದಕ್ಕೆ ಈ ತರಹ ಅಳುತ್ತಿದ್ದಾರೆ , ಎಂದು ಸುಮ್ಮನೆ ಕೋಣೆಯ ಹೊರಗೆ ನಿಂತು ಅವರ ಮನೆಯವರ ಮಾತು ಕೇಳಿಸಿಕೊಳ್ಳುತ್ತಿದ್ದೆ. ನೋಡಿದರೆ; ರಾಯರ ಸ್ವರ ಕೇಳಿಸುತ್ತಿದೆ, ಒಂದು ಚಮಚದಷ್ಟು ಆದರೂ ಕೊಡಿ ಎಂದು ಅಂಗಲಾಚುತ್ತಿದ್ದಾರೆ ರಾಯರು.ಅನಾಹುತ ಏನೂ ಸಂಭವಿಸಿಲ್ಲ ಎಂದು ಧೈರ್ಯದಿಂದ ಕೋಣೆಯ ಒಳಗೆ ಹೋದೆ. ನನ್ನನ್ನು ಕಂಡೊಡನೆ ರಾಯರು ಪರಿಚಯದ ನಗು ಬೀರಿದರು. ಸದಾಶಿವರಾಯರು ಶ್ರೀಮಂತ ಕುಟುಂಬದಲ್ಲಿ ಹುಟ್ಟಿದವರು. ಆಸ್ತಿ ವಿಚಾರಕ್ಕೆ ಗಲಾಟೆಮಾಡಿ ತನ್ನ ಹೆತ್ತವರನ್ನು, ಒಡಹುಟ್ಟಿದವರನ್ನೂ ದೂರ ಮಾಡಿ ಬದುಕನ್ನು ಕಟ್ಟಿಕೊಂಡು ,ಕೈಲಾದಷ್ಟು ಸಹಾಯ ಮಾಡಿ ಜನರ ಮನಸ್ಸನ್ನು ಗೆದ್ದವರು.ವ್ಯಾಪಾರದಲ್ಲಿ ಸೋಲು‌ ಗೆಲುವು ಕಂಡರೂ ಮನೆ ಬಾಗಿಲಿಗೆ ಬಂದವರಿಗೆ ಬರೀ ಹೊಟ್ಟೆಯಲ್ಲಿ ಕಳುಹಿಸದೇ ಪಾನಕ ಇಲ್ಲವೇ ಊಟ ಮಾಡಿಯೇ ಬಿಳ್ಗೊಡುತ್ತಿದ್ದಂತಹ ವ್ಯಕ್ತಿತ್ವ ಅವರದ್ದು. ಆರು ಅಡಿ ಎತ್ತರದ ದಷ್ಟಪುಷ್ಟ ಶರೀರದ ರಾಯರು ಇಂದು ಆರು ಅಡಿ ಉದ್ದದ ಕೋಲನ್ನು ನೆನಪಿಸುವಷ್ಟು ತೆಳ್ಳಗಾಗಿದ್ದಾರೆ. ಲಿವರ್ ಹಾಗೂ ಮೂತ್ರಪಿಂಡ ಸಂಪೂರ್ಣವಾಗಿ ಹಾಳಾಗಿರುವುದರಿಂದ ಜೀವರಕ್ಷಕ ಅಳವಡಿಸಿದ್ದಾರೆ. ಗಂಜಿಯಂತಹ ದ್ರವ ಪದಾರ್ಥಗಳನ್ನು ಪೈಪಿನ ಮೂಲಕ ತಿನ್ನಿಸುವಂತಹ ವ್ಯವಸ್ಥೆ…..ಅಬ್ಬಾ! ಅವರ ಶೋಚನೀಯ ಸ್ಥಿತಿಯನ್ನು ಕಂಡು ನನ್ನ ಕಣ್ಣಿಂದಲೂ ಕೆಲವೊಂದು ಬಿಂದುಗಳು ಜಾರಿದವು ನನ್ನನ್ನು ಕಂಡ ರಾಯರು ಅತೀ ಕ್ಷೀಣ ಸ್ವರದಲ್ಲಿ ನೀನಾದರೂ ಹೇಳೋ ಸಚಿನ್, ಒಂದು ಚಮಚದಷ್ಟು ನೀರು ಕೊಡಲು ಎಂದಾಗ ,ಈಗ ನೀರು ಕುಡಿಸಬಾರದೆಂದು ಡಾಕ್ಟರ್ ಹೇಳಿದ್ದಾರಲ್ಲ, ಎಂದು ಅವರ ಶ್ರೀಮತಿಯವರು ಸಮಾಧಾನ ಪಡಿಸುತ್ತಿದ್ದರು. ತಂದೆಯ ಕೊನೆಗಾಲದಲ್ಲಿ ಯಾಕೆ ಬಾಯಿಕಟ್ಟಬೇಕೆಂದು ರಾಯರ ಮಗ ತಂದೆಯ ಆಸೆಯಂತೆ ,ಒಂದು ಗ್ಲಾಸ್ ನಲ್ಲಿ ನೀರು ತುಂಬಿಸಿ ಚಮಚದಿಂದ ಕುಡಿಸುತ್ತಿದ್ದರು. ಕಾಕತಾಳೀಯವೊ ಎಂಬಂತೆ ರಾಯರು ಮಗನ ಕೈಯಲ್ಲಿಯೇ ಇಹಲೋಕ ತ್ಯಜಿಸಿದರು.ವಿಷಯ ತಿಳಿಯುತ್ತಿದಂತೆ ಸಂಬಂಧಿಕರೆಲ್ಲಾ ಸೇರಿದರು.ಅಲ್ಲಿದ್ದು ಏನೂ ಮಾಡಬೇಕೆಂದು ತೋಚದೆ ಮನೆಯವರಿಗೆ ಸಮಾಧಾನ ಹೇಳಿ ಹೊರಬಂದೆ. ಕೋಣೆಯಿಂದ ಹೊರ ಬಂದಾಗ ರಾಯರು ಒಂದು ಚಮಚದಷ್ಟು ನೀರಿಗಾಗಿ ಹಂಬಲಿಸುತ್ತಿದ್ದದು ಕಣ್ಣಮುಂದೆ ಕಾಣಿಸುತ್ತಿತ್ತು. ರಾಯರ ಸ್ಥಿತಿಯನ್ನು ನೋಡಿದ ನನಗೆ ಆಸ್ತಿ ಪಾಸ್ತಿ ಅಂತ ಎಷ್ಟೇ ಕೂಡಿಟ್ಟರೂ, ಎಷ್ಟೇ ಒಳ್ಳೆಯ ಕೆಲಸ ಮಾಡಿದರೂ ,ಕೊನೆಯ ಪ್ರಯಾಣದಲ್ಲಿ ಏನೂ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ ಎಂಬ ಅರಿವಾಗಿ ನಿಧಾನವಾಗಿ ಆಸ್ಪತ್ರೆಯ ಮೆಟ್ಟಿಲುಗಳನ್ನು ಇಳಿಯುತ್ತಾ ಮನೆಯ ದಾರಿ ಹಿಡಿದೆ….. ***********

ಕಥಾಯಾನ Read Post »

ಕಥಾಗುಚ್ಛ

ಕಥಾಯಾನ

ಸುನಂದಾಬಾಯಿ ಕೊಡ ಮಲ್ಲಿಕಾರ್ಜುನ ಕಡಕೋಳ ಸುತ್ತ ನಾಕಿಪ್ಪತ್ತು ಹಳ್ಳಿಗಳಲ್ಲಿ ಅವರ  ಬಡತನ ಪ್ರಸಿದ್ದವಾಗಿತ್ತು.  ತಲೆಮಾರುಗಳಿಂದ ಶೀಲವಂತರ  ಸುನಂದಾಬಾಯಿ ಭಗವಂತ್ರಾಯ  ದಂಪತಿಗಳು ಪಡೆದುಕೊಂಡ  ಆಸ್ತಿಯೆಂದರೆ ಕಿತ್ತುತಿನ್ನುವ ಬಡತನ.  ಅದನ್ನೇ ಹಾಸುಂಡು ಬೀಸಿ  ಒಗೆಯುವಂತಿತ್ತು. ಅವರೂರು  ಮಾತ್ರವಲ್ಲ. ಸುತ್ತ ಹತ್ತಾರು ಹಳ್ಳಿಯ ಮಂದಿ ಘೋರ ಬಡತನದ ಬಗ್ಗೆ  ಮಾತಾಡುವಾಗ ಶೀಲವಂತರ ಭಗಂತ್ರಾಯರ ಬಡತನ ಉಲ್ಲೇಖಿಸದೇ ಇರಲಿಕ್ಕೆ  ಸಾಧ್ಯವಿರುತ್ತಿರಲಿಲ್ಲ.   ಅವರು ಉಪವಾಸದ ದಿನಗಳನ್ನು  ನೆನಪಿಡುತ್ತಿರಲಿಲ್ಲ., ಅಂಬಲಿ ಕುಡಿದ  ದಿನಗಳನ್ನು ನೆನಪಿಡುತ್ತಿದ್ದರು. ಈ  ದಿನಗಳೇ ಅಪರೂಪ. ಸಜ್ಜೆ ಹಿಟ್ಟಿನ  ಗಂಜಿಗೆ ರುಚಿ ಬರಲೆಂದು ಸೇರಿಸಲು  ” ಉಪ್ಪಿಗೂ ” ಅವರಲ್ಲಿ ಬಡತನವಿತ್ತು.  ಅಂತೆಯೇ ಉಪವಾಸದ ದಿನಗಳೇ  ಹೇರಳ. ಗಂಜಿ ಕುಡಿದ ದಿನಗಳೇ ವಿರಳ. ಸುನಂದಾಬಾಯಿಗೆ ಜಾಂಬಳ ಬಣ್ಣದ  ಒಂದೇ ಒಂದು ಸೀರೆ ಇತ್ತು. ಮೈ ಮೇಲಿನ  ಆ ಒಂದು ಸೀರೆಯನ್ನು ಜಳಕ  ಮಾಡುವಾಗ ಅರ್ಧರ್ಧ ತೋಯಿಸುತ್ತಾ ಒಣಗಿಸಿಕೊಳ್ಳುತ್ತಿದ್ದಳು. ಅಷ್ಟಕ್ಕೂ ಆಕೆ ಹೊಲಕ್ಕೆ ಹೋದಾಗ ನಿರ್ಜನ ಕರ್ಮನಹಳ್ಳದಲ್ಲಿ ಜಳಕ ಮಾಡುತ್ತಿದ್ದಳು. ಕೂಲಿನಾಲಿ ಮಾಡುವಾಗ ಸೀರೆ, ಗಿಡಗಂಟಿಗಳಿಗೆ ತಾಗದಂತೆ ಮತ್ತು ಕುಂತೇಳುವಾಗ  ಜಿಗಿಸತ್ತ ಸೀರೆ ಟಸಕ್ಕನೆ ಹರಿದು  ಹೋಗದಂತೆ ಕಟ್ಟೆಚ್ಚರ ವಹಿಸುತ್ತಿದ್ದಳು. ತನ್ನ ಮಾನಮರ್ಯಾದೆ ಕಾಪಾಡುವ  ಏಕೈಕ ಸೀರೆ ಅದಾಗಿತ್ತು. ಹೋದ  ವರುಷ ಕುಂಡೀಪದರಲ್ಲಿ ಅದು ಹರಿದು  ಹೋದುದಕ್ಕೆ ಹರಿದುಹೋದ  ಭಾಗವನ್ನು ಕುಡುಗೋಲಿನಿಂದ  ಕೊಯ್ದು ತೆಗೆದು ಸೂಜಿ ದಾರಗಳಿಂದ  ಉದ್ದಕ್ಕೂ ದಿಂಡು ಹಾಕಿದ್ದಳು. ಹಾಗೆ  ಮಾಡುವಾಗ ಮೈ ತುಂಬಾ ಕೌದಿ ಹೊದ್ದುಕೊಂಡಿದ್ದಳು.ತನ್ನ ಮಾನರಕ್ಷಕ ಸೀರೆಯನ್ನು ಹೊಲಿದು ದುರಸ್ತಿಗೊಳಿಸಿದಮೇಲೆ ಕೌದಿ ತೆಗೆದಿಟ್ಟು ಸೀರೆ ಉಟ್ಟು ಕೊಂಡಿದ್ದಳೆಂಬುದು ನಾನು  ಸಣ್ಣವನಿದ್ದಾಗ ಕೇಳಿದ ನೆನಪು ಹಚ್ಚ ಹಸಿರಾಗಿದೆ. ಆಕೆಯ ಕುಪ್ಪಸದ್ದು  ಇಂತಹದ್ದೇ ಕರುಣಾಜನಕ ಕತೆ. ಭಗವಂತ್ರಾಯನ ಧೋತರ ಮತ್ತು  ಅಂಗಿಯ ಕತೆಗಳು ಇದಕ್ಕಿಂತ  ಭಿನ್ನವಾಗಿರದೇ ಕರುಳು  ಚುರುಗುಟ್ಟಿಸುವಂತಹದ್ದೇ ಆಗಿದ್ದವು.  ಆತ ಯಾವತ್ತೂ ತೊಡೆಯಿಂದ ಈಚೆ  ಮೊಳಕಾಲ ಕೆಳಗೆ ಧೋತರ ಇಳಿ ಬಿಟ್ಟಿದ್ದನ್ನೇ ನನ್ನ ಕಣ್ಣುಗಳು ಕಂಡಿಲ್ಲ.  ಕಾರಣ ಆತನ ಧೋತರದ ಮೈತುಂಬಾ  ಹರಿದ ಗಾಯಗಳೇ ತುಂಬಿದ್ದವು.  ಗಾಯಗಳನ್ನೆಲ್ಲ ಗಂಟು  ಹಾಕಿರುತ್ತಿದ್ದನಾದ್ದರಿಂದ ಆತನ ಮಾನದ  “ಹಿಂದು ಮುಂದು”ಗಳನ್ನು ಆ ಎಲ್ಲ  ಗಾಯಗಂಟುಗಳ ಧೋತರ ಮುಚ್ಚಿ ಕೊಂಡಿರುತ್ತಿತ್ತು. ಆತನಿಗೊಂದು ಪಟಗವಿತ್ತು. ಅವರಪ್ಪ  ತೀರಿಕೊಂಡಾಗ ರುದ್ರಭೂಮಿಯ  ಕುಣಿಯ ಮೇಲೆಯೇ ಆತನಿಗೆ  ವಾರಸುದಾರಿಕೆಯಾಗಿ ಬಂದ ಏಕೈಕ  ಆಸ್ತಿ ಅದಾಗಿತ್ತು. ಭಗವಂತ್ರಾಯನಿಗೆ  ಅಪ್ಪನಿಂದ ಬಂದ ಆ ಆಸ್ತಿಯನ್ನು ಜಾತ್ರೆ,  ದೀವಳಿಗೆ, ಉಗಾದಿ ಹಬ್ಬಗಳಲ್ಲಿ ತಲೆಗೆ  ಕಟ್ಟು ಹೊಡೆದು ಸುತ್ತಿಕೊಂಡು ಸಂಭ್ರಮಿಸುತ್ತಲೇ ಅದನ್ನು ಜೋಪಾನ  ಮಾಡಿಟ್ಟು ಕೊಂಡಿದ್ದ. ಮುಡ್ಡೀಚಾಟಿಯಂತಹ ಅಂಗಿ ಹರಿದು,  ಸವೆದು ಹೋಗಿತ್ತು. ಅವನ ಅಪ್ಪನ  ಅಪ್ಪನಿಂದ ಬಂದ ಮತ್ತೊಂದು  ಆಸ್ತಿಯೆಂದರೆ ಗುದ್ದಲಿ. ನಟ್ಟು ಕಡಿದು, ಮಣ್ಣಿನ ಕೆಲಸದಿಂದ ಕುಟುಂಬಜೀವಕ್ಕೆ ಗಂಜಿ ದೊರಕಿಸಿ ಕೊಡುತ್ತಿದ್ದುದೇ ಈ  ಗುದ್ದಲಿ. ಅಂತೆಯೇ ಗುದ್ದಲಿಯನ್ನು  ತಮ್ಮ ಜೀವದಷ್ಟೇ ಜೋಪಾನ  ಮಾಡುತ್ತಿದ್ದರು. ಅಮವಾಸ್ಯೆಗೊಮ್ಮೆ ಗುದ್ದಲಿ, ಕುರ್ಪಿ, ಕುಡುಗೋಲುಗಳಿಗೆ  ಪೂಜೆ ಸಲ್ಲಿಸುತ್ತಿದ್ದರು. ಸುನಂದಾಬಾಯಿ ಭಗವಂತ್ರಾಯರ ಲಗ್ನವಾದ ವರುಷ ಮೋಟಗಿ ಸಂತೆಯಲ್ಲಿ ದೀಡು ರುಪಾಯಿ ಕೊಟ್ಟುತಂದ ಮಣ್ಣಿನ ಕೊಡವನ್ನು ಅವರು ತಮ್ಮ ಜೀವದಷ್ಟೇ ಜೋಪಾನ ಮಾಡಿಕೊಂಡು ಬರುತ್ತಿದ್ದುದು ಅವರ ಬದುಕಿನ  ದಾಖಲೆಯಷ್ಟೇ ಅಲ್ಲ, ಅವರ  ಬಡತನದಷ್ಟೇ ಖ್ಯಾತಿಯನ್ನು ಆ ಮಣ್ಣಿನ  ಕೊಡ ಪಡಕೊಂಡಿತ್ತು. ಗಬಸಾವಳಗಿಯ  ಕುಂಬಾರರು ಗಟ್ಟಿಮುಟ್ಟಾಗಿ ಸುಟ್ಟುಮಾಡಿದ ಮಣ್ಣಿನ  ಕೊಡ ಅದಾಗಿತ್ತು.  ಆ ಮಣ್ಣಿನ ಕೊಡವನ್ನು ಅದೆಷ್ಟು  ಜಾಗರೂಕತೆಯಿಂದ ಬಳಕೆ ಮಾಡುತ್ತಿದ್ದರೆಂದರೆ ತಮ್ಮ ಪ್ರಾಣವನ್ನೂ ಅವರು  ಎಂದೂ ಅಷ್ಟೊಂದು ಎಚ್ಚರದಿಂದ  ಸಲಹಿಕೊಂಡ ನೆನಪು ಖಂಡಿತಾ ಅವರಿಗಿಲ್ಲ. ಗಂಡ ಹೆಂಡತಿ ಇಬ್ಬರಲ್ಲಿ ಯಾರೇ ಹಳ್ಳದ ನೀರು ತರಲು ಹೋದಾಗ ಸಮನಾದ  ಸಮಚಿತ್ತದ ಎಚ್ಚರ ವಹಿಸುತ್ತಿದ್ದರು. ವರತಿನೀರನ್ನು  ಕೊಡಕ್ಕೆ ತುಂಬುವಾಗ  ಅಪ್ಪೀತಪ್ಪಿಯೂ ತಂಬಿಗೆಯನ್ನು  ಕೊಡದ ಕಂಠಕ್ಕೆ ಮುಟ್ಟಿಸುತ್ತಿರಲಿಲ್ಲ. ಒಮ್ಮೊಮ್ಮೆ  ಚೆರಿಗೆಯನ್ನು ದೂರವಿಟ್ಟು ಬೊಗಸೆಯಿಂದಲೇ ಕೊಡ ತುಂಬಿಸುತ್ತಿದ್ದರು. ಅವರ ಮನೆಯಲ್ಲಿ ಮಣ್ಣಿನ ಹರವಿ ಇತ್ತು. ಅದಕ್ಕೊಂದು ಮಣ್ಣಿನ ಮುಚ್ಚಳ.  ಹರವಿಗೆ ಕೊಡದಿಂದ ನೀರು ಬರಕುವಾಗ  ಅಷ್ಟೇ ಎಚ್ಚರ. ಅಪ್ಪೀತಪ್ಪಿಯೂ ಹರವಿ  ಮತ್ತು ಕೊಡದ ಕಂಠಗಳು ಮುತ್ತಿಕ್ಕುತ್ತಿರಲಿಲ್ಲ. ಅಂತಹ ಕಟ್ಟೆಚ್ಚರ ಅವರಿಬ್ಬರದು. ಅವರಿಗೊಬ್ಬ ಮಗಳು ಹುಟ್ಟಿದಳು. ಚಂದ್ರಭಾಗಿ ಅವಳ ಹೆಸರು. ನಾಕೈದು  ವರುಷದ ಬೆಳೆದುನಿಂತ ಆ ಹುಡುಗಿಗೆ  ಹೋಳಿಗೆ ಅನ್ನಸಾರುಗಳೆಂಬ  ಹೆಸರುಗಳನ್ನು ಕೇಳಿ ಗೊತ್ತಿತ್ತೇ ಹೊರತು  ಅವನ್ನು ಕಂಡುಂಡ ಅನುಭವ  ಖಂಡಿತಾ ಇರಲಿಲ್ಲ. ಅದೇನಿದ್ದರೂ  ಅಂಬಲಿಯೇ ಅವರ ಪಾಲಿನ ಮೃಷ್ಟಾನ್ನ. ಆಗಾಗ ಆ ಹುಡುಗಿ ಕೆಮ್ಮು, ನೆಗಡಿ, ಜ್ವರ ಜಡ್ಡು ಜಾಪತ್ರಿಗಳಿಂದ ನರಳುತ್ತಿದ್ದರೆ ಲಕ್ಕಿ ತಪ್ಪಲು ತಲೆಗೆ ಕಟ್ಟಿ ಮಲಗಿಸುವುವುದು ಇಲ್ಲವೇ ದ್ಯಾಮವ್ವನ ಗುಡಿಯ ಬೂದಿ,  ಗಿರಿಮಲ್ಲಯ್ಯ ಸ್ವಾಮಿಗಳು  ಕಟ್ಚುವ  ಚೀಟಿ ಚಿಪಾಟಿಗಳೇ ಅವರಿಗಿರುವ  ಆಧಾರ. ಅವರೆಂದೂ ದವಾಖಾನೆಗೆ  ಹೋದವರಲ್ಲ. ಹೋಗಲು ರೊಕ್ಕ  ಬೇಕಲ್ಲ..! ಇಷ್ಟೆಲ್ಲ ಕ್ರೂರ ಬಡತನವಿದ್ದರೂ  ಅವರು ಯಾರೊಬ್ಬರ ಮನೆಗೆ ಹೋಗಿ  ದೈನೇಸಿ ಎಂದು ಕೈಯೊಡ್ಡಿದವರಲ್ಲ.  ಹಾಗೇ ಹಸಿವಿನಿಂದ, ನೋವಿನಿಂದ  ಸತ್ತಾರೇ ಹೊರತು ಅವರಿವರ ಮನೆಗೆ  ಹೋದವರಲ್ಲ. ಬೇರೆಯವರ ಮನೆಯಲ್ಲಿ ಊಟದ  ಮಾತು ದೂರವೇ. ಬಡತನ ಬಿಟ್ಟು  ಬದುಕಿದ್ದು ಅವರಿಗೆ ಗೊತ್ತಿಲ್ಲ. ನನಗಂತೂ ಅವರ ಮನೆಯ ಮಿರಿ ಮಿರಿ  ಮಿಂಚುವ ಮಣ್ಣಿನಕೊಡ ಅವರ  ಬಡತನಕ್ಕಿಂತ  ಹೆಚ್ಚು ಪ್ರಿಯವಾಗಿ  ಕಾಣುತ್ತಿತ್ತು. ಅವರು ಹಳ್ಳಕ್ಕೆ ನೀರಿಗೆ  ಬಂದಾಗೆಲ್ಲ ನಾನು ಆ ಕೊಡವನ್ನು  ಕಣ್ತುಂಬಿಸಿ ಕೊಳ್ಳುತ್ತಿದ್ದೆ. ಅದಕ್ಕೆ  ಮುತ್ತಿಕ್ಕ ಬೇಕೆನ್ನುವಷ್ಟು ಆ ಕೊಡದ  ಮೇಲೆ ನನ್ನ ಅದಮ್ಯ ಪ್ರೀತಿ. ಅರ್ಧಮೈಲಿ ದೂರದ ಲಂಡೇನಹಳ್ಳಕ್ಕೆ ನೀರು ತರಲು ಎಂದಿನಂತೆ ನಾನೂ ಹೋದೆ. ಕಡುಬೇಸಿಗೆಯಾದ್ದರಿಂದ ಹಳ್ಳದಲ್ಲಿ ನೀರು ಹರಿಯುತ್ತಿರಲಿಲ್ಲ. ಉಸುಕಿನಲ್ಲಿ ತೋಡಿದ ವರತೆಯಿಂದ ನೀರು ಕೊಡಕ್ಕೆ ತುಂಬಿಸಿಕೊಳ್ಳಬೇಕಿತ್ತು.   ಮೊಳಕಾಲುದ್ದದೊಳಗಿನ ವರತೆಯಿಂದ  ಸುನಂದಾಬಾಯಿ ತನ್ನ ಮಣ್ಣಿನ ಕೊಡಕ್ಕೆ  ಚೆರಿಗೆಯಿಂದ ನೀರು ತುಂಬಿಸಿಕೊಳ್ಳುತ್ತಿದ್ದಳು. ನನಗೋ ಆ  ಮಣ್ಣಿನ ಕೊಡವನ್ನು ಕೈಗೆಟಕುವ  ಸನಿಹದಿಂದ ನೋಡುವ ಭುವನದ ಭಾಗ್ಯ. ಹತ್ತತ್ತಿರ ಅದಕ್ಕೆ ಇಪ್ಪತ್ತರ  ಪ್ರಾಯವಿದ್ದೀತು. ಸವೆದು ಸವೆದು ಮಣ್ಣಿನಕೊಡ ಮಿರಿಮಿರಿ ಮಿಂಚುತ್ತಿತ್ತು.ಮನೆಯಲ್ಲಿ ನೀರು ತುಂಬಿಟ್ಟಾಗ ಚೇಳೊಂದು ಕೊಡಕ್ಕೆ  ಕುಟುಕಿ ಸಣ್ಣದೊಂದು ತೂತಾಗಿ ಆ ತೂತಿಗೆ ಸರಿಯಾಗಿ ಹರಕು ಬಟ್ಟೆಯ ಬತ್ತಿ ಸುತ್ತಿ ತುರುಕಿದ್ದರಿಂದ ಕೊಡಕ್ಕೊಂದು ಕಪ್ಪುಚಿಕ್ಕೆ ಬಿದ್ದಂಗಿತ್ತು. ಅದೆಷ್ಟೋ ವರುಷಗಳಿಂದ ಕೊಡವನ್ನು ದೂರದಿಂದಲೇ ನೋಡುತ್ತಾಬಂದ ನನಗವತ್ತು ಅಷ್ಟು ಸನಿಹದಿಂದ ನೋಡುವ ಜೀವಮಾನದ ಸದವಕಾಶ. ಆ ಕೊಡ ಕುರಿತು ಅದರ ಆಯಸ್ಸು ಕುರಿತು ಜನರಾಡುತ್ತಿದ್ದ ಮಾತುಕತೆಗಳು ನನಗೆದಂತಕತೆಗಳಾಗಿ ಕೇಳಿಸ ತೊಡಗಿದವು. ಅದೇಕೋ ಕೊಡವನ್ನು ನನ್ನ ಸುಕೋಮಲ ಎಳೆಯ ಕೈಗಳಿಂದ ಮುಟ್ಟಬೇಕೆನಿಸಿತು. ನೇರವಾಗಿ ಹೇಗೆ  ಮುಟ್ಟುವುದೆಂತು ಧೇನಿಸಿ, ಧೇನಿಸಿ ಧೈರ್ಯತಾಳದೇ… ಅಚಾತುರ್ಯದಲ್ಲೆಂಬಂತೆ ವರತಿಯ ಹತ್ತಿರ ಸರಿದಂತೆ ನಟಿಸಿ, ನನ್ನೆರಡೂ ಅಂಗೈಗಳಿಂದ ಸುನಂದಾಬಾಯಿಯ ಕೊಡ ಮುಟ್ಟಿದೆ. ನನ್ನ ಒಡಲಾಳದ ಬಯಕೆ ಈಡೇರಿಸಿಕೊಂಡೆ. ನನ್ನ ಸಂತಸಕ್ಕೆ ಎಣೆಯೇ ಇಲ್ಲವೆನಿಸಿತು. ಕೊಡಕ್ಕೆ ನನ್ನ ಕೈತಾಗಿಸಿದ ಮಿಂಚಿನ ಕ್ಷಣಗಳಲ್ಲೇ ಸುನಂದಾಬಾಯಿ ಕೊಡ ಬಿಟ್ಟು ದೂರಕ್ಕೆ ಹೋಗಿ ತಲೆಮೇಲೆ ಕೈ ಹೊತ್ತು ಕುಂತು ಒಂದೇಸಮನೆ “ಗೊಳೋ” ಅಂತ ಪ್ರಾಣ ಕಳಕೊಂಡವರಂತೆ ಅಳತೊಡಗಿದಳು.  ನಮ್ಮಕುಲದ ಶೀಲವೇ ಹಾಳಾಯಿತೆಂದು ಸತ್ತವರ ಮನೆಯಲ್ಲಿ ಅಳುವಂತೆ ಹಾಡಾಡಿಕೊಂಡು ಮುಖಕ್ಕೆ ಸೆರಗು ಮುಚಗೊಂಡು ಬೋರ್ಯಾಡಿ ಅಳತೊಡಗಿದಳು. ಅದನ್ನು ಕಣ್ಣಾರೆಕಂಡ ಬಡಿಗೇರ ಇಮ್ಮಣ್ಣ ನನಗೆ ಹುಚ್ಚುನಾಯಿಗೆ ಹೊಡೆಯುವಂತೆ, ಜನ್ಮ ಜನ್ಮಕು  ನೆನಪಿಡುವ ಹಾಗೆ ಥಳಿಸಿದ. ನಾವು ಶೂದ್ರರು ಶೀಲವಂತರ ಕೊಡ ಮುಟ್ಟಿಸಿ ಕೊಳ್ಳಬಾರದೆಂಬುದು ನನಗೆ  ಗೊತ್ತಿರಲಿಲ್ಲ. ಸುನಂದಾಬಾಯಿ ಆ  ಕೊಡವನ್ನು ಅಲ್ಲೇ ಒಡೆದು ಹಾಕಿದಳು. ಹಾಗೆ ಒಡೆಯುವಾಗ ನನ್ನ ಕಣ್ಣಲ್ಲಿ ದಳದಳನೆ ನೀರು ಹರಿಯುತ್ತಿದ್ದವು. ಒಡೆದ ಕೊಡದ ಒಂದೊಂದೇ ಬೋಕಿ ಚೂರುಗಳನ್ನು ನನ್ನ ಕೈಗಳಿಗೆ ತುಂಬಿ ಕೊಳ್ಳಬೇಕೆನಿಸಿತು. ಆದರೆ ಬೋಕಿಯ ಚೂರುಗಳನ್ನು ಮುಟ್ಟುವ ಧೈರ್ಯ ನನಗೆ ಬರಲಿಲ್ಲ. ಏಕೆಂದರೆ ಇಮ್ಮಣ್ಣ ಮಾವ ಅಲ್ಲೇ ಇದ್ದ.. ಆದರೆ ನನಗೆ ಮಾತ್ರ ಶೀಲವಂತರ ಸುನಂದಾಬಾಯಿಯ ಮಣ್ಣಿನ ಕೊಡವನ್ನು ನಾನೇ  ಕೊಂದು ಹಾಕಿದೆನೆಂಬ ” ಪಾಪಪ್ರಜ್ಞೆ ” ಅವಳ ಮಡಿವಂತಿಕೆಯ ಮನಸಿಗಿಂತ, ನನ್ನನ್ನು ಮತ್ತೆ ಮತ್ತೆ ಇವತ್ತಿಗೂ ಘೋರವಾಗಿ ಕಾಡುತ್ತಲೇ ಇದೆ. *******

ಕಥಾಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ವೆಂಕಟೇಶ ಚಾಗಿ ಆಕಾಶವನು ಮುಟ್ಟುವೆನು ಒಂದು ದಿನ ಚಿಂತಿಸದಿರು ಅಪ್ಪ ನೆಲದ ಮೇಲಿನ ಡೊಂಬರಾಟದ ಬದುಕಿಗೆ ಚಿಂತಿಸದಿರು ಅಪ್ಪ || ನಿನ್ನ ಬಲವನೆಲ್ಲ ಸೇರಿಸಿ ಆಕಾಶಕ್ಕೊಮ್ಮೆ ಚಿಮ್ಮಿ ಬಿಡು ನಿನ್ನ ನನಸುಗಳ ಹೊತ್ತು ತರುವೆ ನೋಡುತಿರು ಅಪ್ಪ || ಹಸಿವಿನ ಆಟವನು ನೋಡಲು ನೆರೆಯುವರು ನಾಟಕದ ಮಂದಿ ನಿನ್ನಾಟದ ಗತ್ತು ಗಮ್ಮತ್ತುಗಳ ತೋರಿಸುವುದ ಮರೆಯದಿರು ಅಪ್ಪ || ಚಂದ್ರಮನ ತೋರಿಸಿ ಅಮ್ಮ ತುತ್ತು ಉಣಿಸುವಳು ಅಷ್ಟೇ ತುತ್ತುಗಳ ಕೂಡಿಡಲು ನನ್ನ ಎಂದಿಗೂ ಕಡೆಗಣಿಸದಿರು ಅಪ್ಪ || ಕಟ್ಟಿಗೆಯು ತುಂಬಾ ಗಟ್ಟಿಯಾಗಿದೆ ಗೊತ್ತೆ ನನ್ನ ನಂಬಿಕೆಯಂತೆ ‘ಚಾಗಿ’ಯ ಕವನಗಳಂತೆ ಬಡತನವ ಎಂದು ಮರೆಯದಿರು ಅಪ್ಪ || *************

ಕಾವ್ಯಯಾನ Read Post »

ಇತರೆ

ಲಹರಿ

ಮತ್ತೊಮ್ಮೆ ನಿನ್ನ ಭೇಟಿಯಾಗುವೆ. ಅಮೃತಾ ಪ್ರೀತಮ್ ಶೀಲಾ ಭಂಡಾರ್ಕರ್ मैं तैनू फ़िर मिलांगी. ಅಮೃತಾ ಪ್ರೀತಂ ತಾನು ಸಾಯುವ ಮೊದಲು ಇಮ್ರೋಜ್‍ನಿಗಾಗಿ ಪಂಜಾಬಿಯಲ್ಲೊಂದು ಕವಿತೆ ಬರೆದಳು. ಪ್ರತಿಯೊಂದು ಶಬ್ದವೂ ಪ್ರೀತಿಯನ್ನು ತುಂಬಿಸಿಕೊಂಡು ಕವಿತೆಯಾಗಿತ್ತು. ಅಮೃತಾ ಒಂದು ವಿಶಿಷ್ಟ ವ್ಯಕ್ತಿತ್ವ. ಹದಿನಾರನೆ ವಯಸ್ಸಿನಲ್ಲೇ ಮನೆಯವರು ನಿಶ್ಚಯಿಸಿ ಪ್ರೀತಮ್ ಸಿಂಗ್ ಜತೆ ಮದುವೆ ಮಾಡಿದ್ದರೂ ಆ ಮದುವೆ ಊರ್ಜಿತವಾಗಲಿಲ್ಲ. ನಂತರದ ದಿನಗಳಲ್ಲಿ ಬರವಣಿಗೆಯಲ್ಲಿ ತನ್ನನ್ನು ವಿಶೇಷವಾಗಿ ಈ ಜಗತ್ತಿಗೆ ಪರಿಚಯಿಸಿಕೊಂಡ ಅಮೃತಾ ಲಾಹೋರ್ ವಿಭಜನೆಯ ಸಮಯದಲ್ಲಿ ಆ ಕಾಲದ ಪ್ರತಿಭಾವಂತ ಯುವ ಕವಿ ಸಾಹಿರ್ ಲುಧಿಯಾನ್ವಿಯಿಂದ ಆಕರ್ಷಿತಳಾಗಿ, ಅವನನ್ನೇ ಮನಸ್ಸಿನಲ್ಲಿ ಆರಾಧಿಸತೊಡಗಿದಳು. ಅಮೃತಾ ಸಾಹಿರನನ್ನು ತನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತಿದ್ದಳು. ಆದರೆ ಅವಳಿಗೆ ಅವನಿಂದ ಅಂತಹ ಪ್ರೀತಿ ಸಿಗಲಿಲ್ಲ. ಸುಧಾ ಮಲ್ಹೋತ್ರಾ ಎಂಬ ಗಾಯಕಿಯ ಕಡೆಗೆ ಆಕರ್ಷಿತನಾದ ಸಾಹಿರ್ ಅಮೃತಾಳಿಂದ ವಿಮುಖನಾದ. ಸಾಹಿರ್ ಯಾರನ್ನೂ ಗಂಭೀರವಾಗಿ ಪ್ರೀತಿಸಲಿಲ್ಲವೆಂದೇ ಹೇಳಬಹುದು. ಅವನೇ ಹೇಳಿದಂತೆ, ಪ್ರತೀ ಸಲ ಅವನ ಹೊಸ ಪ್ರೇಮ ಹುಟ್ಟಿದಾಗೆಲ್ಲ ಅದ್ಭುತ ಕವಿತೆಗಳ ರಚನೆಯಾದವು. ಆದರೆ ಅಮೃತಾಳಿಂದ ಮಾತ್ರ ಅವನನ್ನು ಮರೆಯಲಾಗಲಿಲ್ಲ. ಅದೇ ಸಮಯಕ್ಕೆ ಸರಿಯಾಗಿ ಮತ್ತೆ ಅವಳ ಜೀವನದಲ್ಲಿ ಬಂದವನು ಇಮ್ರೋಜ್, ಅವಳ ಬಾಲ್ಯದ ಗೆಳೆಯ. ಬಾಲ್ಯದಿಂದಲೇ ಅಮೃತಾಳನ್ನು ಅತೀವವಾಗಿ ಇಷ್ಟ ಪಡುತ್ತಿದ್ದ. ಅವನೊಬ್ಬ ಚಿತ್ರ ಕಲಾವಿದ. ಅಮೃತಾಳನ್ನು ಅದ್ಯಾವ ಪರಿಯಲ್ಲಿ ಪ್ರೀತಿಸುತ್ತಿದ್ದನೆಂದರೆ, ಅವಳಿಂದ ಏನನ್ನೂ ಅಪೇಕ್ಷಿಸುತ್ತಿರಲಿಲ್ಲ. 40 ವರ್ಷಗಳ ಕಾಲ ಅವರಿಬ್ಬರೂ ಜತೆಯಲ್ಲೇ ಇದ್ದರು. ಹೆಸರಿಲ್ಲದ ಬಂಧದಲ್ಲಿ ಬಂಧಿತರಾಗಿ ಇದ್ದ ಅಮೃತಾ ಇಮ್ರೋಜರ ಜೋಡಿಯು ಎಲ್ಲರಿಗೂ ವಿಸ್ಮಯವಾಗಿತ್ತು. ಖುಷ್‍ವಂತ್ ಸಿಂಗ್ ಅವರು ತಮ್ಮ ಮನೆಯಲ್ಲಿ ಆಗಾಗ ಚಿಕ್ಕ ಚಿಕ್ಕ ಬೈಠಕ್‍ಗಳಿಗಾಗಿ ಸ್ನೇಹಿತರನ್ನು ಕರೆಯುತಿದ್ದರು. ಅಮೃತಾ ಇಮ್ರೋಜರನ್ನೂ ಕರೆದರೂ ಅವರಿಬ್ಬರೂ ಬರುತ್ತಿರಲಿಲ್ಲ. ಒಮ್ಮೆ ದೂರವಾಣಿ ಕರೆಮಾಡಿ ಅಮೃತಾಳ ಬಳಿ, ” ಈಗೀಗ ಮನೆಯಿಂದ ಹೊರಗೆ ಹೋಗುವುದನ್ನೇ ನಿಲ್ಲಿಸಿರುವ ಹಾಗೆ ಕಾಣುತ್ತಿದೆ. ಅದೇನು ಮಾಡುತ್ತೀರಿ ಇಬ್ಬರೂ ಮನೆಯಲ್ಲಿ?” ಆಗ ಅಮೃತಾ ಕೊಟ್ಟ ಉತ್ತರ ” ಮಾತಾಡುತ್ತೇವೆ”. ಇಬ್ಬರೂ ಒಬ್ಬರನ್ನೊಬ್ಬರು ಬಿಟ್ಟಿರುತ್ತಿರಲಿಲ್ಲ. ಮಾತುಗಳಲ್ಲಿ, ಅವಳು ಬರೆಯುವ ಕವಿತೆಗಳಲ್ಲಿ, ಅವನು ಬರೆಯುವ ಚಿತ್ರಗಳಲ್ಲಿ, ಅಥವಾ ಮೌನವಾಗಿಯೂ ಅವರಿಬ್ಬರೂ ಮಾತನಾಡುತಿದ್ದರು. ಕೊನೆಯದಾಗಿ ಸಾಯುವ ಸಮಯ ಹತ್ತಿರ ಬರುತಿದ್ದಂತೆ ಅವಳೊಂದು ಕವಿತೆಯನ್ನು ಅವನಿಗಾಗಿ ಬರೆದಳು. मैं तैनू फ़िर मिलांगी. ಮತ್ತೊಮ್ಮೆ ನಿನ್ನ ಭೇಟಿಯಾಗುವೆ. ಮತ್ತೊಮ್ಮೆ ನಿನ್ನ ಭೇಟಿಯಾಗುವೆ. ಎಲ್ಲಿ ಹೇಗೆ ಎಂದು ತಿಳಿಯದು. ಬಹುಶಃ ನಿನ್ನ ಕಲ್ಪನೆಗೆ ಪ್ರೇರಣೆಯಾಗಿ ನಿನ್ನ ಕ್ಯಾನ್ವಾಸಿನ ಮೇಲೆ ಇಳಿಯುತ್ತೇನೆ ಅಥವಾ ನಿನ್ನ ಕ್ಯಾನ್ವಾಸಿನಲ್ಲಿ ಗುಟ್ಟಾಗಿ ಒಂದು ಗೆರೆಯಾಗಿ ನಿನ್ನನ್ನೇ ನೋಡುತ್ತಾ ಮೌನವಾಗಿ ಇದ್ದು ಬಿಡುತ್ತೇನೆ. ಮತ್ತೊಮ್ಮೆ ನಿನ್ನ ಭೇಟಿಯಾಗುವೆ. ಎಲ್ಲಿ, ಹೇಗೆ ? ಅದು ತಿಳಿಯದು. ಸೂರ್ಯನ ಕಿರಣಗಳಾಗಿ ಬೆಚ್ಚಗೆ ನಿನ್ನ ಬಣ್ಣಗಳೊಳಗೆ ಸೇರಿಕೊಳ್ಳುತ್ತೇನೆ. ಅಥವಾ ಬಣ್ಣಗಳ ತೋಳುಗಳ ಮೇಲೆ ಕೂತು ನಿನ್ನ ಕ್ಯಾನ್ವಾಸಿನ ಮೇಲೆ ಹರಡಿಕೊಳ್ಳುವೆ. ಎಲ್ಲಿ ? ಹೇಗೆ? ಎಂದು ತಿಳಿಯದು ಆದರೂ ಖಂಡಿತ ನಿನ್ನ ಮತ್ತೆ ಭೇಟಿಯಾಗುವೆ. ನೀರಿನ ಝರಿಗಳಿಂದ ಹನಿಯೊಂದು ಚಿಮ್ಮಿದಂತೆ.. ನಿನ್ನ ದೇಹವನ್ನು ಆವರಿಸಿ, ಹೃದಯದೊಳಗೊಂದು ತಣ್ಣನೆಯ ಅನುಭವವನ್ನು ನೀಡಲು ಬರುವೆ. ನನಗಿನ್ನೇನೂ ತಿಳಿಯದು. ತಿಳಿದಿರುವುದಿಷ್ಟೆ. ಏನೇ ಆದರೂ ಈ ಜನ್ಮವು ನನ್ನ ಜತೆಗೇ ಬರುವುದು. ಈ ದೇಹದ ಜತೆಗೇ ಮುಗಿದುಹೋಗುವುದು. ಎಲ್ಲವೂ ಮುಗಿದೇ ಹೋಗುವುದು. ಆದರೆ ನೆನಪಿನ ದಾರಗಳು ಮತ್ತು ಸೃಷ್ಟಿಯ ಅಮೂಲ್ಯ ಕಣಗಳು ಉಳಿಯುವವು. ಆ ಕಣಗಳನ್ನು ಹೆಕ್ಕಿಕೊಂಡು, ನೆನಪಿನ ದಾರದೊಳಗೆ ಪೋಣಿಸಿಕೊಂಡು ಮತ್ತೆ ನಿನ್ನನ್ನು ಭೇಟಿಯಾಗುವೆ. ಎಲ್ಲಿ ಹೇಗೆಂದು ನಾನರಿಯೆ. ಅಮೃತಾ ಮತ್ತು ಇಮ್ರೋಜ್ ಹತ್ತಿರ ಹತ್ತಿರ ಅರ್ಧ ಶತಕಗಳ ಕಾಲ ಒಟ್ಟಿಗೆ ಒಂದೇ ಮನೆಯಲ್ಲಿದ್ದರೂ ಬೇರೆ ಬೇರೆ ಕೊಠಡಿಗಳಲ್ಲಿ ವಾಸಿಸುತಿದ್ದರು. ಆಗಿನ ಕಾಲದಲ್ಲಿ ಮದುವೆಯಾಗದೆ ಗಂಡು ಹೆಣ್ಣು ಒಟ್ಟಿಗೆ ವಾಸಿಸುವುದು ಬಹಳ ದೊಡ್ಡ ತಪ್ಪು ಎಂದಿದ್ದರೂ ಅವರಿಬ್ಬರ ಸಂಬಂಧ ಯಾವ ರೀತಿಯದೆಂದು ಜನರ ಊಹೆಗೂ ಮೀರಿದ್ದಾಗಿತ್ತು. ಇಮ್ರೋಜ್ ಒಬ್ಬ ಉತ್ಕಟ ಪ್ರೇಮದ ಪ್ರತೀಕ. *************

ಲಹರಿ Read Post »

You cannot copy content of this page

Scroll to Top